ಒಬ್ಬಳೇ ಮಗಳನ್ನು ಮದುವೆ ಮಾಡಿ ವಿದೇಶಕ್ಕೆ ಕಳುಹಿಸಿದ ನಂತರ ಗಂಡನನ್ನು ಕಳೆದುಕೊಂಡಿದ್ದ ಸೌಭಾಗ್ಯ ತಮ್ಮೊಬ್ಬರಿಗೆ ಮನೆ ದೊಡ್ಡದೆನಿಸಿ ಮಹಡಿಯ ಮನೆಯಲ್ಲಿ ತಾವಿದ್ದು, ಕೆಳಗಿನ ಮನೆಯನ್ನು ವಿದೇಶದಿಂದ ಯೋಗ ಕಲಿಯಲು ಬಂದಿದ್ದ ಒಬ್ಬ ಯುವಕ ಮತ್ತು ಯುವತಿಗೆ ಪರಿಚಯದವರು ಹೇಳಿದರು ಎಂದು ಹನ್ನೊಂದು ತಿಂಗಳುಗಳ ಕರಾರು ಮಾಡಿಕೊಂಡು ಬಾಡಿಗೆಗೆ ಕೊಟ್ಟಿದ್ದರು. ಅಗ್ರಿಮೆಂಟ್ ಇನ್ನೂ ನಾಲ್ಕು ತಿಂಗಳುಗಳು ಬಾಕಿ ಇರುವಾಗಲೇ ಒಂದು ದಿನ ಬೆಳಗಿನ ಜಾವದಲ್ಲಿ ದಢದಢ ಅಂತ ಬಂದ ಪೊಲೀಸರು ಮನೆಗೆ ಬೀಗ ಹಾಕಿ ಅವರಿಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋದರು.
ಗಾಬರಿಗೊಂಡ ಸೌಭಾಗ್ಯ ಪಕ್ಕದ ಮನೆಯವರೊಡನೆ ಪೊಲೀಸ್ ಸ್ಟೇಷನ್‌ಗೆ ಹೋದಾಗ ತಿಳಿದದ್ದು ಆ ಬಾಡಿಗೆದಾರರು ಡ್ರಗ್ಸ್ ವ್ಯವಹಾರದಲ್ಲಿ ಸಿಕ್ಕಿಹಾಕಿ ಕೊಂಡಿದ್ದಾರೆ ಎಂದು.
ಅಂತಹ ವಹಿವಾಟಿಗೆ ಇವರ ಮನೆ ಬಳಕೆಯಾಗಿದ್ದರಿಂದ ಇವರನ್ನೂ ಆರೋಪಿಯನ್ನಾಗಿ ಮಾಡಿ ಎಫ್‌ಐಆರ್ ಹಾಕಲಾಗಿತ್ತು. ಇದೇ ಕೊರಗಿನಲ್ಲಿ ಹಾಸಿಗೆ ಹಿಡಿದಾಕೆ ಮೇಲೇಳಲೇಯಿಲ್ಲ.
ಉದ್ಯೋಗದಲ್ಲಿ ಸಾಧನೆ ಮಾಡಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದ ಶೋಭಾ ತನ್ನ ನಿವೃತ್ತಿ ಜೀವನಕ್ಕೆ ಎಂದು ಪಕ್ಕದೂರಿನಲ್ಲಿ ಅಪಾರ್ಟ್‌ಮೆಂಟ್ ಒಂದನ್ನು ಖರೀದಿ ಮಾಡಿ ಅದನ್ನು ಹೊರ ದೇಶದಿಂದ ಬಂದು ಇಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಬಾಡಿಗೆ ಕೊಟ್ಟಿದ್ದಳು. ತಿಂಗಳ ಒಂದನೇ ತಾರೀಖು ಸರಿಯಾಗಿ ಬಾಡಿಗೆ ಬರುತ್ತಿತ್ತು. ಅಲ್ಲಿನ ನಿರ್ವಹಣಾ ವೆಚ್ಚವನ್ನೂ ಯಾವುದೇ ತಗಾದೆ ಇಲ್ಲದೆ ಭರಿಸುತ್ತಿದ್ದ ಬಾಡಿಗೆದಾರರೆಂದರೆ ಅಚ್ಚುಮೆಚ್ಚು ಶೋಭಾಳಿಗೆ. ‘ನಿಮ್ಮ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ಪೊಲೀಸ್ ಠಾಣೆಗೆ ಹಾಜರಾಗಬೇಕು’ ಎನ್ನುವ ನೋಟಿಸ್ ಬಂದಾಗಲೇ ಶೋಭಾರಿಗೆ ಆಘಾತ. ಸಹೋದ್ಯೋಗಿಗಳ ಸಲ್ಲದ ನೋಟಕ್ಕೆ ನೊಂದು ಆಕೆ ಕೆಲಸವನ್ನೇ ಬಿಟ್ಟಳು.
ವಿದೇಶಿಯರಿಗೆ ಮನೆ ಬಾಡಿಗೆ ಕೊಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ವಿದೇಶಿಯರ ಕಾಯಿದೆ 1946 ಇದರ ಅಡಿಯಲ್ಲಿ ಕೆಲವು ನಿಯಮಗಳನ್ನು ನೀಡಲಾಗಿದೆ. ಸೆಕ್ಷನ್ 7ರ ಪ್ರಕಾರ ಯಾವುದೇ ಬೇರೆ ದೇಶದ ಪ್ರಜೆಗೆ ಮನೆ ಬಾಡಿಗೆ ನೀಡುವಾಗ ಅವರುಗಳ ವಿವರವನ್ನು ಸ್ಥಳೀಯ ಪೊಲೀಸ್ ಠಾಣೆ ಯಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಭರ್ತಿ ಮಾಡಿ ನೋಂದಾಯಿಸಬೇಕಿರುತ್ತದೆ. ಕೊಲೆ, ದೇಶದ್ರೋಹದಸಂಚು, ಮಾನವ ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ, ಮಾದಕ ವಸ್ತುಗಳ ಬಳಕೆ, ತಯಾರಿಕೆ ಮತ್ತು ಮಾರಾಟ ಇಂತಹ ಅಪರಾಧಗಳು ಘಟಿಸಿದಾಗ ಅಂತಹ ಕೃತ್ಯಗಳಿಗೆ ಬಳಸಿದ ಜಾಗದ ಮಾಲೀಕರನ್ನೂ ಪ್ರಚೋದನೆ ನೀಡಿದ ಅಪರಾಧಿಗಳು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಬಾಡಿಗೆದಾರರ ವಿವರಗಳನ್ನು ಪೊಲೀಸ್ ಠಾಣೆಗೆ ನೀಡಬೇಕು.
ಅಕ್ರಮ ವಲಸಿಗರಿಗೆ ಮನೆ ಬಾಡಿಗೆ ಕೊಡುವುದು, ವೀಸಾ ಅವಧಿ ಮುಗಿದ ನಂತರವೂ ನಮ್ಮ ದೇಶದಲ್ಲಿ ಇರುವುದು ಅಪರಾಧ. ಅಂತಹ ವ್ಯಕ್ತಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮಾಲೀಕರಿಗೂ ಶಿಕ್ಷೆಯಾಗುತ್ತದೆ. ಹಲವಾರು ಬಾರಿ ದೊಡ್ಡ ಕುಟುಂಬವಿದ್ದರೂ ಮನೆಯನ್ನು ಹೆಂಗಸಿನ ಹೆಸರಿನಲ್ಲಿ ಖರೀದಿ ಮಾಡಲಾಗಿರುತ್ತದೆ.
ಅಂತಹ ಸಂದರ್ಭದಲ್ಲೂ ಇಂತಹ ಅಪರಾಧಗಳು ಘಟಿಸಿದರೆ ಮನೆ ಯಾರ ಹೆಸರಿನಲ್ಲಿ ಇರುತ್ತದೆಯೋ ಆ ಮಹಿಳೆಯನ್ನೇ ಆರೋಪಿಯನ್ನಾಗಿಸಲಾಗುತ್ತದೆ. ಅದಕ್ಕಾಗಿಯೇ ಮನೆ ಮಾಲೀಕರಾದ ಮಹಿಳೆಯರು ಪುರುಷ ಮಾಲೀಕ ರಂತೆಯೇ ಇಂತಹ ತೊಂದರೆಗಳಿಗೆ ಸಿಕ್ಕಿಹಾಕಿ ಕೊಳ್ಳದಂತೆ ಇರಲು ವಿದೇಶಿಯರಿಗೆ ಬಾಡಿಗೆ ಕೊಡುವಾಗ ಮನೆ ಇರುವ ಏರಿಯಾದ ಠಾಣೆಗೆ ಮಾಹಿತಿ ಕೊಡುವುದು ಸುರಕ್ಷಿತ ಮತ್ತು ಕಡ್ಡಾಯ. ಇಂತಹ ಮಾಹಿತಿಯನ್ನು ನೀಡಲು ತಪ್ಪಿದರೆ ಐದು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಿದೆ. ಮೊದಲು ವಿದೇಶಿಯರ ಪ್ರಾದೇಶಿಕ ನೋಂದಾವಣೆ ಕಚೇರಿ (FRRO) ಇವರ ವೆಬ್‌ಸೈಟ್‌ನಲ್ಲಿ ನೋಂದಾವಣೆ ಮಾಡಿ ನಂತರ ನಮೂನೆ ‘ಇ’ ಇದರಲ್ಲಿ ವಿವರ ತುಂಬಿಸಿ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕಿರುತ್ತದೆ.
ಅಂಜಲಿ ರಾಮಣ್ಣ
(ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು )
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…
ಎಚ್.ಡಿ.ಕೋಟೆ: ಬಸ್ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ…
ಮಂಡ್ಯ: ವಿಸಿ ಫಾರ್ಮ್‌ನ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.…
ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಶಾಸಕರೇ ಅವಿಶ್ವಾಸ ನಿರ್ಣಯ ಮಂಡಿಸಿದರೂ ಅಚ್ಚರಿ ಇಲ್ಲ ಎಂದು…
ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗುರುಪುರದ ಬಳಿಯ ಜಮೀನೊಂದರಲ್ಲಿ ಓಡಾಡುತ್ತಿದ್ದ ಒಂದು ವರ್ಷದ ಹುಲಿ ಮರಿಯನ್ನು ಅರಣ್ಯಾಧಿಕಾರಿಗಳು ಸೆರೆ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ. ಆ ಮೂಲಕ ನಮಗೆ…