Anjali ramanna
ಅಂಜಲಿ ರಾಮಣ್ಣ
2019ರಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯೊಬ್ಬರು ಕರೆಮಾಡಿ ‘17 ವರ್ಷದ ಹುಡುಗನೊಬ್ಬ ಹುಡುಗಿಯಾಗಿ ನಮ್ಮ ಜೊತೆಯಿರಬೇಕೆಂದು ಬಂದಿದ್ದಾನೆ ಏನ್ಮಾಡೋದು’ ಎಂದು ಕೇಳಿದರು. ಕೂಡಲೇ ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರುಪಡಿಸುವಂತೆ ಹೇಳಲಾಯ್ತು.
ಮಾರನೆಯ ದಿನ ಸಮುದಾಯದವರು ಬಾಲಕನನ್ನು ಕರೆದುಕೊಂಡು ಬಂದರು. ಕಾನೂನಿನ ಪ್ರಕಾರ ಅವನ ಕುಟುಂಬದವರೊಡನೆ ಮಾತನಾಡದೆ ಪ್ರಕರಣವನ್ನು ಇತ್ಯರ್ಥ ಮಾಡುವ ಹಾಗಿಲ್ಲ. ಅವನನ್ನು ಆ ಸಮುದಾಯದ ಜನರಿಗೆ ಒಪ್ಪಿಸುವ ಹಾಗೂ ಇಲ್ಲ. ಮನೆಯವರೊಡನೆ ಹೋಗಲೊಲ್ಲೆ ಎನ್ನುವ ಹುಡುಗ, ಅವನು ಗಂಡು ಹುಡುಗನ ಹಾಗೆ ನೇರವಾಗಿ ಇರುವುದಾದರೆ ಮಾತ್ರ ಕರೆದುಕೊಂಡು ಹೋಗುತ್ತೇ ವೆಂದು ಹಠ ಹಿಡಿದಿದ್ದ ತಂದೆ-ತಾಯಿ. ಆ ಬಾಲಕ ತನ್ನನ್ನು ತಾನು ಹುಡುಗಿ ಎಂದೇ ಹೇಳಿಕೊಳ್ಳುತ್ತಿದ್ದರಿಂದ ತುರ್ತು ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಅವನನ್ನು ಮುಂದಿನ ನಡೆಯವರೆಗೂ ಬಾಲಕಿಯರ ಮಂದಿರದಲ್ಲಿ ದಾಖಲಿಸಿಕೊಳ್ಳಲು ಆದೇಶ ಮಾಡಲಾಯಿತು. ಬಾಲಕಿಯರ ಅಥವಾ ಬಾಲಕರ ಅನುಪಾಲನಾ ಸಂಸ್ಥೆಗೆ ಮಕ್ಕಳನ್ನು ದಾಖಲಿಸುವಾಗ ಕೆಲವು ಪ್ರಾಥಮಿಕ ತಪಾಸಣೆಗಳಿರುತ್ತವೆ.
ಅದೇ ಕಾರಣವನ್ನು ಮುಂದಿಟ್ಟುಕೊಂಡು ಬಾಹ್ಯದಲ್ಲಿ ಸಂಪೂರ್ಣವಾಗಿ ಹುಡುಗನ ಹಾಗೆ ಇದ್ದವನ ಬಟ್ಟೆಯನ್ನು ಕಳಚಿ ಪರೀಕ್ಷೆ ಮಾಡುವಾಗ (ಹಾಗೆ ಮಾಡುವುದು ಕಾನೂನು ಬಾಹಿರ) ಸಿಬ್ಬಂದಿ ಹೌಹಾರಿದ್ದರು. ಯಾವುದೇ ತರ ಬೇತಿ ಇಲ್ಲದ ಅವರುಗಳಿಗೆ ಪ್ರಪಂಚದಲ್ಲಿ ಹೀಗೂ ಇರಬಹುದಾದ ಸಾಧ್ಯತೆಯ ಬಗ್ಗೆ ಕಲ್ಪನೆಯಿರಲಿಲ್ಲ.
ನಡುರಾತ್ರಿಯಲ್ಲಿ ಮತ್ತೆ ಫೋನ್ ಸದ್ದು. ‘ಅಯ್ಯೋ ಇದು ಹುಡುಗಿಯಲ್ಲ ಹುಡುಗ. ಇಲ್ಹೇಗಿಟ್ಕೊಳ್ಳೋದು, ಹುಡುಗಿರೆಲ್ಲಾ ಹೆದರಿದ್ದಾರೆ. ಅವನು ರಾತ್ರಿ ನಮಗೆಲ್ಲಾ ಹೊಡೆದು ಏನಾದರೂ ಮಾಡಿದ್ರೆ ಏನ್ಮಾಡೋದು, ಈಗಲೇ ಇದನ್ನು ಬಾಯ್ಸ್ ಹೋಮಿಗೆ ಹಾಕಿ’. ಬಾಲಕನ ಜೊತೆ ಮಾತನಾಡಿ, ಧೈರ್ಯ ತುಂಬಿ ಅದೊಂದು ರಾತ್ರಿಗೆ ಬಾಲಕರ ಮಂದಿರದಲ್ಲಿ ಇರಲು ಕಳುಹಿಸಲಾಯಿತು. ಅಲ್ಲಿದ್ದವರೂ, ಮಕ್ಕಳು, ಬೆಳಗಿನ ವೇಳೆಗೆ ಇವನನ್ನು ಹೈರಾಣು ಮಾಡಿಬಿಟ್ಟಿದ್ದರು.
2017ರಲ್ಲಿ ರಿಟ್ ಅರ್ಜಿ 604 /2013 -ನ್ಯಾಷನಲ್ ಲೀಗಲ್ vsಯೂನಿಯನ್ ಆಫ್ ಇಂಡಿಯಾ ಅಂಡ್ ಅದರ್ಸ್ ಇದರ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಮೇರೆಗೆ ಕರ್ನಾಟಕ ಸರ್ಕಾರ 2017ನೇ ಇಸವಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಬಗ್ಗೆ ಕರ್ನಾಟಕದ ಟ್ರಾನ್ಸ್ಜೆಂಡರ್ ನೀತಿ ರೂಪಿಸಿದೆ. ಅದರಂತೆ 2018ರ ಒಳಗೆ ಕಾನೂನು ರೀತ್ಯಾ ಅಂಥ ಮಕ್ಕಳಿಗೆ ರಕ್ಷಣೆ/ಪೋಷಣೆ ಕೊಡುವ ಸ್ಥಳದ ವ್ಯವಸ್ಥೆಯಾಗಬೇಕಿತ್ತು. ಆದರೆ ಮಾಡಿರಲಿಲ್ಲ. ಈಗ ಆ ಬಾಲಕನಿಗೆ ಹೇಗೆ ರಕ್ಷಣೆ ಕೊಡುವುದು? ಮಕ್ಕಳ ನ್ಯಾಯ ಕಾಯಿದೆಯಲ್ಲಿ ಅರ್ಹ ವ್ಯಕ್ತಿಯನ್ನು ಗುರುತಿಸಿ ಷರತ್ತುಗಳನ್ವಯ ತಾತ್ಕಾಲಿಕವಾಗಿ ಆ ಸಮುದಾಯದ ವ್ಯಕ್ತಿಯೊಬ್ಬರ ಸುಪರ್ದಿಗೆ ಕೊಡುವುದೊಂದೇ ಇದ್ದ ಅವಕಾಶ. ಪುನಃ ಕರೆಸಲಾದಾಗ ಸಮುದಾಯದ ಮುಖ್ಯಸ್ಥೆ ಬಂದರು. ಅರ್ಹ ವ್ಯಕ್ತಿಯೆನಿಸಿಕೊಳ್ಳಲು ಏನೆಲ್ಲಾ ದಾಖಲೆಗಳನ್ನು ತರಬೇಕೆನ್ನುವ ಪಟ್ಟಿ ನೀಡುತ್ತಾ ಗತ್ಯಂತರವಿಲ್ಲದೆ ಬಾಲಕನನ್ನು ಒಂದು ವಾರದವರೆಗೂ ಅವರ ರಕ್ಷಣೆಗೆ, ಕಾಲೇಜಿಗೆ ಹೋಗುತ್ತಿರಬೇಕೆನ್ನುವ ನಿಯಮದೊಡನೆ ಕಳುಹಿಸಲಾಯಿತು.
ನಾಲ್ಕನೆಯ ದಿನಕ್ಕೇ ಎಲ್ಲರೂ ಓಡೋಡಿ ಬಂದರು. ಹುಡುಗ ಸೀರೆಯುಟ್ಟು ದೊಡ್ಡ ಕುಂಕುಮ, ಬಳೆ, ಸರ ಎಲ್ಲದರ ಅಲಂಕಾರದಲ್ಲಿ ನಿಂತಿದ್ದ. ತಾನು ಕಾಲೇಜಿಗೆ ಇದೇ ಬಟ್ಟೆ ಹಾಕಿಕೊಂಡು ಹೋಗಬೇಕು, ಅಲ್ಲೆಲ್ಲರೂ ಆಡಿಕೊಳ್ಳುತ್ತಿದ್ದಾರೆ ಹಾಗಾಗಿ ಕಾಲೇಜಿಗೆ ಹೋಗುವುದಿಲ್ಲವೆನ್ನುತ್ತಿದ್ದ. ಮುಖ್ಯಸ್ಥೆ ತಾನು ಪೊಲೀಸ್ ಕ್ಲಿಯರೆನ್ಸ್ ತರುವುದಿಲ್ಲ ಹಾಗಾಗಿ ಬಾಲಕನನ್ನು ಇಟ್ಟುಕೊಳ್ಳುವುದಿಲ್ಲ ನೀವು ಏನಾದರೂ ಮಾಡಿಕೊಳ್ಳಿ ಎಂದು ಹೇಳಿ ಹೊರಟು ಹೋದರು. ಆಪ್ತಸಮಾಲೋಚನೆ ಎನ್ನುವುದು ದೀರ್ಘವಾದ ಪ್ರಕ್ರಿಯೆ. ಆದರೆ ಈಗ ಜೀವವನ್ನು ರಕ್ಷಿಸಿಕೊಳ್ಳಲೂ ತಾವಿಲ್ಲದಾಗಿದೆ. ಕೊನೆಗೂ ದುಃಖಿತ ಹುಡುಗ ತನ್ನ ಮನೆಯವರ ನಿಬಂಧನೆಗಳಿಗೆ ಒಪ್ಪಿ ತನ್ನನ್ನು ಮನೆಗೇ ಕಳು ಹಿಸಿಕೊಡಿ ಎಂದು ಬೇಡಿಕೊಂಡ.
ಅಧಿಕಾರವಿದ್ದು, ಮಕ್ಕಳ ರಕ್ಷಣೆಯನ್ನು ಜವಾಬ್ದಾರಿಯಾಗಿ ಒಪ್ಪಿಕೊಂಡೂ ಕಾನೂನಿನ ಮೌನದಿಂದಾಗಿ ಜೀವವೊಂದು ಮುರುಟಿ ಹೋಗುವುದನ್ನು ನೋಡಬೇಕಾಯ್ತು. ಇಂತಹದ್ದೇ ಇನ್ನೆರಡು ಘಟನೆಗಳಾದವು. ಅಸಹಾಯಕತೆ ಗಿಂತ ನೋವಿಲ್ಲ ಎಂದುಕೊಳ್ಳುತ್ತಲೇ ಅನುಭವಿಸಿದ್ದಾಯ್ತು. ಆದರೀಗ ಹಾಗಿಲ್ಲ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಮುಖಾಂತರ ಮಿಷನ್ ವಾತ್ಸಲ್ಯ ಯೋಜನೆ ಯಡಿಯಲ್ಲಿ ರಕ್ಷಣೆ ಮತ್ತು ಪೋಷಣೆ ಅಗತ್ಯ ಇರುವ ಟ್ರಾನ್ಸ್ಜೆಂಡರ್ ಮಕ್ಕಳಿಗಾಗಿ 2023ರಲ್ಲಿ ರಾಜ್ಯ ಸರ್ಕಾರ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತ ಎಂದು ಗುರುತಿಸಿಕೊಳ್ಳುವ ಅಪ್ರಾಯಸ್ಥರಿಗಾಗಿ ಗಂಡು -ಹೆಣ್ಣು ಇಬ್ಬರಿಗೂ ಪ್ರತ್ಯೇಕವಾದ ತಂಗುದಾಣವನ್ನು ಬೆಂಗಳೂರಿನಲ್ಲಿ ತೆರೆದಿದೆ.
ಆಯಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಅವಶ್ಯಕತೆ ಇರುವವರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
(ಲೇಖಕರು, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಕೀಲರು)
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…