ಅಂಕಣಗಳು

ಕಾಡಿನ ಸಮೃದ್ಧತೆ ವನ್ಯಮೃಗಗಳ ಕ್ಷೇಮದ ಸೂಚ್ಯಂಕ

ಜಯಶಂಕರ್ ಬದನಗುಪ್ಪೆ

ಇತ್ತೀಚೆಗೆ ಹೆಚ್ಚುತ್ತಿರುವ ವನ್ಯ ಪ್ರಾಣಿಗಳು ಮತ್ತು ಮಾನವ ಸಂಘರ್ಷ ಕಳವಳಕಾರಿಯೆನಿಸಿದೆ. ಈಗಷ್ಟೇ ನಡೆದ ಹುಲಿ ಗಣತಿಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಏಷ್ಯಾದಲ್ಲಿ ದಟ್ಟ ಅರಣ್ಯಗಳನ್ನು ಹೊಂದಿರುವ ಭಾರತ ಹುಲಿ ಸಂತತಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಆದರೆ ಇತ್ತೀಚೆಗೆ ಮಾನವನ ಅವಶ್ಯಕತೆಗಳಿಗಾಗಿ ಅರಣ್ಯ ಪ್ರದೇಶಗಳು ಒತ್ತುವರಿಯಾಗುತ್ತಿರುವುದು, ರೆಸಾರ್ಟ್‌ಗಳಂತಹ ಹೊಸ ವ್ಯಾಪಾರ ಪರಿಕಲ್ಪನೆಗಳು, ಅರಣ್ಯ ಸಂಪತ್ತಿನ ಸ್ವಾರ್ಥ ಬಳಕೆ, ಮರಗಳ ಹನನದಂತಹ ಪರಿಸರ ವಿರೋಧಿ ಚಟುವಟಿಕೆಗಳು ದಟ್ಟ ಅರಣ್ಯವನ್ನು ಕರಗಿಸುತ್ತಿವೆ. ಇದರಿಂದ ದಟ್ಟಡವಿಯ ಮಧ್ಯಭಾಗದಲ್ಲಿ ತಂಪಾದ, ಸುರಕ್ಷಿತ ನೆಲೆಯನ್ನು ಕಂಡುಕೊಂಡಿದ್ದ ವ್ಯಾಘ್ರ ಸಂತತಿ ಒಳಗೊಂಡಂತೆ ಹಲವು ವನ್ಯಮೃಗಗಳು ದಿಕ್ಕು ತೋಚದಂತಾಗಿವೆ.

ಇದಲ್ಲದೆ, ಸ್ವಾಭಾವಿಕವಾಗಿ ಲಭ್ಯವಿದ್ದ ನೀರು ಮತ್ತು ಆಹಾರ ಸಂಪ ನ್ಮೂಲಗಳ ಕೊರತೆಯೂ ಇತ್ತೀಚೆಗೆ ಅವುಗಳನ್ನು ಹೆಚ್ಚಾಗಿ ಕಾಡತೊಡಗಿದೆ. ಹಾಗಾಗಿ ಅವು ಪರ್ಯಾಯ ಮಾರ್ಗಗಳನ್ನು ಹುಡುಕುವ ಅನಿವಾರ್ಯ ತೆಯಲ್ಲಿ ಸಿಲುಕಿ ನಾಡಿಗೆ ಲಗ್ಗೆ ಇಡುತ್ತಿವೆ. ಉದಾಹರಣೆಗೆ ಹುಲಿ-ಚಿರತೆ ಯಂತಹ ವನ್ಯಮೃಗಗಳು ಆಹಾರಕ್ಕಾಗಿ ಜಿಂಕೆ, ಸಾಂಬಾರ್, ಕಾಡೆಮ್ಮೆ, ಕಾಡುಹಂದಿ, ಮೊಲ, ಕಾಡುಕುರಿಯಂತಹ ಪ್ರಾಣಿಗಳನ್ನೇ ಅವಲಂಬಿಸಿವೆ. ಇಂತಹ ಜೀವಸಂಕುಲಗಳ ಕೊರತೆಯನ್ನೂ ರಾಜ್ಯದ ಅರಣ್ಯಗಳು ಇಂದು ಎದುರಿಸುತ್ತಿವೆ. ಹುಲಿ ಸಂತತಿ ಹೆಚ್ಚಳವಾಗುವುದೊಂದೇ ಮುಖ್ಯವಲ್ಲ. ಅವು ಆಶ್ರಯಪಡೆದಿರುವ ಅಡವಿಗಳು ದಟ್ಟವಾಗಿವೆಯೇ? ಅಲ್ಲಿ ಆಹಾರದ ಕೊರತೆ ಇದೆಯೇ? ನೀರಿನ ಕೊರತೆ ಇದೆಯೇ? ವನ್ಯಜೀವಿಗಳ ಆವಾಸಸ್ಥಾನ ಅರಣ್ಯಗಳು ವಿಸ್ತೀರ್ಣದಲ್ಲಿ ಕಿರಿದಾಗುತ್ತಿವೆಯೇ? ಎಂಬ ಪ್ರಶ್ನೆಗಳೂ ಪ್ರಮುಖವಾಗುತ್ತವೆ. ಈ ಅಂಶಗಳನ್ನು ಕಡೆಗಣಿಸಿ ಹುಲಿ ಸಂತತಿ ಹೆಚ್ಚಳಕ್ಕಷ್ಟೇ ಗಮನ ಕೇಂದ್ರೀಕರಿಸಿದಾಗ ಹುಲಿ, ಚಿರತೆಗಳು, ಆನೆಗಳು ಮತ್ತಿತರ ವನ್ಯಪ್ರಾಣಿ ಗಳು ನಾಡಿಗೆ ಬರುವುದನ್ನು ತಡೆಯುವುದು ಸಾಧ್ಯವಾಗದ ಮಾತು.

ವನ್ಯ ಮೃಗಗಳು ತಮ್ಮ ಅಸ್ತಿತ್ವಕ್ಕೆ, ನೆಮ್ಮದಿಗೆ ಧಕ್ಕೆ ಒದಗಿದಾಗ ವಿಚಲಿತ ಗೊಂಡು, ರೈತರ ಜಮೀನುಗಳಿಗೆ, ಗ್ರಾಮಗಳೆಡೆಗೆ ಸಂಚಾರ ಆರಂಭಿಸುತ್ತವೆ. ಅರಣ್ಯಗಳ ದಟ್ಟಣೆ ಈಗ ಮೊದಲಿನಷ್ಟು ಇಲ್ಲ. ಮೊದಲಿಗಿಂತಲೂ ವಿರಳವಾಗಿವೆ. ಜತೆಗೆ ಸಂರಕ್ಷಿತ ಅರಣ್ಯಗಳಲ್ಲಿ ‘ಸಫಾರಿ ಈಗ ಜನರ ಆಕರ್ಷಣೆಯೂ ಆಗಿದ್ದು, ಅರಣ್ಯ ಇಲಾಖೆಗೆ ಆದಾಯ ತರುವ ಉದ್ಯಮವಾಗಿಯೂ ಬದಲಾಗಿದೆ. ಅರಣ್ಯ ಮತ್ತು ವನ್ಯಜೀವಿಗಳ ಬಗೆಗಿನ ಅಧ್ಯಯನದ ದೃಷ್ಟಿಯಿಂದ ಸಫಾರಿ ಅಗತ್ಯವೆನಿಸಿದರೂ ವಾಹನಗಳ ಶಬ್ದ, ಹೊಗೆ ಮತ್ತು ಇಂಧನದ ವಾಸನೆ, ವನ್ಯಮೃಗಗಳನ್ನು ಕಂಡಾಗ ಸಫಾರಿಗರಿಂದ ಕೇಳಿಬರುವ ಗೌಜು ಗದ್ದಲ, ವಾಹನಗಳ ಲೈಟ್ ಬೆಳಕು… ಇಂತಹ ಎಲ್ಲ ಸನ್ನಿವೇಶಗಳಿಗೂ ಬಫರ್ ಜೋನ್‌ನಲ್ಲಿ ಸಂಚರಿಸುವ ವನ್ಯಮೃಗಗಳು ಸಹಜವಾಗಿ ಹೊಂದಿಕೊಂಡಿರುತ್ತವೆ. ಇಂತಹ ಸಹಜ ಹೊಂದಿಕೊಳ್ಳುವಿಕೆಯಿಂದಾಗಿ ಯಾವ ಭಯವೂ ಇಲ್ಲದೆ ಅವು ಸಲೀಸಾಗಿ ನಾಡನ್ನು ಪ್ರವೇಶಿಸುತ್ತವೆ.

ಅರಣ್ಯದ ಹೊರವಲಯ ಕುರುಚಲು ಕಾಡು ಹುಲಿಗಳಂತಹ ವನ್ಯ ಜೀವಿಗಳಿಗೆ ವಾಸಯೋಗ್ಯ ಸ್ಥಳವಲ್ಲ. ದಟ್ಟ ಕಾನನವೇ ಅವುಗಳಿಗೆ ಸೂಕ್ತ. ಒಂದು ಕಾಡಿನ ಸಮೃದ್ಧತೆ ವನ್ಯಮೃಗಗಳ ವಾಸಯೋಗ್ಯ ವಾತಾವರಣದ ಸೂಚ್ಯಂಕ. ಈಗ ಕಾಡಿನ ಸಾಂದ್ರತೆ ಕಡಿಮೆಯಾಗಿರುವುದರಿಂದ ಅವುಗಳಿಗೆ ರೈತರ ಜಮೀನಿನ ಅಕ್ಕಪಕ್ಕದಲ್ಲಿರುವ ಸಣ್ಣಪುಟ್ಟ ಗುಡ್ಡ ಪ್ರದೇಶಗಳು, ಕುರುಚಲು ಕಾಡುಗಳಿಗೂ ದಟ್ಟಾರಣ್ಯಕ್ಕೂ ವ್ಯತ್ಯಾಸವೇ ತಿಳಿಯದಂತಾಗಿದೆ. ವನ್ಯ ಮೃಗಗಳು ಮಾನವನ ಪರಿಸರಕ್ಕೆ ಒಗ್ಗಿಕೊಳ್ಳುವಿಕೆಯಿಂದಾಗಿಯೇ ಊರಿಗೆ ಬರುವ ಹುಲಿ, ಚಿರತೆಯಂತಹ ಪ್ರಾಣಿಗಳು ವಾಹನಗಳ ಸಂಚಾರ ಮತ್ತು ಬೆಳಕು ಕಂಡಾಗಲೂ ವಿಚಲಿತವಾಗದೆ ತಮ್ಮಷ್ಟಕ್ಕೆ ನಿರ್ಲಿಪ್ತವಾಗಿರುತ್ತವೆ.
ಹುಲಿಗಳ ಸಂತತಿ ಹೆಚ್ಚಾದಂತೆಲ್ಲಾ ಚಿರತೆಗಳ ಬದುಕು ದುಸ್ತರವಾಗುತ್ತದೆ. ಹುಲಿಯ ದಾಳಿಯಿಂದ ತಪ್ಪಿಸಿಕೊಂಡು ಬದುಕುವುದು ಚಿರತೆಗೆ ಕರಗತವಾದ ಕಲೆ, ಅವುಗಳ ಬದುಕಿನ ಶೈಲಿಯೇ ಹಾಗೆ, ಹುಲಿಗಳ ದಾಳಿಯ ಭಯದಿಂದಾಗಿಯೂ ಚಿರತೆಗಳು ತಲೆಮರೆಸಿಕೊಂಡು ಬದುಕಲು ನಾಡಿನತ್ತ ಪಲಾಯನಗೈಯುತ್ತವೆ. ವನ್ಯಮೃಗಗಳಲ್ಲಿರುವ ಎಲ್ಲೆಗಟ್ಟಿನ ಟೆರಿಟರಿ) ಅಲಿಖಿತ ನೈಸರ್ಗಿಕ ನಿಯಮವೂ ಇಂತಹ ಪಲಾಯನಕ್ಕೆ ಕಾರಣವಾಗುತ್ತದೆ. ಒಂದು ಬಲಿಷ್ಠ ಹುಲಿಯು ಗುರುತಿಸಿಕೊಂಡಿರುವ ಗಡಿಯನ್ನು ಮತ್ತೊಂದು ಹುಲಿ ದಾಟಬೇಕೆಂದರೆ ಅದಕ್ಕೆ ಗೆಲ್ಲುವ ತಾಕತ್ತು ಇರಬೇಕು. ಇಲ್ಲವೇ ಸಾಯಲು ಸಿದ್ಧವಿರಬೇಕು. ಇದ್ಯಾವುದೂ ಬೇಡವೆಂದಲ್ಲಿ ನಾಡಿನತ್ತ ಬರಲೇಬೇಕು. ಇದು ಅವುಗಳ ಬದುಕಿನ ಅನಿವಾರ್ಯತೆ.

ದಾಳಿ ಮಾಡುವ ಭಯದಿಂದಾಗಿ ಮನುಷ್ಯನಿಗೆ ವನ್ಯಮೃಗಗಳ ಬಗೆಗಿರುವ ಭಯ, ಅವುಗಳಿಗೆ ಮನುಷ್ಯನ ಬಗೆಗಿರುವ ಆತಂಕ, ಸಾಕು ಪ್ರಾಣಿಗಳು ಮತ್ತು ಮಾನವನ ಮೇಲಿನ ದಾಳಿಗಳು ಮನುಷ್ಯನ ಜತೆಗಿನ ಸಂಘರ್ಷಕ್ಕೆ ಎಡೆಮಾಡಿಕೊಡುತ್ತವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದರ ನಿಯಂತ್ರಣ ಯಾರೊಬ್ಬರಿಗೂ ಸೀಮಿತವಾದದ್ದಲ್ಲ. ಇದೊಂದು ಸಾಮಾಜಿಕ ಹೊಣೆಗಾರಿಕೆ, ಅರಣ್ಯಗಳನ್ನು ಸಮೃದ್ಧವಾಗಿಸಬೇಕು. ಇದನ್ನು ಪರಿಣಾಮ ಕಾರಿಯಾಗಿ ನಿರ್ವಹಿಸದಿದ್ದರೆ ಇಂತಹ ಅನಾಹುತಗಳಿಗೆ ಕಡಿವಾಣ ಹಾಕುವುದು ಅಸಾಧ್ಯ.

andolanait

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

9 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

9 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

9 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

9 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

9 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

9 hours ago