• ಸ್ವಾಮಿ ಪೊನ್ನಾಚಿ
ಅವಳು ಎಲ್ಲಾದರೂ ಓಡಿ ಹೋಗೋಣ ಬಾ ಎಂದು ಕರೆದಾಗ ನನಗೆ ನಗು ಬಂದಿತ್ತೇ ವಿನಾ ಇದು ಇಷ್ಟೊಂದು ಸೀರಿಯಸ್ ಕೇಸ್ ಆಗುತ್ತದೆ ಎಂದು ಭಾವಿಸಿರಲಿಲ್ಲ. ಪಕ್ಕದ ಮನೆಯ ಅಂಕಲ್‌ಗೆ ಅದಾಗ ತಾನೆ ಮದುವೆಯಾಗಿ ಮದುಮಗಳ ಜೊತೆಗಿರಲು ಅವಳ ತಂಗಿ ಅಲ್ಲಿಗೆ ಬಂದಿದ್ದಳು. ನಾನಾಗ ಕೊಳ್ಳೇಗಾಲದಲ್ಲಿ ಮೊದಲ ವರ್ಷದ ಪಿಯುಸಿ ಓದುತ್ತಿದ್ದೆ. ಹಬ್ಬಕ್ಕೆ ರಜೆ ಸಿಕ್ಕಾಗ ಊರಿಗೆ ಹೋದಾಗಲೆಲ್ಲ ಅವಳು ಕೂಡ ಅಲ್ಲಿಗೆ ಬಂದಿರುತ್ತಿದ್ದಳು. ಹಾಗೇ ಹೋಗಿ ಬಂದು ಕಣ್ಣಿಗೆ ಕಣ್ಣು ತಾಗಿ ಅವಳನ್ನು ಕದ್ದುಮುಚ್ಚಿ ನೋಡುವುದೇ ಒಂದು ಮಜವಾಯಿತು. ತನ್ನ ಅಷ್ಟುದ್ದದ ಜಡೆಯನ್ನು ಬೆನ್ನಮೇಲೆ ಆಂದೋಲನವಾಡಿಸಿಕೊಂಡು ಓಡಾಡುತ್ತಿದ್ದ ಅವಳನ್ನು ನೋಡುವುದೇ ಸೊಗಸಾಗಿತ್ತು. ಅವಳೂ ಕೂಡ ನನ್ನನ್ನು ಗಮನಿಸುತ್ತಿರುವುದು ನನ್ನ ಗಮನಕ್ಕೂ ಬಂದಿತ್ತು. ಅದು ಸಂಕ್ರಾಂತಿಯ ಸುಗ್ಗಿ ಕಾಲ. ಅವರೇಕಾಯಿ ಮತ್ತು ಕಡ್ಲೆಕಾಯಿ ಒಟ್ಟಿಗೆ ಬೇಯಿಸಿಕೊಂಡು ಮನೆಮಂದಿಯೆಲ್ಲ ಮುಸ್ಸಂಜೆ ಪಡಸಾಲೆಯಲ್ಲಿ ಕೂತು ತಿನ್ನುತ್ತಾ ಹರಟೆ ಹೊಡೆಯುವ ಹೊತ್ತು. ಅವಳು ಏನೋ ಕೇಳುವುದಕ್ಕೆ ಬಂದವಳು ಅಲ್ಲಿಯೇ ಕುಳಿತು ಅವರೆ ಬಿಡಿಸಿ ತಿನ್ನತೊಡಗಿದಳು. ತಟ್ಟೆ ಖಾಲಿಯಾಗುತ್ತಾ ಇದ್ದಂತೆ ಒಬ್ಬೊಬ್ಬರಾಗಿ ಎದ್ದುಹೋದರು. ಕೊನೆಗೆ ಉಳಿದವರು ನಾವಿಬ್ಬರೇ. ಮಾತಿಗೆ ಮಾತು ಶುರುವಾಯಿತು. ಮಾತಿನ ಓಘದಲ್ಲಿ ಅವಳು ‘ನೀನು ಯಾರನ್ನಾದರೂ ಪ್ರೀತಿಸುತ್ತಿದ್ದೀಯ’ ಎಂದು ಕೇಳಿಬಿಟ್ಟಳು. ನನಗೆ ಅನಿರೀಕ್ಷಿತ ಪ್ರಶ್ನೆಯಾಗಿತ್ತು. ಸುಮ್ಮನಿರಲಾರದ ನಾನು ‘ನಿನ್ನನ್ನೇ’ ಎಂದುಬಿಟ್ಟೆ. ಅವಳಿಗೆ ಅದೆಷ್ಟು ಖುಷಿಯಾಯಿತು ಎಂದರೆ ಕೈಗೆ ಒಂದು ಮುತ್ತು ಕೊಟ್ಟು ನಾಚಿಕೆಯಿಂದ ಓಡಿಹೋಗಿಬಿಟ್ಟಳು. ಇದನ್ನ ನನ್ನ ತಾಯಿ ನೋಡಿಕೊಂಡು ಎಲ್ಲಿ ಒಲೆ ಊದುವ ಕೊಳವೆಯಿಂದ ನಾಲ್ಕು ಬಾರಿಸುತ್ತಾರೋ ಎಂದು ನಾನು ಹೆದರಿ ಕುಳಿತಿದ್ದೆ. ಮಾರನೇ ದಿನ ಒಂದು ಪುಟ್ಟ ಹುಡುಗ ಆ ಅಕ್ಕ ಕೊಟ್ರು ಅಂತ ಹೇಳಿ ಒಂದು ಚೀಟಿಯನ್ನು ಕೈಗಿತ್ತ. ಈ ದಿನ ಮಧ್ಯಾಹ್ನ ನಾನು ಊರಿಗೆ ಹೋಗುತ್ತೇನೆ, ಏನಾದರೂ ವಿಷಯ ಇದ್ದರೆ ಪತ್ರ ಬರೆಯಬೇಕೆಂದು’ ಹೇಳಿ ಪತ್ರದ ಕೊನೆಯಲ್ಲಿ ‘ಐ ಲವ್ ಯು’ ಎಂದು ಬರೆದಿದ್ದಳು. ನನಗೂ ಒಂಥರಾ ಕಚಗುಳಿ ಇಟ್ಟಂತಹ ಅನುಭವ. ನವಿರಾದ ಬೆಚ್ಚನೆಯ ಭಾವ. ಅದೇ ಗುಂಗು, ಧೈರ್ಯ ಮಾಡಿ ಉದ್ದನೆಯ ಪತ್ರ ಬರೆದು ಆ ಹುಡುಗನಿಗೆ ಕೊಟ್ಟು ನಿರಾಳನಾದೆ. ಆವತ್ತೇ ಸಂಜೆ, ಅವರ ಊರಿನಲ್ಲಿ ‘ಭಕ್ತ ಪ್ರಹ್ಲಾದ’ ನಾಟಕವಿತ್ತು. ಅವಳನ್ನು ನೋಡಬಹುದೆಂಬ ನೆಪದಿಂದ ದೊಡ್ಡಮ್ಮನ ಮನೆಗೆ ಹೋದೆ. ಅದೆಲ್ಲಿದ್ದನೋ ಸೋಮಣ್ಣ, ದೊಡ್ಡಮ್ಮನ ಮಗ, ತೆಂಗಿನ ಮರದ ನೀರಾ ಕುಡಿದು ಮತ್ತಿನಲ್ಲಿ ಓಲಾಡಿಕೊಂಡು ಬಂದಿದ್ದವನು ಸರಿಯಾಗಿ ಕಪಾಳಕ್ಕೆ ಬಾರಿಸಿದ. ‘ಈ ವಯಸ್ಸಿಗೆ ನಿನಗೆ ಲವ್ ಬೇಕಾ ಕತ್ತೆ ನನ್ನಮಗನೇ’ ಎಂದು ಮತ್ತೆ ಜಾಡಿಸಿ ಒದ್ದ. ಆ ಹುಡುಗನ ಬಳಿ ಕೊಟ್ಟಿದ್ದ ಪತ್ರ ಸೋಮಣ್ಣನ ಕೈಗೆ ಅದು ಹೇಗೋ ಸಿಕ್ಕಿಕೊಂಡಿತ್ತು.
ಇಲ್ಲಿಗೆ ಕಥೆ ಮುಗಿಯಿತೆಂದು ನನ್ನ ಪಾಡಿಗೆ ನಾನು ಸುಮ್ಮನಿದ್ದೆ. ಬೇಸಿಗೆ ರಜೆಗೆ ಎಂದು ಊರಿಗೆ ಹೋದಾಗ ಅವಳು ಕೂಡ ಅಕ್ಕನ ಮನೆಗೆ ಬಂದಿದ್ದಳು. ಸೋಮಣ್ಣನ ಭಯದಿಂದ ಅತ್ತ ತಲೆಹಾಕಿ ಕೂಡ ನೋಡುವುದನ್ನು ಬಿಟ್ಟುಬಿಟ್ಟಿದ್ದೆ. ಒಂದು ಹಗಲಿನಲ್ಲಿ ಎಲ್ಲರೂ ಹೊಲಗೆಲಸಕ್ಕೆ ಹೋದಾಗ ಮನೆಯಲ್ಲಿ ನಾನೊಬ್ಬನೇ ಇರುವುದ ಖಚಿತಪಡಿಸಿಕೊಂಡು ಬಂದ ಅವಳು, ಕೈಯಲ್ಲಿ ಖರ್ಚೀಪಿನ ಗಂಟೊಂದನ್ನು ಹಿಡಿದುಕೊಂಡು ‘ಬಾ ಎಲ್ಲಾದರೂ ಓಡಿ ಹೋಗೋಣ’ ಎನ್ನುತ್ತಾ ಗಂಟಿನಲ್ಲಿದ್ದ ಓಲೆ, ಜುಮುಕಿ ಚಿನ್ನದ ಸರಗಳನ್ನು ತೋರಿಸಿದಳು. ಮೈ ಬೆವರಿ ಕೈಕಾಲು ನಡುಗತೊಡಗಿತು. ನಾನು ಸುಮ್ಮನೆ ಹೇಳಿದ್ದು, ಲವು ಇಲ್ಲ, ಗಿದ್ದು ಇಲ್ಲ. ಮೊದಲು ಇಲ್ಲಿಂದ ಹೋಗು ಯಾರಾದರೂ ನೋಡುತ್ತಾರೆ’ ಎಂದು ಭಯದಲ್ಲಿ ಅವಳನ್ನು ಗದರಿಸಿದೆ. ಅವಳು ಅಳುತ್ತ ಅಲ್ಲಿಂದ ಹೋದವಳು ಮತ್ತೆ ನನಗೆ ಸಿಗಲೇ ಇಲ್ಲ. ನಾನು ಯಾಕೆ ಹಾಗೆ ಮಾಡಿದೆ ಎಂದು ಈವತ್ತಿಗೂ ಅರ್ಥವಾಗುತ್ತಿಲ್ಲ.
ನಾನು ಊರಿಗೆ ಹೋಗುತ್ತಿದ್ದಾಗಲೆಲ್ಲ ಬಸ್ಸಿನಲ್ಲಿ ಒಂದು ಹುಡುಗಿಯನ್ನು ಗಮನಿಸುತ್ತಿದ್ದೆ. ಅವಳು ಹೈಸ್ಕೂಲು ಓದುವಾಗಿನಿಂದಲೂ ಗೊತ್ತಿತ್ತು. ಕಡುಮೌನಿಯಾಗಿರುತ್ತಿದ್ದ ಅವಳ ಮೇಲೆ ನನಗೆ ಅದಮ್ಯ ಕುತೂಹಲವಿತ್ತು. ನನಗೆ ಅರಿವಿಲ್ಲದಂತೆ ಮಾತಿನ ಮಧ್ಯದಲ್ಲಿ ಅವಳ ವಿಷಯ ಪ್ರಸ್ತಾಪಿಸುತ್ತಿದ್ದೆ. ಅವಳ ಹೆಸರು ಎಲ್ಲಾದರೂ ಕೇಳಿದ ಕೂಡಲೇ ನನ್ನ ಗಮನ ಆ ಕಡೆಗೆ ಸರಿಯುತ್ತಿತ್ತು. ಅವಳ ಕುರಿತು ಆಪ್ತರಲ್ಲಿ ಇನ್ನಿಲ್ಲದಂತೆ ವಿಚಾರಿಸಿಕೊಳ್ಳುತ್ತಿದ್ದೆ. ಅದಾಗಲೇ ನಾಲ್ವಾರು ಹುಡುಗರು ಅವಳಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಹೋಗಿ, ಸರಿಯಾಗಿ ಮಂಗಳಾರತಿಯನ್ನು ಮಾಡಿಸಿಕೊಂಡಿದ್ದ ಸುದ್ದಿ ತಿಳಿದು ನಾನು ಭಯಭೀತನಾಗಿದ್ದೆ. ಮದುವೆಯಾದರೆ ಈ ತರಹದ ಹುಡುಗಿಯನ್ನೇ ಮದುವೆಯಾಗಬೇಕೆಂಬ ತೀರ್ಮಾನ ಮಾಡಿದೆ. ಹೇಗಾದರೂ ಮಾಡಿ ಅವಳ ಗಮನ ಸೆಳೆಯಬೇಕೆಂದು ಯೋಚಿಸುತ್ತಿರುವಾಗಲೇ ಅವಳಿಗೆ ಭಾವಗೀತೆಗಳು ಎಂದರೆ ಪರಮ ಹುಚ್ಚು ಎಂದು ತಿಳಿಯಿತು. ಅವಳಿಷ್ಟದ ಹಾಡುಗಳ ಎರಡು ಕ್ಯಾಸೆಟ್ಟು ರೆಕಾರ್ಡ್ ಮಾಡಿಸಿ, ಧೈರ್ಯ ಮಾಡಿ ಗೆಳೆಯನೊಬ್ಬನ ಮೂಲಕ ಅವಳಿಗೆ ಕಳಿಸಿಕೊಟ್ಟೆ. ನಾನು ಗೆಳೆಯನ ಮನೆಗೆ ಹೋದಾಗಲೆಲ್ಲ ‘ತಪ್ಪಿ ಹೋಯಿತಲ್ಲೇ ಚುಕ್ಕಿ… ಬೆಳಕಿನ ಜಾಡು’ ಎಂಬ ಹಾಡು ಅವಳ ಮನೆಯಿಂದ ನನಗೆ ಜೋರಾಗಿ ಕೇಳಿಸುತ್ತಿತ್ತು. ಇದು ನಾನು ಕೊಟ್ಟ ಕ್ಯಾಸೆಟ್ಟಿನ ಹಾಡು. ಬಹಳ ಸಲ ಅವಳನ್ನು ಮಾತನಾಡಿಸಬೇಕೆಂದು ಅಂದುಕೊಂಡೆನಾದರೂ ಹುಡುಗರಿಗೆ ಮಂಗಳಾರತಿ ಎತ್ತಿದ ಹಾಗೆ ನನಗೂ ಆರತಿ ಫಿಕ್ಸ್ ಆಗಬಹುದೆಂಬ ಕಾರಣಕ್ಕೆ ಮಾತನಾಡಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಈ ಸಲದ ಮಾರಿ ಹಬ್ಬಕ್ಕೆ ಊರಿಗೆ ಬಂದಾಗ ಏನಾದರಾಗಲಿ, ಅವಳಿಗೆ ನನ್ನ ಪ್ರೇಮದ ವಿಷಯ ಹೇಳಬೇಕೆಂದು ತೀರ್ಮಾನಿಸಿಕೊಂಡಿದ್ದೆ. ನಾನು ಊರಿಗೆ ಬರುವಷ್ಟರಲ್ಲಾಗಲೇ ಅವಳಿಗೆ ಮದುವೆ ಒಪ್ಪಂದ ಆಗಿಬಿಟ್ಟಿತ್ತು. ನಾನು ಹೇಳಿಕೊಳ್ಳುತ್ತೇನೆಂದು ಬಹಳ ದಿನ ಕಾತರದಿಂದ ಕಾಯುತ್ತಿದ್ದಳಂತೆ. ನನ್ನನ್ನು ಭೇಟಿಯಾಗಲು, ಮಾತನಾಡಿಸಲು ಅವಳು ಮಾಡಿದ ಪ್ರಯತ್ನಗಳು ವಿಫಲವಾಗಿ; ನನಗೆ ಅವಳ ಮೇಲೆ ಯಾವುದೇ ಒಲವಿಲ್ಲವೆಂದೇ ಭಾವಿಸಿದ ಅವಳು, ಕೊನೆಗೆ ಮದುವೆಯಾಗಲು ಒಪ್ಪಿದಳಂತೆ. ಈ ವಿಷಯ ತಿಳಿದ ನಾನು ಬಹಳ ದಿನ ಖಿನ್ನನಾಗಿಬಿಟ್ಟೆ. ದುರದೃಷ್ಟವಶಾತ್ ಮದುವೆಯಾಗಿ ಮೂರೇ ದಿನಗಳಲ್ಲಿ ಅವಳ ಗಂಡ ತೀರಿಕೊಂಡುಬಿಟ್ಟ. ಅಷ್ಟೊತ್ತಿಗೆ ನಾನೂ ಕೂಡ ಮನೆಯವರ ಒತ್ತಡಕ್ಕೆ ಸಿಕ್ಕಿ, ಮದುವೆ ಒಪ್ಪಂದ ಮಾಡಿಕೊಂಡುಬಿಟ್ಟಿದ್ದೆ. ಅವಳಿಗೆ ಮುಖ ತೋರಿಸಬಾರದೆಂದು ಈಗಲೂ ಅವಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದೇನೆ. ದೂರದಿಂದ ಅವಳನ್ನು ಕಂಡಾಗ ವಿಷಾದ ಒಂದು ಕಾಡುತ್ತಲೇ ಇರುತ್ತದೆ. ತಪ್ಪಿಹೋಯಿತಲ್ಲೇ ಚುಕ್ಕಿ ಹಾಡು ಎದೆಯನ್ನು ಕಿವುಚಿದಂತೆ ಮಾಡುತ್ತದೆ. ಒಂದು ಕಾಲದಲ್ಲಿ ನನಗೆ ಇಷ್ಟದ ಹಾಡು ಈಗ ಬೇಸರ ಮೂಡಿಸುತ್ತದೆ. ಅವಳ ಹೆಸರು ಮಗಳಿಗೆ ಇಡಲಾಗಲಿಲ್ಲವೆಂಬ ಅಸಹಾಯಕತೆಗೆ ಇವತ್ತಿಗೂ ಮರುಗುತ್ತೇನೆ. ಹೊರಗಡೆ ಎಲ್ಲಾದರೂ ಅವಳ ಹೆಸರಿನ ಬೋರ್ಡು ನೋಡಿದಾಗ ಮಗಳು, ಅಪ್ಪ, ಅದು ನಿನ್ನ ಲವರ್‌ನ ಹೆಸರು ಅಲ್ವಾ?’ ಎಂದು ರೇಗಿಸಿದಾಗ ಕರುಳು ಚುರುಕ್ ಎನ್ನುತ್ತದೆ.
ಈ ಪ್ರೇಮವೆಂಬುದು ನನ್ನನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದು ನನ್ನ ಗೆಳೆಯ ಸೀನನ ಘಟನೆ. ನಾವು ಪಿಯುಸಿ ಓದುವಾಗ ‘ನಿಂದು ಚೆಂದದ ಹ್ಯಾಂಡ್ ರೈಟಿಂಗ್, ನೀನೇ ಪ್ರೇಮಕವನ ಬರೆದು ಕೊಡು’ ಎಂದು ನನ್ನಿಂದಲೇ ಪ್ರೇಮಪತ್ರ ಬರೆಸಿ ತನ್ನ ಗೆಳತಿಗೆ ಕೊಡುತ್ತಿದ್ದ ಸೀನನ ಪ್ರೇಮ ಫಲಿಸಿತ್ತು. ಮುಗ್ಧ ಹಳ್ಳಿಹುಡುಗಿ ಇವನನ್ನು ಇನ್ನಿಲ್ಲದಂತೆ ಹಚ್ಚಿಕೊಂಡಿದ್ದಳು. ಪಿಯುಸಿ ನಂತರ ನನಗೆ ಮದುವೆ ಮಾಡಿಬಿಡುತ್ತಾರೆ ಎಂದೂ ನೀನು ನನ್ನ ಕೈ ಬಿಡಬೇಡವೆಂದೂ ಪದೇಪದೇ ಅವನನ್ನು ಅಂಗಲಾಚುತ್ತಿದ್ದಳು. ಇವನಿಗೂ ಅವಳನ್ನು ಬಿಡಲು ಯಾವುದೇ ಕಾರಣಗಳಿರಲ್ಲ. ನಿಮ್ಮ ಮನೆಯಲ್ಲಿ ಮಾತನಾಡುತ್ತೇನೆಂದು ಹೇಳಿಕೊಂಡು ಬರುತ್ತಲೇ ಇದ್ದ.
ನಾವೆಲ್ಲರೂ ಇದನ್ನು ಹುಡುಗಾಟದ ಪ್ರೀತಿ, ನಾಕುದಿನ ಆದಮೇಲೆ ಸರಿಹೋಗುತ್ತಾರೆ ಎಂದೇ ಭಾವಿಸಿದ್ದೆವು. ಈ ವಿಷಯ ಹುಡುಗಿ ಅಣ್ಣಂದಿರಿಗೆ ಗೊತ್ತಾಗಿ ಕಾಲೇಜು ಡೇ ದಿನ ಬಂದು ಬಹುತೇಕ ಅವನನ್ನು ಸಾಯುವ ಮಟ್ಟಿಗೆ ಹೊಡೆದುಬಿಟ್ಟರು. ನಾವೆಲ್ಲ ಹತ್ತಾರು ಗೆಳೆಯರು ಸೇರಿ ಹೇಗೂ ಅವನನ್ನು ಪಾರು ಮಾಡಿ, ಊರಿಗೆ ಕಳುಹಿಸಿಕೊಟ್ಟೆವು. ಹಲಗೂರು ಸಮೀಪದ ಹುಸ್ಕೂರು ಅವನ ಊರು. ಹುಡುಗಿ
ಕಡೆಯವರ ಹಾವಳಿಯಿಂದಾಗಿ ಅವನು ಪರೀಕ್ಷೆಗೆ ಕೂರಲಾಗದೆ ಪಿಯುಸಿಯಲ್ಲಿ ಫೇಲಾಗಿ ಬಿಟ್ಟ. ಬೆಂಗಳೂರಿನಲ್ಲಿ ಹೋಗಿ ದುಡಿದೇ ತೀರುತ್ತೇನೆಂದು, ದುಡ್ಡು ಸಂಪಾದಿಸಿಕೊಂಡು ಬಂದು ಮದುವೆಯಾಗುತ್ತೇನೆಂದು ಹೋದವನು, ಎತ್ತಹೋದನೋ ಯಾರಿಗೂ ತಿಳಿಯಲಿಲ್ಲ. ಇತ್ತ ಹುಡುಗಿ ಬಂದ ಹುಡುಗರನ್ನೆಲ್ಲ ತಿರಸ್ಕರಿಸುತ್ತಿದ್ದಳು. ಹಾಗೂ ಹೀಗೂ ಒಂದು ವರ್ಷ ತಡೆದಳು. ಫೋನುಗಳು ಇರದ ಕಾಲ. ಕಾಗದ ಬರೆಯಲು ಎಲ್ಲಿದ್ದಾನೆಂದು ವಿಳಾಸ ಗೊತ್ತಿಲ್ಲ. ಅವನ ಸ್ನೇಹಿತರನ್ನು ವಿಚಾರಿಸಿದ ಅವಳಿಗೆ ಯಾರಿಂದಲೂ ಅವನ ಇರುವಿಕೆ ಬಗ್ಗೆ ಗೊತ್ತಾಗಲೇ ಇಲ್ಲ. ದಿನದಿಂದ ದಿನಕ್ಕೆ ಮನೆಯಲ್ಲಿ ಮದುವೆಯಾಗುವಂತೆ ಇನ್ನಿಲ್ಲದ ಒತ್ತಡ. ಹುಡುಗಿಯ ತಂದೆ
ತಾಯಿ, ‘ಆ ಹುಡುಗನಿಗೆ ನಿನ್ನ ಮೇಲೆ ಪ್ರೀತಿ ಇದ್ದರೆ ಇಷ್ಟೊತ್ತಿಗೆ ಬರಬೇಕಿತ್ತು, ಇದ್ಯಾವ ಸೀಮೆ ಪ್ರೀತಿ, ನಡಿನಡಿ ಮದುವೆಯಾಗು’ ಎಂದು ಅವಳ ಮನವೊಲಿಸಲು ಸಫಲರಾದರು. ಮದುವೆಗೆ ಒಪ್ಪಿಕೊಳ್ಳದಿದ್ದರೆ ನಾವೇ ಸಾಯುತ್ತೇವೆಂದು ಬೆದರಿಕೆ ಹಾಕಿ ಒಪ್ಪಂದವನ್ನೂ ಮಾಡಿಬಿಟ್ಟರು. ಒಂದು ದಿನ ಬಟ್ಟೆ ಒಗೆಯಲು ನದಿಗೆ ಹೋಗುತ್ತೇನೆ ಎಂದು ಹೇಳಿಹೋದ ಅವಳು, ಪತ್ರ ಬರೆದಿಟ್ಟು ನದಿಗೆ ಹಾರಿಕೊಂಡಳು. ಹಠಕ್ಕೆ ಬಿದ್ದವನಂತೆ ದುಡ್ಡು ಸಂಪಾದಿಸಿಕೊಂಡು ಸೀನಾ ಅವಳನ್ನು ನೋಡಲು ಬಂದಾಗ; ಅವಳು ತೀರಿಕೊಂಡು ಎರಡು ದಿನಗಳಾಗಿದ್ದವು ಅಷ್ಟೇ! ನಿನ್ನಿಂದಲೇ ಅವಳು ಸತ್ತದ್ದು ಎಂದು ಸೀನನನ್ನು ಊರಜನ ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಹೇಗೋ ಬದುಕಿಕೊಂಡ. ಇನ್ನೆರಡು ದಿನ ಮುಂಚೆ ಬರಲಾಗದ ತನ್ನ ಅಸಹಾಯಕತೆಗೆ ತಾನೆ ಜುಗುಪ್ಪೆ ಪಟ್ಟುಕೊಂಡ ಅವನು ಇನ್ನು ಬದುಕಿರಬಾರದೆಂದು ವಿಷಕುಡಿದ. ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ನರಳಿ, ಮತ್ತೆ ಬದುಕಿಕೊಂಡುಬಿಟ್ಟ. ಈಗ ಬೆಂಗಳೂರಿನಲ್ಲಿ ದೊಡ್ಡ ಹೋಟೆಲ್ ಉದ್ಯಮವನ್ನು ಅವಳ ಹೆಸರಿನಲ್ಲಿ ನಡೆಸುತ್ತಿದ್ದಾನೆ. ಪ್ರೀತಿ, ಪ್ರೇಮ ಎಂದು ಓಡಾಡುವ ಪಿಯುಸಿ ಹುಡುಗಿಯರನ್ನು ಕಂಡಾಗಲೆಲ್ಲಾ ನನಗೆ ಹಳ್ಳಿ ಹುಡುಗಿಯ ಮುಗ್ಧ ಮುಖವೇ ನೆನಪಿಗೆ ಬರುತ್ತದೆ.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…