ಅಂಕಣಗಳು

ಆತ್ಮಹತ್ಯೆಗೆ ಮುಂದಾದ ವ್ಯಕ್ತಿಯ ಬಾಳು ಬೆಳಕಾದ ಪರಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ 

ಜಗತ್ತಿನ ಅತ್ಯಂತ ತಣ್ಣಗಿನ ಮ್ಯಾರಥಾನ್‌ನಲ್ಲಿ ಈವರೆಗೆ ಭಾಗವಹಿಸಿದ ಏಕೈಕ ಭಾರತೀಯ ರಾಮ್ ಗೋಪಾಲ್ ಕೊಟಾರಿ

ನಾರ್ತ್ ಪೋಲ್ ಮ್ಯಾರಾಥಾನ್ ಅತ್ಯಂತ ಕ್ಲಿಷ್ಟಕರ ಮ್ಯಾರಥಾನ್ಗಳಲ್ಲೊಂದು. ಇದನ್ನು ಜಗತ್ತಿನ ಅತ್ಯಂತ ತಣ್ಣಗಿನ ಮ್ಯಾರಥಾನ್ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ನಡೆಯುವುದು ಉತ್ತರ ಧ್ರುವದ ಶೂನ್ಯಕ್ಕಿಂತಲೂ ಕಡಿಮೆ ಉಷ್ಣಾಂಶದ ಮಂಜುಗಡ್ಡೆಯ ಮೇಲೆ. ಪ್ರತೀ ಹೆಜ್ಜೆಗೂ ಕುಸಿಯುವ ಮಂಜುಗಡ್ಡೆ, ಬೀಸುವ ಶೀತಲ ಗಾಳಿ, ಕಾಲುಗಳು ಮರಗಟ್ಟುವುದು ಮೊದಲಾದ ಅಪಾಯಗಳಿಂದಾಗಿ ಸ್ಪರ್ಧಾಳುಗಳು ಜೀವ ರಕ್ಷಕ ಸಾಧನಗಳನ್ನು ಧರಿಸಿ ಭಾಗವಹಿಸಬೇಕಾಗುತ್ತದೆ. ಪ್ರತೀವರ್ಷ ಜುಲೈ ತಿಂಗಳಲ್ಲಿ ನಡೆಯುವ ಈ ಮ್ಯಾರಥಾನ್‌ನಲ್ಲಿ ಈವರೆಗೆ ಭಾಗವಹಿಸಿದ ಭಾರತೀಯರ ಸಂಖ್ಯೆ ಕೇವಲ ಒಂದು. ಅವರೇ ಕೊಲ್ಕೊತ್ತಾದ ರಾಮ್ ಗೋಪಾಲ್ ಕೊಟಾರಿ. ಆದರೆ, ಜೀವನದಲ್ಲಿ ಎದುರಾದ ವೈಫಲ್ಯಗಳಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದ ರಾಮ್ ಗೋಪಾಲ್ ಕೊಟಾರಿಯವರ ಬದುಕು ನಾರ್ತ್ ಪೋಲ್ ಮ್ಯಾರಥಾನ್ಗಿಂತಲೂ ಸಾಹಸದ ಮ್ಯಾರಥಾನ್!

ಕೊಲ್ಕತ್ತಾದ ಬುರ್ರಾಬಜರ್ ಎಂಬಲ್ಲಿ ೧೯೮೧ರಲ್ಲಿ ಹುಟ್ಟಿದ ರಾಮ್ ಗೋಪಾಲ್ ಕೊಟಾರಿಯವರದ್ದು ಒಂದು ಬಡ ಕುಟುಂಬ. ಮನೆಯೆಂದರೆ ತಗಡಿನ ಶೀಟಿನ ಮಾಡು. ಎಷ್ಟು ಜನನಿಬಿಡ ಪ್ರದೇಶವೆಂದರೆ ಮನೆಯ ಒಳಭಾಗ ಯಾವುದು, ಹೊರ ಭಾಗ ಯಾವುದು ಎಂಬ ವ್ಯತ್ಯಾಸ ತಿಳಿಯದು. ಮನೆಯೊಳಗಿನ ಹೆಚ್ಚಿನ ದಿನಚರಿಗಳು ಮನೆಯ ಹೊರಭಾಗದಲ್ಲೇ ನಡೆಯುವಂತಹ ಪರಿಸ್ಥಿತಿ. ಹಾಗಿದ್ದೂ ರಾಮ್ ಗೋಪಾಲ್ ಕೊಟಾರಿಗೆ ತನ್ನದು ಬಡತನದ ಬದುಕು ಎಂಬ ಭಾವನೆ ಇರಲಿಲ್ಲ. ಏಕೆಂದರೆ, ತನ್ನ ಸುತ್ತಮುತ್ತಲಿನವರೆಲ್ಲರೂ ಅದೇ ರೀತಿಯಲ್ಲಿ ಬದುಕುತ್ತಿರುವುದನ್ನು ನೋಡಿ ಎಲ್ಲಾ ಜನರು ಹಾಗೆಯೇ ಬದುಕುತ್ತಾರೆ ಎಂದೇ ಅವರ ತಿಳಿವಳಿಕೆಯಾಗಿತ್ತು. ರಾಮ್ ಗೋಪಾಲರ ತಂದೆ ಒಂದು ಸಣ್ಣ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಗಳಿಕೆಯಿಂದ ಸಂಸಾರದ ಹೊಟ್ಟೆಪಾಡು ಹೇಗೋ ನಡೆಯುತ್ತಿತ್ತು. ಅಂತಹ ಪರಿಸ್ಥಿತಿಯಲ್ಲೂ ಅವರ ತಾಯಿ ತನ್ನ ಮಕ್ಕಳ ವಿದ್ಯಾಭ್ಯಾಸ ಅಬಾಧಿತವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಅವರ ಅಜ್ಜಿ ಅವರ ಕುಟುಂಬದ ಕೇಂದ್ರ ಬಿಂದುವಾಗಿದ್ದರು. ಅವರು ಮನೆಯ ಮಕ್ಕಳಿಗೆ ತಾಳ್ಮೆ, ಒಳ್ಳೆಯತನ ಕಲಿಸಿಕೊಟ್ಟು, ಎಂತಹ ಸಂದರ್ಭದಲ್ಲೂ ನಿರಾಶರಾಗದೆ ಪರಿಸ್ಥಿತಿಯನ್ನು ಎದುರಿಸುವ ಮನೋ ಶಕ್ತಿಯನ್ನು ಎಲ್ಲರಲ್ಲೂ ತುಂಬಿದ್ದರು. ಅದೇ ಕಾರಣದಿಂದ ರಾಮ್ ಗೋಪಾಲ್ ಕೊಟಾರಿ ಬೆಳಿಗ್ಗೆ ಎಲ್ಲರಿಗಿಂತ ಮೊದಲೇ ಎದ್ದು ತನ್ನ ಶಾಲಾ ಚಟುವಟಿಕೆಗಳನ್ನು ಮುಗಿಸಿ ಶಾಲೆಗೆ ತಯಾರಾಗುತ್ತಿದ್ದರು. ಆ ಶಿಸ್ತಿನಿಂದಾಗಿಯೇ ಅವರು ತನ್ನ ಓರಗೆಯ ಮಕ್ಕಳೆಲ್ಲ ಅರ್ಧದಲ್ಲಿ ಶಾಲೆ ಬಿಟ್ಟರೆ ಇವನು ಮಾತ್ರ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು.

ಹಾಗೆಂದು ರಾಮ್ ಗೋಪಾಲ್ ಕೊಟಾರಿ ಪದವಿ ಶಿಕ್ಷಣ ಪಡೆದದ್ದು ಸುಲಭದ ಸಾಧ್ಯತೆಯಾಗಿರಲಿಲ್ಲ. ಅವರು ಕಲಿತದ್ದು ಕೊಲ್ಕತ್ತಾದ ಭವಾನಿಪುರ ಎಜುಕೇಶನ್ ಸೊಸೈಟಿ ಕಾಲೇಜಿನಲ್ಲಿ. ಮೊದಮೊದಲು ಹೇಗೋ ರಾಮ್ ಗೋಪಾಲರ ಕುಟುಂಬ ಶಾಲಾ ಫೀಸನ್ನು ಹೊಂದಿಸುತ್ತಿತ್ತು. ಆದರೆ, ಅವರು ಎರಡನೇ ವರ್ಷದ ಪದವಿಯಲ್ಲಿರುವಾಗ ಕಾಲೇಜು ಫೀಸನ್ನು ಏರಿಸಿದುದು ದೊಡ್ಡ ಹೊರಲಾರದ ಹೊರೆಯಾಗಿ ಪರಿಣಮಿಸಿತು. ಆಗ ಅವರ ತಾಯಿ ಅವರನ್ನು ಬೇರೆ ಕಾಲೇಜಿಗೆ ಸೇರಿಸಲು ಆಲೋಚಿಸಿದರು. ಆದರೆ, ರಾಮ್ ಗೋಪಾಲ್ ಅಜ್ಜಿ ತನ್ನಲ್ಲಿ ತುಂಬಿದ ತಾಳ್ಮೆ ಮತ್ತು ಮಾನಸಿಕ ಬಲವನ್ನು ಪ್ರಯೋಗಿಸಿ, ವಾರಗಳ ಕಾಲ ಕಾಲೇಜಿನ ಆಡಳಿತ ಮಂಡಳಿಗೆ ತನ್ನ ಮನೆಯ ಸ್ಥಿತಿಯನ್ನು ತಿಳಿಸಿ, ಕಾಡಿಬೇಡಿ, ಅವರ ಮನವೊಲಿಸಿ ತನಗೆ ವಿಶೇಷ ರಿಯಾಯಿತಿಯನ್ನು ಪಡೆಯುವಲ್ಲಿ ಯಶಸ್ವಿಯಾದರು.

೨೦೦೨ರಲ್ಲಿ ರಾಮ್ ಗೋಪಾಲ್ ಗೃಹ ಸಾಲ ಕೊಡುವ ಒಂದು ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು. ಮುಂದಿನ ಕೆಲವು ವರ್ಷ ಅವರ ಬದುಕು ಯಾವುದೇ ಏರಿಳಿತಗಳಿಲ್ಲದೆ ಸಾಗಿತು. ಮದುವೆಯಾದರು. ತಂದೆಯೂ ಆದರು. ತಾನು ಅಂದುಕೊಂಡಂತೆಯೇ ತನ್ನ ಬದುಕು ಸಾಗುತ್ತಿದೆ ಅನ್ನುವಾಗ ಧುತ್ತನೆ ಎದುರಾಯಿತು ೨೦೦೮ರ ಜಾಗತಿಕ ಆರ್ಥಿಕ ಬಿಕ್ಕಟ್ಟು. ಆ ಬಿಕ್ಕಟ್ಟು ಎಲ್ಲಾ ವ್ಯವಹಾರಗಳ ಮೇಲೂ ಪರಿಣಾಮ ಬೀರಿದರೂ ಸಾಲ ಕೊಡುವ ಹಣಕಾಸಿನ ವ್ಯವಹಾರದ ಮೇಲೆ ಅದರ ಪರಿಣಾಮ ಅತ್ಯಂತ ತೀವ್ರವಾಗಿತ್ತು. ದಿನಬೆಳಗಾಗುವುದರೊಳಗೆ ರಾಮ್ ಗೋಪಾಲ್ ಕೊಟಾರಿ ಕೆಲಸ ಕಳೆದುಕೊಂಡು ನಿರುದ್ಯೋಗಿಯಾದರು.

ನಂತರ ರಾಮ್ ಗೋಪಾಲ್ ಎಚ್‌ಡಿಎಫ್‌ ಸಿ ಸ್ಟಾಂಡರ್ಡ್ ಲೈಫ್‌ ಸಂಸ್ಥೆಗೆ ಸೇರಿದರಾದರೂ ಅಲ್ಲಿ ಹೆಚ್ಚು ಸಮಯ ಉಳಿಯಲಾರದೆ, ಸಾಲ ಪಡೆದು ತನ್ನದೇ ಒಂದು ಬಟ್ಟೆ ತಯಾರಿಸುವ ಸಣ್ಣ ಉದ್ಯಮವನ್ನು ಪ್ರಾರಂಭಿಸಿದರು. ಆ ವ್ಯವಹಾರ ಕುಂಟುತ್ತ ಸಾಗಿತು. ಆದರೆ, ೨೦೦೯ರಲ್ಲಿ ಪ. ಬಂಗಾಳದಲ್ಲಿ ಬೀಸಿದ ಅಲಿಯಾ ಚಂಡಮಾರುತದಲ್ಲಿ ಅವರ ಬಟ್ಟೆ ದಾಸ್ತಾನು ಮಳೆ ನೀರಲ್ಲಿ ತೊಯ್ದು ಹೋಗಿ, ಮೊದಲೇ ಕುಂಟುತ್ತಿದ್ದ ವ್ಯವಹಾರ ಈಗ ಸಂಪೂರ್ಣವಾಗಿ ಸ್ಥಗಿತ ಗೊಂಡಿತು. ಸಾಲದ ಹೊರೆ ಏರಿತು. ನಂತರ, ತಮ್ಮ ಸಂಬಂಧಿಕರೊಬ್ಬರ ನೆರವಿನಿಂದ ಒಂದು ಜನರಲ್ ಇನ್ಶುರೆನ್ಸ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದರು. ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವಾಗ ಕಂಪೆನಿ ಅವರನ್ನು ಕೆಲಸದಿಂದ ತೆಗೆದು ಹಾಕಿತು.

ಹೀಗೆ, ಮೇಲಿಂದ ಮೇಲೆ ವೈಫಲ್ಯಗಳನ್ನು ಅನುಭವಿಸಿದ ರಾಮ್ ಗೋಪಾಲ್ ಕೊಟಾರಿಗೆ ಇನ್ನು ತಾಳಲಾರೆ ಎಂದೆನಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಹತ್ತಿರದ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಹೋದರು. ಅದೇ ಹೊತ್ತಿಗೆ, ಸಿನಿಮೀಯ ಎಂಬಂತೆ, ಅವರ ಮೊಬೈಲ್ ಫೋನ್ ರಿಂಗಣಿಸಿತು. ನೋಡಿದರೆ ಹೆಂಡತಿ ಶಿಪ್ರಾರ ಕರೆ. ಹೆಂಡತಿಯ ಫೋನ್ ಕರೆ ರಾಮ್ ಗೋಪಾಲ್ ಕೊಟಾರಿಯವರ ಒಳಗಿನ ತುಮುಲವನ್ನು ಆ ಹೊತ್ತಿಗೆ ಹಿಮ್ಮೆಟ್ಟಿಸುವ ಮೂಲಕ ಅವರನ್ನು ಸಾವಿನ ಆಲೋಚನೆಯಿಂದ ಪಾರು ಮಾಡಿತು. ಅದರ ನಂತರ ಅವರ ಬದುಕಿನಲ್ಲಿ ತಕ್ಷಣಕ್ಕೆ ಗಮನಾರ್ಹವಾದ ಬದಲಾವಣೆಯೇನೂ ಕಂಡು ಬರಲಿಲ್ಲ. ಆದರೆ, ಅವರು ತನ್ನ ಬದುಕನ್ನು ಪುನಃ ಕಟ್ಟಿಕೊಳ್ಳಲು ಬೇಕಾದ ಮನೋಸ್ಥೈರ್ಯವನ್ನು ಪಡೆದು, ೨೦೧೨ರ ಮಾರ್ಚ್ ೨೨ರಂದು ‘ಎಪಿಕ್ ಅಶ್ಯುರೆನ್ಸ್ ಸರ್ವಿಸಸ್’ ಎಂಬ ತನ್ನದೇ ಸ್ವಂತ ಜೀವವಿಮಾ ಕಂಪೆನಿಯೊಂದನ್ನು ಪ್ರಾರಂಭಿಸಿದರು.

ಎಪಿಕ್ ಅಶ್ಯುರೆನ್ಸ್ ಸರ್ವಿಸಸ್ ನಿಧಾನಕ್ಕೆ ಬೆಳೆದು, ರಾಮ್ ಗೋಪಾಲ್ ಕೊಟಾರಿಯವರ ಬದುಕಿಗೆ ಸ್ಥಿರತೆಯನ್ನು ಕೊಟ್ಟಿತು. ೨೦೧೩ರಲ್ಲಿ ಅವರು ಕೆಲಸದ ನಿಮಿತ್ತ ದುಬೈಗೆ ಹೋದುದು ಅವರ ಬದುಕಿನ ದೃಷ್ಟಿಕೋನವನ್ನು ಬದಲಾಯಿಸಿತು. ತನ್ನ ಬದುಕು ಹೆಚ್ಚು ಹೆಚ್ಚು ಭದ್ರಗೊಂಡಂತೆ ರಾಮ್ ಗೋಪಾಲ್ ಹೆಚ್ಚು ಹೆಚ್ಚು ವಿದೇಶ ಪ್ರವಾಸಗಳನ್ನು ಮಾಡಿದರು. ಈವರೆಗೆ ಅವರು ೭೯ಕ್ಕೂ ಹೆಚ್ಚು ದೇಶಗಳನ್ನು ಸುತ್ತಾಡಿ ಬಂದಿದ್ದಾರೆ. ಮೌಂಟ್ ಕಿಲಿಮಂಜರೊ, ಮೌಂಟ್ ಎಲ್ಬ್ರಸ್ ಮೊದಲಾದ ಪರ್ವತಗಳನ್ನು ಏರಿದ್ದಾರೆ. ೨೦೧೮ರಲ್ಲಿ ಮೊದಲ ಬಾರಿಗೆ ಟಾಟಾ ಮುಂಬೈ ಮ್ಯಾರಥಾನ್ ಭಾಗವಿಹಿಸಿದ ರಾಮ್ ಗೋಪಾಲ್ ಕೊಟಾರಿ ಮುಂದೆ ವಿವಿಧ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿವುದು ಸಾಮಾನ್ಯವಾಯಿತು. ಹಾಗೆಯೇ ಅವರು ೨೦೨೫ರಲ್ಲಿ, ವಿಶ್ವದ ಅತ್ಯಂತ ಸಾಹಸದ ಮ್ಯಾರಾಥಾನ್‌ಗಳಲ್ಲೊಂದಾದ ನಾರ್ತ್ ಪೋಲ್ ಮ್ಯಾರಥಾನ್ ಓಡಿದರು.

” ಮೇಲಿಂದ ಮೇಲೆ ವೈಫಲ್ಯಗಳನ್ನು ಅನುಭವಿಸಿದ ರಾಮ್ ಗೋಪಾಲ್ ಕೊಟಾರಿಗೆ ಇನ್ನು ತಾಳಲಾರೆ ಎಂದೆನಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಹತ್ತಿರದ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಹೋದರು. ಅದೇ ಹೊತ್ತಿಗೆ, ಸಿನಿಮೀಯ ಎಂಬಂತೆ, ಅವರ ಮೊಬೈಲ್ ಫೋನ್ ರಿಂಗಿಣಿಸಿತು.”

 

 

ಆಂದೋಲನ ಡೆಸ್ಕ್

Recent Posts

ಒಳಿತನ್ನು ಸಂಭ್ರಮಿಸುವುದು ಹೇಳಿಕೊಟ್ಟೀರಿ ನೀವು…

ಪ್ರಸನ್ನ ಹೆಗ್ಗೋಡು, ರಂಗಕರ್ಮಿ ಇತ್ತೀಚೆಗೆ ನಿಧನರಾದ ಹಿರಿಯ ಲೇಖಕ, ಪ್ರಗತಿಪರ ಚಿಂತಕ ಕೆ.ವಿ.ನಾರಾಯಣ ಕುರಿತು ರಂಗಕರ್ಮಿ ಪ್ರಸನ್ನ ಅವರು ತಮ್ಮ…

3 mins ago

ಸಿದ್ದಾಪುರ: ರಸ್ತೆ ಬದಿಯಲ್ಲಿಯೇ ತ್ಯಾಜ್ಯ ರಾಶಿ

ಕೃಷ್ಣ ಸಿದ್ದಾಪುರ ಪರಿಸರ ಮಾಲಿನ್ಯ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ; ಸೂಕ್ತ ಕ್ರಮಕ್ಕೆ ಒತ್ತಾಯ ಸಿದ್ದಾಪುರ: ಸಾರ್ವಜನಿಕ ಸ್ಥಳಗಳೇ…

30 mins ago

ಸಮರ್ಪಕ ನಿರ್ವಹಣೆಯಿಲ್ಲದೇ ಸೊರಗಿದ ಉದ್ಯಾನ

ಹೆಚ್.ಡಿ.ಮಣಿಕಂಠ ನಾಯಕ್ ಯಳಂದೂರು ಪಟ್ಟಣ ಪಂಚಾಯಿತಿ ಎದುರಿನ ಉದ್ಯಾನದ ಅವ್ಯವಸ್ಥೆ ಸರಿಪಡಿಸಲು ಆಗ್ರಹ  ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಣ…

34 mins ago

ಅಪರಾಧ ತಡೆಗೆ ಆದ್ಯತೆ… ಜನಸ್ನೇಹಿಯಾಗಲು ಬದ್ಧತೆ…

ದಿನೇಶ್ ಕುಮಾರ್ ಎಚ್.ಎಸ್. ‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಅನಿಸಿಕೆ ಹಂಚಿಕೊಂಡ ನೂತನ ಪೊಲೀಸ್ ಆಯುಕ್ತ ಎನ್.ವಿಷ್ಣುವರ್ಧನ್ ಮೈಸೂರು: ಬೆಂಗಳೂರಿನ…

43 mins ago

ನ.26ಕ್ಕೆ ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ: ಕಾಂಗ್ರೆಸ್‌ ಹೈಕಮಾಂಡ್‌ ನಾಯಕರಿಗೆ ಆಹ್ವಾನ!

ನವದೆಹಲಿ: ನವೆಂಬರ್‌ 26ರಂದು ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಹೈಕಮಾಂಡ್‌…

19 hours ago