Andolana originals

ಕೊಡಗಿನ ಮಲ್ಲಳ್ಳಿ ಫಾಲ್ಸ್‌ನಲ್ಲಿ ಅಭದ್ರತೆ

ಲಕ್ಷ್ಮೀಕಾಂತ್ ಕೊಮಾರಪ್ಪ

ಎಚ್ಚರಿಕೆ ಫಲಕ, ಕಾವಲು ಸಿಬ್ಬಂದಿ ಇಲ್ಲ; ಪ್ರವಾಸಿಗರಿಗೆ ಇಲ್ಲಿಲ್ಲ ರಕ್ಷಣೆ

ಸೋಮವಾರಪೇಟೆ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಜಲಪಾತಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಪ್ರವಾಸಿಗರ ಸುರಕ್ಷತೆಗೆ ಸೂಕ್ತ ಭದ್ರತಾ ಕ್ರಮಗಳು ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲೇ ಅತಿ ಹೆಚ್ಚು ಮಳೆಯಾಗುವಶಾಂತಳ್ಳಿ ಹೋಬಳಿ ವ್ಯಾಪ್ತಿಯ ಮಲ್ಲಳ್ಳಿ ಜಲಪಾತ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಭೋರ್ಗರೆಯುತ್ತ ಧುಮುಕುವ ಮೂಲಕ ಪ್ರಕೃತಿ ಪ್ರಿಯರನ್ನು ಸೆಳೆಯುತ್ತದೆ. ಹಸಿರಿನಿಂದ ಕಂಗೊಳಿಸುವ ಗಿರಿಕಂದರಗಳ ಮಧ್ಯೆ ಹರಿದು ಬೀಳುವ ಜಲಧಾರೆ ಪ್ರವಾಸಿಗರಿಗೆ ಮನಮೋಹಕ ಅನುಭವ ನೀಡುತ್ತಿದೆ. ಇಷ್ಟೊಂದು ಆಕರ್ಷಕ ಪ್ರವಾಸಿ ತಾಣವಾಗಿದ್ದರೂ ಪ್ರವಾಸಿಗರ ಸುರಕ್ಷತೆಗೆ ಅಗತ್ಯವಾದ ಭದ್ರತಾ ವ್ಯವಸ್ಥೆಗಳ ಕೊರತೆ ಕಾಡುತ್ತಿದ್ದು, ಅಭದ್ರತೆಯ ಆತಂಕ ಮುಂದುವರಿದಿದೆ.

ಮಲ್ಲಳ್ಳಿ ಜಲಪಾತವನ್ನು ಹತ್ತಿರದಿಂದ ನೋಡುವುದಕ್ಕೆ ಅವಕಾಶವಿದೆ. ಆದರೆ, ಅಲ್ಲಿ ಯಾವುದೇ ತಡೆಗೋಡೆ, ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದರಿಂದ ಹತ್ತಿರ ಹೋದರೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಪ್ರವಾಸಿಗರ ಸಂಖ್ಯೆಗೆ ತಕ್ಕಂತೆ ಭದ್ರತೆ ವ್ಯವಸ್ಥೆ ಇಲ್ಲ ಎಂಬುದು ಸ್ಥಳೀಯರ ಆರೋಪ.

ಜಲಪಾತದ ಬಳಿ ತೆರಳಲು ೪೦೦ಕ್ಕೂ ಅಧಿಕ  ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಆದರೆ, ಮೆಟ್ಟಿಲು ಇಳಿದು ಹೋದವರನ್ನು ಗಮನಿಸಲು ಅಲ್ಲಿ ಯಾರೂ ಇರುವುದಿಲ್ಲ. ಕೆಲ ಪ್ರವಾಸಿಗರು ಮೆಟ್ಟಿಲು ಇಳಿದ ಕೂಡಲೇ ಜಲಪಾತದ ಸುತ್ತಲೂ ಅಳವಡಿಸಿರುವ ಮುಳ್ಳು ತಂತಿಗಳನ್ನುಏರಲು ಪ್ರಯತ್ನಿಸುತ್ತಾರೆ. ಪ್ರವಾಸಿಗರ ಅತಿರೇಕದ ವರ್ತನೆಗೆ ಕಡಿವಾಣ ಹಾಕುವವರು ಯಾರೂ ಇಲ್ಲ. ಜಲಪಾತಕ್ಕೆ ಇಳಿಯುವ ಹಾದಿಯಲ್ಲಿ ಎಡಭಾಗದ ಬೃಹತ್ ಕಲ್ಲು ಬಂಡೆಯ ಬಳಿ ಪ್ರವಾಸಿಗರು ಫೋಟೋ ಕ್ಲಿಕ್ಕಿಸಲು ಮುಂದಾಗುತ್ತಾರೆ. ಇಲ್ಲಿ ಕಬ್ಬಿಣದ ಸುರಕ್ಷತಾ ಕಂಬಿಗಳನ್ನು ಅಳವಡಿಸಿದ್ದರೂ ಅದನ್ನು ದಾಟಿ ಮುಂದೆ ಸಾಗುತ್ತಾರೆ. ಈ ವೇಳೆ ಅಪಾಯ ಸಂಭವಿಸುವ ಸಾಧ್ಯತೆಯೇ ಹೆಚ್ಚು.

ಹೀಗಾಗಿ ಪ್ರತಿಯೊಂದು ಆಯಕಟ್ಟಿನ ಜಾಗದಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಬೇಕಿದೆ. ಜೊತೆಗೆ ಪ್ರವಾಸಿಗರ ಹೆಸರು ಮತ್ತು ವಾಹನ ಸಂಖ್ಯೆಗಳ ನೋಂದಣಿ ಹಾಗೂ ಪ್ರವೇಶ ನಿಯಂತ್ರಣ ವ್ಯವಸ್ಥೆ ಅಗತ್ಯವಾಗಿದೆ. ಹಿಂದೆ ಶಾಂತಳ್ಳಿಯಲ್ಲಿ ಉಪ ಪೊಲೀಸ್ ಠಾಣೆ ಅಥವಾ ತಾತ್ಕಾಲಿಕ ಮೇಲ್ವಿಚಾರಣಾ ವ್ಯವಸ್ಥೆ ಆರಂಭಿಸುವ ಚರ್ಚೆ ನಡೆದಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಪ್ರಸ್ತುತ ವಾಹನಗಳಿಂದ ಪ್ರವೇಶ ಶುಲ್ಕ  ಸಂಗ್ರಹಿಸುವ ವ್ಯವಸ್ಥೆ ಇದ್ದರೂ, ಪ್ರವಾಸಿಗರಿಗೆ ಮಾರ್ಗದರ್ಶನ, ಸುರಕ್ಷತಾ ಮಾಹಿತಿ ಅಥವಾ ತುರ್ತು ನೆರವು ನೀಡುವ ವ್ಯವಸ್ಥೆ ಕಾಣಿಸುತ್ತಿಲ್ಲ. ಉಪಾಹಾರ ವ್ಯವಸ್ಥೆ ಲಭ್ಯವಿದ್ದರೂ ಶೌಚಾಗೃಹ ಮತ್ತು ಶುಚಿತ್ವ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ದೂರುಗಳೂ ಕೇಳಿಬರುತ್ತಿವೆ.

” ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಯಶಸ್ಸು ಕಾಣಬೇಕಾದರೆ, ಪ್ರವಾಸಿತಾಣಗಳು ಪ್ರವಾಸಿಗರನ್ನು ಆಕರ್ಷಿಸಬೇಕು. ಪ್ರವಾಸಿ ತಾಣಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿಗರ ಭದ್ರತೆಗೆ ಆದ್ಯತೆ ನೀಡಬೇಕು. ಸೂಕ್ತ ಶೌಚಾಗೃಹ ವ್ಯವಸ್ಥೆ ಮಾಡಬೇಕು.”

-ಗೌತಮ್ ಕಿರಗಂದೂರು, ಕಾಫಿ ಬೆಳೆಗಾರರು

” ಮಲ್ಲಳ್ಳಿ ಸೇರಿದಂತೆ ಜಿಲ್ಲೆಯ ಕೆಲ ಪ್ರವಾಸಿ ಸ್ಥಳಗಳಿಗೆ ಮೂಲಸೌಲಭ್ಯ ಒದಗಿಸಬೇಕಿದೆ. ಮುಂದಿನ ದಿನಗಳಲ್ಲಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಅಗತ್ಯವಿರುವ ಸೌಲಭ್ಯಗಳ ಪಟ್ಟಿ ಮಾಡಿ, ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಸುರಕ್ಷಿತ ಕ್ರಮಗಳು, ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.”

-ಶಶಿಧರ್, ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ

” ಮಲ್ಲಳ್ಳಿ ಜಲಪಾತದ ಬಳಿ ಕೇಬಲ್ ಕಾರ್ ಯೋಜನೆ ಕುರಿತು ಕಳೆದ ವರ್ಷದ ಬಜೆಟ್‌ನಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಎಚ್. ಕೆ.ಪಾಟೀಲ್ ಭರವಸೆ ನೀಡಿದ್ದರು. ಆದರೆ, ಜಲಪಾತದ ಬಳಿ ಮೂಲ ಸೌಕರ್ಯಗಳ ಈಡೇರಿಕೆಗೆ ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಮೊದಲು ಪ್ರಯತ್ನಿಸಬೇಕು. ಪ್ರವಾಸಿಗರ ರಕ್ಷಣೆಗೆ ಭದ್ರತಾ ವ್ಯವಸ್ಥೆಯನ್ನು ಮಾಡಬೇಕು.”

-ಕೆ.ಎಂ.ದೀಪಕ್, ಕನ್ನಳ್ಳಿಕಟ್ಟೆ 

ಸುಂದರ ಜಲಧಾರೆ…: 

ಮಲ್ಲಳ್ಳಿ ಜಲಪಾತ ೩೯೦ ಅಡಿ ಎತ್ತರದಿಂದ ಧುಮುಕಿ ಜಲಧಾರೆಯಾಗಿ ಪ್ರವಹಿಸುತ್ತದೆ. ಮೊದಲ ಹಂತದ ೨೦೦ ಅಡಿ ಎತ್ತರದಿಂದ ಕೆಳಕ್ಕೆ ಧುಮುಕಿದ ನಂತರ ೯೦ ಅಡಿ ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಹೀಗೆ ಹಂತ ಹಂತವಾಗಿ ಸುಮಾರು ೩೯೦ ಅಡಿ ಎತ್ತರದಿಂದ ನೀರು ಬೀಳುವ ಈ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಂದೆ ಹರಿದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸ್ನಾನಘಟ್ಟ ತಲುಪುತ್ತದೆ. ಸೋಮವಾರಪೇಟೆಯಿಂದ ಕೇವಲ ೨೫ ಕಿ.ಮೀ. ದೂರದಲ್ಲಿರುವ ಈ ಜಲಪಾತಕ್ಕೆ ಸೋಮವಾರಪೇಟೆಯಿಂದ ಯಡೂರು, ಶಾಂತಳ್ಳಿ, ಕುಮಾರಹಳ್ಳಿ ಮೂಲಕ ೨೦ ಕಿ.ಮೀ. ಕ್ರಮಿಸಿ, ಹಂಚಿನಳ್ಳಿ ಗ್ರಾಮವನ್ನು ತಲುಪಿ, ಎಡಕ್ಕೆ ತಿರುಗಿ ನಾಲ್ಕು ಕಿ.ಮೀ. ತೆರಳಿದರೆ ಮಲ್ಲಳ್ಳಿ ಜಲಪಾತದ ದರ್ಶನವಾಗುತ್ತದೆ. ಜಲಪಾತದವರೆಗೂ ವಾಹನಗಳಲ್ಲಿ ತೆರಳಬಹುದು.

 

 

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

9 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

12 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

12 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

12 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

13 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

13 hours ago