• ಪ್ರೊ.ಆರ್.ಎಂ.ಚಿಂತಾಮಣಿ
ಹೊಸ ಪೀಳಿಗೆಯ ಕಲಿಕೆಯನ್ನು ಸರಳಗೊಳಿಸುವುದಕ್ಕಾಗಿ ಏನಾದರೂ ಹೊಸದನ್ನು ಮಾಡಬೇಕೆಂದು ಕನಸು ಕಟ್ಟಿಕೊಂಡಿದ್ದ ಕೇರಳ ಮೂಲದ ತರುಣ ಪ್ರತಿಭಾವಂತ ಎಂಜಿನಿಯರ್ ಬೈಜು ರವೀಂದ್ರನ್ ‘ಬೈಜು’ಸ್ ಎಜುಟೆಕ್ ಕಂಪೆನಿ’ಯನ್ನು (Byju’s Edutech) 2015ರಲ್ಲಿ ಆರಂಭಿಸಿದರು. ಮಕ್ಕಳಿಗೆ ಕಠಿಣವೆನಿಸುತ್ತಿದ್ದ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಒಂದು ಆಟದಂತೆ ಸಂತೋಷದಿಂದ ಕಲಿಯಲು ಅನುಕೂಲವಾಗುವಂತೆ ತಂತ್ರಜ್ಞಾನ ಬಳಸಿ ಆನ್‌ಲೈನ್ ನಲ್ಲಿ ಕಲಿಸುವ ಹೊಸ ವಿಧಾನಗಳನ್ನು ಕಂಡುಹಿಡಿಯುವುದು ಕಂಪೆನಿಯ ಉದ್ದೇಶವಾಗಿತ್ತು. ಇದಕ್ಕಾಗಿ ರವೀಂದ್ರನ್ ಸಾಕಷ್ಟು ತಯಾರಿಗಳನ್ನೂ ಮಾಡಿಕೊಂಡು ಒಂದು ತಂಡವನ್ನೂ ಕಟ್ಟಿದ್ದರು. ಹೊಸ ಆ್ಯಪ್‌ಗಳನ್ನೂ (Applications) ಕಂಡುಹಿಡಿದು ತಯಾರಿಸಿದ್ದರು. ರವೀಂದ್ರನ್ ಸ್ವತಃ ಸಮರ್ಥ ಟ್ಯೂಟರ್ ಆಗಿರುವುದು ಒಂದು ವಿಶೇಷ.
ಆಗ ಬಂಡವಾಳ ಹೊಂದಿಸುವುದು ಕಷ್ಟವಾಗುತ್ತಿರಲಿಲ್ಲ. ಸ್ಟಾರ್ಟ್‌ಅಪ್ ಗಳಿಗೆ ಬಂಡವಾಳ ಒದಗಿಸಲು ದೇಶಿ ಮತ್ತು ವಿದೇಶಿ ವೆಂಚರ್ ಕ್ಯಾಪಿಟಲಿಸ್ಟರ್, ಪೈವೇಟ್ ಇಕ್ವಿಟಿ ಫಂಡುಗಳು ಮತ್ತು ಏಂಜೆಲ್ ಫಂಡುಗಳು ನಾ ಮುಂದು ತಾ ಮುಂದು ಎಂದು ಮುಗಿಬೀಳುವುದು ಸರ್ವೇಸಾಮಾನ್ಯವಾಗಿತ್ತು. ಬೈಜು’ಸ್ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಬೆಳೆಯಿತು. ಬೈಜು’ಸ್ ಆ್ಯಪ್‌ಗಳು ಮತ್ತು ತರಬೇತಿ ವಿಧಾನಗಳು ದೇಶಾದ್ಯಂತ ಐಐಟಿ ಮತ್ತು ಐಐಎಂ ಪ್ರವೇಶ ಪರೀಕ್ಷೆಗಳಿಗೆ ಮತ್ತು ಐಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವವರನ್ನು ಹೆಚ್ಚು ಆಕರ್ಷಿಸಿದವು. ದೇಶಾದ್ಯಂತ ಆನ್‌ಲೈನ್ ತರಬೇತಿ ಕೇಂದ್ರಗಳು ಆರಂಭವಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಭಾರತದಲ್ಲಿಯ ಅಂದಿನ ತಂತ್ರಜ್ಞಾನ ಬೆಳವಣಿಗೆಯ ಹಂತದಲ್ಲಿ ಬೈಜು’ಸ್ ಆ್ಯಪ್‌ಗಳನ್ನು ಮೊಬೈಲ್‌ಗಳಿಗೆ ಡೌನ್‌ಲೋಡ್ ಮಾಡುವುದು ಯುವಕರಿಗೆ ಅತಿ ಸರಳವೆನ್ನಿಸುತ್ತಿತ್ತು. ರವೀಂದ್ರನ್ ಅದಕ್ಕಾಗಿಯೇ ಒಂದು ಆ್ಯಪ್ ಮಾರಾಟ ಕಂಪೆನಿಯನ್ನೂ ಆರಂಭಿಸಿದರು.
2020ರವರೆಗೆ ವಿಸ್ತರಣೆ ಅಬಾಧಿತವಾಗಿ ಮುಂದುವರಿಯಿತು. ಅಮೆರಿಕದಲ್ಲಿಯೂ ಚಟುವಟಿಕೆಗಳನ್ನು ಆರಂಭಿಸಲಾಯಿತು. ಅಲ್ಲಿ ಚಿಕ್ಕ ಮಕ್ಕಳಿಗೆ ಡಿಜಿಟಲ್ ಜ್ಞಾನವನ್ನು ಒದಗಿಸಲು ‘ಎಪಿಕ್’ ಎಜುಟೆಕ್ ಕಂಪೆನಿ ಆರಂಭವಾಯಿತು. ಹೊಸ ಬಂಡವಾಳ ಬರುತ್ತಲೇ ಇತ್ತು. 2017ರಲ್ಲಿ ಎರಡು ವರ್ಷಗಳ ಅವಧಿಯಲ್ಲಿಯೇ ಬೈಜು’ಜ್ ಒಂದು ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಯುನಿರ್ಕಾ ಆಗಿ ಬೆಳೆದಿತ್ತು. ಅಧೀನ ಕಂಪೆನಿಗಳೂ ಹೆಚ್ಚಾಗ ತೊಡಗಿದ್ದವು. ನೌಕರರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿತ್ತು. ಹೆಚ್ಚು ತಂತ್ರಜ್ಞರನ್ನು ಕೆಲಸಕ್ಕೆ ನೇಮಿಸಿಕೊಂಡರೂ ನಿಯಂತ್ರಣ ಮಾತ್ರ ರವೀಂದ್ರನ್ ಕೈಯಲ್ಲಿಯೇ ಇರುತ್ತಿತ್ತೆಂದು ಹಲವು ಮೂಲಗಳಿಂದ ತಿಳಿಯುತ್ತದೆ.
ಅನೇಕ ಅಮೆರಿಕನ್ ಯುನಿಕಾರ್ನ್‌ಗಳನ್ನು ಹಿಂದಿಕ್ಕಿ ಬೈಜುಸ್ ಬೆಳೆಯುತ್ತಲೇ ಹೋಯಿತು. 2021ರ ಮಧ್ಯದ ಹೊತ್ತಿಗೆ ಕಂಪೆನಿಯ ಮೌಲ್ಯ 22 ಬಿಲಿಯನ್ ಡಾಲರಿಗಿಂತಲೂ ಹೆಚ್ಚಾಗಿತ್ತು. ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದ್ದ ತಂತ್ರಜ್ಞಾನ ಕಂಪೆನಿಯಾಗಿತ್ತು. ಹಲವು ಅಧೀನ ಕಂಪೆನಿಗಳ ಮೂಲಕ ಆನ್‌ಲೈನ್ ಮತ್ತು ಆಫ್‌ಲೈನ್ (ಸ್ಥಳೀಯ ಕೋಚಿಂಗ್ ಕೇಂದ್ರಗಳಲ್ಲಿ) ಟ್ಯೂಶನ್ ದೊಡ್ಡ ಪ್ರಮಾಣದಲ್ಲಿ ನಡೆಯುವುಲ್ಲದೇ ಮಾರುಕಟ್ಟೆ ಚಟುವಟಿಕೆಗಳಲ್ಲಿ ಬೆಳೆಯುತ್ತಿತ್ತು. ಬೇಡಿಕೆಯಲ್ಲಿರುವ ಸಿನೆಮಾ ನಟ ಶಾಹ ರುಖಖಾನ್ ಮತ್ತು ಜಾಗತಿಕಮಟ್ಟದಲ್ಲಿ ಫುಟ್‌ಬಾಲ್ ದಿಗ್ಗಜಮೆಸ್ಸಿಯವರನ್ನೂ ತನ್ನ ಬ್ಯಾಂಡ್ ಅಂಬ್ಯಾಸಿಡರ್ ಆಗಿ ನೇಮಿಸಿಕೊಂಡಿತ್ತು. ಕ್ರಿಕೆಟ್ ಪಂದ್ಯಗಳನ್ನು ಪ್ರಾಯೋಜಿಸುವ ಮಟ್ಟಕ್ಕೂ ಹೋಗಿತ್ತು.
ಬೈಜು’ಸ್ ಪತನ ಮತ್ತು ಕಾರಣಗಳು: ಕೆಲವು ಸ್ಟಾರ್ಟ್ ಅಪ್‌ಗಳು ಹಲವು ವರ್ಷಗಳ ನಂತರವೂ ಲಾಭ ಗಳಿಸುವ ಹಂತಕ್ಕೆ ಬಾರದೇ ಇದ್ದಾಗ ಮತ್ತು ಸ್ವಲ್ಪ ಸಮಯದಲ್ಲೇ ಲಾಭ ಗಳಿಸುವ ಸಾಧ್ಯತೆ ಇಲ್ಲವೆಂದು ಕಂಡುಬಂದಾಗ ಮೊದಲಿನ ಸಾಂಸ್ಥಿಕ ಹೂಡಿಕೆದಾರರು ಪ್ರಶ್ನಿಸಿದ್ದಲ್ಲದೆ ಕೈ ಬಿಗಿ ಹಿಡಿಯಲಾರಂಭಿಸಿದರು. ಈ ನಿರ್ಧಾರಗಳನ್ನು ಹೂಡಿಕೆದಾರರು 2021ರ ಅಂತ್ಯದಿಂದ ಕಟ್ಟುನಿಟ್ಟಾಗಿ ತೆಗೆದುಕೊಂಡದ್ದಲ್ಲದೆ ಹೊಸ ಹೂಡಿಕೆಗಳಿಗೂ ಮೀನಮೇಷ ಎಣಿಸಲಾರಂಭಿಸಿದರು. ಇದನ್ನೇ ಸ್ಟಾರ್ಟ್ ಅಪ್ ಹೂಡಿಕೆಗಳ ಆಕುಂಚನ ಕಾಲ (Startup Investment Winter) ಎಂದು ಕರೆಯುವುದು. ಆಗಿನಿಂದಲೇ ಸ್ಟಾರ್ಟ್ ಅಪ್‌ಗಳು ನಗದು ಒಳಹರಿವಿನ ಕೊರತೆ ಅನುಭವಿಸಲಾರಂಭಿಸಿದವು. ಕೆಲವು ಸ್ಥಾಪಕ ತಂತ್ರಜ್ಞರು ಪಡೆದ ಬಂಡವಾಳವನ್ನೇ ದುರುಪಯೋಗ ಮಾಡಿಕೊಂಡು ಪರಭಾರೆ ಮಾಡಿದ್ದಾರೆ ಎಂದು ಆಪಾದನೆಗಳಿದ್ದವು. ಸಾಲ ಕೊಟ್ಟವರೂ ಕಂತು ಮತ್ತು ಬಡ್ಡಿಗಾಗಿ ತಗಾದೆ ಮಾಡಲಾರಂಭಿಸಿದರು. ಇದು ಎಲ್ಲ ಸ್ಟಾರ್ಟ್‌ಅಪ್‌ಗಳ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಬೈಜು’ಸ್ ಸಹಿತ ಹೊರತಾಗಿರಲಿಲ್ಲ. ಅದರದ್ದೇ ಲೋಪಗಳು ಬೇರೆ.
2022ರ ಮೂರನೇ ತೈಮಾಸಿಕದವರೆಗೆ 22 ಬಿಲಿಯನ್ ಡಾಲರ್ ಮೇಲೆ ಇದ್ದ ಬೈಜು’ಸ್ ಮೌಲ್ಯ ಡಿಸೆಂಬರ್ 2023ರ ಹೊತ್ತಿಗೆ ಜರನೆ ಇಳಿದು ಕೇವಲ ಮೂರು ಬಿಲಿಯನ್ ಡಾಲರ್ ಮಟ್ಟಕ್ಕೆ ಕುಸಿದಿತ್ತು. ಇದೇ ಕಾರಣವೊಡ್ಡಿ ಸಾಂಸ್ಥಿಕ ಹೂಡಿಕೆದಾರರಾದ ಪ್ರೋಸಸ್ ಎನ್, ಪೀಕ್ ಎಕ್ಸ್ ಮತ್ತು ಟಾನ್ ಜುಕರ ಬರ್ಗ್‌ಗಳ ಪ್ರತಿನಿಧಿಗಳು ಬೋರ್ಡ್ ಆಫ್ ಡೈರೆಕ್ಟರ್‌ನಿಂದ ಹೊರ ಹೋಗಿದ್ದಾರೆ. ವ್ಯವಹಾರ ತೀರ ಕಡಿಮೆಯಾಗಿದ್ದು, ಹಣಕಾಸಿನ ತೊಂದರೆಯಿಂದಾಗಿ ತಂತ್ರಜ್ಞರೂ ಸೇರಿ ದೊಡ್ಡ ಸಂಖ್ಯೆಯಲ್ಲಿ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ. ಸಾಲ ತೀರಿಸಲಾರದ್ದಕ್ಕಾಗಿ ಅಮೆರಿಕಾದ ಎಪಿಕ್ ಕಂಪೆನಿಯನ್ನು ಕೇವಲ 1.2 ಬಿಲಿಯನ್ ಡಾಲರ್ ಸಾಲಕ್ಕಾಗಿ ಸಾಲಗಾರರು ವಶಪಡಿಸಿಕೊಂಡಿದ್ದಾರೆ. ಭಾರತದಲ್ಲಿಯೂ ಸಾಲಗಾರರ ವ್ಯಾಜ್ಯಗಳು ಸಾಕಷ್ಟಿರುತ್ತವೆ.
ಎಡವಿದ್ದೆಲ್ಲಿ? ಉತ್ತರ ಹುಡುಕುತ್ತ ಹೋದಂತೆ ರವೀಂದ್ರನ್ ತನ್ನ ಸಾಮರ್ಥ್ಯಕ್ಕೆ ಸೀಮಿತಗೊಳ್ಳದೆ ಹಲವು ವ್ಯವಹಾರಗಳಲ್ಲಿ ಕೈ ಹಾಕಿದ್ದೇ ತಪ್ಪಾಯಿತೆನ್ನಿಸುತ್ತದೆ. ಕೇವಲ ಕೋಚಿಂಗ್‌ನಲ್ಲಿ (ಆನ್‌ಲೈನ್ ಸೇರಿ) ಉಳಿದಿದ್ದರೆ ದೊಡ್ಡ ಯಶಸ್ಸು ಸಾಧಿಸಬಹುದಿತ್ತೇನೊ. ಶಕ್ತಿ, ಸಮಯ ಮತ್ತು ಅವಕಾಶಗಳನ್ನು ಹಾಳುಮಾಡಿಕೊಂಡಂತಾಗಿದೆ. ಕಂಪೆನಿಗಳ ಖರೀದಿ ಮತ್ತು ವಿಲೀನಗೊಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಹೆಚ್ಚು ಬಂಡವಾಳ ವ್ಯಯವಾಗಿ ನಗದು ಕೊರತೆ ಉಂಟಾಗಿರಬಹುದೆಂಬುದು ತಜ್ಞರ ಅಭಿಪ್ರಾಯ.
ಉಳಿದಿದ್ದ ಕಡಿಮೆ ನೌಕರರಿಗೂ ಸಂಬಳ ಕೊಡಲಿಕ್ಕೆ ರವೀಂದ್ರನ್ ತನ್ನ ಎರಡು ದೊಡ್ಡ ಮನೆಗಳನ್ನು ಮಾರಿದ್ದಾರೆ ಎಂದು ವರದಿಗಳಿವೆ. ಈ ಮನೆಗಳು ಹೇಗೆ ಬಂದವು ಎಂಬುದೂ ಸಂಶಯವೇ.
ರವೀಂದ್ರನ್‌ರವರಲ್ಲಿ ಅಹಂ ಒಂದಿಷ್ಟು ಜಾಸ್ತಿ ಎಂದು ಹಾಲಿ ಮತ್ತು ಮಾಜಿ ನೌಕರರು ಹೇಳುತ್ತಾರೆ. ಇದನ್ನು ಪತ್ರಕರ್ತ ಪ್ರದೀಪ್ಕೆ. ಸಹಾ ಬೈಜು’ಸ್ ಬಗ್ಗೆ ಬರೆದಿರುವ ‘ದಿ ಲರ್ನಿಂಗ್ ಟ್ಯಾಪ್’ ಪುಸ್ತಕದಲ್ಲಿ ವಿವರವಾಗಿ ಹೇಳಿದ್ದಾರೆ. ಇದರಿಂದ ಕಂಪೆನಿಯಲ್ಲಿ ಕಾರ್ಪೊರೇಟ್ ಸಂಸ್ಕೃತಿಯಾಗಲಿ ಟೀಂ ವರ್ಕ್ ಆಗಲಿ ಇರಲಿಲ್ಲವೆಂದು ಗೊತ್ತಾಗುತ್ತದೆ. ಕಾಯ್ದೆ ಪಾಲನೆಯಲ್ಲಿ ಮತ್ತು ರಿಟರ್ನ್ಸ್ ೯ ಹಾಗೂ ಲೆಕ್ಕಪತ್ರಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಲ್ಲಿ ಕಂಪೆನಿ ಸ್ವಲ್ಪ ಹಿಂದೆಯೇ, ಇದಕ್ಕಾಗಿ ಸರ್ಕಾರದಿಂದ ಕಾಲಕಾಲಕ್ಕೆ ತೆರಿಗೆ ನೋಟೀಸುಗಳೂ ಬಂದಿವೆ.
ಬೈಜು’ಸ್‌ನಿಂದ ಕ್ರಿಕೆಟ್ ಪಂದ್ಯಾವಳಿಗಳ ಪ್ರಾಯೋಜಕತ್ವಕ್ಕಾಗಿ ತನಗೆ ಬರಬೇಕಾದ ಬಾಕಿ 158 ಕೋಟಿ ರೂ.ಗಳ ಕಟಬಾಕಿಯಾದ್ದರಿಂದ ಕಂಪೆನಿಯನ್ನು ಇನ್‌ಸಾಲ್ವಂಟಿ ಎಂದು ಘೋಷಿಸಿ ತನಗೆ ಬರಬೇಕಾದ ಹಣವನ್ನು ಅದರ ಆಸ್ತಿಗಳ ವಿಲೇವಾರಿ ಮಾಡಿ ಕೊಡಿಸಬೇಕೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಾಧಿಕರಣದ ಬೆಂಗಳೂರು ಪೀಠಕ್ಕೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅರ್ಜಿ ಹಾಕಿತ್ತು. ಬೈಜು’ಸ್ ಮಧ್ಯಸ್ಥಿಕೆದಾರರೆದುರು ವ್ಯಾಜ್ಯ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದನ್ನು ಬಿಸಿಸಿಐ ಒಪ್ಪಿಕೊಳ್ಳದೇ ಇದ್ದುದ್ದರಿಂದ ಪೀಠವು ಪ್ರಕರಣದ ವಾದ ವಿವಾದಕ್ಕೆ ಫೆಬ್ರವರಿ 7ನೇ ದಿನಾಂಕವನ್ನು ನಿಗದಿ ಮಾಡಿದೆ.
ಒಂದು ಆಶಾಕಿರಣವೆಂಬಂತೆ ಬೈಜು’ಸ್ ಮಾಲೀಕತ್ವದಲ್ಲಿ ಇರುವ ಆಕಾಶ್ ಕೋಚಿಂಗ್ ಕಂಪೆನಿಯು ತಡವಾಗಿಯಾದರೂ ತನ್ನ 2021-22ರ ಲೆಕ್ಕಪತ್ರ ಪ್ರಕಟಿಸಿದ್ದು, 79 ಕೋಟಿ ರೂ. ಲಾಭ ತೋರಿಸಿದೆ. ಆದರೂ ಬೈಜು’ಸ್ ಈ ಎಲ್ಲ ಸಮಸ್ಯೆಗಳಿಂದ ಹೊರ ಬರುವುದು ಯಕ್ಷ ಪ್ರಶ್ನೆ.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…