ಆಂದೋಲನ ಪುರವಣಿ

ಯುವ ಡಾಟ್‌ ಕಾಮ್‌ : ನಡು ರಸ್ತೆಯಲ್ಲಿ ಸಿಕ್ಕ ಗುರು

ಕೊರೋನಾ ಕಾಲದಲ್ಲಿ ಜೀವನ ಪಾಠ ಹೇಳಿದ್ದ ಅಜ್ಜ

ಶೀಲಾ ಎಚ್.ಎನ್., ಚಿನಕುರುಳಿ

ಅದು ಕೊರೊನಾ ಕಾಲ. ಎಲ್ಲೆಲ್ಲೂ ಮೌನ, ದುಗುಡ, ದುಮ್ಮಾನ, ಆತಂಕಗಳದ್ದೇ ಅಟ್ಟಹಾಸ. ನಿನ್ನೆಗೂ, ಇಂದಿಗೂ, ನಾಳೆಗೂ ವ್ಯತ್ಯಾಸಗಳೇ ಗೊತ್ತಾಗದೇ ಮನೆಯೊಳಗೆ ಬಂಧಿಯಾಗಿದ್ದ ನನಗೆ ಹೊರಗೆ ಹೋಗುವ ತವಕ. ಆದರೆ ಅದಕ್ಕೆ ಅವಕಾಶವಿಲ್ಲ. ಏನು ಮಾಡುವುದು ಹೋಗಲೊಂದು ದಾರಿ ಬೇಕು ಎಂಬುದಾಗಿ ಹಸಿದವರಿಗೆ ಊಟ ಹಂಚುವ ಕಾಯಕಕ್ಕೆ ಅಣ್ಣಂದಿರು, ಹಿರಿಯ ಸ್ನೇಹಿತರೊಂದಿಗೆ ಜೊತೆಯಾದೆ.

ನನಗೆ ನಿಜಕ್ಕೂ ಮನೆಯಿಂದ ಹೊರ ಬಂದು ಅಡ್ಡಾಡಬೇಕು, ಎಲ್ಲರನ್ನೂ ನೋಡಬೇಕು, ಏನೇನು ಆಗುತ್ತಿದೆ ಎಂಬುದನ್ನು ಕಣ್ಣಾರೆ ಕಾಣಬೇಕು ಎನ್ನುವ ತವಕ ಇತ್ತು. ಇದಕ್ಕೆ ದಾರಿಯಾಗಿದ್ದು ಊಟ ಹಂಚುವ ಕಾಯಕ ಮಾತ್ರ. ಮೊದ ಮೊದಲಿಗೆ ನಾನು ಹೊರಗೆ ಬಂದೆ, ರೆಕ್ಕೆ ಬಿಚ್ಚಿದ ಹಕ್ಕಿಯಾದೆ ಎನ್ನುವ ಸಂಭ್ರಮ ಇತ್ತಾದರೂ ಅದು ನಾಲ್ಕೇ ದಿನಕ್ಕೆ ನಿರ್ನಾಮ. ಮೌನ, ಖಾಲಿ ರಸ್ತೆಗಳು, ಅಲ್ಲೊಂದು ಇಲ್ಲೊಂದು ಕಾಣುವ ಮುಖ ಹೊಸ ಜಗತ್ತಿನ ಪರಿಚಯ ಮಾಡುತ್ತಿದ್ದರೂ ಅದು ಆ ಕ್ಷಣಕ್ಕೆ ಹೊಸದಾಗಿ ಕಂಡು ಮತ್ತೆ ಮುಂದಿನ ದಿನಗಳಲ್ಲಿ ಸ್ಮಶಾನದೊಳಗಣ ನಡಿಗೆಯಂತೆ ಕಾಣುತ್ತಿತ್ತು. ಬದುಕೇಕೆ ಹೀಗೆ ಎಂದು ಕಾಡುತ್ತಿತ್ತು.

ಕಾಲೇಜಿನ ಮುಂದೆ ನಿಂತು ಮತ್ತಿನ್ಯಾವಾಗ ಕಾಲೇಜು ಕೋಣೆ ಹೊಕ್ಕುವೆ, ಅಲ್ಲಿ ನನ್ನ ಸ್ನೇಹಿತರೊಂದಿಗೆ ಹರಟುವೆ ಎನ್ನುವತ್ತ ಮನಸ್ಸು ತವಕಿಸುತ್ತಿತ್ತು. ಆದರೆ ವಾಸ್ತವ? ಏನೇನೋ ಯೋಜನೆ ಮಾಡುವಾಗ ನಡುದಾರಿಯಲ್ಲೊಬ್ಬ ವ್ಯಕ್ತಿ ನಿಂತಿದ್ದ. ನಾನವನ ಬಳಿ ಹೋಗುವವರೆ, ಊಟದ ಬುತ್ತಿಯನ್ನು ಕೈಗಿಕ್ಕುವವರೆಗೆ ಅವನು ನನ್ನ ಪಾಲಿಗೆ ವ್ಯಕ್ತಿ. ನಂತರ ಅಲ್ಲಿಂದ ಹೊರ ಬರುವಷ್ಟರಲ್ಲಿ ಅವನು ನನ್ನ ಪಾಲಿಗೆ ಗುರುವಾಗಿದ್ದ. ಅದೂ ನಡು ದಾರಿಯಲ್ಲಿ ಸಿಕ್ಕ ಗುರು.

ನಾನು ಊಟದ ಬುತ್ತಿಯನ್ನು ಅವರ ಕೈಗಿತ್ತು, ಹೋಗಿ ಊಟ ಮಾಡಿ, ಹುಷಾರು, ಕೊರೋನಾ ಹೆಚ್ಚಾಗ್ತಿದೆ ಎಂದೆ. ಅದಕ್ಕವರು ತಕ್ಷಣ ನನ್ನ ತಲೆಯ ಮೇಲೆ ಕೈ ಇಟ್ಟು, ಪುಟ್ಟ ಹೆಚ್ಚುತ್ತಿರುವುದು ಕೊರೊನಾ ಅಲ್ಲ, ಭಯ, ನಮ್ಮೊಳಗಿನ ಶಕ್ತಿ ಎಂದರು. ತಲೆಯ ಮೇಲೆ ಕೈ ಇಟ್ಟು ಹತ್ತಿರ ಬಂದ ವ್ಯಕ್ತಿಯನ್ನು ನೋಡಿ ಹೆದರಿ ನಾನು ಹಿಂದೆ ಸರಿದು ನಿಂತಿದ್ದೆ. ಅವರೇ ಮಾತು ಮುಂದುವರಿಸಿ ನೋಡು ನಾನಾರು ಎಂದು ನಿನಗೆ ಗೊತ್ತಿಲ್ಲದೇ ಇದ್ದರೂ ಅನ್ನ ನೀಡಿದೆ. ಕಾಳಜಿ ತೋರಿದೆ. ಅದು ಪ್ರೀತಿ. ಮನುಷ್ಯ ಪ್ರೀತಿ. ಅದೇ ನಾನು ತಲೆಯ ಮೇಲೆ ಕೈ ಇಟ್ಟಾಗ ಹಿಂದೆ ಸರಿದೆ. ಅದು ಭಯ. ಕೊರೊನಾ ಭಯ. ಎಲ್ಲಿ ನನ್ನಿಂದ ನಿನಗೆ ಕೊರೊನಾ ಅಂಟುವುದೋ ಎನ್ನುವ ಭಯ ಅಲ್ಲವೇ ಎಂದು ಪ್ರಶ್ನೆ ಮಾಡಿ ನಕ್ಕರು. ನಾನು ಮೌನವಾದ ಉತ್ತರ ನೀಡಿದೆ.

ನೋಡು ಕಂದಾ, ಸೋಂಕು ಹೆಚ್ಚುತ್ತಿದೆ, ಭಯವನ್ನೂ ಹೆಚ್ಚಿಸುತ್ತಿದೆ. ಇದು ಹಲವರಿಗೆ ಬಂಡವಾಳವೂ ಆಗಿದೆ. ಆದರೆ ಧೈರ್ಯದ ಮದ್ದು ಅರೆಯಬೇಕು. ವಿಶ್ವಾಸದ ಅಸ್ತ್ರ ಬಳಸಬೇಕು. ಅದನ್ನು ಬಿಟ್ಟು ಬೇಲಿಗಳನ್ನು ಹಾಕುತ್ತಿದ್ದಾರೆ. ಬವಣೆಗೆ ನೂಕುತ್ತಿದ್ದಾರೆ. ಇದರಿಂದ ಹೆಚ್ಚುವ ಹಸಿವು, ಆಗುವ ಹಾನಿಯ ಅಂದಾಜು ಯಾರಿಗೂ ಇದ್ದಂತೆ ಇಲ್ಲ. ಆದರೂ ಮನುಷ್ಯ ಜೀವಕ್ಕೇ ಕುತ್ತು ಬರುತ್ತಿದೆ ಎನ್ನುವಾಗ ಏನು ಬೇಕಾದರೂ ಮಾಡಲು ಸೈ, ಸಹಿಸಿಕೊಳ್ಳಲೂ ಸೈ. ಅದಕ್ಕೆ ಈ ಲಾಕ್‌ಡೌನ್ ಎನ್ನುವುದೇ ಸಾಕ್ಷಿ. ಇದಕ್ಕೂ ಮೇಲಾಗಿ ಎಲ್ಲವೂ ಅನ್‌ಲಾಕ್ ಆದಾಗ ಈಗ ಉಳಿಸಿಕೊಂಡ ಜೀವವನ್ನು ಪೊರೆಯುವುದಕ್ಕಾಗಿ ಮನುಷ್ಯ ಮತ್ತೂ ಏನೂ ಬೇಕಾದರೂ ಮಾಡಲು ಸಿದ್ಧನಾಗಿರುತ್ತಾನೆ. ಇದೊಂದು ರೀತಿಯ ಉಳಿವಿಗಾಗಿನ ಹೋರಾಟ. ನಿರಂತರ ಹೋರಾಟ ಎಂದು ಹೇಳಿದ್ದರು.

ಎಲ್ಲವನ್ನೂ ಕೇಳಿ ಆ ಕ್ಷಣಕ್ಕೆ ಅಲ್ಲಿಂದ ಕದಲಿದ್ದ ನನಗೆ ಇಂದಿಗೆ ಅವರ ಮಾತುಗಳಲ್ಲಿ ಸತ್ಯವಿದೆ ಎನ್ನಿಸುತ್ತದೆ. ಕೊರೋನೋತ್ತರ ಕಾಲದಲ್ಲಿ ನಿಂತು ನೋಡಿದರೆ ಅವರ ಮಾತುಗಳಲ್ಲಿ ಅರ್ಥವಿದೆ ಅನ್ನಿಸುತ್ತದೆ. ಈಗಲೂ ಆ ವ್ಯಕ್ತಿ ಗುರುವಾಗಿ ಬದಲಾದ ಆ ರಸ್ತೆ, ಆ ಜಾಗಕ್ಕೆ ಹೋದಾದ ಅವರನ್ನು ಹುಡುಕುತ್ತೇನೆ. ಅವರು ಕಾಣರು. ಆದರೂ ಅವರ ಮಾತು ಈಗಲೂ ನನ್ನೊಳಗೆ ಉಸಿರಾಡುತ್ತಿದೆ.

andolana

Recent Posts

ಮಾನನಷ್ಟ ಪ್ರಕರಣಗಳಲ್ಲಿ ಮೂಗುತೂರಿಸುವ ಅಧಿಕಾರ ಪೊಲೀಸರಿಗಿಲ್ಲ!

ಪಿ.ಜೆ.ರಾಘವೇಂದ್ರ, ನ್ಯಾಯವಾದಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಮುಡಾ ಮಾಜಿ…

1 hour ago

ಸೌಂದರ್ಯ ಹದಗೆಡಿಸುವ ಫ್ಲೆಕ್ಸ್ ಹಾವಳಿ ತಡೆ ಅಗತ್ಯ

ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಅರಮನೆ ನಗರಿ ಮೈಸೂರಿನ ಸೌಂದರ್ಯವನ್ನು ಹದಗೆಡಿಸುವಂತಹ ಜಾಹೀರಾತು ಫಲಕಗಳು, ಫ್ಲೆಕ್ಸ್‌ಗಳ ಹಾವಳಿ ತಡೆಗಟ್ಟಲು ರೂಪಿಸಿರುವ…

2 hours ago

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಚಿಂತೆಯಲ್ಲಿದ್ದಾರೆ?

ಸಿದ್ದರಾಮಯ್ಯರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ಆಪತ್ತು ಎಂಬ ಆತಂಕ ಇಂತಹದೊಂದು ಪ್ರಶ್ನೆ ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳೆಯಗಳಲ್ಲಿ…

2 hours ago

ಅಕಾಲಿಕ ಮಳೆ; ೮ ಲಕ್ಷ ರೂ. ಮೌಲ್ಯದ ರಾಗಿ ನಾಶ

ಅವಳಿ ತಾಲ್ಲೂಕುಗಳ ಹಲವೆಡೆ ಅವಾಂತರ; ಕಾವಲು ಹೊಸೂರು ಗ್ರಾಮದಲ್ಲಿ ರಾಗಿ ಬೆಳೆದಿದ್ದ ರೈತರು ಕಂಗಾಲು ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ…

2 hours ago

ಶೋಚನೀಯ ಸ್ಥಿತಿಯಲ್ಲಿ ಶತಮಾನ ದಾಟಿದ ಶಾಲೆ

ಎಸ್.ಎಸ್.ಭಟ್ ನಂಜನಗೂಡು: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪೂರಕವಾಗಿ ೧೯೨೪ರಲ್ಲೇ ಆರಂಭವಾದ ಈ ಪ್ರೌಢಶಾಲೆ ಪ್ರಸ್ತುತ ಉದುರಿಬೀಳುವ ಹಂತದ ಗೋಡೆ ಹಾಗೂ ಮಳೆ…

2 hours ago