ಆಂದೋಲನ ಪುರವಣಿ

ಪ್ರಥಮ ಚುಂಬನಂ ‘ಪ್ರೇಮ’ ಭಗ್ನಂ

ಬಿ.ಎನ್.ಧನಂಜಯಗೌಡ

ಒಂದು ಮುತ್ತಿನ ಕಥೆಯ ಸುತ್ತ ಮುತ್ತ

ಅವತ್ತು ಬೆಳಿಗ್ಗೆ ೧೧ ಗಂಟೆ ಇರಬೇಕು. ಅಮ್ಮನೊಂದಿಗೆ ಮಾರ್ಕೆಟ್‌ಗೆ ಹೋಗುತ್ತಿದ್ದವನು ಬೀದಿಯ ತಿರುವಿನಲ್ಲಿ ಎದುರಾದ ಅವಳನ್ನು ನೋಡಿ ಒಂದು ಸಣ್ಣ ನಗೆ ಬೀರಿದೆ. ಆಕೆಯೂ ನೋಡಿದಳಾದರೂ, ಮುಖ ಊದಿಸಿಕೊಂಡೇ, ಮೂತಿ ತಿರುವಿದಳು. ಅದು ನಿಜವಾಗಿಯೂ ಹುಸಿ ಕೋಪವಾಗಿರಲಿಲ್ಲ. ನಾನು ಕೊಂಚ ವಿಚಲಿತನಾದರೂ, ಅದೇ ನಗೆಯನ್ನು ಮುಖದಲ್ಲಿ ಕಾಯ್ದಿಟ್ಟುಕೊಂಡೆ, ಅವಳನ್ನು ಹಾಗೆ ದಿಟ್ಟಿಸಿದೆ. ಅವಳು ತನ್ನ ಕಣ್ಣುಗಳಲ್ಲಿ ಕೆಂಡ ಕಾರುತ್ತಿದ್ದಳು. ‘ನಿನ್ನ ತಪ್ಪನ್ನು ಮನ್ನಿಸಲಾರೆ’ ಎಂಬುದನ್ನು ಅವಳ ಸಿಡುಕು ಮುಖಭಾವವೇ ಹೇಳುತ್ತಿತ್ತು. ಸದ್ಯ ಈ ಕಣ್ಣಾಟಗಳನ್ನು ಅಮ್ಮ ಗಮನಿಸಲಿಲ್ಲ. ಅಲ್ಲಿಂದ ಅದ್ಯಾಕೋ ನನಗೆ ಮಾರ್ಕೆಟ್‌ಗೆ ಹೋಗಲು ಮನಸಾಗಲೇ ಇಲ್ಲ. ‘ಅಮ್ಮ, ನೀನು ಹೋಗಿ ಬಾ. ನನಗೆ ಕೊಂಚ ತಲೆ ನೋವು, ರೆಸ್ಟ್ ಮಾಡ್ಬೇಕು’ ಎಂದು ಹೇಳಿ ಸೀದಾ ಮನೆಗೆ ಹಿಂತಿರುಗಿದೆ.

ಮನೆಗೆ ಬಂದು ರೂಮಿನ ಒಳಹೊಕ್ಕು ಹಾಸಿಗೆ ಮೇಲೆ ಮಕಾಡೆ ಬಿದ್ದವನ ಮನಸಿನಲ್ಲಿ ನಾನಾ ಬಗೆಯ ತಳಮಳಗಳು, ಭಯಗಳು ಹಬೆಯಾಡಲು ಆರಂಭಿಸಿದವು. ಇನ್ನು ಅವಳ ಪ್ರೀತಿಯಿರಲಿ, ಸ್ನೇಹವನ್ನೂ ನಾನು ಪಡೆಯಲು ಸಾಧ್ಯವಿಲ್ವಾ? ಎಂಬುದನ್ನು ನೆನಪಿಸಿಕೊಂಡರೆ, ಪ್ರಶ್ನಿಸಿಕೊಂಡರೆ ಮನಸ್ಸಿಗೆ ತೀವ್ರ ಯಾತನೆಯಾಗುತ್ತಿತ್ತು. ನಾನಾದರೂ ಅವತ್ತು ನಡೆದುಕೊಂಡದ್ದು ತಪ್ಪೇ ಅಲ್ವಾ? ಎಂದು ಮನಸ್ಸು ಕೊರಗಲು ಆರಂಭಿಸಿತು.

ಐದು ತಿಂಗಳ ಹಿಂದೆ ಅದೇನಾಯಿತಂದ್ರೆ, ಅವತ್ತು ಬೆಳಿಗ್ಗೆಯಿಂದ ಹಿಡಿದಿದ್ದ ಮಳೆ ಮಧ್ಯಾಹ್ನ ೩ ಗಂಟೆ ಸಮಯದಲ್ಲಿ ಕೊಂಚ ವಿರಾಮ ಕೊಟ್ಟಿತ್ತು. ಅವಳು ಕಾಲ್ ಮಾಡಿ ‘ಹೇ..ಶಾಮ್ ಸರಸ್ವತಿಪುರಂ ಡಬ್ಬಲ್ ರೋಡ್‌ನಲ್ಲಿ ಇರೋ ಕಾಫಿ ಡೇಯಲ್ಲಿ ಸಿಗೋಣ್ವ ಸಂಜೆ’ ಎಂದಳು. ‘ಸರಿ ಬರ್ತೀನಿ..ಡಿಯರ್’ ಎಂದೆ. ಅವಳೊಂದಿಗೆ ಇರುವ ಕ್ಷಣಗಳೇ ಹಿತದಾಯಕ. ಹಾಗಾಗಿಯೇ, ಲಘುಬಗೆಯಿಂದ ಹೊರಡಲು ಸಿದ್ಧನಾದೆ. ಇಬ್ಬರೂ ಅಲ್ಲಿ ಸೇರಿದಾಗ ಸಂಜೆ ೬ ಗಂಟೆ. ನೀಲಿ ಬಣ್ಣದ ಸ್ಕರ್ಟ್, ಕಪ್ಪು ಬಣ್ಣದ ಟಾಪ್ ಹಾಕಿ ಬಂದಿದ್ದಳು. ಅಪ್ಸರೆಯಂತೆ ಕಾಣುತ್ತಿದ್ದಳು. ಆಕೆ ನಿಜವಾಗಿಯೂ ಸಹಜ ಸುಂದರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲಿನ ಅದೇ ಕಡೆ ಟೇಬಲ್‌ನಲ್ಲಿ ಕೂತು ಹೀಗೆ ಕಾಫಿ ಕುಡಿದು, ಸುಮಾರು ಅರ್ಧ ತಾಸು ಹರಟಿ, ಹೊರ ಬಂದವು. ಹೀಗೆ ಅದೇ ರಸ್ತೆಯಲ್ಲಿ ಅವಳೇ ನನ್ನ ಕೈಹಿಡಿದು ನಡೆಯತೊಡಗಿದಳು. ನಾನು ಬೇಕೆಂದೇ ಅವಳ ಭುಜಕ್ಕೆ ಭುಜ ತಾಕಿಸಿ ನಡೆಯುತ್ತಿದ್ದೆ. ತುಸು ದೂರ ನಡೆಯುತ್ತಿದ್ದಂತೆ ಈ ನನ್ನ ಹಾಳು ಮನಸ್ಸಿಗೆ ಹೀಗ್ಯಾಕೆ ಅನ್ನಿಸಿತೋ, ಗೊತ್ತಿಲ್ಲ. ಅತ್ತಿತ್ತ ನೋಡಿ, ಯಾರೂ ನಮ್ಮನ್ನು ನೋಡುತ್ತಿಲ್ಲ ಎಂಬುದು ಖಾತ್ರಿ ಪಡಿಸಿಕೊಂಡು, ಅವಳ ಕೆನ್ನೆಗೊಂದು ಮುತ್ತನಿಟ್ಟು ನಕ್ಕು ಹೇಗಿದೆ ಎಂದೆ. ತಕ್ಷಣ ಒಂದೇ ಒಂದು ಹೆಜ್ಜೆಯನ್ನೂ ಮುಂದಡಿಯಿಡದ ಅವಳು, ಹಿಡಿದ ಕೈಯನ್ನು ಕಿತ್ತು, ‘ಥೂ’ಎಂದು ಸಿಡುಕಿ ಹೊರಟು ಬಿಟ್ಟಳು. ಹಾಗೆ ಹೊರಟವಳನ್ನು ತಡೆಯುವ ಅವಕಾಶವೂ ನನಗೆ ಸಿಗಲಿಲ್ಲ. ಇರಲಿ, ‘ರಾತ್ರಿಗೆ ಕಾಲ್ ಮಾಡಿ ಸಾರಿ ಕೇಳಿ ಸಮಾಧಾನ ಮಾಡಿದ್ರೆ ಆಯ್ತು. ಸರಿ ಹೋಗ್ತಾಳೆ’ ಎಂದು ಮನೆಗೆ ಬಂದವನೇ, ರಾತ್ರಿ ೮ ಗಂಟೆ ಹೊತ್ತಿಗೆ ಕಾಲ್ ಮಾಡಿದೆ. ಪಿಕ್ ಮಾಡಲಿಲ್ಲ. ಮತ್ತೆರಡು ಬಾರಿ ಮಾಡಿದೆ. ಸ್ವಿಚ್ ಆಫ್ ಆಗಿತ್ತು. ಇಡೀ ರಾತ್ರಿ ನಿದ್ದೆ ಹಾಳಾಯ್ತು. ಇನ್ನು ಎಷ್ಟೇ ಪ್ರಯತ್ನಿಸಿದರೂ ಆಕೆ ಸಂಪರ್ಕಕ್ಕೆ ಸಿಗಲಿಲ್ಲ.

ಐದಾರು ದಿನ ಬಿಟ್ಟು ಹೀಗೊಂದು ವಾಟ್ಸ್‌ಅಪ್ ಮೆಸೇಜ್ ಹಾಕಿದೆ:

ಹೇ, ರಮ್ಯಾ..ನಾನು ಅವತ್ತು ಹಾಗೇ ಮಾಡಬಾರದಿತ್ತು. ಆದರೂ, ನನ್ನ ಹುಡುಗಿಯಲ್ವಾ ಏನಾಗುತ್ತೆ? ಎಂದು ಭಾವಿಸಿ, ಹಾಗೊಂದು ಮುತ್ತು ಕೊಟ್ಟುಬಿಟ್ಟೆ. ನೀನಿಷ್ಟು ಕೋಪ ಮಾಡ್ಕೋತಿಯಾ ಅಂತ ನಾನು ಊಹಿಸಿಯೇ ಇರಲಿಲ್ಲ. ನಿನ್ನ ಭಯಂಕರ ಮುನಿಸನ್ನು ಸಹಿಸಲಾರೆ. ಮನಸಿಗೆ ಗಾಢ ಹಿಂಸೆ ಎನ್ನಿಸಿದೆ. ನಿನ್ನ ನೋಡಲು ಕಾತುರನಾಗಿದ್ದೀನಿ, ಬೇಕಾದ್ರೆ ನಿನಗಿರುವ ಅಷ್ಟೂ ಕೋಪವನ್ನು ಹೊಡದೆ ತೀರಿಸಿಕೊಳ್ಳಬಹುದು. ಈ ಉಗ್ರ ಮುನಿಸನ್ನು ತೊರೆದು ಬಾ. ನಮ್ಮ ಕಾಯಂ ಕಾಫಿ ತಾಣದಲ್ಲಿ ಅದೇ ಕಡೆ ಟೇಬಲ್‌ನಲ್ಲಿ ಕೂತು ಬಿಸಿಕಾಫಿಯ ಹಬೆಗೆ ಮುಖವೂಡ್ಡಿ, ಕಾಫಿ ಹೀರುತ್ತಾ, ಮನಬಿಚ್ಚಿ ಮಾತನಾಡುವ. ನಿನ್ನ ಅನುಮತಿಯಿಲ್ಲದೆ ಮತ್ತೆಂದೂ ಮುತ್ತನ್ನು ಮಾತ್ರವಲ್ಲ, ಮುಟ್ಟುವುದೂ ಇಲ್ಲ. ಪ್ಲೀಸ್ ಕ್ಷಮಿಸುತ್ತೀಯಾ?

ಇದಕ್ಕವಳು ‘ಪ್ಲೀಸ್ ಲೀವ್ ಮಿ ಅಲೋನ್’ ಎಂದಷ್ಟೇ ಪ್ರತಿಕ್ರಿಯಿಸಿದ್ದಳು. ಈಗ ೫ ತಿಂಗಳ ನಂತರ ಹೀಗೆ ಬೀದಿಯ ತಿರುವಿನಲ್ಲಿ ಒಬ್ಬಂಟಿಯಾಗಿಯೇ ಎದುರಾದವಳಲ್ಲಿ ಇನ್ನು ಅದೇ ಕೋಪ ಹಾಗೆ ಇದೆ ಎಂದರೇ, ಒಂದು ಮುತ್ತೇ ನಮ್ಮ ಪ್ರೀತಿ, ಸ್ನೇಹಕ್ಕೆ ಪರಮ ಶತ್ರುವಾಯಿತ್ತಲ್ಲಾ? ಎಂಬುದು ಸಹಿಸಲಾಗದ ಮಹಾ ಸಂಕಟ.

 

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

9 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago