ಎಡಿಟೋರಿಯಲ್

ಸಕ್ಕರೆ ಕಾರ್ಖಾನೆ ಗುಮಾಸ್ತನ ಮಗ ಈಗ ಐ.ಪಿ.ಎಸ್

-ಡಾ.ಮಹಾಂತೇಶ ಬಿರಾದಾರ

ಉತ್ತರಾಖಂಡ ರಾಜಧಾನಿ ಡೆಹರಾಡೂನನಲ್ಲಿ ನೂರು ವರ್ಷಗಳಿಗಿಂತಲೂ ಹಿಂದೆಯೆ ಬ್ರಿಟಿಷ್ ರಾಜ್ ಇದ್ದಾಗ ಸ್ಥಾಪನೆಗೊಂಡ ಫಾರೆಸ್ಟ್ ರಿಚಸರ್ಚ್ ಇನಸ್ಟಿಟ್ಯೂಟ್‍ನ 1600 ಎಕರೆ ವಿಶಾಲ ಆವರಣದಲ್ಲಿ ಬೆಳಿಗ್ಗೆ ವಾಕ್ ಮಾಡುತ್ತಿದ್ದಾಗ ಪಿ.ಕೆ.ಪ್ರಶಾಂತ ತಮ್ಮ ನೆನಪಿನ ಬುತ್ತಿ ಬಿಚ್ಚಿದರು.

“ಬಿ.ಎಸ್.ಸಿ ಕೃಷಿ, ಎಂ.ಎಸ್.ಸಿ ಕೃಷಿ, ಚಿನ್ನದ ಪದಕದೊಂದಿಗೆ ಮುಗಿಸಿದ ನನಗೆ ಪ್ರಾಧ್ಯಾಪಕನಾಗಬೇಕೆಂಬ ಹಂಬಲವಿತ್ತು. ಶಾಲಾ ಶಿಕ್ಷಕರಾಗಿದ್ದ ನಮ್ಮ ತಂದೆಯವರ ಕನಸು ಅದಾಗಿತ್ತು. ದೆಹಲಿಯ ಭಾರತೀಯ ಕೃಷಿ ಸಂಶೋಧನ ಕೇಂದ್ರದಲ್ಲಿ ಪಿ.ಎಚ್.ಡಿ ಮಾಡಲು ಹೋದಾಗ ಜೊತೆಗಿದ್ದ ಸ್ನೇಹಿತರು ಸ್ಪರ್ಧಾತ್ಮಕ ಪರೀಕ್ಷೆಗಳ ಎದುರಿಸಲು ತಯಾರಿಯಲ್ಲಿದ್ದರು. ನನಗೂ ಆಗ ಆಸೆ ಚಿಗುರಿತು. ಈ ಮಧ್ಯೆಯೆ ತಂದೆ ಕಾಲವಾದರು. ಇದು ದೊಡ್ಡ ಆಘಾತ. ಚೇತರಿಸಿಕೊಳ್ಳುವ ಮುನ್ನವೇ ದೆಹಲಿಯ ಖಾಸಗಿ ತರಬೇತಿ ಕೇಂದ್ರದಲ್ಲಿ ಸೇರಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ಎದುರಿಸುವ ಬಗೆ ತಿಳಿದುಕೊಂಡೆ. ನಾನಿದ್ದ ಕೋಣೆಯಿಂದ ತರಬೇತಿಗೆ ನಿತ್ಯ 6 ಕೀ.ಮಿ ಸೈಕಲ್ ಸಂಚಾರ. ಕೊರೆಯುವ ಚಳಿಯಲ್ಲಿ ಸೈಕಲ್ ತುಳಿಯುತ್ತ ಬರುವಾಗ ವಿಪರೀತ ಹಸಿವು. ಸೈಕಲ್ ಇಳಿದು, ರಸ್ತೆ ಬದಿಯ ಅಂಗಡಿಯಲ್ಲಿ ಸಿಗುವ ಚಿತ್ರಾನ್ನದ ಬೆಲೆ ಅಂದು ಕೇವಲ 8 ರೂಪಾಯಿ. ಆ ಅಗ್ಗದ ಅನ್ನಕ್ಕೂ ಕಾಸಿರಿರಲಿಲ್ಲ. ಅನಿವಾರ್ಯವಾಗಿ ಮರಳಿ ಮಣ್ಣಿಗೆ ಎನ್ನುವಂತೆ ಹರಪ್ಪನಹಳ್ಳಿಗೆ ಮರಳಿದೆ. ವಿಷಯ ತಿಳಿದ ಅಲ್ಲಿನ ಮುತ್ಸದ್ಧಿ ನಾಯಕ ಎಂ.ಪಿ.ಪ್ರಕಾಶ ಕರೆದು, ಪತ್ರ ನೀಡಿ, ಬೆಂಗಳೂರಿನಲ್ಲಿ ಸೂತ್ತೂರು ಸ್ವಾಮೀಜಿಯವರ ಜಸ್ಟಿಸ್ ಸಂಸ್ಥೆಯಿದೆ ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾರೆ. ನೀನು ಕೊರಗುತ್ತ ಇಲ್ಲಿ ಕೂರಬೇಡ. ಅಲ್ಲಿಗೆ ಹೋಗು ಏನಾದರೂ ಸಾಧಿಸುತ್ತೀಯ ಎಂದು ಬೆನ್ನು ಚಪ್ಪರಿಸಿ, ಕಳುಹಿಸಿದರು.

ಪತ್ರ ತೆಗೆದುಕೊಂಡು ಸೂತ್ತೂರು ಶ್ರೀಗಳನ್ನು ಕಾಣಲು ಹೋದಾಗ, ಸಹಾಯ ಅರಸಿ ಬಂದವರ ದೊಡ್ಡ ಕ್ಯೂ! ಅವರ ಸಹಾಯಕರಿಗೆ ಪತ್ರ ಕೊಟ್ಟೆ. ಎಂ.ಪಿ.ಪ್ರಕಾಶ ಅವರ ಪತ್ರ ನೋಡಿದ ಅವರು ಕ್ಯೂನಲ್ಲಿದ್ದ ನನ್ನನ್ನು ಕರೆಕಳುಹಿಸಿದರು. ಪ್ರೀತಿಯಿಂದ ಮಾತನಾಡಿಸಿ, ತಮ್ಮ ಸಂಸ್ಥೆಯಲ್ಲಿ ತರಬೇತಿಗೆ ಅವಕಾಶ ಮಾಡಿಕೊಟ್ಟು, ಅನ್ನ, ಆಶ್ರಯ ನೀಡಿದರು. ಒಂದೆ ವರ್ಷದಲ್ಲಿ ನಾಲ್ಕು ಪರೀಕ್ಷೆಗಳಲ್ಲಿ ಪಾಸಾಗಿ ನಾಲ್ಕು ನೌಕರಿಯ ಅವಕಾಶ ಪಡೆದುಕೊಂಡೆ. ಉಪನ್ಯಾಸಕ, ಆರ್.ಎಫ್.ಓ, ಕೃಷಿ ಅಧಿಕಾರಿ ಮತ್ತು ಎ.ಸಿ.ಎಫ್. ಇನ್ನೂ ಹೆಚ್ಚಿನದನ್ನು ಸಾಧಿಸಬೇಕೆಂದರೂ, ಪರಿಸ್ಥಿತಿಯ ಮನಗಂಡು ಈ ನಾಲ್ಕರಲ್ಲಿಯೇ ಹೆಚ್ಚಿನ ಎ.ಸಿ.ಎಫ್ ಆಯ್ಕೆ ಮಾಡಿಕೊಂಡು ಸೇವೆಗೆ ಸೇರಿದೆ. 10 ವರ್ಷಗಳ ಸೇವೆ ತೃಪ್ತಿಕರವಾಗಿ ಮುಗಿಸುವಷ್ಟರಲ್ಲಿ ಸೇವಾ ನಿರತ ಐ.ಎಫ್.ಎಸ್‍ಗೆ ಬಡ್ತಿ ಹೊಂದಿದೆ. ಎರಡು ತಿಂಗಳ ತರಬೇತಿ ಇಂದಿಗೆ ಮುಗಿಯಿತು. ನಾಳೆಯಿಂದ ಕರ್ನಾಟಕದಲ್ಲಿ ನಾನು ಐ.ಎಫ್.ಎಸ್ ಅಧಿಕಾರಿ” ಎಂದು ನಡೆಯುತ್ತಲೇ ತಮ್ಮ ನಡೆದು ಬಂದ ದಾರಿಯನ್ನು ಪ್ರಶಾಂತ ನನಗೆ ಹಾಗೂ ಗುರು ಕೌವಲಗಿಗೆ ಹೇಳುತ್ತಿದ್ದರು.

ಅಲ್ಲಿಯೇ ತಂಗಿದ್ದ ನಮಗೆ ಮಾರನೇಯದಿನ ಹತ್ತಿರದ ಮಸೂರಿ ನೋಡಲು ಪ್ರಶಾಂತ ಏರ್ಪಾಡು ಮಾಡಿದ್ದರು. ಅಲ್ಲಿನ ಲಾಲ್‍ಬಹದ್ದೂರಶಾಸ್ತ್ರಿ ಆಡಳಿತ ತರಬೇತಿ ಕೇಂದ್ರಕ್ಕೆ ಭೇಟಿ ನೀಡುವುದು. ನಿಖಿಲ್ ಪಾಟೀಲ ಎಂಬುವರ ನಂಬರ ನೀಡಿದರು. ಮಸೂರಿ ಸುತ್ತಾಡಿ ಸಂಜೆ ನಿಖಿಲ್ ಪಾಟೀಲರಿಗೆ ಕರೆ ಮಾಡಿದಾಗ, ಎಂಟರೆನ್ಸ್ ಗೇಟ್‍ನಲ್ಲಿದ್ದೇನೆ ಬನ್ನಿ ಎಂದರು. ಹೋದಾಗ ಆಶ್ಚರ್ಯ. ಸೂಟು-ಬೂಟು ಹಾಕಿದ 25ವರ್ಷದ ಯುವಕ ಛತ್ರಿ ಹಿಡಿದು ನಿಂತಿದ್ದ. ಆರಾಮಿದ್ದೀರಾ ಎಂದು ಸ್ವಾಗತಿಸಿದ “ಅರೇ, ಇವ ನಮ್ಮಂವ” ಎಂದೇನೆಸಿತು. “ಕೇಳಿದಾಗ ನಾನು ತಾಳಿಕೋಟಿಯಂವ” ಎಂದ. ಕುತೂಹಲದಿಂದ ಕುಳಿತು ಮಾತನಾಡಿದೇವು. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಪಕ್ಕದ ಲಕ್ಕುಂಡಿ ಸ್ವಂತ ಗ್ರಾಮ. ತಂದೆ ಬಸವರಾಜ ಪಾಟೀಲ 30 ವರ್ಷಗಳ ಹಿಂದೆ ಗೋಕಾಕದ ಸಕ್ಕರೆ ಕಾರ್ಖಾನೆ ಉದ್ಯೋಗಿದಾದರೂ ಅಲ್ಲಿನ ಮಯೂರ ಶಾಲೆಯಲ್ಲಿ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗನನ್ನು ಓದಿಸಿದರು. ಮಗಳು ಕಿತ್ತೂರು ಶಾಲೆಯಲ್ಲಿ ಕಲಿತು ವೈದ್ಯಳಾದಳು. ಮಗ ಅಳಿಕೆಯ ಸತ್ಯಸಾಯಿ ಶಾಲೆಯಲ್ಲಿ ಓದಿದ. ಬೆಂಗಳೂರಿನ ಪಿಸೆಟ್‍ನಲ್ಲಿ ಮೆಕ್ಯಾನಿಕಲ್ ಎಂಜನಿಯರಿಂಗ್ ಸೇರಿಕೊಂಡು ಹಾಸ್ಟೇಲ್‍ನಲ್ಲಿ ಜಾಗ ಸಿಗದೆ ಸ್ನೇಹಿತರೊಂದಿಗೆ ಹೋರಗಡೆ ರೂಂ ಮಾಡಿಕೊಂಡ. ಅಪರಿಚಿತ ಗೆಳೆಯರು. ಹೊರಗಡೆ ಸಹವಾಸ, ಮಗ ಏನಾಗಿತ್ತಾನೋ ಎಂಬ ಚಿಂತೆ ತಂದೆ-ತಾಯಂದಿರಿಗೆ. ಆ ಸಹವಾಸವೇ ಮಗನನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೇರೆಪಿಸಿತು.

ಅಳಿಕೆ ಶಾಲೆಯಲ್ಲಿ ಓದುವಾಗ ಯುವ ಐ.ಎ.ಎಸ್., ಐ.ಪಿ.ಎಸ್ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಅಲ್ಲಿನ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ್ದು, ನಿಖಿಲ್‍ನಲ್ಲಿಯೂ ನಾನು ಹೀಗಾಗಬೇಕು ಎಂಬ ಮೊಳಕೆಯೂರಿತ್ತು. ಎಂಜನಿಯರಿಂಗ್ ವ್ಯಾಸಂಗ ಮುಗಿಸಿದಾಗ, ನಾನು ಯು.ಪಿ.ಎಸ್.ಸಿಗೆ ಪ್ರೀಪೇರ್ ಆಗುತ್ತೇನೆ ಎಂದು ದೆಹಲಿಗೆ ಹೊರಡಲು ಸಿದ್ದನಾದಾಗ ತಂದೆ ಬೆಂಬಲವಾಗಿ ನಿಂತರು. ದೆಹಲಿ ತಲುಪಿ ಮೊದಲ ಪ್ರಯತ್ನದಲ್ಲಿ ವಿಫಲನಾದೆ. ಎರಡನೇ ಯತ್ನದಲ್ಲಿ ಪ್ರಿಲಿಪ್ಸ್‍ಂ ಪಾಸಾದಾಗ ಮೇನ್ಸ್ ಆಗಲಿಲ್ಲ. ಮೂರನೇ ಯತ್ನದಲ್ಲಿ ಪ್ರಿಲಿಪ್ಸ್‍ಂ-ಮೇನ್ಸ್ ಪಾಸಾದರೂ ಇಂಟರಿವ್ಯೂ ಆಗಲಿಲ್ಲ. ತಂದೆಗೆ ನಿರಾಶೆಯಾಯಿತು. ಸಾಕಿನ್ನು ಮರಳಿ ಬಾ ಎಂದರು. ಮರಳಿ ಬೆಂಗಳೂರಿನ ವಿಜಯನಗರಕ್ಕೆ ಬಂದು ಕೊಠಡಿ ಬಾಡಿಗೆ ಪಡೆದುಕೊಂಡು ಮರಳಿ ಯತ್ನವಮಾಡು ಎಂಬಂತೆ ಅಂತಿಮ ಯತ್ನದಲ್ಲಿ ಗುರಿ ತಲುಪಿ, ರಾಷ್ಟ್ರಕ್ಕೆ 139ನೇ ರ್ಯಾಂಕ್ ಪಡೆದಾಗ, ತಂದೆ-ತಾಯಂದಿರ ಆನಂದಕ್ಕೆ ಪಾರವಿಲ್ಲ. ಲಿಂಗಾಯತರಿಗೆ ಕೇಂದ್ರ ಸರ್ಕಾರದಲ್ಲಿ ಮೀಸಲಾತಿ ಇಲ್ಲದಿರುವದರಿಂದ ಐ.ಎ.ಎಸ್‍ನಿಂದ ವಂಚಿತವಾದರೂ ಐ.ಪಿ.ಎಸ್ ಸಿಕ್ಕಿದೆ. ತರಬೇತಿ ನಂತರ ಮಹಾರಾಷ್ಟ್ರ ಅಥವಾ ಕರ್ನಾಟಕದಲ್ಲಿ ಸೇವೆ ದೊರೆಯುವ ಸಾಧ್ಯತೆಯಿದೆ. ಮತ್ತೆ ನೀನು ವಿಜಯಪುರಕ್ಕೆ ಬರಬೇಕು ಎಂದಾಗ ಖಂಡಿತ, ಅಜ್ಜ ಶಂಕರಗೌಡ ಕೃಷಿ, ಜಮೀನು ನೋಡಿಕೊಂಡು ನಮ್ಮ ಹಳ್ಳಿ ಲಕ್ಕುಂಡಿಯಲ್ಲಿದ್ದಾರೆ. ನಾನು ಬರುತ್ತೇನೆ ಎಂದ. ಭಾವಿ ಪೋಲೀಸ್ ವರಿಷ್ಠಾಧಿಕಾರಿ ಮನೆಯಲ್ಲಿ ವಂದಿಸಿ ಮರಳಿದೆ.

ದೆಹಲಿಯಿಂದ ವಿಮಾನದಲ್ಲಿ ಮರಳುತ್ತಿದ್ದಾಗ ಐ.ಎ.ಎಸ್, ಐ.ಪಿ.ಎಸ್ ಎಂಬ ಹುದ್ದೆಗಳು ನಮ್ಮ ಹಳ್ಳಿಯ ಸಾಮಾನ್ಯ ಕುಟುಂಬದ ಮಕ್ಕಳಿಗೆ ಎಂದಿಗೂ ಗಗನ ಕುಸುಮವೇ! ಇಂಥಹ ಅಸಾಧ್ಯಗಳೆಲ್ಲ ಇಂದು ಸಾಧ್ಯವಾಗುತ್ತಿವೆ. ಇದಕ್ಕೆ ಶ್ರದ್ಧೆ, ಪರಿಶ್ರಮ, ಕಷ್ಟಗಳನ್ನು ಮೆಟ್ಟಿ ನಿಂತಾಗ ಮಾತ್ರ ಸಾಧನೆಯ ಶಿಖರ ತಲುಪಲು ಸಾಧ್ಯ. ತಂದೆಯಿಲ್ಲದ ತಬ್ಬಲಿ ಮಗ ಪ್ರಶಾಂತ ಐ.ಎಫ್.ಎಸ್ ಅಧಿಕಾರಿಯಾಗಿದ್ದು ಮತ್ತು ಸಣ್ಣ ಹಳ್ಳಿಯ, ಸಕ್ಕರೆ ಕಾರ್ಖಾನೆಯ ಗುಮಾಸ್ತನ ಮಗ ನಿಖಿಲ್ ಐ.ಪಿ.ಎಸ್ ಆಗಲು ಸಾಧ್ಯವಾಗುತ್ತದೆ.

ಐ.ಎಫ್.ಎಸ್ ಅಧಿಕಾರಿ ಪ್ರಶಾಂತ ತನ್ನೆಲ್ಲ ಕಥೆಯನ್ನು ಹೇಳಿ ಕೊನೆಗೆ ಹೇಳಿದ್ದು, ಅಂದು ದೆಹಲಿಯಲ್ಲಿ ಸೈಕಲ್ ತುಳಿಯುತ್ತ 8ರೂಪಾಯಿ ಚಿತ್ರಾನ್ನ ತಿನ್ನಲು ಪರದಾಡುತ್ತಿದ್ದ ನನಗೆ ಈ ಸಮಾಜ ಪೋಷಿಸಿದೆ. ಇಂದು ದೆಹಲಿ ವಿಮಾನ ಇಳಿದಾಗ ಕಾರು ಬರುತ್ತದೆ. ಕರ್ನಾಟಕ ಭವನದಲ್ಲಿ ತಂಗುತ್ತೇನೆ. ಸಾವಿರ ರೂಪಾಯಿ ಕೊಟ್ಟು ಊಟ ಮಾಡುತ್ತೇನೆ ಎಂದರೆ ಅದು ಈ ಸಮಾಜದ ಋಣ. ಇದನ್ನು ತೀರಿಸಲು ಸಾಧ್ಯವಿಲ್ಲ. ಇಂಥಹ ನೂರಾರು ಮಕ್ಕಳನ್ನು ತಯಾರಿಸಲು ನಾನು ಸದಾ ಸಿದ್ಧನಿದ್ದೇನೆ ಎಂದಾಗ ಹೃದಯ ತುಂಬಿತು.

andolanait

Recent Posts

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

54 mins ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

5 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

5 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

5 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

8 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

8 hours ago