ಆಂದೋಲನ ಪುರವಣಿ

ನೆರವಿಗೆ ನಿಲ್ಲಲಿದೆ ಯುವ ಸಮೂಹ

ಮಳೆ, ಮಳೆಯೋತ್ತರ ಪರಿಹಾರದಲ್ಲಿ ಯುವಕರ ಅಗಣಿತ

ಎಲ್ಲೆಡೆ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇನ್ನೂ ಆಗುತ್ತಲೂ ಇದೆ. ತನ್ನಿಮಿತ್ತ ಸಮಸ್ಯೆಗಳ ರಾಶಿಯೂ ಅಧಿಕವಾಗುತ್ತಿದೆ. ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಕುಸಿದಿವೆ. ಕೂಲಿ ಕೆಲಸ ಇಲ್ಲವಾಗಿದೆ. ಬದುಕು ದುಸ್ತರವಾಗಿದೆ. ಇಂತಹ ಹೊತ್ತಿನಲ್ಲಿ ಯುವ ಸಮೂಹ ಗಟ್ಟಿಯಾಗಬೇಕಿದೆ. ಎದುರಿಗೆ ಇರುವವರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ನೀವು ಇದ್ದಲ್ಲಿಯೇ ಸರಳ ಸಹಕಾರ ನೀಡಿದರೆ ಸಮಸ್ಯೆಗಳಿಗೆ ಒಂದಿಷ್ಟು ಮುಕ್ತಿ ಖಚಿತ. ಈ ದಿಸೆಯಲ್ಲಿ ನಾವೇನು ಮಾಡಬಹುದು ಎಂಬುದರ ಸಮಗ್ರ ಮಾಹಿತಿ ಗುಚ್ಛ ಇಲ್ಲಿದೆ.

ಈ ಬಾರಿಯ ಮಳೆಗೆ ಮೈಸೂರು ಸೀಮೆ ಹೈರಾಣಾಗಿದೆ. ಕೊಡಗು, ಚಾ.ನಗರ ಭಾಗದಲ್ಲಿ ಹೆಚ್ಚಿನ ಹಾನಿಯಾಗಿದೆ. ಮೈಸೂರು, ಮಂಡ್ಯದಲ್ಲಿಯೂ ಮಳೆ ಸಾಕಷ್ಟು ಹೊಡೆತ ಕೊಟ್ಟಿದೆ. ತಿಂಗಳಾನುಗಟ್ಟಲೆ ಸುರಿದ ಮಳೆಗೆ ಅಣೆಕಟ್ಟೆ, ಕೆರೆಕಟ್ಟೆಗಳು ತುಂಬಿ ನಿಂತಿವೆ. ಬೆಳೆದಿದ್ದ ಬೆಳೆ ನಾಶವಾಗಿದೆ. ಮನೆಗಳು ಬಿದ್ದಿವೆ, ರಸ್ತೆಗಳು ಕುಸಿದಿವೆ. ಸೇತುವೆಗಳು ಮುಳುಗಿವೆ. ಜನ, ಜಾನುವಾರುಗಳಿಗೆ ತೊಂದರೆಯಾಗಿದೆ. ಇಂತಹ ಹೊತ್ತಿನಲ್ಲಿ ವಿದ್ಯಾವಂತ, ಶಕ್ತಿವಂತ ಯುವ ಶಕ್ತಿ ಜಾಗೃತವಾಗಬೇಕಿದೆ. ಸಮಸ್ಯೆಗಳ ಸರಮಾಲೆಯನ್ನು ಒಂದೊಂದಾಗಿ ಬಿಡಿಸುತ್ತಾ ಗ್ರಾಮಸ್ಥರು, ಸ್ಥಳೀಯರ ಜೊತೆಗೆ ನಿಲ್ಲಬೇಕಿದೆ. ಆಗ ಮಾತ್ರ ನಿಜಕ್ಕೂ ತೊಂದರೆ ಅನುಭವಿಸಿದವರಿಗೆ ಒಂದಷ್ಟು ಸಹಾಯ ಆಗುವುದು.

* ಸೂಕ್ತ ಪರಿಹಾರಕ್ಕೆ ಸಹಕರಿಸಿ

ಹಾನಿಯ ಪ್ರಮಾಣ ಆಧರಿಸಿ ನೆರೆ ಪರಿಹಾರಕ್ಕೆ ಸರ್ಕಾರ ಪರಿಹಾರ ನೀಡುತ್ತದೆ. ಆದರೆ ಓದು, ಬರಹ ಬರದ, ಪರಿಹಾರದ ಬಗ್ಗೆ ತಿಳುವಳಿಕೆ ಇಲ್ಲದ ಜನರಿಗೆ ಯುವಕರು ಮಾಹಿತಿ ನೀಡಬೇಕು. ಹಾನಿಗೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನು ಮಾಡಿಕೊಂಡು ಸೂಕ್ತ ಅರ್ಜಿಯೊಂದಿಗೆ ಪಂಚಾಯಿತಿ, ನಗರಸಭೆ, ಸಂಬಂಧಪಟ್ಟ ಇಲಾಖೆಗೆ ಸಂತ್ರಸ್ಥರು ಅರ್ಜಿ ಸಲ್ಲಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಅವರಿಗೂ ಅನುಕೂಲ. ನಿಮಗೂ ಒಳ್ಳೆಯ ಕೆಲಸ ಮಾಡಿದ ಸಾರ್ಥಕತೆ.

* ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ

ಮಳೆಯಿಂದಾಗಿ ಸಮಸ್ಯೆಗೆ ತುತ್ತಾಗಿರುತ್ತಾರೆ. ಆದರೆ ಅದನ್ನು ಎಲ್ಲರ ಮುಂದೆ ಹೇಗೆ ಹೇಳಿಕೊಳ್ಳುವುದು ಎಂದು ಹಲವಾರು ಮಂದಿ ಪರಿತಪಿಸುತ್ತಿರುತ್ತಾರೆ. ಇಂತವರ ಕಷ್ಟವನ್ನು ಅರ್ಥ ಮಾಡಿಕೊಳ್ಳಿ. ಅವರಿಗೆ ಬೇಕಾದ ಆರೋಗ್ಯ, ಆಹಾರ ಪದಾರ್ಥಗಳನ್ನು ಪೂರೈಸುವ ನಿಟ್ಟಿನಲ್ಲಿ ನಿಮ್ಮದೊಂದು ಅಳಿಲು ಸೇವೆ ಇರಲಿ. ಹಿರಿಯರು, ಅಂಗವಿಕಲರ ಬಗ್ಗೆ ವಿಶೇಷ ಗಮನ ಇದ್ದರೆ ಒಳಿತು.

* ಜಾಗೃತಿ ಮೂಡಿಸಿ

ಕೆಲವು ಕಡೆಗಳಲ್ಲಿ ಈಗ ಮಳೆ ಕೊಂಚ ಬಿಡುವು ಕೊಟ್ಟಿದೆ. ಆದರೆ ಅದರ ಹಿಂದೆಯೇ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಈ ವೇಳೆಯಲ್ಲಿ ಯುವ ವರ್ಗದ ಪಾತ್ರ ಬಲು ಪ್ರಮುಖ. ಸೊಳ್ಳೆಗಳ ಉತ್ಪಾದನೆಯಾಗದಂತೆ, ಅಲ್ಲಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈ ಸಂಬಂಧ ನಿಮ್ಮ ಸುತ್ತಮುತ್ತಲೂ ಇರುವವರಲ್ಲಿ ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಉಲ್ಬಣವಾಗದಂತೆ ನೋಡಿಕೊಳ್ಳಬೇಕು.

* ಮಕ್ಕಳು, ಹಿರಿಯರ ಬಗ್ಗೆ ಎಚ್ಚರ ಇರಲಿ

ಶಾಲೆಗೆ ಹೋಗುವ ಮಕ್ಕಳು, ವಯಸ್ಸಾದ ಹಿರಿಯರಿಗೆ ಮಳೆಯಲ್ಲಿ ಸಮಸ್ಯೆಯಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಅವರ ಸಹಾಯಕ್ಕೆ ನಿಲ್ಲಿ. ಹಿರಿಯರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ. ಮಕ್ಕಳು ವಿದ್ಯುತ್ ತಂತಿಗಳ ಕೆಳಗೆ, ಮರಗಳ ಕೆಳಗೆ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಕೆಳಗೆ ನಿಲ್ಲದಂತೆ ನೋಡಿಕೊಳ್ಳಿ.

* ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ

ಸರ್ಕಾರ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ಈ ಬಗ್ಗೆ ಅಧಿಕಾರಿಗಳಿಂದ ಸೂಕ್ತ ಮಾಹಿತಿಗಳನ್ನು ಪಡೆದುಕೊಳ್ಳಿ. ಇದನ್ನು ನಿಮ್ಮ ಸುತ್ತಲ ನೆರೆ ಸಂತ್ರಸ್ತರಿಗೆ ತಿಳಿಸಿ ಅವರು ಸಕಾಲದಲ್ಲಿ ಪರಿಹಾರ ಪಡೆದುಕೊಳ್ಳುವಂತೆ ನೋಡಿಕೊಳ್ಳಿ.

* ಅಪಾಯಗಳ ಬಗ್ಗೆ ಅರಿವು ಮೂಡಿಸಿ

ಮಳೆಗಾಲದಲ್ಲಿ ಸಂಭವಿಸಬಹುದಾದ ವಿದ್ಯುತ್ ಸಂಬಂಧಿತ ಅಪಾಯಗಳು, ತುಂಬಿದ ಕೆರೆಕಟ್ಟೆಗಳಿಂದ ಆಗುವ ಅಪಾಯ, ವಾಹನ ಚಾಲನೆ ವೇಳೆ ಹೊಂದಿರಬೇಕಾದ ಸುರಕ್ಷತಾ ಕ್ರಮಗಳು ಮೊದಲಾದವುಗಳನ್ನು ಸ್ವತಃ ನೀವೂ ಅರಿತುಕೊಂಡು ನಿಮ್ಮವರಿಗೂ ತಿಳಿಸಬೇಕು.

ನೆರೆ ಮತ್ತು ಮುಂಬರುವ ಸಾಂಕ್ರಾಮಿಕ ರೋಗಗಳ ನಿರ್ವಹಣೆಗೆ ಯುವ ಸಮುದಾಯ ಜಿಲ್ಲಾಡಳಿತಗಳ ಜೊತೆ ಕೈಜೋಡಿಸಿ ಶ್ರಮದಾನ ಮಾಡಬಹುದು. ಇಲ್ಲವೇ ಸ್ವಯಂ ಪ್ರೇರಿತರಾಗಿ ಯುವ ಸಂಘಟನೆಗಳ ಸಹೋಂಗದಲ್ಲಿಯೂ ನೆರೆ ಪೀಡಿತರಿಗೆ ನೆರವಾಗಬಹುದು. ಪ್ರವಾಹ ಮತ್ತು ಮಳೆ ನೀರಿನಲ್ಲಿ ಸಿಲುಕಿದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮುಂದಾಗಬಹುದು. ಕಷ್ಟದ ಸಂದರ್ಭಗಳಲ್ಲಿ ಯುವಜನರು ಸೇವಾ ಮನೋಭಾವದಿಂದ ಇಂತಹ ಕೆಲಸಗಳನ್ನು ಕೈಗೊಳ್ಳಬೇಕು.
-ಚಾರುಲತಾ ಸೋಮಲ್, ಜಿಲ್ಲಾಧಿಕಾರಿ, ಚಾ.ನಗರ

ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಮಳೆ ಹಾನಿ ಸಂಬಂಧ ನಿರಂತರವಾಗಿ ಶ್ರಮಿಸುತ್ತಿದೆ. ಕಳೆದ ವರ್ಷ, ಈ ಬಾರಿ ಎದುರಾಗಿರುವ ಅತಿವೃಷ್ಟಿ ವೇಳೆ ನಮಗೆ ಯುವಕರ ಸಹಕಾರ ತುಂಬಾ ಸಿಕ್ಕಿದೆ. ಈ ಬಾರಿಯೂ ನಮ್ಮ ನೆರವಿಗೆ ಯುವಕರು ನಿಂತಿದ್ದಾರೆ. ಅವರಿಗೆ ಅಗತ್ಯವಾದ ಸಹಕಾರವನ್ನು ನಾವು ನೀಡುತ್ತಿದ್ದು, ನಮ್ಮೊಂದಿಗೆ ಯುವ ಸಮೂಹ ನಿಂತಿದ್ದರಿಂದಾಗಿಯೇ ನಮಗೆ ತ್ವರಿತವಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತಿದೆ. – ಶ್ರೀಧರ್, ಪಿಡಿಒ ಮೆಕೇರಿ ಗ್ರಾಪಂ, ಮಡಿಕೇರಿ

 

andolana

Recent Posts

ಆಕಸ್ಮಿಕ ಬೆಂಕಿ : ಒಕ್ಕಣೆ ಕಣದ ರಾಗಿ ಫಸಲು ನಾಸ

ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…

1 hour ago

ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರು-ಪೇರು ; ಸದನ ಕಲಾಪಗಳಿಂದ ದೂರ ಉಳಿದ ಸಿಎಂ

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…

1 hour ago

ಶ್ರೀಕಂಠೇಶ್ವರ ದೇವಾಲಯದಲ್ಲಿ ಅಕ್ರಮ?; ತನಿಖೆ ಆರಂಭಿಸಿದ ಎಸಿ ತಂಡ

ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…

1 hour ago

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…

1 hour ago

ಧರ್ಮಸ್ಥಳ ಪ್ರಕರಣ : ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…

1 hour ago

ಕೈಗಾರಿಕೆ ಸ್ಥಾಪನೆಗೆ 500 ಎಕರೆ ಜಾಗ ಕೊಡುತ್ತೇನೆ : ಎಚ್‌ಡಿಕೆ ಯಾವ ಕೈಗಾರಿಕೆ ತರುತ್ತಾರೋ ತರಲಿ : ಶಾಸಕ ನರೇಂದ್ರಸ್ವಾಮಿ ಸವಾಲು

ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…

1 hour ago