ಆಂದೋಲನ ಪುರವಣಿ

ನಾಗರಹೊಳೆಯ ಕಾಡಿನ ಮೇಷ್ಟ್ರು ಇಲ್ಲವಾದರು

ಟಿ.ಎಸ್.ಗೋಪಾಲ್

ನಾನು ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ಕೊಡಗಿನ ಶ್ರೀಮಂಗಲದಿಂದ ನಾಗರಹೊಳೆ ಇಪ್ಪತೈದು ಕಿಮೀ ಗಳಷ್ಟೇ ದೂರದಲ್ಲಿತ್ತು. ಸಾರಿಗೆ ಸಂಪರ್ಕ ತೀರಾ ಕಡಿಮೆಯಿದ್ದ ಎಪ್ಪತ್ತರ ದಶಕದಲ್ಲಿ ಅದು ಬಲು ದೂರದ ಸ್ಥಳವೇ. ವನ್ಯಜೀವಿಗಳು ಜನರಲ್ಲಿ ವೀಕ್ಷಣೆಯ ಆಸಕ್ತಿ ಹುಟ್ಟಿಸುವುದಕ್ಕಿಂತ ಬೇಟೆಯ ಗುರಿಯಾಗಿ ಆಕರ್ಷಣೆಯುಂಟು ಮಾಡುತ್ತಿದ್ದ ಕಾಲವದು. ನಗರದಿಂದ ದೂರವಾಗಿ ಅಪರಿಚಿತ ಮಲೆನಾಡಿನಲ್ಲಿ ಸಿಲುಕಿಕೊಂಡಿದ್ದ ನನ್ನಂಥವನಿಗೆ ನೆರೆಹೊರೆಯ ನಿವಾಸಿಗಳಾಗಿದ್ದ ಮುಂಗುಸಿ, ನರಿ, ಹಾವು, ಬಾವಲಿಗಳ ಪರಿಚಯವೇ ಸಾಕಾಗಿತ್ತು. ಇನ್ನು ಈ ಅಭಯಾರಣ್ಯ ಕಟ್ಟಿಕೊಂಡು ಆಗಬೇಕಾಗಿದ್ದೇನು? ಮೈಸೂರಿನ ಸ್ಥಳೀಯರು ಪಕ್ಕದ ಅರಮನೆಯ ಬಗ್ಗೆ ತೋರುವಷ್ಟೇ ಅವಜ್ಞೆಯಿಂದ ನಾಗರಹೊಳೆಯನ್ನು ಅಲಕ್ಷಿಸಿದ್ದೆ. ಮನೆಯೆದುರು ಕಾಣುತ್ತಿದ್ದ ಬ್ರಹ್ಮಗಿರಿ ಬೆಟ್ಟಸಾಲು ಬೇಸಿಗೆಯಲ್ಲಿ ಕಾಡ್ಗಚ್ಚಿನಿಂದ ದಹಿಸುತ್ತಿರುವಾಗ, ಆ ಬೆಳಕು ಮೈಸೂರು ಅರಮನೆಯ ದೀಪಗಳಂತೆಯೇ ಜ್ವಾಜಲ್ಯಮಾನವಾಗಿದೆಯಲ್ಲ ಎಂದು ಅಚ್ಚರಿಯಿಂದ ನೋಡಿದ್ದೂ ಉಂಟು!

ಕೊಡಗಿನಿಂದ ಮೈಸೂರಿಗೆ ನಾಗರಹೊಳೆ ಮಾರ್ಗವಾಗಿ ಬಸ್ ಸಂಚಾರ ಪ್ರಾರಂಭವಾದ ನಂತರ, ತಿರುಗಾಟದ ನೆವದಲ್ಲಿ ಅಲ್ಲಿನ ಅರಣ್ಯವೂ ವನ್ಯಮೃಗಗಳೂ ನನ್ನ ಗಮನ ಸೆಳೆದುಕೊಂಡವು. ಆ ಹೊತ್ತಿಗೆ ಅಲ್ಲಿಯೇ ವಲಯ ಅರಣ್ಯಾಧಿಕಾರಿಯಾಗಿದ್ದ ಚಿಣ್ಣಪ್ಪನವರ ಎತ್ತರದ ನಿಲುವಿನ ದರ್ಶನವೂ ಅಪರೂಪಕ್ಕೊಮ್ಮೆ ಲಭ್ಯವಾಗುತ್ತಿತ್ತು. ವರ್ಷಗಳು ಉರುಳಿದಂತೆ ಅವರ ಕಾರ್ಯವೈಖರಿ, ಒರಟುತನ, ವಿಚಿತ್ರ ವರ್ತನೆ ಮೊದಲಾದವುಗಳ ಬಗೆಗೆ ವದಂತಿ ರೂಪದ ಸುದ್ದಿ, ಕಿರುಗತೆಗಳು ಪದೇ ಪದೇ ಕಿವಿಗೆ ಬೀಳುತ್ತಿದ್ದವು. ಮರಗಳ್ಳರ ಮೇಲೆ ಹೂಡಲಾದ ಮೊಕದ್ದಮೆ, ಕಾರಂತರ ರೇಡಿಯೋ ಕಾಲರ್ ಪ್ರಯೋಗ, ಕಳ್ಳಬೇಟೆಯವನ ಸಾವು, ಊರವರು ನಾಗರಹೊಳೆಗೆ ಕೊಟ್ಟ ಬೆಂಕಿ-ಮೊದಲಾಗಿ ನಾಗರಹೊಳೆಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಂಬಂಧಿಸಿದ ಎಲ್ಲ ಘಟನಾವಳಿಗಳೂ ಚಿಣ್ಣಪ್ಪನವರ ‘ವಿಕ್ಷಿಪ್ತ ವ್ಯಕ್ತಿತ್ವಕ್ಕೆ ತಗುಲುಹಾಕಿಕೊಂಡಿದ್ದುವು. ವಸ್ತುಸ್ಥಿತಿ ಏನೇ ಇರಲಿ, ಸಕಲ
ಲೋಪದೋಷಗಳನ್ನೂ ಅವರ ತಲೆಗೆ ಕಟ್ಟುವ ಪ್ರಕ್ರಿಯೆ ಅದೆಷ್ಟು ನಿರಂತರವಾಗಿತ್ತೆಂದರೆ, ನಾಗರಹೊಳೆಗೆ ಸಂಬಂಧಿಸಿದ ಏನೇ ವಿಷಯವಿರಲಿ, ಚಿಣ್ಣಪ್ಪನೇ ತಪ್ಪಿತಸ್ಥ ಎಂಬ ಠರಾವನ್ನು ಯಾರು ಯಾವಾಗ ಬೇಕಿದ್ದರೂ ಸರ್ವಾನುಮತದಿಂದ ಅಂಗೀಕರಿಸಬಹುದಾಗಿತ್ತು! ಯಾವ ಏಕೈಕ ವ್ಯಕ್ತಿಯ ಮೇಲ್ವಿಚಾರಣೆಯ ಕಾರಣದಿಂದಲೇ ನಾಗರಹೊಳೆ ಸಮೃದ್ಧಿ ನೆಮ್ಮದಿಗಳನ್ನು ಕಂಡಿತೋ ಅದರ ಯಶಸ್ಸನ್ನು ಗುರುತಿಸಿ ಕೀರ್ತಿಸುವ ಬದಲಿಗೆ ಇಲ್ಲಸಲ್ಲದ ಊಹಾಪೋಹಗಳನ್ನು ಹರಿಬಿಟ್ಟು ಸಾಧಕನೊಬ್ಬನನ್ನು ಹೀಗಳೆದು ಅಪಮಾನಿಸುವ ಪರಿ ಎಡೆಬಿಡದೆ ಮುಂದುವರಿದಿತ್ತು.

ಸ್ವಜನರಿಂದ ಮೊದಲುಗೊಂಡು ಸರ್ಕಾರದವರೆಗೆ ಎಲ್ಲರ ವಿರೋಧವನ್ನೂ ನಿರಂತರವಾಗಿ ಎದುರಿಸಿ ಚಿಣ್ಣಪ್ಪ ಹಣ್ಣಾಗಿದ್ದರು. 1993ರಲ್ಲಿ ಅವರು ಸೇವೆಯಿಂದ ಸ್ವಯಂ ನಿವೃತ್ತಿ ಪಡೆದದ್ದೂ ಆಯಿತು. ಆದರೆ, ಅವರಲ್ಲಿ ವನ್ಯಜೀವಿ ಸಂರಕ್ಷಣೆಯ ಧೈಯ, ಸಂದೇಶ ಸಾರುವ ಹಂಬಲ ಅಚಲವಾಗಿತ್ತು. ಶಾಲಾ ಕಾಲೇಜುಗಳಿಗೆ ಹೋಗಿ ಪ್ರಾತ್ಯಕ್ಷಿಕೆಯ ಉಪನ್ಯಾಸ ಮಾಡುವುದಲ್ಲದೆ, ಮಕ್ಕಳಿಗಾಗಿ ವಿವಿಧ ಅಭಯಾರಣ್ಯಗಳಲ್ಲಿ ಪ್ರಕೃತಿ ಶಿಬಿರಗಳನ್ನು ಏರ್ಪಡಿಸಿ, ತಮ್ಮ ವ್ಯಾಪಕವೂ ನಿಖರವೂ ಆದ ಅರಣ್ಯಜ್ಞಾನವನ್ನು ಪ್ರಾಯೋಗಿಕ ಬೋಧನೆಯ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡಲು ಅವರು ಬಯಸಿದರು. ಇದಕ್ಕಾಗಿ ಅವರು ಮೊದಲು ಆಯ್ಕೆ ಮಾಡಿಕೊಂಡದ್ದು ನಾನು ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯನ್ನೇ, ಕಾರಣ- ಹಿಂದೆ ಅವರು ವಿದ್ಯಾಭ್ಯಾಸ ಪಡೆದದ್ದೂ ಅದೇ ಶಾಲೆಯಲ್ಲಿ!

1995. ಚಿಣ್ಣಪ್ಪನವರ ಮಾರ್ಗದರ್ಶನದಲ್ಲಿ ನಾಡಿನ ಐದು ಅಭಯಾರಣ್ಯಗಳಲ್ಲಿ ತಲಾ ಮೂರು ದಿನಗಳ ಅವಧಿಯ ಪ್ರಕೃತಿ ಶಿಬಿರಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಹೊಣೆ ನನ್ನ ಪಾಲಿಗೇ ಬಂದಿತು. ಚಿಣ್ಣಪ್ಪನವರ ಸ್ವಭಾವದೊಡನೆ ಹೊಂದಿಕೊಳ್ಳಲು ನನಗೆ ಸಾಧ್ಯವಾದೀತು ಎಂದು ಸಂಸ್ಥೆಯ ಮುಖ್ಯಸ್ಥರು ಆಶಿಸಿದ್ದರೋ ಏನೋ, ಅಂತೂ ಅಲ್ಲಿಂದ ಮೊದಲುಗೊಂಡ ಚಿಣ್ಣಪ್ಪನವರ ಒಡನಾಟ ಆತ್ಮೀಯವೂ ಆಗಿ ಅವರ ಬದುಕಿನ ಕೊನೆಯವರೆಗೂ ಸ್ಥಿರವಾಗಿ ಉಳಿಯಿತು.

ಚಿಣ್ಣಪ್ಪನವರ ಬಗೆಗಿನ ವದಂತಿ, ಹೇಳಿಕೆಗಳ ಆಧಾರದಿಂದ ನಾನು ಕಲ್ಪಿಸಿಕೊಂಡಿದ್ದ ಅವರ ವ್ಯಕ್ತಿತ್ವಕ್ಕೂ ವಾಸ್ತವಕ್ಕೂ ಸಂಬಂಧವೇ ಇರಲಿಲ್ಲ ಎಂಬ ಅರಿವು ಮೂಡಲು ತಡವಾಗಲಿಲ್ಲ. ನಾವು ಪ್ರಕೃತಿ ಶಿಬಿರಕ್ಕೆ ಮೊದಲು ಆಯ್ಕೆ ಮಾಡಿಕೊಂಡಿದ್ದ ಬಂಡೀಪುರಕ್ಕೆ ಮಕ್ಕಳನ್ನು ಕರೆದೊಯ್ದಾಗ ಸಂಜೆಯಾಗಿತ್ತು. ಅಲ್ಲಿಗೆ ಚಿಣ್ಣಪ್ಪ ಇನ್ನೂ ತಲುಪಿರಲಿಲ್ಲ. ಅದೇ ದಿನ ರಾಜ್ಯಪಾಲರು ಅಲ್ಲಿಗೆ ಬಂದು ತಂಗುವ ಕಾರ್ಯಕ್ರಮವಿದ್ದುದರಿಂದ ಇಲಾಖೆಯವರು ನಮ್ಮನ್ನು ವಾಹನ ಸಮೇತ ಹಿಂತಿರುಗಿ ಕಳುಹಿಸುವ ಸನ್ನಾಹದಲ್ಲಿದ್ದರು. ಅಷ್ಟರಲ್ಲಿ ಚಿಣ್ಣಪ್ಪನವರು ಅಲ್ಲಿಗೆ ತಲುಪಿ, ಹಾಗೂ ಹೀಗೂ ನಮಗೆಲ್ಲ ವಸತಿ ಸೌಕರ್ಯ ಒದಗಿಸಿಕೊಟ್ಟ ಮೇಲೆ ನೆಮ್ಮದಿಯೆನಿಸಿತು.

ಮರುದಿನ ಬೆಳಿಗ್ಗೆ ಚಿಣ್ಣಪ್ಪನವರ ವಾಹನ ಚಾಲಕ ಇದಿರಾಗಿ, ಅವರ ಬ್ಯಾಗನ್ನು ಎಲ್ಲಿ ತಂದಿಡಬೇಕೆಂದು ಕೇಳಿದ. ಅವರ ಕೊಠಡಿ ಎಲ್ಲಿದೆಯೆಂದು ಕೇಳಿದರೆ ಗೊತ್ತಿಲ್ಲವೆಂದ. ವಿಚಾರಿಸುವಾಗ, ರಾಜ್ಯಪಾಲರ ಪರಿವಾರದ ಭೇಟಿಯ ದಿಸೆಯಿಂದಾಗಿ ಚಿಣ್ಣಪ್ಪನವರಿಗೆ ಯಾವುದೇ ಕೊಠಡಿಯೂ ಸಿಕ್ಕಿರಲಿಲ್ಲ. ನಮಗೆ ತೊಂದರೆಯಾಗಬಾರದೆಂದು ಅವರು ಡಾರ್ಮೆಟರಿಯ ಕಡೆಗೂ ಬರಲಿಲ್ಲ. ಆ ರಾತ್ರಿ ಅವರು ಸ್ವಾಗತ ಕಚೇರಿಯ ವರಾಂಡದಲ್ಲಿ ಜಗುಲಿಯ ಮೇಲೆ ಮಲಗಿದ್ದರೆಂದು ತಿಳಿದು ಅಚ್ಚರಿಯಾಯಿತು. ಚಿಣ್ಣಪ್ಪನವರ ಸಹಚರ್ಯ ಆರಂಭವಾಗುವುದಕ್ಕೆ ಮುನ್ನವೇ ಅವರ ಕಾರ್ಯನಿಷ್ಠೆ, ಅನನುಕೂಲ ಸಂದರ್ಭದಲ್ಲೂ ತಪ್ಪದ ಕರ್ತವ್ಯ ಶ್ರದ್ಧೆ, ಸ್ಥಿತಪ್ರಜ್ಞೆ -ಎಲ್ಲವೂ ಧುತ್ತೆಂದು ನನ್ನೆದುರು ಪ್ರಕಟವಾದಂತೆ ಭಾಸವಾಯಿತು. ನಾಲೈದು ವರ್ಷಗಳ ನಂತರ ನಾನು ಚಿಣ್ಣಪ್ಪನವರ ಅನುಭವ ಕಥನವನ್ನು ಪುಸ್ತಕರೂಪದಲ್ಲಿ ಬರೆಯುವುದಕ್ಕೆ ಮೊದಲ ಪ್ರೇರಣೆ ಇದೇ ಎಂದು ಹೇಳಬಲ್ಲೆ.

1999. ಚಿಣ್ಣಪ್ಪನವರ ಜೀವನ ವೃತ್ತಾಂತವನ್ನು ಬರೆದು ಮುಗಿಸಿ, ಪ್ರಕಾಶಕರಿಗಾಗಿ ಹುಡುಕಾಟ ನಡೆಸಿದ್ದೆ. ಕೆಲವರು ಪ್ರಕಾಶಕರನ್ನು ಸಂಪರ್ಕಿಸುವುದಾಗಿ ಉಲ್ಲಾಸ ಕಾರಂತರೂ ಹೇಳಿದ್ದರು. ಒಂದು ದಿನ ಸಂಜೆ ದೂರವಾಣಿಯ ಕರೆ ಬಂದಿತು. ಅಪರಿಚಿತ ಧ್ವನಿ. ಯಾರೆಂದು ವಿಚಾರಿಸುವಾಗ ‘ನಾನು ಮೂಡಿಗೆರೆಯಿಂದ ಪೂರ್ಣಚಂದ್ರ ತೇಜಸ್ವಿ’ ಎಂಬ ಉತ್ತರ ಬಂದಿತು. ನನಗಾದ ಸಂತೋಷ ಹೇಳತೀರದು. ನೀವು ಬರೆದ ಚಿಣ್ಣಪ್ಪನ ಕಥೆ ಓದಿದೆ. ಪುಸ್ತಕ ಪ್ರಕಾಶನದಿಂದ ಪ್ರಕಟಿಸಬಹುದು’ ಎಂದರು. ಕಾರಂತರು ಅವರಿಗೆ ಹಸ್ತಪ್ರತಿಯನ್ನು ಕಳುಹಿಸಿದ್ದರಂತೆ. ಒಂದೊಂದು ಅಧ್ಯಾಯವೂ ಪ್ರತ್ಯೇಕ ಪುಸ್ತಕವಾಗುವಂಥ ಹರವು ಇದೆ’ ಎಂದು ಮೆಚ್ಚಿಕೊಂಡ ತೇಜಸ್ವಿ ಆಡಿದ ಮಾತುಗಳಿಂದಲೇ ಅವರು ನನ್ನ ಬರೆಹವನ್ನು ಪೂರ್ಣವಾಗಿ ಓದಿದ್ದರೆಂದು ತಿಳಿಯಿತು. ‘ಇಷ್ಟು ದಿನ ಎಲ್ಲಿದೆ ಮಾರಾಯ?’ ಎಂದು ಬೆನ್ನುತಟ್ಟಿಸಿಕೊಂಡಿದ್ದೂ ಆಯಿತು. ತೇಜಸ್ವಿಯವರೇ ಪುಸ್ತಕವನ್ನು ಪ್ರಕಟಿಸಲು ಮುಂದಾದರೆಂದು ಚಿಣ್ಣಪ್ಪನವರಿಗೂ ಸಂತೋಷವಾಯಿತು.

ಕನ್ನಡದ ಪುಸ್ತಕೋದ್ಯಮದ ನಾಡಿಮಿಡಿತವನ್ನು ತೇಜಸ್ವಿ ಚೆನ್ನಾಗಿ ಅರಿತುಕೊಂಡಿದ್ದವರು. ಕಾಡಿನೊಳಗೊಂದು ಜೀವ ಪುಸ್ತಕವನ್ನು ಮೂರು ಭಾಗಗಳಲ್ಲಿ ಪ್ರಕಟಿಸೋಣವೆಂಬ ಅವರ ಸಲಹೆ ಚಿಣ್ಣಪ್ಪನಿಗೆ ಕಿಂಚಿತ್ತೂ ಇಷ್ಟವಾಗಲಿಲ್ಲ. ಹಳೆಯ ಕೆಲವು ಅಪೂರ್ವ ಚಿತ್ರಗಳನ್ನೂ ವನ್ಯಜೀವಿಗಳ ಚಿತ್ರಗಳನ್ನೂ ಪುಸ್ತಕದಲ್ಲಿ ಸೇರಿಸಬೇಕೆಂಬ ಚಿಣ್ಣಪ್ಪನ ಆಸೆಯನ್ನು ತೇಜಸ್ವಿಯವರಿಗೆ ತಿಳಿಸಿದೆ. ಅದೆಲ್ಲ ಬೇಡ ಸುಮ್ಮನಿರು, ಮದುವೆ ಅಲ್ವಂ ಥರಾ ಪುಸ್ತಕ ಮಾಡಿದ್ರೆ ಏನು ಚೆನ್ನ? ಓದುವವನ ಗಮನ ಮತ್ತೆಲ್ಲೋ ಹೋಗುತ್ತೆ ಎಂದುಬಿಟ್ಟರು. ಅವರ ಇಷ್ಟವನ್ನು ಇವರಿಗೆ, ಇವರ ಅಭಿಪ್ರಾಯವನ್ನು ಅವರಿಗೆ ತಲುಪಿಸುವ ದೂರವಾಣಿಯ ನಾರದನಾಗಿ ಸಾಧಿಸಬೇಕಾಗಿದ್ದ ಸಂವಹನ ಕೌಶಲವು ಪುಸ್ತಕ ಲೇಖನಕ್ಕಿಂತ ಹಿರಿದಾಗಿ ಕಂಡಿತು. ತೇಜಸ್ವಿಯವರ ಇಷ್ಟದಂತೆ, ಪುಸ್ತಕದಲ್ಲಿ ಫೋಟೊಗಳ ಬದಲಿಗೆ ಕಥಾನಕಕ್ಕೆ ಒಪ್ಪುವ ಕ್ಯಾರಿಕೇಚರ್ (ವ್ಯಂಗ್ಯಚಿತ್ರ)ಗಳನ್ನು ಬರೆಸಿದ್ದಾಯಿತು. ಇನ್ನು ಮುಖಪುಟ.

ಚಿಣ್ಣಪ್ಪನವರಿಗೆ ಆನೆ ಎಂದರೆ ಬಲುಪ್ರೀತಿ. ಅದರ ಚಿತ್ರವನ್ನೇ ಹಾಕೋಣ ಎಂದರು ತೇಜಸ್ವಿ. ಆದರೆ ಚಿಣ್ಣಪ್ಪನವರ ವ್ಯಕ್ತಿತ್ವ, ಧೈರ್ಯ ಸಾಹಸಗಳು ವ್ಯಕ್ತಪಡುವಂತೆ ಚಿತ್ರದಲ್ಲಿನ ಆನೆಯು ಆಕ್ರಮಣಶೀಲವಾಗಿ ಮುಂದೆ ಧಾವಿಸಿ ಬರುವಂತಿರುವ ಚಿತ್ರ ಎಲ್ಲಾದರೂ ಸಿಕ್ಕೀತೆ ಎಂದು ಹುಡುಕುತ್ತಿರುವುದಾಗಿ ಹೇಳಿದ್ದರು. ಕೊನೆಗೂ ಅವರಿಗೆ ಅಂಥದ್ದೊಂದು ಚಿತ್ರ ಸಿಕ್ಕಿಯೇ ಬಿಟ್ಟಿತು!

ಆನೆಯ ಚಿತ್ರ ನೋಡಿ ಚಿಣ್ಣಪ್ಪನವರಿಗೆ ಅಸಮಾಧಾನವಾಯಿತು. ತಮ್ಮ ವೃತ್ತಿಜೀವನವೆಲ್ಲ ಭಾರತದ ಭವ್ಯಾಕೃತಿಯ ಆನೆಗಳ ನಡುವೆ ಕಳೆದಿರುವಾಗ ಆಫ್ರಿಕಾದ ಆನೆಯ ಚಿತ್ರವೊಂದು ತಮ್ಮ ಬದುಕನ್ನು ಹೇಗೆ ಸಂಕೇತಿಸಲು ಸಾಧ್ಯ? ಎನ್ನುವುದು ಚಿಣ್ಣಪ್ಪನವರ ಆಕ್ಷೇಪ. ಚಿತ್ರ ಸಿಕ್ಕ ಸಂತೋಷದಲ್ಲಿದ್ದ ತೇಜಸ್ವಿಯವರಿಗೆ ಇದೇನು ವಿಚಿತ್ರ ಎನ್ನಿಸಿತು. “ಆನೆ ಅಂದ್ರೆ ಆನೆ. ಆಫ್ರಿಕಾ ಆದ್ರೇನು ಇಂಡಿಯಾ ಆದ್ರೇನು?” ಎಂಬ ಅವರ ಪ್ರಶ್ನೆಗೆ ನಾನೇನೋ ಸಮಜಾಯಿಷಿ ಹೇಳಿದೆ. ಅದೆಲ್ಲ ಇರಲಿ ಬಿಡಪ್ಪಾ. ಈಗ ಆಫ್ರಿಕಾ ಆನೆಗೂ ಭಾರತದ ಆನೆಗೂ ಏನು ವ್ಯತ್ಯಾಸ ಹೇಳು’ ಎಂದು ಕೇಳಿದರು. ‘ಸರ್, ಆಫ್ರಿಕಾ ಆನೆಯ ಕಿವಿಗಳು ಅಗಲವಾಗಿರುತ್ತವೆ. ಭಾರತದ ಆನೆಯ ಕಿವಿ ಗಳ ಅಗಲ ಅಷ್ಟಿರೋದಿಲ್ಲ’ ಎಂದು ಹೇಳುತ್ತಿದ್ದಂತೆಯೇ, ಸರಿ ಸರಿ ಗೊತ್ತಾಯಿತು ಬಿಡು ಎಂದು ಫೋನ್ ಇಟ್ಟುಬಿಟ್ಟರು. ಮರುದಿನ ತೇಜಸ್ವಿ ಪುಸ್ತಕದ ಹೊಸ ರಕ್ಷಾ ಪತ್ರ ಕಳುಹಿಸಿಕೊಟ್ಟರು. ಅವರ ಕಂಪ್ಯೂಟರ್ ಕೌಶಲದ ಪರಿಣಾಮವಾಗಿ ಅದೇ ಆಫ್ರಿಕಾ ಆನೆ ತನ್ನ ಕಿವಿಗಳನ್ನು ಕಿರಿದಾಗಿಸಿಕೊಂಡು ಹೊಸತಳಿಯ ರೂಪತಾಳಿತ್ತು!

ಚಿಣ್ಣಪ್ಪನವರ ಗುಂಪಿನ ಎಲ್ಲರಿಗೂ ನಾನು ಮೇಷ್ಟ್ರು’ ಆಗಿದ್ದೆ. ಪರಸ್ಪರ ಗೌರವವಿಶ್ವಾಸಗಳ ಜೊತೆಗೇ ಮೇಷ್ಟ ಪದವಿ, ‘ಘನತೆ’ಗಳಿಗೆ ಪಾತ್ರನಾಗಿದ್ದು ದರಿಂದ ಚಿಣ್ಣಪ್ಪನವರ ಟೀಕಾಸ್ತ್ರಗಳಿಗೆ ಎಂದೂ ಗುರಿಯಾಗಬೇಕಾಗಲಿಲ್ಲ. ಆದರೆ, ಕಾಡು ಕಲಿಸುವ ಪಾಠವನ್ನು ಶಿಷ್ಯರ ಜೊತೆಯಲ್ಲಿ ಅರ್ಥಮಾಡಿಕೊಳ್ಳುವುದು ಮೇಷ್ಟರ ಕರ್ತವ್ಯವೂ ಹೌದು ಎಂಬುದನ್ನು ನನಗೆ ಮನವರಿಕೆ ಮಾಡಿಕೊಡಲು ಚಿಣ್ಣಪ್ಪ ಆಗಾಗ ಪ್ರಯತ್ನಿಸುತ್ತಿದ್ದರೆಂದು ತೋರುತ್ತದೆ.
ಬೇಸಿಗೆಯ ದಿನವೊಂದರಲ್ಲಿ ನಾಗರಹೊಳೆ ಡಾರ್ಮಿಟರಿಯ ಹಿಂಭಾಗದ ಕಾಡಿನೊಳಗೆ ನಮ್ಮ ಚಾರಣ ಸಾಗಿತ್ತು. ಶಿಬಿರಾರ್ಥಿಗಳೊಡನೆ ನಾನು ತಂಡದ ಮುಂಚೂಣಿಯಲ್ಲಿ ಹೋಗಬೇಕೆಂದೂ ತಾವು ಕೊನೆಯಲ್ಲಿ ಬರುವುದಾಗಿಯೂ ಚಿಣ್ಣಪ್ಪ ಹೇಳಿದ್ದರು. ನಾಲ್ಕು ಕಿಮೀ ಕಾಡಿನಲ್ಲಿ ಸುತ್ತಾಡಿ ಬಂದೆವು. ಅಂದು ರಾತ್ರಿ ಶಿಬಿರದಲ್ಲಿ ಮಲಗಿದ್ದಾಗ ಮೈಯೆಲ್ಲ ಕಡಿತ, ಗಂಧೆಗಳೆದ್ದು ಬಾಧೆಯಾಯಿತು. ಜ್ವರವೂ ಕಾಣಿಸಿಕೊಂಡಿತ್ತು. ಯಾವುದೋ ಲೋಶನ್ ಹಚ್ಚಿಕೊಂಡಮೇಲೆ ಬಾಧೆ ಶಮನವೂ ಆಯಿತು.

ಮುಂದೊಂದು ದಿನ ಚಿಣ್ಣಪ್ಪನವರಿಗೆ ವಿಷಯ ಹೇಳುವಾಗ, ಕಾಡಿನಲ್ಲಿರುವ ಅತಿ ಚಿಕ್ಕ ಉಣ್ಣಿಗಳ ಕಡಿತದಿಂದ ಹೀಗಾಗುತ್ತದೆಯೆಂದು ಹೇಳಿದರು. ಹಿಂದೊಮ್ಮೆ ಬ್ರಿಟಿಷನೊಬ್ಬ ನಾಗರಹೊಳೆಗೆ ಬಂದಿದ್ದನಂತೆ. ಈ ಕಾಡೆಲ್ಲ ಏನು ಮಹಾ ಎಂಬಂತೆ ಕುಹಕವಾಡುತ್ತ ಧಿಮಾಕು ತೋರಿಸಿದ್ದ ಅವನನ್ನು ಚಿಣ್ಣಪ್ಪ, ಅತಿಯಾದ ಉಣ್ಣಿಗಳ ಕಾಟವಿದ್ದ ಅದೇ ಕಾಡಿನ ಭಾಗದಲ್ಲಿ ಅಲೆದಾಡಿಸಿದರಂತೆ ನಾಲ್ಕು ದಿನ ಜ್ವರ ಬಂದು ಮಲಗಿದ ನೋಡಿ. ಅವನ ಗರ್ವವೆಲ್ಲ ಇಳಿದುಹೋಯಿತು ಎನ್ನುತ್ತ ನಕ್ಕರು. ನಾನು ನಗಲಿಲ್ಲ. “ಆವತ್ತು ನನ್ನನ್ನು ಎಲ್ಲರಿಗಿಂತ ಮುಂದೆ ಹೋಗುವಂತೆ ಹೇಳಿದಿರಲ್ಲ, ನನಗೂ ಪಾಠ ಕಲಿಸಬೇಕೆಂದು ಯೋಚಿಸಿಕೊಂಡಿದ್ದಿರಾ?” ಎಂದು ಕೇಳಿದೆ. ಹಾಗಲ್ಲ, ಕಾಡಿನ ಸೊಬಗು ಸೌಂದರ್ಯದ ಜೊತೆಗೆ ಏನೆಲ್ಲ ಉಪದ್ರವ ತಾಪತ್ರಯಗಳಿರುತ್ತವೆ ಎನ್ನುವುದೂ ನಮ್ಮ ತಿಳಿವಳಿಕೆಗೆ ಬರಲೇಬೇಕು, ಇಲ್ಲದಿದ್ದರೆ ನಮ್ಮ ಕಲಿಕೆ ಅಪೂರ್ಣವಾಗುತ್ತದೆ ಅಲ್ಲವೇ ಎಂದರು.

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

9 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

10 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

10 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

11 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

11 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

11 hours ago