ಆಂದೋಲನ ಪುರವಣಿ

ಹಾಡು ಪಾಡು : ತಿಂಗಳ ಕಥೆ – ಕವಿ ಸಾಮ್ರಾಟ

ಅಬ್ದುಲ್ ರಶೀದ್ ರವರು

ಅಬ್ದುಲ್ ರಶೀದ್
mysoorininda@gmail.com

ಅವಳು ಕೈಯಲ್ಲಿನ ಚೀಲವನ್ನು ಮಗುವಂತೆ ಎತ್ತಿಕೊಂಡು ಮೈಸೂರು ಸಬರ್ಬನ್ ಬಸ್ಸು ನಿಲ್ದಾಣದಲ್ಲಿ ಬೆಳಗೆ ಇಳಿದವಳೇ ಆಟೋದವನಲ್ಲಿ ‘ಚಂದವಳ್ಳಿ ಕೆರೆ’ ಎಂದಳು.
ಸಣ್ಣ ಪ್ರಾಯದ ಆಟೋ ಡ್ರೈವರ್ ಮುಖ ಚೂಪು ಮಾಡಿಕೊಂಡು ‘ಅದೆಲ್ಲಿ’ ಎಂಬಂತೆ ಇವಳ ಮುಖ ನೋಡಿದ.
ಅವಳು ಸಿಟ್ಟು ತೋರಿಸಿಕೊಳ್ಳದೆ ‘ಚಂದ್ರವಳ್ಳಿ ಕೆರೆ’ ಎಂದು ಪುನರುಚ್ಚರಿಸಿದಳು.
‘ಮೇಡಂ ಕಾರಂಜಿ ಕೆರೇನಾ’
ಅವಳ ಸಹನೆ ಮೀರುತ್ತಿತ್ತು
‘ಅಲ್ಲ. ಚಂ ದ್ರ ವ ಳ್ಳಿ ಕೆ ರೆ’ ಅವಳು ಒಂದೊಂದು ಅಕ್ಷರವನ್ನೂ ಒತ್ತಿ ಹೇಳಿದಳು
‘ಸುಬ್ಬರಾಯನ ಕೆರೆ, ಲಿಂಗಾಂಬುದಿ ಕೆರೆ , ಹೆಬ್ಬಾಳು ಕೆರೆ’ ಆತ ಮೈಸೂರಿನ ಕೆರೆಗಳ ಪಟ್ಟಿ ಒದರತೊಡಗಿದ
ಅವಳಿಗೆ ನಿಜಕ್ಕೂ ಸಿಟ್ಟು ಬಂತು
‘ಯಾವುದೂ ಅಲ್ಲ. ವೈಶಂಪಾಯನ ಕೆರೆ’ ಅವಳು ತನ್ನಷ್ಟಕ್ಕೆ ಗೊಣಗಿ ಮುಂದಕ್ಕೆ ಹೋಗಿ ಇನ್ನೊಬ್ಬ ಆಟೋದವನ ಮುಂದೆ ನಿಂತು ‘ಚಂದ್ರವಳ್ಳಿ ಕೆರೆ’ ಅಂದಳು.
‘ಗೊತ್ತಿಲ್ಲ ’ ಅವನೂ ತಲೆಯಾಡಿಸಿ ಅಷ್ಟಕ್ಕೇ ನಿಲ್ಲದೆ ‘ಯಾಕೆ ಮೇಡಂ ಬೆಳಬೆಳಗೆ ಕೆರೆ’ ಎಂದು ಮೂಗಿನ ತುದಿಯಲ್ಲಿ ನಕ್ಕ.
‘ಸಾಯಕ್ಕೆ ಅಲ್ಲ, ವಾಕಿಂಗ್ ನಡೆಯಕ್ಕೆ’ ಅವಳು ಸಿಟ್ಟು ತೋರಿಸಿಕೊಳ್ಳದೆ ಹಿತವಾಗಿ ನಕ್ಕಳು.
‘ಮೇಡಂ ವಾಕಿಂಗ್ ಹೋಗೋದಾದ್ರೆ ಕುಕ್ಕರಹಳ್ಳಿ ಕೆರೆ ಬೆಸ್ಟ್.ಕರ್ಕೊಂಡೋಗ್ಲಾ’ ಅಂದ.
ಇವಳಿಗೆ ನಾಚುಗೆಯಾಯಿತು.
ಅದರ ನಿಜವಾದ ಹೆಸರು ಕುಕ್ಕರಹಳ್ಳಿ ಕೆರೆ. ಚಂದ್ರವಳ್ಳಿ ಕೆರೆ ಅಲ್ಲ.
ಕವಿಸಾಮ್ರಾಟರ ಪುಸ್ತಕಗಳನ್ನು ಓದಿ ಓದಿ ಅವಳಿಗೆ ಅದು ಚಂದ್ರವಳ್ಳಿ ಕೆರೆ ಎಂದೇ ಮೆದುಳಿನೊಳಗೆ ಹೊಕ್ಕು ಬಿಟ್ಟಿತ್ತು

‘ಹೌದು ಕುಕ್ಕರಹಳ್ಳಿ ಕೆರೆ. ರೈಟ್’ ಎಂದು ಕುಳಿತು ಆಟೋದ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡು ನಸುನಕ್ಕಳು.

ಅವಳಿಗೆ ನಂಬಲಾಗಲಿಲ್ಲ. ಕೇವಲ ಮೂರು ತಾಸಿಗೆ ಮೊದಲು ಅವಳು ಮಡಿಕೇರಿಯ ಸರಕಾರೀ ಬಸ್ ಸ್ಟಾಂಡಿನಲ್ಲಿದ್ದಳು.
ಮಗ ಪ್ರದ್ಯುಮ್ನ ತೋಟದಿಂದ ಜೀಪಿನಲ್ಲಿ ತಂದು ಬಿಟ್ಟಿದ್ದ.
ಅವನಿಗೆ ತಾಯಿಯನ್ನು ಬಸ್ಸು ಹತ್ತಿಸಲು ಇಷ್ಟ ಇರಲಿಲ್ಲ
‘ಮಮ್ಮಿ ಮೈಸೂರಿನವರೆಗೆ ನಾನೇ ಜೀಪಿನಲ್ಲಿ ಬಿಡುತ್ತೇನೆ. ಒಂದೂವರೆ ಗಂಟೆಯಲ್ಲಿ ಅಲ್ಲಿರುತ್ತೀಯಾ’ ಕೇಳಿಕೊಂಡಿದ್ದ
‘ಇವಳು ನೋ. ನೋ.’ ಎಂದು ಕಠಿಣವಾಗಿ ಅಂದಿದ್ದಳು
‘ಸರಿ ಮಮ್ಮಿ, ವಾಪಾಸು ಎಷ್ಟು ಹೊತ್ತಿಗೆ ಇಲ್ಲಿ ಬಂದು ಕಾಯಲಿ’ ಅವನು ಅಸಹಾಯಕನಾಗಿ ಕೇಳಿದ್ದ
‘ಬೇಡ ನಾನೇ ಬಸ್ಸು ಹತ್ತಿ ಬರುತ್ತೇನೆ. ಕರ್ನಲ್ ಸಾಹೇಬರಿಗೂ ಹೇಳು ಯಾರೂ ಕಾಯುವುದು ಬೇಡ’ ಅವಳು ಜೀಪಿನಿಂದ ಇಳಿದು ಅವನಿಗೆ ಟಾಟಾ ಮಾಡಿ ಕಣ್ಣನೋಟದಲ್ಲೇ ಅವನ ಹಣೆಗೆ ಒಂದು ಹೂಮುತ್ತು ರವಾನಿಸಿ ಬಸ್ಸು ಹತ್ತಿದ್ದಳು.
ಅಮ್ಮ ಕಣ್ಣನೋಟದಲ್ಲೇ ಹೂ ಮುತ್ತು ಕೊಡುವುದು ಪ್ರದ್ಯುಮ್ನನಿಗೆ ತುಂಬ ಇಷ್ಟ
ಅವನು ನೋಡಲು ಥೇಟ್ ಅಪ್ಪನ ಹಾಗೆ. ಆದರೆ ಅವನ ಸ್ವಬಾವ ಪೂರ್ತ ಅಮ್ಮನದು.ಸಣ್ಣ ಸಣ್ಣದಕ್ಕೂ ನೊಂದುಕೊಳ್ಳುವುದು. ದೊಡ್ಡ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಹೊರಡುವುದು. ಅದು ಕೈಗೂಡದೆ ಹೋದಾಗ ಒಳಗೊಳಗೆ ನವೆಯುವುದು.
ಅವನು ಜೀವನದಲ್ಲಿ ಪ್ರೀತಿಸಿದ ಒಬ್ಬಳೇ ಹುಡುಗಿ ಈಗ ಮದುವೆಯಾಗಲು ಒಪ್ಪದೆ ಸತಾಯಿಸುತ್ತಿದ್ದಳು
‘ಕಾಡುಬಿಟ್ಟು ಬೆಂಗಳೂರಿಗೆ ಬಾ, ಬಿಂದಾಸಾಗಿ ಬದುಕೋಣ’ ಅಂದಿದ್ದಳು.
ಆರು ಅಡಿ ಉದ್ದದ ಧೃಡಕಾಯ ಪ್ರದ್ಯುಮ್ನ ಅಮ್ಮನನ್ನು ತಬ್ಬಿಕೊಂಡು ಅತ್ತಿದ್ದ.
ನೋಡಲು ಅಪ್ಪನ ಹಾಗೇ ಗಟ್ಟಿಯಾಗಿದ್ದ ಪ್ರದ್ಯುಮ್ನ ಅಳುವಾಗ ಥೇಟ್ ಮಗುವಿನ ಹಾಗೆ.
ಅಪ್ಪ ಕರ್ನಲ್ ಸಾಹೇಬರಿಗೆ ಅಳುಮುಂಜಿ ಮಗನನ್ನು ಕಂಡರೆ ತಾತ್ಸಾರ.‘ಹುಲಿಯ ಹೊಟ್ಟೆಯಲ್ಲಿ ಇಲಿಮರಿ ಹುಟ್ಟಿದ್ದಾನೆ’ ಎಂದು ಮೂದಲಿಸುತ್ತಿದ್ದರು.
ಅವರನ್ನು ಮನೆಯಲ್ಲಿ ಹೆಂಡತಿಯೂ ‘ಕರ್ನಲ್’ ಎಂದೇ ಕರೆಯಬೇಕಿತ್ತು.ಮಕ್ಕಳೂ ಅಷ್ಟೇ, ’ಕರ್ನಲ್ ಪಪ್ಪ’ ಎಂದೇ ಅನ್ನಬೇಕಿತ್ತು.ಆಳುಗಳೂ ಅಷ್ಟೇ ‘ಕರ್ನಲ್ ಸಾಹುಕಾರರು’ ಅನ್ನಬೇಕಿತ್ತು
***
ಕರ್ನಲ್ ಸಾಹೇಬರು ರಜೆಯಲ್ಲಿ ಊರಿಗೆ ಬಂದಾಗ ಅದಾಗ ತಾನೇ ಉಜಿರೆಯಲ್ಲಿ ಪದವಿ ಮುಗಿಸಿದ್ದ ಬಂದಿದ್ದ ಇವಳ ಮನೆಗೆ ವಧು ಅನ್ವೇಷಣೆಗೆ ಬಂದಿದ್ದರು.ಆಗ ಅವರು ಇನ್ನೂ ಮೇಜರ್ ಆಗಿದ್ದರು.ಅವರು ಬಂದಾಗ ಇವಳು ಮೂಲೆಯಲ್ಲಿ ಮುದುಡಿ ಹೋಗಿದ್ದಳು.
ಹುಡುಗಿ ನೋಡಲು ಬಂದು ಹೋದವರು ಮತ್ತೆ ಇದ್ದಕ್ಕಿದ್ದಂತೆ ಮಾರನೆಯ ದಿನ ಬಂದಿದ್ದರು. ‘ಹುಡುಗಿ ಯಾಕೋ ಕುಳ್ಳು ದೇಹದವಳು’ ಎಂದು ಹೆಣ್ಣು ನೋಡಲು ಜೊತೆಗೆ ಬಂದಿದ್ದವರು ಅಂದಿದ್ದರಂತೆ. ಅದಕ್ಕಾಗಿ ಪುನಹ ಬಂದು ನೋಡಿ ಹೋಗಿದ್ದರು. ಆಗ ಇವಳು ಇನ್ನೂ ಮುದುಡಿ ಹೋಗಿದ್ದಳು.
ಯಾಕೋ ಎಲ್ಲವೂ ಗೋಜಲು ಗೋಜಲು.
ಉಜಿರೆಯ ಹಾಸ್ಟೆಲಿನಲ್ಲಿ ಹುಡುಗಿಯರು ಮದುವೆಯ ಕುರಿತು, ಗಂಡಸಿನ ಕುರಿತು ಗುಸುಗುಸು ಮಾಡುತ್ತಾ ಕಿಸಕ್ಕನೆ ನಗುತ್ತಿದ್ದವರು ಇವಳನ್ನು ಕಂಡೊಡನೆ ಮಾತು ನಿಲ್ಲಿಸಿ ಮೌನವಾಗಿರುತ್ತಿದ್ದರು.
ಏಕೆಂದರೆ ಇವಳಿಗೆ ಗಂಡಸಿನ ಕುರಿತು, ಮದುವೆಯ ಕುರಿತು, ಆನಂತರದ ಸಂಗತಿಗಳ ಕುರಿತ ಮಾತುಗಳನ್ನು ಕೇಳುವಾಗ ವ್ಯಾಕ್ ಅನಿಸುತ್ತಿತ್ತು
‘ಹೀಗೆಲ್ಲಾ ಇರುತ್ತದಾ..’ ಎಂದು ಜಿಗುಪ್ಸೆ ಪಡುತ್ತಿದ್ದಳು.
ಮೇಜರ್ ಸಾಹೇಬರು ತನ್ನನ್ನು ಕುಳ್ಳನೆಯವಳಾ ಉದ್ದನೆಯವಳಾ ಎಂದು ಕಣ್ಣಲ್ಲೇ ಅಳೆದಾಗ ಅವಳಿಗೆ ಮೈಯೆಲ್ಲಾ ಮುಳ್ಳುಗಳೆದ್ದಿದ್ದವು
ಏನೂ ಮಾತಾಡದೆ ಮನೆಯ ಒಳಕ್ಕೆ ಓಡಿದ್ದಳು.
ಮಾರನೆಯ ದಿನವೇ ಅಜ್ಜಿಯ ಮನೆಗೆ ಹೊರಟಿದ್ದಳು.
ಫೋನು, ಕರೆಂಟು ಏನೂ ಇಲ್ಲದ ಕಾಟಿಬೆಟ್ಟದ ಕಾಡಿನೊಳಗಿದ್ದ ಪೂರ್ವಜರ ಮನೆ.
ಅಜ್ಜಿ ಒಬ್ಬಳೇ ವಾಸವಾಗಿದ್ದಳು.
ಅಜ್ಜ ಬಹಳ ಹಿಂದೆಯೇ ಮನೆ ಬಿಟ್ಟು ಹೊರಟು ಹೋಗಿದ್ದರು. ಎಲ್ಲಿಗೆ ಗೊತ್ತಿಲ್ಲ. ಅವರಿಗೆ ಬಾಲ್ಯದಲ್ಲಿಯೇ ವೈರಾಗ್ಯವಂತೆ.ಪೊನ್ನಂಪೇಟೆಯ ಆಶ್ರಮದಲ್ಲಿ ಸನ್ಯಾಸಿಗಳ ಜೊತೆ ಇದ್ದವರನ್ನು ತೋಟ ವಹಿವಾಟು ನೋಡಲು ಯಾರೂ ಇಲ್ಲ ಎಂದು ಮದುವೆ ಮಾಡಿಸಿದ್ದರು. ಅಮ್ಮ ಹುಟ್ಟಿ ಆರು ತಿಂಗಳಿಗೆ ಅಜ್ಜ ಹೊರಟು ಹೋಗಿದ್ದರು. ಕಲ್ಕತ್ತವೋ ಹರಿಧ್ವಾರವೋ ಗೊತ್ತಿಲ್ಲ.ಅಜ್ಜಿ ಮಗಳ ಜೊತೆ ಒಬ್ಬರೇ ಬದುಕಿದ್ದರು. ಮಗಳೂ ಮದುವೆಯಾಗಿ ಹೋದ ಮೇಲೆ ಅವರೂ ಒಂಟಿಯಾಗಿದ್ದರು.ಇವಳು ರಜೆ ಸಿಕ್ಕಾಗಲೆಲ್ಲ ಅಜ್ಜಿಯ ಬಳಿ ಹೋಗಿರುತ್ತಿದ್ದಳು

ಅಜ್ಜಿ ಗಟ್ಟಿ ಹೆಂಗಸು. ಗುಡ್ಡವನ್ನೇ ಕಡಿದು ನೇರಗೊಳಿಸಿ ತೋಟ ಮಾಡಿದ್ದಳು. ಗುಡ್ಡದ ಸೆರಗಲ್ಲಿ ಕಾಫಿ ತೋಟ. ನೆರಳಿನ ಮರಗಳ ತುಂಬ ಕಾಳು ಮೆಣಸಿನ ಬಳ್ಳಿಗಳು, ಕಾಫಿ ಗಿಡಗಳ ನಡುವೆ ಕಿತ್ತಳೆಯ ಮರಗಳು, ಭತ್ತದ ಗದ್ದೆಯ ಬದಿಯ ಆವೆಮಣ್ಣಿನ ಬಯಲಲ್ಲಿ ಏಲಕ್ಕಿಯ ಗಿಡಗಳು, ಮನೆಯ ಸುತ್ತ ಪನ್ನೇರಳೆ, ಸೀಬೆ, ಹಲಸು, ಜಾಯಿಕಾಯಿ, ಕೊಕ್ಕೋ ಮರಗಳು. ಎಲ್ಲಿಂದಲೋ ಮಳೆಗಾಲ ಕಳೆದ ಬೇಸಗೆಯಲ್ಲಿ ಹಾರಿಬರುವ ವಲಸೆ ಹಕ್ಕಿಗಳು.
ಅವಳಿಗೆ ಅಜ್ಜಿಯ ಜೊತೆಗೆ ಇರುವುದು ಅತ್ಯಂತ ಹಿತವೆನಿಸುತ್ತಿತ್ತು
ಅಜ್ಜಿಯ ಕಪಾಟಿನ ತುಂಬ ಪುಸ್ತಕಗಳು.
ಅಜ್ಜಿ ಚಿಮಿಣಿ ಎಣ್ಣೆಯ ಲ್ಯಾಂಟರ್ನ್ ದೀಪಕ್ಕೆ ಎಣ್ಣೆ ಸುರಿದು ಬತ್ತಿಯನ್ನು ಉದ್ದ ಮಾಡಿ ದೀಪ ಹೊತ್ತಿಸಿ ಓದಲು ಕೂರುತ್ತಿದ್ದಳು.
ದೀಪದ ಒಂದು ಬದಿಯಲ್ಲಿ ಅಜ್ಜಿ. ಇನ್ನೊಂದು ಬದಿಯಲ್ಲಿ ಇವಳು. ಓದಿದ ಪುಸ್ತಕದ ಸಾರಾಂಶವನ್ನು ಇವಳಿಗೆ ಕಥೆಯಾಗಿ ಹೇಳುವುದೆಂದರೆ ಅಜ್ಜಿಗೆ ಇಷ್ಟ.
ಇವಳು ಮೊದಲಿಗೆ ಆ ಸಾರಾಂಶದ ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದವಳು ಆನಂತರ ತಾನೇ ಓದಲು ಶುರುಮಾಡಿದ್ದಳು.
ಆಗಲೇ ಇವಳಿಗೆ ಕವಿಸಾಮ್ರಾಟರ ಕಥೆ ಪುಸ್ತಕಗಳು ಓದಲು ಸಿಕ್ಕಿದ್ದು.ಆಗ ಅವಳಿಗೆ ಕಥೆ, ಕವಿತೆ, ಕಾದಂಬರಿ ಎಂಬ ಯಾವ ವ್ಯತ್ಯಾಸಗಳೂ ಗೊತ್ತಿರಲಿಲ್ಲ. ಎಲ್ಲವೂ ಕಥೆ ಪುಸ್ತಕಗಳೇ. ಕವಿಸಾಮ್ರಾಟರೂ ಅಷ್ಟೇ, ಕಥೆ, ಕಾದಂಬರಿ, ಕವಿತೆಗಳು, ನಾಟಕ, ವಿಮರ್ಶೆ, ಪ್ರವಾಸ ಎಲ್ಲವನ್ನೂ ಬರೆದಿದ್ದರು.
ಅವರು ಬರೆಯುತ್ತಿದುದರಲ್ಲಿ ಅನುರಾಗದ, ಪ್ರಣಯದ ವಿಷಯಗಳು ಬಂದಾಗಲೆಲ್ಲ ಅವುಗಳನ್ನು ಬಿಟ್ಟು ಮುಂದಕ್ಕೆ ಓದುತ್ತಿದ್ದಳು
ಪುಸ್ತಕದ ಹಿಂಬಾಗದಲ್ಲಿ ಕವಿಸಾಮ್ರಾಟರ ಚಿತ್ರವೂ ಇರುತ್ತಿತ್ತು. ಒಬ್ಬ ಮನುಷ್ಯ ಇಷ್ಟೆಲ್ಲ ವಿಷಯಗಳ ಕುರಿತು ಬರೆಯಲು ಸಾಧ್ಯವೇ ಎಂದು ಅವಳಿಗೆ ಅಚ್ಚರಿಯೂ ಆಗುತ್ತಿತ್ತು.
ಕವಿಸಾಮ್ರಾಟರು ಅಷ್ಟು ಸಣ್ಣ ವಯಸಿನಲ್ಲೇ ಸಾಗರವನ್ನೂ ದಾಟಿ ಇಂಗ್ಲೆಂಡಿಗೆ ಹೋಗಿ ಓದಿ ಬಂದಿದ್ದಾರೆ ಎಂದು ಅಜ್ಜಿ ಹೇಳಿದ್ದರು
ಅಜ್ಜಿ ಮೈಸೂರಿನ ವಸಂತ ಮಹಲಿನಲ್ಲಿ ಶಿಕ್ಷಕ ತರಭೇತಿ ಮುಗಿಸಿದವರು
ಕವಿಸಾಮ್ರಾಟರು ರಾಜ ಮನೆತನಕ್ಕೆ ಸೇರಿದವರಂತೆ. ಬಾಲ್ಯವನ್ನು ಅರಮನೆಯೊಳಗೇ ಕಳೆದವರಂತೆ. ಕಾಲವಾದ ರಾಜರು ದತ್ತು ತಗೊಂಡಿದ್ದರೆ ಇವರೇ ಮುಂದಿನ ರಾಜರೂ ಆಗಬೇಕಿತ್ತಂತೆ. ಆದರೆ ರಾಜರು ದತ್ತು ತೆಗೆದುಕೊಳ್ಳುವ ಮೊದಲೇ ಇವರು ಲಂಡನ್ನಿಗೆ ಓದಲು ಹೋಗಿದ್ದರು.
ಓದಿ ವಾಪಾಸು ಬಂದವರು ‘ಕವಿ ಸಾಮ್ರಾಟ’ ಎಂಬ ಹೆಸರಿನಿಂದ ಬರೆಯಲು ಶುರುಮಾಡಿದ್ದರು. ಅವರ ನಿಜವಾದ ಹೆಸರು ವಿಕ್ರಮಾದಿತ್ಯ ಎಂದೋ ಏನೋ ಇರಬೇಕಂತೆ. ಆದರೆ ಅಜ್ಜಿಗೆ ಗೊತ್ತಿರಲಿಲ್ಲ
‘ಸಕತ್ ಮನುಷ್ಯ, ಆದರೆ ಜೊತೆಗಿದ್ದವರೆಲ್ಲ ಪೋಲಿ ಹುಡುಗರು’ ಎಂದು ಅಜ್ಜಿ ಅಂದಿದ್ದಳು.
ಅಜ್ಜಿಯ ಪ್ರಕಾರ ಪೋಲಿ ಹುಡುಗರು ಅಂದರೆ ಹೊಗೆಬತ್ತಿ ಸೇದುವವರು, ಕಳ್ಳು ಕುಡಿಯುವವರು ಮತ್ತು ಕುದುರೆ ಜೂಜು ಆಡುವವರು. ಕವಿಸಾಮ್ರಾಟರೂ ಇದನ್ನೆಲ್ಲ ಮಾಡುತ್ತಿದ್ದರಂತೆ. ‘ಆದರೆ ಬರೆಯುವುದರಲ್ಲಿ ಮಾತ್ರ ಅವರು ನಂಬರ್ ಒನ್’ ಎಂದು ಅಜ್ಜಿ ಅನ್ನುತ್ತಿದ್ದಳು

****
ಅವಳಿಗೆ ನಗು ಬಂತು. ತನ್ನ ಅಜ್ಜಿಯ ಯೌವನದ ದಿನಗಳ ಕವಿಸಾಮ್ರಾಟರು ವಾಯುವಿಹಾರಕ್ಕೆ ಹೋಗುತ್ತಿದ್ದ ಕಲ್ಪನೆಯ ಚಂದ್ರವಳ್ಳಿ ಕೆರೆಯನ್ನು ಅರಸುತ್ತ ಆಟೋದಲ್ಲಿ ಸಾಗುತ್ತಿರುವ ತಾನು. ಆಟೋರಿಕ್ಷಾ ಮೈಸೂರಿನ ರಾಜಬೀದಿಗಳಲ್ಲಿ ಹೊಗೆ ಉಗುಳುತ್ತಾ ಅರಮನೆಯನ್ನೂ ದಾಟಿ, ಇಬ್ಬರು ಮಹಾರಾಜರುಗಳ ವಿಗ್ರಹಗಳನ್ನೂ ದಾಟಿ, ಎರಡೂ ಬದಿಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಹೊಂದಿದ್ದ ದೊಡ್ಡ ರಸ್ತೆಯ ಕೊನೆಯ ಸಿಗ್ನಲ್ಲಿನಲ್ಲಿ ಹಸಿರು ದೀಪಕ್ಕಾಗಿ ಕಾದು ನಿಂತಿತ್ತು. ಇಲ್ಲಿಂದ ಮುಂದಕ್ಕೆ ಡೀಸಿ ಆಫೀಸು, ನಂತರ ಮಹಾರಾಜಾ ಕಾಲೇಜು ಅದಕ್ಕಿಂತ ಮುಂದಕ್ಕೆ ಬಲಬದಿಗೆ ರೈಲ್ವೆ ಹಳಿ ದಾಟಿದರೆ ಅದುವೇ ಕುಕ್ಕರಹಳ್ಳಿ ಕೆರೆ.
ಅವಳು ಕೈಯಲ್ಲಿದ್ದ ಮೊಬೈಲಿನಲ್ಲಿ ನಕಾಶೆಯನ್ನು ನೋಡುತ್ತಿದ್ದಳು.
ನಕಾಶೆಗಳೇ ಇಲ್ಲದೆ ಅವಳು ಮೈಸೂರನ್ನು ಸುತ್ತಾಡಬೇಕೆಂದಿದ್ದಳು.
ಆದರೆ ಇದು ನಕಾಶೆಯಿಲ್ಲದೆ ಏನೂ ಗೊತ್ತಾಗದ ಕಾಲ.
ಬಹುಶಃ ಕವಿಸಾಮ್ರಾಟರು ಬದುಕಿದ್ದರೆ ನಕಾಶೆ ನೋಡಿಕೊಂಡು ಅವರ ಕಥೆಗಳ ಲೋಕದಲ್ಲಿ ಸುತ್ತುತ್ತಿರುವ ತನ್ನ ಕುರಿತೇ ಅವರು ತಮ್ಮ ಲಘುವಾದ ಶೈಲಿಯಲ್ಲಿ ಬರೆಯುತ್ತಿದ್ದರೋ ಏನೋ.
‘ಹುಚ್ಚು ಹುಡುಗಿ ನೀನು ನಿನ್ನ ಅಜ್ಜಿಯ ಜಮಾನಾದಲ್ಲಿ ಹುಟ್ಟಿರಬೇಕಿತ್ತು, ಅಥವಾ ನಾನು ನಿನ್ನ ಪ್ರಾಯದಲ್ಲಿ ಮಡಿಕೇರಿಯಲ್ಲಿ ಹುಟ್ಟಬೇಕಿತ್ತು’ ಅವರು ಪುಟ್ಟದೊಂದು ಪತ್ರದಲ್ಲಿ ಬರೆದಿದ್ದರು. ಅದು ಪ್ರಧ್ಯುಮ್ನ ಅವಳ ಹೊಟ್ಟೆಯಲ್ಲಿ ಓಡಾಡುತ್ತಿದ್ದ ಕಾಲ. ಆಗ ಇವಳು ಮುಸ್ಸೋರಿಯಲ್ಲಿದ್ದಳು.ಕರ್ನಲ್ ಸಾಹೇಬರು ಮೇಜರ್ ಗಿರಿ ಮುಗಿಸಿ ಅದಾಗ ತಾನೇ ಕರ್ನಲ್ ಆಗಿದ್ದರು. ಮುಸ್ಸೋರಿಯ ಸೈನಿಕ ಅತಿಥಿ ಗೃಹದಲ್ಲಿ ಅವರು ತಂಗಿದ್ದರು. ಏಪ್ರಿಲ್ಲಿನಲ್ಲೂ ಕೊಡಗಿನ ಚಳಿಗಾಲಕ್ಕಿಂತ ತೀಕ್ಷ್ಣವಾದ ಮರಗಟ್ಟುವ ಚಳಿ. ಹೊಟ್ಟೆಯೊಳಗೆ ಪ್ರಧ್ಯುಮ್ನ ಒದೆಯುತ್ತಿದ್ದ.ಇದೊಂದು ಪುಳಕ ತನ್ನ ಕಿಬ್ಬೊಟ್ಟೆಯೊಳಗೆ ಹೇಗೆ ಸೇರಿಕೊಂಡಿತು ಎಂಬುದೇ ಅವಳಿಗೆ ಅಚ್ಚರಿ. ಕವಿಸಾಮ್ರಾಟರ ಒಂದಿಷ್ಟು ಪುಸ್ತಕಗಳ ಕಂತೆಯನ್ನು ಹೊತ್ತುತಂದು ಅವುಗಳೊಳಗಿನ ಸ್ವಪ್ನಲೋಕದಲ್ಲಿ ಓಡಾಡುತ್ತಿದ್ದಳು
‘ಚಂದ್ರವಳ್ಳಿಯ ಕೆರೆ’ ಕವಿಸಾಮ್ರಾಟರ ಒಂದು ಪುಸ್ತಕ. ‘ವಸಂತ ವೈಭವ’ ಇನ್ನೊಂದು ಪುಸ್ತಕ ‘ರಾಜ ರಹಸ್ಯ’ ಇನ್ನೊಂದು. ಇನ್ನೂ ಹಲವಾರು.
ಕರ್ನಲ್ ಸಾಹೇಬರಿಗೆ ಗೊತ್ತಾಗದ ಹಾಗೆ ಅವಳು ಪುಟ್ಟ ಪುಟ್ಟ ಕಾರ್ಡುಗಳಲ್ಲಿ ಮುದ್ದುಮುದ್ದು ಅಕ್ಷರಗಳಲ್ಲಿ ಬರೆದು ಅಂಚೆಗೆ ಹಾಕುತ್ತಿದ್ದಳು
ಅಪರೂಪಕ್ಕೆ ಕವಿಸಾಮ್ರಾಟರು ಉತ್ತರಿಸುತ್ತಿದ್ದರು
‘ಅ ಅಥವಾ ಪ ದಿಂದ ಶುರುವಾಗುವ ಹೆಸರು ಸೂಚಿಸಿ’ ಅವಳು ಕೇಳಿಕೊಂಡಿದ್ದಳು. ಹುಡುಗ ಆಗಿದ್ದರೆ ‘ಅಪರಾಜಿತ’ ಹುಡುಗಿಯಾದರೆ ‘ಆಲಾಪನಾ’ ಅವರು ಅಂದಿದ್ದರು.
‘ಎಂಥ ಸುಡುಗಾಡೂ ಬೇಡ ಪ್ರಧ್ಯುಮ್ನ ಅಂತ ಸಾಕು’ ಎಂದು ಕರ್ನಲ್ ಸಾಹೇಬರು ಮಗನಿಗೆ ಹೆಸರಿಟ್ಟಿದ್ದರು.
‘ಪ್ರಧ್ಯುಮ್ನ ಎನ್ನುವುದೂ ಒಳ್ಳೆಯ ಹೆಸರೇ. ಮಗನನ್ನು ಚೆನ್ನಾಗಿ ಸಾಕು’ ಎಂದು ಕವಿಸಾಮ್ರಾಟರು ಬರೆದಿದ್ದರು.
‘ನನ್ನ ಮಗನಿಗೆ ‘ನಕುಲ’ ಎಂದು ಹೆಸರಿಟ್ಟಿದ್ದೆ ಅವನು ನಕ್ಷತ್ರಿಕನಾಗಿ ಬೆಳೆದುಬಿಟ್ಟ’ ಒಂದು ದೊಡ್ಡದಾದ ಆಶ್ಚರ್ಯ ಚಿಹ್ನೆಯ ಸಮೇತ ಅವರು ಬರೆದಿದ್ದರು.
‘ಮಗಳು ‘ವಿಶಾಲಾ’ ಆದರೆ ವಿಷ ಕಾರುತ್ತಾಳೆ’ ಅಂದಿದ್ದರು.
ಮಕ್ಕಳು ಅಪ್ಪನ ಮೇಲೆಯೇ ಆಸ್ತಿಗಾಗಿ ಮೊಕದ್ದಮೆ ಹೂಡಿದ್ದರಂತೆ!
ಸಣ್ಣ ಪ್ರಾಯದಲ್ಲೇ ಮಕ್ಕಳನ್ನು ಹೆತ್ತ ಅವರ ಮಡದಿ ಮಗಳ ಹೆರಿಗೆಯ ನಂತರ ವಿಷಮಶೀತ ಜ್ವರದಿಂದ ತೀರಿಹೋಗಿದ್ದರಂತೆ. ಅಜ್ಜಿಯ ಆರೈಕೆಯಲ್ಲಿ ಬೆಳೆದ ಮಕ್ಕಳು ಅಪ್ಪನನ್ನು ದ್ವೇಷಿಸುತ್ತಿದ್ದರು.ಓದುಗರ ಮೆಚ್ಚಿನ ಕವಿಸಾಮ್ರಾಟನಾಗಿದ್ದವರು ಮಕ್ಕಳಿಗೆ ಖಳನಾಯಕರಾಗಿದ್ದರು.ಮನೆಯ ತುಂಬ ತುಂಬಿರುತ್ತಿದ್ದ ಕವಿಗಳು, ಹೋರಾಟಗಾರರು, ಅಭಿಮಾನಿ ಸುಂದರಿಯರು, ಪಾನಗೋಷ್ಠಿ, ದೂಮಪಾನದ ಹೊಗೆ. ಮಕ್ಕಳು ಅಪ್ಪನನ್ನು ದ್ವೇಷಿಸುತ್ತಿದ್ದರು. ‘ಅವರ ಧ್ವೇಷವೂ ಸಕಾರಣವಾಗಿದೆ’ ಎಂದು ಕವಿಸಾಮ್ರಾಟರು ಬರೆದಿದ್ದರು.‘ಒಳ್ಳೆಯ ಅಪ್ಪ ಒಳ್ಳೆಯ ಲೇಖಕನೂ ಆಗುವುದು ಬಹಳ ಅಪರೂಪ’ ಅಂದಿದ್ದರು

***
ಆಟೋ ಮಹಾರಾಣಿ ಕಾಲೇಜು ಕಳೆದು ಡಿಸಿ ಕಚೇರಿಯ ತಿರುವಲ್ಲಿ ಹೋಗುತಿತ್ತು.
‘ಒಂದು ನಿಮಿಷ’ ಅವಳು ಆಟೋ ನಿಲ್ಲಿಸಿದಳು.ಡಿಸಿ ಕಚೇರಿ ಬೆಳಗಿನ ಬಿಸಿಲಲ್ಲಿ ಹೊಳೆಯುತ್ತ ನಿಂತಿತ್ತು. ಚೀಲವನ್ನು ಆಟೋದಲ್ಲೇ ಬಿಟ್ಟು ಅದರೊಳಗಿಂದ ಪುಟ್ಟ ಕ್ಯಾಮರಾವನ್ನು ಎತ್ತಿಕೊಂಡು ಇಳಿದಳು.ಆಟೋದವನು ಬೀಡಿಯೊಂದನ್ನು ಹೊತ್ತಿಸಿಕೊಂಡು ಕಾಯತೊಡಗಿದ.ಅವಳು ಡಿಸಿ ಖಚೇರಿಯ ಎದುರಿನ ಉದ್ಯಾನವನಕ್ಕೆ ಕಾಲಿಟ್ಟಳು. ಉದ್ಯಾನದ ನಡುವೆ ಶಿಲೆಯ ವೇದಿಕೆಯ ಮೇಲೆ ನಿಂತಿದ್ದ ಬಿಳಿಯರ ಕಾಲದ ರೆಸಿಡೆಂಟನ ಕರಿಯ ವಿಗ್ರಹ. ಆ ಕಾಲದಿಂದಲೂ ಏನೂ ಆಗದೆ ಹಾಗೇ ಕಲ್ಲಾಗಿ ನಿಂತಿರುವ ಪುರುಷಾಕೃತಿ ಬಿಸಿಲಲ್ಲಿ ಮಿನುಗುತ್ತಿತ್ತು.
ಅವಳು ಫೋಟೋ ಕಿಕ್ಕಿಸಿದಳು
ಕವಿಸಾಮ್ರಾಟರ ಕಾದಂಬರಿಯೊಂದರಲ್ಲಿ ಬಿಸಿರಕ್ತದ ಮೂವರು ತರುಣರು ಆ ವಿಗ್ರಹವನ್ನು ಬೀಳಿಸಲು ಇನ್ನಿಲ್ಲದಂತೆ ಶ್ರಮಿಸಿದ್ದರು. ಅದರಲ್ಲಿ ಒಬ್ಬಾತ ಅದಾಗ ತಾನೇ ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದ ರಾಜಮನೆತನದ ತರುಣ.ಈ ವಿಗ್ರಹ ಬಿಳಿಯರ ವಸಾಹತು ಕಾಲದ ದೌರ್ಜನ್ಯಗಳ ಕುರುಹು ಎಂದು ಅವರು ಅದನ್ನು ಕದಲಿಸಲು ಹೆಣಗುತ್ತಿದ್ದರು.ಮೂವರೂ ಸಾಕಷ್ಟು ಮತ್ತರಾಗಿ ಅಲ್ಲಿಗೆ ಬಂದು ವಿಗ್ರಹವನ್ನು ಬೆಳಗಿನವರೆಗೆ ಅಲ್ಲಾಡಿಸಿ ಸುಸ್ತಾಗಿ ವಾಪಾಸು ಹೋಗಿದ್ದರು
ಇದು ಕವಿಸಾಮ್ರಾಟರು ಕಾದಂಬರಿಯಲ್ಲಿ ಬರೆದ ಸಂಗತಿ. ಬಹುಶಃ ಕಾದಂಬರಿಯ ಹೆಸರು ‘ಪ್ರಜಾವಿಜಯ’ ಎಂದು ಇರಬೇಕು
‘ಬಿಸಿ ರಕ್ತದ ಕಾಲ ಅದು. ನಮ್ಮ ಮಿದುಳು ಅಷ್ಟು ಕೆಲಸ ಮಾಡುತ್ತಿರಲಿಲ್ಲ’ ಎಂದು ಕವಿಸಾಮ್ರಾಟರು ಬರೆದಿದ್ದರು
‘ಪಾಪ ಅವನೇನು ಮಾಡಿದ್ದ ಅಂತದ್ದು. ಆನಂತರ ಬಂದ ನಮ್ಮ ಪ್ರಜಾಪ್ರಭುತ್ವದ ರೆಸಿಡೆಂಟರುಗಳು ಅವನಿಗಿಂತ ಭ್ರಷ್ಟರೂ, ಕ್ರೂರಿಗಳೂ ಆಗಿರುವರು’ ಅಂದಿದ್ದರು
ಆಗ ಇವಳಿಗೆ ಅದು ಏನೂ ಗೊತ್ತಾಗುತ್ತಿರಲಿಲ್ಲ
ಈಗಲೂ ಅಷ್ಟೇ. ಮಗ, ತೋಟ, ತೋಟದೊಳಗಿರುವ ಬೃಹತ್ ಮನೆ, ಹೂವಿನ ತೋಟ, ಆಂಥೋರಿಯಂ, ಆರ್ಕಿಡ್ ಗಳು, ಕೊಳದಲ್ಲಿರುವ ತಾವರೆ ನೈದಿಲೆಗಳು, ಸಾಕು ಮೀನುಗಳು, ಮನೆಯನ್ನು ಕಾಯುವ ಎರಡು ಮುದ್ದಾದ ಭಯಂಕರ ಸಾಕು ನಾಯಿಗಳು ಅಷ್ಟೇ.
ಸ್ವಯಂ ನಿವೃತ್ತಿ ಪಡೆದು ಬಂದಿರುವ ಕರ್ನಲ್ ಸಾಹೇಬರ ಕುರಿತು ಅವಳು ಯೋಚನೆಯನ್ನೂ ಮಾಡುತ್ತಿರಲಿಲ್ಲ.
ಅವರೂ ಒಂದು ವಿಗ್ರಹ. ಈ ಬ್ರಿಟಿಷ್ ರೆಸಿಡೆಂಟನ ವಿಗ್ರಹದ ಹಾಗೆ. ಅವರ ಹೃದಯದ ಒಳಗೆ ಏನು ಜರುಗುತ್ತಿರುವುದೂ ತಿಳಿಯುವುದಿಲ್ಲ.
ಅವಳಿಗೆ ತನ್ನ ಪತಿಯಾದ ಕರ್ನಲ್ ಸಾಹೇಬರಿಗೆ ಹೃದಯ ಇದೆ ಎಂದು ಅರಿವಾಗಿದ್ದು ಎರಡೇ ಸಲ. ಒಂದು ತನ್ನ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗು ಜೀವವಿಲ್ಲದೆ ಹೊರಬಂದು ತಾನೂ ಸಾವಿನ ಹೊಟ್ಟೆಯೊಳಗೆ ತೆರಳುತ್ತಿದ್ದೇನೆ ಎಂದು ಮಲಗಿದ್ದಾಗ ಕರ್ನಲ್ ಸಾಹೇಬರು ದೆಹಲಿಯ ಮಿಲಿಟರಿ ಆಸ್ಪತ್ರೆಯ ಕಲ್ಲು ಬೆಂಚಿನ ಮೇಲೆ ಗೊಳೋ ಎಂದು ಅಳುತ್ತಾ ಕುಳಿತಿದ್ದರು ಎಂಬ ಸಂಗತಿಯನ್ನು ಆಮೇಲೆ ಯಾರೋ ಹೇಳಿದಾಗ.
ಇದನ್ನು ಅವಳು ಕವಿಸಾಮ್ರಾಟರಿಗೆ ಬರೆದ ಪತ್ರದಲ್ಲಿ ನಮೂದಿಸಿದ್ದಳು.ಅದಕ್ಕೆ ಅವರು ಏನೂ ಉತ್ತರಿಸಿರಲಿಲ್ಲ
ಇನ್ನೊಮ್ಮೆ ಇತ್ತೀಚೆಗೆ ಕರ್ನಲ್ ಸಾಹೇಬರಿಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ ನಡೆದಾಗ.ಆಗ ಇವಳು ಗೊಳೋ ಎಂದು ಅತ್ತಿದ್ದಳು!ಪ್ರಧ್ಯುಮ್ನ ಅಮ್ಮನನ್ನು ತಾಯಿಯಂತೆ ಸಂತೈಸಿದ್ದ.ಇದನ್ನು ಪತ್ರದಲ್ಲಿ ಬರೆದು ತಿಳಿಸಲು ಕವಿಸಾಮ್ರಾಟರು ಬದುಕಿರಲಿಲ್ಲ.
ಮೈಸೂರಿನ ಹೋಟೆಲೊಂದರಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದು ಅಲ್ಲೇ ವಾಸಿಸುತ್ತಿದ್ದ ಕವಿಸಾಮ್ರಾಟರು ಅದೇ ಕೊಠಡಿಯಲ್ಲಿ ತೀರಿಹೋಗಿದ್ದರು.
‘ನಾನು ಕವಿಸಾಮ್ರಾಟನಾಗಿರದಿದ್ದರೂ ಪರವಾಗಿರಲಿಲ್ಲ,ಒಳ್ಳೆಯ ಅಪ್ಪನಾಗಬೇಕಿತ್ತು’ ಎಂದು ಬರೆದಿದ್ದರು. ಅದೇ ಅವರ ಕೊನೆಯ ಪತ್ರವಾಗಿತ್ತು

***
‘ಮೇಡಂ ಹೊರಡೋದಾ’ ಒಂದು ಬೀಡಿ ಮುಗಿಸಿ ಇನ್ನೊಂದನ್ನು ತುಟಿಗಿಟ್ಟುಕೊಂಡಿದ್ದ ಆಟೋದವನು ಕೇಳಿದ.
‘ಹೋಗೋಣ’ ಅಂದಳು
ಆಟೋ ದೊಡ್ಡದೊಂದು ಗೇಟಿನ ಮುಂದೆ ನಿಂತಿತು. ಪಕ್ಕದಲ್ಲೇ ದೊಡ್ಡ ಮೀನಿನಾಕೃತಿಯ ಮೀನು ಮಾರುವ ಕಟ್ಟಡ. ಕೆರೆಯಿಂದ ಅದಾಗ ತಾನೇ ಹೊರಬಂದ ಮೀನುಗಳಿರಬೇಕು. ಬಿಸಿಲ ಝಳದಲ್ಲಿ ಜೀವಹೋಗುವಂತೆ ಚಡಪಡಿಸುತ್ತಿದ್ದವು.
ಕೆಳಗಿಳಿದು ಜೋರಾಗಿ ಉಸಿರು ಒಳಗೆಳೆದುಕೊಂಡಳು.
‘ಮೇಡಂ ಅಬ್ ಆಪ್ ಅಂದರ್ ನಹೀ ಜಾ ಸಕ್ತಾ ಹೈ. ಶಾಮ್ ಚಾರ್ ಬಜೇ ಖುಲ್ತಾ ಹೈ’ ಬಡ ಮುಖದ ಗೂರ್ಖಾ ಅಂದ.
ಇವಳು ಗೇಟಿನ ಸರಳೊಳಗಿಂದಲೇ ಕೆರೆಯನ್ನು ಇಣುಕಿ ನೋಡಿದಳು. ದೂರದ ತೀರದಲ್ಲಿ ನೀರು ಹೊಳೆಯುವುದು ಸಣ್ಣಗೆ ಕಾಣಿಸುತ್ತಿತ್ತು
‘ಚಂ ದ್ರ ವ ಳ್ಳಿ ಕೆರೆ’ ಆಕೆ ಮನಸಿನಲ್ಲೇ ಅಂದುಕೊಂಡಳು. ಕವಿಸಾಮ್ರಾಟರು ತಮ್ಮ ನವವದುವಿನ ಜೊತೆ ಇದೇ ಕೆರೆಯ ಮೇಲೆ ವಾಯು ವಿಹಾರ ಹೋಗುತ್ತಿದ್ದರು. ಲಂಡನ್ನಿನಲ್ಲಿ ಓದು ಮುಗಿಸಿ ಬಂದಿದ್ದ ಅವರು. ಆಂದ್ರದಿಂದ ತತ್ವಶಾಸ್ತ್ರ ಓದಲು ಮೈಸೂರಿಗೆ ಬಂದಿದ್ದ ಚಂದ್ರವಲ್ಲಿ. ರಾಜಮನೆತನದವರು ಆ ವಿವಾಹವನ್ನು ವಿರೋದಿಸಿದ್ದರು. ಇಬ್ಬರೂ ಸರಳವಾಗಿ ಹಾರ ಬದಲಾಯಿಸಿ ಮದುವೆಯಾಗಿದ್ದರು.ಅವರಿಬ್ಬರೂ ಪ್ರತಿ ಸಂಜೆಯೂ ಇದೇ ಕೆರೆಯ ದಂಡೆಯಲ್ಲಿ ನಡೆಯುತ್ತಿದ್ದರು.ಅದೆಲ್ಲವನ್ನೂ ಅವರು ‘ಚಂದ್ರವಳ್ಳಿ’ ಕಾದಂಬರಿಯಲ್ಲಿ ಬರೆದಿದ್ದರು. ಚಂದ್ರವಲ್ಲಿ ಬಹಳ ಚಂದವಿದ್ದರಂತೆ.
‘ಚಂದ್ರವಲ್ಲಿ ಇದ್ದಿದ್ದರೆ ನಾನು ಹೀಗೆ ಇರುತ್ತಿರಲಿಲ್ಲವೇನೋ’ ಕವಿಸಾಮ್ರಾಟರು ಬರೆದಿದ್ದರು
‘ಹೆಂಡತಿ ಹೇಗಿದ್ದರೂ ಗಂಡಸರು ಮಾತ್ರ ಹಾಗೇ ಇರುತ್ತಾರೆ. ಕಲ್ಲು ಬಂಡೆಗಳ ಹಾಗೆ’ ಅವಳೂ ಕಿಚಾಯಿಸಿ ಬರೆದಿದ್ದಳು
ಅದು ಅವಳ ಹೊಟ್ಟೆಯೊಳಗೆ ತೀರಿಹೋದ ಹೆಣ್ಣುಮಗು ಒದೆಯಲು ಶುರುಮಾಡಿದ್ದ ಕಾಲವಾಗಿತ್ತು.

ಆಕೆಗೆ ಕೆರೆಯ ಆ ಬೃಹತ್ ಗೇಟಿನ ಮುಂದೆ ಬವಳಿ ಬಂದ ಹಾಗಾಯಿತು.
‘ಹೋಗುವಾ’ ಎಂದಳು
‘ಎಲ್ಲಿಗೆ?’ ಆಟೋದವನು ಕೇಳಿದ
‘ಕವಿಸಾಮ್ರಾಟ್ ಸರ್ಕಲ್’ ಎಂದಳು
‘ಈಗ ಬರೀ ಸಾಮ್ರಾಟ್ ಸರ್ಕಲ್ ಮೇಡಂ ಅದು. ಕವಿ ಅಂತ ಬೋರ್ಡಲ್ಲಿ ಮಾತ್ರ ಇದೆ’ ಆತ ಆಟೋ ಓಡಿಸತೊಡಗಿದ.
‘ಸಾಮ್ರಾಟ್ ಸರ್ಕಲ್’ ಎಲ್ಲ ಸರ್ಕಲ್ಲುಗಳ ಹಾಗೇ ಇತ್ತು . ಸರ್ಕಲ್ಲಿನ ಫಲಕದ ಮುಂದೆ ದೊಡ್ಡದೊಂದು ಎಳನೀರಿನ ರಾಶಿ ಹಾಕಿಕೊಂಡು ಕೈಯಲ್ಲೊಂದು ಭಾರೀ ಮಚ್ಚು ಹಿಡಿದುಕೊಂಡು ಬಾಯಿ ತುಂಬಾ ಕವಳ ತುಂಬಿಕೊಂಡಿದ್ದ ದೊಡ್ಡ ಗಾತ್ರದ ಹೆಂಗಸು.

‘ಎರಡು ಎಳನೀರು.ಇನ್ನೊಂದು ಆಟೋದವನಿಗೆ.’ ಅಂದಳು.ಕುಡಿಯುತ್ತಾ ಸುತ್ತ ನೋಡಿದಳು
ಇಲ್ಲೇ ಕವಿಸಾಮ್ರಾಟರ ದೊಡ್ಡದೊಂದು ಮನೆ ಇರಬೇಕಿತ್ತು.ಆದರೆ ಕಾಣಲಿಲ್ಲ. ಸುತ್ತಲೂ ದೊಡ್ಡ ದೊಡ್ಡ ವಸತಿ ಸಂಕೀರ್ಣಗಳು ಎದ್ದಿದ್ದವು. ಕಾಳಿದಾಸ ರಸ್ತೆಗೆ ಚಾಚಿಕೊಂಡಿದ್ದ ಸಂಕೀರ್ಣದ ನೆಲ ಅಂತಸ್ತಿನ ತುಂಬ ದೊಡ್ಡ ದೊಡ್ಡ ಬ್ಯಾಂಕುಗಳ, ದೂರವಾಣಿ ಕಂಪೆನಿ, ಸೌಂದರ್ಯ ಸಾಧನ, ಪ್ರಸಾದನ, ಬೊಜ್ಜು ಕರಗಿಸುವ ಕ್ಲಿನಿಕ್ಕುಗಳ ಮುಂಗಟ್ಟುಗಳು. ಸಂಕೀರ್ಣದ ಮೇಲು ತುದಿಯಲ್ಲಿ ‘ಕವಿಸಾಮ್ರಾಟ ಕಾಂಪ್ಲೆಕ್ಸ್’ ಎಂದು ತಾಮ್ರದ ಅಕ್ಷರಗಳಲ್ಲಿ ಕನ್ನಡದಲ್ಲೂ ಆಂಗ್ಲಭಾಷೆಯಲ್ಲಿ ದೊಡ್ಡದಾಗಿ ಬರೆಯಲಾಗಿತ್ತು

****

ಬೆಳಗೆ ಖಚೇರಿಗೆ ತೆರಳುತ್ತಿದ್ದವನ ಮೊಬೈಲ್ ರಿಂಗಾಯಿತು
‘ನಿನಗೆ ಸಮಯವಿದೆಯೇ.. ಸಮಯವಿದ್ದರೆ ದಯವಿಟ್ಟು ಬರಬಹುದೇ’? .
ಬಹಳ ಕಾಲದಿಂದ ಕೇಳಿಸದಿದ್ದ ಆದರೆ ತೀರಾ ಪರಿಚಿತ ಅನಿಸುವ ಧ್ವನಿ.
’ ಏಯ್ ನೀನು! ಎಲ್ಲಿದ್ದೀಯಾ?
‘ಇಲ್ಲೇ ಮೈಸೂರಲ್ಲೇ ಇರುವೆ. ದಯವಿಟ್ಟು ಬರಬಹುದೇ. ಬಂದರೆ ತೀರಾ ಒಳ್ಳೆಯದು. ಲೊಕೇಶನ್ ಕಳಿಸಿರುವೆ’ ಅವಳು ಆ ಕಡೆಯಿಂದ ತಡವರಿಸುತ್ತಿದ್ದಳು.
ಲೊಕೇಶನ್ ಹೇಳಿದತ್ತ ತಿರುಗಿಸಿದೆ. ಕಾರು ದೊಡ್ಡದೊಂದು ಹೋಟೆಲಿನ ಮುಂದೆ ನಿಂತುಕೊಂಡಿತು. ಒಳಹೊಕ್ಕು ನೋಡಿದರೆ ಮಂಕುಮಂಕು ದೀಪಗಳು ಉರಿಯುತ್ತಿದ್ದ ಲಾಂಜಿನ ಸೋಫಾದಲ್ಲಿ ಅವಳು ಕೈಚೀಲ ಬಿಗಿಯಾಗಿ ಹಿಡಿದುಕೊಂಡು ಅಸ್ತವ್ಯಸ್ತವಾಗಿ ಕುಳಿತಿದ್ದಳು.
‘ಏಯ್ ಏನಾಯಿತು ನಿನಗೆ?’ ಹತ್ತಿರ ಹೋಗಿ ಭುಜಗಳನ್ನು ಅಲುಗಿಸಿದೆ.
‘ಗೊತ್ತಿಲ್ಲ. ನನಗೆ ಏನೋ ಆಗಿದೆ. ಏನು ಎಂದು ಗೊತ್ತಾಗುತ್ತಿಲ್ಲ’ ಅವಳು ಸ್ವೆಟರಿನ ತೋಳುಗಳನ್ನು ಮೇಲಕ್ಕೆ ಮಡಚಿ ತನ್ನ ಬರಿದಾದ ತೋಳುಗಳನ್ನು ತೋರಿಸಿದಳು. ಕೆಂಪಗಿನ ಗುಳ್ಳೆಗಳು ತೋಳುಗಳ ಮೇಲೆ ವೃತ್ತಾಕಾರವಾಗಿ ಎದ್ದಿದ್ದವು
‘ಇಲ್ಲಿ ಮಾತ್ರ ಅಲ್ಲ. ಮೈಯ ಎಲ್ಲ ಕಡೆಯೂ ಎದ್ದಿವೆ. ಜ್ವರವೂ ಇದೆ. ಸಾಯುವಷ್ಟು ಚಳಿಯಾಗುತ್ತಿದೆ’ ಅವಳು ಮೈಯನ್ನು ಹಿಡಿ ಮಾಡಿಕೊಂಡು ಸೋಪಾದಲ್ಲಿ ಇನ್ನಷ್ಟು ಕುಸಿದಳು
ಹೋಟೆಲಿನ ಹುಡುಗರೂ ಹೆದರಿಕೊಂಡಿದ್ದರು.
ಸ್ವಾಗತಕಾರಿಣಿ ಹತ್ತಿರ ಬಂದು ’ ಡು ಯು ನೋ ಹರ್ ಸರ್’ ಎಂದಳು
‘ಹೌದು ಗೊತ್ತು. ಏನಾಯಿತು ಹೇಳಿ’
‘ಇಲ್ಲ ಸರ್ ಅವರು ಸರಿಯಾಗಿ ಏನೂ ಹೇಳುತ್ತಿಲ್ಲ.ಆದರೆ ಏನೋ ಆಗಿದೆ. ಇರುವುದರಲ್ಲೇ ಒಳ್ಳೆಯ ಕೊಠಡಿ ಕೊಟ್ಟಿದ್ದೆವು. ಮಧ್ಯಾಹ್ನವೇ ಬಂದು ಒಳ ಹೊಕ್ಕರು. ಬೆಳಗಿನ ಜಾವ ಹೊರಬಂದು ಇಲ್ಲಿ ಕೂತಿರುವರು. ಏನೂ ಹೇಳುತ್ತಿಲ್ಲ. ಬಹುಶ: ಏನಾಗಿರಬಹುದು ನಮಗೂ ಗೊತ್ತಾಗುತ್ತಿಲ್ಲ’ ಸ್ವಾಗತಕಾರಿಣಿ ಬಡ ಬಡಿಸುತ್ತಿದ್ದಳು
‘ಏನೂ ಆಗಿಲ್ಲ ಸುಮ್ಮನಿರಿ’ ನಾನು ಅವಳ ತೋಳು ಹಿಡಿದು ಎಬ್ಬಿಸಿ ಹೊರಗೆ ಕರೆತಂದು ಕಾರಿನಲ್ಲಿ ಕೂರಿಸಿದೆ.
‘ಏ ಹುಚ್ಚಿ ಈಗ ಹೇಳು ಏನಾಗಿದೆ ನಿನಗೆ. ಮಡಿಕೇರಿಗೆ ಕರೆದುಕೊಂಡು ಹೋಗಿ ಬಿಡಲಾ. ಇಲ್ಲೇ ಆಸ್ಪತ್ರೆಗೆ ಹೋಗೋದಾ? ಕರ್ನಲ್ ಸಾಹೇಬರಿಗೆ ಹೇಳಬೇಕಾ? ಪ್ರಧ್ಯುಮ್ನನಿಗೆ ಹೇಳಬೇಕಾ’ ನಾನು ಅವಳಿಗಿಂತ ಉದ್ವಿಗ್ನನಾಗಿ ಬಡಬಡಿಸುತ್ತಿದ್ದೆ.
‘ಏ ಹುಚ್ಚ ಎಲ್ಲಾದರೂ ಕಾಫಿ ಕುಡಿಸು. ಬೇರೆ ಏನಾದರೂ ಮಾತನಾಡು.ತಮಾಷೆ ಮಾಡು. ಸರಿಹೋಗುವೆ’ ಅವಳು ಚೇತರಿಸಿಕೊಳ್ಳುತ್ತಿದ್ದಳು.
ಕಾಫಿ ಕುಡಿಯುತ್ತಿದ್ದವಳ ಮುಖ ಸರಿಹೋಗುತ್ತಿತ್ತು.
‘ಈಗ ಹೇಳು ಏನಾಯ್ತು?’
ಅವಳು ಹೇಳತೊಡಗಿದಳು
‘ಆಟೋದವನು ಈ ಹೋಟೆಲಿಗೆ ತಂದು ಬಿಟ್ಟನಾ‘
‘ಕೋಣೆಗೆ ಹೋದವಳು .ಇನ್ನು ಏಳಲೇ ಬಾರದು ಎಂದು ಶವದ ಹಾಗೆ ಬಿದ್ದುಕೊಂಡಿದ್ದೆ. ಕುಡಿದ ಎಳನೀರು ಬಿಟ್ಟು ಏನೂ ತಿಂದಿರಲಿಲ್ಲ. ನಡುರಾತ್ರಿ ಏನೋ ಸದ್ದು ಕೇಳಿ ಎಚ್ಚರವಾಯಿತು. ಪಕ್ಕದ ಕೋಣೆಯಲ್ಲಿ ಏನೋ ಸದ್ದಾಗುತ್ತಿತ್ತು‘
‘ನೋಡಿದರೆ ಅದು ನನ್ನದೇ ಕೋಣೆಗೆ ತಗಲಿಕೊಂಡಿದ್ದ ಇನ್ನೊಂದು ಕೊಠಡಿ. ನಡುವಿನ ಬಾಗಿಲಿಗೆ ಎರಡೂ ಕಡೆಯಿಂದ ಚಿಲಕ ಹಾಕಲಾಗಿತ್ತು. ಆದರೆ ಬಾಗಿಲ ಬೀಗದ ಕೈ ಹಾಕುವ ರಂದ್ರದಿಂದ ನೋಡಬಹುದಿತ್ತು.
‘ನಾನು ನೋಡಿದೆ‘ ಅವಳು ಒಂದು ಕ್ಷಣ ಮೌನವಾದಳು.
‘ಏನು ನೋಡಿದೆ?
‘ಕವಿಸಾಮ್ರಾಟರು ಮತ್ತು ಮಡದಿ ಚಂದ್ರವಲ್ಲಿ’. ಅವಳು ನಿಜಕ್ಕೂ ನಡುಗುತ್ತಿದ್ದಳು.
‘ನಗ್ನರಾಗಿದ್ದ ಅವರಿಬ್ಬರೂ ತಮ್ಮ ಮೈತುಂಬ ಎದ್ದಿದ್ದ ನವೆಗಳನ್ನು ಕೆರೆದುಕೊಳ್ಳುತ್ತಿದ್ದರು!’
‘ನಿನಗೆ ಬ್ರಾಂತು. ಪೂರ್ತಿ ಬ್ರಾಂತು’
‘ಇಲ್ಲ ಖಂದಿತ ಬ್ರಾಂತು ಅಲ್ಲ. ಇಲ್ಲಿ ನೋಡು’ ಅವಳು ಕೈಚೀಲದಿಂದ ಹಳೆಯದೊಂದು ಪತ್ರಿಕೆಯ ತುಂಡು ಹೊರತೆಗೆದಳು.
೧೯೯೨ ನೆಯ ಇಸವಿಯ ಪತ್ರಿಕೆ. ‘ವಸತಿ ಗೃಹದಲ್ಲಿ ದುರಂತ ಅಂತ್ಯ ಕಂಡ ಕವಿಸಾಮ್ರಾಟರು’ ಎಂಬುದು ಸುದ್ದಿಯ ತಲೆ ಬರಹ.
‘ಅದೇ ಕೋಣೆಯಾ?’
‘ಹೌದು. ಇಲ್ಲಿ ನೋಡು’
“ಕವಿಸಾಮ್ರಾಟರು ಎರಡು ಕೊಠಡಿಗಳನ್ನು ತಿಂಗಳ ಬಾಡಿಗೆಗೆ ಪಡೆದು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ಅವರು ಸಾರ್ವಜನಿಕರ ಜೊತೆಗಿನ ಸಂಪರ್ಕವನ್ನು ಕಡಿದುಕೊಂಡಿದ್ದರು. ಹೃದಯಾಘಾತದಿಂದ ನಿದ್ದೆಯಲ್ಲೇ ಮರಣಹೊಂದಿದ್ದ ಅವರ ಸಾವು ೧೨ ಗಂಟೆಗಳ ನಂತರ ಹೋಟೇಲು ಸಿಬ್ಬಂದಿಯ ಗಮನಕ್ಕೆ ಬಂತು ಎನ್ನಲಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಸಾರಸ್ವತ ಲೋಕದ ಗಣ್ಯರು ಸೇರಿದಂತೆ ನಾಡಿಗೆ ನಾಡೇ ಕವಿಸಾಮ್ರಾಟರ ನಿಧನಕ್ಕೆ ಕಂಬನಿ ಮಿಡಿದಿದೆ. ಅವರು ಮೈಸೂರು ನಗರದಲ್ಲಿ ವಾಸಿಸುತ್ತಿದ್ದ ನಿವಾಸದ ಬಳಿಯ ವೃತ್ತಕ್ಕೆ ‘ಕವಿಸಾಮ್ರಾಟ ವೃತ್ತ’ ಎಂಬ ಹೆಸರಿಡಲು ನಗರಪಾಲಿಕೆ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.”
ಸರಿಯಾಗಿ ಮೂರು ದಶಕಗಳ ಹಳೆಯ ಪತ್ರಿಕೆಯ ಸವೆದ ಅಕ್ಷರಗಳು.
ನಾನೂ ಸಣ್ಣಗೆ ನಡುಗಿದೆ.
‘ಹುಚ್ಚಿ ನೀನು. ಬೇಕು ಬೇಕೆಂತಲೇ ಆ ಹೋಟೆಲು ಹುಡುಕಿಕೊಂಡು ಹೋಗಿರಬೇಕು ನೀನು ಮರ್ಲು ನಿನಗೆ’.ಗದರಿಸಿದೆ
‘ಇಲ್ಲ ಕಣೋ. ಆಟೋದವನು ಹೋಟೇಲಿಗೆ ಬಿಟ್ಟ. ನಾನು ಒಳಹೊಕ್ಕೆ’
ಆಕೆ ಮತ್ತೆ ತನ್ನ ಸ್ವೆಟರಿನ ತೋಳನ್ನು ಎತ್ತಿ ಮಡಚಿ ತನ್ನ ಬಿಳಿಯ ತೋಳುಗಳನ್ನು ನೋಡಿಕೊಂಡಳು. ಕೆಂಪು ನವೆ ಎದ್ದ ಕುರುಹುಗಳು ಮಾತ್ರ ಅಲ್ಲಿ ಕಾಣಿಸುತ್ತಿದ್ದವು. ಆಕೆ ತನ್ನ ಕಿಬ್ಬೊಟ್ಟೆಯನ್ನು ತೋರಿಸಿದಳು.ಅಲ್ಲೂ ನವೆಗಳು ಮಾಯವಾಗುತ್ತಿದ್ದವು. ‘ಎಲ್ಲ ಕಡೆ ಎದ್ದಿತ್ತು ಮಾರಾಯ. ಅಲ್ಲೂ ಎದ್ದಿತ್ತು’ ಆಕೆ ಸಣ್ಣದಾಗಿ ಗಹಗಹಿಸಿದಳು.
‘ನಿನ್ನ ತಲೆ ಕೆಟ್ಟು ಹೋಗಿ ಎಷ್ಟೋ ಕಾಲವಾಗಿದೆ. ನಿನ್ನ ನವೆಗಳು ನನಗೂ ಹರಡುವ ಮೊದಲು ಮಡಿಕೇರಿಗೆ ಹೊರಡು. ನಾನೇ ಬಸ್ಸು ಹತ್ತಿಸುತ್ತೇನೆ’
ಅವಳನ್ನು ಕಾರಲ್ಲಿ ಕುಳ್ಳಿರಿಸಿ ಸಬರ್ಬನ್ ಬಸ್ಸು ನಿಲ್ದಾಣದ ಕಡೆ ಕಾರು ತಿರುಗಿಸಿದೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago