ಪ್ರಸನ್ನ ಹೆಗ್ಗೋಡು, ರಂಗಕರ್ಮಿ
ಇತ್ತೀಚೆಗೆ ನಿಧನರಾದ ಹಿರಿಯ ಲೇಖಕ, ಪ್ರಗತಿಪರ ಚಿಂತಕ ಕೆ.ವಿ.ನಾರಾಯಣ ಕುರಿತು ರಂಗಕರ್ಮಿ ಪ್ರಸನ್ನ ಅವರು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿದ್ದಾರೆ.
ನಿನ್ನ ಶ್ರದ್ಧಾಂಜಲಿ ಸಭೆಗೆ ಬನ್ನಿ ಎಂದು ಸಮುದಾಯದ ಗೆಳೆಯರು ಕರೆದಾಗಲೇ ನನಗೆ ತಿಳಿದದ್ದು, ನೀನು ಜೀವ ಜಗತ್ತಿಗೆ ವಿದಾಯ ಹೇಳಿದೆ ಎಂದು.
ಜೀವ ಜಗತ್ತು ಅನಗತ್ಯವಾಗಿ ಬಡಿದಾಡಿಕೊಂಡು ಸಾವು ಸಂಭವಿಸುವ ಮೊದಲೇ ಸಾಯತೊಡಗಿದೆ ಇಂದು. ನಮ್ಮೂರಿನ ಕೆರೆಯೊಂದನ್ನು ಸರ್ಕಾರಿ ಅಧಿಕಾರಿಗಳೇ ಭಗ್ನಗೊಳಿಸಿದ್ದಾರೆ. ಚರಕದ ಮಹಿಳೆಯರು ಸತ್ಯಾಗ್ರಹ ನಡೆಸಿದ್ದಾರೆ. ಇವುಗಳ ಗಡಿಬಿಡಿಯಲ್ಲಿ ಪೇಪರ್ ಸಹ ಓದಿರಲಿಲ್ಲ ನಾನು. ಹಲವು ರೀತಿಗಳಲ್ಲಿ ನೀನು, ಕಿರಂ, ಕವೆಂ ಶ್ರೀನಿವಾಸರಾಜು ನನಗೆ ಗುರುವಾಗಿದ್ದೀರಿ. ನಾಟಕ ಆಡಿಸುವುದು, ಸಂಘಟನೆ ಕಟ್ಟುವುದು, ಚಳವಳಿಗಳನ್ನು ರೂಪಿಸುವುದು ಇತ್ಯಾದಿ ಸಂಗತಿಗಳಿಗೆ ಬೇಕಿರುವ ತಾತ್ವಿಕತೆಯನ್ನು ನಾನು ಮೊದಲು ಕಲಿತದ್ದು ನಿಮ್ಮಗಳಿಂದಲೇ. ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಕ್ರಿಯಾತ್ಮಕವಾಗಿದ್ದು ಆ ನಿಮ್ಮ ವಿಚಿತ್ರ ಗುಂಪಿನ ಹೆಸರನ್ನು ಮರೆತಿದ್ದೇನೆ ನಾನು. ಆದರೆ, ಅದು ಎಡಪಂಥೀಯ ಗುಂಪಾಗಿತ್ತು. ಆದರೆ, ಆಗ ಚಾಲ್ತಿಯಲ್ಲಿದ್ದ ಅಥವಾ ಈಗಲೂ ಚಾಲ್ತಿಯಲ್ಲಿರುವ ಎಡಪಂಥೀಯ ಪಕ್ಷಗಳ ನಿಲುವುಗಳಿಗಿಂತ ತುಂಬ ಭಿನ್ನವಾಗಿತ್ತು ನಿಮ್ಮದು.
ನಿಮ್ಮ ಅಂದಿನ ನಿಲುವನ್ನು ನೀವೇ ಕಟ್ಟಿದ ‘ಹುತ್ತವ ಬಡಿದರೆ’ ಎಂಬ ರೂಪಕವನ್ನು ಬಳಸಿ ನಿರ್ವಚಿಸಲು ಪ್ರಯತ್ನಿಸುತ್ತೇನೆ. ಹುತ್ತವನ್ನು ಬಡಿದು, ಬಡಿದು, ಮಣ್ಣನ್ನು ಅಗೆದು ಅಗೆದು, ಸರ್ಪವನ್ನು ಹೆಗಲಿಗೇರಿಸಿಕೊಂಡವರು ಕನ್ನಡಿಗರು ಎಂದು ಸೂಚಿಸಿದ್ದೆಯಲ್ಲವೇ ನೀನು?
ನಿನ್ನ ಮಾತು ಅಕ್ಷರಶಃ ನಿಜ. ಸರ್ಪವನ್ನು ಹೆಗಲಿಗೇರಿಸಿಕೊಂಡವನು ಶಿವ. ಶಿವ ಶರಣರ ಕಾಯಕ ತತ್ವದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದವರೂ ನಾವೇ. ಧರ್ಮಾಂಧತೆ, ಜಾತೀಯತೆ, ಪಾಳೆಯಗಾರಿ ಪ್ರವೃತ್ತಿ ಹಾಗೂ ಗುಲಾಮಗಿರಿಗಳ ರೋಗದಿಂದ ನರಳುತ್ತಿರುವವರೂ ನಾವೇ. ನೀನು ಹುತ್ತವ ಬಡಿದರೆ ನಾಟಕದಲ್ಲಿ ಸೃಷ್ಟಿಸಿರುವ ಚನ್ನರಂಗರು ನಾವೇ ಸರಿ. ಇನ್ನು ಅದೇ ನಾಟಕದಲ್ಲಿ ನೀನು ಸೃಷ್ಟಿಸಿರುವ ರಣಧೀರ ಕಂಠೀರವನೆಂಬ ಬಿರುದು ಹೊತ್ತ ನಾಯಕನನ್ನು ಇಂದಿನ ದೆಹಲಿಯಲ್ಲಿಟ್ಟು ನೋಡಿದರೆ ಒಂದು ಬಗೆಯ ಖಳನಾಯಕರು, ಬೆಂಗಳೂರಿನಲ್ಲಿಟ್ಟು ನೋಡಿದರೆ ಬಗೆ ಬಗೆಯ ಖಳನಾಯಕರು ನಮ್ಮ ಕಣ್ಣಿಗೆ ಗೋಚರಿಸುತ್ತಾರೆ. ಖಳನಾಯಕರುಗಳನ್ನೇ ನಾಯಕರುಗಳ ನ್ನಾಗಿಸುವ ಯುಗ ಕಣಯ್ಯ ಇದು.
ಸಮುದಾಯ ಸಂಘಟನೆಗೆ ಸಮುದಾಯ ಎಂಬ ಹೆಸರಿಟ್ಟವರು ಕಿರಂ. ಕ್ರಾಂತಿಕಾರಿ ನಾಟಕ ತಂಡವಾಗಲು ಹಾತೊರೆದಿದ್ದ ನಮಗೆ ಕೆಂಪು ಬೆಂಕಿಯೆಂದೋ ಕೆಂಜಿಗನ ಕಡಿತವೆಂದೋ ಹೆಸರಿಡಲಿಲ್ಲ ಅವರು. ಇಂದಿನ ಫ್ಯಾಷನ್ ಸಂಪೂರ್ಣ ಭಿನ್ನವಾಗಿದೆಯಯ್ಯ. ವಚನಗಳು, ಪಂಪ-ರನ್ನರ ಕಾವ್ಯ, ಕುವೆಂಪು, ಬೇಂದ್ರೆ, ಕಾರಂತರ ಸಾಹಿತ್ಯಗಳನ್ನೇ ಆಕರಗಳನ್ನಾಗಿ ಬಳಸಿಕೊಂಡು ಎಡಪಂಥವನ್ನು ರೂಪಿಸುವುದು ಹೇಗೆಂದು ಹೇಳಿಕೊಟ್ಟೀರಿ ನೀವು. ಪರಂಪರೆಯಲ್ಲಿರುವ ಕೆಡುಕನ್ನು ತಿರಸ್ಕರಿಸುತ್ತಲೇ ಒಳಿತನ್ನು ಸಂಭ್ರಮಿಸುವುದು, ಗುಡಿ, ಚರ್ಚ್, ಮಸೀದಿಗಳನ್ನು ತಿರಸ್ಕರಿಸುತ್ತಲೇ ಕಾಯಕ ಧರ್ಮವನ್ನು ಮೇಲೆತ್ತಿ ಹಿಡಿಯುವುದು ಹೇಗೆಂದು ಹೇಳಿಕೊಟ್ಟೀರಿ ನೀವು. ನಂತರದಲ್ಲಿ ಬಾಬಯ್ಯ, ಕಾಮರೂಪಿ ಪ್ರಭಾಕರ ಇತ್ಯಾದಿ ಹಿರಿಯರು ನಮ್ಮ ಎಡಪಂಥಕ್ಕೊಂದು ಭದ್ರ ಬುನಾದಿ ಹಾಕಿಕೊಟ್ಟರು.
ಕ್ರಮೇಣ, ನೀನು ಪಂಡಿತನಾದೆ. ನಾನು ಪಾಮರನಾದೆ. ಅಂತರ ಹೆಚ್ಚಾಯಿತು. ಭೇಟಿಯಾಗುವ ಪ್ರಸಂಗಗಳು ಕಡಿಮೆಯಾದವು. ಆದರೆ, ನೀನು ಪಂಡಿತನಾದ ಮೇಲೂ, ಅತಿಯಾಗಿ ಪರಾಕು ಪಂಪನ್ನು ಒತ್ತಲಿಲ್ಲ. ಅತಿಯಾಗಿ ನಡ ಬಗ್ಗಿಸಿ ಬಾಲ ಮಿಡುಕಲಿಲ್ಲ ಎಂಬ ಕಾರಣಕ್ಕಾಗಿ ಈಗಲೂ ನಿನ್ನ ಬಗ್ಗೆ ಗೌರವವಿದೆ ನನಗೆ. ಒಂದು ಕಾಲದಲ್ಲಿ ರೂರಲ್ ನಕ್ಸಲರಿಂದ ಪ್ರಭಾವಿತನಾಗಿದ್ದೆ ನೀನು.
ಈಗ, ನಾವೆಲ್ಲರೂ ಅರ್ಬನ್ ನಕ್ಸಲರೆಂಬ ಕೊರಳು ಪಟ್ಟಿ ಬಿಗಿಸಿಕೊಂಡು ನರಳುತ್ತಿದ್ದೇವೆ. ನೀನು, ಆಗ ಚಾರು ಮಜುಮದಾರರ ಬಗ್ಗೆ ಹೇಳಿದ್ದ ಒಂದು ಪ್ರಸಂಗ ಅಂದು ತಮಾಷೆಯಾಗಿ ಕಂಡಿತ್ತು ನನಗೆ. ಇಂದು ಮಾರ್ಮಿಕವಾಗಿ ಕಾಣತೊಡಗಿದೆ. ಹೇಳುತ್ತೇನೆ ಕೇಳು, ಗುಂಡಿಗೆ ಹೆದರದಿದ್ದ ನಕ್ಸಲ್‌ವಾದಿ ನಾಯಕ, ತನ್ನ ಅಜ್ಞಾತವಾಸದ ಸಂದರ್ಭಗಳಲ್ಲಿ ರಾತ್ರಿ ವೇಳೆಯಲ್ಲಿ ಮೈಮೇಲೆಲ್ಲ ಹರಿದಾಡಿ ನಿದ್ರೆಕೆಡಿಸುತ್ತಿದ್ದ ಜಿರಲೆಗಳಿಗೆ ಹೆದರುತ್ತಿದ್ದೆ ಎಂದಿದ್ದೆ. ನಾನು ನಕ್ಕಿದ್ದೆ. ನಮಗೆಲ್ಲ ಕೊರಳ ಪಟ್ಟಿ ತೊಡಿಸಿ ನಿಲ್ಲಿಸಿರುವ ಇಂದಿನ ಪ್ರಧಾನಮಂತ್ರಿ, ಗೃಹಮಂತ್ರಿ ಅಥವಾ ನಮ್ಮದೇ ಕರ್ನಾಟಕದ ಮಂತ್ರಿ ಮಹೋದಯರು ಜಿರಲೆಗಳನ್ನು ಕಂಡವರೇ ಅಲ್ಲ. ಕಂಡಿದ್ದರೂ, ತಮ್ಮ ಬಾಲ್ಯದಲ್ಲಿ ಕಂಡಿದ್ದಿರಬಹುದು. ಅವರ ನಿದ್ರೆಯನ್ನು ಜಿರಲೆಗಳು ಖಂಡಿತವಾಗಿ ಕೆಡಿಸುತ್ತಿಲ್ಲ. ಮಾನವ ಕಾಕ್ರೋಚ್‌ಗಳು ಕೆಡಿಸುತ್ತಿವೆ. ಮಾನವರುಗಳನ್ನೆಲ್ಲ ಕಾಕ್ರೋಚುಗಳನ್ನಾಗಿಸಿರುವ ಮಾಯಾವಿ ಯುಗ ಇದು ಕಣಯ್ಯ. ನಾನಂತೂ, ನಿಜವಾದ ಜಿರಲೆಗಳಿರುವ ಗ್ರಾಮೀಣ ಪ್ರದೇಶದಲ್ಲಿ ನೆಮ್ಮದಿಯಿಂದ ಬದುಕಿದ್ದೇನೆ. ಗ್ರಾಮೀಣ ತರಲೆ ತಾಪತ್ರಯಗಳನ್ನೇ ಚಳವಳಿಗಳನ್ನಾಗಿಸುವ ಪ್ರಯತ್ನ ಕೂಡ ನಡೆಸಿದ್ದೇನೆ. ನೀವುಗಳು ಹೇಳಿಕೊಟ್ಟಿದ್ದು ಇಷ್ಟೆ ತಾನೆ? ಒಂದು ದಿನ, ತಾಯಿ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಡಿಸಿ ಹೋಗು, ಇಲ್ಲೇನು ಹುಂಜಗಳಂತೆ ಪುಕ್ಕ ನಿಗುರಿಸಿಕೊಂಡು ಬೀಗುತ್ತಿದ್ದೀಯ ಎಂದು ಬೈದಿದ್ದರು.
ನನ್ನೀ ಶ್ರದ್ಧಾಂಜಲಿಯನ್ನು ಮುಗಿಸುವ ಮೊದಲು ಮತ್ತೊಂದು ತಮಾಷೆಯ ಪ್ರಸಂಗವನ್ನು ಹೇಳಿ ಬಿಡುತ್ತೇನೆ. ಕೇಳಿಸಿಕೋ. ನಾನು ನಟನಾಗಿ ಅಭಿನಯಿಸಿದ ಮೊದಲ ನಾಟಕದ ನಿರ್ದೇಶಕರು ಕವೆಂ, ಹಾಗಾಗಿ, ಅವರ ಮನೆಗೆ ಆಗಾಗ ಹೋಗುತ್ತಿದ್ದೆ. ಅಲ್ಲಿ ಶರಶಯ್ಯೆಯಲ್ಲಿ ಮಲಗಿರುತ್ತಿದ್ದ ಭೀಷ್ಮಾಚಾರ್ಯರಂತೆ, ಅವರು ದೂಳು ಹಿಡಿದ ಕನ್ನಡ ಪುಸ್ತಕಗಳನ್ನೆ ನೀಟಾಗಿ ಜೋಡಿಸಿಟ್ಟು ಮಂಚ ಮಾಡಿಕೊಂಡು ಮಲಗಿರುತ್ತಿದ್ದರೆಂದು ನಿನಗೆ ವರದಿ ಒಪ್ಪಿಸಿದ್ದೆ. ಅಷ್ಟು ಚಿಕ್ಕದಿತ್ತು ಅವರ ಮನೆ. ಉತ್ಪ್ರೇಕ್ಷೆ ಮಾಡಬೇಡ ಎಂದು ನಕ್ಕಿದ್ದೆ ನೀನು.
” ಸಂಸ್ಕೃತಿ ಕ್ಷೇತ್ರದ ಬಾಯಿಗೆ ಕೆಲವರು ಕೇಸರಿ ಬಾವುಟ ತುರುಕಿ ಬಾಯಿ ಮುಚ್ಚಿಸುತ್ತಾರೆ. ಮತ್ತೆ ಕೆಲವರು ಕೆಂಬಾವುಟ ತುರುಕಿ ಬಾಯಿ ಮುಚ್ಚಿಸುತ್ತಾರೆ. ಹಾಗೂ ತಾವು ಪರಸ್ಪರ ಕಿರುಚಾಡುತ್ತಿರುತ್ತಾರೆ. ನಿಜವಾದ ಜನ ಸಂಸ್ಕೃತಿಯನ್ನು ರಕ್ಷಿಸುವುದು ಹೇಗೆ ಎಂದು ಹೇಳಿಕೊಟ್ಟೀರಿ ನೀವು.”
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಜಗತ್ತಿನ ಅತ್ಯಂತ ತಣ್ಣಗಿನ ಮ್ಯಾರಥಾನ್‌ನಲ್ಲಿ ಈವರೆಗೆ ಭಾಗವಹಿಸಿದ ಏಕೈಕ ಭಾರತೀಯ ರಾಮ್ ಗೋಪಾಲ್ ಕೊಟಾರಿ…
ಕೃಷ್ಣ ಸಿದ್ದಾಪುರ ಪರಿಸರ ಮಾಲಿನ್ಯ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ; ಸೂಕ್ತ ಕ್ರಮಕ್ಕೆ ಒತ್ತಾಯ ಸಿದ್ದಾಪುರ: ಸಾರ್ವಜನಿಕ ಸ್ಥಳಗಳೇ…
ಹೆಚ್.ಡಿ.ಮಣಿಕಂಠ ನಾಯಕ್ ಯಳಂದೂರು ಪಟ್ಟಣ ಪಂಚಾಯಿತಿ ಎದುರಿನ ಉದ್ಯಾನದ ಅವ್ಯವಸ್ಥೆ ಸರಿಪಡಿಸಲು ಆಗ್ರಹ ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಣ…
ದಿನೇಶ್ ಕುಮಾರ್ ಎಚ್.ಎಸ್. ‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಅನಿಸಿಕೆ ಹಂಚಿಕೊಂಡ ನೂತನ ಪೊಲೀಸ್ ಆಯುಕ್ತ ಎನ್.ವಿಷ್ಣುವರ್ಧನ್ ಮೈಸೂರು: ಬೆಂಗಳೂರಿನ…
ನವದೆಹಲಿ: ನವೆಂಬರ್ 26ರಂದು ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹೈಕಮಾಂಡ್…