• ಮಧುರಾಣಿ ಎಚ್.ಎಸ್.
ತಾನು ನಗುವಾಗ ಪ್ರೇಕ್ಷಕರನ್ನೂ ನಗಿಸಿ, ತಾನು ಅಳುವಾಗ ಎಲ್ಲರನ್ನೂ ತನ್ನೊಟ್ಟಿಗೆ ಅಳಿಸಿ ಬಿಡುವ ಅಪೂರ್ವ ನಟಿ ಅಕ್ಷತಾ ಪಾಂಡವಪುರ ಎನ್ನುವುದನ್ನು ಅಚ್ಚಳಿಯದಂತೆ ನಮಗೆ ದಾಟಿಸಿದ ಸಂಜೆ ಅದು. ಅಕ್ಷತಾ ಬರೆದಿರುವ ಪುಸ್ತಕ ‘ಲೀಕ್ ಔಟ್’ನ ಮೇಲೆ ಆಧಾರಿತವಾಗಿ ರಚನೆಗೊಂಡಿರುವ ಈ ರಂಗ ಪ್ರಯತ್ನ ನಮಗೇ ಗೊತ್ತಿರದ ನಮ್ಮೊಳಗಿನ ನಮ್ಮನ್ನು ಬಯಲಿಗೆಳೆಯಲು ಮಾಡಿದ ಒಂದು ಸುಸಜ್ಜಿತ ಸಾಹಸ.
“ನೀವು ಯಾರನ್ನು ನೋಡಲು ಬಂದಿದ್ದೀರಿ?” ಎಂದು ನಟಿ ಜಾಣ್ಣೆಯಿಂದ ಕಥೆ ಶುರು ಮಾಡಿದಾಗಲೇ ನಾವು, ಅಂದರೆ ಪ್ರೇಕ್ಷಕರು ಅರಿತುಕೊಳ್ಳಬೇಕಿತ್ತು, ಇದು ಯಾರನ್ನೋ ನೋಡಲು ಅಲ್ಲ, ನಮ್ಮನ್ನು ನಾವೇ ನೋಡಿಕೊಳ್ಳಲು ಬಂದದ್ದು ಎಂದು!’ ಅದನ್ನು ಯಾರ ಬಾಯಿಂದಲೂ ಬರಿಸದೆ ಕೇವಲ ಪ್ರೇಕ್ಷಕರ ಆತ್ಮಸಾಕ್ಷಿಗೆ ಗೊತ್ತು ಮಾಡಿದ ಚಾಣಾಕ್ಷತೆ ಆ ಪ್ರಯೋಗದಲ್ಲಿತ್ತು. ‘ನಾವು ನಾವೇ ಅಲ್ಲವೇ?’ ಎಂಬ ಸುಳ್ಳು ಹೊದಿಕೆಯೊಳಗೆ ನಾವು ಏನೇನೆಲ್ಲಾ ಆಗಿದ್ದೇವೆ ಎಂಬುದನ್ನು ಕರಾರುವಾಕ್ಕಾಗಿ ತೋರಿಸಿದ ಗರಿಮೆ ಆಕೆಗೆ ಸೇರುತ್ತದೆ.
ಮಂಜುಳಾ, ಶಾರದಮ್ಮ, ರಂಜು… ಹೀಗೆ ಬಹು ಸಾಧಾರಣ ಹೆಸರುಗಳನ್ನುಳ್ಳ ಪಾತ್ರಗಳು ಅಷ್ಟೇ ಸಾಧಾರಣವಾಗಿಯೇ ರಂಗದ ಮೇಲೆ ಬಂದು ಹೋಗುತ್ತಾರೆ. ಒಂದು ಅವರ ಜಗತ್ತಿಗೆ ತೋರುವ ಮುಖ, ಇನ್ನೊಂದು ಜಗತ್ತು ಎಂದೂ ಕಾಣದ/ ತೋರಿಸದ ಒಳಮುಖ, ಡಾಕ್ಟರ್ ಭಟ್, ಅವರ ಹೆಂಡತಿ ಕರಿ ನೈಟಿಯ ಸಿಡುಕಿ ಹಾಗೂ ಶಾರದಮ್ಮನ ಗಂಡನಾದ ಮರ್ಯಾದಾ ಪುರುಷೋತ್ತಮ ಜನನಾಯಕ, ಇವರೆಲ್ಲರೂ ಎಲ್ಲೋ ಇಲ್ಲ. ವಾಸ್ತವದಲ್ಲಿ ಒಂದು ಕಡೆ ನಮ್ಮೊಳಗೇ ಇದ್ದಾರೆ. ಈಗ ಅವರವರ ಜಾಗದಲ್ಲಿ ನಿಂತು ನಮ್ಮನ್ನೇ ನಮಗೆ ಕಾಣಿಸುತ್ತಿದ್ದಾರೆ ಎನ್ನಿಸದೆ ಇರಲಾರದು. ಸಮಾಜ ಎಂದರೆ ಯಾರು? ಎಂದು ಪದೇ ಪದೇ ಕೇಳುವ ಆಕೆ, ನಾನು ಸುತ್ತಿಕೊಳ್ಳುವ ಅಥವಾ ಕಿತ್ತೆಸೆಯ ಬಯಸುವ ತುಂಡು ಬಟ್ಟೆಗೆ ನೀವ್ಯಾಕೆ ಹೆಸರಿಡಲು ಒದ್ದಾಡುತ್ತೀರಿ? ಎಂದು ಕೇಳಿ ತಬ್ಬಿಬ್ಬು ಮಾಡುತ್ತಾಳೆ. ತುಂಬಾ ಸರಳವಾದ ಮಾತುಗಳಲ್ಲಿ ಸಾಮಾಜಿಕ ಹಾಗೂ ನೈತಿಕ ನೆಲೆಗಟ್ಟಿನಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಜಿಜ್ಞಾಸೆಯ ಬಗ್ಗೆ ಈ ಮೂಲಕ ಬಹುದೊಡ್ಡ ಪ್ರಶ್ನೆ ಎತ್ತುತ್ತಾರೆ ಅಕ್ಷತಾ.
ತಮಾಷೆಯಾಗಿ ಉಡಾಫೆ ಮಾತುಗಳಲ್ಲಿ ಶುರುವಾಗುವ ಪ್ರಸ್ತುತಿಯೊಂದಿಗೆ ನಿಧಾನವಾಗಿ ಬರೆಯುವ ಪ್ರೇಕ್ಷಕರಿಗೆ ನಂತರ ಅವರು ನೋಡುತ್ತಿರುವ ದೃಶ್ಯ ಏನೆಂಬುದರ ಅರಿವಾದಾಗ ಅವರ ಕಣ್ಣಾಲಿಗಳೇ ತುಂಬಿ ಭಾವನಾತ್ಮಕವಾಗಿ ಪಾತ್ರಗಳೊಂದಿಗೆ ಅವರು ಬೆರೆತಾಗಿರುತ್ತದೆ. ಆಗ ರಂಗದ ಮೇಲಿರುವ ನಟ, ನಟಿಯಾಗಿರದೆ ಅಮ್ಮನಾಗುತ್ತಾರೆ, ಮಗಳಾಗುತ್ತಾರೆ, ಪಕ್ಕದ ಮನೆಯ ಮುಗುದೆ ಹೆಣ್ಣಾಗುತ್ತಾರೆ.
ಎಂದೋ ಒಂದು ದಿನ ನಾವೆಲ್ಲರೂ ಯಾರಾರ ಮೇಲೋ ಸಾಂದರ್ಭಿಕವಾಗಿ ಮಾಡಿದ ಏನೇನೋ ಕಮೆಂಟ್‌ಗಳ ಅಕ್ಷತಾರ ಪಾತ್ರಗಳಲ್ಲಿ ಗೋಚರಿಸುತ್ತಾ ಹೋಗಿ ನಮ್ಮ ಬಗ್ಗೆ ನಮಗೇ ಭಯ ಹುಟ್ಟುತ್ತದೆ. ಹೌದು ಇದು ನಾನೇ ಎಂದು ನಮ್ಮ ನಿಜ ಮುಖವನ್ನು ನಾವು ಒಪ್ಪಿಕೊಳ್ಳಬಲ್ಲೆವೆ? ಎಂಬ ಪ್ರಶ್ನೆ ಕಾಡುತ್ತದೆ. ಪ್ರತಿದಿನವೂ ಸತ್ತು ಬದುಕುತ್ತಿದ್ದ ಹೆಣ್ಣೂಬ್ಬಳು ಕಡೆಗೊಮ್ಮೆ ಗಂಡನನ್ನು ಕಳೆದುಕೊಂಡು ಸಮಾಜದೆದುರು ಮುಂಡೆ ಎನಿಸಿಕೊಂಡು ನಿಂತಾಗ ಅವಳ ಗಂಡ ಸತ್ತ ಹೊತ್ತಿನಲ್ಲಿ ರೀತಿ ರಿವಾಜುಗಳೇ ಹೆಚ್ಚಾಗುತ್ತವೆ. ಮನುಷ್ಯತ್ವ ನೇಪಥ್ಯಕ್ಕೆ ಸರಿದು ಹೋಗುತ್ತದೆ.
ಸಾಂತ್ವನದ ಬದಲಾಗಿ ಆಚರಣೆಯ ಹೆಸರಲ್ಲಿ ನೊಂದವಳನ್ನು ಮತ್ತೆ ಮತ್ತೆ ನೋಯಿಸಿ ಅಂತರಾಳದಿಂದ ಕೊಲ್ಲಲಾಗುತ್ತದೆ. 11ನೇ ದಿನ ಕುಂಕುಮ ಬಳೆ ತೆಗೆಯುವ ಹೊತ್ತಿನಲ್ಲಿ ನೂರು ಜನರ ಕಣ್ಣ ಮುಂದೆ ತನ್ನದಾದ ಎಲ್ಲವನ್ನೂ ಅವನ ಹೆಸರಿನಲ್ಲಿ ಕಳೆದುಕೊಳ್ಳುವಾಗ ಕೇವಲ ಆಕೆಯೊಬ್ಬಳೇ ಅನುಭವಿಸಬಹುದಾದ ಸಂಕಟದ ಕರಾಳ ಮುಖವು ಮಂಜುಳೆಯ ಪಾತ್ರದ ಮುಖಾಂತರ ಮುಖಾಮುಖಿಯಾಗುತ್ತದೆ. ಆದರೂ ಅದು ನಾವೇ ಆಗದ ಹೊರತು ನಮಗೆ ಅರಿವಾಗುವುದಿಲ್ಲ. “ನಿನ್ನ ಜಾಗದಲ್ಲಿ ನಿಂತು ನಾನು ಯೋಚಿಸಬಲ್ಲೆ” ಎನ್ನುವ ಮಾತು ಎಷ್ಟು ಬಾಲಿಶ! ಎಂಬ ಅರಿವು ಶಾರದಮ್ಮ ಮಂಜುಳ ಇಬ್ಬರ ಪಾತ್ರದಲ್ಲಿಯೂ ಸಾಬೀತಾಗುತ್ತದೆ.
ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…
ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…