ಹಾಡು ಪಾಡು

ಗಲಿವರನ ಕಥೆಯಲ್ಲಿ ಕಂಡ ಜಂತರ್ ಮಂತರ್ ಹುಡುಗಿ

ಶೇಷಾದ್ರಿ ಗಂಜೂರು

ದೆಹಲಿಯ ಜಂತರ್ ಮಂತರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಬಳಕೆ ಯಾದ ‘ಅಸಭ್ಯ ಭಾಷೆ’ ಅದರಲ್ಲೂ ಹುಡುಗಿಯರು ಬಳಸಿದ್ದು! ರಾಷ್ಟ್ರೀಯ ತುರ್ತಿನ ವಿಷಯವಾಗಿ, ಕೊನೆಗೆ ಹದಿನೈದು ವರ್ಷದ ಬಾಲಕಿಯೊಬ್ಬಳು ಇಡೀ ರಾಷ್ಟ್ರದ ಕ್ಷಮೆ ಕೋರುವಂತಾದಾಗ ನಾನು ಐರ್ಲ್ಯಾಂಡಿನ ಪ್ರವಾಸದಲ್ಲಿದ್ದೆ. ಸಣ್ಣ ಹುಡುಗಿಯೊಬ್ಬಳು ಕ್ಷಮೆ ಕೇಳುವ ಆ ವಿಡಿಯೋ ನಾನು ನೋಡಿದ್ದು ಡಬ್ಲಿನ್ನಿನ ಟ್ರಿನಿಟಿ ಕಾಲೇಜಿನ ಪ್ರಾಂಗಣದಲ್ಲಿ. ವಿಡಂಬನೆ ನನಗೆ ಅತ್ಯಂತ ಇಷ್ಟದ ಸಾಹಿತ್ಯ ಪ್ರಕಾರ. ಜಾನಥನ್ ಸ್ವಿಫ್ಟ್ ಮತ್ತು ಆಸ್ಕರ್ ವೈಲ್ಡ್ ಈ ಸಾಹಿತ್ಯದ ಧ್ರುವ ತಾರೆಗಳು. ನಾನು ಅಪಾರವಾಗಿ ಮೆಚ್ಚುವ ಸಾಹಿತಿಗಳು ಸಹ. ಟ್ರಿನಿಟಿ ಕಾಲೇಜು, ಈ ಇಬ್ಬರೂ ಓದಿದ ಕಾಲೇಜು.

ಸ್ವಿಫ್ಟ್ ಹೆಸರನ್ನು ನಾನು ಮೊದಲ ಬಾರಿಗೆ ಕೇಳಿದ್ದು ಸುಮಾರು ಐವತ್ತು ವರ್ಷಗಳಿಗೂ ಹಿಂದೆ. ನಾನು ಆಗಷ್ಟೇ ಶಾಲೆಗೆ ಹೋಗಲಾರಂಭಿಸಿದ್ದಾಗ. ನಮ್ಮ ಚಿಕ್ಕಪ್ಪ ನನಗೆ ಹೇಳುತ್ತಿದ್ದ ಗಲಿವರನ ಯಾತ್ರೆಗಳ ಕಥೆಗಳ ಮೂಲಕ. ಆಗ, ಆ ಕಥೆ, ನನಗೆ ಕೇವಲ ಒಂದು ಮಹಾ ಕುತೂಹಲದ ಸಾಹಸ ಗಾಥೆ ಮಾತ್ರ. ಗಲಿವರ-ಲಿಲ್ಲಿಪುಟ್ಟರ ಕಥೆ ಯಾರಿಗೆ ತಾನೇ ಇಷ್ಟವಾಗದು?! ಅದನ್ನು ಬರೆದವನು ಇದೇ ಜಾನಥನ್ ಸ್ವಿಫ್ಟ್.

ಗಲಿವರನ ಈ ಕಥೆಯಲ್ಲಿ ನನಗಂತೂ ಎಂದೂ ಮರೆಯಲಾಗದ ಒಂದು ಪ್ರಸಂಗವಿದೆ. ಒಂದು ರಾತ್ರಿ, ಆರು ಅಂಗುಲದ ಲಿಲ್ಲಿಪುಟ್ಟರ ರಾಣಿಯ ಅರಮನೆಯ ಕಿಟಕಿಯ ಕರ್ಟನ್ನಿಗೆ ಬೆಂಕಿ ತಗುಲಿ ಇಡೀ ಅರ ಮನೆಯೇ ಹೊತ್ತಿ ಉರಿಯುವ ಸನ್ನಿವೇಶ ಉಂಟಾಗುತ್ತದೆ. ಆ ಬೆಂಕಿಯನ್ನು ನಂದಿಸಲು ಲಿಲ್ಲಿಪುಟ್ಟರು ಅಲ್ಲಿಂದಿಲ್ಲಿಗೆ ತಡಬಡಾಯಿಸುತ್ತಿದ್ದಾಗ, ಗಲಿವರ್, ಆ ಅರಮನೆಯ ಮೇಲೆ ಮೂತ್ರ ಮಾಡಿ ಆ ಜ್ವಾಲೆಯನ್ನು ನಂದಿಸುತ್ತಾನೆ. ಈ ಪ್ರಸಂಗವನ್ನು ನಾನು ನಮ್ಮ ಚಿಕ್ಕಪ್ಪನಿಂದ ಮೊದಲ ಬಾರಿಗೆ ಕೇಳಿದಾಗ ಮೂಡಿದ ಆ ನಗು-ಸೋಜಿಗ ನನ್ನಲ್ಲಿನ್ನೂ ಮಾಸಿಲ್ಲ. ಸಣ್ಣ ಹುಡುಗನಾಗಿದ್ದಾಗ ನನಗೆ ನಗೆ ತರಲು, ಮೂತ್ರ ಹುಯ್ದು ಅರಮನೆ ರಕ್ಷಿಸುವ ಕಥೆಯಷ್ಟೇ ಸಾಕಿತ್ತು. ಆದರೆ ಇಂದು, ಬೆಂಕಿ ನಂದಿಸಿದ ನಂತರದಲ್ಲಿ ಗಲಿವರನಿಗೆ ಏನಾಯಿತೆನ್ನುವುದು ನಮಗೆ ಮುಖ್ಯವಾಗಬೇಕು.

ಬೆಂಕಿಯನ್ನು ನಂದಿಸಿದ ಗಲಿವರನ ಮೇಲೆ ಗುರುತರವಾದ ನಾನಾ ಆಪಾದನೆಗಳನ್ನು ಹೊರಿಸಲಾಗುತ್ತದೆ. ಮಹಾರಾಣಿಯ ತಾಣವಾದ ಅರಮನೆಯ ಮೇಲೆ ಮೂತ್ರ ಮಾಡಿದ್ದು ‘ದೇಶವಿರೋಧಿʼ ಕೃತ್ಯವೆನ್ನಲಾಗುತ್ತದೆ. ಮಾನವೀಯ ನೈಸರ್ಗಿಕ ಕ್ರಿಯೆಗಳೆಲ್ಲಾ ನಿಷಿದ್ಧವಾದ ಜಾಗವೊಂದರಲ್ಲಿ ಅವನು ತೋರಿದ ‘ಅಸಭ್ಯತೆ’ ದೈವೀಕ ಕ್ಷೇತ್ರವೊಂದನ್ನು ಅಪವಿತ್ರಗೊಳಿಸುವ ಮಹಾಪರಾಧವಾಗಿ ನ್ಯಾಯಾಲಯ ಅವನಿಗೆ ಮರಣದಂಡನೆಯ ಶಿಕ್ಷೆ ವಿಧಿಸುತ್ತದೆ. ಗಲಿವರ್ ತನ್ನ ಪ್ರಾಣ ಉಳಿಸಿಕೊಳ್ಳಲು ರಾತ್ರಾನುರಾತ್ರಿ ಅಲ್ಲಿಂದ ತಲೆತಪ್ಪಿಸಿಕೊಳ್ಳಬೇಕಾಗುತ್ತದೆ.

ಸ್ವಿಫ್ಟ್‌ನ ಇಡೀ ಗಲಿವರ್ ಯಾತ್ರೆಯ ಕಥನ, ಆ ಕಾಲದ ಬ್ರಿಟಿಷ್ ಅಧಿಕಾರವರ್ಗದ ಕಟು ವಿಡಂಬನೆ. ಆ ಕಾದಂಬರಿ ಪ್ರಕಟವಾಗುವ ಕೆಲ ವರ್ಷಗಳ ಹಿಂದೆ, ಸ್ವಿಫ್ಟ್‌ನ ಇನ್ನೊಂದು ಬರಹ ಅಂದಿನ ಬ್ರಿಟಿಷ್ ರಾಣಿಯ ಕೆಂಗಣ್ಣಿಗೆ ಗುರಿಯಾಗಿತ್ತು. ರಾಣಿಯ ಅರಮನೆಯ ಮೇಲೆ ಗಲಿವರ್ ಮೂತ್ರ ಮಾಡುವುದನ್ನು ಈ ಹಿನ್ನೆಲೆಯೊಂದಿಗೆ ಓದಿದಾಗ ಆ ಪ್ರಸಂಗಕ್ಕೆ ನಾನು ಸಣ್ಣವನಿದ್ದಾಗ ತಿಳಿಯದಿದ್ದ ಹೊಸ ಅರ್ಥವೊಂದು ದೊರಕುತ್ತದೆ.

ಬ್ರಿಟಿಷ್ ಸರ್ಕಾರ ಮತ್ತು ಅಲ್ಲಿನ ನ್ಯಾಯ ವ್ಯವಸ್ಥೆಯ ಬಗ್ಗೆ ಸ್ವಿಫ್ಟ್‌ನ ಇಂತಹ ವಿಡಂಬನೆ ಸಭ್ಯತೆಯ ಎಲ್ಲೆ ಮೀರಿದ್ದೇ?! ಈ ಪ್ರಶ್ನೆ ಅವನನ್ನು ಮತ್ತು ಆ ಪುಸ್ತಕದ ಪ್ರಕಾಶಕರನ್ನೂ ಕಾಡಿರಬೇಕು. ಹೀಗಾಗಿಯೇ, ಅದು ಪ್ರಥಮ ಬಾರಿಗೆ ಪ್ರಕಟವಾದಾಗ ಅದರ ಲೇಖಕ-ಪ್ರಕಾಶಕರ ಹೆಸರಿಲ್ಲದೆಯೇ ಪ್ರಕಟವಾಯಿತು. ಆದರೆ, ಅದು ಎಷ್ಟು ಜನಪ್ರಿಯವಾಯಿತೆಂದರೆ, ಅದರ ಲೇಖಕ, ಪ್ರಕಾಶಕರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ದುಸ್ಸಾಹಸವನ್ನು ಅಂದಿನ ಆ ಸರ್ಕಾರ ಮಾಡಲಿಲ್ಲ.

ಭಾಷೆ ಮುಖ್ಯ; ನಮ್ಮನ್ನು ಮಾನವರನ್ನಾಗಿಸಿರುವುದೇ ಭಾಷೆ. ಅದರ ದುರ್ಬಳಕೆಯ ಬಗ್ಗೆ ಎಚ್ಚರ ಖಂಡಿತಾ ಅತ್ಯಗತ್ಯ. ಬೆದರಿಕೆಗಳು, ದ್ವೇಷ, ಸುಳ್ಳು ಇವೆಲ್ಲಾ- ಅದರಲ್ಲೂ ಅಶಕ್ತರನ್ನು ಗುರಿಯಾಗಿಸಿದಾಗ- ಅಪಾರ ಹಾನಿಕಾರಕ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ, ‘ಅಸಭ್ಯತೆ’ಗೂ ನಾವು ಅಷ್ಟೇ ಪ್ರಾಮುಖ್ಯತೆ ಕೊಡಬೇಕೆ? ಅದರಲ್ಲೂ ಅಂತಹ ಅಸಭ್ಯತೆ ಉಪಯುಕ್ತವಾಗಿದ್ದಾಗ? (ಸ್ವಿಫ್ಟ್‌ನ ‘ಅಸಭ್ಯತೆ’ ಬ್ರಿಟಿಷ್ ಅಧಿಕಾರದ ಅಸಂಬದ್ಧತೆಯನ್ನು ತೋರಿದರೆ, ಗಲಿವರನ ‘ಅಸಭ್ಯತೆ’ ಅಕ್ಷರಶಃ ರಾಣಿಯ ಅರಮನೆಯನ್ನೇ ಉಳಿಸುತ್ತದೆ) ಜಂತರ್ ಮಂತರ್ ಪ್ರತಿಭಟನೆಯ ಹದಿನೈದು ವರ್ಷದ ಆ ‘ಅಸಭ್ಯ’ ಹುಡುಗಿ ಇಡೀ ರಾಷ್ಟ್ರದ ಕ್ಷಮೆ ಕೇಳುವಂತಾಗಿದ್ದು, ಪೊಲೀಸರು ಆಕೆಯ ಮನೆಯ ಬಾಗಿಲು ತಟ್ಟಿದ್ದು, ಕೊನೆಗೆ ಅವಳು ತಲೆಮರೆಸಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಮ್ಮ ಇಂದಿನ ಅಸಂಬದ್ಧತೆಯನ್ನು ತೋರುವುದಿಲ್ಲವೇ?! ನಾನು ಐವತ್ತು ವರ್ಷಗಳ ಹಿಂದೆ ಸೋಜಿಗ-ವಿನೋದದಿಂದ ಮತ್ತೆ-ಮತ್ತೆ ಕೇಳಿದ ಗಲಿವರನ ಕಥೆಗೆ ಈಗ ಸರಿಯಾಗಿ ೩೦೦ ವರ್ಷ; ಅದು ಪ್ರಥಮಬಾರಿಗೆ ಪ್ರಕಟವಾಗಿದ್ದು ೧೭೨೬ರಲ್ಲಿ. ಇದೆಲ್ಲದರ ಬಗ್ಗೆ ಯೋಚಿಸುತ್ತಾ ಟ್ರಿನಿಟಿ ಕಾಲೇಜಿನ ಲೈಬ್ರರಿಯಲ್ಲಿ ಸ್ವಿಫ್ಟ್‌ನ ಪ್ರತಿಮೆಯ ಮುಂದೆ ನಿಂತಿದ್ದಾಗ ಅದರಲ್ಲಿ ಜಂತರ್ ಮಂತರ್ ಹುಡುಗಿ ಕಂಡಂತಾದಳು. ಅಥವಾ ಆ ಪುಟ್ಟ ಹುಡುಗಿ ಗಲಿವರ್ ಇರಬೇಕು.

” ದೆಹಲಿ ಪ್ರತಿಭಟನೆಯ ಹದಿನೈದು ವರ್ಷದ ಆ ಹುಡುಗಿ ಇಡೀ ರಾಷ್ಟ್ರದ ಕ್ಷಮೆ ಕೇಳುವಂತಾಗಿದ್ದು, ಪೊಲೀಸರು ಆಕೆಯ ಮನೆಯ ಬಾಗಿಲು ತಟ್ಟಿದ್ದು, ಕೊನೆಗೆ ಅವಳು ತಲೆಮರೆಸಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಮ್ಮ ಇಂದಿನ ಅಸಂಬದ್ಧತೆಯನ್ನು ತೋರುವುದಿಲ್ಲವೇ?”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

3 hours ago

ಓದುಗರ ಪತ್ರ: ದೀಪಾಲಂಕಾರ ಸಮಿತಿ ಕೆಲಸಕ್ಕೆ ಒಂದು ಸಲಾಂ

ಈ ವರ್ಷದ ದಸರಾ ಮಹೋತ್ಸವದಲ್ಲಿನ ವಿದ್ಯುತ್ ದೀಪಾಲಂಕಾರಗಳು ಪ್ರತಿ ವರ್ಷದಂತೆ ಈ ವರ್ಷವೂ ಜನರ ಮನಸ್ಸನ್ನು ಆಕರ್ಷಿಸುತ್ತಿದೆ. ಅದರಲ್ಲೂ ದೇವರಾಜ…

3 hours ago

ಓದುಗರ ಪತ್ರ: ‘ಈ ಮಾತು’ ಶೋಭೆ ತರುವುದೇ?

‘ಮತ್ತೆ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ’- ಇದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಕುರಿತು…

3 hours ago

ದಾರಿ ತೋರಿದ ರಾಘವೇಂದ್ರ?!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ನನ್ನ ಮನೆಯಲ್ಲಿ ಇಟ್ಟಿದ್ದ ನೋಟಿನ ಕಂತೆಗಳನ್ನು ಪೊಲೀಸ್ ಸಿಬ್ಬಂದಿ ಮತ್ತು ಮಹಜರ್ ಸಾಕ್ಷಿದಾರರು ಎಣಿಸಿದರು.…

3 hours ago

ಮತದಾನದ ಹಕ್ಕು ಕಸಿಯಲು ನಮೂನೆ ೭ ದುರ್ಬಳಕೆ ಆರೋಪ!

ಕೆ.ಎಸ್.ಚಂದ್ರಶೇಖರ ಮೂರ್ತಿ ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ; ಪೊಲೀಸ್ ತನಿಖೆ …

4 hours ago

ಮಳೆ ಬಂದರೆ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಫಜೀತಿ!

ಆರ್.ಎಲ್.ಮಂಜುನಾಥ್ ದಸರಾ ನೋಡಲು ಬಂದವರ ಪಾಡು ಅಯೋಮಯ; ತಾತ್ಕಾಲಿಕ ಶೆಲ್ಟರ್ ಅಳವಡಿಸಲು ಆಗ್ರಹ  ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವದ…

4 hours ago