ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು ಚಿತ್ರೋತ್ಸವಗಳಲ್ಲಿ ಅತ್ಯಂತ ಮಹತ್ವಪೂರ್ಣವಾದ ಉತ್ಸವ ಇದು ಎನ್ನಲಾಗುತ್ತಿದೆ. ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ ಈಗ ಬಹುತೇಕ ಗ್ಲಾಮರ್ ಲೋಕವನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿದೆ. ಗೋವಾದಲ್ಲಿ ಇದಕೆ ಶಾಶ್ವತ ನೆಲೆ ಸಿಕ್ಕಿದ ನಂತರದ ಬೆಳವಣಿಗೆ ಇದು.
ಚಲನಚಿತ್ರ ಸಂಸ್ಕೃತಿಯ ಗಂಧಗಾಳಿಯೂ ಇಲ್ಲದ ಗೋವಾದಲ್ಲಿ ೨೦೦೪ರಲ್ಲಿ ಭಾರತದ ಚಿತ್ರೋತ್ಸವ ನೆಲೆಕಂಡಿತು. ಚಿತ್ರೋತ್ಸವ ನಿರ್ದೇಶನಾಲಯವೂ ಸೇರಿದಂತೆ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕೈಕೆಳಗಿದ್ದ ಸಿನಿಮಾ ಸಂಬಂಧಪಟ್ಟ ವಿಭಾಗಗಳನ್ನು, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಸಿ)ದ ಅಡಿಯಲ್ಲಿ ತರಲಾಯಿತು. ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಸುವ ಜವಾಬ್ದಾರಿಯೂ ಅದರ ಪಾಲಿನದಾಯಿತು. ರಾಷ್ಟ್ರಪ್ರಶಸ್ತಿಗಾಗಿ ಪ್ರತ್ಯೇಕ ಘಟಕ ಇದೆ.
ಭಾರತೀಯ ಚಿತ್ರರಂಗದಲ್ಲಿ ಹೊಸ ರೀತಿಯ ಚಿತ್ರ ಪರಂಪರೆಗೆ ಒತ್ತಾಸೆಯಾಗಿದ್ದ ಎನ್‌ಎಫ್‌ಡಿಸಿ, ಈಗ ಜನಪ್ರಿಯ, ಲಾಭದಾಯಕ ಚಿತ್ರಗಳ ಕಡೆಗೆ ಗಮನ ಹರಿಸುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ, ಅದಕ್ಕೆ ಸಾಕ್ಷಿ ಎನ್ನುವಂತೆ, ಮಕ್ಕಳ ಚಿತ್ರ ಸಮಾಜ ನಡೆಸುತ್ತಿದ್ದ ಗೋಲ್ಡನ್ ಎಲಿಫೆಂಟ್ ಮಕ್ಕಳ ಚಿತ್ರೋತ್ಸವ ಕೆಲವು ವರ್ಷಗಳಿಂದ ನಡೆದಿಲ್ಲ. ಮಕ್ಕಳ ಚಿತ್ರಗಳ ನಿರ್ಮಾಣಕ್ಕೆ ನೀಡುತ್ತಿದ್ದ ನೆರವೂ ನಿಂತಂತಿದೆ. ಈ ಕಾರಣದಿಂದಲೇ ಗೋವಾದಲ್ಲಿ ನಡೆಯುತ್ತಿರುವ ಭಾರತದ ಚಿತ್ರೋತ್ಸವ ಮುಂದೆ ಗೋವಾ, ಅಲ್ಲಿನ ಪ್ರವಾಸೋದ್ಯಮಕ್ಕೆ ಸೀಮಿತವಾದರೆ ಆಶ್ಚರ್ಯವಿಲ್ಲ. ಮುಂಬೈನಲ್ಲಿ ನಡೆಯುತ್ತಿದ್ದ ಚಿತ್ರೋತ್ಸವ ಈ ಬಾರಿ ರದ್ದಾಗಿದೆ.
ಇದನ್ನು ಓದಿ: ನಾಳೆಯಿಂದ ಮಡಿಕೇರಿಯಲ್ಲಿ ಕೂರ್ಗ್ ಕಾರ್ನಿವಲ್
ಕೊಲ್ಕತ್ತಾದ ಚಿತ್ರೋತ್ಸವಕ್ಕೆ ಈಗ ರಾಜ್ಯ ಸರ್ಕಾರದ ಬೆಂಬಲವೂ ಸಿಕ್ಕಿದೆ. ಇತ್ತೀಚೆಗೆ ಅದರ ೩೧ನೇ ಆವೃತ್ತಿ ಮುಕ್ತಾಯವಾಗಿದೆ. ಅಲ್ಲಿನ ಚಿತ್ರಗಳ ಆಯ್ಕೆ ಮತ್ತು ಸಂಘಟನೆಯ ಕುರಿತಂತೆ ಅಪಸ್ವರಗಳಿವೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಿದ್ಧತೆಗೆ ಸಾಕಷ್ಟು ಕಾಲಾವಕಾಶ ಸಿಗದೆ ಇರುವುದು ಹೊರದೇಶಗಳಿಂದ ಸಿನಿಮಾ ತಜ್ಞರನ್ನು ಕರೆಸಲು ಕಷ್ಟವಾಗುತ್ತದೆ,ಅವರ ವೀಸಾ ಮತ್ತಿತರ ಕೆಲಸಗಳು ಸಾಕಷ್ಟು ಕಾಲಾವಕಾಶ ಬೇಡುತ್ತದೆ. ಸಿನಿಮಾಗಳ ಆಯ್ಕೆಯ ವಿಷಯದಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಆದರೆ ಈ ಮಾತನ್ನು ಸ್ಪರ್ಧೆಗೆ ಆಯ್ಕೆಯಾಗುವ ಕನ್ನಡ ಚಿತ್ರಗಳ ಕುರಿತಂತೆ ಹೇಳುವುದು ಕಷ್ಟ. ಕೆಲವು ಆವೃತ್ತಿಗಳಲ್ಲಿ ಒಳ್ಳೆಯ ಕೆಲವು ಚಿತ್ರಗಳು ಸ್ಪರ್ಧೆಯ ಅವಕಾಶದಿಂದ ವಂಚಿತವಾದವು ಎನ್ನುವ ಆರೋಪದಲ್ಲಿ ಹುರುಳಿಲ್ಲದೆ ಇಲ್ಲ. ಕೇರಳದಲ್ಲಿ ಈ ಬಾರಿ ಚಿತ್ರೋತ್ಸವದ ವೇಳೆ ಎರಡು ಮೂರು ಪ್ರಮುಖ ಬೆಳವಣಿಗೆಗಳಾಗಿವೆ. ೨೦೧೭ರ ಫೆಬ್ರವರಿ ೧೭ರಂದು ರಾತ್ರಿ, ಡಬ್ಬಿಂಗ್ ಮುಗಿಸಿ ತೆರಳುತ್ತಿದ್ದ ಜನಪ್ರಿಯ ನಟಿಯೊಬ್ಬರ ಮೇಲೆ ದಾರಿಯಲ್ಲಿ ನಡೆದ ಅತ್ಯಾಚಾರ, ಆ ಕುರಿತು ಆಕೆ ನೀಡಿದ ದೂರು, ಕೇಸು… ಅದರ ತೀರ್ಪು ಬಂದದ್ದು ಡಿಸೆಂಬರ್ ೮ರಂದು. ಇಡೀ ಪ್ರಕರಣದ ಹಿಂದೆ ಇದ್ದಾರೆ ಎಂದು ಆರೋಪಿಸಲಾಗಿದ್ದ ನಟ ದಿಲೀಪ್ ನಿರ್ದೋಷಿ ಎಂದು ನ್ಯಾಯಾಲಯ ನೀಡಿದ ತೀರ್ಪು ಸಾಕಷ್ಟು ವಿವಾದಕ್ಕೆ ದಾರಿಮಾಡಿಕೊಟ್ಟಿತ್ತು.
ಸ್ವತಃ ಆ ನಟಿಯೇ, ತನ್ನ ಇನ್‌ಸ್ಟಾಗ್ರಾಮಿನಲ್ಲಿ ಅದನ್ನು ಪ್ರಕಟಿಸಿದ್ದರು. ನ್ಯಾಯಾಲಯದಲ್ಲಿ ಆ ಕೇಸನ್ನು ನಿರ್ವಹಿಸುತ್ತಿದ್ದ ಮಹಿಳಾ ನ್ಯಾಯ ಮೂರ್ತಿಗಳ ವರ್ತನೆಯಿಂದ ತನಗೆ ಸಂಪೂರ್ಣವಾಗಿ ನ್ಯಾಯ ಸಿಗಲಾರದು ಎಂದು ಅಂದೇ ಅನಿಸಿತ್ತು, ಪಾತಕಿಗಳಿಗೆ ಶಿಕ್ಷೆಯಾಗಿದೆ, ಅದರ ಹಿಂದೆ ಇದ್ದವರಿಗೆ ಆಗಿಲ್ಲ, ತನ್ನ ಹೋರಾಟ ಮುಂದುವರಿಯಲಿದೆ ಎಂದು ಆಕೆ ಅಲ್ಲಿ ಹೇಳಿದ್ದಾರೆ. ಚಿತ್ರೋತ್ಸವದಲ್ಲಿ ಪಾಲ್ಗೊಂಡ ಪ್ರತಿನಿಧಿಗಳಲ್ಲಿ ಹಲವರು, ತಾವು ‘ಅವಳೊಡನೆ’ ಇರುವುದಾಗಿ ಪುರುಚ್ಛರಿಸಿದ ಪ್ರಸಂಗ ಅಲ್ಲಿ ನಡೆಯಿತು. ಲೈಂಗಿಕ ದೌರ್ಜನ್ಯದ ವಿರುದ್ಧ ಅವರು ನಡೆಸಿದ ದೀರ್ಘಕಾಲದ ಕಾನೂನು ಹೋರಾಟ ಮತ್ತು ಧೈರ್ಯಕ್ಕಾಗಿ ಅವರನ್ನು ‘ಹೋರಾಟದ ಸಂಕೇತ’ ಎಂದು ಮೂರು ವರ್ಷಗಳ ಹಿಂದೆ ಅವರನ್ನು ಇದೇ ಚಿತ್ರೋತ್ಸವದ ಉದ್ಘಾಟನೆಗೆ ದೀಪ ಬೆಳಗಲು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕೇರಳದ ಸಾಂಸ್ಕೃತಿಕ ಸಚಿವರು ಅವರನ್ನು ‘ಕೇರಳದ ಮಾದರಿ’(Role model of Kerala) ಎಂದು ಬಣ್ಣಿಸಿದ್ದರು. ಅವರೊಂದಿಗೆ ಕುರ್ದಿಶ್ ಚಲನಚಿತ್ರ ನಿರ್ಮಾಪಕಿ ಲಿಸಾ ಚಾಲನ್ ವೇದಿಕೆಯನ್ನು ಹಂಚಿಕೊಂಡಿದ್ದು, ಆ ವರ್ಷದ ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವ ಬೇರೆ ದೇಶಗಳ ಚಿತ್ರಗಳು ಸೆನ್ಸಾರ್ ಆಗಿರುವುದಿಲ್ಲ. ಅದಕ್ಕೆ ವಿಶೇಷ ಅನುಮತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ನೀಡುತ್ತದೆ. ಚಿತ್ರೋತ್ಸವ ಸಂಘಟಕರು ತಾವು ಪ್ರದರ್ಶಿಸಲಿರುವ ಚಿತ್ರದ ವಿವರಗಳನ್ನು ಅಲ್ಲಿಗೆ ಕಳುಹಿಸಿ, ಅನುಮತಿ ಪಡೆಯಬೇಕು. ಕೇರಳ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಚಿತ್ರಗಳಿಗೆ ಅನುಮತಿಗಾಗಿ ಬರೆದು, ಪ್ರದರ್ಶನ ವೇಳಾಪಟ್ಟಿ ಸಿದ್ಧವಾಗಿತ್ತು. ಆದರೆ ಕೆಲವು ಚಿತ್ರಗಳಿಗೆ ಕೇಂದ್ರದ ಅನುಮತಿ ನಿರಾಕರಿಸಲಾಗಿತ್ತು ಎಂದು ಸಂಘಟಕರು ಹೇಳಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರದ ಅನುಮೋದನೆಗಾಗಿ ಕಾಯದೆ ವೇಳಾಪಟ್ಟಿಯ ಪ್ರಕಾರ ಎಲ್ಲಾ ಚಲನಚಿತ್ರಗಳನ್ನು ಪ್ರದರ್ಶಿಸುವಂತೆ ಆಯೋಜಕರಿಗೆ ನಿರ್ದೇಶಿಸಿದ್ದು, ಸುದ್ದಿಯಾಗಿದೆ.
ಸೆರ್ಗೆಯ್ ಐಸೆನ್‌ಸ್ಟೈನ್ ಅವರ ೧೯೨೫ರ ಚಲನಚಿತ್ರ ‘ಬ್ಯಾಟಲ್‌ಶಿಪ್ ಪೊಟೆಮ್‌ಕಿನ್’, ‘ಒನ್ಸ್ ಅಪಾನ್ ಎ ಟೈಮ್ ಇನ್ ದೀಸ್ ಗಾಜಾ’, ‘ಪ್ಯಾಲೆಸ್ಟೆ ನ್ ೩೬’, ‘ಎ ಪೊಯೆಟ್: ಅನ್‌ಕನ್ಸೆ ಲ್ಡ್‌ಪೊಯೆಟ್ರಿ, ಬೀಫ್, ಕ್ಲಾಷ್’, ‘ವಾಜಿಬ್’, ‘ಆಲ್ ದಟ್ ಈಸ್ ಲೆಫ್ಟ್ ಆಫ್ ಯು’ ಮತ್ತು ‘ಸಂತೋಷ್’ ಸೇರಿದಂತೆ ೧೯ ಚಿತ್ರಗಳಿಗೆ ಅನುಮತಿ ನೀಡಿರಲಿಲ್ಲ. ಕೇಂದ್ರದ ಇಂತಹ ನಿರ್ಬಂಧಗಳು ಚಲನಚಿತ್ರೋತ್ಸವಗಳ ಆಯೋಜನೆಗೆ ಅಪಾಯವನ್ನುಂಟು ಮಾಡುತ್ತವೆ, ಅದನ್ನು ವಿರೋಧಿಸಬೇಕು ಎನ್ನುವ ಮಾತೂ ಅಲ್ಲಿ ಕೇಳಿಬಂತು. ಈ ಬೆಳವಣಿಗೆಯ ವಿರುದ್ಧ ಚಿತ್ರೋತ್ಸವದ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು! ಈ ಮಧ್ಯೆ, ನಾಲ್ಕು ಚಿತ್ರಗಳಿಗೆ ಅನುಮತಿ ದೊರೆತಿದೆ. ಚಿತ್ರಗಳ ಕುರಿತ ಪೂರ್ಣ ಮಾಹಿತಿ ಇಲ್ಲದ ಕಾರಣ ಅನುಮತಿ ನೀಡಿರಲಿಲ್ಲ ಎಂದು ಕೇಂದ್ರ ಹೇಳಿದೆ. ತಕ್ಷಣವೇ ಅನುಮತಿ ನೀಡುವಂತೆ ಸಂಸದ ಶಶಿ ತರೂರು ಒತ್ತಾಯಿಸಿದ್ದರು.
ಇದನ್ನು ಓದಿ: ಮುಡಾ ಅಕ್ರಮ : ತೆರೆಗೆ ಸರಿದ ದೇಸಾಯಿ ಆಯೋಗದ ವರದಿ
ಚಿತ್ರೋತ್ಸವದಲ್ಲಿ ಕನ್ನಡದ ಎರಡು ಚಿತ್ರಗಳು ಪ್ರದರ್ಶನಕ್ಕಿದ್ದವು. ಚಿತ್ರೋತ್ಸವದ ಮಹತ್ವದ ಚಿತ್ರಗಳಲ್ಲಿ ಒಂದು ಅಲ್ಲಿನ ಮಾಧ್ಯಮಗಳು ಹೇಳಿದ ‘ವಾಘಾಚಿಪಾನಿ’ ಅವುಗಳಲ್ಲಿ ಒಂದು. ಈ ಚಿತ್ರ ಬರ್ಲಿನ್ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗಿತ್ತು. ‘ಪೆಡ್ರೋ’ ಮೂಲಕ ಪರಿಚಯವಾದ ನಟೇಶ್ ಹೆಗ್ಡೆ ನಿರ್ದೇಶನದ ಚಿತ್ರ. ಅದು ಬೂಸಾನ್‌ನಲ್ಲಿ ಸ್ಪರ್ಧೆಯಲ್ಲಿ ಗೆದ್ದದ್ದು ಮಾತ್ರವಲ್ಲ, ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿತ್ತು. ರಿಷಭ್ ಶೆಟ್ಟಿ ನಿರ್ಮಾಣದ ಆ ಚಿತ್ರದ ನಂತರ ‘ವಾಘಾಚಿ ಪಾನಿ’ ಚಿತ್ರವನ್ನೂ ಅವರೇ ನಿರ್ಮಿಸಿದ್ದರು. ಆದರೆ ಅದರ ಪ್ರಚಾರ ಮತ್ತಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಸಾಧ್ಯ; ಕಾಂತಾರದ ಕೆಲಸ ಇದೆ ಎಂದು, ಆ ಚಿತ್ರದ ಸಂಪೂರ್ಣ ಹಕ್ಕುಗಳನ್ನು ನಿರ್ಮಾಪಕರಾಗಿ ಅನುರಾಗ್ ಕಶ್ಯಪ್ ಮತ್ತು ರಂಜನ್ ಸಿಂಗ್ ಪಡೆದಿದ್ದಾರೆ. ಅದು ಕೆಲಿಡೋಸ್ಕೋಪ್ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಆಯ್ಕೆಯಾದ ಇನ್ನೊಂದು ಚಿತ್ರ ‘ಅಮ್ಮಂಗ್ ಹೇಳ್ಬೇಡಿ’. ಅನೂಪ್ ಲೋಕೂರ್ ನಿರ್ದೇಶನದ ಈ ಚಿತ್ರ ಭಾರತೀಯ ಚಿತ್ರಗಳ ವಿಭಾಗದಲ್ಲಿ ಆಯ್ಕೆಯಾಗಿದೆ. ಬೂಸಾನ್ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಆದ ಈ ಚಿತ್ರದ ಕುರಿತೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ದೇಶವಿದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಈ ಚಿತ್ರಗಳಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ವೇದಿಕೆ ಸಿಗುತ್ತಿಲ್ಲ ಎನ್ನುವ ಆರೋಪವನ್ನು ಈ ಹಿಂದೆ ಸಾಮಾಜಿಕ ತಾಣಗಳಲ್ಲಿ ಕಲಾತ್ಮಕ ಚಿತ್ರಗಳ ನಿರ್ದೇಶಕರು ಮಾಡಿದ್ದರು. ಕಲಾತ್ಮಕ ಚಿತ್ರಗಳ ಪರಂಪರೆಯನ್ನು ಉತ್ತೇಜಿಸುವ ಬದಲು, ಅವುಗಳ ಅಸ್ತಿತ್ವವನ್ನೇ ಅಲುಗಾಡಿಸುವ ಬೆಳವಣಿಗೆಗಳೂ ಆಗುತ್ತಿವೆ. ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುಖ್ಯವಾಹಿನಿ ಚಿತ್ರಗಳ ಮೇಲೆ ಇರುವ ವ್ಯಾಮೋಹ ಈ ಚಿತ್ರಗಳ ಮೇಲೆ ಇಲ್ಲ. ಚಿತ್ರಮಂದಿರಗಳಲ್ಲಿ ತೆರೆಗೆ ಬರಬೇಕಾದರೆ, ಈ ದಿನಗಳಲ್ಲಿ ಅದರ ಪ್ರಚಾರಕ್ಕೆ ಅವು ನಿರ್ಮಾಣಕ್ಕೆ ವ್ಯಯಿಸಿದ ಮೊತ್ತಕ್ಕಿಂತ ಹೆಚ್ಚು ಹಣ ವ್ಯಯಿಸಬೇಕು ಬೇರೆ ಹೊರದಾರಿ ಇಂತಹ ಚಿತ್ರಗಳಿಗೆ ಇದ್ದಂತಿಲ್ಲ. ರಾಷ್ಟ್ರಪ್ರಶಸ್ತಿಗಳು ಮುಖ್ಯವಾಹಿನಿಮುಖಿ ಆಗತೊಡಗಿದೆ. ಕಾನೂನು ವಿರೋಧಿ, ಸಮಾಜದ್ರೋಹದ ಚಿತ್ರಗಳನ್ನು ಪ್ರಶಸ್ತಿ ನೀಡುವ ಮೂಲಕ ಓಲೈಸಿದ ಪ್ರಸಂಗ, ಈ ಪ್ರಶಸ್ತಿ ಎತ್ತ ಹೆಜ್ಜೆ ಇಡುತ್ತಿದೆ ಎನ್ನುವುದಕ್ಕೆ ಜ್ವಲಂತ ನಿದರ್ಶನ. ಸರ್ಕಾರಿ ಒಟಿಟಿ ವೇವ್ಸ್‌ನಲ್ಲೂ ಹಿಂದಿಯೇತರ ಚಿತ್ರಗಳಿಗೆ ಆದ್ಯತೆ ಕಡಿಮೆ ಎನ್ನುವ ಮಾತು ಕೇಳತೊಡಗಿದೆ. ಹಿಂದೆಲ್ಲ ಪ್ರಶಸ್ತಿವಿಜೇತ ಚಿತ್ರಗಳ ಪ್ರಸಾರವನ್ನು ದೂರದರ್ಶನ ಮಾಡುತ್ತಿತ್ತು. ಈಗ ಅದು ನಿಂತಿದೆ. ಚಿತ್ರೋತ್ಸವಗಳ ಮೂಲ ಉದ್ದೇಶಕ್ಕೆ ಎರವಾಗದೆ ಇದ್ದರೆ ಅಲ್ಲಿ ಇಂತಹ ಚಿತ್ರಗಳಿಗೆ ಅವಕಾಶ ಸಾಧ್ಯ.
” ಕಲಾತ್ಮಕ ಚಿತ್ರಗಳ ಪರಂಪರೆಯನ್ನು ಉತ್ತೇಜಿಸುವ ಬದಲು, ಅವುಗಳ ಅಸ್ತಿತ್ವವನ್ನೇ ಅಲುಗಾಡಿಸುವ ಬೆಳವಣಿಗೆಗಳೂ ಆಗುತ್ತಿವೆ. ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುಖ್ಯವಾಹಿನಿ ಚಿತ್ರಗಳ ಮೇಲೆ ಇರುವ ವ್ಯಾಮೋಹ ಈ ಚಿತ್ರಗಳ ಮೇಲೆ ಇಲ್ಲ”
-ವೈಡ್ ಆಂಗಲ್
ಬಾ.ನಾ.ಸುಬ್ರಹ್ಮಣ್ಯ
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…
ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…
ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…
ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್ ಸುತಾರ್ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…
ನವೀನ್ ಡಿಸೋಜ ೨ನೇ ಬಾರಿಗೆ ನಡೆಯುವ ಪ್ರವಾಸಿ ಉತ್ಸವಕ್ಕೆ ಸಿದ್ಧತೆ; ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಸಹಭಾಗಿತ್ವ ಮಡಿಕೇರಿ: ಡಿ.೨೦…