BJP-JDS alliance
ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಮುಂಬರುವ ವಿಧಾನಸಭಾ ಚುನಾವಣೆಗೆ ತಂತಮ್ಮ ಪಕ್ಷದ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲೂ ಕೂಡ ತಂತ್ರ
ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳನ್ನು ಬಿಜೆಪಿ-ಜಾ.ದಳ ಮಿತ್ರಕೂಟ ಕುತೂಹಲದಿಂದ ಗಮನಿಸುತ್ತಿದೆ. ಸರ್ಕಾರದ ನಾಯಕತ್ವ ಬದಲಾದ ನಂತರದ ಬೆಳವಣಿಗೆಗಳು ಮಿತ್ರಕೂಟಕ್ಕೆ ಆಶಾದಾಯಕವಾಗಿ ಕಾಣಿಸಿದ್ದರೆ ಅದರಲ್ಲಿ ಅಸಹಜವೇನೂ ಇಲ್ಲ. ಕಾರಣ ನಾಯಕತ್ವ ಬದಲಾವಣೆಯ ನಂತರದ ಬೆಳವಣಿಗೆಗಳಿಂದ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ದುರ್ಬಲವಾಗುತ್ತದೆ ಎಂಬುದು ಅದರ ಲೆಕ್ಕಾಚಾರ.
ಗಮನಿಸಬೇಕಾದ ಸಂಗತಿ ಎಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಹಿಂದ ಪ್ಲಸ್ ಒಕ್ಕಲಿಗ ಮತ ಬ್ಯಾಂಕು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪರವಾಗಿ ನಿಂತಿತ್ತು. ಆದರೆ ಈಗಿನ ಬೆಳವಣಿಗೆಗಳು ಅಹಿಂದ ಮತ ಬ್ಯಾಂಕ್ ಒಡೆಯಲು ಪ್ರೇರೇಪಣೆ ನೀಡುವಂತಿದೆ. ಇಂತಹ ಬೆಳವಣಿಗೆಗಳಿಂದ ಬಿಜೆಪಿ-ಜಾ.ದಳ ಮಿತ್ರಕೂಟಕ್ಕೆ ಒಟ್ಟಾರೆಯಾಗಿ ದೊಡ್ಡ ಮಟ್ಟದ ಲಾಭ ತಂದುಕೊಡುವ ಸೂಚನೆಗಳು ಕಾಣಿಸಿಕೊಂಡಿದ್ದು,ಈ ಪೈಕಿ ಹಳೆ ಮೈಸೂರು ಭಾಗದಲ್ಲಿ ಜಾ.ದಳ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಇದು ಹೆಚ್ಚಿನ ಅನುಕೂಲ ಆಗಲಿದೆ.
ಗಮನಿಸಬೇಕಾದ ಇನ್ನೊಂದು ಬೆಳವಣಿಗೆ ಎಂದರೆ ಕಾಂಗ್ರೆಸ್ ಪಕ್ಷದಲ್ಲಿನ ಈ ವಿದ್ಯಮಾನಗಳನ್ನು ಬಿಜೆಪಿ ಜಾ.ದಳ ಮಿತ್ರಕೂಟ ವಿಶೇಷವಾಗಿ ಗಮನಿಸುವುದಕ್ಕೆ ಮತ್ತೊಂದು ಕಾರಣವಿದೆ. ಅದೆಂದರೆ, ಇವತ್ತು ತಮ್ಮ ನಡುವೆ ಮಿತ್ರತ್ವ ಇದ್ದರೂ ಮುಂಬರುವ ವಿಧಾನಸಭಾ ಚುನಾವಣೆಯ ವೇಳೆಗೆ ತಮ್ಮ ಪಕ್ಷದ ವೈಯಕ್ತಿಕ ಬಲವನ್ನು ಮತ್ತಷ್ಟು ಹಿಗ್ಗಿಸಿಕೊಳ್ಳುವುದು ಅನಿವಾರ್ಯ ಎಂಬುದು.
ಅಂದ ಹಾಗೆ ಈ ಪೈಕಿ ಬಿಜೆಪಿಯನ್ನೇ ತೆಗೆದುಕೊಳ್ಳಿ. ಬಿಜೆಪಿಯ ರಾಷ್ಟ್ರ ನಾಯಕರು ಜಾ.ದಳ ಜತೆಗಿನ ಮೈತ್ರಿಯ ಪರವಾಗಿದ್ದರೂ ರಾಜ್ಯ ಬಿಜೆಪಿಯ ದೊಡ್ಡ ಗುಂಪು ಮೈತ್ರಿಯ ಪರವಾಗಿಲ್ಲ.ಅರ್ಥಾತ್ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಾ.ದಳ ಜತೆಗೂಡಿ ಹೋಗಲು ಮನಸ್ಸು ಇಲ್ಲ.
ಕಾರಣ ಬಿಜೆಪಿ-ಜಾ.ದಳ ಮಿತ್ರಕೂಟ ಒಗ್ಗೂಡಿ ವಿಧಾನಸಭಾ ಚುನಾವಣೆಯನ್ನು ಎದುರಿಸಿದರೆ ಫಲಿತಾಂಶ ಈ ಮಿತ್ರಕೂಟದ ಪರವಾಗಿರುತ್ತದೆ ಎಂಬುದು ನಿಶ್ಚಿತ. ಆದರೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಜಾ.ದಳ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನಿಸ್ಸಂಶಯವಾಗಿ ಮುಂದೆ ಇರುತ್ತಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಕುಮಾರರಸ್ವಾಮಿಯವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಡುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹೆಚ್ಚಿನ ಆಸಕ್ತಿ ತೋರುತ್ತಾರೆ. ಏಕೆಂದರೆ ಮೋದಿ-ಅಮಿತ್ ಶಾ ಜೋಡಿಯ ಲೆಕ್ಕಾಚಾರ ಬೇರೆ. ಅರ್ಥಾತ್, ಭವಿಷ್ಯದಲ್ಲಿ ಹಳೆ ಮೈಸೂರಿನ ಪ್ರಬಲ ಒಕ್ಕಲಿಗ ಮತ ಬ್ಯಾಂಕ್ ಬಿಜೆಪಿಯ ಜತೆ ಭದ್ರವಾಗಿ ನಿಲ್ಲಬೇಕು ಎಂದರೆ ಇವತ್ತು ಆ ಮತ ಬ್ಯಾಂಕಿಗೆ ಆಪ್ಯಾಯಮಾನವಾಗಿರುವ ಜಾ.ದಳ ಪಕ್ಷಕ್ಕೆ ದೊಡ್ಡ ಮಟ್ಟದ ಆದ್ಯತೆ ನೀಡಲೇಬೇಕು.
ಅದು ದೀರ್ಘಕಾಲ ಅಂತೇನಿಲ್ಲ. ಉದಾಹರಣೆಗೆ ಬಿಹಾರದಲ್ಲಿ ನಡೆದಿದ್ದನ್ನೇ ನೋಡಿ. ಅಲ್ಲಿ ವಿಧಾನಸಭಾ ಚುನಾವಣೆ ನಡೆದು ಜೆಡಿಯು-ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದ ತಕ್ಷಣ ಮೋದಿ-ಶಾ ಅವರು ಜೆಡಿಯು ಪಕ್ಷದ ವರಿಷ್ಠ ನಿತೀಶ್ ಕುಮಾರ್ ಅವರಿಗೆ ಪಟ್ಟ ಕಟ್ಟಿದರು.
ಹೀಗೆ ನಿತೀಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಅವರ ಉದ್ದೇಶ ಸ್ಪಷ್ಟ. ಅದೆಂದರೆ ಯಾವ ಮತ ಬ್ಯಾಂಕು ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪರವಾಗಿ ನಿಂತುಕೊಂಡಿತೋ ಆ ಮತ ಬ್ಯಾಂಕನ್ನು ತಕ್ಷಣದ ದೃಷ್ಟಿಯಿಂದ ಓಲೈಸುವುದು ಅನಿವಾರ್ಯ ಎಂಬುದು ಮೋದಿ ಮತ್ತು ಅಮಿತ್ ಶಾ ಜೋಡಿಯ ಲೆಕ್ಕಾಚಾರ. ಈ ಲೆಕ್ಕಾಚಾರ ತಕ್ಷಣದ ದೃಷ್ಟಿಯಿಂದ ಫಲ ನೀಡಿತು, ಆದರೆ ಕೆಲ ಕಾಲದ ನಂತರ ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ಕಳಿಸಿದ ಮೋದಿ-ಶಾ ಜೋಡಿ,ಬಿಹಾರದಲ್ಲೀಗ ಬಿಜೆಪಿಯ ಮುಖ್ಯಮಂತ್ರಿಯನ್ನು ನೆಲೆ ಮಾಡಿದ್ದಾರೆ.
ಹೀಗೆ ಬಿಹಾರದಲ್ಲಿ ನಡೆಸಿದ್ದನ್ನು ಕರ್ನಾಟಕದಲ್ಲೂ ನಡೆಸಬಹುದಲ್ಲ. ಹೀಗಾಗಿ ಮೋದಿ-ಅಮಿತ್ ಶಾ ಜೋಡಿ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಜಾ.ದಳ ಪಕ್ಷದ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬಹುದು. ಆದರೆ ಇಂತಹ ಬೆಳವಣಿಗೆ ಆಗುವ ಮೊದಲು ಬಿಜೆಪಿಯೇ ಸ್ವಯಂ ಶಕ್ತಿಯಿಂದ ಕರ್ನಾಟಕದ ಅಧಿಕಾರ ಸೂತ್ರವನ್ನು ಹಿಡಿಯುವಂತಾಗಬೇಕು ಎಂಬುದು ಬಿ.ವೈ.ವಿಜಯೇಂದ್ರ ಅವರ ಆಲೋಚನೆ.
ಹಾಗೇನಾದರೂ ಬಿಜೆಪಿ ಸ್ವಯಂ ಬಲದ ಮೇಲೆ ವಿಧಾನಸಭೆಯಲ್ಲಿ ೧೧೪ ರ ಮ್ಯಾಜಿಕ್ ನಂಬರ್ ಅನ್ನು ಪಡೆದುಕೊಂಡರೆ ಆಗೇನಾಗುತ್ತದೆ? ಸಹಜವಾಗಿಯೇ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಮಾಡುವ ಜಾ.ದಳ ಪಕ್ಷದ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಹಾಗಾಗಲಿ ಎಂಬುದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಯೋಚನೆ.
ಇದು ಬಿಜೆಪಿಯ ನೆಲೆಯಿಂದ ಕಾಣಿಸುತ್ತಿರುವ ಲೆಕ್ಕಾಚಾರವಾದರೆ ಜಾ.ದಳ ಪಾಳೆಯದ ಲೆಕ್ಕಾಚಾರವೂ ಇದೇ ಮಾದರಿಯಲ್ಲಿದೆ. ಅದೆಂದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ನಲವತ್ತೋ, ನಲವತ್ತೈದೋ ಕ್ಷೇತ್ರಗಳಲ್ಲಿ ಗೆಲುವು ಗಳಿಸಿ ಮಿತ್ರಕೂಟ ಸರ್ಕಾರದ ಕುರಿತು ಯೋಚಿಸುತ್ತಿದ್ದರೆ ಸಾಲದು. ಬದಲಿಗೆ ಕನಿಷ್ಠ ಐವತ್ತೈದರಿಂದ ಅರವತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಬೇಕು ಎಂಬುದು ಅದರ ಲೆಕ್ಕಾಚಾರ.
ಹೀಗೆ ತಮ್ಮ ಪಕ್ಷ ಐವತ್ತೈದರಿಂದ ಅರವತ್ತು ಸ್ಥಾನಗಳನ್ನು ಗೆದ್ದರೆ ಬಿಜೆಪಿ ಸ್ವಯಂ ಆಗಿ ಮ್ಯಾಜಿಕ್ ನಂಬರ್ ಗಳಿಸುವುದು ಕಷ್ಟ. ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ರಚಿಸಲು ಅದಕ್ಕೆ ತನ್ನ ನೆರವು ಅನಿವಾರ್ಯವಾಗಬೇಕು ಎಂಬುದು ಅದರ ಯೋಚನೆ. ಗಮನಿಸಬೇಕಾದ ಸಂಗತಿ ಎಂದರೆ ಇವತ್ತು ಬಿಜೆಪಿ ಮತ್ತು ಜಾ.ದಳ ಪಕ್ಷಗಳು ಏನನ್ನು ಬಯಸುತ್ತಿವೆಯೋ ಅದಕ್ಕೆ ಪೂರಕವಾದ ವಾತಾವರಣ ಕಾಂಗ್ರೆಸ್ ಪಕ್ಷದಲ್ಲಿದೆ.
ಅಲ್ಲೀಗ ಮಂತ್ರಿ ಮಂಡಲದ ಎರಡನೇ ಕಂತಿನ ವಿಸ್ತರಣೆಯ ಭರಾಟೆ ಯಾವ ಮಟ್ಟದಲ್ಲಿದೆ ಎಂದರೆ ಈಗಲ್ಲದಿದ್ದರೆ ಇನ್ನೆಂದೂ ಇಲ್ಲ ಎಂಬ ಧಾಟಿಯಲ್ಲಿ ಮಂತ್ರಿ ಪದವಿ ಆಕಾಂಕ್ಷಿಗಳು ಪೈಪೋಟಿಗೆ ಇಳಿದಿದ್ದಾರೆ. ಇಂತಹ ಪೈಪೋಟಿಯ ನಡುವೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ದೊಡ್ಡ ಮಟ್ಟದಲ್ಲಿ ಕಾರಣರಾಗಿದ್ದ ಡಾ.ಹೆಚ್.ಸಿ.ಮಹಾದೇವಪ್ಪ, ಜಮೀರ್ ಅಹ್ಮದ್ ಅವರಂತಹ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಲಕ್ಷಿಸಿತು ಎಂದುಕೊಳ್ಳಿ. ಅಲ್ಲಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ದೊಡ್ಡ ಮಟ್ಟದಲ್ಲಿ ಕುಸಿಯಿತು ಎಂದೇ ಅರ್ಥ. ಇವತ್ತು ಬಿಜೆಪಿ-ಜಾ.ದಳ ನಾಯಕರು ಕಾದು ಕುಳಿತಿರುವುದೇ ಇಂತಹ ಬೆಳವಣಿಗೆಗಾಗಿ. ಅದು ಸಾಧ್ಯವಾಗುತ್ತದಾ ಎಂಬುದನ್ನು ಕಾದು ನೋಡಬೇಕು. ಇಂತಹ ಪೈಪೋಟಿ ಸಂಪುಟ ವಿಸ್ತರಣೆಯ ನಂತರ ಭಿನ್ನಮತೀಯ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಲಿವೆಯಲ್ಲದೆ ಆಡಳಿತಾರೂಢ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ತಲ್ಲಣಗೊಳ್ಳುವಂತೆಯೂ ಮಾಡಲಿದೆ.
” ಬಿಜೆಪಿ-ಜಾ.ದಳ ಮಿತ್ರಕೂಟ ಒಗ್ಗೂಡಿ ವಿಧಾನಸಭಾ ಚುನಾವಣೆಯನ್ನು ಎದುರಿಸಿದರೆ ಫಲಿತಾಂಶ ಈ ಮಿತ್ರಕೂಟದ ಪರವಾಗಿರುತ್ತದೆ ಎಂಬುದು ನಿಶ್ಚಿತ. ಆದರೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಜಾ.ದಳ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನಿಸ್ಸಂಶಯವಾಗಿ ಮುಂದೆ ಇರುತ್ತಾರೆ.”
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದರು. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ,…
ಲಕ್ಷ್ಮೀಕಾಂತ್ ಕೊಮಾರಪ್ಪ ಎಚ್ಚರಿಕೆ ಫಲಕ, ಕಾವಲು ಸಿಬ್ಬಂದಿ ಇಲ್ಲ; ಪ್ರವಾಸಿಗರಿಗೆ ಇಲ್ಲಿಲ್ಲ ರಕ್ಷಣೆ ಸೋಮವಾರಪೇಟೆ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ…
ಮಂಜು ಕೋಟೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆ; ಮಕ್ಕಳ ದಾಖಲಾತಿಯೇ ಇಲ್ಲದೆ ೧, ೨ನೇ ತರಗತಿಗಳು…
ಪ್ರಶಾಂತ್ ಎಸ್. ಮೈಸೂರು : ಇಲ್ಲಿ ಕುಡಿಯಲು ನೀರಿಲ್ಲ... ಕುಳಿತುಕೊಳ್ಳಲು ಕುರ್ಚಿ ಇಲ್ಲ... ನಿಸರ್ಗ ಕರೆಗೆ ತುರ್ತಾದರೆ ಪರಿಸ್ಥಿತಿ ಏನೋ…
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…