-ಅನಿಲ್ ಅಂತರಸಂತೆ
ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಷ್ಟೇ ಸಮಾನವಾಗಿ ಸಾಧನೆಯ ಹಾದಿಯಲ್ಲಿದ್ದು, ಮಹಿಳೆಯರಿಂದ ಇದು
ಸಾಧ್ಯವಾಗದು ಎಂಬುದನ್ನೂ ಸಾಧಿಸಿ ತೋರಿಸುತ್ತಿದ್ದಾರೆ. ಅಂತಹದೊಂದು ಸಾಧನೆಯ ಬೆನ್ನತ್ತಿ, ದೇಹದಾರ್ಢ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ ಮೈಸೂರಿನ ಅರ್ಚನಾ ಸಿಂಗ್.
ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ಅನಂತ್ ಸಿಂಗ್ ಹಾಗೂ ನಳಿನಾ ಬಾಯಿ ದಂಪತಿಯ ಮೊದಲ ಪುತ್ರಿ ಅರ್ಚನಾ ಸಿಂಗ್ ದೇಹದಾರ್ಢ್ಯ (ಬಾಡಿ ಬಿಲ್ಡಿಂಗ್) ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ವೇದಿಕೆ ಮೇಲೆ ಬಾಡಿ ಶೋ ನೀಡಿದ ಮೊದಲ ಮೈಸೂರಿನ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2025ರ ಫೆಬ್ರವರಿ, 28ರಂದು ಬೆಂಗಳೂರಿನಲ್ಲಿ ನಡೆದ ‘ಮಿಸ್ಟರ್ ಭಾರತ್’ ಸ್ಪರ್ಧೆಯಲ್ಲಿ ಭಾಗವಹಿಸಿ ‘ಮಿಸ್ಟರ್ ಭಾರತ್’ ಟೈಟಲ್ ಗೆಲ್ಲುವ ಮೂಲಕ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಸಾಧನೆಯ ಹಾದಿ ಹಿಡಿದಿದ್ದಾರೆ.
ಅರ್ಚನಾ ಕಳೆದ 8 ವರ್ಷಗಳಿಂದ ಫಿಟ್‌ನೆಸ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದು, ತಾವೂ ಬಾಡಿ ಬಿಲ್ಡಿಂಗ್ ಮಾಡಬೇಕು ಎಂಬ ಹಂಬಲದೊಂದಿಗೆ ಈ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದಾರೆ. ಆರಂಭದಲ್ಲಿ ಮಹಿಳೆಯರಿಂದ ಇದೆಲ್ಲಾ ಅಸಾಧ್ಯ ಎಂದವರೇ ಹೆಚ್ಚು. ಕುಟುಂಬದವರಿಗೆ ನಾನು ಅಂದುಕೊಂಡ ಕೆಲಸ ಸಾಧಿಸುತ್ತೇನೆ ಎಂಬ ನಂಬಿಕೆ ಇತ್ತು. ಅವರೆಲ್ಲರ ಬೆಂಬಲ, ಸ್ನೇಹಿತರ ಪ್ರೋತ್ಸಾಹದಿಂದ ನಾನು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ ಅರ್ಚನಾ.
ಅರ್ಚನಾರವರ ಈ ಸಾಧನೆಗೆ ಬೆನ್ನಲುಬಾಗಿ ನಿಂತವರು ಅವರ ತರಬೇತುದಾರ ಅಭಿಲಾಷ್ ಮೋಹಿತ್. ಮುಂಜಾನೆ 5.30 ಕ್ಕೆ ಜಿಮ್‌ಗೆ ತೆರಳುವ ಅರ್ಚನಾ ತಮ್ಮ ದಿನದ ಬಹುಪಾಲು ಸಮಯವನ್ನು ಅಲ್ಲಿಯೇ ಕಳೆಯುತ್ತಾರೆ. ಸದಾ ವರ್ಕ್‌ಔಟ್ ಮಾಡುತ್ತಿರುವ ಅರ್ಚನಾರಿಗೆ ಬೇಕಾದ ಪೌಷ್ಟಿಕ ಆಹಾರವನ್ನು ಕುಟುಂಬಸ್ಥರೇ ಪೂರೈಕೆ ಮಾಡುತ್ತಾ ಬೆಂಬಲಿಸುತ್ತಿದ್ದು, ತಮ್ಮ ಅಕ್ಕಳ ಸಾಧನೆಗೆ ಅಳಿಲು ಸೇವೆಯಂತೆ ವಿವಿಧ ಪೋಷಕಾಂಶಯುಕ್ತ ಆಹಾರವನ್ನು ತಯಾರಿಸಿಕೊಡುತ್ತಿದ್ದಾರೆ ತಂಗಿ ಆಕಾಂಕ್ಷ. ಇವರ ಪ್ರೋತ್ಸಾಹದಿಂದ ಅರ್ಚನಾ ಈಗ ‘ಮಿಸ್ಟರ್ ಭಾರತ್’ ಆಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವ ಹಂಬಲ ಹೊಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜಿಮ್ ಎಂದರೆ ಹೆದರುವವರೇ ಹೆಚ್ಚಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ಕೊಳ್ಳುವವರೇ ಹೆಚ್ಚು. ಈಗಾಗಿಯೇ ಬಹುತೇಕ ಯುವಕರು ಜಿಮ್‌ಗಳಿಗೆ ಬರುವುದಿಲ್ಲ. ಅದರಲ್ಲಿಯೂ ಮಹಿಳೆಯರಂತೂ ಜಿಮ್‌ನಿಂದ ಅಡ್ಡಪರಿಣಾಮಗಳು ಹೆಚ್ಚು ಎಂಬ ತಪ್ಪು ಕಲ್ಪನೆಯಿಂದ ಜಿಮ್‌ಗಳಿಗೆ ಬರುವುದೇ ಇಲ್ಲ. ಜಿಮ್‌ನಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ.
ನಾವು ಜಿಮ್ ಮಾಡಿದಷ್ಟೂ ಆರೋಗ್ಯಕರವಾಗಿರುತ್ತೇವೆ. ಇತ್ತೀಚಿನ ಆಹಾರದ ಗುಣಮಟ್ಟ ಕಡಿಮೆಯಿದ್ದು, ಬಹುಬೇಗ ಕಾಯಿಲೆಗಳಿಗೆ ತುತ್ತಾಗುವವರಿದ್ದಾರೆ. ಆದ್ದರಿಂದ ಎಲ್ಲರೂ ಕನಿಷ್ಠವೆಂದರೂ ದಿನದಲ್ಲಿ 1 ಗಂಟೆಯಾದರೂ ಜಿಮ್ ಮಾಡಬೇಕು. ಇದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಿದ್ದಂತೆ. ಇದರಿಂದ ನಮ್ಮ ಆರೋಗ್ಯ ರಕ್ಷಣೆ ಸಾಧ್ಯ ಎನ್ನುತ್ತಾರೆ ಅರ್ಚನಾ.
ಆರಂಭದಲ್ಲಿ ತುಂಬ ದುರ್ಬಲರಾಗಿದ್ದ ಅರ್ಚನಾ ನಂತರದ ದಿನಗಳಲ್ಲಿ ತಮ್ಮಷ್ಟಕ್ಕೇ ತಾವೇ ಪ್ರೇರಣೆಗೊಂಡು ಬಾಡಿ ಬಿಲ್ಡಿಂಗ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಸದ್ಯ ಮೈಸೂರಿನಲ್ಲಿ ಏಕೈಕ ಮಹಿಳಾ ಸರ್ಟಿಫೈಡ್ ಫಿಟ್‌ನೆಸ್ ಟ್ರೈನರ್ ಆಗಿರುವ ಇವರು, ಯುವ ಜನತೆ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ತಾವೂ ಫಿಟ್ ಆಗಿ ಇರಬೇಕು ಎಂದರೆ, ದಿನದಲ್ಲಿ ಒಂದು ಗಂಟೆಯಾದರೂ ಜಿಮ್ ಮಾಡಬೇಕು ಎಂದು ಸಲಹೆ ನೀಡುತ್ತಾರೆ.
ಮಹಿಳೆಯರಿಗೆ ಇದೊಂದು ಹೊಸ ಕ್ಷೇತ್ರ. ನಮ್ಮ ಆತ್ಮರಕ್ಷಣೆಗಾದರೂ ನಾವು ಫಿಟ್ ಆಗಿ ಇರಬೇಕು. ಅದಕ್ಕಾಗಿ ಜಿಮ್ ಮಾಡಬೇಕು. ಆರಂಭದಲ್ಲಿ ಕೆಲವರು ಮಹಿಳೆಯರಿಂದ ಬಾಡಿ ಬಿಲ್ಡಿಂಗ್ ಸಾಧ್ಯವೇ? ಏನಾದರೂ ಅಡ್ಡಪರಿಣಾಮಗಳು ಉಂಟಾಗಬಹುದು ಎಂದರು. ಅದನ್ನೆಲ್ಲ ಚಾಲೆಂಜ್ ಆಗಿ
ಸ್ವೀಕರಿಸಿ ಬಾಡಿ ಬಿಲ್ಡಿಂಗ್ ಆರಂಭಿಸಿದೆ. ಕುಟುಂಬದವರ ಬೆಂಬಲದಿಂದಾಗಿ ಸಾಧನೆಯ ಹಾದಿಯಲ್ಲಿದ್ದೇನೆ.
-ಅರ್ಚನಾ ಸಿಂಗ್, ಮಹಿಳಾ ಬಾಡಿ ಬಿಲ್ಡರ್, ಮೈಸೂರು.
ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್‌ಗೆ ಆದ್ಯತೆ …
ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್ ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ…
ಕೋಟಿಗಾನಹಳ್ಳಿ ರಾಮಯ್ಯ ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ…
ಸ್ಟ್ಯಾನ್ಲಿ ‘ನನ್ನಮ್ಮ ರೋಸ್ಮಂಡ್ ವಾನಿಂಗನ್ ಆಂಗ್ಲ ಮಹಿಳೆಯಾಗಿದ್ದರೂ, ಅವಳು ನಂಜನಗೂಡಿನ ನಂಜಿಯಾಗಿದ್ದಳು. ಬಿಸಿಲ್ ಮಂಟಿ ಗ್ರಾಮಸ್ಥರು ಆಕೆಗೆ ಇಟ್ಟಿದ್ದ ಹೆಸರಾಗಿತ್ತದು.…
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…