ಆಂದೋಲನ ಪುರವಣಿ

ಸಕ್ಕರೆ ನಾಡಿನಲ್ಲಿ ಅಕ್ಷರದ ಪರಿಮಳ

ಡಾ. ಶುಭಶ್ರೀ ಪ್ರಸಾದ್‌

ಮಂಡ್ಯದಲ್ಲಿ ನಡೆಯಲಿರುವ 67ನೆಯ ಅಖಿಲ ಭಾರತ ಕನ್ನ ಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಮೂರು ತಿಂಗಳಷ್ಟೆ ಬಾಕಿ ಇದೆ. ಇಡೀ ಮಂಡ್ಯ ಜಿಲ್ಲೆ ಮೈಕೊಡವಿಕೊಂಡು ನಿಂತಿದೆ.

ಅದು 1990 ಮೈಸೂರಿನಲ್ಲಿ ನಡೆದ 60ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. “ವೆಂಕಮ್ಮ ಎಲ್ಲಿ, ನನ್ ವೆಂಕಮ್ಮ ಎಲ್ಲಿದ್ದಾಳೆ? ” ಎಲ್ಲೋ ಕಾಣುತ್ತಿಲ್ಲ. ಎಲ್ಲಿದ್ದಾಳೆ? ಎಲ್ಲಿದ್ದಾಳೆ? ಎಂದು ಮೈಸೂರು ಮಲ್ಲಿಗೆಯ ಕವಿ ಕೆ. ಎಸ್. ನರಸಿಂಹಸ್ವಾಮಿ ಇತ್ತ ಹುಡುಕಾಡುತ್ತಿದ್ದರೆ ಅತ್ತ ಮೈಕಿನಲ್ಲಿ, ‘ಸಮ್ಮೇಳನಾಧ್ಯಕ್ಷರಾದ ಶ್ರೀ ಕೆ. ಎಸ್. ನರಸಿಂಹಸ್ವಾಮಿ ಅವರ ಪತ್ನಿ ಇಲ್ಲೆಲ್ಲೂ ಕಾಣುತ್ತಿಲ್ಲ ದಯಮಾಡಿ ಯಾರಾದರೂ ಅವರನ್ನು ವೇದಿಕೆಯ ಬಳಿಗೆ ಕರೆತರತಕ್ಕದ್ದು’ ಎನ್ನುವ ಘೋಷಣೆ ಕಿವಿಗೆ ಬಿತ್ತು.

ಅರೆ. . ! ಅಧ್ಯಕ್ಷರು ಪತ್ನಿಯನ್ನು ಹುಡುಕುತ್ತಿದ್ದಾರೆಯೇ? ಕೆಲ ಕ್ಷಣಗಳು ಕಾಣದ್ದಕ್ಕೆ ಪರಿತಪಿಸಿದ ಆ ಹಿರಿಯ ಜೀವದ ದಾಂಪತ್ಯದ ಸವಿ ಎಂಥದ್ದಿರಬೇಕೆಂದು ಅಂದು ಅಲ್ಲಿದ್ದ ಎಲ್ಲರಿಗೂ ತಿಳಿಯಿತು. ಅಂತಹ ದಾಂಪತ್ಯದ ಸಾಂಗತ್ಯ ಅನುಭವಿಸಿದ್ದರಿಂದಲೇ ಅವರಿಂದ ಮೈಸೂರು ಮಲ್ಲಿಗೆಯಂಥ ಅನುರೂಪದ ಕವಿತೆಗಳು ಹೊರಹೊಮ್ಮಿದ್ದು. ನಾನಾಗ ಪದವಿ ತರಗತಿಯಲ್ಲಿ ಓದುತ್ತಿದ್ದೆ. ಇಡೀ ಸಮ್ಮೇಳನದ ತುಂಬಾ ನಾನು ಹಾಗೂ ನನ್ನ ಕನ್ನಡ ಮೇಜರ್ ಗೆಳತಿಯರು ಕೈ ಕೈ ಹಿಡಿದುಕೊಂಡು ಓಡಾಡಿದ್ದೇ ಓಡಾಡಿದ್ದು. ಮೈಸೂರು ಮಲ್ಲಿಗೆಯ ಕವಿ ಎಂಬ ಖುಷಿ ಒಂದು ಕಡೆ; ಸ್ವಲ್ಪ ಬುದ್ಧಿ ತಿಳಿದ ಮೇಲೆ ಪಾಲ್ಗೊಂಡ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವಾದ್ದರಿಂದ ಮತ್ತು ಐಚ್ಛಿಕ ಕನ್ನಡದ ವಿದ್ಯಾರ್ಥಿಗಳು ಎಂಬ ಕಿರೀಟ ಹೊತ್ತು ನಾವೇನೋ ಮಹಾ ಸಾಹಿತಿಗಳು ಎಂಬಂಥ ಹೆಮ್ಮೆ ಮತ್ತೊಂದೆಡೆ.

ಮೈಸೂರು ತುಂಬೆಲ್ಲ ಮಲ್ಲಿಗೆಯ ಘಮ ತುಂಬಿತ್ತು. ಅಂತೆಯೇ ಸಾಹಿತ್ಯದ ಕಂಪು ಪಸರಿಸಿತ್ತು. ಅದು ೧೯೯೪ ಸಾಹಿತಿ ಚದುರಂಗರ ಅಧ್ಯಕ್ಷತೆಯಲ್ಲಿ ಮಂಡ್ಯದಲ್ಲಿ ೬೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಮಂಡ್ಯದ ಸ್ಟೇಡಿಯಂ ಆವರಣದಲ್ಲಿ ನಡೆದ ಆ ಸಮ್ಮೇಳನಕ್ಕೆಂದು ಅದೇ ಸ್ವಲ್ಪ ಸಮಯದ ಹಿಂದೆ ಕೆಲಸಕ್ಕೆ ಸೇರಿದ್ದ ನಾನು ರಜೆ ಹಾಕಿ, ಸ್ಟೇಡಿಯಂ ತುಂಬಾ ಓಡಾಡಿದ್ದೆ. ಆಗ ಅರಿವಾದ ಒಂದು ವಿಷಯ ಸಮ್ಮೇಳನ ಎನ್ನುವುದು ಸಾಹಿತಿಗಳ ಸಮ್ಮಿಲನವೂ ಹೌದು; ಅನೇಕ ಹೊಸ ಹೊಸ ವಿಚಾರಗಳ ಅರಿವೂ ಹೌದು ಮತ್ತು ಪುಸ್ತಕ ಪ್ರೇಮಿಗಳಿಗೆ ರಸದೌತಣವೂ ಹೌದು ಎಂಬುದು.

ಆಗ ನಾನು ಎಷ್ಟೋ ಪುಸ್ತಕಗಳನ್ನು ಖರೀದಿಸಿದ್ದ ನೆನಪು ಮತ್ತು ಸಮ್ಮೇಳನದ ಬಹುತೇಕ ಎಲ್ಲಾ ಗೋಷ್ಠಿಗಳ ಕಡೆಗೂ ಕಿವಿ ಕೊಟ್ಟ ನೆನಪು. ಮೂವತ್ತು ವರ್ಷಗಳ ನಂತರ ನಮ್ಮ ಜಿಲ್ಲೆಯಲ್ಲಿ ಇದೇ ಡಿಸೆಂಬರ್ ನಾಲ್ಕನೇ ವಾರದ ಕೊನೆಯ ಮೂರು ದಿನಗಳಂದು ೮೭ನೇ ಸಾಹಿತ್ಯ ಸಮ್ಮೇಳನ. ಇಡೀ ಮಂಡ್ಯ ಜಿಲ್ಲೆ ಮೈಕೊಡವಿಕೊಂಡು ನಿಂತಿದೆ. ಎಲ್ಲೋ ಒಂದು ಸಣ್ಣ ತೂಕಡಿಕೆ ಕಂಡ ಅನೇಕ ವಲಯಗಳು ಬೆಚ್ಚಿ ಎದ್ದ ಹಾಗೆ ಕಾಣುತ್ತಿದೆ. ಹಾಗೆ ನೋಡಿದರೆ ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕ ತಿಕ ಚಟುವಟಿಕೆಗಳಿಗೆ ಏನೇನೂ ಕೊರತೆ ಇಲ್ಲ. ಯಾವಾಗಲೂ ಒಂದಿಲ್ಲೊಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ.

ಆದರೆ ಅಖಿಲ ಭಾರತ ಸಮ್ಮೇಳನ ಒಂದು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದೆ ಎನ್ನುವಾಗ ಉಂಟಾಗುವ ನವಿರು ಭಾವವೇ ಬೇರೆ. ಕಳೆದೆರಡು ತಿಂಗಳುಗಳಿಂದ ಅನೇಕ ಸಮಿತಿಗಳು ರಚನೆಯಾಗುತ್ತಿವೆ. ಆ ಸಮಿತಿಯಲ್ಲಿ ಯಾರ‍್ಯಾರು ಇರಬೇಕು ಎಂಬ ಚರ್ಚೆಗಳ ನಡುವೆ ಜಿಲ್ಲೆಯ ಬಹುತೇಕ ಸಾಹಿತಿಗಳು ಒಂದಲ್ಲೊಂದು ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪುಸ್ತಕ ಆಯ್ಕೆ ಸಮಿತಿ, ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಆಹಾರ ಸಮಿತಿ, ಸಾಂಸ್ಕ ತಿಕ ಸಮಿತಿ, ನೈರ್ಮಲ್ಯ ಸಮಿತಿ. . .

ಹೀಗೆ ಅನೇಕಾನೇಕ ಸಮಿತಿಗಳು ಕೆಲಸವನ್ನು ಆರಂಭಿಸಿವೆ. ಆದರೆ ಸಮ್ಮೇಳನ ಇನ್ನೂ ಮೂರು ತಿಂಗಳು ಇದೆ ಎನ್ನುವಾಗ ನಿಧಾನ ಗತಿಯಲ್ಲಿ ಸಾಗುವ ಚಟುವಟಿಕೆಗಳು ಇನ್ನೇನು ತಿಂಗಳಿದೆ ಎನ್ನುವಾಗ ಗರಿಗೆದರುತ್ತವೆ. ಕೊನೆಯ ಗಳಿಗೆಯಲ್ಲಿ ಚಾಟಿ ಹಿಡಿದು ಕುದುರೆಯನ್ನು ಓಡಿಸುವ ರೀತಿಯಲ್ಲಿ ನಡೆಯುವ ಚಟುವಟಿಕೆಗಳು ಬೇರೆಯೇ. ಸಮ್ಮೇಳನ ನಡೆಯುವ ಸ್ಥಳ ಎಲ್ಲಿ? ಯಾವ ಬಗೆಯ ಆಹಾರವನ್ನು ಉಣಬಡಿಸಬೇಕು ಎಂಬ ಚರ್ಚೆ ಒಂದೆಡೆಯಾದರೆ, ಇಡೀ ಮಂಡ್ಯ ಜಿಲ್ಲೆಯ ಸಂಸ್ಕತಿಯನ್ನು ಎತ್ತಿ ಹಿಡಿಯಬೇಕು ಅಂತಹ ಕಲಾತಂಡಗಳು ಸಿದ್ಧವಾಗಬೇಕು ಎಂಬ ಮಾತು ಮತ್ತೊಂದೆಡೆ. ಯಾವ ಯಾವ ಗೋಷ್ಠಿ ಇರಬೇಕು? ಯಾವ ಗೋಷ್ಠಿಯಲ್ಲಿ ಯಾವ ವಿಚಾರ ಚರ್ಚೆ ಆಗಬೇಕು ಎಂಬುದರ ಬಗ್ಗೆ ಜಿಲ್ಲೆಯ ಸಾಹಿತಿಗಳು ತಮ್ಮ ತಮ್ಮಲ್ಲಿ ಚರ್ಚಿಸುತ್ತಿದ್ದಾರೆ.

ಮಂಡ್ಯ ಹೇಳಿಕೇಳಿ ಕೃಷಿಯ ತವರೂರು. ಹಾಗಾಗಿ ಮಂಡ್ಯ ಜಿಲ್ಲೆಯ ಕೃಷಿಯನ್ನು ಎತ್ತಿ ಹಿಡಿಯುವ ಅನೇಕ ಚಿತ್ರಗಳು ಸಿದ್ಧವಾಗುತ್ತಿವೆ. ವೀರಗಾಸೆ, ಪಟ ಕುಣಿತ, ಕಂಸಾಳೆಗಳಂತಹ ಜನಪದ ಕಲೆಗಳು ಕೂಡ ಈ ನೆಲದ ಸೊಗಡನ್ನು ಬಿಂಬಿಸಲು ಸಜ್ಜಾಗುತ್ತಿವೆ. ಆ ಕಲಾವಿದರೆಲ್ಲ ಇಂತಹ ಸುಂದರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ರಾಜಕೀಯವೇ ಉಸಿರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಈಗ ಸಮ್ಮೇಳನದ ನೆಪದಲ್ಲಿ ಸಾಹಿತ್ಯವೂ ಗಟ್ಟಿಯಾಗಿ ಉಸಿರಾಡುತ್ತಿದೆ. ಮಂಡ್ಯದ ಖದರ್ರು ಎಲ್ಲರಿಗಿಂತ ಭಿನ್ನ. ಗಂಡುಬೀಡಿನಲ್ಲಿ ಸಾಹಿತ್ಯದಂತಹ ಸೂಕ್ಷ್ಮಕಲಾಪ್ರಕಾರ ಮೈದುಂಬಿ ನಲಿದಾಡಲಿದೆ. ಸಮ್ಮೇಳನ ಎಂದರೆ ಕೇವಲ ಸಾಹಿತ್ಯ ಚರ್ಚೆ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿ ಅನೇಕ ಕಾರ್ಯ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ.

ಹೊಸ ಹೊಸ ಉದ್ದಿಮೆಗಳು ಹಾಗೂ ಅನೇಕ ಸಣ್ಣಪುಟ್ಟ ವ್ಯಾಪಾರಿಗಳ ಬದುಕನ್ನು ಮತ್ತೊಂದು ಮಜಲಿಗೆ ಕೊಂಡೊಯ್ದುಬಿಡುತ್ತದೆ ಎಂಬ ಆಶಾ ಗೋಪುರ ತಲೆಯೆತ್ತುತ್ತಿದೆ. ಹೋಟೆಲ್ ಉದ್ಯಮ ಚೇತರಿಸಿಕೊಳ್ಳುವ ಲಕ್ಷಣ ಕಂಡುಬರುತ್ತಿದೆ. ಇನ್ನು ಬೇರೆ ಬೇರೆ ಊರುಗಳಿಂದ ಬರುವ ಸ್ನೇಹಿತರನ್ನು ಮತ್ತು ಬಂಧು ಗಳನ್ನು ಹೇಗೆಲ್ಲಾ ಸತ್ಕರಿಸಬೇಕು, ಸುತ್ತ ಮುತ್ತ ಎಲ್ಲೆಲ್ಲಿ ಕರೆದುಕೊಂಡು ಸುತ್ತಿಸ ಬೇಕೆಂಬ ಯೋಜನೆ ರೂಪಿಸುತ್ತಿರುವ ಹೊತ್ತಿನಲ್ಲಿ ಜಿಲ್ಲೆಯ ಪ್ರವಾಸೋ ದ್ಯಮವೂ ಚಿಗುರಿ ನಳನಳಿಸುತ್ತದೆ.

ಲಕ್ಷೋಪಲಕ್ಷ ಜನ ನಮ್ಮೂರಿಗೆ ಆಗಮಿಸುವುದರಿಂದ ನಮ್ಮೂರು ಇಂದ್ರನ ಅಮರಾವತಿಯಂತೆ ಕಾಣಬೇಕೆಂಬುದು ಇಡೀ ರಾಜ್ಯದಲ್ಲಿ ಕನ್ನಡವನ್ನು ಅತಿ ಹೆಚ್ಚು ಮಾತನಾಡುವ ಜನರಿರುವ ಮಂಡ್ಯದ ಕನಸು. ಅನೇಕ ಹೆಣ್ಣು ಮಕ್ಕಳು, ಈಗಾಗಲೇ ತಮ್ಮ ಮನೆಯ ಮದುವೆ, ಗೃಹಪ್ರವೇಶಗಳಂತಹ ದೊಡ್ಡ ಸಮಾರಂಭಗಳಲ್ಲಿ ಹೇಗೆ ಸಡಗರದಿಂದ ತೊಡಗಿಸಿಕೊಳ್ಳುತ್ತಾರೋ ಆ ರೀತಿ ಸಡಗರದಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಂಭ್ರಮ ತೋರುತ್ತಿದ್ದಾರೆ. ಪೂರ್ಣಕುಂಭ ಸ್ವಾಗತಕ್ಕೆ ನಿಲ್ಲುವ ಸಾವಿರಾರು ಹೆಣ್ಣುಮಕ್ಕಳು ಬಣ್ಣಬಣ್ಣದ ಕನಸು ಹೆಣೆಯುತ್ತಿದ್ದಾರೆ. ಆ ಮೂರು ದಿನಗಳಂದು ಮಂಡ್ಯದ ಹೆಣ್ಣು ಮಕ್ಕಳನ್ನು ನೋಡಬೇಕು. ಮಿರಿಮಿರಿ ಮಿಂಚುವ ಜರತಾರಿ ಸೀರೆಯುಟ್ಟು, ಮೈಸೂರು ಮಲ್ಲಿಗೆ ಮುಡಿದು, ಬಣ್ಣ ಬಣ್ಣದ ಬಳೆಗಳ ತೊಟ್ಟು ತಮ್ಮ ಮನೆಯ ಶುಭ ಸಮಾರಂಭವೇನೋ ಎನ್ನುವ ಹಾಗೆ ಊರೆಲ್ಲ ಓಡಾಡುವ ಸಂಭ್ರಮವನ್ನು ನೋಡುವುದೇ ಒಂದು ಸೊಗಸ

 

andolana

Recent Posts

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

38 mins ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

42 mins ago

ಓದುಗರ ಪತ್ರ: ಪತ್ರಿಕಾ ವಿತರಕರಿಗೆ ಬೆಚ್ಚನೆಯ ಉಡುಪು ಒದಗಿಸಿ

ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…

1 hour ago

ಓದುಗರ ಪತ್ರ:  RTO ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳು ಹಾಗೂ ಚಾಲನಾ ತರಬೇತಿ ಶಾಲೆಗಳವರಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ…

1 hour ago

ಓದುಗರ ಪತ್ರ:  ಮೈಸೂರಿನಲ್ಲಿ ಡಾಗ್ ಪಾರ್ಕ್ ಸ್ಥಾಪಿಸಿ

ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ರಾಜ್ಯದ ಎಲ್ಲಾ ನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ…

2 hours ago

ಚಲನಚಿತ್ರ: ಗಲ್ಲಾ ಪೆಟ್ಟಿಗೆ ಗಳಿಕೆ, ಬಾಡಿಗೆ, ಬಡ್ಡಿ, ಉಳಿಕೆ ಇತ್ಯಾದಿ

ಕಳೆದ ವಾರ ಕೊಚ್ಚಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕಲೆ ಮತ್ತು ಸಾಹಿತ್ಯ ಉತ್ಸವದಲ್ಲಿ ಸಿನಿಮಾ ಕುರಿತಂತೆ ಪ್ರಮುಖರು ಆಡಿರುವ…

2 hours ago