ರಾತ್ರಿಯೆಲ್ಲ ಬಿಟ್ಟೂ ಬಿಡದೆ ಜಿಟಿ ಜಿಟಿ ಮಳೆ ಸುರಿದಿತ್ತು. ಸರಿಸುಮಾರು ನಾಲ್ಕು ಗಂಟೆಯವರೆಗೂ ಮಳೆ ಬರುತ್ತಿತ್ತು. ಮೇಲಾಗಿ ಭಾನುವಾರ ಬೇರೆ ಹಾಗಾಗಿ ಸ್ವಲ್ಪ ತಡವಾಗಿ ಎದ್ದು, ಮನಸ್ಸು ತಡೆಯದೆ ವಾಕಿಂಗ್‌ಗೆ ಹೊರಟೆ. ಪಕ್ಕದಲ್ಲಿ ಇರುವ ಪಾರ್ಕ್ ಹೊಸ ದೃಷ್ಟಿಕೋನದಿಂದ ನೋಡಿದಾಗ ಹೊಸದಾಗಿ ಕಂಡಿತು.

ಆಗತಾನೇ ಸ್ನಾನ ಮಾಡಿಕೊಂಡು ಬಂದ ತರುಣಿಯ ಹಾಗೆ ಕಾಣುತ್ತಿತ್ತು. ರಾತ್ರಿ ಸುರಿದ ಮಳೆಯ ಹನಿಯನ್ನ ಮರ ನನಗಾಗಿ ಹಿಡಿದು ಇಟ್ಟುಕೊಂಡಿದೆ ಏನು ಎಂದ ಹಾಗಿತ್ತು. ನನ್ನ ಮನಸ್ಸಿನಲ್ಲಿರುವ ತುಂಟ ಹುಡುಗಿ ಹೋಗಿ ಆ ಮರವನ್ನ ಅಲ್ಲಾಡಿಸಿದಾಗ ಅದರಿಂದ ಬಿದ್ದ ಮಳೆಹನಿಗೆ ನನ್ನ ಮುಖದಲ್ಲೂ ನಗು ಮೂಡಿತು. ಮಳೆ ಬಂದು ನಿಂತಾಗ ನಾವೇನಾದರೂ ಪಾರ್ಕಿಗೆ ಹೋದರೆ ನಾ ಮಾಡುವ ತುಂಟ ಕೆಲಸ ಇದು. ನನಗೆ ಬಹಳ ಖುಷಿಯನ್ನು ಕೊಡುತ್ತದೆ.

ಸೂರ್ಯ ಕಿರಣಗಳು ಸಹ ಆಗತಾನೆ ಎದ್ದು ಬಂದ ಹಾಗಿತ್ತು. ಆ ಹುಲ್ಲಿನ ಮೇಲೆ ಬಿದ್ದಂತಹ ಮಂಜು ಹನಿಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅದು ರತ್ನಗಳಂತೆ ಕಂಗೊಳಿಸುತ್ತಿತ್ತು. ಬಳ್ಳಿಯ ಮೇಲೆ ಇದ್ದಂತಹ ಮಳೆಹನಿ ಮುತ್ತಿನ ಹಾರದ ಹಾಗೆ ಕಾಣುತ್ತಿತ್ತು. ಸ್ನೇಹಿತರೊಂದಿಗೆ ವಾಕಿಂಗ್ ಟಾಕಿಂಗ್ ಅನ್ನುವ ಹಾಗೆ ಮಾತುಕತೆ ಹಾಗೂ ವಾಕಿಂಗ್ ಎರಡನ್ನೂ ಮುಗಿಸಿ ಧ್ಯಾನಕ್ಕೆ ಎಂದು ಅಲ್ಲೇ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಕುಳಿತೆ.

ಧ್ಯಾನ ಮಾಡಿ ಕಣ್ಣು ಬಿಟ್ಟಾಗ ನನ್ನ ಕಣ್ಣಿಗೆ ಬಿದ್ದಿದ್ದು ಆ ಪುಟ್ಟ ಚಿಟ್ಟೆಗಳು ಅದರಲ್ಲಿ ಇದ್ದಂತಹ ಬಣ್ಣಗಳು ಎಂತಹವರನ್ನು ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಅದನ್ನ ನೋಡಿದ ತಕ್ಷಣ ನಾವು ಚಿಕ್ಕವರಿದ್ದಾಗ ಚಿಟ್ಟೆ ಹಿಡಿಯುತ್ತಿದ್ದ ಪ್ರಸಂಗ ಕಣ್ಣ ಮುಂದೆ ಹಾದುಹೋಯಿತು. ಹಾಗೆ ಸ್ವಲ್ಪ ಸಮಯ ಆ ಚಿಟ್ಟೆಯನ್ನು ಗಮನಿಸಿದಾಗ ನನ್ನ ಮನಸ್ಸಿಗೆ ಮೂಡಿದಂತಹ ಮಾತು ಬದಲಾವಣೆ ಜಗದ ನಿಯಮ. ಹೌದು ಮೊಟ್ಟೆಯಾಗಿ ನಂತರ ಹುಳುವಾಗಿ ಸರಿದಾಡುವ ಆ ಹುಳ ತನಗೆ ತಾನೇ ಶಿಕ್ಷೆಯನ್ನು ಕೊಟ್ಟುಕೊಂಡು ತನಗೆ ತಾನೇ ಒಂದು ಕೋಶವನ್ನು ಮಾಡಿಕೊಂಡು ಅದರೊಳಗೆ ಸ್ವಲ್ಪ ದಿನಗಳು ಈ ಪ್ರಪಂಚದಿಂದಲೇ ದೂರವಿದ್ದು ತನ್ನನ್ನ ತಾನು ಬದಲಾಯಿಸಿಕೊಳ್ಳುವಲ್ಲಿ ಪ್ರಯತ್ನಪಡುತ್ತದೆ . ಆ ಪ್ರಯತ್ನ ಪಲಿಸಿದಾಗ ಹೊರಬರುವ ಫಲಿತಾಂಶವೇ ಸುಂದರವಾದ ಚಿಟ್ಟೆ.

ಒಂದು ಕ್ಷಣ ಆ ಚಿಟ್ಟೆ ನಮಗೆ ಜೀವನದ ಪಾಠವನ್ನು ಕಲಿಸುತ್ತಿದೆ ಎಂದು ನನಗನಿಸಿತು. ಹೌದು ಹೇಗೆ ಹುಳವು ತನಗೆ ತಾನೇ ಈ ಪ್ರಪಂಚದಿಂದ ಬಚ್ಚಿಟ್ಟುಕೊಂಡು ಚಿಟ್ಟೆಯಾಗಿ ಹೊರಬಂತೋ ಹಾಗೆ ನಮ್ಮ ಜೀವನದಲ್ಲಿ ನಾವು ಕೂಡ ಉತ್ತಮ ಫಲಿತಾಂಶವನ್ನು ಬಯಸುತ್ತೇವೆ ಎಂದಾಗ ನಮಗೆ ನಾವು ಈ ಪ್ರಪಂಚದಿಂದ ದೂರವಿದ್ದು. ನಮ್ಮ ಸಾಧನೆಯ ಕಡೆ ಗಮನಹರಿಸಬೇಕು. ಇಲ್ಲಿ ಜಯ ಎಂದರೆ ಯಾರನ್ನು ಸೋಲಿಸಬೇಕು ಅನ್ನುವ ಮನಸ್ಥಿತಿ ಅಲ್ಲ. ಹೇಗೆ ಚಿಟ್ಟೆ ತನಗೆ ತಾನು ಉತ್ತಮ ಮಾಡಿಕೊಂಡಿತ್ತೋ ಹಾಗೆ ನಾವು ನಮ್ಮ ಜ್ಞಾನದಿಂದ ನಮ್ಮ ಸಾಧನೆಯಿಂದ ನಮ್ಮನ್ನು ನಾವು ಉತ್ತಮರನ್ನಾಗಿ ಮಾಡಿಕೊಳ್ಳಬೇಕು.

ನಮ್ಮನ್ನ ನಾವು ದೈಹಿಕವಾಗಿ ಮಾನಸಿಕವಾಗಿ ಬೆಳೆಸಿಕೊಳ್ಳುವಲ್ಲಿ ನಮಗೆ ನಾವೇ ಶಿಕ್ಷಕರಾಗಬೇಕು. ನಮಗೆ ನಾವೇ ಶಿಕ್ಷೆಯನ್ನು ಕೊಟ್ಟು ನಮ್ಮನ್ನು ಇನ್ನಷ್ಟು ಉತ್ತಮರನ್ನಾಗಿ ಮಾಡುವ ಕೆಲಸ ನಮ್ಮದಾಗಬೇಕು. ಋತುಗಳು ಬದಲಾದ ಹಾಗೆ ಹೇಗೆ ಪ್ರಕೃತಿ ಹೊಸ ಹೊಸ ಹಣ್ಣನ್ನು ಆ ಋತುವಿಗೆ ತಕ್ಕ ಹಾಗೆ ನಮಗೆ ಕೊಡುತ್ತದೆಯೋ ಹಾಗೆ ವಯಸ್ಸು ಬೆಳೆಯುತ್ತಾ ಬೆಳೆಯುತ್ತಾ ನಮ್ಮನ್ನ ನಾವು ಇನ್ನಷ್ಟು ಪಕ್ವವಾಗಿ ಮಾಡಿಕೊಳ್ಳಬೇಕು. ಪ್ರತಿನಿತ್ಯ ನಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ದೈಹಿಕವಾಗಿ ಕೊನೆ ಪಕ್ಷ ೩೦ ನಿಮಿಷವಾದರೂ ವಾಕಿಂಗ್ ಮಾಡಬೇಕು.

ನಮ್ಮ ಬಗ್ಗೆ ನಾವು ಮೊದಲು ಗಮನಹರಿಸಬೇಕು. ಕೆಲವೇ ದಿನದ ಅತಿಥಿಯಾಗಿ ಬರುವ ಆ ಚಿಟ್ಟೆಯು ತನಗಾಗಿ ತಾನು ಅಷ್ಟೊಂದು ಕಷ್ಟಪಡುವಾಗ ಇನ್ನೂ ನಾವು ಕೆಲವು ವರ್ಷದ ಅತಿಥಿಯಾಗಿ ಬಂದಿರುವವರು ಕಷ್ಟ ಪಡಲೇಬೇಕಲ್ಲವೇ. ಈ ಸುಂದರ ಪಾಠವನ್ನ ನಮಗೆ ಯಾವುದೇ ಶುಲ್ಕವಿಲ್ಲದೆ ಹೇಳಿಕೊಟ್ಟ ಆ ಪಾತರಗಿತ್ತಿಗೆ ನನ್ನದೊಂದು ನಮನ.

– ಸೌಮ್ಯ ಕೋಠಿ

ಆಂದೋಲನ ಡೆಸ್ಕ್

Recent Posts

ಹೊತ್ತಿ ಉರಿದ ಖಾಸಗಿ ಬಸ್‌ : ಸಂಪೂರ್ಣ ಕರಕಲು ; 40 ಪ್ರಯಾಣಿಕರು ಬಚಾವ್‌

ಬೆಂಗಳೂರು : ನೆಲಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೆಂಗಳೂರಿನಿಂದ ಯಾದಗಿರಿ ಕಡೆಗೆ ಹೊರಟಿದ್ದ ಖಾಸಗಿ ನಾನ್-ಎಸಿ ಸ್ಲೀಪರ್ ಬಸ್‌ವೊಂದು…

13 mins ago

ಓದುಗರ ಪತ್ರ: ಯುಜಿಡಿ ಕೇಬಲ್; ಸೆಸ್ಕ್ ನಿರ್ಲಕ್ಷ್ಯ

ಯುಜಿಡಿ ಕೇಬಲ್; ಸೆಸ್ಕ್ ನಿರ್ಲಕ್ಷ್ಯ ಮೈಸೂರಿನ ಬಹುತೇಕ ಎಲ್ಲ ಬಡಾವಣೆಗಳಲ್ಲೂ, ಚಾಮುಂಡೇಶ್ವರಿ ವಿದ್ಯುತ್ ನಿಗಮ (ಸೆಸ್ಕ್)ನಿಂದ ಅಂಡರ್ ಗ್ರೌಂಡ್ ಕೇಬಲ್…

4 hours ago

ಓದುಗರ ಪತ್ರ: ನ್ಯಾಯಾಂಗ ಬಡಾವಣೆಗೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ರಾಜರಾಜೇಶ್ವರಿ ನಗರದ ಬಳಿಯ ನ್ಯಾಯಾಂಗ ಬಡಾವಣೆಯಲ್ಲಿ ಐದಕ್ಕೂ ಹೆಚ್ಚು ಸರ್ಕಾರಿ ವಸತಿನಿಲಯಗಳಿದ್ದು, ಬೆಳಿಗ್ಗೆ ಹಾಗೂ ಸಂಜೆ ಸಾಕಷ್ಟು ನಗರ…

4 hours ago

ಓದುಗರ ಪತ್ರ: ಮಹಾರಾಣಿ ಕಾಲೇಜು ಆವರಣದಲ್ಲಿನ ಕಸ ತೆರವುಗೊಳಿಸಿ

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆವರಣದಲ್ಲಿ ಪ್ಲಾಸ್ಟಿಕ್ ಬಾಟಲಿ, ಪ್ಲೇಟ್, ಚೀಲಗಳು ಹಾಗೂ ಮರದ ಎಲೆಗಳು ತುಂಬಿದ್ದು, ಅನೈರ್ಮಲ್ಯದ…

4 hours ago

ಓದುಗರ ಪತ್ರ: ಭರಚುಕ್ಕಿ ಜಲಪಾತ ಸಂಪರ್ಕ ರಸ್ತೆ ದುರಸ್ತಿ ಮಾಡಿ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನಲ್ಲಿರುವ ಭರಚುಕ್ಕಿ ಜಲಪಾತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ಕೂಡಿದ್ದು, ಹ್ಯಾಂಡ್ ಪೋಸ್ಟ್ ನಿಂದ ಶಿವನಸಮುದ್ರದ…

5 hours ago

ರೋಮಾಂಚನಕಾರಿ ಜಲ ಸಾಹಸ ಕ್ರೀಡೋತ್ಸವ…

ಚಾಮರಾಜನಗರ: ತಾಲ್ಲೂಕಿನ ಸುವರ್ಣಾವತಿ ಜಲಾಶಯದಲ್ಲಿ ಏರ್ಪಡಿಸಿರುವ ಎರಡು ದಿನಗಳ ‘ಜಿಲ್ಲಾ ಮಟ್ಟದ ಜಲ ಸಾಹಸ ಕ್ರೀಡೋತ್ಸವವನ್ನು’ ಜೆಟ್ ಸ್ಕೀ ಜಲ…

5 hours ago