ಅಂಕಣಗಳು

ಸ್ವತಃ ಸಂತ್ರಸ್ತೆಯಾದರೂ ಸಂತ್ರಸ್ತಹೆಣ್ಣುಗಳಿಗೆ ಮಿಡಿಯುವ ದೇವಾಂಶಿ

ನೂರಾರು ಜನರ ಬಾಳಿಗೆ ಬೆಳಕಾದ ‘ಶಹಿದ್ ರಾಮಾಶ್ರಯ್ ವೆಲ್ಛೇರ್ ಸೊಸೈಟಿ’

ರಾಯ್ ಬರೇಲಿಯ ೩೩ ವರ್ಷ ಪ್ರಾಯದ ದೇವಾಂಶಿ ಯಾದವ್ ಚಿಕ್ಕವರಿರುವಾಗ ತಂದೆಯನ್ನು ಕಳೆದುಕೊಂಡರು. ೧೪ ವರ್ಷದವರಾಗಿದ್ದಾಗ ಆಸಿಡ್ ದಾಳಿಗೆ ಒಳಗಾದರು. ಅದರ ನಂತರ, ಒಬ್ಬ ಕುಟುಂಬ ಸ್ನೇಹಿತನಿಂದ ಲೈಂಗಿಕ ಶೋಷಣೆಗೆ ಒಳಗಾದರು. ಇಷ್ಟೆಲ್ಲವನ್ನು ಅನುಭವಿಸಿದ ನಂತರವೂ ದೇವಾಂಶಿ ಬದುಕಿಗೆ ವಿಮುಖರಾಗಲಿಲ್ಲ. ಬದಲಿಗೆ, ತನ್ನ ಬದುಕು ಮಾತ್ರವಲ್ಲದೆ ತನ್ನಂತೆಯೇ ಇಂತಹ ದೌರ್ಜನ್ಯಕ್ಕೊಳಗಾದ ನೂರಾರು ಹೆಣ್ಣು ಮಕ್ಕಳಿಗೆ ಧೈರ್ಯವಾಗಿ ನಿಂತು ಬದುಕನ್ನು ಎದುರಿಸಲು ಸೂರ್ತಿಯಾಗಿದ್ದಾರೆ.

ದೇವಾಂಶಿ ಒಂಬತ್ತು ತಿಂಗಳ ಹಸುಳೆಯಾಗಿದ್ದಾಗ ಅವರ ತಂದೆ ತೀರಿಕೊಂಡರು. ಅವರ ತಾಯಿಗೆ ಆಗ ೨೫ ವರ್ಷ ಪ್ರಾಯವಾಗಿತ್ತು. ಅಷ್ಟು ಚಿಕ್ಕ ಪ್ರಾಯದಲ್ಲಿ ಮಗುವೊಂದನ್ನು ಏಕಾಂಗಿಯಾಗಿ ಬೆಳೆಸುವುದು ಸಾಧಾರಣದ ಮಾತಲ್ಲ. ಮಹಾ ಧೈರ್ಯಸ್ಥೆಯಾದ ಅವರ ತಾಯಿ ಏಕಾಂಗಿಯಾಗಿ ದೇವಾಂಶಿಯನ್ನು ಸಾಕಿ ದೊಡ್ಡವಳನ್ನಾಗಿಸಿದರು, ಆ ಜವಾಬ್ದಾರಿಯನ್ನು ದಕ್ಷತೆಯಿಂದ ನಿಭಾಯಿಸಿದರು. ತಾಯಿಯ ಧೈರ್ಯದ ಆ ನಡವಳಿಕೆ ದೇವಾಂಶಿಗೆ ಅನುವಂಶಿಯವಾಗಿ ಬಂದಿತು. ತಾನು ಎಂತಹ ಕಷ್ಟವನ್ನಾದರೂ ಎದೆಗುಂದದೆ ಎದುರಿಸಲು ತನ್ನ ತಾಯಿಯೇ ತನಗೆ ಮಾದರಿ ಎಂದು ದೇವಾಂಶಿ ಹೇಳುತ್ತಾರೆ.

ದೇವಾಂಶಿ ೧೩ ವರ್ಷದವರಾಗಿದ್ದಾಗ ಒಬ್ಬ ಹುಡುಗ ಅವರನ್ನು ತನ್ನೊಂದಿಗೆ ಡೇಟಿಂಗ್‌ಗೆ ಬರುವಂತೆ ಕೇಳಿಕೊಂಡನು. ಆದರೆ, ದೇವಾಂಶಿ ಅವನ ಕೋರಿಕೆಯನ್ನು ನಿರಾಕರಿಸಿದರು. ದೇವಾಂಶಿಯ ನಿರಾಕರಣೆಯಿಂದ ಸಿಟ್ಟಾದ ಆ ಹುಡುಗ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿ, ಒಂದು ದಿನ ಅವಳ ಮೇಲೆ ಆಸಿಡ್ ಎರಚಿದನು. ದೇವಾಂಶಿಯ ಶರೀರದ ಎಡಭಾಗ ಸುಟ್ಟು ಹೋಯಿತು. ದೇವಾಂಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೈಹಿಕವಾಗಿ ಗುಣಮುಖರಾದರೂ ಮಾನಸಿಕವಾಗಿ ಜರ್ಜರಿತರಾಗಿದ್ದರು. ಅದು ಸಾಲದೆಂಬಂತೆ, ನೆರಹೊರೆಯ ಜನ ಆ ಹುಡುಗ ಆಸಿಡ್ ದಾಳಿ ಮಾಡಿದುದಕ್ಕೆ ದೇವಾಂಶಿಯ ನಡವಳಿಕೆ, ಅವರು ಧರಿಸುವ ಆಧುನಿಕ ಉಡುಪು ಕಾರಣವೆಂದು ಬೊಟ್ಟು ಮಾಡಿ ಅವರನ್ನೇ ಟೀಕೆ ಮಾಡುತ್ತಿದ್ದರು.

ವರ್ಷದ ನಂತರ ಆಸಿಡ್ ದಾಳಿಯ ನೋವು ಶಮನವಾಗಿ, ಗಾಯಗಳ ಕಲೆ ಮಾಸಿದ ನಂತರವೂ ಆ ಘಟನೆಯ ಮಾನಸಿಕ ಪರಿಣಾಮ ದೇವಾಂಶಿಗೆ ತಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆಯಲಾಗಲಿಲ್ಲ. ಎಷ್ಟೆಂದರೆ, ಅವರ ಕುಟುಂಬ ಸ್ನೇಹಿತನೊಬ್ಬ ಅವರಿಗೆ ಲೈಂಗಿಕ ಕಿರುಕುಳ ನೀಡಿದಾಗ ಜನ ಅದಕ್ಕೂ ತನ್ನನ್ನೇ ಜವಾಬ್ದಾರಳನ್ನಾಗಿಸುತ್ತಾರೆ ಎಂದು ಹೆದರಿ ಅವನ ಕಿರುಕುಳಕ್ಕೆ ವಿರೋಧ ವ್ಯಕ್ತಪಡಿಸಲಾಗದಷ್ಟು ಕುಗ್ಗಿ ಹೋಗಿದ್ದರು. ಎಷ್ಟೆಂದರೆ, ತನ್ನ ತಾಯಿಗೂ ಆ ಘಟನೆಯನ್ನು ಹೇಳಲೂ ಅವರಲ್ಲಿ ಧೈರ್ಯವಿರಲಿಲ್ಲ. ಇದರಿಂದ ಪ್ರೋತ್ಸಾಹಗೊಂಡ ಅವನು ಕಿರುಕುಳ ನೀಡುವುದನ್ನು ಮುಂದುವರಿಸಿದನು. ಆಗ ದೇವಾಂಶಿ ತಾನು ಸುಮ್ಮನಿದ್ದರೆ ಅವನ ಕಿರುಕುಳ ನಿಲ್ಲದು ಎಂದು ನಿರ್ಧರಿಸಿ ತನ್ನ ತಾಯಿಗೆ ನಡೆದುದೆಲ್ಲವನ್ನು ಹೇಳಿದರು. ಅದರ ನಂತರ ಅವನ ಕಿರುಕುಳ ನಿಂತಿತು.

ಅನ್ಯಾಯದ ವಿರುದ್ಧ ಸುಮ್ಮನಿರದೆ ದನಿ ಎತ್ತಿದರೆ ಮಾತ್ರವೇ ಅದನ್ನು ನಿಲ್ಲಿಸಬಹುದು ಎಂಬುದನ್ನು ತನ್ನ ಸ್ವಂತ ಅನುಭವದಿಂದ ತಿಳಿದುಕೊಂಡ ದೇವಾಂಶಿ ಆ ಬಗ್ಗೆ ಹೆಚ್ಚು ಆಲೋಚಿಸತೊಡಗಿದರು. ದೇವಾಂಶಿ ಚಿಕ್ಕ ಪ್ರಾಯದವರಾಗಿದ್ದಾಗ ತಂದೆ ತೀರಿಕೊಂಡಿದ್ದರಿಂದ ಆಕೆಗೆ ತಂದೆಯ ನೆನಪು ಹೆಚ್ಚಿಲ್ಲ. ಆದರೆ, ಅವರ ತಾಯಿಯು ತಂದೆಯ ಬಗ್ಗೆ ಆಗಾಗ್ಗೆ ಹೇಳುತ್ತಿದ್ದ ಕತೆಗಳಿಂದ ಅವರು ಬಹಳ ಧೈರ್ಯವಂತ ಹಾಗೂ ಸಾಮಾಜಿಕ ಕಳಕಳಿವುಳ್ಳವರು ಎಂಬುದು ತಿಳಿದು ಅದರಿಂದ ದೇವಾಂಶಿ ಬಹಳ ಪ್ರಭಾವಿತರಾಗಿದ್ದರು. ತಾನೂ ತನ್ನ ತಂದೆಯಂತಾಗಿ, ತನ್ನಂತೆ ಲೈಂಗಿಕ ಅನ್ಯಾಯ, ಶೋಷಣೆ ಹಾಗೂ ಕೌಟುಂಬಕ ಅನ್ಯಾಯಗಳಿಗೆ ಒಳಗಾದ ಹೆಣ್ಣುಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಶಿಕ್ಷಣ ಮುಗಿದ ನಂತರ ತಂದೆಯ ಹೆಸರಲ್ಲಿ ‘ಶಹಿದ್ ರಾಮಾಶ್ರಯ್ ವೆಲ್ಛೇರ್ ಸೊಸೈಟಿ’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು.

‘ಶಹಿದ್ ರಾಮಾಶ್ರಯ್ ವೆಲ್ಛೇರ್ ಸೊಸೈಟಿ’ ಲೈಂಗಿಕ, ಕೌಟುಂಬಿಕ ಹಾಗೂ ಇನ್ನಿತರ ಯಾವುದೇ ರೀತಿಯ ದೌರ್ಜನ್ಯ ಅಥವಾ ಶೋಷಣೆಗೆ ಒಳಗಾದ ಸಂತ್ರಸ್ತ ಹೆಣ್ಣುಗಳು ತನ್ನ ಬಳಿ ಸಹಾಯ ನಿರೀಕ್ಷಿಸಿ ಬಂದಾಗ ಮೊದಲು ಅವರನ್ನು ಪ್ರೀತಿ ಆದರದಿಂದ ಕಂಡು, ಅವರ ಸಂಕಟವನ್ನು ಕೇಳಿಸಿಕೊಳ್ಳುತ್ತದೆ. ಕೌನ್ಸಿಲಿಂಗ್ ಮೂಲಕ ಅವರ ಆತ್ಮವಿಶ್ವಾಸ ಹಾಗೂ ಧೈರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ನಂತರ, ಅವರು ಒಳಗಾದ ಅನ್ಯಾಯದ ಎಲ್ಲಾ ವಿವರಗಳನ್ನು ತಿಳಿದುಕೊಂಡು ಸೂಕ್ತ ಕಾನೂನು ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳುತ್ತದೆ. ಸ್ವಯಂಸೇವಕರಲ್ಲದೆ ಸ್ವತಃ ದೇವಾಂಶಿ ಯಾದವ್ ಖುದ್ದು ಸಂತ್ರಸ್ತರ ಜೊತೆ ಪೊಲೀಸ್ ಸ್ಟೇಶನ್, ಕೋರ್ಟು ಅಥವಾ ಬೇರೆಲ್ಲೇ ಹೋಗಬೇಕಿದ್ದರೂ ಅವರ ಜೊತೆ ಹೋಗುತ್ತಾರೆ. ಹೀಗೆ, ‘ಶಹಿದ್ ರಾಮಾಶ್ರಯ್ ವೆಲ್ಛೇರ್ ಸೊಸೈಟಿ’ಯ ಮೂಲಕ ದೇವಾಂಶಿ ಯಾದವ್ ನೂರಾರು ಸಂತ್ರಸ್ತ ಹೆಣ್ಣು ಮಕ್ಕಳು ದಿಕ್ಕು ತಪ್ಪಿದ ತಮ್ಮ ಬಾಳನ್ನು ಪುನಃ ಕಟ್ಟಿಕೊಳ್ಳುವಲ್ಲಿ ನೆರವಾಗಿದ್ದಾರೆ.

ಒಮ್ಮೆ ದೇವಾಂಶಿ ಕಿವಿ ಕೇಳಿಸದ, ಮಾತು ಬಾರದ ಒಬ್ಬಳು ಚಿಕ್ಕ ಬಾಲಕಿಗೆ ಶ್ರವಣ ಸಾಧನವನ್ನು ಖರೀದಿಸಿ ಕೊಟ್ಟು, ಅವಳ ಚಿಕಿತ್ಸೆಗೆ ನೆರವಾದರು.ಅದರಿಂದ ಆ ಬಾಲಕಿಯ ಪರಿಸ್ಥಿತಿ ಬಹಳಷ್ಟು ಸುಧಾರಣೆಗೊಂಡಿತು. ಅದನ್ನು ನೋಡಿ ದೇವಾಂಶಿ ಮೊತ್ತ ಮೊದಲ ಬಾರಿಗೆ ತಾಯ್ತನದ ಸಂತೋಷವನ್ನು ಅನುಭವಿಸಿದರು. ಆಗ ಅವರಿಗೆ ಒಂದು ಮಗುವನ್ನು ದತ್ತು ಪಡೆಯುವಮನಸ್ಸಾಯಿತು. ಆದರೆ, ದೇವಾಂಶಿಯ ಕುಟುಂಬ ಸದಸ್ಯರು, ಮುಖ್ಯವಾಗಿ ಅವರ ಅಜ್ಜ ಅಜ್ಜಿ ಅದನ್ನು ವಿರೋಧಿಸಿದರು. ಹಾಗೆ ಮಾಡಿದರೆ ಭವಿಷ್ಯದಲ್ಲಿ ಆಕೆಯನ್ನು ಮದುವೆಯಾಗಲು ಯಾರೂ ಮುಂದೆ ಬರಲಾರರು ಎಂದು

ದೇವಾಂಶಿಯನ್ನು ಹೆದರಿಸಿದರು. ಆದರೆ, ದೇವಾಂಶಿಯ ತಾಯಿ ಮಗಳ ಆಲೋಚನೆಗೆ ಇಂಬು ಕೊಟ್ಟು ನಿಂತರು. ತಾಯಿಯ ಬೆಂಬಲ ಸಿಕ್ಕ ಮೇಲೆ ದೇವಾಂಶಿಗೆ ಇನ್ಯಾರನ್ನೂ ಗಣನೆಗೆ ತೆಗೆದುಕೊಳ್ಳದೆ, ಮಗುವನ್ನು ದತ್ತು ಪಡೆಯಲು ಒಂದು ಮಕ್ಕಳ ಆಶ್ರಮದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದರು. ಒಂದು ತಿಂಗಳು ಕಾದ ನಂತರ ದೇವಾಂಶಿ ಆರು ತಿಂಗಳ ಒಂದು ಹೆಣ್ಣು ಮಗುವನ್ನು ದತ್ತು ಪಡೆಯಲು ಶಕ್ಯರಾದರು. ಆ ಮೂಲಕ ದೇವಾಂಶಿ ತಮ್ಮ ೨೭ ನೇ ವರ್ಷದ ಪ್ರಾಯದಲ್ಲಿ ಒಂಟಿ ತಾಯಿಯಾದರು. ಮಗುವಿಗೆ ವನ್ಮಯೀ ಎಂದು ನಾಮಕರಣ ಮಾಡಿದರು.

” ‘ಶಹಿದ್ ರಾಮಾಶ್ರಯ್ ವೆಲ್ಛೇರ್ ಸೊಸೈಟಿ’ಯ ಮೂಲಕ ದೇವಾಂಶಿ ಯಾದವ್ ನೂರಾರು ಸಂತ್ರಸ್ತ ಹೆಣ್ಣು ಮಕ್ಕಳು ದಿಕ್ಕು ತಪ್ಪಿದ ತಮ್ಮ ಬಾಳನ್ನು ಪುನಃ ಕಟ್ಟಿಕೊಳ್ಳುವಲ್ಲಿ ನೆರವಾಗಿದ್ದಾರೆ.”

-ಪಂಜು ಗಂಗೊಳ್ಳಿ 

ಆಂದೋಲನ ಡೆಸ್ಕ್

Recent Posts

ವಾಲ್ಮೀಕಿ ಹಗರಣ: ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ

ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು…

34 mins ago

ರಾಜ್ಯಪಾಲರ ನಡೆ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ರಾಜ್ಯಪಾಲರು ಭಾಷಣ ಓದದೇ ಸಂವಿಧಾನ ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ…

54 mins ago

ಭಾಷಣ ಓದದೇ ತೆರಳಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌: ಕಾಂಗ್ರೆಸ್‌ ನಾಯಕರಿಂದ ಹೈಡ್ರಾಮಾ

ಬೆಂಗಳೂರು: ವಿಧಾನಸೌಧದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಕೇವಲ ಎರಡನೇ ಮಾತಿನಲ್ಲಿ…

1 hour ago

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಇಂದು ಬಿಗ್ ಡೇ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್‌ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ…

2 hours ago

ರಾಜ್ಯಪಾಲರು-ಸರ್ಕಾರದ ಸಂಘರ್ಷದ ನಡುವೆಯೇ ವಿಧಾನಸೌಧದಲ್ಲಿ ಅಧಿವೇಶನ: ಪೊಲೀಸರಿಂದ ಭದ್ರತೆ

ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ ಜನವರಿ.31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ಕರೆದಿದ್ದು, ನರೇಗಾ ಯೋಜನೆ ಹೆಸರು ಬದಲಾವಣೆ ಆಕ್ಷೇಪಿಸಿ ಕರೆದಿರುವ…

2 hours ago

ಓದುಗರ ಪತ್ರ: ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಯೂಟ ಶ್ಲಾಘನೀಯ

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…

5 hours ago