ಆಕೆಗೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ. ಇವಳ ಜೊತೆ ಕೆಲಸ ಮಾಡುತ್ತಿದ್ದ ನಲವತ್ತು ಹೆಂಗಸರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಉಳಿದವರಿಗೆ, ಸೂಪರ್‌ವೈಸರ್ ಗುಂಡಿ ಕಾಜಾ ಬಟ್ಟೆಯನ್ನು ಮನೆಗೆ ತಲುಪಿಸುತ್ತಾನೆ. ಕೆಲಸ ಕಳೆದುಕೊಂಡರೆ ಊಟಕ್ಕೂ ತತ್ವಾರವಿರುವ ಸಂದರ್ಭದ ಅನಿವಾರ್ಯತೆಯನ್ನು ತಿಳಿದುಕೊಂಡಿರುವ ಸೂಪರ್‌ವೈಸರ್ ದಿನವೂ ತನ್ನ ಜೊತೆ ವಾಟ್ಸಾಪ್‌ನಲ್ಲಿ ಅವನಿಗಿಷ್ಟವಾಗುವ ಹಾಗೆ ಚಾಟ್ ಮಾಡಬೇಕೆನ್ನುವ ಷರತ್ತು ವಿಧಿಸಿದ್ದ.
ಇನ್ನೊಬ್ಬಾಕೆ ಸಾಫ್ಟ್‌ವೇರ್ ತಂತ್ರಜ್ಞೆ. ಆಕೆಯ ಸಹೋದ್ಯೋಗಿಗಳೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಪ್ರಾಜೆಕ್ಟ್ ಮ್ಯಾನೇಜರ್‌ನ ಡಿಮ್ಯಾಂಡ್ ಏನೆಂದರೆ ಆನ್‌ಲೈನ್ ಇರುವಾಗಲೆಲ್ಲಾ ವೆಬ್ ಕ್ಯಾಮೆರಾವನ್ನು ಅವಳೆದೆ ಭಾಗದ ಮೇಲೆ ಫೋಕಸ್ ಮಾಡಿಕೊಂಡಿರಬೇಕು.
ಅದಕ್ಕಿವಳು ವಿರೋಧ ವ್ಯಕ್ತಪಡಿಸಲು ಹೆದರುತ್ತಿದ್ದಾಳೆ, ಏಕೆಂದರೆ ಆತ ಇವಳ ಮಾಜಿ ಪ್ರೇಮಿ. ಅವನು ಅಸಭ್ಯ ಪದಗಳನ್ನು ಬಳಸಿದಾಗ ಪ್ರತಿಕ್ರಿಯಿಸಬೇಕು, ಅಶ್ಲೀಲ ಸಂಜ್ಞೆಗಳನ್ನು ಮಾಡಿದಾಗ ವಿರೋಧಿಸಬಾರದು, ಪೋಲಿ ಜೋಕ್ಗಳನ್ನು ಸಹಿಸಿಕೊಂಡಿರಬೇಕು, ಕೆಲಸ ಮಾಡುವುದರ ಜೊತೆಯಲ್ಲಿಯೇ, ಲ್ಯಾಪ್‌ಟಾಪ್‌ನಲ್ಲಿ ಮತ್ತೊಂದು ವಿಂಡೋ ತೆರೆದಿಟ್ಟುಕೊಂಡು ಅವನ ಜೊತೆ ಸೆಕ್ಸ್ ಚಾಟ್ ಮಾಡುತ್ತಿರಬೇಕು.
ಆಫೀಸಿಗೆ ಹೋಗದೆ ಮನೆಯಿಂದಲೇ ಕೆಲಸ ಮಾಡುವುದರಿಂದ ಸ್ಪರ್ಶ ಕಿರುಕುಳ ಮಾತ್ರ ಇರುವುದಿಲ್ಲವೆನ್ನುವುದನ್ನು ಬಿಟ್ಟರೆ ಅವಳ ಮಾನಸಿಕ, ಭಾವನಾತ್ಮಕ ಮತ್ತು ಘನತೆಯ ಮೇಲಿನ ಅತ್ಯಾಚಾರವನ್ನು ತಳ್ಳಿಹಾಕುವ ಹಾಗಿಲ್ಲ. ಕೇಂದ್ರ ಸರ್ಕಾರಿ ಉದ್ಯೋಗಸ್ಥೆಯೊಬ್ಬರು ಹೇಳಿಕೊಳ್ಳುತ್ತಿದ್ದರು “ಆಫೀಸಿನಲ್ಲಿ ಸ್ವಲ್ಪ ಏರು ಪೇರಾದರೂ ಕಮಿಟಿ ಇರುತ್ತೆ. ಕಮಿಟಿಗೆ ದೂರು ಕೊಡಬಹುದು ಎನ್ನುವ ಧೈರ್ಯವಾದರೂ ಇರುತ್ತೆ. ಆದರೆ ವರ್ಕ್ ಫ್ರಂ ಹೋಮ್ನಲ್ಲಿ ಅಗುವ ಕಷ್ಟಕ್ಕೆ, ಕಮಿಟಿಗೆ ದೂರು ಕೊಡಲು ಆಗೋಲ್ಲ ತುಂಬಾ ಕಷ್ಟ”
ಮಹಿಳೆಯರ ಲೈಂಗಿಕ ದೌರ್ಜನ್ಯ, ನಿರೋಧ, ನಿರ್ಬಂಧನೆ ಹಾಗೂ ನಿವಾರಣೆ ಕಾಯಿದೆ-೨೦೧೩ರ ಅಡಿಯಲ್ಲಿ ಕೆಲಸ ಮಾಡುವ ಜಾಗ ಯಾವುದೇ ಇದ್ದರೂ, ಕೆಲಸ ಕೊಟ್ಟವರಿಂದ ಅಥವಾ ಸಹೋದ್ಯೋಗಿಗಳಿಂದ, ಯಾವ ವೇದಿಕೆಯ ಮೂಲಕವೇ ಆಗಲಿ ಕಿರುಕುಳ ಆದಾಗ ಆ ಕಚೇರಿಯ ಆಂತರಿಕ ದೂರು ಸಮಿತಿಗೆ ದೂರು ಸಲ್ಲಿಸಲು ಸಾಧ್ಯವಿದೆ. ಈ ಕಾನೂನಿನ ಸೆಕ್ಷನ್ ೨(o)(vi)ಲ್ಲಿ “ಕಾರ್ಯಸ್ಥಾನ” ಎನ್ನುವುದಕ್ಕೆ ನೀಡಿರುವ ವ್ಯಾಖ್ಯಾನದಲ್ಲಿ “ವಾಸಿಸುವ ಮನೆ ಅಥವಾಸ್ಥಾನ” ಎಂದೂ ಉಲ್ಲೇಖಸಲಾಗಿದೆ. ಯಾವ ಸ್ಥಾನ, ಸ್ಥಳ ಅಥವಾ ಜಾಗದಿಂದಲೇ ಆಗಿರಲಿ ಕೆಲಸದ ಅವಧಿಯಲ್ಲಿ, ಉದ್ಯೋಗದಾತ ಮತ್ತು ಉದ್ಯೋಗಸ್ಥ ಎನ್ನುವ ಸಂಬಂಧದಡಿಯಲ್ಲಿ ಕೆಲಸ ಮಾಡುತ್ತಿರುವಾಗ ಆಗುವ ದೌರ್ಜನ್ಯ ಕುರಿತು ದೂರು ಸಲ್ಲಿಸಬಹುದು.
ಆನ್‌ಲೈನ್‌ನಲ್ಲಿ ಪಾಠ ಮಾಡುತ್ತಿರುವ ಉಪಾಧ್ಯಾಯರು ತಮ್ಮ ಸಹೋದ್ಯೋಗಿಗಳಿಂದ, ತಮ್ಮ ವಿದ್ಯಾರ್ಥಿಗಳ ಪೋಷಕರಿಂದ ತೊಂದರೆಯಾದರೆ, ವಿಜ್ಞಾನಿಗಳು, ಭಾಷಾಂತರಕಾರರು, ಸರ್ಕಾರಿ ಉದ್ಯೋಗಿಗಳು, ಯಾವುದೇ ಸಹಾಯವಾಣಿಯ ಸಿಬ್ಬಂದಿ ಅವರ ಕಚೇರಿಯ ಆಂತರಿಕ ದೂರು ಸಮಿತಿಯಲ್ಲಿ ಅಹವಾಲನ್ನು ದಾಖಲಿಸಬಹುದು. ಚಲನವಲನ, ಹಾವಭಾವ, ಬಳಸುವ ಭಾಷೆ, ಸಂಜ್ಞೆಗಳು, ಅಪಹಾಸ್ಯದ ಮಾತುಗಳು ಸಹ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುತ್ತವೆ. ಸಭ್ಯ ಭಾಷೆಯಲ್ಲಿಯೂ ವೈಯಕ್ತಿಕ ವಿಷಯಗಳನ್ನು ಕೇಳುವುದು, ಮಹಿಳೆಯ ಒಪ್ಪಿಗೆಯಿಲ್ಲದೆ ಆ ವಿಷಯಗಳನ್ನು ಕುರಿತು ಚರ್ಚಿಸುವುದು, ಸಲಹೆ ನೀಡುವುದು, ಸೆಕ್ಸ್ ಟಾಯ್ಸ್ ಬಗ್ಗೆ ಮಾತನಾಡುವುದು, ಅವುಗಳ ಚಿತ್ರ ತೋರಿಸುವುದು,ಉದ್ದೇಶಪೂರ್ವಕವಾಗಿ ಅವುಗಳನ್ನು ಸಹೋದ್ಯೋಗಿ ಮಹಿಳೆಗೆ ಕಾಣಿಸುವಂತೆ ಪ್ರದರ್ಶಿಸುವುದು ಮತ್ತು ಒಳ ಉಡುಪುಗಳ ಬಗ್ಗೆ ವರ್ಣಿಸುವುದು, ಅವುಗಳ ಬ್ರ್ಯಾಂಡ್, ಬಣ್ಣ, ದರ ಇವುಗಳ ಬಗ್ಗೆ ಸಾಂಕೇತಿಕವಾಗಿ ಕೇಳುವುದು, ದಾಂಪತ್ಯದ ಬಗ್ಗೆ ಮಾತಿಗೆಳೆಯುವುದು, ಮುಟ್ಟಿನ ಬಗ್ಗೆ ಮತ್ತು ಅದಕ್ಕೆ ಸಂಬಂಧಪಟ್ಟ ಭಾವನೆಗಳ ಬಗ್ಗೆ ಮಹಿಳೆಯ ಒಪ್ಪಿಗೆ ಇಲ್ಲದೆ ಅವಳೊಡನೆ ಮಾತನಾಡುವುದು, ಅವರ ಬಗ್ಗೆ ತಪ್ಪು ಭಾಷೆ ಬಳಸುವುದು, ಬೆದರಿಕೆ ಒಡ್ಡುವುದೂ ಅಪರಾಧ ಆಗಿರುತ್ತದೆ.
ಆಕೆ ತಾನು ಹೇಳಿದಂತೆ ಕೇಳಿದರೆ ಇನ್ಕ್ರಿ ಮೆಂಟ್, ಪ್ರೊಮೋಷನ್ ಕೊಡಿಸುವುದಾಗಿ ಆಮಿಷ ಒಡ್ಡುವುದು, ಮೇಲಧಿಕಾರಿ ಅಥವಾ ಸಹೋದ್ಯೋಗಿಗಳು ಆಕೆಯನ್ನು ಸಾಲ ಕೊಡಲು ಒತ್ತಾಯಿಸುವುದು, ಸಾಲವನ್ನು ಹಿಂದಿರುಗಿ ಕೇಳಿದಾಗ ಅಸಭ್ಯವಾಗಿ ವರ್ತಿಸುವುದು, ಅಶ್ಲೀಲ ಮತ್ತು ಅಸಭ್ಯ ಮನವಿ, ಒತ್ತಡಗಳನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪೂರೈಸದಿದ್ದಲ್ಲಿ ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆಯೊಡ್ಡುವುದು, ಆಕೆಯ ಕೆಲಸವನ್ನು ದುರುದ್ದೇಶದಿಂದ ಅಲ್ಲಗೆಳೆಯುವುದು, ಅವಳ ಕೆಲಸದಲ್ಲಿ ವೃಥಾ ತಲೆ ಹಾಕುವುದು, ಮಾನಸಿಕ ಆರೋಗ್ಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅವಮಾನಕರವಾಗಿ ನಡೆದುಕೊಳ್ಳುವುದು ಅಪರಾಧ. ನೇರವಾಗಿ ಉದ್ಯೋಗ ಪಡೆದುಕೊಂಡವರಿಗೆ, ಗುತ್ತಿಗೆ ದಾರರ ಮೂಲಕ ಕೆಲಸ ಪಡೆದುಕೊಂಡು ಅಸಂಘಟಿತ ವಲಯದಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಈ ಕಾನೂನು ಅನ್ವಯವಾಗುತ್ತದೆ.
ಅಂಜಲಿ ರಾಮಣ್ಣ
(ಲೇಖಕರು: ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಕೀಲರು)
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…