ಕೃಷ್ಣ ಸಿದ್ದಾಪುರ
ಪರಿಸರ ಮಾಲಿನ್ಯ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ; ಸೂಕ್ತ ಕ್ರಮಕ್ಕೆ ಒತ್ತಾಯ
ಸಿದ್ದಾಪುರ: ಸಾರ್ವಜನಿಕ ಸ್ಥಳಗಳೇ ತ್ಯಾಜ್ಯ ವಿಲೇವಾರಿ ತಾಣಗಳಾಗಿ ಮಾರ್ಪಡುತ್ತಿರುವುದು ಸಿದ್ದಾಪುರ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರ-ಮೈಸೂರು ಮುಖ್ಯ ರಸ್ತೆ ಬದಿಯಲ್ಲಿ ಕಿಡಿಗೇಡಿಗಳು ತ್ಯಾಜ್ಯದ ಚೀಲಗಳನ್ನು ತಂದು ಸುರಿಯು ತ್ತಿರುವುದರಿಂದ ರಸ್ತೆ ಬದಿಯಲ್ಲಿ ಕಸದ ರಾಶಿ ನಿರ್ಮಾಣವಾಗುತ್ತಿದೆ.
ರಾತ್ರಿ ಅಥವಾ ಜನರ ಓಡಾಟ ಕಡಿಮೆ ಇರುವ ಸಮಯದಲ್ಲಿ ತ್ಯಾಜ್ಯವನ್ನು ತಂದು ಸುರಿಯುತ್ತಿರುವ ಶಂಕೆ ವ್ಯಕ್ತವಾಗಿದ್ದು, ಈ ಬೇಜವಾಬ್ದಾರಿ ವರ್ತನೆಯಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯಲ್ಲಿ ಕಸ ಬಿಸಾಡುವುದರಿಂದ ಪರಿಸರದ ಸ್ವಚ್ಛತೆ ಹಾಳಾಗುವುದಲ್ಲದೆ, ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ.
ಸಿದ್ದಾಪುರದಲ್ಲಿ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆ ಮತ್ತಷ್ಟು ಗಂಭೀರವಾಗಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪ. ಶಾಲಾ-ಕಾಲೇಜುಗಳ ಮುಂಭಾಗ ಸೇರಿದಂತೆ ಪಟ್ಟಣದ ಹಲವು ಪ್ರಮುಖ ರಸ್ತೆ ಬದಿಗಳಲ್ಲಿ ತ್ಯಾಜ್ಯದ ರಾಶಿಗಳು ಕಂಡುಬರುತ್ತಿವೆ. ಇದರಿಂದ ಸ್ವಚ್ಛತಾ ವ್ಯವಸ್ಥೆಯ ನಿರ್ವಹಣೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ರಸ್ತೆ ಬದಿಯಲ್ಲಿ ಸಂಗ್ರಹವಾಗುವ ಆಹಾರ ತ್ಯಾಜ್ಯ ಮತ್ತಿತರ ಕಸ ಬೀದಿ ನಾಯಿಗಳನ್ನು ಆಕರ್ಷಿಸುತ್ತಿದೆ. ನಾಯಿಗಳ ಹಾವಳಿ ಹೆಚ್ಚಾ ಗುವುದರ ಜತೆಗೆ ತ್ಯಾಜ್ಯ ಕೊಳೆಯುವುದರಿಂದ ದುರ್ವಾಸನೆ ಹರಡುತ್ತಿದೆ. ಸೊಳ್ಳೆ, ನೊಣಗಳ ಹಾವಳಿಯೂ ಮಿತಿ ಮೀರಿದ್ದು, ಪರಿಸರ ಮಾಲಿನ್ಯ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಉಂಟಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯುವವರನ್ನು ಪತ್ತೆಹಚ್ಚಲು ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂದಾಗಬೇಕು. ಅಗತ್ಯವಿ ದ್ದಲ್ಲಿ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ರಸ್ತೆ ಬದಿಯಲ್ಲಿ ಸಂಗ್ರಹವಾ ಗಿರುವ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು ಎಂಬುದು ಸಾರ್ವಜ ನಿಕರ ಆಗ್ರಹವಾಗಿದೆ.
ಕೇವಲ ಕಸ ತೆರವುಗೊಳಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಮನೆ ಹಾಗೂ ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸಲು ನಿಯಮಿತ ವ್ಯವಸ್ಥೆ ರೂಪಿಸಬೇಕು. ಹಸಿ ಕಸ, ಒಣ ಕಸ ವಿಂಗಡಣೆ, ವೈಜ್ಞಾನಿಕ ಸಂಸ್ಕರಣೆ ಮತ್ತು ಸೂಕ್ತ ವಿಲೇವಾರಿಗೆ ಆದ್ಯತೆ ನೀಡಬೇಕು.
ಸ್ವಚ್ಛ ಸಿದ್ದಾಪುರ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವವರ ವಿರುದ್ಧ ದಂಡ ವಿಧಿಸುವುದರೊಂದಿಗೆ ಸಮರ್ಪಕ ವಾಗಿ ಕಸವಿಲೇವಾರಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
” ಕಸ, ತ್ಯಾಜ್ಯವನ್ನು ರಸ್ತೆಯಲ್ಲಿ ಅಥವಾ ಸಾರ್ವಜನಿಕ ಜಾಗದಲ್ಲಿ ಎಸೆಯುವುದು ಅನಾಗರಿಕ ವರ್ತನೆ. ಸಮರ್ಪಕವಾಗಿ ಕಸ ವಿಲೇವಾರಿ ಮಾಡಿ ಪರಿಸರ ನೈರ್ಮಲ್ಯ ಕಾಪಾಡಲು ಗ್ರಾಮಾಡಳಿತಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು.”
-ರೆಜಿತ್ ಕುಮಾರ್, ಗ್ರಾಪಂ ಮಾಜಿ ಸದಸ್ಯ
” ತ್ಯಾಜ್ಯ ವಿಲೇವಾರಿ ವಾಹನವನ್ನು ಪ್ರತಿ ದಿನ ಮನೆ ಬಾಗಿಲಿಗೆ ಕಳುಹಿಸಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಕಸ ಸುರಿಯುವವರ ಮೇಲೆ ನಿಗಾ ಇರಿಸಲು ಸಿಸಿಟಿವಿ ಅಳವಡಿಸಲಾಗಿದ್ದು, ಸುರಿಯುವುದು ಪತ್ತೆಯಾದಲ್ಲಿ ದಂಡ ವಿಧಿಸಲಾಗುತ್ತಿದೆ.”
-ಸತೀಶ್, ಅಭಿವೃದ್ಧಿ ಅಧಿಕಾರಿ, ಸಿದ್ದಾಪುರ ಗ್ರಾಪಂ
” ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದು ವಿದ್ಯಾವಂತ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯವಾಗಿದೆ. ಮಾಲ್ದಾರೆ ಭಾಗದ ಅರಣ್ಯದಂಚಿನಲ್ಲಿ ಕಸ ಸುರಿಯುತ್ತಿರುವುದು ವನ್ಯಜೀವಿಗಳಿಗೆ ಮಾರಕವಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯಿತಿ ಕೆಲಸ ನಿರ್ವಹಿಸುವಲ್ಲಿ ವಿಫಲವಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ರಸ್ತೆಬದಿ ತ್ಯಾಜ್ಯ ವಿಲೇವಾರಿ ಮಾಡುವುದು ಕಂಡುಬಂದರೆ ಸಾರ್ವಜನಿಕರು ಖಂಡಿಸಬೇಕು.”
-ಅಂಥೋನಿ, ಜನಪರ ಸಂಘಟನೆ ಮುಖಂಡರು, ಮಾಲ್ದಾರೆ
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಜಗತ್ತಿನ ಅತ್ಯಂತ ತಣ್ಣಗಿನ ಮ್ಯಾರಥಾನ್‌ನಲ್ಲಿ ಈವರೆಗೆ ಭಾಗವಹಿಸಿದ ಏಕೈಕ ಭಾರತೀಯ ರಾಮ್ ಗೋಪಾಲ್ ಕೊಟಾರಿ…
ಹೆಚ್.ಡಿ.ಮಣಿಕಂಠ ನಾಯಕ್ ಯಳಂದೂರು ಪಟ್ಟಣ ಪಂಚಾಯಿತಿ ಎದುರಿನ ಉದ್ಯಾನದ ಅವ್ಯವಸ್ಥೆ ಸರಿಪಡಿಸಲು ಆಗ್ರಹ ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಣ…
ದಿನೇಶ್ ಕುಮಾರ್ ಎಚ್.ಎಸ್. ‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಅನಿಸಿಕೆ ಹಂಚಿಕೊಂಡ ನೂತನ ಪೊಲೀಸ್ ಆಯುಕ್ತ ಎನ್.ವಿಷ್ಣುವರ್ಧನ್ ಮೈಸೂರು: ಬೆಂಗಳೂರಿನ…
ನವದೆಹಲಿ: ನವೆಂಬರ್ 26ರಂದು ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹೈಕಮಾಂಡ್…
ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು…