Andolana originals

ಕಾಲ್ಚೆಂಡು ಮೈದಾನ ಈಗ ಬಿಡಾಡಿ ದನಗಳ, ವಾಹನಗಳ ತಂಗುದಾಣ

ಕೆ.ಬಿ.ರಮೇಶನಾಯಕ

ಮೈದಾನ ಸಂರಕ್ಷಿಸಿಕೊಳ್ಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ;

ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲ್ಚೆಂಡು ಮೈದಾನ ಈಗ ಬಿಡಾಡಿ ದನಗಳ, ವಾಹನಗಳ ತಂಗುದಾಣ

ಮೈಸೂರು: ಕ್ರೀಡಾಪಟುಗಳಿಗೆ ಒಂದೇ ಸೂರಿನಡಿ ವಿವಿಧ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ರಾಜ್ಯ ಸರ್ಕಾರ ಜಿಲ್ಲಾ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕಾಗಿ ಎಂಡಿಎದಿಂದ ಜಾಗ ಪಡೆದುಕೊಂಡಿದ್ದರೆ, ಮತ್ತೊಂದು ಕಡೆ ತನಗೆ ಮೀಸಲಾದ ಫುಟ್‌ಬಾಲ್ ಮೈದಾನದ ಜಾಗವನ್ನು ಸಂರಕ್ಷಿಸಲು ಅಗತ್ಯ ಕ್ರಮಕೈಗೊಳ್ಳದ ಕಾರಣದಿಂದಾಗಿ ಬಿಡಾಡಿ ದನಗಳು, ಖಾಸಗಿ ವಾಹನಗಳಿಗೆ ತಂಗುತಾಣವಾಗಿದೆ.

ನ್ಯಾಯಾಲಯದಲ್ಲಿ ಪ್ರಕರಣ ಇದೆ ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮುಂದಿನ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿರುವುದರಿಂದ ದಿನದಿಂದ ದಿನಕ್ಕೆ ಖಾಸಗಿ ವಾಹನಗಳನ್ನು ನಿಲ್ಲಿಸುವುದು ಹೆಚ್ಚಾಗಿದೆ.

ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಫುಟ್‌ಬಾಲ್ ಮೈದಾನ ಅನಧಿಕೃತ ವ್ಯಕ್ತಿಗಳಿಗೆ ಲಾಭ ತಂದುಕೊಡುವ ಪಾರ್ಕಿಂಗ್ ತಾಣವಾಗುವುದು ನಿಶ್ಚಿತವಾಗಲಿದೆ. ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರೀಡಾ ಚಟುವಟಿಕೆಗಳು ಹೆಚ್ಚುತ್ತಿರುವ ಜತೆಗೆ ಪ್ರತಿವರ್ಷ ದಸರಾ ಮಹೋತ್ಸವ ಪ್ರಯುಕ್ತ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ. ಹೀಗಾಗಿ, ಒಂದೇ ಸೂರಿನಲ್ಲಿ ಹಲವಾರು ಕ್ರೀಡಾ ಚಟುವಟಿಕೆಗಳನ್ನು ನಡೆಸಬೇಕೆಂಬ ಕೂಗು ಕೇಳಿಬಂದಿದ್ದರಿಂದ ನಗರದ ಹೊರವಲಯದಲ್ಲಿರುವ ಸಾತಗಳ್ಳಿ ಬಳಿ ಎಂಡಿಎಗೆ ಸೇರಿದ ೨೨ ಎಕರೆ ಜಾಗವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದೆ.

ಈ ಜಾಗವನ್ನು ಸಮತಟ್ಟು ಮಾಡಿ ಕಾಮಗಾರಿ ಶುರು ಮಾಡಬೇಕು ಎನ್ನುವ ಹೊತ್ತಿಗೆ ದಸರಾ ಮಹೋತ್ಸವದ ಕಂಬಳ ಆಯೋಜನೆಗೆ ಬೇಕಾದ ಟ್ರ್ಯಾಕ್ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ಚಾಮುಂಡಿವಿಹಾರ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಇರುವ ಫುಟ್‌ಬಾಲ್ ಮೈದಾನದಲ್ಲಿ ಫುಟ್‌ಬಾಲ್ ಕ್ರೀಡೆಗೆ ಬೇಕಾದ ತಯಾರಿ ಮಾಡಿಕೊಳ್ಳುವುದಕ್ಕೆ ಮುಂದಾಗದ ಕಾರಣ ಈಗ ಪಾಳು ಬಿದ್ದಿದೆ. ಇದನ್ನು ತಿಳಿದ ಖಾಸಗಿ ವ್ಯಕ್ತಿಗಳು ಫುಟ್‌ಬಾಲ್ ಮೈದಾನದ ಜಾಗದಲ್ಲಿ ಲಾರಿಗಳು, ಟಾಟಾ ಎಸಿಗಳು, ಗೂಡ್ಸ್ ಆಟೋಗಳು, ಖಾಸಗಿ ಮಾಲೀಕರ ವಾಹನಗಳು, ನರ್ಸಿಂಗ್ ಕಾಲೇಜಿನ ಬಸ್‌ಗಳು, ಆಂಬುಲೆನ್ಸ್ ವಾಹನಗಳನ್ನು ನಿಲುಗಡೆ ಮಾಡಿ ಹೋಗುತ್ತಾರೆ.

ತಿ.ನರಸೀಪುರ, ಬನ್ನೂರು ಮಾರ್ಗಕ್ಕೆ ಸರ್ಕಾರಿ ಕಚೇರಿ ಕೆಲಸಗಳಿಗೆ ಹೋಗುವ ನೌಕರರು, ಶಿಕ್ಷಕರು ಕೂಡ ತಮ್ಮ ವಾಹನವನ್ನು ಇಲ್ಲಿಯೇ ನಿಲುಗಡೆ ಮಾಡುತ್ತಿದ್ದರೆ, ಅಕ್ಕಪಕ್ಕದ ಬೀದಿಯ ಮಾಲೀಕರು ತಮ್ಮ ಜಾನುವಾರುಗಳನ್ನು ಇಲ್ಲಿಯೇ ಕಟ್ಟಿ ಮೇವು ಹಾಕಿ ಹೋಗುತ್ತಾರೆ. ಹೀಗಾಗಿ, ಸಗಣಿಯ ರಾಶಿ ಬಿದ್ದಿರುವುದರಿಂದ ವಾಸನೆ ಬೀರುವಂತಾಗಿದೆ.

ಇದಲ್ಲದೆ, ಈ ಜಾಗ ಬಯಲು ಮೂತ್ರಾಲಯವಾಗಿಯೂ ಮಾರ್ಪಟ್ಟಿದೆ. ರಾಸುಗಳನ್ನು ಕಟ್ಟಿ ಹಾಕುವ ಜಾಗದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಕಾಂಪೌಂಡ್ ಶಿಥಿಲವಾಗಿದ್ದರೆ, ಕಬ್ಬಿಣದ ಗ್ರಿಲ್ ಹಾಳಾಗಲು ದಾರಿಮಾಡಿಕೊಟ್ಟಿದೆ. ಕಳೆದ ವರ್ಷ ಕ್ರೀಡಾ ಇಲಾಖೆಯಿಂದ ೭೦ ಲಕ್ಷ ರೂಪಾಯಿ ವೆಚ್ಚ ಮಾಡಿ ಕಾಂಪೌಂಡ್, ಕಬ್ಬಿಣದ ಗ್ರಿಲ್ ಹಾಕಿಸಿರುವುದು ಹಾಳಾಗಿದೆ. ಸಾಯಿಬಾಬಾ ಮಂದಿರಕ್ಕೆ ಹೊಂದಿಕೊಂಡಂತೆ ಇರುವ ಜಾಗದ ವಿಚಾರ ನ್ಯಾಯಾಲಯದಲ್ಲಿರುವ ಕಾರಣ ಇಡೀ ಜಾಗವನ್ನೇ ಪಾಳುಬೀಳುವಂತೆ ಮಾಡಿರುವುದು ಕ್ರೀಡಾಪ್ರೇಮಿಗಳು, ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಅಗಲೀಕರಣಕ್ಕೆ ಜಾಗ ಕಳೆದುಕೊಳ್ಳುವ ಭೀತಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಗೋಪಾಲಗೌಡ ಆಸ್ಪತ್ರೆ ವೃತ್ತದ ತನಕ ರಸ್ತೆ ಅಗಲೀಕರಣ ಕಾಮಗಾರಿ ನಿರ್ಮಾಣ ಮಾಡಿದರೆ ಒಂದಿಷ್ಟು ಜಾಗವನ್ನು ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ರಸ್ತೆ ಅಗಲೀಕರಣಕ್ಕಾಗಿ ಸ್ವಾಧೀನವಾದರೆ ಫುಟ್‌ಪಾತ್ ಮೈದಾನಕ್ಕೆ ಮೀಸಲಾಗಿರುವ ಜಾಗಕ್ಕೆ ಕತ್ತರಿ ಬೀಳುವುದು ಗ್ಯಾರಂಟಿಯಾಗಿದೆ. ಹೀಗಾಗಿ, ಚಾಮುಂಡಿವಿಹಾರ ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ಕ್ರೀಡಾಂಗಣದ ಆವರಣದಲ್ಲಿರುವ ೪೨೫ ಮೀ ಉದ್ದದ ಹಾಗೂ ೫ ಮೀ ಅಗಲ ೨೧.೫೫ ಚ.ಮೀ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿವೇಶನವನ್ನು ಪಾಲಿಕೆಗೆ ಹಸ್ತಾಂತರಿಸಲು ಕೋರಿರುವ ಪ್ರಸ್ತಾವನೆಯನ್ನು ಪರಿಶೀಲಿಸುವಂತೆ ನಗರಪಾಲಿಕೆ ಆಯುಕ್ತರಿಗೆ ಇಲಾಖೆ ಆಯುಕ್ತರು ಪತ್ರ ಬರೆದು ಕೋರಿದ್ದಾರೆ.

” ಫುಟ್‌ಬಾಲ್ ಮೈದಾನದ ಜಾಗದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆ ಮಾಡದಂತೆ ಅಗತ್ಯ ಕ್ರಮಕೈಗೊಳ್ಳುತ್ತೇವೆ. ದಸರಾ ಕ್ರೀಡಾಕೂಟ ನಡೆಯುವಾಗ ಫುಟ್‌ಬಾಲ್ ಕ್ರೀಡೆ ನಡೆಯಲಿದೆ. ನಂತರ ಸಂಪೂರ್ಣವಾಗಿ ತಂತಿ ಬೇಲಿ ಹಾಕಿಸಲಾಗುವುದು.”

 -ಕೆ.ಭಾಸ್ಕರ್ ನಾಯ್ಕ, ಸಹಾಯಕ ನಿರ್ದೇಶಕರು

 

 

ಆಂದೋಲನ ಡೆಸ್ಕ್

Recent Posts

ಕಸ್ತೂರಿ ರಂಗನ್ ವರದಿ: ದೇವರ ಕಾಡುಗಳಿಗೂ ಆತಂಕ

ಲಕ್ಷ್ಮೀ ಕಾಂತ್ ಕೊಮಾರಪ್ಪ ಕೃಷಿ, ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದಂತೆ ತಿದ್ದುಪಡಿ ತರಲು ಆಗ್ರಹ  ಸೋಮವಾರಪೇಟೆ: ಕೊಡಗು ಜಿಲ್ಲೆಯ ಅರ್ಧದಷ್ಟು…

1 min ago

ರಸ್ತೆ ಡುಬ್ಬ ನಿರ್ಮಿಸಿ; ಅಪಘಾತ ತಪ್ಪಿಸಿ

ಪ್ರಶಾಂತ್ ಎಸ್. ಬೊಂತಗಳ್ಳಿ ಸೇತುವೆ, ತಂತಿಗುಳ್ಳು ತಿರುವಿನಲ್ಲಿ ಹಂಪ್, ಬ್ಯಾರಿಕೇಡ್‌ಗಳನ್ನು ಅಳವಡಿಸಲು ಗ್ರಾಮಸ್ಥರ ಆಗ್ರಹ  ಮೈಸೂರು: ಬನ್ನೂರು ಮುಖ್ಯ ರಸ್ತೆಯಲ್ಲಿನ…

7 mins ago

ಬಯಲುಸೀಮೆಗೆ ಭದ್ರಾ ಜೀವಜಲ : ನವೆಂಬರ್ ಅಂತ್ಯಕ್ಕೆ ಎಲ್ಲ ಕೆರೆಗಳಿಗೂ ನೀರು ; ಸಚಿವ ಚಲುವರಾಯಸ್ವಾಮಿ ಭರವಸೆ*

ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…

15 hours ago

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

24 hours ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

24 hours ago