ಅಂಕಣಗಳು

ಬೆಂಗಳೂರು ಡೈರಿ | ಮೋದಿ ಕೃಪಾಕಟಾಕ್ಷದಿಂದ ಸಿಎಂ ಬೊಮ್ಮಾಯಿಗೆ ಆನೆಬಲ!

-ಆರ್.ಟಿ.ವಿಠ್ಠಲಮೂರ್ತಿ

ಬಸವರಾಜ ಬೊಮ್ಮಾಯಿ ಸಿಎಂ ಆಗಲಿ ಎಂದಿದ್ದೇ ತಾವು. ಈಗ ಬೇಡವೆಂದರೆ ಆಯ್ಕೆಯಲ್ಲಿ ಎಡವಿದರೆಂಬ ಅಪವಾದವೇಕೆ ಎಂಬುದು ಪ್ರಧಾನಿ ನಿಲವು

ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಹೆಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಸಿದ್ಧರಾಮಯ್ಯ ಅವರ ವಿರುದ್ಧ ಅವರ ಸಂಪುಟದಲ್ಲಿರುವ ಹಲವರು ಕೆಂಡ ಕಾರುತ್ತಿದ್ದರು. ಹಾಗಂತ ಇದು ತೀರಾ ಬೀದಿಗೆ ಬರುತ್ತಿದ್ದ ಆಕ್ರೋಶವಲ್ಲ. ಬದಲಿಗೆ ಆಪ್ತರ ಜತೆಗಿನ ಮಾತುಕತೆಯ ಸಂದರ್ಭದಲ್ಲಿ ಇದು ವ್ಯಕ್ತವಾಗುತ್ತಿತ್ತು.

೧೯೫೨ ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ಕೆಂಗಲ್ ಹನುಮಂತಯ್ಯ ಬಲಿಷ್ಟ ಸಿಎಂ ಆಗಿದ್ದರೂ ಸಾಹುಕಾರ್ ಚೆನ್ನಯ್ಯ ಅವರಂತಹ ನಾಯಕರು ಕಟು ಟೀಕೆ ಮಾಡುತ್ತಿದ್ದರು. ನಿಜಲಿಂಗಪ್ಪ ಮುಖ್ಯಮಂತ್ರಿ ಆದಾಗಲೆಲ್ಲ ಅವರ ಸಂಪುಟದಲ್ಲೇ ಇದ್ದ ಬಿ.ಡಿ.ಜತ್ತಿ ಅಪಸ್ವರ ಎತ್ತುತ್ತಿದ್ದರು.
ನಿಜಲಿಂಗಪ್ಪ ಅವರು ೧೯೫೭ ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾದರಲ್ಲ? ಆಗ ಮೊರಾರ್ಜಿ ದೇಸಾಯಿ ಬಣದ ಜತ್ತಿ ಬಂಡಾಯವೆದ್ದರು. ೧೯೫೮ ರಲ್ಲಿ ಅವರ ಬಂಡಾಯ ಯಶಸ್ವಿಯಾಗಿ ನಿಜಲಿಂಗಪ್ಪ ಕೆಳಗಿಳಿದರು.ಖುದ್ದು ಜತ್ತಿ ರಾಜ್ಯದ ಮುಖ್ಯಮಂತ್ರಿಯಾದರು. ೧೯೬೨ ರ ನಂತರವೂ ಜತ್ತಿಯವರು ನಿಜಲಿಂಗಪ್ಪ ವಿರುದ್ಧ ಹೋರಾಡುತ್ತಲೇ ಇದ್ದರು. ೧೯೭೨ ರಲ್ಲಿ ಮುಖ್ಯಮಂತ್ರಿಯಾದ ದೇವರಾಜ ಅರಸರ ವಿರುದ್ಧ ಸಂಸ್ಥಾ ಕಾಂಗ್ರೆಸ್ಸಿನಿಂದ ವಲಸೆ ಬಂದು ಮಂತ್ರಿಗಳಾದವರು ಕಿಡಿ ಕಾರುತ್ತಿದ್ದರು.
೧೯೮೩ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆ ೧೯೮೫ ರ ಚುನಾವಣೆಯ ನಂತರ ಬಲಿಷ್ಟ ಸಿಎಂ ಆಗಿದ್ದರು. ಆದರೆ ಹೆಗಡೆ ಅವರ ವಿರುದ್ದ ದೇವೇಗೌಡರು ಕಿಡಿ ಕಾರುತ್ತಿದ್ದರು. ಅಂದಿನ ದಿನಗಳಲ್ಲಿ ತಮ್ಮ ಆಪ್ತರ ಬಳಿ ಗಡ್ಡದವನ (ಹೆಗಡೆ) ವಿರುದ್ಧ ದೂರುತ್ತಿದ್ದರು. ಮುಂದೆ ದೇವೇಗೌಡರೇ ೧೯೯೪ ರಲ್ಲಿ ಸಿಎಂ ಆದಾಗ ರಾಮಕೃಷ್ಣ ಹೆಗಡೆ ಅವರ ಬೆಂಬಲಿಗರಾಗಿದ್ದ ಹಲ ಸಚಿವರು ಗೌಡರ ವಿರುದ್ಧ ಕತ್ತಿ ಮಸೆಯುತ್ತಿದ್ದರು.

೧೯೯೯ ರಲ್ಲಿ ಮುಖ್ಯಮಂತ್ರಿ ಹುದ್ದೆಗೇರಿದ ಎಸ್.ಎಂ.ಕೃಷ್ಣ ಬಲಿಷ್ಟ ಸಿಎಂ ಆಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಕೂಡಾ ಅವರಿಗೆ ಮುಕ್ತ ಹಸ್ತ ನೀಡಿತ್ತು.
ಅದರೂ ಅವರ ಸಚಿವ ಸಂಪುಟದಲ್ಲಿದ್ದ ಹೆಚ್.ಕೆ.ಪಾಟೀಲ್ ಪದೇ ಪದೇ ಕೃಷ್ಣ ಅವರ ವಿರುದ್ಧ ದೆಹಲಿಗೆ ದೂರು ಒಯ್ಯುತ್ತಿದರು. ೨೦೦೮ ರಲ್ಲಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ಬಲಿಷ್ಟರೇ ಆಗಿದ್ದರು. ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಅಧಿಕಾರ ಕೊಡಿಸಿದ ನಾಯಕ ಅಂತ ಹೈಕಮಾಂಡ್ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೆ ಕೆಲವೇ ಕಾಲದಲ್ಲಿ ಅವರ ಸಂಪುಟದ ಹಲ ಸಹೋದ್ಯೋಗಿಗಳು ತಿರುಗಿ ಬಿದ್ದರು. ೨೦೧೩ ರಲ್ಲಿ ಸಿಎಂ ಆದ ಸಿದ್ಧರಾಮಯ್ಯ ಪವರ್‌ಫುಲ್ ಆಗಿದ್ದರು. ಆದರೆ ಡಿಕೆಶಿ ಸೇರಿದಂತೆ ಹಲ ಸಚಿವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿದ್ದರು. ಹಾಗೆ ನೋಡಿದರೆ ಹಾಲಿ ಮುಖ್ಯಮಂತ್ರಿ ಬಸವರಾಜ. ಬೊಮ್ಮಾಯಿ ಈ ಯಾವ ಮುಖ್ಯಮಂತ್ರಿಗಳಷ್ಟು ಪವರ್ ಫುಲ್ ಅಲ್ಲ. ಅವರಂತೆ ಸಂಪುಟ ಸಹೋದ್ಯೋಗಿಗಳ ಮೇಲೆ ಕಂಟ್ರೋಲ್ ಇಟ್ಡುಕೊಂಡವರಲ್ಲ. ಆದೇ ರೀತಿ ಅವರ ಸಂಪುಟ ಸಹೋದ್ಯೋಗಿಗಳೆಲ್ಲ ಬೊಮ್ಮಾಯಿ ಬಗ್ಗೆ ಖುಷಿಯಾಗಿದ್ದಾರೆ ಎಂದೂ ಅಲ್ಲ. ಆದರೆ ಏನೇ ಅಸಮಾಧಾನವಿರಲಿ, ಕಳೆದ ಕೆಲ ದಿನಗಳಿಂದ ಯಾವೊಬ್ಬ ಸಚಿವರೂ ಬೊಮ್ಮಾಯಿ ಅವರ ಬಗ್ಗೆ ಅಪಸ್ವರ ಎತ್ತುತ್ತಿಲ್ಲ. ಅಷ್ಟೇ ಯಾಕೆ? ಯಾರು ಕೇಳದೆ ಇದ್ದರೂ ತಾವೇ ಮುಂದಾಗಿ ಬಸವರಾಜ ಬೊಮ್ಮಾಯಿ ಅವರನ್ನು ಖಂಡಾಪಟ್ಟೆ ಹೊಗಳುತ್ತಿದ್ದಾರೆ.
ಸುಮ್ಮನೆ ಹೇಳುವುದಲ್ಲ. ಸಿಎಂ ಎಷ್ಟು ದೊಡ್ಡ ವ್ಯಕ್ತಿ ಎಂದರೆ ನನ್ನ ಡಿಪಾರ್ಟ್‌ಮೆಂಟಿಗೆ ಎಷ್ಟು ಬೇಕೋ ಅಷ್ಟು ದುಡ್ಡು ಕೊಡುತ್ತಿದ್ದಾರೆ ಎಂಬುದರಿಂದ ಹಿಡಿದು ಬೊಮ್ಮಾಯಿ ತುಂಬ ಇಂಟಲಿಜೆಂಟು ಸಿಎಂ. ಇವತ್ತಿನ ಪರಿಸ್ಥಿತಿಯಲ್ಲಿ ಅವರಲ್ಲದೆ ಬೇರೆ ಆಗಿದ್ದರೂ ಹಣಕಾಸಿನ ಪರಿಸ್ಥಿತಿಯನ್ನು ನಿಭಾಯಿಸುತ್ತಿರಲಿಲ್ಲ ಎಂಬಲ್ಲಿಯವರೆಗೆ ಹೊಗಳುತ್ತಾರೆ.

ಅಂದ ಹಾಗೆ ಇದ್ದಕ್ಕಿದ್ದಂತೆ ಸಿಎಂ ಬೊಮ್ಮಾಯಿ ವಿಷಯದಲ್ಲಿ ಅಪಸ್ವರ ಎತ್ತುವ ಕೆಲಸ ಏಕೆ ನಿಂತಿದೆ ಅಂತ ಹುಡುಕಲು ಹೋದರೆ ಕುತೂಹಲಕಾರಿ ಸಂಗತಿ ಹೊರಬೀಳುತ್ತದೆ.
ಅದೆಂದರೆ, ಯಾರೆಷ್ಟೇ ವಿರೋಧಿಸಿದರೂ ಬೊಮ್ಮಾಯಿ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಲ್ಲ. ಕಾರಣ? ಯಡಿಯೂರಪ್ಪ ಅವರ ನಂತರ ಪರ್ಯಾಯ ನಾಯಕತ್ವಕ್ಕೆ ಯಾರು ಬರಬೇಕು ಎಂಬ ಚಿಂತನೆ ಶುರುವಾದಾಗ ಮೋದಿಯವರ ಮುಂದೆ ಎರಡು ಹೆಸರುಗಳು ಪ್ರಸ್ತಾಪವಾದವು.
ಈ ಪೈಕಿ ಒಬ್ಬರು ಜಗದೀಶ್ ಶೆಟ್ಟರ್, ಮತ್ತೊಬ್ಬರು ಬಸವರಾಜ ಬೊಮ್ಮಾಯಿ. ಈ ಇಬ್ಬರ ಹೆಸರುಗಳಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ನರೇಂದ್ರ ಮೋದಿ ಕ್ಲಿಯರ್ ಮಾಡಿದರು. ಆದರೆ ಬಸವರಾಜ ಬೊಮ್ಮಾಯಿ ವಿಷಯದಲ್ಲಿ ಪಕ್ಷದ ಶಾಸಕರ ಶಮಾಧಾನ ಶುರುವಾದಾಗ ಅವರನ್ನು ಬದಲಿಸಿ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡಬೇಕು ಎಂಬ ಒತ್ತಡ ಹೆಚ್ಚಾಯಿತು. ಅದೇ ಕಾಲಕ್ಕೆ ಸಂಘಪರಿವಾರದ ಪ್ರಮುಖ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆ ಚರ್ಚಿಸಿ ನಾಯಕತ್ವ ಬದಲಾವಣೆ ಸೂಕ್ತ ಎಂದು ಶಿಫಾರಸು ಮಾಡಿದರು. ಈ ಶಿಫಾರಸು ತಮ್ಮ ಟೇಬಲ್ಲಿಗೆ ಬಂದಾಗ ಪ್ರಧಾನಿ ನರೇಂದ್ರಮೋದಿ ಮೌನಿಯಾದರಂತೆ. ಕಾರಣ? ಬಸವರಾಜ ಬೊಮ್ಮಾಯಿ ಸಿಎಂ ಆಗಲಿ ಅಂತ ಹೇಳಿದ್ದೇ ತಾವು. ಈಗ ಬೇಡ ಎಂದುಬಿಟ್ಟರೆ,ಆಯ್ಕೆಯಲ್ಲಿ ಮೋದಿ ಎಡವಿದರು ಎಂಬ ಮಾತು ಕೇಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಈಗ ಯಾರನ್ನು ತಂದುಕೂರಿಸಿದರೂ ಮುಂದಿನ ಚುನಾವಣೆಯಲ್ಲಿ ತಾವು ಖುದ್ದಾಗಿ ಕರ್ನಾಟಕಕ್ಕೆ ದಂಡೆತ್ತಿ ಹೋಗಲೇಬೇಕು. ಅಂದ ಹಾಗೆ ಬಸವರಾಜ ಬೊಮ್ಮಾಯಿ ಹೈಕಮಾಂಡ್‌ಗೆ ಪರಮ ವಿಧೇಯರಾಗಿದ್ದಾರೆ.ಹಿಂದಿದ್ದ ಯಡಿಯೂರಪ್ಪ ಅವರಿಗೆ ಎಲ್ಲ ನನ್ನಿಂದಲೇ ಆಗಿದ್ದು ಎಂಬ ಧೋರಣೆ ಇತ್ತು. ಆದರೆ ಬೊಮ್ಮಾಯಿ ಎಲ್ಲವೂ ನಿಮ್ಮಿಂದಲೇ ಅಂತ ವರಿಷ್ಟರಿಗೆ ಹೇಳುತ್ತಾರೆ.
ಹೀಗಿರುವಾಗ ಬೊಮ್ಮಾಯಿ ಅವರೇ ಸಿಎಂ ಹುದ್ದೆಯಲ್ಲಿ ಮುಂದುವರಿಯಲಿ ಎಂಬುದು ಮೋದಿ ತೀರ್ಮಾನ. ಪರಿಣಾಮ? ವೈಯಕ್ತಿಕವಾಗಿ ಜನನಾಯಕರಲ್ಲದಿದ್ದರೂ, ಬಲಿಷ್ಟರಲ್ಲದಿದ್ದರೂ ಬೊಮ್ಮಾಯಿ ಇದ್ದಕ್ಕಿದ್ದಂತೆ ಪವರ್‌ಫುಲ್ ಆಗಿದ್ದಾರೆ. ಯಾವಾಗ ಪ್ರಧಾನಿ ನರೇಂದ್ರಮೋದಿ ಅವರ ಈ ಧೋರಣೆ ತಿಳಿಯಿತೋ? ಇದಾದ ನಂತರ ಬೊಮ್ಮಾಯಿ ಅವರನ್ನು ವಿರೋಧಿಸುವ ಮಂತ್ರಿಗಳು ಅಪಸ್ವರ ಎತ್ತುವುದನ್ನು ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲ,ಆಪ್ತ ಮಾತುಕತೆಯ ಸಂದರ್ಭದಲ್ಲೂ ಬೊಮ್ಮಾಯಿ ಅವರನ್ನು ತಾರೀಪು ಮಾಡುವ ಮಟ್ಟಕ್ಕೆ ಹೋಗಿದ್ದರೆ. ಕರ್ನಾಟಕದ ಇತಿಹಾಸದಲ್ಲಿ ಇಂತಹದೇ ಪರಿಸ್ಥಿತಿಯನ್ನು ಎಂಜಾಯ್ ಮಾಡಿದವರಿದ್ದರೆ ಅದು ಆರ್. ಗುಂಡೂರಾಯರು ಮಾತ್ರ. ಇದಕ್ಕೆ ಕಾರಣವೆಂದರೆ ಇಂದಿರಾಗಾಂಧಿ ಅವರು ಗುಂಡೂರಾಯರ ಬಗ್ಗೆ ಇಟ್ಟುಕೊಂಡ ವಿಶ್ವಾಸ. ಅವತ್ತು ಇಂದಿರಾಗಾಂಧಿ ಎಷ್ಟು ಪವರ್ ಫುಲ್ ಆಗಿದ್ದರೆಂದರೆ ಅವರ ಎದುರು ನಿಂತು ಮಾತನಾಡುವ ಶಕ್ತಿ ದೇಶದ ಯಾವುದೇ ಕಾಂಗ್ರೆಸ್ ನಾಯಕರಿಗಿರಲಿಲ್ಲ. ಹೀಗಾಗಿ ಗುಂಡೂರಾಯರು ನಿರಾತಂಕವಾಗಿ,ಮಂತ್ರಿ ಮಂಡಲದ ಸಹೋದ್ಯೋಗಿಗಳ ಅಪಸ್ವರವಿಲ್ಲದೆ ನಡೆದರು.
ಇವತ್ತು ಕೂಡಾ ಅಂತಹದೇ ಪರಿಸ್ಥಿತಿ. ಹಿಂದೆ ಇಂದಿರಾಗಾಂಧಿ ಹೇಗೆ ಪವರ್ ಫುಲ್ ಆಗಿದ್ದರೋ? ಇವತ್ತು ನರೇಂದ್ರ ಮೋದಿ ಕೂಡಾ ಅಷ್ಟೇ ಪವರ್‌ಫುಲ್ ಆಗಿದ್ದಾರೆ. ಹೀಗಾಗಿ ಬೊಮ್ಮಾಯಿ ಕೂಡಾ ಗುಂಡೂರಾಯರಂತೆ ಸೇಫ್ ಜೋನಿಗೆ ಬಂದಿದ್ದಾರೆ. ಅಂದ ಹಾಗೆ ಗುಂಡೂರಾಯರ ಕಾಲದಲ್ಲಿ ಮೊಬೈಲ್ ಫೋನುಗಳ ಬಳಕೆ ಇರಲಿಲ್ಲ. ಹೀಗಾಗಿ ಅವರನ್ನು ವಿರೋಧಿಸುವ ಮಂತ್ರಿಗಳು ಬಹಿರಂಗವಾಗಿಯಲ್ಲದಿದ್ದರೂ ಖಾಸಾ ಮಾತುಕತೆಯ ಸಂದರ್ಭದಲ್ಲಿ ಟೀಕಿಸುತ್ತಿದ್ದರು. ಆದರೆ ಈಗ ಬಹಿರಂಗವಾಗಿ ಮಾತ್ರವಲ್ಲ. ಖಾಸಾ ಮಾತುಕತೆಯ ಸಂದರ್ಭದಲ್ಲೂ ನಾಲಿಗೆ ಹರಿಬಿಡುವುದಿಲ್ಲ. ಯಾಕೆಂದರೆ ಎಷ್ಟೇ ಆಪ್ತರಿರಲಿ, ತಾವಾಡಿದ ಮಾತುಗಳನ್ನು ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಕೊಳ್ಳುವ, ಅದನ್ನೇ ಇನ್ನೊಬ್ಬರ ಎದುರು ಬಹಿರಂಗಪಡಿಸುವವರು ಜಾಸ್ತಿ. ಹೀಗಾಗಿ ಮೊಬೈಲ್ ಹೊಡೆತಕ್ಕೆ ಇಡೀ ಕರ್ನಾಟಕದ ರಾಜಕಾರಣವೇ ತತ್ತರ ಬಿತ್ತರವಾಗಿ ಹೋಗಿದೆ.
೨೦೦೬ ರ ನಂತರದ ದಿನಗಳಲ್ಲಿ ರಾಜ್ಯ ರಾಜಕಾರಣ ಗಂಡಾಂತರಕಾರಿ ತಿರುವುಗಳನ್ನು ನೋಡಲು ಬಹುಮುಖ್ಯ ಕಾರಣ ಮೊಬೈಲ್. ಒಂದು ಕಾಲದಲ್ಲಿ ಜನ್ಮಾಂತರದ ಮಿತ್ರರಂತಿದ್ದ ಹೆಚ್.ಡಿ.ಕುಮಾರಸ್ವಾಮಿ, ಚಲುವರಾಯಸ್ವಾಮಿ,ಮಾಗಡಿ ಬಾಲಕೃಷ್ಣ, ಜಮೀರ್ ಅಹ್ಮದ್ ಅವರ ಗ್ಯಾಂಗು ಹೋಳಾಗಲು ಮೊಬೈಲ್ ಫೋನೇ ಮುಖ್ಯ ಕಾರಣ. ಕುಮಾರಸ್ವಾಮಿ ಯಾವುದೋ ಸಿಟ್ಟಿನಲ್ಲಿ ಮಾತನಾಡಿದ್ದನ್ನು ಚಲುವರಾಯಸ್ವಾಮಿ, ಜಮೀರ್ ಅಹ್ಮದ್, ಬಾಲಕೃಷ್ಣ ಅವರಿಗೆ, ಇವರು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದನ್ನು ಕುಮಾರಸ್ವಾಮಿ ಅವರಿಗೆ ಕೇಳಿಸಿದ ಪಡಪೋಸಿ ಆಪ್ತರು ಇಡೀ ಗ್ಯಾಂಗು ಇಬ್ಬಾಗವಾಗುವಂತೆ ಮಾಡಿದರು.
ಈಗಂತೂ ಹೇಳುವುದೇ ಬೇಡ, ಒಬ್ಬರ ವಿಷಯವನ್ನು ಮತ್ತೊಬ್ಬರಿಗೆ ದಾಟಿಸಲು ದಂಡುಗಟ್ಟಲೆ ಜನರಿದ್ದಾರೆ. ಇಂತವರ ಹೊಡೆತಕ್ಕೆ ಹೆದರಿಯೇ ಈಗ ಸಂಪುಟದಲ್ಲಿರುವ ಬೊಮ್ಮಾಯಿ ವಿರೋಧಿಗಳು ಧ್ವನಿ ಎತ್ತುವುದಿಲ್ಲ. ಒಂದು ವೇಳೆ ಎತ್ತಿದರೆ ಅದು ಬೊಮ್ಮಾಯಿ ಕಿವಿಗೆ, ಆ ಮೂಲಕ ವರಿಷ್ಟರ ಕಿವಿಗೆ ತಲುಪಬಹುದು. ಅಷ್ಟೇ ಅಲ್ಲ, ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ತಾವು ಹೋರಾಡುತ್ತಿದ್ದರೆ ಇವರು ಒಳಗಿನಿಂದಲೇ ಸಂಚು ಮಾಡಿ ಸರ್ಕಾರವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಸಿಟ್ಟಿಗೇಳಬಹುದು.
ಇಂತಹ ಉಪದ್ವ್ಯಾಪಗಳೆಲ್ಲ ಯಾಕೆ ಎಂಬುದು ಬೊಮ್ಮಾಯಿ ವಿರೋಧಿಗಳ ಮತ್ತು ಹಿತೈಷಿಗಳ ಯೋಚನೆ. ವಿರೋಧಕ್ಕಾಗಿಯೇ ಇರಲಿ, ಹಿತ ಬಯಸಿಯೇ ಇರಲಿ, ಒಟ್ಟಿನಲ್ಲಿ ಟೀಕೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಇವರ ಯೋಚನೆ. ಪರಿಣಾಮ? ಬೊಮ್ಮಾಯಿ ನೆಮ್ಮದಿಯ ವರ್ತುಲಕ್ಕೆ ಬಂದಿದ್ದಾರೆ. ಉಳಿದವರು ರಿಸ್ಕ್ ಜೋನಿನಿಂದ ಹೊರಗಿರಲು ಬಯಸುತ್ತಿದ್ದಾರೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago