ಆಂದೋಲನ ಪುರವಣಿ

ಕರ್ಮಠ ಧರ್ಮಗಳೇಕೆ ನಿಷ್ಠುರ ಲೇಖಕರನ್ನು ಮುಗಿಸಲು ಬಯಸುತ್ತವೆ?

  ರಷ್ದೀಯವರ ಮೇಲೆ ನಡೆದ ಹಲ್ಲೆಯನ್ನು, ಭಾರತೀಯರಾದ ನಾವು, ಲೆಬನಾನ್ ಸಂಜಾತ ಅಮೆರಿಕನ್ ಮುಸ್ಲಿಂ ತರುಣನೊಬ್ಬ ಇರಾನಿನ ಖೋಮೇನಿ ಫತ್ವಾದಿಂದ ಪ್ರೇರಿತನಾಗಿ ನಡೆಸಿದ ಹಲ್ಲೆ ಎಂದಷ್ಟೇ ಸೀಮಿತವಾಗಿ ನೋಡಿ ಪಕ್ಕಕ್ಕಿಡಬಹುದು. ಆದರೆ, ಅದನ್ನು, ಗೌರಿ ಲಂಕೇಶ್, ಕಲ್ಬುರ್ಗಿಯಂತಹವರ ಹತ್ಯೆಯ ವಿಸ್ತಾರದಲ್ಲೂ ನೋಡಬೇಕಿದೆ. ‘‘ಗೌರಿ, ಕಲ್ಬುರ್ಗಿಯವರ ಹತ್ಯೆಗೆ ಯಾವ ಧಾರ್ಮಿಕ ನಾಯಕರೂ ಫತ್ವಾ ನೀಡಲಿಲ್ಲ’’ ಎಂದು ವಾದಿಸಬಹುದಾದರೂ, ಅಂತಹ ಫತ್ವಾ ಇಲ್ಲದೆಯೂ ಹತ್ಯೆಗೆಯ್ಯುವ ಬರ್ಬರತೆ ನಮ್ಮ ಸಮಾಜದಲ್ಲಿ ಬೇರೂರಿರುವುದರ ಬಗೆಗೆ ನಾವು ಯೋಚಿಸಲೇಬೇಕಿದೆ

ಶೇಷಾದ್ರಿ ಗಂಜೂರು seshadri.ganjur@gmail.com

ಕ್ರ್ತ್ಯೈಸ್ತರೇ ಬಹು ಸಂಖ್ಯಾತರಾಗಿರುವ ಅಮೆರಿಕದಲ್ಲಿ, ಅವರ ಧಾರ್ಮಿಕ ಚಿಹ್ನೆಯನ್ನು ಈ ರೀತಿ ಪ್ರದರ್ಶನಕ್ಕಿಟ್ಟಿರುವುದು ಬಹು ಚರ್ಚಿತವಾಗಿದ್ದು ಸಹಜವೆನಿಸಿದರೂ, ಆಗಷ್ಟೇ ಭಾರತದಿಂದ ಅಮೆರಿಕಕ್ಕೆ ಬಂದಿದ್ದ ನನಗೆ, ವಿಶೇಷವೆನಿಸಿದ್ದು ಆ ಚರ್ಚೆಯ ವಿಷಯ. ಆ ಡಿಬೇಟುಗಳಲ್ಲಿ, ಬಹು ಮಟ್ಟಿಗೆ ಚರ್ಚೆಗೆ ಬಂದದ್ದು, ಅಮೆರಿಕದ ಕೇಂದ್ರ ಸರ್ಕಾರದ ಸಂಸ್ಥೆಯಾದ ನ್ಯಾಷನಲ್ ಎಂಡೋಮೆಂಟ್ ಫಾರ್ ದ ಆರ್ಟ್ಸ್ (ಎನ್.ಇ.ಎ.), ತನ್ನ ದತ್ತುನಿಧಿಯಿಂದ ಸೆರಾನೊನ ಈ ಪ್ರದರ್ಶನಕ್ಕೆ ಹಣ ನೀಡಿದ್ದು ಸರಿಯೇ ಎಂಬ ಪ್ರಶ್ನೆಯೇ ಹೊರತು, ಅಂತಹ ಕಲಾ ಸೃಷ್ಟಿಯ ಸ್ವಾತಂತ್ರ್ಯ ಕಲಾವಿದನೊಬ್ಬನಿಗೆ ಇರಬೇಕೇ ಬೇಡವೇ ಎಂಬ ವಿಷಯವಲ್ಲ. ಆ ಪ್ರದರ್ಶನದ ನಂತರದಲ್ಲಿ, ಕೆಲ ಕ್ರ್ತ್ಯೈಸ್ತ ನಾಯಕರು ಸೆರಾನೊನನ್ನು ಖಂಡಿಸುವುದೂ ನಡೆಯಿತು. ಅವನಿಗೆ ಹಲವಾರು ಬೆದರಿಕೆಯ ಕರೆಗಳೂ ಬಂದವು. ಆದರೆ, ಕೊನೆಗೆ ಆದದ್ದು ಇಷ್ಟೇ: ಅಮೆರಿಕದ ಕೇಂದ್ರ ಸರ್ಕಾರ ತನ್ನ ಬಡ್ಜೆಟ್‌ನಲ್ಲಿ ಎನ್.ಇ.ಎ.ಗೆ ಮೀಸಲಿಡುತ್ತಿದ್ದ ಹಣವನ್ನು ಕೊಂಚ ಕಡಿಮೆ ಮಾಡಿತು. ಸೆರಾನೊನ ಈ ಕಲೆ, ವಿವಿಧ ರಾಷ್ಟ್ರಗಳಲ್ಲಿ ಪ್ರದರ್ಶಿತವಾಯಿತು. ಅದಕ್ಕೆ ಪ್ರತಿಷ್ಠಿತ ಪ್ರಶಸ್ತಿಯೊಂದೂ ಸಿಕ್ಕಿತು. (ಆಸ್ಟ್ರೇಲಿಯಾದ ನ್ಯಾಷನಲ್ ಗ್ಯಾಲೆರಿಯೊಂದರಲ್ಲಿ ಅದರ ಪ್ರದರ್ಶನ ಏರ್ಪಡಿಸಿದಾಗ, ಅಲ್ಲಿನ ಕ್ಯಾಥೊಲಿಕ್ ಆರ್ಚ್‌ಬಿಷಪ್ ಅದನ್ನು ತಡೆಗಟ್ಟುವಂತೆ ಅಲ್ಲಿನ ಸುಪ್ರೀಮ್ ಕೋರ್ಟಿನ ಮೊರೆಹೊಕ್ಕರು. ಆದರೆ, ಸುಪ್ರೀಮ್ ಕೋರ್ಟ್ ಅಂತಹ ತಡೆ ನೀಡಲು ನಿರಾಕರಿಸಿತು)

***

‘‘ಅಭಿವ್ಯಕ್ತಿ ಸ್ವಾತಂತ್ರ್ಯ’’ ಅಮೆರಿಕದ ಸಂವಿಧಾನದ ಮೂಲ ಮಂತ್ರಗಳಲ್ಲಿ ಒಂದು. ‘‘ಉಳಿದ ಎಲ್ಲಾ ಹಕ್ಕುಗಳ ತಡಿಪಾಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ’’ ಎಂದು ಅಮೆರಿಕನ್ ಸಂವಿಧಾನ ಕರ್ತೃಗಳ ಭಾವನೆಯಾದ್ದರಿಂದ, ‘‘ಬಿಲ್ ಆಫ್ ರೈಟ್ಸ್’’ ಎಂದು ಕರೆಯಲ್ಪಡುವ ಪ್ರಜೆಗಳ ಹಕ್ಕುಗಳ ಪಟ್ಟಿಯಲ್ಲಿ, ಅದಕ್ಕೇ ಪ್ರಪ್ರಥಮ ಸ್ಥಾನವಿದೆ. ಈ ಹಕ್ಕು, ಧರ್ಮ-ದೈವಗಳ ನಿಂದನೆ, ಜನಾಂಗ ದ್ವೇಷಗಳಂತಹ ವೈಪರೀತ್ಯಗಳಿಗೂ ಅಮೆರಿಕನ್ ಸಮಾಜದಲ್ಲಿ ಜಾಗ ಮಾಡಿಕೊಟ್ಟಿದೆ. (ನಿಂದನೆ-ದ್ವೇಷಗಳಿಗೆ ಸಿಗುವ ಈ ಹಕ್ಕು, ಬೆದರಿಕೆ-ಹಲ್ಲೆಗಳಿಗೆ ಇಲ್ಲವೆನ್ನುವುದನ್ನು ನಾವು ಮರೆಯಬಾರದು) ಹಾಗೆೆುೀಂ, ಈ ಸಾಂವಿಧಾನಿಕ ಹಕ್ಕು, ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚುವ ಸ್ವಾತಂತ್ರ್ಯವನ್ನೂ ಅಮೆರಿಕನ್ನರಿಗೆ ನೀಡಿದೆ. ಈ ಹಕ್ಕಿನ ವ್ಯಾಪ್ತಿಯನ್ನು ಸೀಮಿತಗೊಳಿಸುವ ಹಲವು ಪ್ರಯತ್ನಗಳು ನಡೆದಿವೆಯಾದರೂ, ಅವೆಲ್ಲವೂ ನಿಷ್ಛಲವಾಗಿವೆ. ಉದಾಹರಣೆಗೆ, ಅಮೆರಿಕದ ರಾಷ್ಟ್ರಧ್ವಜ ಆ ದೇಶದ ಸ್ವಾತಂತ್ರ್ಯದ ಪ್ರತೀಕ. ಅದರ ಸುಡುವಿಕೆಯನ್ನು ನಿಷೇಧ ಮಾಡಿದರೆ, ಅದು ಬಿಂಬಿಸುವ ಸ್ವಾತಂತ್ರ್ಯವನ್ನೇ ಮೊಟಕು ಮಾಡಿದಂತೆ ಎಂಬ ಭಾವ ಅಲ್ಲಿನ ಸಮಾಜದಲ್ಲಿ ಮನೆ ಮಾಡಿದೆ. ಹೀಗಾಗಿ ಅಂತಹ ನಿಷೇಧದ ಪ್ರಯತ್ನಗಳು ಇಲ್ಲಿಯವರೆಗೆ ಸಫಲವಾಗಿಲ್ಲ.

ಅಮೆರಿಕಕ್ಕೆ, ಎರಡು ಶತಕಗಳ ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಹಾಸ ಮತ್ತು ಸಂಸ್ಕೃತಿ ಇದೆ. ಹೀಗಾಗಿ, ಅಲ್ಲಿನ ಸಮಾಜ ಸೆರಾನೊನಂತಹ ಕಲಾವಿದರ ಪ್ರಚೋದನಕಾರಿ ಯತ್ನಗಳನ್ನು ಸಹಿಸಿಕೊಳ್ಳಬಲ್ಲದು ಎನ್ನಬಹುದು. ಆದರೆ, ಇಂತಹುದೇ ಸಹನೆಯನ್ನು, ನಾವು ಯೂರೋಪಿಯನ್ ರಾಷ್ಟ್ರ ಮತ್ತು ಸಂಸ್ಕೃತಿಗಳಲ್ಲೂ ಕಾಣಬಹುದು.

ಕ್ರಿಸ್ಟೊಫರ್ ಒಫಿಲಿ, ವೆಸ್ಟ್ ಇಂಡೀಸ್ ಮೂಲದ, ಬ್ರಿಟಿಷ್ ಕಲಾವಿದ. ೧೯೯೮ರಲ್ಲಿ ಅವನು ರಚಿಸಿದ ಚಿತ್ರಕಲೆಯೆಂದು ಪಾಶ್ಚಾತ್ಯ ದೇಶಗಳಲ್ಲಿ ಬಹಳ ಪ್ರಸಿದ್ಧಿ ಮತ್ತು ಚರ್ಚೆಗೆ ಬಂತು. ಕ್ರಿಸ್ತನ ತಾಯಿ ಮೇರಿ ಮಾತೆಯ ಅರೆ ನಗ್ನ ಚಿತ್ರ ಅದು. ಆ ಚಿತ್ರವನ್ನು ರಚಿಸಲು ಅವನು ಆನೆಯ ಸಗಣಿ ಬಳಸಿದ್ದನಲ್ಲದೇ, ಆ ಚಿತ್ರದ ಸುತ್ತಲೂ, ಅಶ್ಲೀಲ ಪತ್ರಿಕೆಗಳಿಂದ ಕತ್ತರಿಸಿದ್ದ ಸ್ತ್ರೀ-ಅಂಗಾಂಗಗಳ ಫೋಟೋಗಳನ್ನು ಚಿಟ್ಟೆಗಳಂತೆ ಅಂಟಿಸಿದ್ದ. ಸಹಜವಾಗಿೆುೀಂ, ಅದಕ್ಕೆ ವಿರೋಧವೂ ವ್ಯಕ್ತವಾಯಿತು. ಅವನ ಈ ಕಲಾ ಪ್ರದರ್ಶನ ಅಮೆರಿಕದ ನ್ಯೂಯಾರ್ಕಿಗೆ ಬಂದಾಗ, ಅದಕ್ಕೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯೂಯಾರ್ಕಿನ ಮೇಯರ್ ರೂಡಿ ಜುಲಿಯಾನಿ, ಆ ಚಿತ್ರದ ಪ್ರದರ್ಶನ ಮಾಡಿದ ಆರ್ಟ್ ಗ್ಯಾಲೆರಿಗೆ ಸರ್ಕಾರದ ಸಹಾಯಧನವನ್ನು ನಿಲ್ಲಿಸಿದರು. ಆದರೆ, ಅಲ್ಲಿನ ಕೋರ್ಟ್, ಈ ಮೇಯರ್ ನಿರ್ಧಾರವನ್ನು ಅಸಂವಿಧಾನಿಕ ಎಂದು ತೀರ್ಮಾನ ನೀಡಿ ಸಹಾಯಧನವನ್ನು ಮತ್ತೆ ನೀಡುವಂತೆ ಮಾಡಿತು. ಇಷ್ಟೆಲ್ಲಾ ವಿವಾದಗಳಿಗೆ ಕಾರಣವಾದ ಕ್ರಿಸ್ಟೊಫರ್ ಒಫಿಲಿ ಇಂದು ಬ್ರಿಟಿಷ್ ಸರ್ಕಾರ ಮತ್ತು ಅಲ್ಲಿನ ರಾಣಿ ನೀಡುವ ಅತ್ಯುನ್ನತ ಪುರಸ್ಕಾರಕ್ಕೆ ಪಾತ್ರನಾಗಿದ್ದಾನೆ!

ಸೆರಾನೊ, ಒಫಿಲಿ ಉದಾಹರಣೆಗಳನ್ನು, ಕೇವಲ, ಪಾಶ್ಚಾತ್ಯ ದೇಶಗಳ ಸಂವಿಧಾನ ಮತ್ತು ಸರ್ಕಾರಗಳು, ತಮ್ಮ ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಉದಾಹರಣೆಗಳೆಂದಷ್ಟೇ ನಾವು ಭಾವಿಸಿದರೆ, ಅದು ತಪ್ಪಾದೀತು. ಅಂತಹ ಪ್ರಚೋದನಾತ್ಮಕ ಕಲೆಯನ್ನು ಒಪ್ಪದೆಯೂ ಸಹಿಸುವ ಸಂಸ್ಕೃತಿಯನ್ನು, ಸಂವಿಧಾನ/ಸರ್ಕಾರಗಳನ್ನೂ ಮೀರಿದ ಸಮಾಜ ಮತ್ತು ಧಾರ್ಮಿಕ ವ್ಯವಸ್ಥೆಯಲ್ಲೂ ಕಾಣಬಹುದು. ಸೆರಾನೊ ಮತ್ತು ಒಫಿಲಿಯರ ಕಲಾ ಕೃತಿಗಳಿಗೆ, ಕ್ರೈಸ್ತ ಧಾರ್ಮಿಕರಿಂದ ತೀವ್ರ ವಿರೋಧ ಬಂದದ್ದು ನಿಜವಾದರೂ, ಅಂತಹ ವಿರೋಧಗಳಿಗೆ ವಿರೋಧಗಳೂ ಕ್ರೈಸ್ತ ಧಾರ್ಮಿಕರಿಂದಲೇ ಬಂದದ್ದನ್ನೂ ನಾವು ಕಾಣಬಹುದು. ಉದಾಹರಣೆಗೆ, ಸೆರಾನೊನ ಕಲೆಯನ್ನು ಟಿ.ವಿ. ಡಿಬೇಟ್ ಒಂದರಲ್ಲಿ ಚರ್ಚಿಸಿದ ವೆಂಡಿ ಬೆಕೆಟ್ ಎಂಬ ಕಲಾ-ಇತಿಹಾಸಕಾರ್ತಿ ಮತ್ತು ವಿಮರ್ಶಕಿ, ಅದನ್ನು ಉತ್ತಮ ಕಲೆಯೆಂದೇನೂ ಕರೆಯಲಿಲ್ಲ. ಆದರೆ, ಆಕೆ ಸೆರಾನೊ ಕೃತಿಗೆ ದೈವ-ನಿಂದನೆಯ ಲೇಬಲ್ ಹಚ್ಚಿ ನಿಷೇಧಿಸುವ ಮಾತೂ ಆಡಲಿಲ್ಲ. ಈ ವೆಂಡಿ ಬೆಕೆಟ್ ಒಬ್ಬ ಕ್ರೈಸ್ತ ಸನ್ಯಾಸಿನಿ!

***

ಮೇಲ್ನೋಟಕ್ಕೇ, ‘‘ಬ್ಲಾಸ್ಛೆಮಿ’’ ಅಥವಾ ‘‘ದೈವನಿಂದನೆ’’ ಎಂದೆನ್ನಿಸಬಹುದಾದಂತಹ ಕಲೆ-ಸಾಹಿತ್ಯ-ಅಭಿಪ್ರಾಯಗಳನ್ನು ಕೆಲವೊಂದು ದೇಶ-ಸಂಸ್ಕೃತಿಗಳು ಸಹಿಸಿಕೊಂಡರೆ, ಇನ್ನೂ ಕೆಲ ದೇಶ-ಸಂಸ್ಕೃತಿಗಳಲ್ಲಿ ಅಂತಹವಕ್ಕೆ ಜಾಗವೇ ಇಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಇಂದು ಸರ್ವೇ ಸಾಮಾನ್ಯವೆಂದೆನಿಸುವ ಈ ಸಹನೆ, ಇದ್ದಕ್ಕಿದ್ದಂತೆ, ಈ ಆಧುನಿಕ ಯುಗದಲ್ಲಿ ಒಮ್ಮಿಂದೊಮ್ಮೆಲೆ ಉದ್ಭವಿಸಿದ್ದೇನೂ ಅಲ್ಲ. ಇದಕ್ಕೆ ಕೆಲವು ಶತಮಾನಗಳ ಇತಿಹಾಸವೇ ಇದೆ.
ಹದಿನೇಳನೆಯ ಶತಮಾನದ ಮಧ್ಯಭಾಗ, ಯೂರೋಪಿನಲ್ಲಿ, ಅದರಲ್ಲೂ ಬ್ರಿಟನ್ನಿನಲ್ಲಿ, ಅನೇಕ ಸಂಘರ್ಷಗಳ ಕಾಲ. ಸ್ಕಾಟ್ಲೆಂಡ್ ಮತ್ತು ಐರ್ಲೆಂಡಿನ ಜನರು ಬ್ರಿಟನ್ನಿನ ಅಂದಿನ ದೊರೆ ಮೊದಲನೆಯ ಚಾರ್ಲ್ಸ್ ವಿರುದ್ಧ ದಂಗೆ ಏಳುತ್ತಿದ್ದರು. ಬ್ರಿಟಿಷ್ ಪಾರ್ಲಿಮೆಂಟ್ ಮತ್ತು ದೊರೆ ಚಾರ್ಲ್ಸ್ ನಡುವೆಯೂ ಘರ್ಷಣೆಗಳು ನಡೆಯುತ್ತಲೇ ಇದ್ದವು. ಆಹಾರದ ಕೊರತೆ, ನೈಸರ್ಗಿಕ ಪ್ರಕೋಪಗಳೂ ಬ್ರಿಟನ್ ಅನ್ನು ಕಾಡುತ್ತಿದ್ದವು. ಕ್ರೈಸ್ತ ಧರ್ಮದಲ್ಲೂ, ಪಂಗಡಗಳು, ಒಳ-ಪಂಗಡಗಳು ಸೃಷ್ಟಿಯಾಗುತ್ತಲೇ ಇದ್ದವು. ಇಂತಹ ಬಿಕ್ಕಟ್ಟುಗಳನ್ನು ಎದುರಿಸಲು ಸಾಧ್ಯವಾಗದೆ, ಬ್ರಿಟನ್ ಸರ್ಕಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಿ, ‘‘ಪ್ರೆಸ್ ಲೈಸೆನ್ಸಿಂಗ್’’ ಕಾನೂನಿನ ಮೂಲಕ ಸೆನ್ಸಾರ್‌ಶಿಪ್ ವ್ಯವಸ್ಥೆಯನ್ನು ಹೇರಿತು. ಇಷ್ಟರ ಮಧ್ಯೆಯೇ, ಜೇಮ್ಸ್ ನೇಯ್ಲರ್ ಎಂಬಾತನ ಮೇಲೆ, ದೈವನಿಂದನೆಯ ಆರೋಪ ಹೊರಿಸಿ, ಅವನ ನಾಲಗೆಯನ್ನು ಸೀಳಿ, ಲಂಡನ್ನಿನ ರಸ್ತೆಗಳಲ್ಲಿ ಅವನಿಗೆ ಛಡೀ ಏಟು ನೀಡಿ, ಅವನ ಹಣೆಯ ಮೇಲೆ ಱಆ ಅಕ್ಷರದ ಬರೆ ಎಳೆಯಲಾಯಿತು. (“B” ಎಂದರೆ Blasphemer ದೈವನಿಂದಕ ಎಂದರ್ಥ)

ಇಂತಹ ವಿಪರೀತಗಳ ನಡುವೆಯೇ, ಜಾನ್ ಮಿಲ್ಟನ್ ಅಂತಹವರು ಸರ್ಕಾರ ಮತ್ತು ಸಮಾಜಗಳ ಸರ್ವಾಧಿಕಾರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ವಿರುದ್ಧ ದನಿ ಎತ್ತಿದ್ದರು. ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ಪ್ರಕಟವಾದ ಮಿಲ್ಟನ್‌ನ Areopagitica, ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಕೃತಿ ಎಂದು ಇಂದು ಪರಿಗಣಿತವಾಗಿದೆ.

ಅದೇ ಸಮಯದಲ್ಲಿ, ಬ್ರಿಟನ್ನಿನ ಹೊರಗೂ, ಬಾರೂಕ್ ಸ್ಪಿನೋಜಾನಂತಹ ಪ್ರಭಾವಶಾಲಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಮಾತನಾಡಲಾರಂಭಿಸಿದ್ದರು. ಸ್ಪಿನೋಜಾ, ಈ ಸ್ವಾತಂತ್ರ್ಯದ ಪರವಾಗಿ ಮುಖ್ಯವಾಗಿ, ಎರಡು ವಾದಗಳನ್ನು ಮಂಡಿಸುತ್ತಾನೆ. ಒಂದು: ವಿವಿಧ ಅಭಿಪ್ರಾಯಗಳಿಗೆ ಅವಕಾಶವಿರುವ ಸಂಸ್ಕೃತಿಯಲ್ಲಿ, ಸಮಾಜ ಮತ್ತು ಸರ್ಕಾರಗಳಿಗೆ, ಎಲ್ಲ ಅಭಿಪ್ರಾಯಗಳನ್ನೂ ಪರಿಗಣಿಸಿ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಎರಡು: ಸರ್ಕಾರ, ಸಮಾಜಗಳಿಗೆ ವಾಕ್-ನಿರ್ಬಂಧ ಹೇರುವ ಸಾಧ್ಯತೆ ಇದ್ದರೂ, ಚಿಂತನೆಯ ಮೇಲೆ ನಿರ್ಬಂಧ ಹೇರುವುದು ಅಸಾಧ್ಯ. ಹೀಗಾಗಿ ಇಂತಹ ನಿರ್ಬಂಧಗಳು, ಕೊನೆಗೆ ಸುಪ್ತ ಅಸಮಾಧಾನ ಮತ್ತು ದಂಗೆಗಳಿಗೆ ಕಾರಣಗಳಾಗುತ್ತವೆಯೇ ಹೊರತು ಸಾಮಾಜಿಕ ಸ್ವಾಸ್ಥ್ಯವನ್ನು ತರುವುದಿಲ್ಲ.

ಮಿಲ್ಟನ್, ಸ್ಪಿನೋಜಾರಂತಹವರ ವಾದಗಳು, ನೇಯ್ಲರ್‌ನಂತಹವರು ಅನುಭವಿಸಿದ ಕ್ರೌರ್ಯಗಳು, ಹದಿನೇಳನೆಯ ಶತಮಾನದ ಕೊನೆಯ ವೇಳೆಗೆ, ಯೂರೋಪಿನ ಸಮಾಜ ಮತ್ತು ಆಳುವ ವರ್ಗಗಳನ್ನು ತಟ್ಟಲಾರಂಭಿಸಿದವು. ಎರಡನೆಯ ಚಾರ್ಲ್ಸ್, ಬ್ರಿಟನ್ನಿನ ಗದ್ದುಗೆಗೆ ಏರಿದ ಮೇಲೆ, ದೈವನಿಂದನೆಯ ಆರೋಪದ ಮೇಲೆ ವ್ಯಕ್ತಿಗಳನ್ನು ಸುಡುವುದನ್ನು ನಿಷೇಧಿಸಲಾಯಿತು. ಕಲೆ, ವಿಜ್ಞಾನ, ಅನ್ವೇಷಣೆ, ವ್ಯವಹಾರ, ಹೀಗೆ ವಿವಿಧ ರಂಗಗಳಲ್ಲಿ ಯೂರೋಪ್ ಉತ್ತುಂಗಕ್ಕೇರುವ “Age of Enlightenment” ಅಭಿವ್ಯಕ್ತಿ ಸ್ವಾತಂತ್ರ್ಯದಿಂದಲೇ ಮೊದಲಾಯಿತು ಎನ್ನಬಹುದು.

***

ಹಾಡಿ ಮಾಟಾರ್ ಒಬ್ಬ ಅಮೆರಿಕನ್ ತರುಣ. ಅಭಿವ್ಯಕ್ತಿ ಸ್ವಾತಂತ್ರ್ಯದ ನಾಡಾದ ಅಮೆರಿಕದಲ್ಲಿೆುೀಂ ಹುಟ್ಟಿದವನು. ಇಡೀ ಜಗತ್ತನ್ನೇ ಆವರಿಸುತ್ತಿದೆಯೇ ಎಂಬಂತೆ ಒಮ್ಮೊಮ್ಮೆ ಆತಂಕ ಮೂಡಿಸುವ ಅಮೆರಿಕನ್ ಸಂಸ್ಕೃತಿಯ ಕೇಂದ್ರದಲ್ಲಿಯೇ ಬೆಳೆದವನು. ಸೇಟಾನಿಕ್ ವೆರ್ಸಸ್ ಕಾದಂಬರಿಯನ್ನು ಸಲ್ಮಾನ್ ರಷ್ದೀ ಬರೆದಾಗ ಮಾಟಾರ್ ಇನ್ನೂ ಹುಟ್ಟಿರಲೇ ಇಲ್ಲ. ಅವನು, ಆ ಕೃತಿಯನ್ನು ಓದಿದ್ದಾನೆಂಬುದಕ್ಕೆ ಸದ್ಯಕ್ಕಂತೂ ಯಾವುದೇ ಮಾಹಿತಿ ಇಲ್ಲ. ಆದರೆ, ಇದಾವುದೂ, ಅವನು ರಷ್ದೀ ಮೇಲೆ ನಡೆಸಿದ ಬರ್ಬರ ಹಲ್ಲೆಯನ್ನು ನಿಲ್ಲಿಸಲಿಲ್ಲ.

ಪತ್ರಿಕಾ ವರದಿಗಳಲ್ಲಿ ಪ್ರಕಟವಾದ, ಅವನ ಅಮ್ಮನ ಹೇಳಿಕೆಯಂತೆ, ಕೆಲ ವರ್ಷಗಳವರೆಗೂ ಅವನು ‘‘ನಾರ್ಮಲ್’’ ಅಮೆರಿಕನ್ ತರುಣನೇ ಆಗಿದ್ದನಂತೆ. ೨೦೧೮ರಲ್ಲಿ, ತನ್ನ ತಂದೆಯ ದೇಶವಾದ ಲೆಬನಾನ್‌ಗೆ ಹೋಗಿ ವಾಪಸು ಬಂದಮೇಲೆ ಅವನಲ್ಲಿ ಗಮನಾರ್ಹ ಬದಲಾವಣೆಯಾಯಿತಂತೆ. ನಂತರದಲ್ಲಿ ಇರಾನಿನ ನಾಯಕ ಮತ್ತು ಧರ್ಮಗುರುವಾಗಿದ್ದ ಅಯಾತೊಲ್ಲಾ ಖೋಮೇನಿಯವರ ಭಾವ ಚಿತ್ರವನ್ನು ತನ್ನ ಆನ್-ಲೈನ್ ಪ್ರೊಫೈಲುಗಳಲ್ಲಿ
 ಬಳಸಲಾರಂಭಿಸಿದನಂತೆ.

ಖೋಮೇನಿಯವರ ಪುತ್ರನೇ, ಅಮೆರಿಕನ್ ಪತ್ರಕರ್ತರೊಬ್ಬರಿಗೆ ಹೇಳಿದಂತೆ, ರಷ್ದೀ ಪುಸ್ತಕವನ್ನು, ಖೋಮೇನಿ ಓದಿಯೇ ಇರಲಿಲ್ಲವಂತೆ. ಆದರೆ, ಅದು ರಷ್ದೀ ಹತ್ಯೆಗೆ ಫತ್ವಾ ನೀಡುವುದನ್ನು ತಡೆಯಲಿಲ್ಲ. ೧೯೮೯ರಲ್ಲಿ, ಖೋಮೇನಿ ರಷ್ದೀ ಹತ್ಯೆಗೆ ಫತ್ವಾ ನೀಡಿದಾಗ, ಇರಾನಿನಲ್ಲಿ ಕ್ರಾಂತಿಯಾಗಿ ಹತ್ತು ವರ್ಷಗಳಾಗಿದ್ದವು. ಒಂದೆಡೆ ಆಧುನಿಕತೆಯನ್ನು ಪ್ರೋತ್ಸಾಹಿಸುತ್ತಲೇ, ಇನ್ನೊಂದೆಡೆ ಸರ್ವಾಧಿಕಾರದ ಭ್ರಷ್ಟತೆಯನ್ನೂ ಹೇರಿದ್ದ ಶಾಹನನ್ನು ಓಡಿಸಿಯಾಗಿತ್ತು. ಆದರೆ, ಸಾಮಾನ್ಯ ಇರಾನಿಯನ್ನರ ಪರಿಸ್ಥಿತಿ ಸುಧಾರಿಸಿರಲಿಲ್ಲ. ಪಾಶ್ಚಾತ್ಯ ದೇಶಗಳು ಇರಾನಿನ ಮೇಲೆ ಹೇರಿದ್ದ ಆರ್ಥಿಕ ದಿಗ್ಬಂಧನ ಆ ದೇಶವನ್ನು ಹೈರಾಣಗೊಳಿಸಿತ್ತು. ಇಷ್ಟರ ಮಧ್ಯೆಯೇ, ಸದ್ದಾಂ ಹುಸೇನರ ಇರಾಕಿನೊಡಗಿನ ಕದನದಲ್ಲಿ ಹಲವಾರು ಲಕ್ಷ ಇರಾನಿಯನ್ನರು ಸಾವಿಗೀಡಾಗಿದ್ದರು. ಒಟ್ಟಿನಲ್ಲಿ, ಹತ್ತು ವರ್ಷಗಳ ಹಿಂದಿನ ಕ್ರಾಂತಿಯ ಬಗೆಗೆ ಭ್ರಮನಿರಸನವಾಗತೊಡಗಿತ್ತು. ಇರಾನಿಯರನ್ನು ಒಗ್ಗೂಡಿಸಲು ಕಾರಣವೊಂದು ಬೇಕಿತ್ತು. ರಷ್ದೀ ಪುಸ್ತಕ ಅದನ್ನು ದೊರಕಿಸಿತು. ಫತ್ವಾ ಹೊರಬಿತ್ತು.

೧೯೮೮ರಲ್ಲಿ ಪ್ರಕಟವಾದ ಸೇಟಾನಿಕ್ ವೆರ್ಸಸ್ ಕೃತಿಯನ್ನು ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ನಿಷೇಧ ಮಾಡಿದವರು ಭಾರತ ಸರ್ಕಾರದವರು. ಯಾವ ಐ.ಎ.ಎಸ್. ಅಧಿಕಾರಿ ಅಥವಾ ಮಂತ್ರಿ ಮಹೋದಯರು ಆ ಪುಸ್ತಕವನ್ನು ಓದಿ ಈ ತೀರ್ಮಾನ ಕೈಗೊಂಡರೋ ಅದು ಯಾರಿಗೂ ತಿಳಿಯದು. ಆ ನಿಷೇಧ, ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ಅನುಕೂಲಕರವಾಗಿತ್ತು ಎಂಬುದಂತೂ ಸರ್ವ ವಿದಿತ.

ರಾಜಕೀಯ ಅಥವಾ ಇನ್ನಾವುದೋ ಕಾರಣಗಳಿಗಾಗಿ ಹೊರಡಿಸುವ ಇಂತಹ ಫತ್ವಾಗಳು, ನಿಷೇಧಗಳು, ಕೇವಲ ತಾತ್ಕಾಲಿಕ ಫರ್ಮಾನುಗಳಲ್ಲ. ಹಲವು ಬಾರಿ, ಅವು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರುಬಿಟ್ಟು ಇಡೀ ಸಮಾಜವನ್ನೇ ರೂಪಿಸುತ್ತವೆ.

ಸೆರಾನೊ, ಒಫಿಲಿಯರನ್ನು ಪಾಶ್ಚಾತ್ಯ ಸಂಸ್ಕೃತಿಗಳು ಸಹಿಸಿಕೊಳ್ಳಬಲ್ಲರಾದರೇ, ಎಮ್.ಎಫ್.ಹುಸೇನ್ ತಮ್ಮ ಇಳಿಗಾಲದಲ್ಲಿ ನಮ್ಮ ದೇಶವನ್ನೇ ಬಿಡಬೇಕಾದಂತಹ ಪರಿಸ್ಥಿತಿ ಏಕೆ ಎದುರಾಯಿತು? ಸಾಹಿತ್ಯ, ಕಲೆ, ಅಭಿಪ್ರಾಯಗಳ ಮೇಲೆ ನಮ್ಮ ದೇಶದ ಸರ್ಕಾರಗಳು ಪದೇ ಪದೇ ಹೇರುತ್ತಲೇ ಇರುವ ನಿರ್ಬಂಧಗಳು ನಮ್ಮ ಸಮಾಜಕ್ಕೆ ಎಂತಹ ರೂಪ ನೀಡುತ್ತಿವೆ ಎಂಬುದರ ಬಗೆಗೆ ನಾವು ಆಲೋಚಿಸಬೇಕಿದೆ. (ಅಂದಹಾಗೆ, ಈ ನಿರ್ಬಂಧಗಳಿಗೆ ಕುಮ್ಮಕ್ಕು ಹಲವೊಮ್ಮೆ ಎಡಪಂಥೀಯರು/ಬುದ್ಧಿವಾದಿಗಳು ಎನ್ನಿಸಿಕೊಂಡವರಿಂದಲೂ ಬಂದಿರುವುದನ್ನು ನಾವು ಗಮನಿಸಬಹುದು. ತಮಗಿಷ್ಟವಿಲ್ಲದ್ದನ್ನು ಯಾರೂ ಮಾಡಕೂಡದು/ಆಡಕೂಡದು/ನೋಡಕೂಡದು ಎಂದು ಆಲೋಚಿಸುವಲ್ಲಿ ಯಾವುದೇ ಪಂಥ ಬೇಧವಿದ್ದಂತಿಲ್ಲ).

ರಷ್ದೀಯವರ ಮೇಲೆ ನಡೆದ ಹಲ್ಲೆಯನ್ನು, ಭಾರತೀಯರಾದ ನಾವು, ಲೆಬನಾನ್ ಸಂಜಾತ ಅಮೆರಿಕನ್ ಮುಸ್ಲಿಂ ತರುಣನೊಬ್ಬ ಇರಾನಿನ ಖೋಮೇನಿ ಫತ್ವಾದಿಂದ ಪ್ರೇರಿತನಾಗಿ ನಡೆಸಿದ ಹಲ್ಲೆ ಎಂದಷ್ಟೇ ಸೀಮಿತವಾಗಿ ನೋಡಿ ಪಕ್ಕಕ್ಕಿಡಬಹುದು. ಆದರೆ, ಅದನ್ನು, ಗೌರಿ ಲಂಕೇಶ್, ಕಲ್ಬುರ್ಗಿಯಂತಹವರ ಹತ್ಯೆಯ ವಿಸ್ತಾರದಲ್ಲೂ ನೋಡಬೇಕಿದೆ. ‘‘ಗೌರಿ, ಕಲ್ಬುರ್ಗಿಯವರ ಹತ್ಯೆಗೆ ಯಾವ ಧಾರ್ಮಿಕ ನಾಯಕರೂ ಫತ್ವಾ ನೀಡಲಿಲ್ಲ’’ ಎಂದು ವಾದಿಸಬಹುದಾದರೂ, ಅಂತಹ ಫತ್ವಾ ಇಲ್ಲದೆಯೂ ಹತ್ಯೆಗೆಯ್ಯುವ ಬರ್ಬರತೆ ನಮ್ಮ ಸಮಾಜದಲ್ಲಿ ಬೇರೂರಿರುವುದರ ಬಗೆಗೆ ನಾವು ಯೋಚಿಸಲೇಬೇಕಿದೆ.

ಪಾಶ್ಚಾತ್ಯ ದೇಶಗಳಲ್ಲಿ ಎಲ್ಲವೂ ಸರಿ ಇದೆಯೆಂಬುದು ಈ ಲೇಖನದ ವಾದವಲ್ಲ. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲೇ, ಅಮೆರಿಕದ ಸಂವಿಧಾನ ನೀಡಿರುವ ‘‘ಬಂದೂಕು ಇಟ್ಟುಕೊಳ್ಳುವ ಹಕ್ಕು’’ ಪ್ರತಿ ವರ್ಷ ನೂರಾರು ಮಾರಣ ಹೋಮಗಳಿಗೆ ಕಾರಣವಾಗುತ್ತಿರುವುದು ನಮ್ಮೆ ಕಣ್ಣೆದುರಿಗೇ ಇದೆ. ಆದರೂ, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಸಾಧ್ಯವಾಗಿರುವ ಸಹನೆ ನಮಗೇಕೆ ಸಾಧ್ಯವಾಗಿಲ್ಲ ಎಂದು ನಾವು ಕೇಳಿಕೊಳ್ಳಬೇಕಾಗಿದೆ.
ಹದಿನೇಳನೆಯ ಶತಮಾನದಲ್ಲಿ ಜೇಮ್ಸ್ ನೇಯ್ಲರ್ ಅನುಭವಿಸಿದ ಕ್ರೌರ್ಯ, ಯೂರೋಪಿಯನ್ ಜ್ಞಾನೋದಯಕ್ಕೆ ನಾಂದಿ ಹಾಡಲು ಸಾಧ್ಯವಾದರೆ, ಇಂದು ರಷ್ದೀ ಮೇಲಾದ ಹಲ್ಲೆ, ನಮ್ಮಲ್ಲಿ ಕನಿಷ್ಠ ಆತ್ಮಾವಲೋಕನಕ್ಕಾದರೂ ಕಾರಣವಾಗಬಲ್ಲದೇ?!

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

4 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

5 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

5 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

6 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

6 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

6 hours ago