– ಗಿರೀಶ್ ಹುಣಸೂರು
ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆ ಮುಗಿಸಿ ಮನೆಗೆ ಬಂದ ಮಕ್ಕಳು ಸ್ಕೂಲ್ ಬ್ಯಾಗ್ ಎಸೆದು ಅಮ್ಮ ಸ್ಕೂಲ್ ಮುಗೀತು, ನಾಳೆಯಿಂದ ರಜಾ-ಮಜಾ ಎಂದು ಜೋರು ದನಿಯಲ್ಲಿ ಸಂಭ್ರಮಾಚರಣೆ ಮಾಡತೊಡಗಿದಾಲೇ ತಲೆ ಮೇಲೆ ಕೈ ಹೊತ್ತ ಅಮ್ಮ, ಇನ್ನು ನಾಳೆಯಿಂದ ನನಗೆ ಇವರನ್ನು ಸಂಭಾಳಿಸುವ ಪರೀಕ್ಷೆ ಶುರು ಎಂದು ಮನಸ್ಸಲ್ಲೇ ಗೊಣಗಿಕೊಳ್ಳುತ್ತಾ ಅಡುಗೆ ಮನೆಗೆ ಹೋದವಳು ಮಕ್ಕಳಿಗೆ ಏನಾದರೂ ತಿನ್ನಲು ತಿಂಡಿ ತರುವ ಮುಂಚೆಯೇ ಭಾಯ್ ಅಮ್ಮ, ಫ್ರೆಂಡ್ಸ್ ಕಾಯ್ತಿದ್ದಾರೆ. ಆಟ ಆಡಲು ಹೋಗ್ತಿದ್ದೇನೆ ಎಂದು ಮನೆಯಿಂದ ಪೇರಿಕಿತ್ತ ಮಕ್ಕಳನ್ನು ಕಂಡು ನಗುವುದೋ-ಅಳುವುದೋ ನೀವೇ ಹೇಳಿ ಎನ್ನುವ ಸ್ಥಿತಿ ಅಮ್ಮನದು.
ಅದರಲ್ಲೂ ನಗರದ ಒತ್ತಡದಲ್ಲಿ ಬದುಕು ಸಾಗಿಸುತ್ತಿರುವ ವಿದ್ಯಾವಂತ, ಉದ್ಯೋಗಸ್ಥ ದಂಪತಿಗೆ ಏಪ್ರಿಲ್-ಮೇ ಎರಡು ತಿಂಗಳು ಹೇಗಪ್ಪಾ ಮಕ್ಕಳನ್ನು ಸಂಭಾಳಿಸುವುದು ಎಂಬ ಚಿಂತೆ ಅತಿಯಾಗಿ ಕಾಡದೆ ಇರದು. ನಾವು ಚಿಕ್ಕವರಿರುವಾಗ ದಸರಾ ರಜೆ, ಬೇಸಿಗೆ ರಜೆ ಬಂತೆಂದರೆ ಸಾಕು ಅಜ್ಜಿ ಮನೆಗೆ ಓಡುತ್ತಿದ್ದ ದಿನಗಳು ಈಗೆಲ್ಲಿ? ಅಮ್ಮನಿಗೆ ಹೇಳ್ಬೇಡ, ಅಪ್ಪನಿಗೆ ಕೊಡ್ಬೇಡ, ಏನಾದ್ರು ತಗೋ, ಏನಾದ್ರು ತಗೊಂಡು ತಿನ್ನು…!
ಅಜ್ಜ-ಅಜ್ಜಿ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೊಡುತ್ತಿದ್ದ ಹಣಕ್ಕೆ ಮೌಲ್ಯಕಟ್ಟಲಾದೀತೆ? ಉದ್ಯೋಗ ಅರಸಿ ನಗರ ಸೇರಿಕೊಂಡಿರುವ ಮಕ್ಕಳಿಂದಾಗಿ ಹಳ್ಳಿಗಳೀಗ ವೃದ್ಧಾಶ್ರಮಗಳಾಗುತ್ತಿರುವಾಗ, ನಾವಿರುವಲ್ಲಿಗೆ ಕರೆಸಿಕೊಳ್ಳೋಣವೆಂದರೆ ನಗರದ ಜಂಜಾಟದ ಬದುಕು ನಮಗೆ ಒಗ್ಗಲಾರದು ಎಂದು ಅವರು ಬರಲು ಒಪ್ಪರು. ನಗರದ ಹೈ- ಕಾನ್ವೆಂಟ್ಗಳಲ್ಲಿ ಓದಿಸಿರುವ ಮಕ್ಕಳನ್ನು ಪುನಃ ಹಳ್ಳಿಗೆ ಹೇಗೆ ಕಳಿಸುವುದು? ಅಲ್ಲಿ ಹೋದರೆ ಮಕ್ಕಳು ಒಗ್ಗಿ
ಕೊಳ್ತಾವ ಎಂಬ ಚಿಂತೆ ಹೆತ್ತವರದು. ಜೊತೆಗೆ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡುವುದು ಹೇಗೆ ಎಂಬ ಚಿಂತೆ ಬೇರೆ. ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಅಮ್ಮ ಹೈರಾಣಾಗಿ ಹೋಗಿಬಿಡುತ್ತಾಳೆ.
ಹೀಗಾಗಿ ಎರಡು ತಿಂಗಳು ಮಕ್ಕಳನ್ನು ಸಂಭಾಳಿಸುವ ಸಲುವಾಗಿಯೇ ಉದ್ಯೋಗಸ್ಥ ದಂಪತಿ ಕಂಡುಕೊಂಡ ಸುಲಭೋಪಾಯ ಬೇಸಿಗೆ ಶಿಬಿರಗಳು. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಬೇಸಿಗೆ ರಜೆ ಬಂತೆಂದರೆ ಸಾಕು ಎಲ್ಲೆಡೆ ಬೇಸಿಗೆ ಶಿಬಿರಗಳು ನಡೆಯುತ್ತವೆ. ಮಕ್ಕಳು ಓದಿಗೆ ಗುಡ್‌ಬೈ ಹೇಳಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಇದರಿಂದ ಮಕ್ಕಳಿಗೆ ಸಂತೋಷವಾದರೆ, ಉದ್ಯೋಗಸ್ಥ ದಂಪತಿಗೆ ನಾವು ದುಡಿದು ಮನೆಗೆ ಹಿಂತಿರುಗುವವರೆಗೆ ಮಕ್ಕಳು ಒಂದೆಡೆ ಕ್ಷೇಮವಾಗಿರುತ್ತಾರೆ ಎಂಬ ವಿಶ್ವಾಸ. ಇದಕ್ಕಾಗಿಯೇ ಗಲ್ಲಿಗೊಂದು ಬೇಸಿಗೆ ಶಿಬಿರಗಳು ಆಯೋಜನೆಯಾಗುತ್ತಿವೆ. ಅದರಲ್ಲೂ ಪ್ರತಿಷ್ಠಿತ ಸಂಸ್ಥೆಗಳು ಆಯೋಜಿಸುವ ಬೇಸಿಗೆ ಶಿಬಿರಗಳಿಗೆ ಬಹು ಬೇಡಿಕೆ. ದುಡ್ಡು ಎಷ್ಟು ಖರ್ಚಾದರೂ
ಪರವಾಗಿಲ್ಲ ನಮ್ಮ ಮಕ್ಕಳನ್ನು ಆ ಶಿಬಿರಗಳಿಗೆ ಕಳುಹಿಸಿದರೆ ಅವರ ವ್ಯಕ್ತಿತ್ವ ವಿಕಸನದ ಜತೆಗೆ ನಮ್ಮ ಕೆಲಸಕ್ಕೂ ಅಡ್ಡಿಯಾಗದು ಎಂಬ ನಂಬಿಕೆ ಉದ್ಯೋಗಸ್ಥ ದಂಪತಿಯದು.
ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸಿದ ಮಾತ್ರಕ್ಕೆ ಅಮ್ಮನ ಧಾವಂತ ಮುಗಿಯದು. ಮಗುವನ್ನು ಮತ್ತೆ ಶಾಲೆಗೆ ಕಳಿಸುವಂತೆಯೇ ಮನೆಯಿಂದ ಶಿಬಿರ ನಡೆಯುವ ಸ್ಥಳಕ್ಕೆ, ಶಿಬಿರ ಮುಗಿದ ಬಳಿಕ ಮತ್ತೆ ಮನೆಗೆ ಕರೆತರಲು ವಾಹನ ವ್ಯವಸ್ಥೆ ಮಾಡಬೇಕು. ಮಕ್ಕಳು ಶಿಬಿರ ಮುಗಿಸಿ ಮನೆ ತಲುಪುವಷ್ಟರಲ್ಲಿ ತಾನು ಮನೆ ಸೇರಿಕೊಳ್ಳಬೇಕು. ಶಿಬಿರ ಮುಗಿಸಿ ಮನೆಗೆ ಬರುವ ಮಕ್ಕಳಿಗೆ ತಿನ್ನಲು ಕೊಟ್ಟು, ಅವರನ್ನು ಸಂಭಾಳಿಸುವಷ್ಟರಲ್ಲಿ ಸಾಕು ಸಾಕಾಗಿ
ಹೋಗಿರುತ್ತಾಳೆ. ಶಿಬಿರಗಳಾದರೋ ಮಕ್ಕಳ ಬೇಸಿಗೆ ರಜೆ ಮುಗಿಯುವವರೆಗೆ ನಡೆಯುವುದಿಲ್ಲ. 20 ದಿನ ಅಥವಾ ಹೆಚ್ಚೆಂದರೆ ಒಂದು ತಿಂಗಳು ನಡೆಯುತ್ತವೆ.
ಇನ್ನೊಂದು ತಿಂಗಳು ಸಂಭಾಳಿಸಲು ದಂಪತಿ ತಾವೂ ಕೆಲಸಕ್ಕೆ ರಜೆ ಹಾಕಿಕೊಂಡು ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ದಿನದೂಡುವ ಮೂಲಕ ಬೇಸಿಗೆ ರಜೆ ಪೂರ್ಣಗೊಳಿಸಿದ ಶಾಸ್ತ್ರ ಮುಗಿಸಿ, ಕಳೆಯಿತು ಆ ಬೇಸಿಗೆ ಹೋಗೋಣ ಮತ್ತೆ ಶಾಲೆಗೆ ಎಂದು ಮಕ್ಕಳು ಶಾಲೆಗೆ ಹೊರಟು ನಿಂತಾಗಲೇ ಅಮ್ಮನಿಗೆ ಸಿಗುವುದು ಎರಡು ತಿಂಗಳ ಪರೀಕ್ಷೆ ಮುಗಿಸಿದ ತಾತ್ಕಾಲಿಕ ವಿರಾಮ.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…