ಬಾ.ನಾ. ಸುಬ್ರಮಣ್ಯ

ವೈಡ್ ಆಂಗಲ್: ದೂರದರ್ಶನವನ್ನು ವೀಕ್ಷಕರ ಸಮೀಪಕ್ಕೆ ಒಯ್ಯುವತ್ತ ಮೊದಲ ಹೆಜ್ಜೆ

– ಬಾನಾ ಸುಬ್ರಮಣ್ಯ

ಮೊನ್ನೆ ಭಾನುವಾರ ದೂರದರ್ಶನದ ಮಹಾನಿರ್ದೇಶಕ, ಪ್ರಸಾರ ಭಾರತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಯಾಂಕ ಅಗರವಾಲ ಬೆಂಗಳೂರಿನಲ್ಲಿದ್ದರು. ಅಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವ ಎಲ್.ಮುರುಗನ್‍ ಅವರೂ  ಮೀನುಗಾರಿಕಾ ಇಲಾಖೆಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು.
ದೂರದರ್ಶನ ಮತ್ತು ಆಕಾಶವಾಣಿಯ ಕಾರ್ಯಕಲಾಪಗಳ ಕುರಿತಂತೆ ಪರಿಶೀಲನೆ, ಚರ್ಚೆಗೆ ಬಂದಿದ್ದ ಮಯಾಂಕಅವರು, ನಗರದ ಚಲನಚಿತ್ರ ಪತ್ರಕರ್ತರ ಜೊತೆಗೂ ಒಂದಷ್ಟು ಸಮಯ ಕಳೆದರು. ದೂರದರ್ಶನ 80 ಮತ್ತು 90 ರ ದಶಕಗಳಲ್ಲಿ ಹೊಂದಿದ್ದ ಜನಪ್ರಿಯತೆಯನ್ನು ಮರಳಿ ಪಡೆಯುವ ಅಂಚಿನಲ್ಲಿದ್ದು, ಆ ನಿಟ್ಟಿನಲ್ಲಿ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯ ಕುರಿತಂತೆಯೂ ಅವರು ಪ್ರಸ್ತಾಪಿಸಿದರು. ಉಪಗ್ರಹ ವಾಹಿನಿಗಳು trp ಗಾಗಿ ಪ್ರಸಾರಮಾಡುವ ಕಾರ್ಯಕ್ರಮಗಳು, ಬಹಳಷ್ಟು ಸಂದರ್ಭಗಳಲ್ಲಿ ಅಭಿರುಚಿಯ ಅಂಚಿನ ಆಚೆ ಇರುತ್ತವೆ. ಕೌಟುಂಬಿಕ ಧಾರಾವಾಹಿಗಳೆಂದರೆ, ಅವು ಮನೆಗಳನ್ನು ಒಡೆಯುವ, ಮೌಲ್ಯಗಳನ್ನು ಮರೆತವುಗಳೇ ಹೆಚ್ಚು. ಧಾರಾವಾಹಿ ಪ್ರಪಂಚದ ಹೆಸರಾಂತ ನಿರ್ಮಾಪಕಿ ಏಕ್ತಾ ಕಪೂರ್‍ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಎದುರಿಸಿದ ಪ್ರಶ್ನೆಗಳೇ ಇದಕ್ಕೆ ಸಾಕ್ಷಿ.
ಖಾಸಗಿ ವಾಹಿನಿಗಳ ಈ ಸ್ಪರ್ಧೆಯಲ್ಲಿದೂರದರ್ಶನದ ಕಾರ್ಯಕ್ರಮಗಳು, ಸುದ್ದಿಪ್ರಸಾರ, ಕೆಲಕಾಲ ಮಂಕಾದದ್ದು ಹೌದು. ಈಗ ವೀಕ್ಷಕರಿಗೆ ತಮಗೇನು ಬೇಕು ಎನ್ನುವುದು ಗೊತ್ತು. ಚರ್ಚೆಯ ಹೆಸರಲ್ಲಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ಜಗಳಗಳು, ನಿರೂಪಕರೇ ನ್ಯಾಯವಾದಿಗಳಂತೆ ವರ್ತಿಸುವುದು, ಅಪರಾಧ ಪ್ರಕರಣಗಳ ವರದಿಯಲ್ಲಿ, ಪತ್ತೆಗೆ ತೊಡಕಾದ ಪ್ರಸಂಗಗಳು ಇವೆಲ್ಲವು ಖಾಸಗಿ ವಾಹಿನಿಗಳ ಜನಪ್ರಿಯತೆಗೆ ಸ್ವಲ್ಪತಡಯಾಗಿದೆ ಎನ್ನಲಾಗಿದೆ.
ದೂರದರ್ಶನ ಇದೀಗ ಸದಭಿರುಚಿಯ ಕಾರ್ಯಕ್ರಮಗಳನ್ನು ಹೆಚ್ಚುಹೆಚ್ಚು ಪ್ರಸಾರ ಮಾಡಲು ನಿರ್ಧರಿಸಿದ್ದಾಗಿ ಮಯಾಂಕ ಹೇಳಿದರು. ಸ್ವಾತಂತ್ರ್ಯಅಮೃತ ಮಹೋತ್ಸವದ ಸಂದರ್ಭದಲ್ಲಿ ಐತಿಹಾಸಿಕ ಸಾಕ್ಷ್ಯಕಥಾನಕʻಸ್ವರಾಜ್ʼಧಾರಾವಾಹಿಯನ್ನು ಆರಂಭಿಸಿದ್ದು, ಅದು 75 ಕಂತುಗಳಲ್ಲಿ ಪ್ರಸಾರವಾಗಲಿದೆ. 1498ರಲ್ಲಿ ಭಾರತಕ್ಕೆ ಬಂದಿಳಿದ ವಾಸ್ಕೋಡಗಾಮನಿಂದ ಮೊದಲ್ಗೊಂಡು, ಪೋರ್ಚುಗೀಸರ ವಿರುದ್ಧ ಹೋರಾಡಿದ ಉಳ್ಳಾಲದ ರಾಣಿಅಬ್ಬಕ್ಕ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ವೀರಾಗ್ರಣಿಗಳೇ ಮೊದಲಾದವರ ಸಾಹಸಗಾಥೆಯನ್ನು ಈ ಸರಣಿ ನಿರೂಪಿಸಲಿದೆ ಎನ್ನುತ್ತಾರೆ ಮಯಾಂಕ. ಹಿಂದಿಯಲ್ಲಿʻಸ್ವರಾಜ್-ಭಾರತ್ ಕೆ ಸ್ವತಂತ್ರತಾ ಸಂಗ್ರಾಮ್ ಕಿ ಸಮಗ್ರಗಾಥಾ’(ಸ್ವರಾಜ್- ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಮಗ್ರ ಗಾಥೆ) ಶೀರ್ಷಿಕೆ ಇದ್ದು, ಪ್ರತಿ ಭಾನುವಾರ ಪ್ರಸಾರವಾಗುತ್ತಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ, ಬೆಂಗಾಲಿ, ಒಡಿಯಾ, ಅಸ್ಸಾಮಿ ಭಾಷೆಗಳಲ್ಲೂ ಇದು ಪ್ರಸಾರ ಆಗುತ್ತಿದ್ದು, ಇಂಗ್ಲಿಷಿನಲ್ಲೂ ಡಬ್ ಆಗಿ ಪ್ರಸಾರವಾಗಲಿದೆ.
ದೂರದರ್ಶನಕ್ಕಾಗಿ ಖಾಸಗಿ ಸಂಸ್ಥೆ ಕಂಟೋಲಿ ಪಿಕ್ಚರ್ಸ್‍ ಇದನ್ನು ನಿರ್ಮಿಸುತ್ತಿದೆ. 1498ರಿಂದ 1947 ಆಗಸ್ಟ್ ವರೆಗೆ ವಿಸ್ತೃತವಾಗಿರುವ ಈ ಧಾರಾವಾಹಿಯಲ್ಲಿ 500ಕ್ಕೂ ಹೆಚ್ಚು ಮಂದಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಹೇಳಲಾಗುವುದಂತೆ. ಇವರಲ್ಲಿ ಬಹಳಷ್ಟು ಮಂದಿಯ ಕುರಿತು ಜನಸಾಮಾನ್ಯರಿಗೆ ತಿಳಿದಿಲ್ಲ ಎನ್ನುತ್ತಾರೆ ಮಯಾಂಕ.
ಕನ್ನಡ ಮನರಂಜನೋದ್ಯಮ ತನ್ನ ಸೀಮೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಕನ್ನಡಕಲಾವಿದರು, ತಂತ್ರಜ್ಞರ ಜೈತ್ರ ಯಾತ್ರೆ ಮುಂದುವರಿದಿದೆ. ಆದರೆ ಇಂತಹ ಸರಣಿಗಳ ನಿರ್ಮಾಣದ ವೇಳೆ, ಕಲಾವಿದರನ್ನು ಆರಿಸುವಾಗ, ಅದು ಹಿಂದಿಗೆ ಮಾತ್ರ ಸೀಮಿತವಾಗಬಾರದು, ಇತರ ಭಾಷೆಗಳ ಕಲಾವಿದರಿಗೂ ಅವಕಾಶ ಸಿಗುವಂತಾಗಬೇಕು ಎನ್ನುವ ಮಾತಿಗೆ ದೂರದರ್ಶನದ ಮಹಾ ನಿರ್ದೇಶಕರೂ ʻಹೌದೆʼನ್ನುತ್ತಾರೆ. ಅದುಕಾರ್ಯಗತವಾಗಬೇಕು .
ಕೇಂದ್ರ ಸರ್ಕಾರದ ಸೌಲಭ್ಯಗಳು, ಅವಕಾಶಗಳು ಉತ್ತರ ಭಾರತದತ್ತ, ಅದರಲ್ಲೂ ಹಿಂದಿ ಭಾಷಿಕ ಪ್ರದೇಶಗಳಿಗೆ, ಹಿಂದಿ ಭಾಷೆಯನ್ನು ಬಳಸುವವರಿಗೆ ಹೆಚ್ಚು ದೊರಕುತ್ತವೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ದೂರದರ್ಶನವೂ ಇದಕ್ಕೆ ಹೊರತೇನಲ್ಲ. ಕಳೆದ ವರ್ಷ ಈ ಕುರಿತಂತೆ ಪ್ರಕಟಣೆಯೊಂದು ಅದನ್ನು ಸಾರುತ್ತದೆ. ದೂರದರ್ಶನದರಾಷ್ಟ್ರೀಯಜಾಲದಲ್ಲಿ ಪ್ರಸಾರ ಮಾಡಲು ಹಿಂದಿ ಚಿತ್ರಗಳನ್ನು ಆಯ್ಕೆ ಮಾಡುವ ನೀತಿಯೊಂದು ಅದರ ಜಾಲತಾಣದಲ್ಲಿದೆ. ವಿವಿಧ ರೀತಿಯ ಜನಪ್ರಿಯ ಚಿತ್ರಗಳು, ಗಂಭೀರ ಚಿತ್ರಗಳು, ರಾಷ್ಟ್ರ ಪ್ರಶಶ್ತಿ ಪಡೆದ ಚಿತ್ರಗಳು, ಮಕ್ಕಳ ಚಿತ್ರಗಳೇ ಸೇರಿದಂತೆ ಹಿಂದಿ ಚಿತ್ರಗಳಿಗೆ ರಾಯಲ್ಟಿ ನೀಡಿ ಪ್ರಸಾರ ಮಾಡುವ ಚಿತ್ರಗಳಿಗೆ ಇರುವ ನೀತಿ ಇದು. ಈ ಅವಕಾಶವನ್ನು ಭಾರತದ ಎಲ್ಲ ಭಾಷೆಗಳ ಚಿತ್ರಗಳಿಗೂ ವಿಸ್ತರಿಸಬೇಕು ಎನ್ನುವ ಸಲಹೆಯನ್ನು ಮಹಾನಿರ್ದೇಶಕರು ಒಪ್ಪುತ್ತಾರೆ, ಆದರೆ ಅದು ಕಾರ್ಯಗತ ಆಗುವುದೇ ಎನ್ನುವುದನ್ನು ಮುಂದಿನ ದಿನಗಳು ಹೇಳಲಿವೆ.
ರಾಷ್ಟ್ರ ಪ್ರಶಸ್ತಿ ಪಡೆದ ಎಲ್ಲ ಭಾಷೆಗಳ ಚಿತ್ರಗಳನ್ನು ದೂರದರ್ಶನದಲ್ಲಿ ಪ್ರತಿ ಶನಿವಾರ ಪ್ರಸಾರ ಮಾಡುವ ಯೋಜನೆ ಈ ಹಿಂದೆ ಇತ್ತು. ಸಾಮಾನ್ಯವಾಗಿ ಇಂತಹ ಚಿತ್ರಗಳನ್ನು ದೂರದರ್ಶನದಲ್ಲೇ ಆಸಕ್ತರು ನೋಡಬೇಕಿತ್ತು. ಪ್ರದರ್ಶಕ ವಲಯದ ಹೆಚ್ಚಿನ ಮಂದಿಗೆ ಇಂತಹ ಚಿತ್ರಗಳೆಂದರೆ ಅದೇಕೋ ಅಸಡ್ಡೆ. ಉಪಗ್ರಹವಾಹಿನಿಗಳು, ಇತ್ತೀಚೆಗೆ ಬಂದ ಒಟಿಟಿ ತಾಣಗಳು ಕೂಡಾ ಇಂತಹ ಚಿತ್ರಗಳನ್ನು ಕೊಂಡುಕೊಳ್ಳುವುದು ಅಪರೂಪ. ಹಾಗಾಗಿ ಈ ಚಿತ್ರಗಳಿಗೆ ದೂರದರ್ಶನ ಕಾಯಕಲ್ಪವಾಗುತ್ತಿತ್ತು.
ಆದರೆ ಕೆಲವು ವರ್ಷಗಳಿಂದ ಈ ಸೌಲಭ್ಯವನ್ನು ತೆಗೆದುಹಾಕಲಾಗಿದೆ. ಆದರೆ ಹಿಂದಿ ಚಿತ್ರಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ನೆರವು ಕಲ್ಪಿಸಿಕೊಡಲು ಯೋಜನೆಗಳಿವೆ ಎನ್ನುತ್ತಿವೆ ಮೂಲಗಳು. ಇತ್ತೀಚೆಗೆ ಪ್ರಶಸ್ತಿ ವಿಜೇತ ಚಿತ್ರಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವ ಕುರಿತಂತೆ ಚರ್ಚೆ ನಡೆದಿದ್ದು, ಇಷ್ಟರಲ್ಲೇ ಅದು ಸಾಧ್ಯವಾಗಲಿದೆ ಎಂದು ಮಯಾಂಕ ಹೇಳುತ್ತಾರೆ.
ದೂರದರ್ಶನದ ಬೆಂಗಳೂರು ಕೇಂದ್ರ ಚಂದನದಲ್ಲೂ ಪ್ರಶಸ್ತಿ ವಿಜೇತ ಚಿತ್ರಗಳ ಪ್ರಸಾರ ಆಗುತ್ತಿತ್ತು. ಆದರೆ ಅದೇಕೋ ಏನೋ ಇಲ್ಲೂ ಅದಿಲ್ಲ. ಅದಕ್ಕೆ ರಾಯಧನ ಕಡಿಮೆಎನ್ನುವ ಕಾರಣವೋ, ಕೃತಿಸ್ವಾಮ್ಯದತ ಕರಾರೋ ಕಾರಣ ಎನ್ನುವ ಮಾತೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ಕನ್ನಡ ಚಿತ್ರಗಳ ಪ್ರಸಾರಕ್ಕೆ ತೊಡಕಂತೂ ಇದೆ.
ವೈವಿಧ್ಯತೆಯಲ್ಲಿ ಏಕತೆಯ ಭಾರತದ ಪ್ರಾದೇಶಿಕ ಕೇಂದ್ರಗಳಲ್ಲಿ ಆಯಾ ಪ್ರದೇಶದ ಕಲೆ, ಸಂಸ್ಕøತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮಹಾನಿರ್ದೇಶಕರ ಅದೇಶ ಇದೆ. ಬೆಂಗಳೂರು ಕೇಂದ್ರದ ಮೂಲಕ ಕರ್ನಾಟಕ ಜಾನಪದ ಲೋಕದ ಬಾಗಿಲು ತೆಗೆಯಬಹುದು. ಆ ಕುರಿತಂತೆ ಆಸಕ್ತಿಯೂ ಅಲ್ಲಿತ್ತು. ಕನ್ನಡ ಸಾಹಿತ್ಯ ಕೃತಿಗಳನ್ನು ಆಧರಿಸಿ ಧಾರಾವಾಹಿಗಳನ್ನು ನಿರ್ಮಿಸಿ, ಪ್ರಸಾರಮಾಡಲೂ ಅವಕಾಶವಿದೆ. ಈ ಹಿಂದೆʻಕಥೆಗಾರʼಹೆಸರಲ್ಲಿ ಬೇರೆ ಬೇರೆ ಕಥೆಗಾರರ ಕಥೆಗಳು ಪ್ರಸಾರವಾಗಿವೆ. ಈಗಲೂ ಅದಕ್ಕೆ ಅವಕಾಶವಿರುವುದಿಲ್ಲ. ಆದರೆ ಅದೇಕೋ ಏನೋ, ಕನ್ನಡ ಸಾಂಸ್ಕೃತಿಕ ಲೋಕದ ಸೃಜನಶೀಲರೂ ಇತ್ತೀಚೆಗೆ ದೂರದರ್ಶನ ಎಂದರೆ ಕೊಂಚ ದೂರವೇ ನಿಲ್ಲುತ್ತಿದ್ದಾರೆ ಎನಿಸುತ್ತಿದೆ.
ಬಹುತೇಕ ಮನರಂಜನಾ ವಾಹಿನಿಗಳನ್ನು ಕೇಬಲ್ ಮೂಲಕವೋ, ಡಿಟಿಎಚ್ ಮೂಲಕವೋ ನೋಡಲು ಶುಲ್ಕ ತೆರಬೇಕು. ದೂರದರ್ಶನದ ಎಲ್ಲ ವಾಹಿನಿಗಳೂ ಮುಕ್ತ. ವಿವಾದಗಳಿಲ್ಲದ, ಸದಭಿರುಚಿಯ ಕಾರ್ಯಕ್ರಮಗಳು ಮಾತ್ರ ಇಲ್ಲಿ ಪ್ರಸಾರವಾಗುತ್ತಿವೆ. ಗುಣಮಟ್ಟದ ಕಡೆಗೂ ಹೆಚ್ಚು ಗಮನ ಕೊಡಲಾಗುತ್ತಿದೆ. ದೂರದರ್ಶನ ಮತ್ತೆ ಹಿಂದಿನಂತೆ ವಿಜೃಂಭಿಸಬಹುದು ಎನ್ನುವ ನಿರೀಕ್ಕೆ ಮಹಾನಿರ್ದೇಶಕರದು.

andolanait

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

8 hours ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

9 hours ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

9 hours ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

9 hours ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

9 hours ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

9 hours ago