ಅಂಕಣಗಳು

ಬಿಡುಗಡೆಯಾಗದ ಎಲ್ಲ ಒತ್ತೆಯಾಳುಗಳು : ತಾತ್ಕಾಲಿಕ ಕದನ ವಿರಾಮ ಅಂತ್ಯ, ಮತ್ತೆ ಇಸ್ರೇಲ್‌ ದಾಳಿ

ಡಿ.ವಿ ರಾಜಶೇಖರ

ತಾತ್ಕಾಲಿಕ ಕದನ ವಿರಾಮ ಒಪ್ಪಂದ ಅಂತ್ಯವಾಗುತ್ತಿದ್ದಂತೆ ಇಸ್ರೇಲ್ ಸೇನೆ ಹಮಾಸ್ ಉಗ್ರರನ್ನು ನಾಶ ಮಾಡುವ ‘ದಿಸೆಯಲ್ಲಿ ಶುಕ್ರವಾರದಂದು ಗಾಜಾಪಟ್ಟಿ ಪ್ರದೇಶದ ಮೇಲೆ ಮತ್ತೆ ಬಾಂಬ್ ದಾಳಿ ಆರಂಭಿಸಿದೆ. ಈ ದಾಳಿಯಿಂದಾಗಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿರುವುದಾಗಿ ವರದಿಯಾಗಿದೆ.

ಇಸ್ರೇಲ್ ಯುದ್ಧವನ್ನು ಮತ್ತೆ ಆರಂಭಿಸಿದ್ದರೂ ತಾತ್ಕಾಲಿಕವಾಗಿದ್ದ ಕದನವಿರಾಮವನ್ನು ಶಾಶ್ವತಗೊಳಿಸುವ ದಿಕ್ಕಿನಲ್ಲಿ ಮಾತುಕತೆಗಳು ಮುಂದುವರಿದಿವೆ. ಶಾಶ್ವತ ಕದನ ವಿರಾಮಕ್ಕೆ ಎಲ್ಲ ಒತ್ತೆಯಾಳುಗಳ ಬಿಡುಗಡೆ ಷರತ್ತನ್ನು ಇಸ್ರೇಲ್ ಹಾಕಿತ್ತು. ಇಸ್ರೇಲ್ ಜೈಲುಗಳಲ್ಲಿರುವ ಎಲ್ಲ ಪ್ಯಾಲೆಸ್ಟೈನ್ ಜನರ ಬಿಡುಗಡೆ ಮತ್ತು ಯುದ್ದದಿಂದ ನಿರಾಶ್ರಿತರಾದವರಿಗೆ ಅಗತ್ಯ ಪ್ರಮಾಣದಲ್ಲಿ ಆಹಾರ, ನೀರು, ಔಷಧಿ ಮತ್ತು ನೆಲೆ ಒದಗಿಸಬೇಕೆಂಬ ಷರತ್ತನ್ನು ಹಮಾಸ್ ಉಗ್ರರು ಹಾಕಿದ್ದರು. ಈ ಷರತ್ತುಗಳಿಗೆ ಎರಡೂ ಕಡೆಯವರು ಒಪ್ಪದ ಕಾರಣ ಇದೀಗ ಮತ್ತೆ ಯುದ್ದ ಸಿಡಿದಿದೆ.

ತಾತ್ಕಾಲಿಕ ಕದನ ವಿರಾಮ ಜಾರಿಗೆ ಬಂದ ಏಳು ದಿನಗಳಲ್ಲಿ ಸುಮಾರು ನೂರು ಮಂದಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಮಾಡಿದೆ. ಪ್ರತಿಯಾಗಿ ಇಸ್ರೇಲ್ 240ಕ್ಕೂ ಹೆಚ್ಚು ಮಂದಿ ಪ್ಯಾಲೆಸ್ಟೈನ್‌ ಜನರನ್ನು ಜೈಲುಗಳಿಂದ ಬಿಡುಗಡೆ ಮಾಡಿದೆ. ಇನ್ನೂ 140ಕ್ಕೂ ಹೆಚ್ಚು ಒತ್ತೆಯಾಳುಗಳು ಬಿಡುಗಡೆಯಾಗಬೇಕಿದೆ. ಇದುವರೆಗೆ 13 ಮಂದಿ ಒತ್ತೆಯಾಳುಗಳ ಬಿಡುಗಡೆಗೆ 39 ಮಂದಿ ಪ್ಯಾಲೆಸ್ಟೈನ್ ಜನರ ಬಿಡುಗಡೆ ಸೂತ್ರ ಜಾರಿಯಲ್ಲಿದ್ದು, ಕದನ ವಿರಾಮ ಮುಂದುವರಿದ ಪಕ್ಷದಲ್ಲಿ ಆ ಸೂತ್ರ ಒಬ್ಬ ಒತ್ತೆಯಾಳು ಬಿಡುಗಡೆಗೆ ಮೂರು ಮಂದಿ ಪ್ಯಾಲೆಸ್ಟೈನ್ ಜನರ ಬಿಡುಗಡೆಗೆ ಬದಲಾಗಬೇಕಿತ್ತು. ಈ ಸೂತ್ರ ಯಾವಾಗ ಬೇಕಾದರೂ ಬದಲಾಗಬಹು ದಾಗಿತ್ತು. ಆದರೆ ಈ ಎಲ್ಲ ಲೆಕ್ಕಾಚಾರಗಳು ಇಸ್ರೇಲ್ ಮರುದಾಳಿಯಿಂದ ತಲೆಕೆಳಗಾಗಿವೆ. ಕತಾರ್, ಈಜಿಪ್ಟ್ ಮತ್ತು ಅಮೆರಿಕ ಸಂಧಾನಕಾರರು ನಡೆಸಿದ ಯತ್ನದಿಂದಾಗಿ ಏಳುದಿನಗಳ ಕದನ ವಿರಾಮ ಜಾರಿಯಾಗಿ ಹಲವು ಒತ್ತೆಯಾಳುಗಳು ಬಿಡುಗಡೆಯಾದರು. ಮುಂದೆಯೂ ಈ ಸಂಧಾನಕಾರರು ಯಶಸ್ವಿಯಾಗುವರೆಂದು ನಿರೀಕ್ಷಿಸಲಾಗಿದೆ.

ಹಮಾಸ್ ಉಗ್ರವಾದಿಗಳು ಅಕ್ಟೋಬರ್ 7ರಂದು ನಡೆಸಿದ ಮಾರಣಾಂತಿಕ ದಾಳಿಯಲ್ಲಿ 1400ಕ್ಕೂ ಹೆಚ್ಚು ಮಂದಿ ಇಸ್ರೇಲ್ ಜನರು ಸತ್ತರು. 240 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಮಾಡಿದರು. ಇದಕ್ಕೆ ಪ್ರತಿಯಾಗಿ ಹಮಾಸ್ ವಿರುದ್ಧ ಇಸ್ರೇಲ್ ಸೇನೆ ಗಾಜಾಪಟ್ಟಿ ಪ್ರದೇಶದಲ್ಲಿ ನಡೆಸಿದ ಸೇನಾ ದಾಳಿಯಲ್ಲಿ 15ಸಾವಿರ ಪ್ಯಾಲೆಸ್ಟೈನ್ ಜನರು ಸತ್ತಿದ್ದಾರೆ. ಸುಮಾರು 15 ಲಕ್ಷ ಜನರು ವಲಸೆ ಹೋಗಿದ್ದಾರೆ.

ಪ್ಯಾಲೆಸ್ಟೈನ್ ಜನರ ಹತ್ಯೆ ನಿಲ್ಲಬೇಕು, ಅದಕ್ಕಾಗಿ ಕದನ ವಿರಾಮ ಘೋಷಣೆಯಾಗಬೇಕು ಎಂದು ಒತ್ತಾಯಿಸಿ ವಿಶ್ವದ ನಾನಾ ದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅಮೆರಿಕದಲ್ಲಿಯೂ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ. ಈ ಹತ್ಯಾಕಾಂಡಕ್ಕೆ ಅಮೆರಿಕ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಮಾಡುತ್ತಿದ್ದಾರೆ. ಅಕ್ಟೋಬರ್ 7ರ ಹಮಾಸ್‌ ದಾಳಿಯ ನಂತರ ಪ್ರತಿಕ್ರಮಕ್ಕೆ ಇಸ್ರೇಲ್‌ಗೆ ಬಹಿರಂಗವಾಗಿ ಅಮೆರಿಕ ಬೆಂಬಲ ಘೋಷಿಸಿತ್ತು. ಆದರೆ ಸರ್ಕಾರ ಮತ್ತು ಜನರ ಮಟ್ಟದಲ್ಲಿ ಕ್ರಮೇಣ ಸರ್ಕಾರದ ಕ್ರಮ ಬಹಿರಂಗ ಟೀಕೆಗೆ ಒಳಗಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಜೋ ಬೈಡನ್ ತಮ್ಮ ನಿಲುವನ್ನು ಬದಲಿಸಿಕೊಂಡಂತೆ ಕಾಣುತ್ತಿದ್ದಾರೆ. ಹಮಾಸ್ ವಿರುದ್ಧದ ಇಸ್ರೇಲ್ ಕ್ರಮಕ್ಕೆ ಅಮೆರಿಕದ ಬೆಂಬಲ ಇದೆ. ಆದರೆ ಹಾಗೆ ಮಾಡುವಲ್ಲಿ ಜನರ ರಕ್ಷಣೆಗೆ ಆದ್ಯತೆ ನೀಡಬೇಕು. ಜನರಿಗೆ ಪರ್ಯಾಯ ನೆಲೆ ಕಲ್ಪಿಸಬೇಕು. ಜನರಿಗೆ ಅಗತ್ಯ ಪರಿಹಾರ ಒದಗಿಸಬೇಕು. ಆಸ್ಪತ್ರೆ, ನಿರಾಶ್ರಿತರ ಶಿಬಿರಗಳಿಗೆ ತೊಂದರೆಯಾಗಬಾರದು, ಮನೆ, ಆಸ್ಪತ್ರೆ, ಶಾಲೆಗಳ ಸಾಮಾಹಿಕ ವಿನಾಶ ಸಲ್ಲದು ಎಂಬ ಷರತ್ತುಗಳನ್ನು ಅಮೆರಿಕ ಈಗ ಇಸ್ರೇಲ್‌ಗೆ ಹಾಕುತ್ತಿದೆ. ಇದೀಗ ತಾನೆ ಇಸ್ರೇಲ್‌ಗೆ ಮತ್ತೆ ಭೇಟಿ ನೀಡಿರುವ ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್ ಅವರು ಇಸ್ರೇಲ್ ಪ್ರಧಾನಿ ನೆತಾನ್ಯಹು ಅವರಿಗೆ ಈ ಷರತ್ತುಗಳನ್ನು ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲ್‌ಗೆ ಸುಮಾರು 23 ಬಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ಪೂರೈಸಲುಅಮೆರಿಕ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಸಂದೇಶ ರವಾನಿಸಲಾಗಿದೆ.

ಒಂದು ಕಡೆ ಇಸ್ರೇಲ್ ದಾಳಿಯಿಂದ ನಿರಾಶ್ರಿತರಾದ ಪ್ಯಾಲೆಸ್ಟೈನ್‌ ಜನರಿಗೆ ಪರಿಹಾರ ಕಳುಹಿಸುವ, ಮತ್ತೊಂದು ಕಡೆ ಇಸ್ರೇಲ್‌ ಗೆ ಯುದ್ಧಾಸ್ತ್ರ ಪೂರೈಸುವ ಅಮೆರಿಕದ ಇಬ್ಬಗೆಯ ನೀತಿಯನ್ನು ಜನರು ಖಂಡಿಸುತ್ತಿದ್ದಾರೆ. ಇದೂ ಸೇರಿದಂತೆ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಜೋ ಬೈಡನ್‌ಗೆ ಜನ ಬೆಂಬಲ ಕಡಿಮೆಯಾಗುತ್ತಿದೆ ಎನ್ನುವ ಸಮೀಕ್ಷಾ ವರದಿಗಳ ಹಿನ್ನೆಲೆಯಲ್ಲಿ ಈ ಬದಲಾವಣೆ ಆಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಬೈಡನ್ ಮಾತಿಗೆ ತಲೆದೂಗುತ್ತಲೇ ನೆತಾನ್ಯಹು ಮತ್ತೆ ಯುದ್ಧ ಪುನರಾರಂಭಿಸಿದ್ದಾರೆ. ಇಸ್ರೇಲ್ ಸೇನೆ ಗಾಜಾದಲ್ಲಿ ನಡೆಸಿದ ದಾಳಿ ವಿನಾಶಕಾರಿಯಾದುದಾಗಿತ್ತು. ಗಾಜಾ ನಗರದ ಶೇ.60 ಭಾಗದ ಕಟ್ಟಡಗಳು, ಮನೆಗಳು, ಆಸ್ಪತ್ರೆ, ಶಾಲೆಗಳನ್ನು ಧ್ವಂಸಮಾಡಲಾಗಿದೆ. ಜನರು ಬದುಕಲು ಸಾಧ್ಯವಾಗದಂಥ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ. ಯುದ್ಧ ನಿಂತು ಜನರು ಮತ್ತೆ ತಮ್ಮ ನೆಲೆಗಳಿಗೆ ವಾಪಸಾಗಲು ಮತ್ತು ಅಲ್ಲಿ ನೆಲೆಸಲು ಸಾಧ್ಯವಿಲ್ಲದಂತೆ ನಾಶಮಾಡಲಾಗಿದೆ. ಈಗಾಗಲೇ 12 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಮತ್ತೆ ಯುದ್ದಕ್ಕೆ ಆಸ್ಪದ ನೀಡಿದರೆ ಎಲ್ಲ ಗಾಜಾ ಪ್ರದೇಶವೂ ನಾಶವಾಗುತ್ತದೆ ಎನ್ನುವ ಕಟು ಸತ್ಯ ಹಮಾಸ್‌ಗೆ ಮನವರಿಕೆಯಾಗಿತ್ತು. ಬಹುಶಃ ಇದೇ ಕಾರಣಕ್ಕೆ ಎಲ್ಲ ಒತ್ತೆಯಾಳುಗಳನ್ನೂ ಬಿಡುಗಡೆ ಮಾಡಲು ಹಮಾಸ್ ನಾಯಕರು ಆಸಕ್ತಿ ತೋರಿಸುತ್ತಿದ್ದರು. ಆದರೆ ಇಸ್ರೇಲ್ ಮತ್ತೆ ಬಾಂಬ್ ದಾಳಿ ನಡೆಸಲಾರಂಭಿಸಿರುವುದರಿಂದ ಹಮಾಸ್ ಪ್ರತಿರೋಧ ಅನಿವಾರ್ಯವಾದಂತಿದೆ. ಇಸ್ರೇಲ್ ಕೂಡ ಒತ್ತೆಯಾಳುಗಳ ವಿಚಾರದಲ್ಲಿ ಒತ್ತಡಕ್ಕೆ ಸಿಕ್ಕಿತ್ತು. ಅದರಲ್ಲಿಯೂ ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿರುವ ನೆತಾನ್ಯಹು ತಮ್ಮ ರಾಜಕೀಯ ಉಳಿವಿಗಾಗಿ ಜನರ ಒತ್ತಡಕ್ಕೆ ಒಳಗಾಗಿದ್ದಾರೆ. ಒತ್ತೆಯಾಳುಗಳನ್ನು ಬಿಡುಗಡೆಮಾಡುವುದಾಗಿ ಹಮಾಸ್ ಹೇಳುತ್ತಿರುವಾಗ ಯುದ್ಧ ಮಾಡಿ ಹಮಾಸ್ ನಾಶ ಮಾಡುವ ನೆತಾನ್ಯಹು ಅವರ ಹೇಳಿಕೆಗಳು ಇಸ್ರೇಲ್ ಜನರಿಂದ ತೀವ್ರ ಟೀಕೆಗೆ ಗುರಿಯಾಗಿವೆ. ಆದರೂ ಅವರು ದಾಳಿ ಮುಂದುವರಿಸಲು ನಿರ್ಧರಿಸಿರುವುದು ಆಶ್ಚರ್ಯ ಹುಟ್ಟಿಸುತ್ತದೆ.

ಹಮಾಸ್ ಸಂಘಟನೆ ಉಳಿದರೆ ಜನರು ಶಾಂತಿಯಿಂದ ಇರಲು ಸಾಧ್ಯವಿಲ್ಲ ಎನ್ನುವುದು ಇಸ್ರೇಲ್ ರಾಜಕೀಯ ನಾಯಕರ ಅಭಿಪ್ರಾಯ. ಹೀಗಾಗಿಯೇ ಹಮಾಸ್ ನಾಶದ ಹೆಸರಿನಲ್ಲಿ ಇಡೀ ಗಾಜಾ ನಗರವನ್ನು ಧ್ವಂಸಮಾಡುವ ಪೂರ್ವಯೋಜಿತ ಕೃತ್ಯಕ್ಕೆ ಸೇನೆ ಮುಂದಾದದ್ದು. ಗಾಜಾದಿಂದ ಜನರನ್ನು ಒಕ್ಕಲೆಬ್ಬಿಸಿ ನೆರೆಯ ಈಜಿಪ್ಟ್ಗೆ ವಲಸೆ ಹೋಗುವಂತೆ ಮಾಡುವುದು ಮತ್ತು ಪಶ್ಚಿಮ ದಂಡೆ ಪ್ರದೇಶದಿಂದ ಪ್ಯಾಲೆಸ್ಟೈನ್‌ ಜನರು ಜೋರ್ಡಾನ್‌ಗೆ ಓಡಿಹೋಗುವಂತೆ ಮಾಡಿ ಎರಡೂ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಇಸ್ರೇಲ್‌ನ ಲೆಕ್ಕಾಚಾರ ಇದ್ದಂತಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಜನರ ನಡುವೆ ಸಂಘರ್ಷ ನಡೆದಾಗಲೆಲ್ಲಾ ಮಾಡಿದ್ದು ಇದೇ ತಂತ್ರ. ಸಂಘರ್ಷ ನಿಂತ ನಂತರ ಹೊರದೇಶಗಳಿಗೆ ಹೋದ ಜನರನ್ನು ವಾಪಸ್ ಬರದಂತೆ ನೋಡಿಕೊಳ್ಳುವ ಅಂದರೆ ಮತ್ತೆ ನೆಲೆಸಲು ಅವಕಾಶ ಕೊಡದಿರುವ ತಂತ್ರವನ್ನು ಈ ಹಿಂದೆ ಅನುಸರಿಸಲಾಗಿದೆ. ಈ ಬಾರಿಯೂ ಇಸ್ರೇಲ್ ಅದೇ ತಂತ್ರ ಬಳಸಿದಂತೆ ಕಾಣುತ್ತದೆ. ಆದರೆ ಈ ಬಾರಿ ನೆರೆಯ ಮುಸ್ಲಿಮ್ ದೇಶಗಳು ಪ್ಯಾಲೆಸ್ಟೈನ್ ಜನರು ತಮ್ಮ ದೇಶಗಳಿಗೆ ವಲಸೆ ಬರಲು ಅವಕಾಶ ನೀಡಿಲ್ಲ. ಕಾರಣ ಇಷ್ಟೇ. ಈ ದೇಶಗಳಿಗೆ ಇಸ್ರೇಲ್ ಕುತಂತ್ರ ಗೊತ್ತಿದೆ. ಹೀಗಾಗಿಯೇ ವಲಸೆಗೆ ಅವಕಾಶ ನೀಡಿಲ್ಲ. ಆ ನೆಲ ಪ್ಯಾಲೆಸ್ಟೈನ್ ಜನರದ್ದು. ತಮ್ಮ ನೆಲದಲ್ಲಿ ಉಳಿಯುವ ಎಲ್ಲ ಹಕ್ಕೂ ಅವರಿಗೆ ಇದೆ ಎಂದು ಪ್ಯಾಲೆಸ್ಟೈನ್ ಜನರ ಪರ ನಿಂತಿರುವ ಮುಸ್ಲಿಮ್ ದೇಶಗಳ ನಾಯಕರು ಈಗ ಬಹಿರಂಗವಾಗಿ ಹೇಳಿದ್ದಾರೆ. ಇದರಿಂದಾಗಿ ಪ್ಯಾಲೆಸ್ಟೈನ್‌ ಜನರನ್ನು ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆ ಪ್ರದೇಶದಿಂದ ಹೊರದಬ್ಬುವ ಇಸ್ರೇಲ್ ಲೆಕ್ಕಾಚಾರ ವಿಫಲವಾದಂತಾಗಿದೆ.

ಈ ಯುದ್ಧದಿಂದಾಗಿ ಪ್ಯಾಲೆಸ್ಟೈನ್‌ ಜನರ ಸಮಸ್ಯೆ ಮತ್ತೆ ಜಗತ್ತಿನ ಮುಂದೆ ಬಂದಂತಾಗಿದೆ. ಆದರೆ ಈಗ ಜಗತ್ತಿನ ಮುಂದಿರುವುದು ಪ್ಯಾಲೆಸ್ಟೈನ್ ಜನರಿಗೆ ಪ್ರತ್ಯೇಕ ದೇಶ ಕಲ್ಪಿಸುವ ಮೂಲ ಸಮಸ್ಯೆಯಲ್ಲ. ಯುದ್ದದಿಂದ ನಿರಾಶ್ರಿತರಾದವರಿಗೆ ಪರಿಹಾರ ಒದಗಿಸುವ ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸುವ ವಿಚಾರಕ್ಕೇ ಈಗ ಗಮನ ಹರಿದಿದೆ. ಮೂಲ ಸಮಸ್ಯೆ ಬಗೆಹರಿಯದೆ ಇದ್ದರೆ ಇಂಥ ಬಿಕ್ಕಟ್ಟು ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ಆದ್ದರಿಂದ ಪರಿಸ್ಥಿತಿ ತಿಳಿಯಾದ ಮೇಲಾದರೂ ಮುಸ್ಲಿಮ್ ದೇಶಗಳ ಮತ್ತು ಶಕ್ತಿ ರಾಷ್ಟ್ರಗಳ ನಾಯಕರು ಈ ಮೂಲ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಬೇಕಾದ ಅಗತ್ಯವಿದೆ. ಎರಡೂ ದೇಶಗಳನ್ನು ರೂಪಿಸಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ದೇಶಗಳ ಭವಿಷ್ಯದ ಜನಾಂಗವಾದರೂ ನೆಮ್ಮದಿಯಿಂದ ಬದುಕುವಂತೆ ಮಾಡಬೇಕಿದೆ.

lokesh

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

7 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

10 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

10 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

10 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

11 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

11 hours ago