ಕೊನೆಗೂ ಕರ್ನಾಟಕದಲ್ಲಿ ಚಿತ್ರನಗರಿ ಸ್ಥಾಪನೆ ಆಗಲಿದೆಯೇ? ಕಳೆದ ಐವತ್ತುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಮೈಸೂರಿನಲ್ಲಿ ಕಾರ್ಯಗತವಾಗಲಿದೆಯೇ? ಹೀಗೊಂದು ಪ್ರಶ್ನೆ ಮತ್ತೆ ಎದ್ದಿದೆ. ಈ ಬಾರಿಯ೧೬ನೇ ವಿಧಾನಸಭಾ ಚುನಾವಣೆ ಪ್ರಕಟವಾಗುವ ಮೊದಲು ಚಿತ್ರನಗರಿ ಸ್ಥಾಪನೆಗೆ ಅಡಿಗಲ್ಲುಹಾಕುವ ಸಾಧ್ಯತೆಯಂತೂ ಇದ್ದೇಇದೆ ಎನ್ನುತ್ತಿವೆ ಮೂಲಗಳು.
ಕಳೆದ ಬಾರಿಯೂ ಇಂತಹದೇ ಮಾತು ಕೇಳಿಬಂದಿತ್ತು. ಆದರೆ ಅದೇಕೋ ಈಡೇರಲಿಲ್ಲ. ಆದರೆ, ಚಿತ್ರನಗರಿಗಾಗಿ ಮೈಸೂರಿನ ಇಮ್ಮಾವಿನಲ್ಲಿ ೧೧೦ ಎಕರೆ ಜಾಗವನ್ನು ಮೀಸಲಿರಿಸಿದ್ದು, ಅದನ್ನುಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿದ್ದಾಗಿ ಹೇಳಲಾಗಿತ್ತು. ಸಾಮಾನ್ಯವಾಗಿ, ಚಿತ್ರನಗರಿ ಇರುವ ಜಾಗಗಳು ಪ್ರವಾಸೋದ್ಯಮತಾಣಗಳೂ ಆಗಿರುವುದರಿಂದ ಬಹುಶಃ ಈ ನಿರ್ಧಾರ ಆಗಿತ್ತು ಎನಿಸುತ್ತದೆ.
ಈಗಾಗಲೇ ಹೇಳಿದಂತೆ, ಚಿತ್ರನಗರಿಯ ಕಲ್ಪನೆ ಮೊದಲು ಆದದ್ದು ಮೈಸೂರಿನಲ್ಲಿ. ಆಗಿನ್ನೂ ರಾಜ್ಯಕ್ಕೆ ಕರ್ನಾಟಕ ಎಂದುಹೆಸರಾಗಿರಲಿಲ್ಲ. ೧೯೭೨ರಲ್ಲಿ ಹೆಸರಘಟ್ಟದಲ್ಲಿ ಚಿತ್ರನಗರಿ ಸ್ಥಾಪಿಸುವ ಯೋಜನೆಗೆಅಡಿಗಲ್ಲು ಹಾಕಿದವರು ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜಅರಸು ಅವರು. ಮೂರು ಹಂತಗಳಲ್ಲಿ ಚಿತ್ರನಗರಿಯ ಸ್ಥಾಪನೆಯ ಯೋಜನೆ ಇತ್ತು. ಸುಮಾರು ೩೮೦ ಎಕರೆಯಷ್ಟು ಜಾಗವನ್ನು ಇದಕ್ಕಾಗಿ ಬೇರೊಂದು ಇಲಾಖೆಯಿಂದ ಪಡೆಯಲಾಗಿತ್ತು.
ಆಗ ಇದ್ದ ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮದ ಹೆಗಲಿಗೆ ಚಿತ್ರನಗರಿಯ ಸ್ತಾಪನೆಯ ಜವಾಬ್ದಾರಿ ಬಿದ್ದಿತ್ತು. ಬೇರೆಬೇರೆ ಕಾರಣಗಳಿಂದ ಅದು ನೆನೆಗುದಿಗೆ ಬಿತ್ತೆನ್ನಿ. ನಿಗಮ ಇರುವಲ್ಲಿಯವರೆಗೆ ಆಗಾಗ ಈ ಕುರಿತಂತೆ ಸುದ್ದಿಗಳಿದ್ದವು. ಅಲ್ಲಿ ಚಿತ್ರನಗರಿಗಾಗಿ ಮೀಸಲಿಟ್ಟ ಜಾಗದಲ್ಲಿ ತಾಜ್ ಬಳಗಕ್ಕೆ ಮುಂದೆ ಪಂಚತಾರಾ ಹೊಟೆಲ್ಗಾಗಿ ಹತ್ತು ಎಕರೆ ನೀಡಲಾಯಿತು. ಪ್ರತಿಮಾಬೇಡಿಯವರ ನೃತ್ಯಗ್ರಾಮಕ್ಕೆ ಹತ್ತು ಎಕರೆ ಕೊಡಲಾಯಿತು. ಆದರ್ಶ ಚಲನಚಿತ್ರ ತರಬೇತಿಕೇಂದ್ರಕ್ಕೂ ಅಲ್ಲಿ ಹತ್ತು ಎಕರೆ ಜಾಗ ನೀಡಲಾಗಿತ್ತು. ಅಲ್ಲಿ ಕಟ್ಟಡಕಟ್ಟಿ ತರಗತಿಗಳೂ ನಡೆದವು. ಅದ ಆಡಳಿತವನ್ನು ಬೇರೆಯವರು ವಹಿಸಿಕೊಂಡಿದ್ದರು. ಈಗಅದು ಮುಚ್ಚಿದೆ ಎನ್ನಲಾಗಿದೆ.
ಕೆ.ಆರ್.ವೃತ್ತದ ಬಳಿ ಇದ್ದ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನ ಚಲನಚಿತ್ರ ಛಾಯಾಗ್ರಹಣ ಮತ್ತು ಶಬ್ದ ಗ್ರಹಣ ಡಿಪ್ಲೊಮಾ ತರಗತಿಗಳನ್ನು ಪ್ರತ್ಯೇಕಿಸಿ, ಕರ್ನಾಟಕ ಚಲನ ಚಿತ್ರ ಮತ್ತು ದೂರದರ್ಶನ ತರಬೇತಿ ಸಂಸ್ಥೆ ಹೆಸರಿನಲ್ಲಿ ಹೆಸರಘಟ್ಟದಲ್ಲಿ ಸ್ತಾಪಿಸಲಾಗಿದೆ. ಅದಕ್ಕೆ ವಿಶ್ವಬ್ಯಾಂಕ್ ನೆರವು ನೀಡಿದೆ.
ಚಿತ್ರನಗರಿಯ ಒಳಗೆ ಚಲನಚಿತ್ರ ತರಬೇತಿ ಸಂಸ್ಥೆ ಇರಲಿದೆ ಎನ್ನುವ ಕಾರಣಕ್ಕೆ ಅದಕ್ಕಗಿ ೨೫ ಎಕರೆ ಜಾಗವನ್ನು ನೀಡಲಾಗಿತ್ತು. ವರ್ಗಾಯಿಸಲಾಗಿದೆ. ದೇಶದ ಹೆಸರಾಂತ ಛಾಯಾಗ್ರಾಹಕರಾಗಿದ್ದ ಮೈಸೂರಿನ ವಿ.ಕೆ. ಮೂರ್ತಿ ಅವರು ತರಬೇತಿ ಪಡೆದದ್ದು, ಜಯಚಾಮರಾಜೇಂದ್ರಪಾಲಿಟೆಕ್ನಿಕ್‌ನ್ನಲ್ಲೇ.
ನಗರದಿಂದ ದೂರ ಎನ್ನುವ ಕಾರಣದಿಂದ ಚಿತ್ರೋದ್ಯಮ ಆಲಸ್ಯ ತೋರಿಸಿದ ಕಾರಣದಿಂದಲೋ ಏನೋ ಚಿತ್ರ ನಗರಿಯ ಯೋಜನೆ ಕಡತದಲ್ಲೇ ಉಳಿಯಿತು. ಇತರ ರಾಜ್ಯಗಳಲ್ಲಿ ಚಿತ್ರನಗರಿಗಳು ತಲೆಎತ್ತತೊಡಗಿದವು. ಮುಂಬೈಯಲ್ಲಿ ದಾದಾ ಸಾಹೇಬ್ ಫಾಲ್ಕೆ ಚಿತ್ರನಗರಿ, ನೋಯ್ಡಾ ಚಿತ್ರನಗರಿ, ಹೈದರಾಬಾದಿನ ರಾಮೋಜಿ ಚಿತ್ರನಗರಿ ಹೀಗೆ. ಇದೀಗ ಉತ್ತರಪ್ರದೇಶದಲ್ಲಿ ದೇಶದಲ್ಲೇ ಅತಿ ದೊಡ್ಡದು ಎನ್ನಲಾದ ಚಿತ್ರನಗರಿ ಸಿದ್ಧವಾಗುತ್ತಿದ್ದು, ಈ ವರ್ಷದ ಕೊನೆಯ ಒಳಗೆ ಅದು ಪೂರ್ಣವಾಗಲಿದೆ ಎಂದು ವರದಿಯಾಗಿದೆ.
ಹ್ಞಾಂ, ಹೆಸರಘಟ್ಟದಲ್ಲಿ ಚಿತ್ರ ನಗರಿ ಸ್ಥಾಪನೆಗಾಗಿ ಮೀಸಲಾಗಿದ್ದ ಜಾಗದಲ್ಲಿ ಹಸಿರು ಉಳಿಸಿ ಕೊಳ್ಳುವುದೋ, ಕೆಲವೊಂದು ವಿಶೇಷ ಜೀವ ಪ್ರಬೇಧಗಳಿವೆ ಎನ್ನುವ ಕಾರಣಕ್ಕೋ ಸದ್ಯ ಆ ಜಾಗದಲ್ಲಿ ಬೇರೇನೂ ಮಾಡುವಂತಿಲ್ಲ, ಹಾಗೆಯೇ ಉಳಿಸಿಕೊಳ್ಳಬೇಕು ಎನ್ನುವ ಆದೇಶವಿದೆ. ಹಾಗಾಗಿ ಬೇರೊಂದು ಜಾಗದ ಹುಡುಕಾಟ ನಡೆಯಿತು. ಆ ಸಂದರ್ಭದಲ್ಲಿ ಮೈಸೂರಿನ ಇಮ್ಮಾವು ಪ್ರದೇಶದ ೧೧೦ ಎಕರೆ ಜಾಗವನ್ನು ಇದಕ್ಕಾಗಿ ಕಾಯ್ದಿರಿಲಾಯಿತು.
ಸರ್ಕಾರಗಳು ಬದಲಾದಂತೆ ಆದ್ಯತೆಗಳೂ ಬದಲಾಗುತ್ತಿರುತ್ತವೆ ಎನ್ನುವುದಕ್ಕೆ ಒಳ್ಳೆಯ ಉದಾಹರಣೆ ಚಿತ್ರನಗರಿ ಯೋಜನೆ. ಮೈಸೂರಿನಿಂದ, ಮುಂದೆ ಚಿತ್ರನಗರಿ ರಾಮನಗರಕ್ಕೆ ಬರುವುದು ಎಂದಾಯಿತು. ಅಲ್ಲಿ ಚಿತ್ರ ನಗರಿ ಮಾತ್ರವಲ್ಲ, ಸಿನಿಮಾ ವಿಶ್ವವಿದ್ಯಾನಿಲಯ ಸ್ಥಾಪಿಸುವ ಮಾತನ್ನೂಮುಂದಿನ ಮುಖ್ಯಮಂತ್ರಿಗಳು ಆಡಿದರು. ನಡುವೆ, ಹಾಲಿ ಮತು ್ತಮಾಜಿ ಮುಖ್ಯಮಂತ್ರಿಗಳಿಬ್ಬರೂ ಒಂದು ವೇದಿಕೆಯಲ್ಲಿದ್ದಾಗ, ರಾಮನಗ ಮತ್ತು ಮೈಸೂರು ಎರಡೂ ಕಡೆ ಚಿತ್ರನಗರಿ ಬರಲಿದೆ ಎಂದರು!
ಚಲನಚಿತ್ರಗಳು ಸೃಷ್ಟಿಸುವ ಭ್ರಮಾಲೋಕದಂತೆಯೇ ಚಿತ್ರನಗರಿಯ ಸ್ಥಾಪನೆಯ ಆಶ್ವಾಸನೆಗಳೂ ಆಗುತ್ತಿವೆ ಎಂದವರೂ ಇದ್ದಾರೆ. ತೀರಾ ಇತ್ತೀಚೆಗೆ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಎಸ್.ಟಿ. ಸೋಮಶೇಖರ, ನಮಿತಾರಾವ್‌ನಿರ್ಮಿಸಿ, ವಿಕ್ರಂ ಸೂರಿ ನಿರ್ದೇಶಿಸಿರುವ ‘ಚೌಕಾಬಾರ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ಅವರು ಮಾತನಾಡುತ್ತಾ ಇಷ್ಟರಲ್ಲೇ ತಾವು ಮೈಸೂರಿನ ಚಿತ್ರನಗರಿಯ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರು. ಜೊತೆಗೆ ಕೈಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿಗಳ ಸಭೆ ನಡೆಸಿ, ಚಿತ್ರ ನಗರಿ ಸ್ಥಾಪನೆಗೆ ಬೇಕಾದ
ಚಾಲನೆ ನೀಡವುದಾಗಿಯೂ ಹೇಳಿದರು. ಸಚಿವರು ಅಂಬರೀಶ್ ಅಭಿನಯದ ಒಂದು ಚಿತ್ರ ಮತ್ತು ಬಿ.ಸಿ. ಪಾಟೀಲ್ ಅಭಿನಯದ ಒಂದು ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದನ್ನೂ ನೆನಪಿಸಿಕೊಂಡರೆನ್ನಿ.
ಮಾಜಿ ಮುಖ್ಯಮಂತ್ರಿಗಳು ಕೂಡಾ ಇಮ್ಮಾವಿನಲ್ಲಿ ಚಿತ್ರನಗರಿ ಸ್ಥಾಪನೆಯ ಕುರಿತಂತೆ ಆಸಕ್ತರಾಗಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ವಿಧಾನಸಭೆಯ ವರುಣಕ್ಷೇತ್ರದಲ್ಲಿ ಇಮ್ಮಾವು ಇದ್ದು, ಅಲ್ಲಿ ಚಿತ್ರನಗರಿ ಸ್ಥಾಪನೆಯಾದರೆ ಚಲನಚಿತ್ರಗಳಿಗೆ ಮಾತ್ರವಲ್ಲ, ರಾಜಕೀಯವಾಗಿಯೂ ಅನುಕೂಲ ಆಗುತ್ತದೆ ಎನ್ನುವ ಲೆಕ್ಕಾಚಾರವೂ ಇದೆ ಎನ್ನುತ್ತಿವೆ, ಆಡಳಿತ ಮೂಲಗಳು. ಈ ಮೂಲಕ ಚಿತ್ರನಗರಿ ಯೋಜನೆಗೆ ಮತ್ತೆ ಜೀವ ಬಂದಿದೆ. ರಾಜಕೀಯ ಲೆಕ್ಕಾಚಾರ ಇರಲಿ, ಬೇರೇನೇ ಇರಲಿ, ಕರ್ನಾಟಕದಲ್ಲಿ ಚಿತ್ರನಗರಿಯೊಂದರ ಅಗತ್ಯವಂತೂ ಇದ್ಧೇಇದೆ.
ಸುದೀಪ್ ಅಭಿನಯದ ಹೊಸ ಚಿತ್ರ‘ವಿಕ್ರಾಂತರಾಣ’ ಚಿತ್ರದ ಬಹುತೇಕ ಚಿತ್ರೀಕರಣ ನಡೆದದ್ದು ಹೈದರಾಬಾದಿನ ಸ್ಟುಡಿಯೊ ಮತ್ತು ಚಿತ್ರನಗರಿಯಲ್ಲಿ. ಅದ್ದೂರಿ ವೆಚ್ಚದ ಚಿತ್ರಗಳ ನಿರ್ಮಾಪಕರು ಮಾತೆತ್ತಿದರೆ, ಹೈದರಾಬಾದ್‌ನತ್ತ ಬೆರಳು ತೋರಿಸುತ್ತಾರೆ. ಕರ್ನಾಟಕದಲ್ಲಿ ಚಿತ್ರೀಕರಣಕ್ಕೆ ಬೇಕಾದ ಸೌಲಭ್ಯಗಳು ಸಾಕಷ್ಟಿಲ್ಲ ಎನ್ನುತ್ತಾರೆ ಅವರು. ಸಾಕಷ್ಟಿಲ್ಲ, ನಿಜ, ಆದರೆ ಉಳಿದದ್ದನ್ನು ಎಷ್ಟು ಬಳಸುತ್ತಾರೆ?
ಅಬ್ಬಾಯಿನಾಯ್ಡು ಸ್ಟುಡಿಯೊ ೭.೫ ಎಕರೆ ಪ್ರದೇಶದಲ್ಲಿ ಇತ್ತು. ಸರಿಯಾದ ಸಹಕಾರ ದೊರೆತಿದ್ದರೆ, ಅವರ ನಿಧನಾ ನಂತರ ಚಿತ್ರೀಕರಣ ಅಂಗಣಗಳನ್ನು ಬಿಟ್ಟು ಉಳಿದ ಜಾಗವನ್ನು ಸಾಲ ತೀರಿಸಲು ಮಾರಬೇಕಾಗಿರಲಿಲ್ಲ.
ಅಭಿಮಾನ್ ಸ್ಟುಡಿಯೋಕ್ಕೆ ಎಷ್ಟು ಮಂದಿ ಚಿತ್ರೀಕರಣಕ್ಕೆ ಹೋಗುತ್ತಾರೆ? ರಾಕ್ಲೈನ್ ವೆಂಕಟೇಶ್ ಅವರು ಚಿತ್ರೀಕರಣ ಅಂಗಣಗಳನ್ನು ಬಿಟ್ಟು, ಉಳಿದ ಜಾಗದಲ್ಲಿ ಅವರ ಇತರ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
ಮೈಸೂರಿನಲ್ಲೋ, ಪ್ರಕೃತಿದತ್ತವಾದ ಚಿತ್ರೀಕರಣತಾಣಗಳಿವೆ, ಕೃಷ್ಣರಾಜಸಾಗರ, ಬೃಂದಾವನ, ಮಹದೇವಪುರ ಸುತ್ತಮುತ್ತ ಸೇರಿದಂತೆ ವಿವಿಧ ತಾಣಗಳಲ್ಲಿ ಸಾವಿರಾರು ಚಿತ್ರಗಳ ಚಿತ್ರಗಳ ಚಿತ್ರೀಕರಣ ಆಗಿದೆ. ಚಿತ್ರನಗರಿ ಅದಕ್ಕೆ ಪೂರಕವಾಗಿ ಆಧುನಿಕತಾಂತ್ರಿಕ ಮೂಲಸೌಲಭ್ಯಗಳನ್ನೂ ಒದಗಿಸಿಕೊಡ ಬೇಕು, ಸಿನಿಮಾ ಲೋಕದ ಡಿಜಿಟಲ್ ಕ್ರಾಂತಿಯ ಹೊಸ ಹೊಸ ಸೌಲಭ್ಯಗಳನ್ನು ಒದಗಿಸುವ ಕೇಂದ್ರವಾಗಿ ಇದು ಬೆಳೆಯಬಹುದು. ಪ್ರವಾಸೋದ್ಯಮಕ್ಕೂ ಇದು ಪೂರಕವಾಗಬಹುದು ಎನ್ನುತ್ತಾರೆ ಮೈಸೂರಲ್ಲೇ ಚಿತ್ರನಗರಿ ಬೇಕು ಎನ್ನುವ ಚಿತ್ರರಂಗದ ಮಂದಿ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…