ಆಂದೋಲನ ಪುರವಣಿ

ರಾಷ್ಟ್ರೀಯ ಶಿಕ್ಷಣ ನೀತಿ ಇಂದಿಗೆ ಅತ್ಯಗತ್ಯ : ಡಾ. ಗುರುರಾಜ ಕರ್ಜಗಿ ಸಂದರ್ಶನ

ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಸಂದರ್ಶನ; ವಿದ್ಯಾರ್ಥಿಗಳ ಸವಾಲು, ಸಾಧ್ಯತೆಗಳ ಅನಾವರಣ

ಸದ್ಯ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಶಿಕ್ಷಣ, ಅವರ ನಡವಳಿಕೆಗಳು, ಆಧುನಿಕ ತಂತ್ರಜ್ಞಾನಗಳು ಅವರ ಮೇಲೆ ಬೀರುತ್ತಿರುವ ಪರಿಣಾಮಗಳೆಲ್ಲದರ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಡಿಜಿಟಲ್ ಜಗತ್ತಿನಲ್ಲಿ ಅತಿ ಬೇಗ ಮುಳುಗಿಹೋಗುವ ಅವಕಾಶ ಇರುವ ಹೊತ್ತಿನಲ್ಲಿ ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕಾದುದು ಪೋಷಕರು, ಶಿಕ್ಷಕರ ಹಾದಿಯಾಗಿ ಎಲ್ಲರ ಜವಾಬ್ದಾರಿ.

ಈ ಬಗ್ಗೆ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಮಾತನಾಡಿದ್ದಾರೆ. 

ಸಂದರ್ಶನ: ಜಯಶಂಕರ್‌ ಬದನಗುಪ್ಪೆ 

ಇಂದಿನ ಯುವ ಸಮುದಾಯದ ಚಿತ್ತ ಯಾವ ಕಡೆಗಿದೆ?
ಎಲ್ಲ ಕಾಲದಲ್ಲಿಯೂ ಏರುಪೇರುಗಳು ಇದ್ದದ್ದೇ. ಇಂದಿನ ಯುವಕರು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದಾರೆ. ಕೆಲವಾರು ಮಂದಿ ತಪ್ಪು ಹಾದಿ ಹಿಡಿದಿದ್ದಾರೆ ಎಂದರೆ ಅದಕ್ಕೆ ಪೋಷಕರು, ಗುರುಗಳು ಮತ್ತು ಸಮಾಜವೇ ನೇರ ಕಾರಣ. ಹೀಗಾಗಿ ಮಕ್ಕಳನ್ನು ತೆಗಳುವುದು ಸರಿಯಲ್ಲ. ಅವರಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವುದು ಪೋಷಕರ ಜವಾಬ್ದಾರಿ. ನನ್ನ ಪ್ರಕಾರ ಮಕ್ಕಳು ಸರಿಯಾಗಿಯೇ ಇದ್ದಾರೆ. ಅವರು ಸರಿಯಾಗಿಲ್ಲ ಎಂದರೆ ಪೋಷಕರು ಸೋತಿದ್ದಾರೆ ಎಂದೇ ಅರ್ಥ. ಮಕ್ಕಳ ಪ್ರಶ್ನೆಗಳಿಗೆ ಸರಿಯಾದ ಉತ್ತ ಕೊಡಲು ನಾವು ಸದಾ ಸಿದ್ಧವಿರಬೇಕಷ್ಟೆ.

ಗುಣಾತ್ಮಕ ಶಿಕ್ಷಣದ ಕುರಿತಾದ ನಿಮ್ಮ ಆಶಯ ಈಡೇರಿದೆಯೇ?
ಯಶಸ್ಸು ಸಿಕ್ಕಿದ ತೃಪ್ತಿ ಇದೆ. ಪರಿವರ್ತನೆ ಕ್ಷಣಿಕವಾದುದಲ್ಲ, ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಮೌಲ್ಯಗಳ ಹೆಜ್ಜೆಗಳು ಹಿನ್ನೋಟದಲ್ಲಿ ಕಾಣುವಂತದ್ದು. ಒಳ್ಳೆಯದನ್ನು ನಾವು ನಿರಂತರವಾಗಿ ಹೇಳುತ್ತಾ ಹೋಗಬೇಕು, ಆಗ ನಾವು ಹೇಳುವುದು ಕೇಳಿಸಿಕೊಳ್ಳುವವರ ಮೇಲೆ ಪರಿಣಾಮ ಬೀರುತ್ತದೆ. ನನ್ನ ಪ್ರಯತ್ನ ಪರಿಣಾಮ ಬೀರಿದೆ. ಒಳ್ಳೆಯ ಹಾದಿಯತ್ತ ಪರಿವರ್ತನೆಯ ನಂಬಿಕೆಯೂ ನನಗಿದೆ. ಉತ್ತಮವಾದುದನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುತ್ತಾ ಹೋಗಬೇಕು. ೫೦ ವರ್ಷ ನಾನೂ ಸಹ ಮೇಷ್ಟ್ರುಗಿರಿ ಮಾಡಿದ್ದೇನೆ. ಹಲವರು ನನ್ನಲ್ಲಿ ಬಂದು ತಾವು ಈಗ ಉತ್ತಮ ಬದುಕು ರೂಪಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ನನ್ನ ಪ್ರಯತ್ನ ಫಲ ನೀಡುತ್ತಿದೆ. ಇದಕ್ಕಿಂತ ತೃಪ್ತಿ ಬೇರಾವುದಿದೆ ಹೇಳಿ.

ಸದ್ಯದ ಓದುವ ಸಂಸ್ಕೃತಿಯ ಬಗ್ಗೆ ನಿಮ್ಮ ಅಭಿಪ್ರಾಯ?
ಓದುವ ಸಂಸ್ಕೃತಿ ಕ್ಷೀಣಿಸಿದೆ ಎಂದು ನನಗನ್ನಿಸುವುದಿಲ್ಲ. ಕಾಲ ಬದಲಾದ ಹಾಗೆ ಓದುವ ವಿಧಾನಗಳೂ ಬದಲಾಗಿವೆ. ಹಾಗೆಯೇ ಓದಿನ ಆಕರಗಳೂ ಬದಲಾಗಿವೆ. ಇಂದು ಓದಲು, ಜ್ಞಾನ ಸಂಪಾದನೆ ಮಾಡಿಕೊಳ್ಳಲು ಸಾಕಷ್ಟು ದಾರಿಗಳಿವೆ. ಯಾವುದಾದರೂ ಉತ್ತಮ ದಾರಿಯಲ್ಲಿ ಸಾಗಿ ಜ್ಞಾನ ಸಂಪಾದನೆ ಮಾಡಿಕೊಂಡರೆ, ಅದನ್ನು ಸ್ವ ಮತ್ತು ಸಮಾಜದ ಒಳಿತಿಗಾಗಿ ಬಳಸಿಕೊಂಡರೆ ಯುವ ಜನತೆ ಯಶಸ್ಸಿನ ಕಡೆಗೆ ಸಾಗಿದಂತೆಯೇ.

ಅತಿಯಾದ ಮೊಬೈಲ್ ಬಳಕೆ ಯುವಶಕ್ತಿಯ ಮೇಲೆ ಪರಿಣಾಮ ಬೀರುತ್ತಿದಿಯೇ?
ಇದಕ್ಕೆ ಉತ್ತರವಾಗಿ ಹೌದು ಅಥವಾ ಇಲ್ಲ ಎನ್ನುವ ಎರಡೂ ಅಭಿಪ್ರಾಯಗಳನ್ನೂ ಪರಿಗಣಿಸಬೇಕಾಗುತ್ತದೆ. ಮಕ್ಕಳ ಮನಸ್ಸು ಚಂಚಲ. ಕಳೆದ ಎರಡು ವರ್ಷಗಳಿಂದ ಮೊಬೈಲ್ ಬಳಕೆ ಹೆಚ್ಚಾಗಿದೆ. ಕೊರೊನಾ ಸಂದರ್ಭದಲ್ಲಿ ಮೊಬೈಲ್‌ಗಳೇ ಸಂವಹನಕ್ಕೆ ಬಹುಮುಖ್ಯ ಸಾಧನಗಳೆನಿಸಿದ್ದವು. ಆ ಸಂದರ್ಭದಲ್ಲಿ ಮೊಬೈಲ್ ಅಡಿಕ್ಷನ್ ಹೆಚ್ಚಾಯಿತು. ತಾಂತ್ರಿಕತೆ ಪರಿವರ್ತನೆಯಾಗಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಒಳ್ಳೆಯ ಕೆಲಸಕ್ಕೂ ಬಳಕೆಯಾಗುತ್ತಿದೆ. ಇನ್ನು ಹತ್ತು ವರ್ಷಗಳಲ್ಲಿ ಮೊಬೈಲ್‌ಗಿಂತ ಮಿಗಿಲಾದ ತಂತ್ರಜ್ಞಾನ ಬರಲಿದೆ. ಕೈಯಲ್ಲೇ ಮೈಕ್ರೋ ಚಿಪ್ ಅಳವಡಿಸುವ ತಾಂತ್ರಿಕತೆ ಬರಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಸ್ವರೂಪದ ಬಗ್ಗೆ ನಿಮ್ಮ ಅಭಿಪ್ರಾಯ?
ರಾಷ್ಟ್ರೀಯ ಶಿಕ್ಷಣ ನೀತಿ ಇಂದು ದೇಶಕ್ಕೆ ಅತ್ಯಗತ್ಯವಾಗಿದೆ. ಶಿಕ್ಷಣದಲ್ಲಿ ಪ್ರೀ ಪ್ರೈಮರಿ ಹಂತ ಬಹಳ ಮುಖ್ಯ. ವೃತ್ತಿ ಕೌಶಲ ಆಯ್ಕೆಗೆ ಇಲ್ಲಿ ಅವಕಾಶವಿದೆ. ಕೃಷಿ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ಕರಕುಶಲ, ಸಂಗೀತ, ಆಟೋಮೊಬೈಲ್ ಹೀಗೆ ಪ್ರತಿಯೊಂದು ವಿಷಯವನ್ನೂ ಈ ಶಿಕ್ಷಣ ನೀತಿ ಒಳಗೊಂಡಿದೆ. ಪ್ರತಿಯೊಬ್ಬರಿಗೂ ಆಸಕ್ತ ವಿಷಯವನ್ನು ಆಯ್ಕೆಮಾಡಿಕೊಂಡು ಅಧ್ಯಯನ ಮಾಡಲು ಅವಕಾಶ ಕಲ್ಪಿಸುತ್ತದೆ. ಹಿಂದೆ ಯಾವುದೋ ಒಂದು ವಿಷಯದಲ್ಲಿ ಆಸಕ್ತಿ ಇಲ್ಲದೆ ಹಿಂದುಳಿದ ವಿದ್ಯಾರ್ಥಿಗಳನ್ನು ದಡ್ಡರೆಂದು ಪರಿಗಣಿಸಲಾಗುತ್ತಿತ್ತು. ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯಲ್ಲಿ ಈ ರೀತಿಯ ಹೀಗಳೆಯುವಿಕೆಗೆ ಅವಕಾಶವಿರುವುದಿಲ್ಲ. ಅವರ ಆಯ್ಕೆಗೆ ವಿಪುಲ ಅವಕಾಶಗಳಿವೆ.

ಕೃಷಿ ಸಂಬಂಧಿ ಪಠ್ಯವನ್ನು ಪ್ರಾಥಮಿಕ ಹಂತದಲ್ಲಿಯೇ ಅಳವಡಿಸುವುದು ಸೂಕ್ತವೇ?
ಬೇರೆ ದೇಶಗಳಲ್ಲಿ ಶೇ. ೮೦ ರಷ್ಟು ವೃತ್ತಿ ಶಿಕ್ಷಣ ಕೌಶಲಕ್ಕೆ ಆದ್ಯತೆ ನೀಡಲಾಗಿದೆ. ಕೃಷಿ ಕೌಶಲ ವಿಷಯಕ್ಕೂ ಅವಕಾಶ ಸಿಗಬೇಕು. ಅದರಲ್ಲಿ ಆಸಕ್ತಿ ಇರುವವರು ಅದನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಲು ಅವಕಾಶ ನೀಡಬೇಕು.

ನೈತಿಕ ಶಿಕ್ಷಣ ಇಂದಿನ ಅವಶ್ಯಕತೆಯಾ?
ಶಿಕ್ಷಣ ಎಂದರೆ ನೈತಿಕತೆ. ಎರಡೂ ಒಂದಕ್ಕೊಂದು ಪೂರಕವಾದ ವಿಷಯಗಳು. ನಾವು ಮಕ್ಕಳಿಗೆ ನೀಡುವ ಶಿಕ್ಷಣ ಸಂಸ್ಕಾರ, ಸಂಸ್ಕೃತಿ, ದೇಶಭಕ್ತಿ, ಹಿರಿಯರನ್ನು ಗೌರವಿಸುವ ಪ್ರವೃತ್ತಿ ಎಲ್ಲವನ್ನೂ ಒಳಗೊಂಡಿರಬೇಕು. ಶಿಕ್ಷಣವನ್ನು ವ್ಯಾಪಾರಿ ಮನೋಭಾವದಿಂದ ನೋಡಬಾರದು. ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು.

ಪ್ರಸ್ತುತ ಶಿಕ್ಷಣ ಮಕ್ಕಳಿಗೆ ಹೊರೆ ಅನಿಸುತ್ತಿದೆಯಾ?
ಈಗಿನದು ಸೈದ್ಧಾಂತಿಕ ಓದು. ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣದ ಅಗತ್ಯವಿದೆ. ವೃತ್ತಿ ಶಿಕ್ಷಣದ ಹೆಸರಿನಲ್ಲಿ ಶಿಕ್ಷಣದ ವ್ಯಾಪಾರೀಕರಣ ಸಲ್ಲದು. ಶಿಕ್ಷಣದಲ್ಲಿ ಉತ್ತಮ ಚಿಂತನೆಗಳನ್ನು ಅಳವಡಿಸುವುದು ಬಹಳ ಮುಖ್ಯ. ಶಿಕ್ಷಣ ಮಕ್ಕಳನ್ನು ದೇಶ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರೋತ್ಸಾಹಿಸುವಂತಿರಬೇಕು.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago