ಮಹಿಳೆ ಸಬಲೆ

ವಿದೇಶಕ್ಕೆ ಹೊರಡುವ ಮುನ್ನ ವೀಸಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಅಂಜಲಿ ರಾಮಣ್ಣ

ಆಗಸ್ಟ್ ೨೦೧೭ – ಯಮನ್ ದೇಶದ ನ್ಯಾಯಾಲಯವು ಅಲ್ಲಿದ್ದ ಕೇರಳದ ನಿಮಿಶಾ ಪ್ರಿಯ ಎಂಬಾಕೆಯನ್ನು ಕೊಲೆ ಆರೋಪಿ ಎಂದು ಬಂಧಿಸಿತು. ಕೊಲೆಯಾದ ಯಮನ್ ಪ್ರಜೆ ಈಕೆಯ ಪಾಸ್‌ಪೋರ್ಟ್‌ಅನ್ನು ಬಲವಂತದಿಂದ ಕಸಿದುಕೊಂಡು ಆಕೆಯ ಮೇಲೆ ದೌರ್ಜನ್ಯ ಎಸಗುತ್ತಿದ್ದನಂತೆ. ವಾದ ವಿವಾದ ಏನೇ ಇದ್ದರೂ ಆ ರಾಷ್ಟ್ರದ ನ್ಯಾಯಾಲಯ ಆಕೆಗೆ ೨೦೧೮ರಲ್ಲಿ ಮರಣದಂಡನೆ ವಿಧಿಸಿತು.

ಭಾರತದ ‘ಸೇವ್ ನಿಮಿಶಾ ಪ್ರಿಯ ಇಂಟರ್ ನ್ಯಾಷನಲ್ ಆಕ್ಷನ್ ಕೌನ್ಸಿಲ್’ ಸಂಘಟನೆಯು ಭಾರತ ಸರ್ಕಾರವು ಮಧ್ಯೆ ಪ್ರವೇಶಿಸಿ ಆಕೆಯನ್ನು ರಕ್ಷಿಸಲು ಸಹಾಯ ಮಾಡಬೇಕೆಂದು ಇಲ್ಲಿನ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಆಕೆಯ ತಾಯಿಯು ಯಮನ್ ದೇಶದ ಕಾನೂನಿನ ಪ್ರಕಾರ ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ‘ಬ್ಲಡ್ ಮನಿ’ ಕೊಡಲು ೮.೫ ಕೋಟಿ ರೂಪಾಯಿಗಳ ಹಣ ಸಂಗ್ರಹಣೆ ಮಾಡಿದ್ದರು. ಆದರೆ ಆ ಕುಟುಂಬದೊಡನೆ ಸಂಧಾನ ಸಾಧ್ಯವಾಗದೆ ಜುಲೈ ೧೬ರಂದು ಆಕೆಯನ್ನು ನೇಣಿಗೆ ಹಾಕಲು ಅಲ್ಲಿನ ಆಡಳಿತ ಮುಂದಾಗಿತ್ತು. ಅಪರೂಪದಲ್ಲಿ ಅಪರೂಪ ಎನ್ನುವಂತೆ ಆಕೆಯ ಮರಣದಂಡನೆರದ್ದಾಗಿದೆ. ಇಲ್ಲಿಯವರೆಗೂ ಆಕೆ ಯಮನ್ ದೇಶದ ಜೈಲಿನಲ್ಲಿ ಬಂದಿಯಾಗಿದ್ದಾರೆ.

ಅಕ್ಟೋಬರ್ ೨೦೧೨ -ಐರ್ಲೆಂಡ್‌ನಲ್ಲಿ ವಾಸವಿದ್ದ ಭಾರತೀಯ ದಂತ ವೈದ್ಯೆ ಗರ್ಭಿಣಿಡಾ.ಸವಿತಾ ಹಾಲಪ್ಪನವರ್ ಆರೋಗ್ಯದ ತೊಂದರೆಯಿಂದ ಗರ್ಭಪಾತ ಮಾಡಿಸಿಕೊಳ್ಳಬೇಕಿತ್ತು. ಆದರೆ ಅಲ್ಲಿನ ಕಾನೂನಿನಂತೆ ಗರ್ಭಪಾತ ಮಾಡುವ ಹಾಗಿರಲಿಲ್ಲ. ನಂಜು ಮೈಯೆಲ್ಲಾ ಏರಿ ಆಕೆಯ ಸಾವಾಯಿತು. ನಮ್ಮ ದೇಶದ ರಾಯಭಾರ ವ್ಯವಸ್ಥೆಯಾಗಲೀ ಸರ್ಕಾರವಾಗಲೀ ಏನೂ ಮಾಡಲಾಗಲಿಲ್ಲ.

(ನಂತರದ ದಿನಗಳಲ್ಲಿ ಐರ್‌ಲ್ಯಾಂಡಿನ ಗರ್ಭಪಾತ ಕಾನೂನು ಬದಲಾಯಿತು)

ಫೆಬ್ರವರಿ ೨೦೨೨ – ಉಕ್ರೇನ್ ಯುದ್ಧದ ಸಮಯದಲ್ಲಿ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ಕಾನೂನುಗಳ ಚೌಕಟ್ಟಿನೊಳಗೆ ಹಿಂದಿರುಗಿ ಕರೆತರಲಾಯಿತು. ರಾಯಭಾರ, ಭಾರತೀಯ ವಿದೇಶಿ ಸೇವೆ ಇವುಗಳ ಬಗ್ಗೆ ಅರಿವಿಲ್ಲದೆಯೇ ಯುವಕರು ಭಾರತೀಯ ದೂತಾವಾಸದ ಮೇಲೆ ಆಪಾದನೆಗಳನ್ನು ಹೊರೆಸಿದರು. ವಿದೇಶಗಳಲ್ಲಿ ನರ್ಸ್ ಹುದ್ದೆಗೆ, ಮನೆಗೆಲಸಕ್ಕೆ, ಮಕ್ಕಳನ್ನು ನೋಡಿಕೊಳ್ಳುವುದಕ್ಕೆ, ಆಂಗ್ಲ ಭಾಷೆಯನ್ನು ಕಲಿಸುವ ಶಿಕ್ಷಕಿಯರಾಗಿ, ವಿದ್ಯಾರ್ಥಿನಿಯರಾಗಿ ಅಥವಾ ಅಲ್ಲಿ ನೆಲೆಸಿರುವ ಗೃಹಸ್ಥನ ಗೃಹಿಣಿಯಾಗಿ ನಮ್ಮ ದೇಶದ ವಿದ್ಯಾ ವಂತ, ಅವಿದ್ಯಾವಂತ ಹೆಂಗಸರು ಹೋಗುತ್ತಲೇ ಇರುತ್ತಾರೆ. ದೇಶ ದೇಶಗಳ ನಡುವಿನ ಸಂಬಂಧಗಳನ್ನು ನಿರ್ವಹಿಸುವ ನಿಯಮಗಳನ್ನು ಸುರಕ್ಷತೆಯ ದೃಷ್ಟಿಯಿಂದ ತಿಳಿದುಕೊಂಡಿರಬೇಕು. ವಿದೇಶದಲ್ಲಿ ಭಾರತೀಯರು ಕಷ್ಟಕ್ಕೆ ಸಿಕ್ಕಿಕೊಂಡಾಗ ಅಲ್ಲಿನ ರಾಯಭಾರಿ ಕಚೇರಿಯ ಪಾತ್ರವೇನೆನ್ನುವ ಮಾಹಿತಿ ಇಟ್ಟುಕೊಳ್ಳದೆ ಮತ್ತು ತಾವುಗಳು ಹೋದ ವೀಸಾ ಸ್ಟೇಟಸ್‌ಗೆ ಇರುವ ಕರ್ತವ್ಯದ ಬಗ್ಗೆ ತಿಳಿದುಕೊಳ್ಳದೆ ಹೋಗುವುದು ಅಪಾಯಕಾರಿ.

೧೯೭೨ರಲ್ಲಿ ಭಾರತ The Diplomatic Relations (Vienna Convention) Act ಜಾರಿಗೆ ತಂದಿದೆ. ಅದರಂತೆ ಬಹುಪಾಲು ದೇಶದ ರಾಜಧಾನಿಗಳಲ್ಲಿ ಭಾರತವು ರಾಯಭಾರಿ ಕಚೇರಿಯನ್ನು ( Embassy ) ಅಥವಾ ದೂತಾವಾಸ (Consulate) ಹೊಂದಿರಲಿದೆ. ಇವುಗಳ ಮುಖ್ಯ ಉದ್ದೇಶವು ರಾಷ್ಟ್ರಗಳ ನಡುವಿನ ವ್ಯಾಪಾರ ವೃದ್ಧಿ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯ ಹಾಗೂ ದೇಶಗಳ ನಡುವಿನ ಸೌಹಾರ್ದತೆಯನ್ನು ಹೆಚ್ಚಿಸುವುದು. ಸರ್ಕಾರಗಳ ನಡುವಿನ ಸಂವಹನಕ್ಕೆ ಒಂದು ಅವಕಾಶ ಕೊಂಡಿಯಂತೆ ಕೆಲಸ ನಿರ್ವಹಿಸುವುದು. ಇಂತಹ ರಾಯಭಾರ ಕಚೇರಿಗಳು ಹೊರದೇಶದಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಗೆ ಸುಲಲಿತವಾದ ಜೀವನ ನಿರ್ವಹಣೆಗೆ ಬೇಕಾದ ನೆರವು ನೀಡಬೇಕಿರುತ್ತದೆ. ಭಾರತೀಯನೊಬ್ಬ ಹೊರದೇಶದ ಕಾನೂನು ಉಲ್ಲಂಘನೆ ಮಾಡಿದರೆ ನಮ್ಮ ರಾಯಭಾರ ಕಚೇರಿ ಅಲ್ಲಿನ ಕಾನೂನನ್ನು ತಿಳಿಸಿಕೊಡಬಲ್ಲ ಪರಿಣತರೊಬ್ಬರನ್ನು ಒದಗಿಸಿಕೊಡಬಹುದೇ ಹೊರತು, ಜಾಮೀನು ನೀಡುವುದು, ಲಾಯರ್ ಫೀಸ್ ಕೊಡುವುದು, ಅಲ್ಲಿನ ನ್ಯಾಯಾಲಯಗಳೊಡನೆ ಸಂಧಾನ ನಡೆಸುವುದು ಇಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿ ಉಂಟಾದಾಗ ಆ ದೇಶದಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆಗಳ ಬಗ್ಗೆ ಮಾಹಿತಿ ಮಾತ್ರ ನೀಡಬಲ್ಲದು. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯುವ ಕೆಲಸ ಮಾಡುತ್ತದೆಯೇ ಹೊರತು, ಅವರುಗಳ ಆಸ್ತಿಪಾಸ್ತಿಗಳ ನಷ್ಟವನ್ನು ಭರಿಸಿಕೊಡುವುದಿಲ್ಲ. ಭಯೋತ್ಪಾದನೆ, ರಾಜಕೀಯ ಪ್ರಕ್ಷುಬ್ಧತೆ ಮತ್ತು ಯುದ್ಧದ ಪರಿಸ್ಥಿತಿಗಳಲ್ಲೂ ಅಲ್ಲಿನ ಕಾನೂನಿನ ಎಲ್ಲೆ ಮೀರದೆ ಭಾರತೀಯರನ್ನು ರಕ್ಷಿಸಲು ನೆರವು ನೀಡಬೇಕು ಎನ್ನುವುದು ಕೇವಲ ಶಿಷ್ಟಾಚಾರವಾಗಿದೆ.

ಅಲ್ಲಿರುವ ಭಾರತೀಯನೊಬ್ಬನಂತೆ ರಾಯಭಾರ ಕಚೇರಿಯ ಸಿಬ್ಬಂದಿಗಳೂ, ಅಧಿಕಾರಿಗಳೂ ಆ ದೇಶದ ಕ್ರಿಮಿನಲ್ ಕಾನೂನಿಗೆ ಹೊರತಾಗಿರುವುದಿಲ್ಲ. ಯಾವ ಉದ್ದೇಶಕ್ಕಾದರೂ ವಿದೇಶಕ್ಕೆ ಹೋದ ಪ್ರತಿಯೊಬ್ಬ ಭಾರತೀಯನೂ ಅಲ್ಲಿನ ರಾಯಭಾರ ಅಥವಾ ದೂತಾವಾಸ ಕಚೇರಿಯಲ್ಲಿ ಪಾಸ್‌ಪೋರ್ಟ್, ವೀಸಾ ಸಹಿತ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

(ಲೇಖಕರು: ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಕೀಲರು)

ಆಂದೋಲನ ಡೆಸ್ಕ್

Recent Posts

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

43 mins ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

48 mins ago

ಕೋಳಿ ಮೊಟ್ಟೆಗೆ ಬರ: ಏರಿದ ದರ

ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ  ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…

57 mins ago

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

10 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

11 hours ago