2026-27 ಶೈಕ್ಷಣಿಕ ವರ್ಷದಿಂದಲೇ ಮೂರನೇ ತರಗತಿಯಲ್ಲಿ ‘ಕೃತಕ ಬುದ್ಧಿ ಮತ್ತೆ’ (Artificial intelligence) ವಿಷಯದ ಭಾಷೆಯೊಂದಿಗೆ ಕಲಿಸಲು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಪ್ರಕಟಿಸಿದೆ. ನಾಳಿನ ನಾಗರಿಕರಿಗೆ ಅತ್ಯಂತ ಅವಶ್ಯಕತೆಯಾಗಿರುವ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಗಳ ಕಲಿಯುವಿಕೆಯ ಪ್ರಾರಂಭಿಕ ಪಾಠಗಳನ್ನು ಎಳೆ ವಯಸ್ಸಿನಿಂದಲೇ ಮಕ್ಕಳಿಗೆ ಹೇಳಿಕೊಡುವ ಕೇಂದ್ರ ಸರ್ಕಾರದ ನಿರ್ಧಾರ ಒಳ್ಳೆಯದೇ. ಬರುವ ಮೇ ತಿಂಗಳ ಒಳಗಾಗಿ ದೇಶದಲ್ಲಿಯ ಪ್ರತಿಯೊಂದು ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿಗೆ ಈ ವಿಷಯ ಕಲಿಸಲು ತರಬೇತಿಕೊಟ್ಟು ತಯಾರಿ ಮಾಡಿಕೊಳ್ಳಬೇಕಾಗಿದೆ.
ದೇಶದಲ್ಲಿ ಒಟ್ಟು ಒಂದು ಕೋಟಿಗೂ ಹೆಚ್ಚು ಶಿಕ್ಷಕ, ಶಿಕ್ಷಕಿಯರಿದ್ದು, ಅವರೆಲ್ಲರಿಗೂ ಈ ಬಗ್ಗೆ ತರಬೇತಿ ಕೊಟ್ಟು ಮುಂದಿನ ವರ್ಷಗಳಿಗಾಗಿ ಸಜ್ಜುಗೊಳಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ಅದಕ್ಕೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವುದಲ್ಲದೇ ಶಾಲೆಗಳಿಗೆ ಇದಕ್ಕೆ ಅವಶ್ಯವಿರುವ ಪುಸ್ತಕಗಳು ಮತ್ತು ಸಾಧನ ಸಲಕರಣೆಗಳನ್ನು ಒದಗಿಸಬೇಕಾಗುತ್ತದೆ. ರಾಜ್ಯ ಸರ್ಕಾರಗಳೂ ಇದಕ್ಕೆ ಸಂಬಂಧಿಸಿದಂತೆ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಅವುಗಳು ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿದ್ದು, ಜನಜೀವನದ ನೇರ ಸಂಪರ್ಕದಲ್ಲಿರುತ್ತವೆ.
ಕಾಲೇಜುಗಳಲ್ಲಿಯೂ ಬಿ.ಎ., ಬಿ.ಎಸ್ಸಿ ಮತ್ತು ಬಿ.ಕಾಂ. ಪದವಿಗಳನ್ನು ಕೃತಕ ಬುದ್ಧಿಮತ್ತೆಯನ್ನು ಒಂದು ಕಡ್ಡಾಯ ವಿಷಯವನ್ನಾಗಿ ಪಠ್ಯಕ್ರಮದಲ್ಲಿ ಅಳವಡಿಸಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಅದಕ್ಕಾಗಿ ಪಠ್ಯ ಸೂಚಿ ಮತ್ತು ಪಠ್ಯ ಕ್ರಮ ತಯಾರಾಗಬೇಕು. ಪಠ್ಯಪುಸ್ತಕಗಳು ಮತ್ತು ಪೂರಕ ಓದಿಗಾಗಿ ವಿಷಯ ಪುಸ್ತಕಗಳು ಮತ್ತು ಬೆಳವಣಿಗೆಯನ್ನು ತಿಳಿಯಲು ವಿಷಯದ ಪತ್ರಿಕೆಗಳು ಪ್ರಕಟವಾಗಬೇಕಾಗುತ್ತದೆ. ಮಾನವಾಭಿವೃದ್ಧಿಗಾಗಿ ಹೊಸದನ್ನು ಸ್ವೀಕರಿಸಿ ಅಳವಡಿಸಿಕೊಳ್ಳುವುದು ಅನಿವಾರ್ಯ. ಅದು ನಡೆಯುತ್ತಿರುತ್ತದೆ. ಆದರೆ ಹೊಸದು ಬಂದಾಗ ನಿರೀಕ್ಷೆಗಳು, ಭಯ, ಆತಂಕ ಮತ್ತು ಬದಲಾವಣೆಯ ಪರಿಣಾಮಗಳ ಅನಿಶ್ಚಿತತೆಗಳು ಉಂಟಾಗುವುದು ಸ್ವಾಭಾವಿಕ. ಸ್ಥಾಪಿತ ವ್ಯವಸ್ಥೆಗೆ ಧಕ್ಕೆಯಾಗಿ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳುಂಟಾಗಬಹುದೆಂಬ ಭಯವೂ ಬದಲಾವಣೆಯ ಹಂತದಲ್ಲಿ ಇರುತ್ತದೆ.
ಇದನ್ನು ಓದಿ : ‘ಕೆರೆ ತುಂಬಿಸುವವರೆಗೂ ಧರಣಿ ಕೈಬಿಡಬೇಡಿ’
ಹೊಸದರ ಅಳವಡಿಕೆ ಮುಂದುವರಿದಂತೆ ಅನುಕೂಲಗಳೇ ಹೆಚ್ಚಾಗಿ ಸಕಾರಾತ್ಮಕ ಬೆಳವಣಿಗೆಗಳು ಹೆಚ್ಚಾದಂತೆ ಎಲ್ಲರೂ ಹೊಂದಿಕೊಳ್ಳುತ್ತಾರೆ ಮತ್ತು ಅಭಿವೃದ್ಧಿಯ ರಥ ಮುಂದುವರಿಯುತ್ತದೆ. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಮತ್ತು ಯಾಂತ್ರೀಕರಣ ಹೆಚ್ಚಾದಾಗಲೂ ದೊಡ್ಡ ಪ್ರಮಾಣದಲ್ಲಿ ಆತಂಕಗಳು ಉಂಟಾಗಿದ್ದವು. ಉದ್ಯೋಗಾವಕಾಶಗಳು ಕುಸಿಯಬಹುದೆಂದೂ ಸಾಮಾಜಿಕ ಅಸಮತೋಲನ ಹೆಚ್ಚಾಗಬಹುದೆಂದೂ ಜನರು ಆತಂಕಕ್ಕೀಡಾಗಿದ್ದರು. ಆದರೆ ಹೊಸ ಗಾಳಿಯನ್ನು ಯಾರೂ ತಡೆಯಲಿಕ್ಕಾಗದು. ಇದು ಎಲ್ಲ ದೇಶಗಳಿಗೂ ಎಲ್ಲ ಸಮಯದಲ್ಲೂ ಅನ್ವಯಿಸುತ್ತದೆ. ಯಾಂತ್ರೀಕರಣದ ಮತ್ತು ಕೈಗಾರಿಕಾ ಕ್ರಾಂತಿಯ ಸಕಾರಾತ್ಮಕ ಪರಿಣಾಮಗಳು ಹೆಚ್ಚಾದಂತೆಲ್ಲಾ ಎಲ್ಲ ಆತಂಕಗಳು ಮಾಯವಾದವು. ಕೈಗಾರಿಕಾ ಬೆಳವಣಿಗೆ ಮಾನವನ ಜೀವನ ಸುಧಾರಣೆಗೆ ಕಾರಣವಾಯಿತು.
ಕೃತಕ ಬುದ್ಧಿಮತ್ತೆ ಮಾನವ ಕಲ್ಯಾಣಕ್ಕೆ ಆವಶ್ಯಕ ಕಳೆದೆರಡು ದಶಕಗಳಿಂದಲೂ ಕೃತಕ ಬುದ್ಧಿಮತ್ತೆ ಮತ್ತು ಮೆಶಿನ್ ಲರ್ನಿಂಗ್ ಬಗ್ಗೆ ಚರ್ಚೆಗಳು ನಡೆದಿವೆ. ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗವೂ ಸೇರಿ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಚರ್ಚೆಗಳು ನಡೆದು ವರದಿಗಳು ಸಲ್ಲಿಸಲ್ಪಟ್ಟಿವೆ. ಕೃತಕ ಬುದ್ಧಿಮತ್ತೆ ಅಥವಾ ಎಐ ಅಳವಡಿಸಿಕೊಳ್ಳುವುದರಿಂದ ಭಾರತದಲ್ಲಿ ತಂತ್ರಜ್ಞಾನ ವಲಯದಲ್ಲಿಯೇ (Technology -Tech) ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಳ್ಳುತ್ತಾರೆ ಎಂಬ ಆತಂಕವನ್ನು ಮೊದಲು ವ್ಯಕ್ತಪಡಿಸಲಾಗಿತ್ತು. ಕೆಲವರಿಗೆ ಅನುಕೂಲವಾದರೆ ಹಲವರಿಗೆ ಅನನುಕೂಲವಾಗುತ್ತದೆ ಎಂದೂ ಹೇಳಲಾಗಿತ್ತು.
ಯಾವಾಗಲೂ ಹೊಸದನ್ನು ಅಳವಡಿಸಿಕೊಳ್ಳುವಾಗ ಸಣ್ಣಪುಟ್ಟ ಏರುಪೇರುಗಳಾಗುವುದು ಸಹಜ. ಹಾಗೆಂದ ಮಾತ್ರಕ್ಕೆ ಹೊಸತನ ಬೇಡವೆಂದು ಹೇಳಲಿಕ್ಕಾಗುವುದಿಲ್ಲ. ಅಲ್ಲದೆ ಯಾವುದೇ ಉದ್ಯೋಗ ವ್ಯವಹಾರ ಅಥವಾ ಕೈಗಾರಿಕೆ ಇರಲಿ ಇದರಲ್ಲಿ ಕೃಷಿ ಚಟುವಟಿಕೆಗಳನ್ನೂ ಸೇರಿಸಬೇಕು. ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಉನ್ನತೀಕರಣಗೊಳಿಸಿಕೊಳ್ಳುತ್ತಿರಬೇಕು. ಅದಿಲ್ಲದಿದ್ದರೆ ತಮ್ಮ ವ್ಯವಹಾರದಲ್ಲಿ ಉತ್ಪಾದಕತೆ ಹೆಚ್ಚಿಸಲಿಕ್ಕಾಗುವುದಿಲ್ಲ, ಬದಲಾಗಿ ಉತ್ಪಾದಕತೆ ಕುಸಿಯಬಹುದು. ಕೃತಕ ಬುದ್ಧಿಮತ್ತೆಯ ವಿಷಯಕ್ಕೆ ಬಂದರೆ ಅದನ್ನು ಅಳವಡಿಸಿಕೊಂಡರೆ ಉತ್ಪಾದಕತೆ ಹೆಚ್ಚಾಗುವುದು ಖಚಿತ.
ಅದೇ ಸಮಯದಲ್ಲಿ ಕೃತಕ ಬುದ್ಧಿಮತ್ತೆ ಗೊತ್ತಿಲ್ಲದವರು ಕೆಲಸ ಕಳೆದುಕೊಳ್ಳಬಹುದು. ಅವರೇ ಅದನ್ನು ಕಲಿತುಮರಳಿ ಕೆಲಸಕ್ಕೆ ಬಂದರೆ ಹೆಚ್ಚಿನ ಜವಾಬ್ದಾರಿ ನಿರ್ವವಹಿಸಿ ಹೆಚ್ಚು ಆದಾಯ ಪಡೆಯಬಹುದು. ಆಗ ದೇಶದಲ್ಲಿ ಹೆಚ್ಚುವರಿ ನಲವತ್ತು ಲಕ್ಷ ಹೆಚ್ಚುವರಿ ತಂತ್ರಜ್ಞಾನ ಕೆಲಸಗಳನ್ನು ಬರುವ ಐದು ವರ್ಷಗಳಲ್ಲಿ ಸೃಷ್ಟಿ ಮಾಡಬಹುದೆಂದು ಇತ್ತೀಚಿನ ನೀತಿ ಆಯೋಗದ ವರದಿ ಹೇಳುತ್ತದೆ.
ಇದನ್ನು ಓದಿ: ದಾಖಲೆ ಪ್ರಮಾಣದಲ್ಲಿ ತಮಿಳುನಾಡಿಗೆ ಹರಿದ ನೀರು
ಈ ಹೊಸ ತಂತ್ರಜ್ಞಾನಗಳ ಕೆಲಸಗಳೂ ಸೇರಿ ಅರ್ಥ ವ್ಯವಸ್ಥೆಯಲ್ಲಿ ಕೋಟಿಗಟ್ಟಲೆ ಇತರ ಕೆಲಸ ಮತ್ತು ಉದ್ಯೋಗಗಳಿಗೆ ಕಾರಣವಾಗಬಹುದು. ಇದರಿಂದ ಸರಕುಗಳು ಮತ್ತು ಸೇವೆಗಳ ಉತ್ಪಾದನೆ ಮತ್ತು ಪೂರೈಕೆ ಹೆಚ್ಚಾಗಿ ಜನರ ಆದಾಯ, ತನ್ಮೂಲಕ ರಾಷ್ಟ್ರೀಯ ಆದಾಯ ಹೆಚ್ಚಾಗುತ್ತದೆ. ಹೀಗೆನ್ನುತ್ತಾರೆ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು. ದೇಶದ ಪ್ರಗತಿಯ ವೇಗ ಇನ್ನಷ್ಟು ತೀವ್ರಗೊಳ್ಳಬೇಕಾದರೆ ಕೃತಕ ಬುದ್ಧಿಮತ್ತೆಯ ಉಪಯೋಗ ಅನಿವಾರ್ಯ ಆದ್ದರಿಂದ ಸರ್ಕಾರ (Catch them young) (ಎಳೆ ವಯಸ್ಸಿನಲ್ಲಿ ಹಿಡಿದುಕೊಳ್ಳಿರಿ) ಎಂಬ ಮಾತಿನಂತೆ ಮೂರನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆಯ ಅ ಆ ಇ ಈ ಕಲಿಸಲು ಮುಂದಾಗಿದೆ. ಈ ವಿಷಯದಲ್ಲಿ ಸಂಘ ಸಂಸ್ಥೆಗಳಿಂದ ಮತ್ತು ಉದ್ದಿಮೆಗಳಿಂದ ಸಲಹೆ ಸೂಚನೆಗಳನ್ನೂ ಮುಕ್ತ ಮನಸ್ಸಿನಿಂದ ಆಹ್ವಾನಿಸಿದೆ. ಒಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ಬಗ್ಗೆ ಸರ್ಕಾರ ತೆಗೆದುಕೊಂಡ ನಿರ್ಧಾರ ಸೂಕ್ತವಾಗಿದೆ.
” ಯಾವಾಗಲೂ ಹೊಸದನ್ನು ಅಳವಡಿಸಿಕೊಳ್ಳುವಾಗ ಸಣ್ಣಪುಟ್ಟ ಏರುಪೇರುಗಳಾಗುವುದು ಸಹಜ. ಹಾಗೆಂದ ಮಾತ್ರಕ್ಕೆ ಹೊಸತನ ಬೇಡವೆಂದು ಹೇಳಲಿಕ್ಕಾಗುವುದಿಲ್ಲ.”
-ಪ್ರೊ.ಆರ್.ಎಂ.ಚಿಂತಾಮಣಿ
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…