ಅಂಕಣಗಳು

ಹಿಂದಿ ಕಡ್ಡಾಯ ಕಲಿಕೆ: ದೇಶ ಒಡೆಯಲು ಪೀಠಿಕೆ!

ಟಿ.ಎ.ನಾರಾಯಣಗೌಡ

ಹಿಂದಿ ರಾಷ್ಟ್ರ ಭಾಷೆ/ ರಾಷ್ಟ್ರೀಯ ಭಾಷೆ ಎಂಬ ಹೇಳಿಕೆಗಳು ಪುಂಖಾನುಪುಂಖವಾಗಿ ಕೇಳಿಬರುತ್ತಿವೆ. ಆದರೆ, ಹಿಂದಿ ರಾಷ್ಟ್ರ ಭಾಷೆಯಲ್ಲ, ಇದನ್ನು ನಾವು ಸಾವಿರ ಬಾರಿ ಹೇಳಿದ್ದೇವೆ. ದೇಶದ ಸಂವಿಧಾನದಲ್ಲಿ ಎಲ್ಲೂ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿಲ್ಲ. ಹಾಗೆ ಹೇಳುವುದಕ್ಕೂ ಸಾಧ್ಯವಿಲ್ಲ. ಇದನ್ನು ಮಾನ್ಯ ನ್ಯಾಯಾಲಯಗಳೂ ಸ್ಪಷ್ಟಪಡಿಸಿವೆ.

ಕೇಂದ್ರ ಸರ್ಕಾರವೇ ಹಲವು ಬಾರಿ ಸಂಸತ್‌ನಲ್ಲಿ ಇದನ್ನು ಸ್ಪಷ್ಟಪಡಿಸಿದೆ. ಹಿಂದಿ ರಾಷ್ಟ್ರ ಭಾಷೆ ಎಂಬ ಹಸಿ ಹಸಿ ಸುಳ್ಳನ್ನು ಪದೇ ಪದೇ ಹೇಳಿ ಅದು ನಿಜ ಎಂಬಂತೆ ಬಿಂಬಿಸಲಾಗುತ್ತಿದೆ. ಹಿಟ್ಲರ್‌ನ ಆಪ್ತ ಜೋಸೆಫ್ ಗೊಬೆಲ್ಸ್ ‘ಒಂದು ಸುಳ್ಳನ್ನು ಪದೇ ಪದೇ ಹೇಳುತ್ತಿದ್ದರೆ ಜನಸಾಮಾನ್ಯರ ದೃಷ್ಟಿಯಲ್ಲಿ ಅದೇ ಸತ್ಯವಾಗುತ್ತದೆ’ ಎಂದು ಹೇಳಿದ್ದ. ಹೀಗೆ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ನಮಗೆ ಪದೇ ಪದೇ ಸುಳ್ಳು ಹೇಳಿಕೊಂಡು ಬರಲಾಗುತ್ತಿದೆ. ಇದು ಯಾವತ್ತಿಗೂ ಸತ್ಯವಾಗುವುದಿಲ್ಲ. ಒಂದೊಮ್ಮೆ ಹಿಂದಿಯನ್ನು ರಾಷ್ಟ್ರ ಭಾಷೆ ಮಾಡಲು ಹೊರಟರೆ ಈ ದೇಶ ಒಡೆದು ಚೂರಾಗುತ್ತದೆ. ಈ ಐಕ್ಯತೆ ಉಳಿಯುವುದಿಲ್ಲ.

ಹಿಂದಿ/ ಸಂಸ್ಕೃತ ರಾಷ್ಟ್ರೀಯತೆಗಾಗಿ ಬೇಕು ಎಂಬ ಹೇಳಿಕೆಗಳು: ಹಿಂದಿಯನ್ನು ರಾಷ್ಟ್ರೀಯತೆಗಾಗಿ, ರಾಷ್ಟ್ರೀಯ ಏಕತೆಗಾಗಿ ಬೇಕು ಎಂದು ಕೆಲವರು ಹೇಳುತ್ತಾರೆ. ಅಂದರೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಅಸ್ಸಾಮಿ, ಬಂಗಾಳಿ, ಪಂಜಾಬಿ ಮತ್ತಿತರ ಭಾರತೀಯ ಭಾಷೆಗಳು ರಾಷ್ಟ್ರೀಯತೆಗೆ ಪೂರಕವಾಗಿಲ್ಲವೇ? ಹಿಂದಿ/ಸಂಸ್ಕೃತ ಮಾತ್ರ ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುತ್ತವೆ ಎಂದು ಹೇಳುವುದು ದೇಶದ್ರೋಹದ ಮಾತು. ಇಂಥ ಮಾತುಗಳಿಂದ ದೇಶದಲ್ಲಿ ಒಡಕು ಮೂಡುತ್ತದೆಯೇ ಹೊರತು ಏಕತೆ ಮೂಡುವುದಿಲ್ಲ. ಭಾರತದ ಅಸ್ತಿತ್ವ ಇರುವುದೇ ಇಲ್ಲಿನ ಬಹುಸಂಸ್ಕತಿಯಲ್ಲಿ. ಈ ಬಹುತ್ವವನ್ನು ಕಳೆದುಕೊಂಡರೆ ಒಕ್ಕೂಟ ಛಿದ್ರವಾಗುತ್ತದೆ. ಹೀಗಾಗಿ ಹಿಂದಿಯನ್ನು ರಾಷ್ಟ್ರೀಯ ಭಾವಕ್ಕಾಗಿ ಬೇಕು ಎನ್ನುವವರನ್ನು ನಾವು ದೇಶ ದ್ರೋಹಿಗಳ ಹಾಗೆಯೇ ನೋಡಬೇಕು. ಇದೇ ರೀತಿ ಬಂಗಾಳಿ ಭಾಷೆಯ ಮೇಲೆ ಉರ್ದು ಹೇರಲು ಯತ್ನಿಸಿದ್ದರಿಂದಲೇ ಪಾಕಿಸ್ತಾನ ಒಡೆದು ಎರಡಾಗಿ ಬಾಂಗ್ಲಾದೇಶ ಹುಟ್ಟಿಕೊಂಡಿತು. ಇದನ್ನು ನಮ್ಮ ರಾಜಕಾರಣಿಗಳು ಮರೆಯಬಾರದು.

ಇತರ ರಾಜ್ಯಗಳಲ್ಲಿ ಮಕ್ಕಳು ಮೂರನೇ ಭಾಷೆಯನ್ನು ಕಡ್ಡಾಯವಾಗಿ ಕಲಿಯುವುದಿಲ್ಲವೇ?:  ಇಲ್ಲ, ಇತರ ರಾಜ್ಯಗಳಲ್ಲಿ ಮಕ್ಕಳು ಮೂರನೇ ಭಾಷೆಯನ್ನು ಕಡ್ಡಾಯವಾಗಿ ಕಲಿಯುವುದಿಲ್ಲ. ಉತ್ತರದ ಎಲ್ಲ ರಾಜ್ಯಗಳಲ್ಲೂ ಹಿಂದಿ ಮತ್ತು ಇಂಗ್ಲಿಷ್ ಎರಡೇ ಭಾಷೆಗಳನ್ನು ಕಲಿಸಲಾಗುತ್ತದೆ. ಕೇವಲ ಐದು ರಾಜ್ಯಗಳಲ್ಲಿ ಮಾತ್ರ ತ್ರಿಭಾಷಾ ಸೂತ್ರವಿದೆ. ಆದರೆ ಮೂರನೇ ಭಾಷೆಯ ಕಡ್ಡಾಯ ಕಲಿಕೆ ಇರುವುದು ಕರ್ನಾಟಕದಲ್ಲಿ ಮಾತ್ರ. ತ್ರಿಭಾಷಾ ನೀತಿಯ ಅನ್ವಯ ಉತ್ತರ ಭಾರತದ ರಾಜ್ಯಗಳಲ್ಲಿ ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆಯ ಕಲಿಕೆ ಆಗಬೇಕಿತ್ತು. ಆದರೆ ಉತ್ತರದ ಯಾವ ರಾಜ್ಯದಲ್ಲೂ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷೆಗಳನ್ನು ಕಲಿಸಲಾಗುವುದಿಲ್ಲ. ಕೇಂದ್ರೀಯ ಪಠ್ಯಕ್ರಮದಲ್ಲಿ ಎಸ್‌ಎಸ್ ಎಲ್‌ಸಿ ಮಕ್ಕಳು ಎರಡು ಭಾಷೆಗಳಿಗೆ ಮಾತ್ರ ಪರೀಕ್ಷೆಗಳನ್ನು ಬರೆಯುತ್ತಾರೆ. ತಮಿಳುನಾಡು ೧೯೬೮ರಲ್ಲಿಯೇ ತ್ರಿಭಾಷಾ ನೀತಿಯನ್ನು ತಿರಸ್ಕರಿಸಿ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳನ್ನು ಒಳಗೊಂಡ ದ್ವಿಭಾಷಾ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇತ್ತೀಚೆಗೆ, ಮಹಾರಾಷ್ಟ್ರ ಸರ್ಕಾರವೂ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆ ಗಳನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ.

ಯಾರನ್ನು ಕೇಳಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ?: ಕಳೆದ ಹಲವು ತಿಂಗಳುಗಳಿಂದ ರಾಜ್ಯದ ಅನೇಕ ಶಿಕ್ಷಣ ತಜ್ಞರು, ಸಾಮಾ ಜಿಕ ಚಿಂತಕರು, ಪೋಷಕರು ಈ ಕುರಿತು ಧ್ವನಿ ಎತ್ತಿದ್ದಾರೆ. ಕಳೆದ ವರ್ಷ ೧,೪೦,೦೦೦ ಮಕ್ಕಳು ಹಿಂದಿಯಲ್ಲಿ ಫೇಲ್ ಆದ ಬಗ್ಗೆ ಅನೇಕ ಮಾಧ್ಯಮಗಳು ವರದಿ ಮಾಡಿದ್ದವು ಮತ್ತು ಪೋಷಕರಲ್ಲಿ ಆತಂಕ ಮೂಡಿತ್ತು. ಇಷ್ಟೇ ಅಲ್ಲದೆ ಪ್ರೊ.ಸುಖದೇವ ಥೋರಟ್ ಅವರ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವೂ ದ್ವಿಭಾಷಾ ನೀತಿ ಅಳವಡಿಕೆ ಆಗಬೇಕು ಎಂದು ಹೇಳಿದೆ. ಇದೆಲ್ಲ ಅಭಿಪ್ರಾಯಗಳನ್ನು ಪಡೆದೇ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.

ಹೊರ ದೇಶದ ಇಂಗ್ಲಿಷ್ ಯಾಕೆ ಬೇಕು?:  ಹಿಂದಿ ಭಾಷಿಕರು ಯಾಕೆ ಇಂಗ್ಲಿಷ್ ಕಲಿಯುತ್ತಿದ್ದಾರೋ ಅದೇ ಕಾರಣಕ್ಕೆ ನಮಗೂ ಕೂಡ ಇಂಗ್ಲಿಷ್ ಬೇಕು. ಉತ್ತರ ಭಾರತದ ಹಿಂದಿ ಮಾಧ್ಯಮ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದಕ್ಕೆ ಕಾರಣವೇನು? ದೇಶದ ಎಲ್ಲ ಭಾಷಿಕರಿಗೂ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದೆ. ಇಂಗ್ಲಿಷ್ ಶಿಕ್ಷಣವಿಲ್ಲದೇ ಉದ್ಯೋಗ ಲಭಿಸುವುದಿಲ್ಲ. ಎಂಬಿಬಿಎಸ್, ಬಿಇ ಅಂಥ ಉನ್ನತ ಶಿಕ್ಷಣ, ಇಂಗ್ಲಿಷ್ ಇಲ್ಲದೆ ನಡೆಯುವುದಿಲ್ಲ. ಹೀಗಿರುವಾಗ ಇಂಗ್ಲಿಷ್ ಎಲ್ಲರ ಆಯ್ಕೆಯೂ ಆಗಿದೆ. ಕನ್ನಡದಲ್ಲೇ ಉನ್ನತ ಶಿಕ್ಷಣವನ್ನು ಮಾಡುವಂತಹ ವ್ಯವಸ್ಥೆ ಆಗಬೇಕು ಎಂಬುದು ನಮ್ಮ ಆಶಯ. ಆದರೆ ಈಗ ಇಂಗ್ಲಿಷ್ ಅನಿವಾರ್ಯವಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು.

ತೃತೀಯ ಭಾಷೆಯಾಗಿ ಕನ್ನಡ ಕಲಿಯುತ್ತಿರುವವರ ಗತಿ ಏನು?: ರಾಜ್ಯ ಸರ್ಕಾರದ ಶಿಕ್ಷಣ ನೀತಿಯ ಪ್ರಕಾರ ಕನ್ನಡವನ್ನು ತೃತೀಯ ಭಾಷೆಯನ್ನಾಗಿ ಕಲಿಸುವಂತಿಲ್ಲ. ಕಡ್ಡಾಯವಾಗಿ ಮೊದಲನೇ ಅಥವಾ ಎರಡನೇ ಭಾಷೆಯನ್ನಾಗಿಯೇ ಕಲಿಸಬೇಕು. ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಮೊದಲನೇ ಅಥವಾ ಎರಡನೇ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕೆಂದು ಸ್ಪಷ್ಟ ಆದೇಶವನ್ನು ಹೊರಡಿಸಿದೆ. ಕರ್ನಾಟಕ ಶಿಕ್ಷಣ ಕಾಯ್ದೆ-೧೯೮೩ ಮತ್ತು ಅದರ ತಿದ್ದುಪಡಿಗಳಿಗೆ ಹಾಗೂ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮ-೨೦೨೨ರ ಪ್ರಕಾರ ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ಎಲ್ಲ ಬಗ್ಗೆಯ ಪಠ್ಯಕ್ರಮಗಳಲ್ಲಿಯೂ ಕನ್ನಡವನ್ನು ಮೊದಲನೇ ಅಥವಾ ಎರಡನೇ ಭಾಷೆಯಾಗಿ ಕಲಿಸುವುದು ಕಡ್ಡಾಯವಾಗಿದೆ.

ವಿದ್ಯಾರ್ಥಿಗಳು ಹಿಂದಿ ಬೇಕೇ ಬೇಕು ಎಂದಿದ್ದಾರಾ?:  ಶಾಲಾ ವಿದ್ಯಾರ್ಥಿಗಳು ನಮಗೆ ಹಿಂದಿ ಬೇಕೇ ಬೇಕು ಎಂದು ಎಲ್ಲಾದರೂ ಹೇಳಿದ್ದಾರಾ? ಈ ಪ್ರಶ್ನೆಗೆ ಹಿಂದಿ ಬೇಕು ಎನ್ನುವವರು ಉತ್ತರಿಸಲಿ. ಕಳೆದ ವರ್ಷ ಹಿಂದಿ ಭಾಷೆ ಪರೀಕ್ಷೆಯಲ್ಲಿ ಫೇಲಾದವರ ಸಂಖ್ಯೆ ೧,೪೦,೦೦೦. ಇವರೆಲ್ಲ ಹಿಂದಿ ಬೇಕು ಎನ್ನುತ್ತಾರೆಯೇ? ಪ್ರತಿವರ್ಷ ಹೀಗೆ ಲಕ್ಷಗಟ್ಟಲೆ ಮಕ್ಕಳು ಫೇಲಾಗುತ್ತಿದ್ದಾರೆ. ಇವರೆಲ್ಲರ ಗತಿ ಏನು? ಯಾಕಾಗಿ ಇವರು ಫೇಲ್ ಆಗುತ್ತಿದ್ದಾರೆ? ಅಷ್ಟಕ್ಕೂ ಈ ಮಕ್ಕಳಿಗೆ ಹಿಂದಿ ಯಾಕೆ ಬೇಕಾಗಿದೆ. ಕನ್ನಡದ ಮಕ್ಕಳು ಉತ್ತರ ಭಾರತದ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರಾ? ವಲಸೆ ಬರುತ್ತಿರುವವರು ಉತ್ತರ ಭಾರತೀಯರು, ಕನ್ನಡಿಗರು ವಲಸೆ ಹೋಗುತ್ತಿಲ್ಲ. ಬೆರಳೆಣಿಕೆಯಷ್ಟು ಮಂದಿ ಬೇರೆ ರಾಜ್ಯಗಳಿಗೆ ಹೋದರೂ ಅವರು ಆಯಾ ರಾಜ್ಯದ ಭಾಷೆಯನ್ನು ಕಲಿತು ಬಾಳುತ್ತಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯಕ್ಕೆ ಹೋದರೆ?:  ಈ ದೇಶದಲ್ಲಿ ನ್ಯಾಯಾಲಯಗಳು ಕೇವಲ ಒಂದು ವರ್ಗದ, ಶ್ರೀಮಂತರ ಸ್ವತ್ತಲ್ಲ. ಅವರು ನ್ಯಾಯಾಲಯಕ್ಕೆ ಹೋದರೆ ನಾವೂ ಹೋಗುತ್ತೇವೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ನೂರಾರು ಮಕ್ಕಳು, ಪೋಷಕರು ಕರ್ನಾಟಕ ರಕ್ಷಣಾ ವೇದಿಕೆಯನ್ನು ಸಂಪರ್ಕಿಸಿದ್ದಾರೆ. ಅವರ ಪರವಾಗಿ ಕರವೇ ಕಾನೂನು ಹೋರಾಟ ನಡೆಸಲಿದೆ.

ಪ್ರತಿ ಬಾರಿ ಕನ್ನಡ ಪರವಾದ ತೀರ್ಮಾನಗಳ ವಿರುದ್ಧ ನ್ಯಾಯಾಲಯಗಳಿಗೆ ಹೋಗುವ ಶಕ್ತಿಗಳು ಯಾವುವು ಎಂಬುದು ನಮಗೆ ತಿಳಿದಿದೆ. ಅವುಗಳು ನಡೆಸುತ್ತಿರುವ ಶಿಕ್ಷಣ ಮಾಫಿಯಾದ ವಿವರಗಳನ್ನು ಕಲೆ ಹಾಕುತ್ತಿದ್ದೇವೆ. ಇವುಗಳಿಗೆ ಕಾನೂನು ಹೋರಾಟ ನಡೆಸಿ ತಕ್ಕ ಪಾಠ ಕಲಿಸುತ್ತೇವೆ. ರಾಜ್ಯ ಸರ್ಕಾರ ಹಿಂದಿ ಹೇರಿಕೆ ಪರವಾದವರ ಕ್ಷುಲ್ಲಕ ಮಾತುಗಳಿಗೆ ಬೆಲೆ ಕೊಡಬಾರದು. ತನ್ನ ನಿರ್ಧಾರದೊಂದಿಗೆ ಅಚಲವಾಗಿ ನಿಲ್ಲಬೇಕು. ರಾಜ್ಯ ಸರ್ಕಾರದೊಂದಿಗೆ ಇಡೀ ಕರ್ನಾಟಕದ ಹೆಮ್ಮೆಯ ಸ್ವಾಭಿಮಾನಿ ಕನ್ನಡಿಗರು ನಿಂತಿದ್ದಾರೆ. ಮುಂದೆಯೂ ನಿಲ್ಲುತ್ತಾರೆ.

(ಲೇಖಕರು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು)

” ರಾಜ್ಯ ಸರ್ಕಾರದ ಶಿಕ್ಷಣ ನೀತಿಯ ಪ್ರಕಾರ ಕನ್ನಡವನ್ನು ತೃತೀಯ ಭಾಷೆಯನ್ನಾಗಿ ಕಲಿಸುವಂತಿಲ್ಲ. ಕಡ್ಡಾಯವಾಗಿ ಮೊದಲನೇ ಅಥವಾ ಎರಡನೇ ಭಾಷೆಯನ್ನಾಗಿಯೇ ಕಲಿಸಬೇಕು.”

 

 

ಆಂದೋಲನ ಡೆಸ್ಕ್

Recent Posts

ಮಂಡ್ಯ ವಿವಿ ಅಭಿವೃದ್ಧಿಗೆ ಅನುಮಾನವೇ ಅಡ್ಡಿ

ಬಿ.ಟಿ.ಮೋಹನ್ ಕುಮಾರ್ ಮಂಡ್ಯ: ಮಂಡ್ಯ ವಿವಿ ಆರಂಭವಾದಾಗಿನಿಂದ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದ್ದು, ವಿವಿಗೆ ೧೨ಬಿ ಮಾನ್ಯತೆ ಸಿಕ್ಕಿಲ್ಲದಿರುವುದು ಹಲವು…

16 mins ago

ಕೊಡಗು ವಿಶ್ವವಿದ್ಯಾಲಯ ಬಗೆಹರಿಯದ ಕೊರಗು!

ನವೀನ್ ಡಿಸೋಜ ಮಂಗಳೂರು ವಿವಿ ಅಧೀನದಲ್ಲಿದ್ದ ಕೊಡಗು ಈಗ ಪ್ರತ್ಯೇಕ ವಿವಿಯಾಗಿ ರೂಪುಗೊಂಡಿದೆ. ಆದರೆ, ಆಡಳಿತಾತ್ಮಕ ಹುದ್ದೆ ಭರ್ತಿಯಾಗದಿರುವುದು ಮತ್ತು…

19 mins ago

ಚಾ.ನಗರ ವಿವಿಗೆ ಅತಿಥಿ ಅಧ್ಯಾಪಕರೇ ಆಧಾರ!

ಚಾಮರಾಜನಗರ ವಿವಿ ಪ್ರಾರಂಭವಾಗಿ ೩ ವರ್ಷಗಳನ್ನು ಪೂರೈಸಿದೆ. ಈ ಬಾರಿ ಪ್ರಪ್ರಥಮ ಘಟಿಕೋತ್ಸವದ ಸಂಭ್ರಮದಲ್ಲಿದೆ. ಆದರೆ ಇನ್ನೂ ಅತಿಥಿ ಅಧ್ಯಾಪಕರು,…

24 mins ago

ಮೈಸೂರು ವಿವಿಗೆ ಹಣಕಾಸು ಮುಗ್ಗಟ್ಟು

ಗಿರೀಶ್ ಹುಣಸೂರು ರಾಜ್ಯದ ಮೊತ್ತ ಮೊದಲ ವಿವಿ ಎಂಬ ಹೆಗ್ಗಳಿಕೆಯ ಮೈಸೂರು ವಿವಿಗೆ ೧೧೦ ವರ್ಷಗಳಷ್ಟು ಹಿರಿತನವಿದೆ. ಆದರೆ, ಕೆಲವು…

31 mins ago

ಓದುಗರ ಪತ್ರ: ಒಣಗಿದ ಮರ ತೆರವುಗೊಳಿಸಿ

ಮೈಸೂರು ವಿವಿ ಕ್ರಾಫರ್ಡ್ ಭವನದ ಎದುರಿನ ರಸ್ತೆ ಬದಿಯಲ್ಲಿರುವ ಮರ ಒಣಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಹಾಗೂ…

3 hours ago

ಓದುಗರ ಪತ್ರ: ಎಸ್.ಜಾನಕಿ ಅಜರಾಮರ

ದಕ್ಷಿಣ ಭಾರತದ ಕೋಗಿಲೆ ಎಂದೇ ಜನಪ್ರಿಯರಾಗಿದ್ದ, ಎಸ್. ಜಾನಕಿಯವರು ತಮ್ಮ ಅಂತಿಮ ಇಚ್ಛೆಯಂತೆ ಕನ್ನಡದ ನೆಲದಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿ…

3 hours ago