ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ
ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಒಂದು ನಂಬಿಕೆಯಿತ್ತು. ಅದೆಂದರೆ, ನಮ್ಮಲ್ಲಿ ಅಧಿಕಾರ ಹಂಚಿಕೆಗಾಗಿ ಸಂಘರ್ಷ ನಡೆದಿರಬಹುದು. ಆದರೆ ಅದರ ಲಾಭ ಪ್ರತಿಪಕ್ಷಗಳಿಗೆ ಆಗುವುದಿಲ್ಲ ಎಂಬುದು. ಅದರ ಈ ನಂಬಿಕೆಗೆ ಕಾರಣವೂ ಇತ್ತು. ಯಾಕೆಂದರೆ ಪ್ರಮುಖ ಪ್ರತಿಪಕ್ಷ ಬಿಜೆಪಿಯನ್ನೇ ತೆಗೆದುಕೊಳ್ಳಿ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆಗಾಗಿ ಸಂಘರ್ಷ ನಡೆದಿದ್ದರೆ, ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷರ ವಿಷಯದ ಜಟಾಪಟಿ ನಡೆದಿತ್ತು. ಅದು ಇವತ್ತಿಗೂ ಮುಂದುವರಿದಿದೆ.
ಅರ್ಥಾತ್, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಪಕ್ಷದ ರಾಜಧ್ಯಕ್ಷರಾಗಿರುವುದನ್ನು ಬಹುತೇಕ ಹಿರಿಯ ನಾಯಕರು ಒಪ್ಪುತ್ತಿಲ್ಲ. ಅದರಲ್ಲೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಹಿರಿಯ ನಾಯಕರು ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪಲು ತಯಾರಿಲ್ಲ.
ಇದಕ್ಕೆ ಒಂದು ಕಾರಣವೂ ಇದೆ. ಅದೆಂದರೆ, ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ವಿಜಯೇಂದ್ರ ಅವರು ರಾಜಧ್ಯಕ್ಷರಾಗಿ ಇದ್ದರೆ ಸಹಜವಾಗಿಯೇ ಮುಖ್ಯಮಂತ್ರಿ ಕ್ಯಾಂಡಿಡೇಟ್ ಆಗುತ್ತಾರೆ.ಅಧಿಕಾರ ಹಿಡಿಯುವಲ್ಲಿ ಪಕ್ಷ ವಿಫಲವಾದರೆ ಬೇರೆ ಮಾತು. ಆದರೆ ಪಕ್ಷ ಅಧಿಕಾರಕ್ಕೆ ಬಂದರೆ ಸಹಜವಾಗಿಯೇ ವಿಜಯೇಂದ್ರ ಮುಖ್ಯಮಂತ್ರಿ ಕ್ಯಾಂಡಿಡೇಟ್ ಆಗುತ್ತಾರೆ.
ಪಕ್ಷ ಯಾರ ಸಾರಥ್ಯದಲ್ಲಿ ಗೆಲುವು ಸಾಧಿಸುತ್ತದೋ ಅವರಿಗೆ ಸಹಜವಾಗಿಯೇ ಅವರ ನಾಯಕತ್ವದ ವೈಭವೀಕರಣವಾಗುತ್ತದೆ. ಸಾಲದೆಂಬಂತೆ ಇವತ್ತಿಗೂ ಪಕ್ಷದ ದೊಡ್ಡ ಶಕ್ತಿಯಾಗಿಯೇ ಉಳಿದಿರುವ ಯಡಿಯೂರಪ್ಪ ಅವರ ಪುತ್ರರಾಗಿರುವುದರಿಂದ ವಿಜಯೇಂದ್ರ ಅವರನ್ನು ಗೆಲುವಿನ ನಂತರ ಮೂಲೆಗುಂಪು ಮಾಡುವುದು ಕಷ್ಟ. ಹೀಗಾಗಿ, ಅವರು ಅಧಿಕಾರದಲ್ಲಿ ಮುಂದುವರಿದರೆ ತಾನೇ ಸಮಸ್ಯೆ? ಎಂಬ ಲೆಕ್ಕಾಚಾರಕ್ಕೆ ಬಂದಿರುವ ಬಿಜೆಪಿಯ ಹಿರಿಯ ನಾಯಕರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ.
ಅಂದ ಹಾಗೆ ಇಂತಹ ಪ್ರಯತ್ನ ನಡೆಸುತ್ತಿರುವ ನಾಯಕರನ್ನು ಬಿಜೆಪಿ ವರಿಷ್ಠರು ದೂರ ತಳ್ಳುತ್ತಿಲ್ಲ. ಅದೇ ರೀತಿ ಪಕ್ಷದ ರಾಜಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರಿಗೂ ಎಚ್ಚರಿಕೆಯ ಸಂದೇಶ ನೀಡುತ್ತಿಲ್ಲ. ಹೀಗಾಗಿ ವಿಜಯೇಂದ್ರ ಅವರನ್ನು ಇಳಿಸುವ ಆಟವೂ ನಡೆದಿದೆ ಮತ್ತು ವಿಜಯೇಂದ್ರ ಅವರಿಗೆ ಶಕ್ತಿ ತುಂಬುವ ಪ್ರಯತ್ನವೂ ನಡೆಯುತ್ತಿದೆ. ಹೀಗೆ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಹಾವು ಏಣಿ ಆಟವನ್ನು ನೋಡುತ್ತಲೇ ಬಂದಿದ್ದ ಕಾಂಗ್ರೆಸ್ ನಾಯಕರು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವೆ ಅಧಿಕಾರ ಹಂಚಿಕೆಗಾಗಿ ಸಂಘರ್ಷ ನಡೆದಿದ್ದರೂ, ಬಿಜೆಪಿ ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಪರಿಣಾಮ? ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರ ಹಿಡಿಯುತ್ತದೆ ಎನ್ನುತ್ತಿದ್ದರು.
ಇತ್ತೀಚಿನವರೆಗೆ ಅವರ ಈ ನಂಬಿಕೆ ಸರಿಯಾಗಿಯೇ ಇದೆ ಎನ್ನಿಸುತ್ತಿತ್ತು. ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು, ಡಿ.ಕೆ.ಶಿವಕುವರ್ ಅವರು ಈ ಜಗಕ್ಕೆ ಬಂದು ಕುಳಿತ ಮೇಲೆ ಕ್ರಮೇಣ ಈ ಮಾತಿನ ಶಕ್ತಿ ಕಡಿಮೆಯಾಗತೊಡಗಿದೆ. ಕಾರಣ? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ನೂರು ದಿನಗಳು ದಾಟುವಷ್ಟರಲ್ಲಿ ಕಾಂಗ್ರೆಸ್ ಪಾಳೆಯ ಅಸ್ತವ್ಯಸ್ತವಾದಂತೆ ಭಾಸವಾಗುತ್ತಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ನ ಮತ ಬ್ಯಾಂಕ್ ಸ್ವರೂಪ ದುರ್ಬಲವಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಇದನ್ನು ವಿವರವಾಗಿ ನೋಡಬೇಕು ಎಂದರೆ ಮೊದಲು ದಲಿತ ಮತ ಬ್ಯಾಂಕ್ ಅನ್ನೇ ನೋಡಬೇಕು. ಸ್ಪಷ್ಟವಾಗಿ ಹೇಳಬೇಕು ಎಂದರೆ ಮೊನ್ನೆ ಮೊನ್ನೆಯ ತನಕ ಕಾಂಗ್ರೆಸ್ ಜತೆ ದಲಿತ ವರ್ಗದ ಬಲಗೈ ಸಮುದಾಯ, ಪರಿಶಿಷ್ಟ ಪಂಗಡದ ಹಿರಿಯಣ್ಣ ಅನ್ನಿಸಿಕೊಂಡ ವಾಲ್ಮೀಕಿ ಸಮುದಾಯಗಳು ಗಟ್ಟಿಯಾಗಿ ನಿಂತಿದ್ದವು.
ಆದರೆ ಕಳೆದ ಕೆಲ ದಿನಗಳಲ್ಲಿ ವಾಲ್ಮೀಕಿ ಮತ ಬ್ಯಾಂಕ್ ಮೇಲೆ ನಿರಂತರ ಪ್ರಹಾರವಾಗುತ್ತಿದೆ. ಆ ಸಮುದಾಯದ ನಾಯಕರಾದ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ಕಿತ್ತು ಹಾಕಲಾಗಿದೆ. ಬಿ.ನಾಗೇಂದ್ರ ಅವರು ಹಿರಿಯ ನಾಯಕರ ಸೂಚನೆಯ ಮೇಲೆ ಮಾಡಿದ ಕೆಲಸಕ್ಕೆ ಮಂತ್ರಿಗಿರಿಯನ್ನು ಎರಡೆರಡು ಬಾರಿ ಕಳೆದುಕೊಂಡಿದ್ದಾರೆ.
ಇನ್ನು ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರೆಂದೇ ಬಿಂಬಿತರಾಗಿದ್ದ ಸತೀಶ್ ಜರಕಿಹೊಳಿ ಅವರನ್ನು ಈಗ ಸಿದ್ದರಾಮಯ್ಯ ಪಾಳೆಯ ಹತ್ತಿರದಲ್ಲಿಟ್ಟುಕೊಂಡಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾಳೆಯವೂ ಹತ್ತಿರ ಇಟ್ಟುಕೊಂಡಿಲ್ಲ. ಇದರ ಮಧ್ಯೆಯೇ ಕೇಂದ್ರದ ತನಿಖಾ ಸಂಸ್ಥೆಗಳ ದಾಳಿಗೆ ಗುರಿಯಾಗಿರುವ ಸತೀಶ್ ಜಾರಕಿಹೊಳಿ ಅನಿವಾರ್ಯವಾಗಿ ಬಿಜೆಪಿಯ ಕಡೆ ಮುಖ ಮಾಡಬಹುದು ಎಂಬ ಮಾತು ದಟ್ಟವಾಗುತ್ತಿದೆ. ಹಾಗೇನಾದರೂ ಆದರೆ ರಾಜ್ಯದ ನೂರಾ ನಲವತ್ತೊಂದು ಕ್ಷೇತ್ರಗಳಲ್ಲಿ ಗಣನೀಯವಾಗಿರುವ, ಅದರಲ್ಲೂ ನಲವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರನ್ನು ಹೊಂದಿರುವ ವಾಲ್ಮೀಕಿ ಸಮುದಾಯ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್‌ನಿಂದ ದೊಡ್ಡ ಮಟ್ಟದಲ್ಲಿ ಹೊರಗೆ ಹೋಗಿರುತ್ತದೆ.
ಈ ಮಧ್ಯೆ ದಲಿತ ವರ್ಗದ ಎಡಗೈ ಮತ ಬ್ಯಾಂಕ್ ಬಿಜೆಪಿಯ ಜತೆಮ ನಿಂತಿರುವುದು ಐತಿಹಾಸಿಕ ಸತ್ಯವಾದರೂ, ಬಲಗೈ ಸಮುದಾಯದ ಮತಗಳು ಕಾಂಗ್ರೆಸ್ ಜತೆ ಗಟ್ಟಿಯಾಗಿ ನಿಂತುಕೊಂಡಿವೆ. ಆದರೆ ಇತ್ತೀಚಿನ ಬೆಳವಣಿಗೆಗಳು ಬಲಗೈಸಮುದಾಯದಲ್ಲೂ ಅಸಮಾಧಾನವನ್ನು ಬಿತ್ತಿವೆ. ಮೊದಲನೆಯದಾಗಿ ದಲಿತರಿಗೆ ಒಳಮೀಸಲಾತಿ ನೀಡುವ ಕಾಂಗ್ರೆಸ್ ಸರ್ಕಾರದ ಕ್ರಮ ಬಲಗೈ ಸಮುದಾಯಕ್ಕೆ ಇಷ್ಟವಾಗಿಲ್ಲ ಮತ್ತು ತಮ್ಮ ಸಮುದಾಯದ ಪ್ರಬಲ ನಾಯಕ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಕನಿಷ್ಠ ಪಕ್ಷ ಸಚಿವ ಸಂಪುಟದಲ್ಲಿ ಜಗ ನೀಡದಿರುವ ಕ್ರಮವೂ ಆ ಸಮುದಾಯವನ್ನು ಕೆರಳಿಸಿದೆ.
ಪರಿಣಾಮ? ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಬಲಗೈ ಸಮುದಾಯದ ಗಣನೀಯ ಮತಗಳು ಕೂಡಾ ಬಿಜೆಪಿ-ಜಾ.ದಳ ಮಿತ್ರಕೂಟದ ಕಡೆ ವಾಲುವ ಲಕ್ಷಣಗಳು ಕಾಣಿಸಿಕೊಂಡಿವೆ. ಇನ್ನು ಮುಸ್ಲಿಂ ಸಮುದಾಯದ ಪವರ್-ಲ್ ಲೀಡರ್ ಜಮೀರ್ ಅಹ್ಮದ್ ಅವರ ಸ್ಥಿತಿ ಆ ಸಮುದಾಯದಲ್ಲಿ ಅಸಮಾಧಾನ ಮೂಡಿಸಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಎಸ್‌ಡಿಪಿಐ ಮತ್ತು ಅಸಾದುದ್ದೀನ್ ಓವೈಸಿಯವರ ಎಂಓಎಂ ಪಕ್ಷಗಳು ರಣಾಂಗಣಕ್ಕಿಳಿದರೆ ಮುಸ್ಲಿಂ ಮತಗಳು ಚದುರಿ ಹೋಗುವ ಲಕ್ಷಣಗಳು ಕಾಣಿಸಿಕೊಂಡಿವೆ. ಇನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೇಲೆ ಪ್ರಬಲ ಕುರುಬ ಸಮುದಾಯ ಕಾಂಗ್ರೆಸ್‌ನಿಂದ ದೂರ ಹೋಗುವ ಸಾಧ್ಯತೆ ಜಸ್ತಿ. ಹೀಗೆ ಅಹಿಂದ ಮತ ಬ್ಯಾಂಕು ಚೆಪಿಲ್ಲಿಯಾದರೆ ಪ್ರಬಲ ಒಕ್ಕಲಿಗ ವರ್ಗ ಕೂಡಾ ಕಾಂಗ್ರೆಸ್ ಜತೆ ನಿಲ್ಲಲು ಹಿಂದೆ ಮುಂದೆ ನೋಡುತ್ತದೆ.
ಹೀಗೆ ಇದುವರೆಗೆ ಕಾಂಗ್ರೆಸ್ ಜತೆಗಿದ್ದ ಮತ ಬ್ಯಾಂಕುಗಳು ಪಲ್ಲಟ್ಟಗೊಳ್ಳುತ್ತಾ ನಡೆದರೆ ಕತೆ ಏನು? ಹೀಗಾಗಿ ಒಂದು ಕಾಲದಲ್ಲಿ ವಿರೋಧ ಪಕ್ಷಗಳ ಅಸಹಾಯಕತೆ ತಮಗೆ ಲಾಭದಾಯಕ ಎನ್ನುತ್ತಿದ್ದ ಕಾಂಗ್ರೆಸ್ ಪಾಳೆಯದಲ್ಲೀಗ ಒಂದು ಬಗೆಯ ಆತಂಕ ಕಾಣಿಸಿಕೊಂಡಿದೆ. ಇದೇ ಸದ್ಯದ ವಿಶೇಷ.
” ಇದುವರೆಗೆ ಕಾಂಗ್ರೆಸ್ ಜತೆಗಿದ್ದ ಮತ ಬ್ಯಾಂಕುಗಳು ಪಲ್ಲಟ್ಟಗೊಳ್ಳುತ್ತಾ ನಡೆದರೆ ಕತೆ ಏನು? ಹೀಗಾಗಿಒಂದು ಕಾಲದಲ್ಲಿ ವಿರೋಧ ಪಕ್ಷಗಳ ಅಸಹಾಯಕತೆ ತಮಗೆ ಲಾಭದಾಯಕ ಎನ್ನುತ್ತಿದ್ದ ಕಾಂಗ್ರೆಸ್ ಪಾಳೆಯದಲ್ಲೀಗ ಒಂದು ಬಗೆಯ ಆತಂಕ ಕಾಣಿಸಿಕೊಂಡಿದೆ”
ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…
ಲಕ್ಷ್ಮೀ ಕಾಂತ್ ಕೊಮಾರಪ್ಪ ಕೃಷಿ, ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದಂತೆ ತಿದ್ದುಪಡಿ ತರಲು ಆಗ್ರಹ ಸೋಮವಾರಪೇಟೆ: ಕೊಡಗು ಜಿಲ್ಲೆಯ ಅರ್ಧದಷ್ಟು…
ಪ್ರಶಾಂತ್ ಎಸ್. ಬೊಂತಗಳ್ಳಿ ಸೇತುವೆ, ತಂತಿಗುಳ್ಳು ತಿರುವಿನಲ್ಲಿ ಹಂಪ್, ಬ್ಯಾರಿಕೇಡ್‌ಗಳನ್ನು ಅಳವಡಿಸಲು ಗ್ರಾಮಸ್ಥರ ಆಗ್ರಹ ಮೈಸೂರು: ಬನ್ನೂರು ಮುಖ್ಯ ರಸ್ತೆಯಲ್ಲಿನ…
ಕೆ.ಬಿ.ರಮೇಶನಾಯಕ ಮೈದಾನ ಸಂರಕ್ಷಿಸಿಕೊಳ್ಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ; ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲ್ಚೆಂಡು ಮೈದಾನ ಈಗ ಬಿಡಾಡಿ ದನಗಳ,…
ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…