ಶಿವಾಜಿ ಗಣೇಶನ್ ಅವರ ವಾರದ ಅಂಕಣ
ದೇವರು, ಧರ್ಮ ಮತ್ತು ಪುರಾಣಗಳ ಗೊತ್ತಿಲ್ಲದ ಮತ್ತು ಅನುಮಾನಗೊಂಡ ಹಾಗೂ ಅರ್ಥವಾಗದ ವಿಷಯಗಳ ಬಗೆಗೆ ಪ್ರಶ್ನಿಸಿದರೆ ನಮ್ಮ ಹಿಂದಿನ ತಲೆಮಾರಿನ ಹಿರಿಯರು, ಋಷಿ ಮೂಲವನ್ನು ಮತ್ತು ನದಿ ಮೂಲವನ್ನು ಕೇಳಬಾರದು ಎಂದು ಹೇಳುವ ಮೂಲಕ ನಮಗೆ ಸತ್ಯದ ದರ್ಶನ ಮಾಡಿಸುತ್ತಿರಲಿಲ್ಲ. ಯಾವುದೇ ಸ್ಪಷ್ಟನೆ ಇಲ್ಲದೆ ಹೇಳಿದ್ದನ್ನು ನಂಬಬೇಕು ಎನ್ನುವ ವಾತಾವರಣವಿತ್ತು. ಹೆಚ್ಚು ಕೆದಕಿ ಕೇಳಿದರೆ ಈ ಹಿರಿಯರಿಂದ ಬರುತ್ತಿದ್ದ ಉತ್ತರ, ನೀನು ತಲೆಹರಟೆ ಎಂದು. ಹೀಗಾಗಿ ನಮ್ಮಲ್ಲಿ ಪ್ರಶ್ನಿಸುವ ಮನೋಧರ್ಮವನ್ನು ಎಳೆಯರಿದ್ದಾಗಲೇ ಚಿವುಟಿ ಹಾಕುವ ಮತ್ತು ಹತ್ತಿಕ್ಕುವ ಪರಂಪರೆ ಇದ್ದಿತ್ತಾದರೂ ಅದು ಈಗಲೂ ಮುಂದುವರಿದಿರುವುದು ವಿಪರ್ಯಾಸ. ಆದರೆ ಇದಕ್ಕೆ ತದ್ವಿರುದ್ಧವಾಗಿ ಬದುಕಿದ ವೈeನಿಕ ಚಿಂತನೆಯನ್ನು ಮೈಗೂಡಿಸಿಕೊಂಡು ಎಪ್ಪತ್ತರ ದಶಕದಲ್ಲಿ ಸತ್ಯಸಾಯಿ ಬಾಬಾ ಅವರ ಪವಾಡಗಳನ್ನು ಪ್ರಶ್ನಿಸುತ್ತಿದ್ದ ಎಚ್.ನರಸಿಂಹಯ್ಯ ಅವರು ಪ್ರಶ್ನಿಸದೆ ಏನನ್ನೂ ನಂಬಬಾರದು ಎನ್ನುವ ವೈಚಾರಿಕ ಚಿಂತನೆಯನ್ನು ಹುಟ್ಟು ಹಾಕಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರೂ, ಬೆಂಗಳೂರಿನ ನ್ಯಾಷನಲ್ ಕಾಲೇಜು ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಅವರು ತಮ್ಮ ಜೀವಿತಾವಧಿಯಲ್ಲಿ ಕಾಲೇಜಿನ ಕೊಠಡಿಯೊಂದರಲ್ಲಿಯೇ ಸರಳವಾಗಿ ಬದುಕಿದರು. ಅವರ ಕೊಠಡಿಯನ್ನು ಪ್ರವೇಶಿಸಿದ ಕೂಡಲೇ ಎದುರಿನ ಗೋಡೆಯ ಮೇಲೆ ಕಾಣಿಸುತ್ತಿದ್ದದ್ದು ಬೃಹದಾಕಾರದ ಪ್ರಶ್ನಾರ್ಥಕ ಚಿಹ್ನೆ. ಈ ಸಂಕೇತದ ಮಾರ್ಮಿಕ ಉದ್ದೇಶ ಪ್ರಶ್ನಿಸಬೇಕು ಎನ್ನುವುದಾಗಿತ್ತು.ಆ ಕೊಠಡಿಯ ಗೋಡೆಯ ಮೇಲೆ ಆ ಬರಹ ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಇಂದು ಪ್ರಶ್ನಿಸಿ ನಂಬುವವರಿಗಿಂತ ಪ್ರಶ್ನಿಸದೇ ನಂಬುವವರ ಸಂಖ್ಯೆ ಮೊದಲಿನಂತೆಯೇ ಹೆಚ್ಚಿರುವುದನ್ನು ಎಲ್ಲೆಡೆ ಕಾಣುತ್ತೇವೆ.
ನಮ್ಮದು ಪ್ರಜಪ್ರಭುತ್ವ ರಾಷ್ಟ್ರ. ಇಲ್ಲಿ ಆಡಳಿತವನ್ನು ಪ್ರಶ್ನಿಸುವ ಸ್ವಾತಂತ್ರ್ಯ ಇದ್ದರೆ ಅಲ್ಲಿ ನಿಜವಾದ ಜನತಂತ್ರ ವ್ಯವಸ್ಥೆ ಕ್ರಿಯಾಶೀಲವಾಗಿದೆ ಎಂದೇ ಅರ್ಥ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ಹತ್ತು ವರ್ಷಗಳ ಮೇಲೆ ಆಗಿ ಹೋದವು. ಅವರು ತಮ್ಮ ಆಡಳಿತ ವೈಖರಿಯನ್ನು ಪ್ರಶ್ನಿಸಿದವರಿಗೆಲ್ಲ ಒಂದೊಂದು ಹೆಸರನ್ನು ಹೇಳುತ್ತಾ ತಮ್ಮ ಆಣಿಮುತ್ತುಗಳನ್ನು ಉದುರಿಸುತ್ತಿzರೆ. ಪದಕೋಶಗಳಿಗೆ ಹೊಸ ಹೊಸ ಪದಗಳನ್ನು ಸೇರಿಸುತ್ತಾ ಬಂದಿದ್ದಾರೆ. ಮೋದಿ ಅವರು ಪ್ರಧಾನಿ ಆಗುವ ಮುನ್ನ ಹಿಂದಿನ ಯಾವ ಪ್ರಧಾನಿಯೂ ಕೂಡ ತಮ್ಮನ್ನು ತಮ್ಮ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವವರನ್ನು ಮರುಪ್ರಶ್ನಿಸುತ್ತಿರಲಿಲ್ಲ. ಹಾಗೆ ಪ್ರಶ್ನಿಸುವವರಿಗೆ ಮತ್ತು ತಮ್ಮ ಆಡಳಿತವನ್ನು ಟೀಕಿಸುವವರನ್ನು ಹೀಗಳೆಯುವುದಾಗಲಿ ಅಥವಾ ಅವರನ್ನು ಬೇರೊಂದು ಹೆಸರಿನಲ್ಲಿ ಅನುಮಾನ ಮತ್ತು ಕುಹಕದಿಂದ ನೋಡಿದ ಉದಾಹರಣೆಗಳಾಗಲಿ ಇಲ್ಲ. ಟೀಕೆ, ವಿಮರ್ಶೆ ಮತ್ತು ಸಾಧನೆಯ ಹೊಗಳಿಕೆ ಜನತಂತ್ರದ ಜೀವಾಳ. ಇಂದಿರಾ ಗಾಂಧಿ ಅವರ ಆಡಳಿತ ವೈಖರಿಯನ್ನು ಪ್ರಶ್ನಿಸುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಸರ್ವಾಧಿಕಾರಿ, ದುರ್ಗೆ ಎಂದೆ ಬಣ್ಣಿಸುತ್ತಿದ್ದರು.
ಏರ್ ಇಂಡಿಯಾದಲ್ಲಿ ಪೈಲಟ್ ಆಗಿ ಆ ಹುದ್ದೆಯನ್ನು ತೊರೆದು ರಾಜಕೀಯ ಪ್ರವೇಶಿಸಿದ ಒಂದೆರಡು ವರ್ಷಗಳ ತನ್ನ ತಾಯಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಾದಾಗ ಅವರ ಉತ್ತರಾಧಿಕಾರಿಯಂತೆ ಪ್ರಧಾನಿ ಪಟ್ಟಕ್ಕೇರಿದ್ದ ರಾಜೀವ್ ಗಾಂಧಿ ಅವರ ಆಡಳಿತ ಶೈಲಿ ಕಂಡು ಆಗಷ್ಟೇ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗಡೆ ಅವರು ಯಾರು ಈ ರಾಜೀವ್ ಎಂದು ಪ್ರಶ್ನಿಸಿದ್ದರು. ದೇಶದಲ್ಲಿ ಏನೇ ಸಮಸ್ಯೆ ಎದುರಾದರೂ ತಮ ಗರಿವಿಲ್ಲದಂತ ತಟಸ್ಥರಂತಿರುತ್ತಿದ್ದ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರನ್ನು ಮೌನಿಬಾಬಾ ಎಂದೇ ಕರೆಯಲಾಗುತ್ತಿತ್ತು. ಎಚ್.ಡಿ. ದೇವೇಗೌಡರು ಅಂದಿನ ವಿಶೇಷ ಪರಿಸ್ಥಿತಿಯಲ್ಲಿ ಪ್ರಧಾನಿ ಸ್ಥಾನಕ್ಕೆ ಏರಿದಾಗ ಅವರನ್ನು ಹೆಗಡೆ ಅವರು ಇವರೊಬ್ಬ ದೇಹಾತಿ ಅಂದರೆ ಹಳ್ಳಿಗ, ಒರಟ ಎನ್ನುವ ಅರ್ಥದಲ್ಲಿ ಹೀಗಳೆದರು.
ಇದೇ ರೀತಿಯಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ವಿರುದ್ಧ ಬಂದ ಟೀಕೆಯ ಹಿನ್ನೆಲೆಯಲ್ಲಿ ತಮ್ಮ ಬದಲಿಗೆ ಅಚ್ಚರಿಯ ಪ್ರಧಾನಿಯಾಗಿ ನೇಮಕಗೊಂಡು ಹತ್ತು ವರ್ಷ ಆಡಳಿತ ನಡೆಸಿದ ಡಾ. ಮನಮೋಹನ್ ಸಿಂಗ್ ಅವರನ್ನೂ ಹಲವರು ಮೌನಿ ಪ್ರಧಾನಿ, ಸೋನಿಯಾ ಅವರ ಎಲ್ಲ ಪರೋಕ್ಷ ಸೂಚನೆಗೆ ಕೋಲೆಬಸವನಂತೆ ತಲೆಯಾಡಿಸುವ ಪ್ರಧಾನಿ ಎಂದು ಮೂದಲಿಸಿದರು. ಅವರ ಪ್ರತಿಯೊಂದು ಆಡಳಿತ ಕ್ರಮವನ್ನೂ ಒಬ್ಬ ಮುಖ್ಯಮಂತ್ರಿಯಾಗಿ ವ್ಯಂಗ್ಯ ಮತ್ತು ಕುಹಕವಾಡಿದ ನರೇಂದ್ರ ಮೋದಿ ಅವರ ವಿರುದ್ಧ ಒಂದು ಮಾತೂ ಆಡಲಿಲ್ಲ. ಈ ಯಾವ ಪ್ರಧಾನಿಗಳೂ ತಮ್ಮನ್ನು ವೈಯಕ್ತಿಕವಾಗಿ ಮತ್ತು ತಮ್ಮ ಆಡಳಿತದ ಬಗೆಗೆ ಯಾರು ಏನೇ ಟೀಕೆ ಟಿಪ್ಪಣಿ ಮಾಡಿದರೂ ಅವರನ್ನು ಪ್ರತಿಯಾಗಿ ಮೂದಲಿಸಲಿಲ್ಲ. ಎಲ್ಲ ಟೀಕೆ ಮತ್ತು ಆರೋಪಗಳನ್ನು ಸಕಾರಾತ್ಮವಾಗಿ ತೆಗೆದುಕೊಂಡದ್ದು ಅವಶ್ಯವಿzಗ ಸ್ಪಷ್ಟನೆ ನೀಡುತ್ತಿದ್ದರು. ಇಂತಹ ಸಹನೆಯನ್ನು ನಮ್ಮ ದೇಶದ ರಾಜಕೀಯ ಇತಿಹಾಸದಲ್ಲಿ ಕಂಡಿದ್ದೇವೆ.
ಆದರೆ ಈ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ತಮ್ಮನ್ನು ಮತ್ತು ತಮ್ಮ ಆಡಳಿತ ವೈಖರಿಯನ್ನು ಟೀಕಿಸುವವರನ್ನು ಜನತಾಂತ್ರಿಕವಾಗಿ ಪ್ರತಿಭಟಿಸುವ ಮಂದಿಯನ್ನು ಹತ್ತು ಹಲವು ಹೆಸರುಗಳಲ್ಲಿ ಕರೆದು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿರುವುದನ್ನು ಕಾಣುತ್ತೇವೆ. ಮೋದಿ ಅಲ್ಪಸಂಖ್ಯಾತರ ವಿರೋಧಿ ಮತ್ತು ಕೋಮುವಾದಿ ಆಡಳಿತ ಎಂದವರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದರು. ತಮ್ಮ ಆಡಳಿತದ ಬಗೆಗೆ ಅತೃಪ್ತಿ ವ್ಯಕ್ತಪಡಿಸಿ ವಿರೋಧ ಮಾಡಿದವರನ್ನು ದೇಶ ದ್ರೋಹಿಗಳು ಎಂದರು. ತಿಂಗಳುಗಟ್ಟಲೆ ತಮ್ಮ ಬೇಡಿಕೆಯ ಈಡೇರಿಕೆಗಾಗಿ ಹೋರಾಟ ಮಾಡಿದ ಪಂಜಬ್ ರೈತರನ್ನು ಆಂದೋಲನ ಜೀವಿಗಳು ಎಂದರು. ನಗರಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟಿಸಿದವರನ್ನು ನಗರ ನಕ್ಸಲರು ಎಂದು ಛೇಡಿಸಿದರು. ಈಗಲೂ ತಮ್ಮ ಆಡಳಿತವನ್ನು ವಿರೋಧಿಸುತ್ತಿರುವ ಬುದ್ಧಿಜೀವಿ ವರ್ಗ, ಸ್ವತಂತ್ರ ಚಿಂತನೆಯ ವಿಚಾರವಂತರನ್ನು ಮತ್ತು ಸಂವಿಧಾನದ ಲಕ್ಷ್ಮಣ ರೇಖೆ ದಾಟಿದಾಗ ಅಸಮಾಧಾನ ವ್ಯಕ್ತಪಡಿಸುವ ಮತ್ತದೇ ಬುದ್ಧಿಜೀವಿಗಳ ಮತ್ತು ಹೋರಾಟಗಾರರನ್ನು ದಿಮಾಗಿ ನಕ್ಸಲರು ಎಂದು ಹೀಗಳೆಯುವ ಮೂಲಕ ಆಗಿಂದ್ದಾಗ್ಗೆ ತಮ್ಮ ಪದಪುಂಜವನ್ನು ಉದುರಿಸುತ್ತಿರುವುದಕ್ಕೆ ಈಗ ಸಾರ್ವಜನಿಕವಾಗಿ ಟೀಕೆ ಮತ್ತು ಹೊಸ ಹೊಸ ವ್ಯಾಖ್ಯಾನಗಳು ಹುಟ್ಟಿಕೊಳ್ಳುತ್ತಿವೆ. ಮೋದಿ ಅವರು ತಮ್ಮ ವಿರುದ್ಧದ ಟೀಕೆಗಳಿಗೆ ಅಸಹನೆ ಇರಬಹುದು. ಆದರೆ ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಮತ್ತು ಆರೋಪಗಳನ್ನು ಸಹಿಸಿಕೊಳ್ಳುವ ತಾಳ್ಮೆ ಮತ್ತು ತಮ್ಮ ಹಾಗೂ ಆಡಳಿತದ ವಿರುದ್ಧ ಬರುವ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮವಾಗಿ ತೆಗೆದುಕೊಳ್ಳುವವನೇ ಜಣ್ಮೆಯ ಆಡಳಿತಗಾರ.
ಏನಿದು ದಿಮಾಗಿ ನಕ್ಸಲರು?: ಅಂದರೆ ತಮ್ಮ ಆಡಳಿತದ ಬಗೆಗೆ ಅಸಹನೆ ಹೊಂದಿರುವ ವ್ಯವಸ್ಥೆಯನ್ನು ಪ್ರಶ್ನಿಸುವವರನ್ನು ಮೋದಿ ನಕ್ಸಲೀಯ ಮನಸ್ಥಿತಿ ಉಳ್ಳವರು ಎಂದು ಕರೆದಿರುವುದಾಗಿ ವ್ಯಾಖ್ಯಾನಿಸಲಾಗುತ್ತಿದೆ. ಕಾನೂನು ಸಚಿವ ಕಿರಣ್ ರಿಜುಜು ಪ್ರಧಾನಿ ಮೋದಿ ಅವರ ಈ ಹೇಳಿಕೆ ವಿರೋಧ ಪಕ್ಷಗಳ ನಾಯಕರಿಗೆ ಅನ್ವಯಿಸಿದ್ದಲ್ಲ. ಈ ವ್ಯವಸ್ಥೆಯನ್ನು ಸಹಿಸಲಾರದ ಜನರಿಗೆ ಅವರ ಮಾತು ಅನ್ವಯಿಸುತ್ತದೆ ಎಂದಿದ್ದಾರೆ. ಶಸ್ತ್ರ ಇಟ್ಟುಕೊಂಡು ಹೋರಾಡುತ್ತಾ ದೇಶದ ಅದರಲ್ಲೂ ಹಳ್ಳಿಗಾಡಿನ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಶಸಸಜ್ಜಿತ ನಕ್ಸಲೀಯರನ್ನು ಈಗ ಮುಗಿಸಿದ್ದೇವೆ. ಆದರೆ ಈ ದಿಮಾಗಿ ನಕ್ಸಲೀಯರು ಹಿಂದಿನ ಕಾಂಗ್ರೆಸ್ ಆಡಳಿತ ಇದೀಗ ಎಲ್ಲ ಆಡಳಿತಾಂಗದಲ್ಲಿ ಬುದ್ಧಿಜೀವಿಗಳು, ತಜ್ಞರು ಎನ್ನುವ ವೇಷಧಾರಿಗಳಾಗಿ ಒಳಹೊಕ್ಕಿದ್ದರು. ಇಂತಹ ದಿಮಾಗಿ ನಕ್ಸಲೀಯರು ಶಸ್ತ್ರಸಜ್ಜಿತ ನಕ್ಸಲೀಯರಿಗಿಂತ ಹೆಚ್ಚು ಅಪಾಯಕಾರಿಗಳು. ಜನರು ಇವರ ಬಗೆಗೆ ಎಚ್ಚರವಾಗಿರಬೇಕೆಂದು ಕೆಂಪುಕೋಟೆಯ ಮೇಲೆ ನಿಂತು ಸ್ವಾತಂತ್ರ್ಯ ದಿನದಂದು ಮಾಡಿದ ಭಾಷಣ ಈಗ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ. ದೆಹಲಿಯ ಕೇಂದ್ರ ಸರ್ಕಾರ ಇರಬಹುದು ಅಥವಾ ರಾಜ್ಯ ಸರ್ಕಾರಗಳಿರಬಹುದು ನಿತ್ಯವೂ ಒಂದಲ್ಲ ಒಂದು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುತ್ತವೆ. ಅದು ಸಾಮಾನ್ಯ ಆಡಳಿತವಿರಬಹುದು, ಶೈಕ್ಷಣಿಕ ವಿಷಯದಂತಹ ತ್ರಿಭಾಷಾ ಸೂತ್ರ, ರಾಷ್ಟ್ರೀಯ ಶಿಕ್ಷಣ ನೀತಿ, ದೇಶದ ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಆರ್ಥಿಕ ನೀತಿ, ಕೃಷಿ, ನೀರಾವರಿ, ಅರಣ್ಯ ಮತ್ತು ಪರಿಸರ, ಸಾಮಾಜಿಕ ನ್ಯಾಯ ಮತ್ತು ವಿದೇಶಾಂಗ ನೀತಿ ಇರಬಹುದು, ರಾಜ್ಯಗಳ ಬಗೆಗೆ ತೆಗೆದುಕೊಳ್ಳುವ ರಾಜಕೀಯ ನೀತಿ ಮತ್ತು ವಿವಿಧ ವಿಷಯಗಳನ್ನು ಕುರಿತ ಕಾಯ್ದೆ ಕಾನೂನುಗಳಿರಬಹುದು ಅವುಗಳನ್ನೆಲ್ಲ ಪ್ರಶ್ನಿಸುವುದು, ವಿಮರ್ಶಿಸುವುದು ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರನ್ನು, ಹಾಗೆಯೇ ವಿಷಯ ತಜ್ಞರು ಮತ್ತು ತಮಗಾಗುವ ಅನ್ಯಾಯವನ್ನು ಪ್ರಶ್ನಿಸಿ ಪ್ರತಿಭಟಿಸುವವರನ್ನು ದಿಮಾಗಿ ನಕ್ಸಲರು ಎಂದು ಕರೆಯಲಾದೀತೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳು, ಸಮಾಜದ ಓರೆ ಕೋರೆಗಳನ್ನು ಜನರು ಪ್ರಶ್ನಿಸದೆ, ಪ್ರತಿರೋಧ ವ್ಯಕ್ತಪಡಿಸದೆ ಟೀಕೆ ಟಿಪ್ಪಣಿ ಮತ್ತು ಪ್ರತಿಭಟನೆಗೆ ಅವಕಾಶವಿಲ್ಲವಾದರೆ ಅದು ನಿಜವಾದ ಜನತಂತ್ರ ವ್ಯವಸ್ಥೆಯಾಗಲಾರದು. ಏನೇ ಆದರೂ ಪ್ರಶ್ನಿಸದೆ ಮೌನವಾದರೆ ಆಡಳಿತ ನಡೆಸುವವರು ಸರ್ವಾಧಿಕಾರಿಗಳಾಗುತ್ತಾರೆ. ಪ್ರಜಪ್ರಭುತ್ವ ವ್ಯವಸ್ಥೆಯು ಎಲ್ಲರನ್ನೂ, ಎಲ್ಲ ವಿರೋಧ ಮತ್ತು ಪ್ರತಿಭಟನೆಗಳನ್ನು ಒಳಗೊಂಡಾಗಲೇ ಅದು ಯಶಸ್ವಿ ಪ್ರಜಪ್ರಭುತ್ವ ಎನಿಸಿಕೊಳ್ಳಲು ಸಾಧ್ಯ.
” ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳು, ಸಮಾಜದ ಓರೆ ಕೋರೆಗಳನ್ನು ಜನರು ಪ್ರಶ್ನಿಸದೆ, ಪ್ರತಿರೋಧ ವ್ಯಕ್ತಪಡಿಸದೆ, ಟೀಕೆ ಟಿಪ್ಪಣಿ ಮತ್ತು ಪ್ರತಿಭಟನೆಗೆ ಅವಕಾಶವಿಲ್ಲವಾದರೆ ಅದು ನಿಜವಾದ ಜನತಂತ್ರ ವ್ಯವಸ್ಥೆಯಾಗಲಾರದು. ಏನೇ ಆದರೂ ಪ್ರಶ್ನಿಸದೆ ಮೌನವಾದರೆ ಆಡಳಿತ ನಡೆಸುವವರು ಸರ್ವಾಧಿಕಾರಿಗಳಾಗುತ್ತಾರೆ.”
ನಂಜನಗೂಡು ತಾಲ್ಲೂಕು ಬಾಗೂರು ಅಣೆಕಟ್ಟೆ ದೊಡ್ಡ ಅಣೆಕಟ್ಟೆಯಾಗಿದೆ. ಹಿಂದೆ ಅನೇಕ ಹಳ್ಳಿಗಳಿಗೆ ಕೋಡಿ ತುಂಬಿ ಯಥೇಚ್ಛವಾಗಿ ಇದರಿಂದ ನೀರು ಹರಿದು…
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ…
ಸಾಂಸ್ಕೃತಿಕ ನಗರಿ, ಅರೆಮನೆ ನಗರಿ, ಸ್ವಚ್ಛನಗರಿ, ಹಿರಿಯ ನಾಗರಿಕರ ಸ್ವರ್ಗ ಎಂದೆಲ್ಲಾ ಹೆಸರುವಾಸಿಯಾಗಿರುವ ಮೈಸೂರಿನಲ್ಲೂ ಈಗಿನ ಕಾನೂನು ವ್ಯವಸ್ಥೆಯ ಬಗ್ಗೆ…
ರಾಮನಾಥ ಎಸ್. ಹೆಚ್.ಕೆ.ದ್ವಾರಕಾನಾಥ್, ಕರ್ನಾಟಕ ರಂಗಭೂಮಿಗೆ ರಂಗಭೀಷ್ಮ ಬಿ.ವಿ.ಕಾರಂತರಿತ್ತ ಕೊಡುಗೆ. ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ಓದುತ್ತಾ, ಬದುಕಿಗಾಗಿ ಬವಣೆಪಡುತ್ತಾ,…
ಶೇಷಾದ್ರಿ ಗಂಜೂರು ದೆಹಲಿಯ ಜಂತರ್ ಮಂತರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಬಳಕೆ ಯಾದ ‘ಅಸಭ್ಯ ಭಾಷೆ’ ಅದರಲ್ಲೂ ಹುಡುಗಿಯರು…
ಅಕ್ಷತಾ ಆಗಸ್ಟ್ ೨೧, ಕೇರಳದ ಕೋಝಿಕ್ಕೋಡ್‌ನ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಓಣಂ ಹಬ್ಬದ ಆಚರಣೆಗೆ ಅಣಿಯಾಗುತ್ತಿದ್ದರು. ಅಂದಿನ ರಾತ್ರಿ ಓಣಂ…