ಸೌಮ್ಯ ಕೋಠಿ, ಮೈಸೂರು
ಅಮ್ಮ ಎಂದ ಕ್ಷಣ ನೋವು ನಲಿವು ಎಲ್ಲವೂ ನೆನಪಾಗುತ್ತದೆ. ನಗುವಿನಲ್ಲಿ ಅಮ್ಮ ಅನ್ನದಿದ್ದರೂ ನೋವಿನಲ್ಲಿ ಬರುವ ಮೊದಲ ಮಾತು ಅಮ್ಮ. ಅಮ್ಮ ಎಂದರೆ ಒಂದೇ ಮಾತಿನಲ್ಲಿ ಮಕ್ಕಳಿಗೋಸ್ಕರ ಎಲ್ಲವನ್ನೂ ತ್ಯಾಗ ಮಾಡಿದವಳು ಎನ್ನಬಹುದು. ಹೆತ್ತವಳು ಅಂದರೆ ನಮಗೆ ಜನ್ಮ ನೀಡಿದವಳು. ಅದಕ್ಕೆ ಇರಬೇಕು ಭಗವಂತನು ಗರ್ಭಗುಡಿಯಲ್ಲಿ ನೆಲೆಸಿರುತ್ತಾನೆ.
ಹೆತ್ತ ಅಮ್ಮನಿಗೆ ಎಷ್ಟು ಗೌರವ ನೀಡುತ್ತೇವೊ ಸಾಕಿದ ಅಮ್ಮನಿಗೂ ಅಷ್ಟೇ ಗೌರವವನ್ನು ಕೊಡಬೇಕು ಎಂದು ಭಗವಂತ ಕೃಷ್ಣ ತೋರಿಸಿದ್ದಾನೆ. ಹೆತ್ತ ತಾಯಿ ನಮಗೆ ಜನ್ಮ ಕೊಟ್ಟರೆ ಸಾಕಿದ ತಾಯಿ ಜೀವನವನ್ನು ಕೊಡುತ್ತಾಳೆ. ದೇವಕಿ ಹಾಗೂ ಯಶೋಧೆಯ ಮುದ್ದಿನ ಮಗನಾಗಿ ಕೃಷ್ಣ ಬೆಳೆದು ಇಬ್ಬರೂ ಸಮಾನರೆಂದು ತೋರಿಸುತ್ತಾನೆ.
ರಾಮಾವತಾರದ ಬಾಲ ಖಾಂಡದಲ್ಲೂ ರಾಮ ತನ್ನ ತಾಯಿಯನ್ನು ದೇವರಿಗೆ ಹೋಲಿಸಿದ್ದಾನೆ. ಭಗವಂತ ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂದು ತಾಯಿಯನ್ನು ಸೃಷ್ಟಿ ಮಾಡಿದ ಎಂದು ನಮ್ಮ ಹಿರಿಯರು ಹೇಳಿದ ಮಾತು ನಿಜಕ್ಕೂ ಸತ್ಯ. ತಾಯಿ ಎಂದಾಕ್ಷಣ ಕೇವಲ ಹೆತ್ತವಳು ಮಾತ್ರ ತಾಯಿ ಅಲ್ಲ. ನಮ್ಮನ್ನು ಹೆತ್ತವಳು ಮೊದಲನೆಯ ತಾಯಿಯಾದರೆ ಶಿಕ್ಷಕಿ ಎರಡನೇ ತಾಯಿಯಾಗುತ್ತಾಳೆ. ಹಿಂದೆ ಗುರುಕುಲದಲ್ಲಿ ಇರುತ್ತಿದ್ದರಿಂದ ಗುರು ಪತ್ನಿಯನ್ನು ತಾಯಿ ಎಂದು ಹೇಳುತ್ತಿದ್ದರು. ಹಾಗೆ ತಾಯಿಯ ಹಾಲು ಕುಡಿದು ಹೇಗೆ ಬೆಳೆಯುತ್ತೇವೋ ಹಾಗೆ ಗೋವಿನ ಹಾಲನ್ನು ಕುಡಿದು ಬೆಳೆಯುವುದರಿಂದ ಗೋಮಾತೆ ಎನ್ನುತ್ತಾರೆ.
ಅಷ್ಟೇ ಅಲ್ಲ ನಮ್ಮ ಕೈಲಾಗದೆ ಇದ್ದಾಗ ಅನಾರೋಗ್ಯದಿಂದ ಬಳಲುವಾಗ ನಮ್ಮನ್ನು ಶುಶ್ರೂಷೆ ಮಾಡುವ ದಾದಿಯು ಕೂಡ ತಾಯಿಯೇ, ಅಷ್ಟೇ ಅಲ್ಲ ಎಲ್ಲಕ್ಕಿಂತ ಮಿಗಿಲು ನಮ್ಮ ಭೂಮಿ ತಾಯಿ. ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂದು ಹೇಳುತ್ತಾರೆ. ನಮ್ಮನ್ನು ಪ್ರೀತಿಯಿಂದ ಬೆಳೆಸಿದ ಎಲ್ಲ ಹೆಣ್ಣು ಮಕ್ಕಳೂ ತಾಯಿಗೆ ಸಮಾನರೆ. ತಾಯಿ ಅಂದರೆ ನಮ್ಮ ಮನಸ್ಸಿನಲ್ಲಿ ತುಂಬಿರುವವಳು. ಅದಕ್ಕೆ ಇರಬೇಕು ನಮ್ಮ ಮನಸ್ಸಿನ ಮಾತು ಬಾಯಿಯಲ್ಲಿ ಬರುವುದರಿಂದ ನಾವು ಆಡುವ ಮಾತನ್ನು ಮಾತೃಭಾಷೆ ಎಂದು ಕರೆಯುತ್ತಾರೆ. ನಾವು ಯಾವುದೇ ಭಾಷೆಯಲ್ಲಿ ಏನೇ ಮಾತನಾಡಿದರೂ ಮಾತೃಭಾಷೆ ಯಲ್ಲಿ ಮಾತನಾಡುವ ಸವಿಯೇ ಬೇರೆ ಎಲ್ಲೋ ಹೊರಗೆ ಹೋದಾಗ ನಮ್ಮ ಭಾಷೆ ಯನ್ನು ಕೇಳಿ ದಾಗ ಆಗುವ ಖುಷಿ ಅಷ್ಟಿಷ್ಟಲ್ಲ.
ಅದಕ್ಕೆ ಹೇಳಿದ್ದು ಅಮ್ಮ ಎಂದಾಕ್ಷಣ ಭಾವನೆಗಳ ಆಗರ. ನೋವು, ನಲಿವು, ಕಷ್ಟ, ಸುಖ ಎಲ್ಲಾ ಸಂದರ್ಭಗಳಲ್ಲಿ ಮೊದಲು ನೆನಪಾಗುವವಳು ತಾಯಿ. ಆಕೆ ನಮಗಾಗಿ ಎಲ್ಲವನ್ನೂ ತ್ಯಾಗ ಮಾಡಿದವಳು. ತಾಯಿ ಇಲ್ಲದೆ ತವರೇ ಇಲ್ಲ. ರಾಮಾಯಣದ ಒಂದು ಪ್ರಸಂಗದಲ್ಲಿ ಲಕ್ಷ್ಮಣ, ಕೈಕೆ ಮೇಲೆ ಸಾಕಷ್ಟು ಕೋಪ ಮಾಡಿಕೊಂಡಿರುತ್ತಾನೆ. ಆಗ ರಾಮ, ಲಕ್ಷ್ಮಣನಿಗೆ ಹೇಳುತ್ತಾನೆ, ‘ಯಾವುದೇ ಘಟನೆ ಅಥವಾ ಪ್ರಕರಣದಲ್ಲಿ ಸಂದರ್ಭ ಕೆಟ್ಟದಾಗಿರುತ್ತದೆಯೇ ಹೊರತು ತಾಯಿ ಕೆಟ್ಟವಳಾಗಿರುವುದಿಲ’ ಎಂದು. ಅಷ್ಟೇ ಅಲ್ಲ ವನವಾಸಕ್ಕೆ ಹೋಗುವಾಗ ಆಕೆಯ ಕಾಲಿಗೆ ನಮಸ್ಕರಿಸುವಾಗ ರಾಮ ಎಷ್ಟು ಸುಂದರವಾದ ಸಾಲನ್ನು ಹೇಳುತ್ತಾನೆ. ಅಂದರೆ, ‘ಅಮ್ಮ ನನ್ನಿಂದ ಏನೋ ತಪ್ಪಾಗಿರಬೇಕು. ನನ್ನಿಂದ ನಿಮಗೆ ನೋವಾಗಿದೆ. ಅದಕ್ಕೆ ಇಷ್ಟು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದೀರಿ. ನನ್ನನ್ನು ಕ್ಷಮಿಸಿ’ ಎಂದು ಕೇಳುತ್ತಾನೆ.
ಸಂಸ್ಕ ತ ಸುಭಾಷಿತಗಳಲ್ಲಿಯೂ ಮಾತೆಯ ಮಹತ್ವವನ್ನು ಅನೇಕ ರೀತಿಯಲ್ಲಿ ಬಣ್ಣಿಸಲಾಗಿದೆ. ‘ಣಣಮಾತ್ರಾಸಮಂ ನಾಸ್ತಿ ಶರೀರಪೋಷಣಂ ಚಿಂತಾಸಮಂ ನಾಸ್ತಿ ಶರೀರಶೋಷಣಂ ಭಾರ್ಯಾಸಮಂ ನಾಸ್ತಿ ಶರೀರತೋಷಣಂ ವಿದ್ಯಾಸಮಂ ನಾಸ್ತಿ ಶರೀರಭೂಷಣಂ’ ಎನ್ನುತ್ತದೆ ಒಂದು ಸೂಕ್ತಿ ಮುಕ್ತಕ. ನಮ್ಮ ಶರೀರದ ಆರೈಕೆಯನ್ನು ಅಮ್ಮ ಮಾಡಿದಷ್ಟು ಮಜಬೂತಾಗಿ ಬೇರಾರೂ ಮಾಡಲಾರರು. ತಾಯಿ ಎಂದರೆ ಒಂದು ಜೀವಕ್ಕೆ ಜನ್ಮ ಕೊಡುವ ನೈಸರ್ಗಿಕ ಸ್ತ್ರೀಯಾಗಿರ ಬಹುದು, ಅಥವಾ ಸಾಮಾಜಿಕವಾಗಿ ಪೋಷಿಸುವಸ್ತ್ರೀಯಾಗಿರಬಹುದು. ಹಲವು ಬಾರಿ ಈ ಎರಡೂ ಕಾರ್ಯಗಳನ್ನು ಒಬ್ಬಳೇ ಮಾಡಬಹುದು.
ಆದರೆ ಈಗಿನ ಕಾಲದಲ್ಲಿ ಒಬ್ಬ ತಾಯಿ ನಾಲ್ಕು ಮಕ್ಕಳನ್ನು ಸಾಕುತ್ತಾಳೆ, ಆದರೆ ವಯಸ್ಸಾದ ಕಾಲದಲ್ಲಿ ನಾಲ್ಕು ಮಕ್ಕಳು ಸೇರಿ ಆ ಒಬ್ಬ ತಾಯಿಯನ್ನು ಸಾಕಲು ಆಗುವುದಿಲ್ಲ ಅನ್ನುವುದೇ ಶೋಚನೀಯ ಸಂಗತಿ. ತಾಯಿ ಎಂದರೆ ಧೈರ್ಯ, ಬದುಕುವ ಛಲ. ಎಷ್ಟೋ ಮಹಿಳೆಯರು ವಯಸ್ಸಾದರೂ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು. ಯಾರಿಗೂ ಹೊರೆಯಾಗಬಾರದು ಎಂದು ಈಗಲೂ ದುಡಿದು ಬದುಕುತ್ತಾರೆ. ಅಂತಹ ಎಲ್ಲ ತಾಯಂದಿರಿಗೂ ನನ್ನದೊಂದು ಸಲಾಂ. ಅಷ್ಟೇ ಅಲ್ಲ ವಯಸ್ಸಾದ ಮೇಲೆ ತಂದೆಗೆ, ಮಕ್ಕಳು ತಾಯಿಯ ಹಾಗೆ ಕಾಣಿಸಲು ಶುರುವಾಗುತ್ತಾರೆ. ನನ್ನ ತಂದೆಯೂ ನನ್ನನ್ನು ತಾಯಿ ಎಂದು ಕರೆಯುತ್ತಿದ್ದರು. ಅದಕ್ಕೆ ಹೇಳಿದ್ದು, ತಾಯಿ ಎಂದರೆ ಹೆತ್ತವಳು ಮಾತ್ರ ಅಲ್ಲ. ನಮ್ಮ ಜೀವನದಲ್ಲಿ ಹಲವಾರು ಜನ ತಾಯಂದಿರ ಪರಿಶ್ರಮ ಇರುತ್ತದೆ. ಹಾಗಾಗಿ ಆ ಸ್ಥಾನ ತುಂಬಿದ ಎಲ್ಲ ತಾಯಂದಿರಿಗೂ, ‘ತಾಯಂದಿರ ದಿನದ ಶುಭಾಶಯಗಳು’.
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…