ಅಂಕಣಗಳು

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಶಿವರಾಜಕುಮಾರ್-‘ಆನಂದ್’೪೦ರ ವೇಳೆ-ಆ ದಿನಗಳ ನೆನಪು

ಕಳೆದವಾರ, ಫೆಬ್ರವರಿ ೧೯, ಶಿವರಾಜಕುಮಾರ್ ಅಭಿನಯದ ‘ಆನಂದ್’ ಚಿತ್ರ ಸೆಟ್ಟೇರಿ ೪೦ ವರ್ಷ. ಅಭಿಮಾನಿಗಳು ಈ ನೆನಪಿನ ಸಂಭ್ರಮವನ್ನು ಆಚರಿಸಿದರು. ಕೆಲವರು ಅದನ್ನು ಕಳೆದ ವರ್ಷ, ೪೦ಕ್ಕೆ ಕಾಲಿಡುವ ವೇಳೆಯೇ ಅದನ್ನು ಸಂಭ್ರಮಿಸಿದ್ದರು. ಉದ್ಯಮವೂ ಸೇರಿದಂತೆ. ವಾಹಿನಿಯೊಂದು ಅವರ ಚಿತ್ರಜೀವನದ ಸುವರ್ಣ ವರ್ಷಾಚರಣೆಯನ್ನೂ ಮಾಡಿತು. ಚಿಕ್ಕವರಿದ್ದಾಗ ಪುಟ್ಟ ಪಾತ್ರದಲ್ಲಿ ಅವರು ನಟಿಸಿದ ‘ಶ್ರೀನಿವಾಸ ಕಲ್ಯಾಣ’ ಚಿತ್ರದ ಲೆಕ್ಕದಲ್ಲಿ. ಶಿವರಾಜಕುಮಾರ್ ಅಭಿನಯದ ‘ಆನಂದ್’ ಚಿತ್ರ ಕನ್ನಡ ಚಿತ್ರರಂಗಕ್ಕೆ ಯುವನಟನೊಬ್ಬನನ್ನು ಪರಿಚಯಿಸಿದ್ದು, ರಾಜಕುಮಾರ್ ಸಂಸ್ಥೆಯೇ ಮೊದಲ ಹಲವು ಚಿತ್ರಗಳನ್ನು ನಿರ್ಮಿಸಿದ್ದು, ಕನ್ನಡ ಚಿತ್ರೋದ್ಯಮದ ಪ್ರಮುಖ ನಟನಾಗಿ ಬೆಳೆದದ್ದು, ಬಹುತೇಕರಿಗೆ ಗೊತ್ತು. ತಾತನ ಹೆಸರೂ ಸೇರಿ ನಾಗರಾಜ ಶಿವಪುಟ್ಟಸ್ವಾಮಿ, ‘ಆನಂದ್‌ದ ಶಿವರಾಜಕುಮಾರ್ ಆಗುವ ನಡುವಿನ ದಿನಗಳ ನೆನಪಿದು.

ಡಾ.ರಾಜಕುಮಾರ್ ಅವರಿಗೆ ತಾವು ಓದಿಲ್ಲ, ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎನ್ನುವ ಆಸೆ. ಯಾವ ತಂದೆಗಾದರೂ ಇರುವ ಸಹಜ ಆಸೆಯದು. ಈ ನಡುವೆ ಪುನೀತ್ (ಆಗ ಆತ ಲೋಹಿತ್) ಅಭಿನಯದಲ್ಲಿ ಆಸಕ್ತಿ ವಹಿಸಿದ್ದಷ್ಟೇ ಅಲ್ಲದೆ ಮುಖ್ಯಪಾತ್ರಗಳಲ್ಲೂ ಕಾಣಿಸಿಕೊಂಡಿದ್ದರು. ‘ಎರಡು ನಕ್ಷತ್ರಗಳು’ ಚಿತ್ರದಲ್ಲಿ ಅವರದು ದ್ವಿಪಾತ್ರ. ‘ಬೆಟ್ಟದ ಹೂ’ ಚಿತ್ರ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿತು. ಪ್ರಹ್ಲಾದನಾಗಿ ಆತ ಕಾಣಿಸಿಕೊಂಡಾಗ ರಾಜ್ ಹಿರಣ್ಯಕಶಿಪುವಾಗಿ ತೆರೆಯ ಮೇಲೆ ಮೆರೆದರು. ತಮ್ಮ ಕಿರಿಯ ಮಗನ ಉತ್ಸಾಹ ಮತ್ತು ಕಲಾಪ್ರೀತಿಯನ್ನು, ಸಹಜವಾದ ಅಭಿನಯವನ್ನು ಕಂಡ ರಾಜಕುಮಾರ್ ಅವರು ಆತನಲ್ಲಿದ್ದ ಪ್ರತಿಭೆಯನ್ನು ಕೊಂಡಾಡುತ್ತಿದ್ದರು.

‘ಈತ ಮುಂದೆ ಒಳ್ಳೆಯ ನಟನಾಗುತ್ತಾನೆ. ಶ್ರದ್ಧೆ ಮತ್ತು ಪ್ರಾಮಾಣಿಕತೆ ಉಳಿಸಿಕೊಂಡರೆ ಬಹಳ ದೊಡ್ಡ ಹೆಸರು ಮಾಡಬಹುದು’- ಅಂತ ಅವರು ಒಂದೆರಡು ಬಾರಿ ಹೇಳಿದ್ದರು. ತಮ್ಮ ಬಗ್ಗೆ ತಮ್ಮ ಅಪ್ಪಾಜಿ ಇಟ್ಟ ನಂಬಿಕೆಯಂತೆ ತಮಗೆ ಆತನ ಕಲಾಪ್ರತಿಭೆಯ ಕುರಿತಂತೆ ಅಪಾರ ವಿಶ್ವಾಸ ಎಂದೂ ಅವರು ಹೇಳಿದ್ದರು. ಲೋಹಿತ್ ಹೆಸರನ್ನು ಪುನೀತ್ ಎಂದು ಬದಲಾಯಿಸಲಾಯಿತು. ಪುನೀತ್ ತಾವು ಅಭಿನಯಿಸಿ ಹೆಸರು ಮಾಡಿದ್ದು ಅವರ ಹಿರಿಯ ಸೋದರರಿಗೆ ಈ ರಂಗದಲ್ಲಿ ಆಸಕ್ತಿ ಹುಟ್ಟಲು ಇದು ಸ್ಛೂರ್ತಿಯಾಯಿತು. (ಬಾಲನಟನಾಗಿ ಬಂದು ಹೆಸರಾಗಿ, ಯುವನಟನಾಗಿ ಚಿತ್ರರಂಗದ ಭವಿಷ್ಯದಂತೆ ಬೆಳೆದ ಪುನೀತ್ ರಾಜಕುಮಾರ್ ಅಕಾಲ ಮರಣ ಕನ್ನಡ ಚಿತ್ರೋದ್ಯಮಕ್ಕೆ ಬರಸಿಡಿಲಿನಂತೆ ಆಯಿತು.)

ಹಿರಿಯಣ್ಣ ನಾಗರಾಜ ಶಿವಪುಟ್ಟಸ್ವಾಮಿ ಅಭಿನಯಿಸಬೇಕೆಂಬ ಹಂಬಲವನ್ನು ತಾಯಿ ಬಳಿ ಹೇಳಿದರು. ಅವರು ಯಾವತ್ತೂ ತಂದೆಯ ಎದುರು ನಿಂತು ತಮಗೆ ಬೇಕಾದ್ದನ್ನು ಕೇಳಿದ ಉದಾಹರಣೆ ಇಲ್ಲ; ಏನಿದ್ದರೂ ತಮ್ಮ ಮೂಲಕ ಹೇಳುತ್ತಿದ್ದ ಎಂದು ಪಾರ್ವತಮ್ಮ ಹೇಳುತ್ತಿದ್ದರು. ವಿಷಯ ತಿಳಿದ ರಾಜಕುಮಾರ್ ಮಗನನ್ನು ಕರೆದರು. ಮಗನಿಗೆ ತಮ್ಮದೇ ಕ್ಷೇತ್ರದ ಬಗ್ಗೆ ಆಸೆ ಹುಟ್ಟಿರುವುದು ಖುಷಿ ತಂದಿತ್ತು. ಆದರೂ ತಮ್ಮ ಸಲಹೆ ಮುಂದಿಟ್ಟರು. ‘ಮೊದಲು ಓದು ಮುಗಿಯಲಿ. ನನಗಾದರೆ ರಂಗಭೂಮಿಯ ಹಿನ್ನೆಲೆ ಇತ್ತು. ಅಲ್ಲಿ ತರಬೇತಿ ಇತ್ತು. ಈಗ ಸಿನಿಮಾಕ್ಕೆ ತರಬೇತಿಗೆಂದೇ ಶಾಲೆಗಳಿವೆ. ಅಂತಹ ಯಾವುದಾದರೂ ಶಾಲೆಯಲ್ಲಿ ತರಬೇತಿ ಪಡೆದು ನಂತರ ಅಭಿನಯಕ್ಕೆ ಬಂದರಾಯಿತು.’ ಎಂದರಂತೆ. ತಂದೆಯ ಮಾತು ಎಂದರೆ ವೇದವಾಕ್ಯ ಮಗನಿಗೆ. ಶಿವಪುಟ್ಟಸ್ವಾಮಿ ಮದರಾಸಿನಲ್ಲಿ ಓದು ಮುಗಿಸಿ, ತರಬೇತಿ ಮುಗಿಸಿ ಸಿದ್ಧರಾಗಿಯೇ ಬಿಟ್ಟರು…

ತಮ್ಮ ದೊಡ್ಡ ಮಗ ಅಭಿನಯದತ್ತ ವಾಲಿದ್ದು ರಾಜಕುಮಾರ್ ಅವರಿಗೆ ಸಹಜವಾಗಿಯೇ ಸಂತೋಷವಾಗಿತ್ತು. ಸಿನಿಮಾ ಕುರಿತ ತರಬೇತಿ ಮುಗಿಸಿ ಬಂದ ಮಗನಿಗೆ ಅಭಿನಯ ಜೀವನಕ್ಕೆ ಕಾಲಿಡುವ ಮೊದಲು ತಮ್ಮಂತೆಯೇ ಗೃಹಸ್ಥಾಶ್ರಮಕ್ಕೆ ಸೇರಿಸಿದರು. ಬಂಗಾರಪ್ಪನವರ ಮಗಳು ಗೀತಾ ಅವರ ಬಾಳಸಂಗಾತಿಯಾದರು.

ನಂತರ ಚಿತ್ರಜೀವನ. ಕಣ್ಣುಬಿಡುವಾಗಲೇ ಬಣ್ಣದ ಬದುಕಿನ ವಾತಾವರಣವನ್ನು ಕಂಡಿದ್ದ ಶಿವಣ್ಣನ ಮೊದಲ ಚಿತ್ರದ ಕುರಿತಂತೆ ಸಾಕಷ್ಟು ಚರ್ಚೆಗಳಾದವು. ಕಥಾವಸ್ತುವಿನಿಂದ ಮೊದಲ್ಗೊಂಡು ನಿರ್ದೇಶಕರ ಆಯ್ಕೆಯವರೆಗೆ ಪ್ರತಿಯೊಂದು ಹಂತದಲ್ಲೂ ರಾಜ್ ಪಾಲ್ಗೊಂಡರು. ಶಿವಣ್ಣನ ಮೊದಲ ಚಿತ್ರವನ್ನು ರಾಜ್ ಸಂಸ್ಥೆಯೇ ನಿರ್ಮಿಸುವ ನಿರ್ಧಾರ ಮೊದಲೇ ಆಗಿತ್ತು. ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶಕರಾಗಿ ನಿಯುಕ್ತರಾದರು. ಚಿ.ಉದಯಶಂಕರ್ ಸಾಹಿತ್ಯಕ್ಕಿದ್ದರು. ಸಾಹಿತ್ಯ ಎಂದರೆ ಈಗ ನಮ್ಮವರು ಹೆಚ್ಚಾಗಿ ಬಳಸುವ ಗೀತರಚನೆ ಅಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಎಲ್ಲ. ಪೂರ್ವಸಿದ್ಧತೆಗಳು ಆದವು. ನಾಯಕಿಯಾಗಿ ಚಿ.ಉದಯಶಂಕರ್ ಬಂಧುಗಳ ಪೈಕಿಯ, ಅದೇ ತಾನೇ ಹದಿಹರೆಯಕ್ಕೆ ಕಾಲಿಟ್ಟ ಜಯಶ್ರೀ ಬಂದಳು. ಆಕೆಗೆ ಪಾರ್ವತಮ್ಮ ಇಟ್ಟ ಹೆಸರು ಸುಧಾರಾಣಿ.

ರಾಜಕುಮಾರ್ ಅವರ ಪುತ್ರ ನಾಯಕನಾಗಿ ನಟಿಸುವ ಮೊದಲ ಚಿತ್ರದ ಸಿದ್ಧತೆಯ ವೇಳೆಗಾಗಲೇ ಗಾಂಽನಗರದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು. ‘ರಾಜಕುಮಾರನಂತಹ ಹತ್ತಾರು ಮಂದಿ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಬರಬೇಕು’ ಎಂದು ಸ್ವತಃ ರಾಜ್ ಅವರೇ ಸಮಾರಂಭಗಳಲ್ಲಿ ತಮ್ಮ ಆಸೆ ಹೇಳಿಕೊಂಡಿದ್ದರು. ಶಿವಣ್ಣನ ಮೊದಲ ಚಿತ್ರದ ಹಿನ್ನೆಲೆಯಲ್ಲಿ ಈ ಮಾತುಗಳ ಚರ್ಚೆಯೂ ನಡೆದಿತ್ತು.

ಮಗನ ಚಿತ್ರದ ಚಿತ್ರೀಕರಣ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ. ಆಗ ಅಲ್ಲಿ ಚಿತ್ರೀಕರಣ ಅಂಗಣಗಳು ಇದ್ದವು. ಸೆಟ್ ಹಾಕುವ ಸಂದರ್ಭದಲ್ಲಿ ಸ್ವತಃ ರಾಜಕುಮಾರ್ ಅಲ್ಲಿ ಹಾಜರಿದ್ದು ಗಮನಿಸುತ್ತಿದ್ದರು. ಚಿತ್ರೀಕರಣದ ಹಿಂದಿನದಿನ ಅವರು ಅಲ್ಲಿದ್ದರು. ಜೊತೆಗೆ ಅವರ ತಮ್ಮ ವರದರಾಜ್. ಸಂಜೆ ಬಹಳ ಹೊತ್ತಿನ ವರೆಗೆ ಇದ್ದ ರಾಜ್ ಅವರ ಕಾತರ, ಕಳವಳ, ಕುತೂಹಲ, ನಿರೀಕ್ಷೆ ಎಲ್ಲವೂ ಅವರ ಮುಖದಲ್ಲಿ ನೋಡಬಹುದಾಗಿತ್ತು. ಅದು ಅವರ ಮಾತುಗಳಲ್ಲೂ ಇಣುಕಿತ್ತು.

‘ಮೊದಲ ದಿನ ನಾನು ಕ್ಯಾಮೆರಾ ಎದುರಿಸಿದಾಗ ಅನುಭವಿಸಿದ ಅನುಭವವೇ ಈಗ ನನಗಾಗುತ್ತಿದೆ. ಅವನಿಗೆ ಮೊದಲು ಮೊದಲು ಆಸಕ್ತಿ ಇರಲಿಲ್ಲ. ಹಿಂದೆ ಶ್ರೀನಿವಾಸ ಕಲ್ಯಾಣದಲ್ಲಿ ಪುಟ್ಟಪಾತ್ರ ಮಾಡಬೇಕಾದವನು ಒಲ್ಲೆ ಎಂದು ಓಡಿಹೋಗಿದ್ದ. ಈಗ ಆಸಕ್ತಿ ಮೂಡಿಸಿಕೊಂಡಿದ್ದಾನೆ. ರಾಜಕುಮಾರ್ ಮಗ ಎನ್ನುವುದು ಬೇರೆ. ಹೇಗೋ.. ಏನೋ.. ’ ಎಂದು ಮಗನ ಕುರಿತು ಸಹಜವಾದ ಮಾತುಗಳನ್ನಾಡಿದ್ದರು.

ಅಂದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಬ್ಬದ ಕಳೆ ಇತ್ತು. ಮದುವೆ ಮನೆಯಲ್ಲಿನ ಹಿಂದಿನ ದಿನದ ಸಡಗರದಂತೆ ಅಲ್ಲಿನ ವಾತಾವರಣವಿತ್ತು. ಹೊಸ ಚಿತ್ರದ ತಂಡವೇ ಅಲ್ಲಿತ್ತು. ಜೊತೆಗೆ ಹಿತೈಷಿಗಳ, ಆತ್ಮೀಯರ ಬಳಗ. ನಾಳೆ ಬೆಳಿಗ್ಗೆ ಮುಹೂರ್ತ. ಶಿವಪುಟ್ಟಸ್ವಾಮಿ ಹೊಸ ಹೆಸರಿನೊಂದಿಗೆ, ಅಭಿನಯ ಜೀವನಕ್ಕೆ ಕಾಲಿಡುವ ಮೊದಲ ಚಿತ್ರದ ಮುಹೂರ್ತ. ಚಿತ್ರದ ಹೆಸರೇ ‘ಆನಂದ್’ ರಾಜಕುಮಾರ್ ಹೆಸರನ್ನು ಜೊತೆಗೆ ಸೇರಿಸಿಕೊಂಡು ನಾಗರಾಜ ಶಿವಪುಟ್ಟಸ್ವಾಮಿ ಶಿವರಾಜ್‌ಕುಮಾರ್ ಆದರು ಆನಂದದಲ್ಲಿ…. ಅದು ರಾಜಕುಮಾರ್ ಅವರಿಗೂ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅಂದು ಸಡಗರ, ಸಂಭ್ರಮ. ಹೊಸ ತಾರೆಯೊಂದರ ಉದಯದ ಮುಹೂರ್ತ. ‘ಆನಂದ್’ ದ ಮೊದಲ ಕ್ಷಣ. ಅಲ್ಲಿ ಆತಂಕದಲ್ಲಿದ್ದವರು ಇಬ್ಬರೇ. ರಾಜಕುಮಾರ್ ಮತ್ತು ಶಿವರಾಜಕುಮಾರ್. ಶಿವರಾಜಕುಮಾರ್ ಅವರ ಆತಂಕಕ್ಕೆ ಕಾರಣವಿಲ್ಲದಿಲ್ಲ. ಎಲ್ಲರ ನಿರೀಕ್ಷೆಯಂತೆ ಗೆಲ್ಲಬೇಕು. ಅಭಿನಯವನ್ನು ಬಯಸಿ ಬಂದ ತಮಗೆ ಮೊದಲ ಹೆಜ್ಜೆ ಸುಸೂತ್ರವಾಗಬೇಕು. ಎಲ್ಲಕ್ಕೂ ಮಿಗಿಲಾಗಿ ಇಡೀ ಕರ್ನಾಟಕವೇ ಆರಾಧಿಸುವ ವರನಟನ ಮಗನಾಗಿ ಅವರ ಹೆಸರನ್ನು ಉಳಿಸುವ ಜವಾಬ್ದಾರಿಯೂ ಇದೆ… ಹೀಗೆ ಆತಂಕದೊಂದಿಗೆ ಮುಹೂರ್ತದ ಕ್ಷಣಕ್ಕಾಗಿ ಕಾದರೆ, ರಾಜಕುಮಾರ್ ಅವರಿಗೋ, ತಮಗೆ ಆಡುಂಬೊಲವಾಗಿದ್ದ ಅಭಿನಯದ ಬಯಲಲ್ಲಿ ಶಿವಣ್ಣ ಹೇಗೆ ಹೆಜ್ಜೆಗುರುತು ಮೂಡಿಸುತ್ತಾನೆ ಎನ್ನುವ ನಿರೀಕ್ಷೆ, ಜೊತೆಗೆ ಏನೋ ತಲ್ಲಣ.

ಆ ಕ್ಷಣ ಬಂದೇ ಬಿಟ್ಟಿತು. ಪೂಜೆಯ ನಂತರ ತಂದೆಯ ಆಶೀರ್ವಾದಕ್ಕಾಗಿ ಕಾಲಿಗೆರಗಿದ ಶಿವಣ್ಣನನ್ನು ಹಾರೈಸಿ, ಆಲಿಂಗಿಸಿ, ಹೂಮುತ್ತನಿತ್ತು ಕ್ಯಾಮೆರಾ ಮುಂದೆ ಕಳುಹಿಸಿದ ಆ ಕ್ಷಣ ಮಾತಿಗೆ ಮೀರಿದ್ದು. ಶಿವಣ್ಣ ಮೊದಲ ಶಾಟ್‌ಗಾಗಿ ಕ್ಯಾಮೆರಾ ಎದುರು ನಿಂತರು. ಮೊದಲಿನಿಂದಲೂ ತಂದೆಯ ಎದುರು ನಿಂತು ಮಾತನಾಡಿ ಅಭ್ಯಾಸವಿಲ್ಲದ ಶಿವಣ್ಣ ಅವರಿಗೆ ತಂದೆಯ ಮುಂದೆ ಮೊದಲ ದೃಶ್ಯ ಎದುರಿಸಬೇಕಾದ ಅನಿವಾರ್ಯ… ‘ಸೌಂಡ್’ ‘ಕ್ಯಾಮೆರಾ’ ‘ಕ್ಲಾಪ್’ ಪಾರ್ವತಮ್ಮ ರಾಜಕುಮಾರ್ ನಿರ್ಮಾಣದ ಬಹುತೇಕ ಚಿತ್ರಗಳಿಗೆ ಆರಂಭ ಫಲಕ ತೋರಿಸುತ್ತಿದ್ದ ಲಕ್ಷ್ಮಣರಾಯರು ‘ಆನಂದ್’ಕ್ಕೂ ಆರಂಭ ಫಲಕ ತೋರಿಸಿ ಶುಭ ಕೋರಿದರು. ‘ಆಕ್ಷನ್’… ಕ್ಯಾಮೆರಾ ಚಿತ್ರಿಸತೊಡಗಿತು… ಶಿವರಾಜ್‌ಕುಮಾರ್ ಅವರ ಅಭಿನಯ ಜೀವನದ ಮುನ್ನುಡಿ ಆರಂಭವಾಯಿತು. ‘ಕಟ್’ ನಿರ್ದೇಶಕ ಸಿಂಗೀತಂ ಆದೇಶ.

ಸೇರಿದ್ದವರ ಚಪ್ಪಾಳೆ… ಬಹುಹೊತ್ತಿನ ವರೆಗೆ… ಶಿವರಾಜ್ ಕುಮಾರ್ ಕಣ್ಣಾಲಿಗಳು ತುಂಬಿದವು. ಅದೊಂದು ಭಾವೋತ್ಕರ್ಷದ ಕ್ಷಣ… ರಾಜ್ಅವರೂ ಭಾವುಕರಾಗಿದ್ದರು. ಅವರ ಕಣ್ಣೂ ಒದ್ದೆಯಾಗಿತ್ತು. ಗೆಳೆಯರ ಹಾರೈಕೆ, ಆಪ್ತರ ಶುಭಾಶಯ, ಹಿರಿಯರ ಆಶೀರ್ವಾದ ಎಲ್ಲಕ್ಕೂಕಲಶವಿಟ್ಟಂತೆ ಅಪ್ಪಾಜಿಯ ಪ್ರೀತಿಯ ರಕ್ಷಾಕವಚ ಶಿವಣ್ಣನ ಪಾಲಿಗೆ ವರದಾನವಾಗಿತ್ತು. ‘ಆನಂದ’ ಚಿತ್ರ ಸೆಟ್ಟೇರಿ ೪೦ ವರ್ಷಗಳಾದರೂ ಆ ದಿನಗಳು ಈಗಲೂ ಕಣ್ಣಮುಂದೆ ಕಟ್ಟಿದಂತಿದೆ…

‘ಆನಂದ್’ದ ಜೊತೆ ಮತ್ತೆರಡು ಚಿತ್ರಗಳು ರಜತೋತ್ಸವ ಕಂಡು ಹ್ಯಾಟ್ರಿಕ್ ಹೀರೋ ಅನಿಸಿಕೊಂಡ ಶಿವಣ್ಣ ಅದಾಗಲೇ ನೂರು ಚಿತ್ರಗಳನ್ನುಪೂರೈಸಿ ವರ್ಷಗಳಾದವು. ಸೋಲುಗೆಲುವುಗಳೇನೇ ಇರಲಿ ಕನ್ನಡಚಿತ್ರರಂಗದಲ್ಲಿ ಬಿಡುವಿಲ್ಲದ ನಟ ಶಿವಣ್ಣ, ಕಾಡಿದ ಅರ್ಬುದವನ್ನು ಗೆದ್ದು ಬಂದರು. ತಾಯಿಯಂತೆ ಮಡದಿ ಗೀತಾ ಅವರು ನಿರ್ಮಾಪಕಿ, ಮಗಳು ನಿವೇದಿತಾ ಕೂಡ. ಕನ್ನಡ ಚಿತ್ರರಂಗದ ದೊಡ್ಮನೆ ಎಂದೇ ಹೆಸರಾಗಿದ್ದ ರಾಜಕುಮಾರ್ ಪರಂಪರೆ ಅವರ ಕುಟುಂಬ ವರ್ಗದ ಮೂಲಕ ಮುಂದುವರಿದಿದೆ.

ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಶಿವಣ್ಣ ಆಗ ಹೇಳಿದ್ದ ‘ಅಪ್ಪಾಜಿಯ ಜನಪ್ರಿಯತೆ, ನನಗೆ ನೆರವಾಗಬಹುದು. ಆದರೆ ನಾನು ಅವರ ಜನಪ್ರಿಯತೆ ಮತ್ತು ಅಭಿನಯದ ಪ್ರಭಾವಳಿಯ ಹೊರಗೆ ಬಂದು ನನ್ನದೇ ಆದ ಇಮೇಜನ್ನು ರೂಪಿಸಿಕೊಳ್ಳಬೇಕು’ ಎನ್ನುವ ಮಾತನ್ನು ನಿಜಮಾಡಿದ್ದಾರೆ.

” ‘ಆನಂದ್’ ಚಿತ್ರ ಸೆಟ್ಟೇರಿ ೪೦ ವರ್ಷಗಳಾದರೂ ಆ ದಿನಗಳು ಈಗಲೂ ಕಣ್ಣಮುಂದೆ ಕಟ್ಟಿದಂತಿದೆ… ‘ಆನಂದ್’ದ ಜೊತೆ ಮತ್ತೆರಡು ಚಿತ್ರಗಳು ರಜತೋತ್ಸವ ಕಂಡು ಹ್ಯಾಟ್ರಿಕ್ ಹೀರೋ ಅನಿಸಿಕೊಂಡ ಶಿವಣ್ಣ ಅದಾಗಲೇ ನೂರು ಚಿತ್ರಗಳನ್ನು ಪೂರೈಸಿ ವರ್ಷಗಳಾದವು.”

 

 

ಆಂದೋಲನ ಡೆಸ್ಕ್

Recent Posts

ಮಾ.23ರಿಂದ ವಿಜೃಂಭಣೆಯ ವೈರಮುಡಿ ಬ್ರಹ್ಮೋತ್ಸವ

ಮೇಲುಕೋಟೆ: ಮಾ.೨೩ರಿಂದ ಏ.೩ರವರೆಗೆ ನಡೆಯುವ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು…

2 hours ago

ಓದುಗರ ಪತ್ರ: ಮೊಬೈಲ್ ಸ್ಟೇಟಸ್ !

ಮೊಬೈಲ್ ಸ್ಟೇಟಸ್ ! ಶಾಲೆಗಳಲ್ಲಿ ಮೊಬೈಲ್ ನಿಷೇಧ..? ಸರ್ಕಾರದ ಮೆಸೇಜ್‌ಗೆ ಲೈಕ್ ನೀಡಬಹುದು ಪೋಷಕರು ! ಆದರೆ, ಸ್ಟೂಡೆಂಟ್‌ಗಳು ?…

2 hours ago

ಓದುಗರ ಪತ್ರ: ಕಿಡಿಗೇಡಿಗಳಿಂದ ವಿದ್ಯಾರ್ಥಿಗಳು ವಿಚಲಿತರಾಗದಿರಿ

ಫೆ.೨೮ರ ಶನಿವಾರದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಎಲ್ಲಾ ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ಪಾಠವನ್ನು ಮುಗಿಸಿ ಮಾದರಿ ಪ್ರಶ್ನೆ ಪತ್ರಿಕೆ…

2 hours ago

ಓದುಗರ ಪತ್ರ; ಸಫಾರಿಗೆ ಅನುಮತಿ ಖಂಡನೀಯ

ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ತಾಲ್ಲೂಕು ವನಸಿರಿಗೆ ಹೆಸರುವಾಸಿ, ಇಲ್ಲಿನ ಉತ್ತಮ ಹವಾಗುಣಕ್ಕೆ ಸನಿಹದಲ್ಲೇ ಇರುವ ಅರಣ್ಯ ಪ್ರದೇಶ ಕೂಡ…

2 hours ago

ತಂಪಾದ ಕೊಡಗಿನಲ್ಲಿಯೂ ಹೆಚ್ಚುತ್ತಿದೆ ತಾಪ

ನವೀನ್ ಡಿಸೋಜ ೩೦ ಡಿಗ್ರಿ ಸೆಲ್ಸಿಯಸ್ ದಾಟುತ್ತಿರುವ ತಾಪಮಾನ; ಅಗತ್ಯ ಮುನ್ನೆಚ್ಚರಿಕೆಗೆ ವೈದ್ಯರ ಸಲಹೆ ಮಡಿಕೇರಿ: ಫೆಬ್ರವರಿ ತಿಂಗಳು ಕೊನೆಗೊಳ್ಳುತ್ತಿರುವಂತೆಯೇ…

3 hours ago

ಜೀವವೂ ಉಳಿಯಬೇಕು, ಜೀವನೋಪಾಯವೂ ನಡೆಯಬೇಕು

ಸಫಾರಿ ಪುನಾರಂಭದ ಸಂಬಂಧ ‘ಆಂದೋಲನ’ ದಿನಪತ್ರಿಕೆಯು ನಡೆಸಿದ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಇದಕ್ಕೆ ಪೂರಕವಾಗಿ ಪತ್ರಿಕೆ ನಡೆಸಿದ…

3 hours ago