ಹಾಡು ಪಾಡು

ಸಿಕ್ಕು ಒಂದು ಅಪೂರ್ಣ ಕಥೆ

ಶ್ರೀಕೃಷ್ಣ ಆಲನಹಳ್ಳಿ

ಕನ್ನಡ ಕಥಾಲೋಕದಲ್ಲಿ ಸಣ್ಣಪ್ರಾಯದಲ್ಲೇ ಒಂದು ನಕ್ಷತ್ರದಂತೆ ಬೆಳಗುತ್ತಿದ್ದ ಶ್ರೀಕೃಷ್ಣ ಆಲನಹಳ್ಳಿ, ಅಷ್ಟೇ ಸಣ್ಣ ಪ್ರಾಯದಲ್ಲಿ ಈ ಲೋಕ ಬಿಟ್ಟು ತೆರಳಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡದೊಂದು ನಿರ್ವಾತ ಸೃಷ್ಟಿಸಿತು. ಇಂತಹ ಒಬ್ಬ ಅನನ್ಯ ಕಥೆಗಾರನ ಎಲ್ಲ ಕಥೆಗಳೂ ಈಗ ಸಮಗ್ರ ಸಂಪುಟ ರೂಪದಲ್ಲಿ ಪ್ರಕಟವಾಗಿದ್ದು, ಈ ಪುಸ್ತಕದಲ್ಲಿರುವ ಆಲನಹಳ್ಳಿಯವರ ಅಪೂರ್ಣ ಕಥೆಯ ಆಯ್ದ ಭಾಗ ನಿಮ್ಮ ಈ ಭಾನುವಾರದ ಓದಿಗೆ ಇಲ್ಲಿದೆ

ಮನೆಗೆ ಬಂದೊಡನೆ ನನ್ನನ್ನು ಕಂಡವನೆ ಖುಷಿಯಾಗಿಬಿಡುತ್ತಿದ್ದವನು ಅವತ್ತು ಯಾಕೋ ಬಿಮ್ಮನೆ ಬಿಗಿದುಕೊಂಡು ಕೂತುಬಿಟ್ಟ. ನನಗೆ ಗೊತ್ತು: ಅವನ ಮನಸ್ಸಿಗೆ ತುಂಬಾ ಬೇಜಾರಾದಾಗ ಮಾತ್ರ ಅವನು ಹೀಗೆ. ಅವನ ಪಕ್ಕ ಕೂತು ಅವನು ಮಾತಾಡುವವರೆಗೂ ನಾನು ಏನೂ ಮಾತಾಡದೆ ಅವನ ಕೂದಲೊಳಗೆ ಬೆರಳಾಡಿಸುತ್ತ ಕೂತೆ. ಹಾಗೆ ಮಾಡಿದರಷ್ಟೆ ಸಾಕು ಅವನು ತಾನಾಗಿಯೆ ಉಕ್ಕಿ ಬಂದಂತೆ ನನ್ನನ್ನು ಅಪ್ಪಿಕೊಂಡು ಅತ್ತುಬಿಡುತ್ತಿದ್ದ. ಇಲ್ಲ ತನ್ನೊಳಗಿನದನ್ನೆಲ್ಲ ತೋಡಿಕೊಂಡು ಬಿಡುತ್ತಿದ್ದ. ಆದರವತ್ತು ಏನೂ ಪ್ರತಿಕ್ರಿಯಿಸಲಿಲ್ಲ. ಬಿಗಿದುಕೊಂಡೇ ಇದ್ದ. ಕಡೆಗೆ ನಾನೇ ಅವನನ್ನು ರಮಿಸುತ್ತ “ಯಾಕೋ ಹೀಗೆ” ಅಂದೆ. ಚಂಡಿ ಹಿಡಿದ ಮಗುವಿನಂತೆ ಮಾತೇ ಆಡದೆ ಹಠಮಾಡಿದ.

ಕಡೆಗೆ ಸಿಟ್ಟಿನಿಂದ ನೀನಿಲ್ಲೆ ಹೀಗೇ ಕೂತಿರು. ನಾನು ಹೋಗ್ತೇನೆ ಎಂದು ಎದ್ದು ನಿಂತೆ. ಸಡಿಲಗೊಂಡವನಂತೆ ಉದ್ದ ಉಸಿರು ಬಿಡುತ್ತ ಕತ್ತೆತ್ತಿ ನನ್ನ ಮುಖಕ್ಕೆ ಕಣ್ಣು ನೆಟ್ಟು ತೋಳುಗಳಿಂದ ನನ್ನ ಮೊಣಕಾಲುಗಳನ್ನೂ ಬಿಗಿದುಕೊಂಡು ತುಂಬಾ ಗಂಭೀರ ದನಿಯಲ್ಲಿ ಅಂದ: ನೋಡು, ರಾತ್ರಿ ನಾನೊಂದು ಕತೆ ಬರೆದೆ. ಅದೀಗ ನನ್ನ ಜೇಬಿನಲ್ಲೇ ಇದೆ. ನೀನು ಅದನ್ನ ಓದಬೇಕು. ಓದಿಯಾದ ಮೇಲೆ ನನ್ನ ನಿನ್ನ ಸಂಬಂಧ ಹೀಗಿರಲಾರದು. ನೀನು ನನ್ನ ಬಗ್ಗೆ ಇಟ್ಟುಕೊಂಡಿರೊ ಆಸೆಗೆಲ್ಲ ಅದು ಬೆಂಕಿ. ನನಗದು ಗೊತ್ತು. ಏನೆ ಆದರು ನಿನಗದು ಗೊತ್ತಾಗಬೇಕು, ಗವಿಯೊಳಗಿನ ಸಿಳ್ಳು ಹಾವಿನದೊ ಮನುಷ್ಯನದೊ. ನನಗೆ ಗೊತ್ತೇ ಇಲ್ಲವಾಗಿತ್ತು. ಈಗ ಸ್ಪಷ್ಟವಾಗಬೇಕು ಅದು ನನಗಾದಂತೆ ನಿನಗೂ ಕೂಡ. ಅದಕ್ಕೆಂದೆ ನಾನು ಈ ಕತೆ ಬರೆದದ್ದು ಅಂದ. ತಮಾಷೆ ಅನ್ನಿಸಿತು. ಜೊತೆಗೆ ಭಯವಾಯಿತು. ಇವನು ಯಾವತ್ತೂ ಹೀಗಿಲ್ಲ. ಬರೆದ ಕತೆಯ ಬಗ್ಗೆ ಏನೂ ಪೀಠಿಕೆ ಇಲ್ಲದೆ ‘ಓದಿ ನೋಡೆ’ ಎಂದು ಕೈಗೆ ತುರುಕಿ ಹೋಗುತ್ತಿದ್ದ. ಬರೆದ ಕತೆಯ ಮಸಿಯಾರುವ ಮುಂಚೆ ಓದಿಬಿಡುತ್ತಿದ್ದೆ. ಅರ್ಥವಾಗಲಿ ಆಗದಿರಲಿ ಅವನೊಳಗಿನ ಅನಿಸಿಕೆಗಳೆ, ಅವನ ಬದುಕಿನ ಘಟನೆಗಳೆ ಬಹಳಮಟ್ಟಿಗೆ ಅವನ ಕತೆಗಳಾದ್ದರಿಂದ ಅವು ಇಷ್ಟವೆನಿಸಿದ್ದವು. ಆತ್ಮೀಯವಾಗಿದ್ದವು. ಅಲ್ಲದೆ ಬಹಳಷ್ಟು ನನ್ನ ಕಾಟಕ್ಕಾಗಿಯೆ ಅವನು ಬರೆದವು. ನನ್ನಾಸೆ ಅವನು ದೊಡ್ಡ ಲೇಖಕನಾಗಬೇಕೆಂದು. ಅವನಿಗೆ ಏನೂ ಬೇಕಿಲ್ಲ. ನಿರಾಸಕ್ತ. ಲಾಭವಿಲ್ಲದ ಮಾತಿದ್ದರೆ ಸಾಕು.

ಯಾರಾದರೂ ಸರಿಯೆ ಕಡೆಗೆ ಸಣ್ಣಮಕ್ಕಳೇ ಸಾಕು. ಮಾತು ಮಾತು. ಹೊತ್ತಿನ ಪರಿವೆಯೇ ಇಲ್ಲ. ಬರೆಯಲು ನಾನು ಪೀಡಿಸಿ ತೊಡಗಿಸಿಬಿಟ್ಟರೆ ಅವನೊಬ್ಬ ಹುಚ್ಚ. ಬರೆಯುವಾಗ ಬರೆದಾದ ಮೇಲೆ ಎಷ್ಟೋ ದಿನ ಮಂಕಾಗಿ ಶಾಪಗ್ರಸ್ತನಂತಾಗಿ ಬಿಡುತ್ತಿದ್ದ. ಯಾಕೆ ಹೀಗೆ ಅಂದರೆ ನಿನಗೇನು ತಮಾಷೆ ಕಣೆ. ನನಗೆ ಜೀವಹಿಂಸೆ. ಸುಲಭವಾಗಿ ಬರೆಯೊ ಅಂತ ಕಾಡುತ್ತಿ. ಬರೆಯಲು ಕೂತರೆ ಜೀವಕ್ಕೆ ಬಂದಂತೆ ಬರೆದಾದ ಮೇಲೂ ಅತೃಪ್ತಿ ಸಂಕಟ ಅನ್ನುತ್ತಿದ್ದ. ಕೆಲವು ದಿನದಿಂದ ನಾನು ಅವನಿಗೆ ಕತೆ ಸುದ್ದಿಯನ್ನೆ ಎತ್ತಿರಲಿಲ್ಲ. ಈಗ ತಾನಾಗಿಯೇ ಬರೆದು ತಂದಿದ್ದೀನಿ ಅಂದಾಗ ತುಂಬಾ ಕುತೂಹಲ ಅಲ್ಲದೆ ಅದರ ಬಗ್ಗೆ ಬೆಚ್ಚಿಬೀಳುವ ಪೀಠಿಕೆ. ನಿಂತಿದ್ದವಳು ಅವನಿಗೆ ಅಂಟಿ ಕೂತೆ. ಮೆಲ್ಲಗವನ ಕೈ ಅದುಮುತ್ತ ಏನು ಕತೆಯೊ ಅದು ಅಂದೆ. ಸ್ವಲ್ಪ ಹೊತ್ತು ಸುಮ್ಮನಿದ್ದು ‘ಈ ಕತೆಗೆ ವಸ್ತು ಏನೂ ಇಲ್ಲ ಅಂದ. ವಿಚಿತ್ರವೆನಿಸಿತು. ಅದರ ಹೆಸರಾದರೂ ಏನು ಹೇಳು ಅಂದೆ. ಸಂಬಂಧ ಎಂದು ತಟ್ಟನೆ ಮುಖ ಕೆಳಗೆ ಮಾಡಿದ. ಎಲ್ಲೊ ಕೇಳಿದ್ದ ಯಾರೊ ಪಿಸುಗುಟ್ಟಿದ್ದ ಕಳ್ಳದನಿಯಿರಬೇಕೆಂದು ಮಬ್ಬುಮಬ್ಬಾಗಿ ನೆನಪಾಗತೊಡಗಿತು. ತುಂಬಾ ಒತ್ತಾಯ ಮಾಡಿದೆ. ಉತ್ಕಂಠಕನಾಗ ತೊಡಗಿದ. ‘ಬೇಡ ಅದನ್ನು ನೀನು ಓದೋದು ಬೇಡ. ಓದಿದರೆ ನನ್ನ ಮುಖ ನೋಡದೆ ಓಡಿಹೋಗುತ್ತಿ ಅಥವಾ ಬೈದು ನನ್ನನ್ನ ಓಡಿಸುತ್ತಿ’ ಎಂದು ನನ್ನನ್ನೇ ದುರುಗುಟ್ಟಿ ನೋಡಿದ. ನನಗೂ ಕೆಲವು ದಿನಗಳಿಂದ ಯಾಕೊ ಇವನು ಒಂದು ಥರ ವಿಚಿತ್ರ ಅನ್ನಿಸಿತ್ತು.

ಮೊದಲ ಹಾಗಲ್ಲ. ನನ್ನನ್ನೇ ರೆಪ್ಪೆ ಅಲುಗಿಸದೆ ನೋಡುತ್ತ ಕೂತುಬಿಡುತ್ತಿದ್ದ. ‘ಯಾಕೊ ಹಾಗೆ ನೋಡುತ್ತಿ’ ಅಂದರೆ ಬರಿದೆ ನಕ್ಕುಬಿಡುತ್ತಿದ್ದ. ಒಳಗೇ ಭಯವಾಯಿತು. ಆದರೂ ಇವನನ್ನು, ಇವನ ಗುಪ್ತ ಅಭಿಲಾಶೆಯನ್ನೂ ಹೆದರಿಸುವುದು ಕಷ್ಟವಲ್ಲ ಅನ್ನುವುದೂ ಗೊತ್ತಿತ್ತು. ಆದ್ದರಿಂದಲೆ ತಮಾಷೆಯಾಗಿ ನಿನ್ನ ಅವಳ ಸಂಬಂಧ ಮುರಿದ ಕತೆಯೇನೊ ಅಂದೆ. ಮತ್ತಷ್ಟೂ ಉತ್ಕಂಠಿತವಾಗಿ ಹೌದು, ಅವಳ ಸಂಬಂಧ ಮುರಿದ ಮತ್ತು…. ಮತ್ತು ಹಾಗೆಯೆ ಮಾತು ಮುಗಿಸದೆ ಬಿಕ್ಕತೊಡಗಿದ. ಅವನ ಒಳಗುದಿ ನನಗೆ ಅರ್ಥವಾಗತೊಡಗಿತು.

ಅನ್ನಿಸುತ್ತೆ: ನನ್ನಿಂದಾಗಿಯೆ ಇವನಿಗಿಷ್ಟು ಸಂಕಟ ಅಂತ. ಇವನಾಗಿಯೆ ಅವಳನ್ನು ಇಷ್ಟಪಟ್ಟ. ಇವನ ಇಷ್ಟಕ್ಕೆ ನಾನು ಅಡ್ಡಿಯಾಗಲಿಲ್ಲ. ಸಹಕರಿಸಿದೆ. ಅದು ಗಾಢವಾಗಲೆಂದು ಆಸೆಪಟ್ಟೆ. ಅವರಿಬ್ಬರ ಸ್ವಚ್ಛಂದತೆಗೆ ಖುಷಿಯಾದರೂ ಎಚ್ಚರಿಸುತ್ತಲೇ ಇದ್ದೆ. ನಾನು ಅಂದುಕೊಂಡಂತೆ ಆಗಲಿಲ್ಲ. ಅವನ ಅವಳ ಸಂಬಂಧ ಕೂಡಿದರೂ ಬೆಸೆಯಲಿಲ್ಲ. ಅವಳು ಇವನಿಗೆ ತಕ್ಕವಳಲ್ಲ ಇವನೊಡನೆ ಸಾಮರಸ್ಯ ಸಾಧ್ಯವಿಲ್ಲ ಅನ್ನುವುದು ನನಗೆ ಗೊತ್ತಿದ್ದರೂ ಅಸಹಾಯಕಳಾದೆ. ಇಬ್ಬರ ನಡುವೆ ದಿನವೂ ಒಂದೊಂದು ಅಡ್ಡ ಗೋಡೆಗಳು. ಅವುಗಳನ್ನೊಡೆಯಲು ಪ್ರಯತ್ನಿಸತೊಡಗಿದೆ. ನನ್ನ ಈ ದುರಸ್ತಿ ಅವನಿಗೆ ಬೇಕಿಲ್ಲ. ಸಿನಿಕನಾಗತೊಡಗಿದ್ದಾನೆ. ಭಯವಾಯಿತು. ಇವನು ಹೀಗೆ ಕುಟ್ಟೆ ಹಿಡಿದ ಮರದ ಹಾಗೆ ಒಳಗೊಳಗೇ ಜೀರ್ಣವಾಗಿ ಇದ್ದ ಶಕ್ತಿಯನ್ನೆಲ್ಲ ಕಳೆದುಕೊಂಡುಬಿಟ್ಟಾನೆಂದು ಭಯವಾಯಿತು. ಅವನ ರೂಮಿಗೆ ಒಬ್ಬಳೇ ಹೋದೆ. ಅವರಿವರು ಕಂಡಾರೆಂಬ ಭಯವಿದ್ದರೂ ಇವನಿಗಾಗಿ, ಇವನ ಸುಖಕ್ಕಾಗಿ ಏನನ್ನಾದರೂ ಕೊಡಲು ಯಾವತ್ತೂ ಮನಸ್ಸು ಹಿಂದಾದುದಿಲ್ಲ. ಅವನು ರೂಮಲ್ಲಿರಲಿಲ್ಲ. ಅರ್ಧ ಗಂಟೆ ಕಾದೆ. ಅಷ್ಟರಲ್ಲಿ ಎಷ್ಟೋ ಜನ ನನ್ನನ್ನು ಸಂಶಯಾಸ್ಪದ ರೀತಿಯಲ್ಲೆ ನೋಡಿ ಹೋದರು. ನನಗೇನೂ ಅಂಥ ಅವಮಾನ ಅನ್ನಿಸಲಿಲ್ಲ. ಅವನದೇ ಕಾತರ. ಅವನಿಗಾಗಿ ಏನನ್ನಾದರೂ ಭರಿಸಬಲ್ಲೆನೆಂಬ ನಿಲುವು ಇವತ್ತಿನದಲ್ಲ. ಅವನ ಬಗ್ಗೆ ಯಾರೊಬ್ಬರೂ ಕಡೆಗೆ ನನ್ನನ್ನು ಸಾಕಿ ದೊಡ್ಡವಳನ್ನಾಗಿ ಮಾಡಿದವರೂ ಕೂಡ ಹಗುರವಾಗಿ ಅವನ ಮನಸ್ಸಿಗೆ ನೋವಾಗುವಂಥ ಒಂದು ಮಾತನ್ನು ಕೂಡ ಆಡಲು ಬಿಟ್ಟವಳಲ್ಲ. ಆಡಿದರೂ ಅದನ್ನು ಸಹಿಸಿದವಳಲ್ಲ. ಆ ಅರ್ಧ ಗಂಟೆ ಮನಸ್ಸೆಲ್ಲ ಅವನಲ್ಲಿ ಮುಳುಗಿತ್ತು. ಯಾಕಾಗಿ ಇವನ ಬಗೆಗೆ ನನಗಿಷ್ಟು ಕಳಕಳಿ? ಆದರ? ಆತ್ಮೀಯತೆ? ಯಾಕಾಗಿ? ಯಾಕಾಗಿ? ಅರ್ಥವಾಗುತ್ತಿಲ್ಲ. ಇತ್ತೀಚೆಗಿನ ಇವನ ಈ ತೆರನ ರೀತಿಯೆ ಅರ್ಥವಾಗು ತ್ತಿಲ್ಲ. ಅವನಾಗಿ ಇಷ್ಟಪಟ್ಟವಳೊಡನೆ ಸಾಂಗತ್ಯ ಸಾಧ್ಯವಿಲ್ಲದೆ ಹೀಗಾದನೆ? ಏನನ್ನೊ ಕಳೆದುಕೊಂಡವನಂತೆ ಏನೊ ತಪ್ಪು ಮಾಡಿದವನಂತೆ. ಒಳಗೆ ಹೀಗೆ. ಬೇರೆಯವರಿಗೆಲ್ಲ ಹೊರಗೆ ಸಂತೃಪ್ತ ನಗು. ನನಗೆ ಅವನ ನಗು ಮುಖದ ಹಿಂದಿನ ನೋವು ಗೊತ್ತು. ಅದಕ್ಕಾಗಿ ಅತ್ತಿದ್ದೇನೆ. ಅವನ ಹಾಗೆಯೆ ನಾನೂ ಒಳಗೊಳಗೆ ನೋವುಂಡು ನಕ್ಕಿದ್ದೇನೆ. ಅವನು ನನ್ನಲ್ಲಿ ಏನನ್ನೂ ಮುಚ್ಚಿಡುವುದಿಲ್ಲ. ನಾನೂ ಅಷ್ಟೆ. ನನ್ನ ಪರಿಚಿತಳೊಬ್ಬಳು ಅವನನ್ನು ತುಂಬಾ ಇಷ್ಟಪಟ್ಟಳು. ಅವನ ದೌರ್ಬಲ್ಯ ನನಗೆ ಗೊತ್ತಿತ್ತು. ಆಕಸ್ಮಿಕ ಅವನಿಗವಳನ್ನು ಪರಿಚಯಿಸಿದೆ. ಪರಿಚಯ ಗಾಢವಾಗತೊಡಗಿದ್ದನ್ನು ಕಂಡು ಎಚ್ಚರಿಸಿದೆ. ಮತ್ತೆ ಯೋಚಿಸಿದೆ.

ಇಬ್ಬರದೂ ಒಂದೇ ಬಗೆಯ ಅಭಿಲಾಶೆಯಿರುವ ವ್ಯಕ್ತಿತ್ವಗಳು. ಕೂಡಿದರೆ ಹೇಗೆ ಎಂದು ಯೋಚಿಸುತ್ತಿರುವಾಗಲೆ ಅವನಿಗೆ ಹಠಾತ್ತನೆ ಅವಳೂ ಬೇಡವಾಗಿಬಿಟ್ಟಳು. ಅವನ ಬದುಕಲ್ಲಿ ಕಾಲಿಟ್ಟವರೆಲ್ಲ ಅವನ ಕನಸುಗಳನ್ನೆಲ್ಲ ತುಂಡುದನಗಳ ಹಾಗೆ ತುಳಿದುಹೋದವರೆ. ಇದಕ್ಕೆಲ್ಲ ಕಾರಣ ಅವನ ದುರ್ಬಲ ಮನಸ್ಸು. ದೃಢತೆಯಿಲ್ಲ. ತಟ್ಟನೆ ಮರುಳಾಗುತ್ತಾನೆ. ಮುಳುಗುತ್ತಾನೆ. ಉಸಿರು ಕಟ್ಟಿದಾಗ ಚಡಪಡಿಸುತ್ತ, ಕೈಕಾಲು ಬಡಿಯುತ್ತ ನನ್ನ ಮಡಿಲಿನಲ್ಲಿ ಮುಲುಗುಟ್ಟುತ್ತಾನೆ. ಮಗುವಾಗುತ್ತಾನೆ. ದಿನವೂ ನನಗೆ ಇವನದೇ ಸಮಸ್ಯೆ. ಇವನನ್ನು ಸರಿಪಡಿಸಬೇಕು. ಇವನ ಸಿಕ್ಕನ್ನು ಬಿಡಿಸಬೇಕು. ನಿರಾಳವಾಗಿಸಬೇಕು. ಜೀವನಕ್ಕೆ ಸಾಹಿತ್ಯಕ್ಕೆ ತೊಡಗಿಸಬೇಕು. ಹೀಗೆ ಇವನದೇ ಇವನ ಬಗೆಗಿನದೇ ಯೋಚನೆ.

ನಿಂತು ನಿಂತು ಸಾಕಾಗಿತ್ತು. ಕಡೆಗೆ ಬಂದ. ಇಷ್ಟು ಕಾಯಿಸಿದರೂ ಇವನ ಬಗ್ಗೆ ಕೋಪ ಬರಲಿಲ್ಲ. ಅವನೇ ದಡಬಡ ಬಾಗಿಲು ತೆರೆದು ಇಷ್ಟು ಕಾಯಿಸಿದ್ದಕ್ಕೆ ನೊಂದುಕೊಂಡ. ಏನೊ ಮಣಭಾರ ಹೊತ್ತವನಂತೆ ನೆಲಕ್ಕೇ ಕಣ್ಣುನೆಟ್ಟು ಬರುತ್ತಿದ್ದವನು ನನ್ನನ್ನು ಕಂಡದ್ದೆ ಹಗುರವಾಗಿಬಿಟ್ಟ. ನನ್ನ ತೊಡೆ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿ ಮಲಗಿಬಿಟ್ಟ. ಬಿಸಿಲಿನಲ್ಲಿ ತುಂಬಾ ಆಟವಾಡಿ ದಣಿದು ಬಂದ ಮಗುವಿನ ಹಾಗೆ ಇವನಾದ. ಕ್ಷಣದ ಹಿಂದೆ ನಾನು ಅಂದುಕೊಂಡಂತೆಯೇ ಆಯಿತು. ಎಷ್ಟೋ ಹೊತ್ತು ಹಾಗೆಯೆ ಮಲಗಿದ್ದ. ಬಿಸಿಲು ಇಳಿಮುಖವಾಗಿತ್ತು. ಇವನ ರೂಮಿನ ಮುಂದಿನ ದೊಡ್ಡ ಸಂಪಿಗೆ ಮರದ ಚಿಗುರು ಕೊಂಬೆಯೊಂದು ಕಿಟಿಕಿಯನ್ನು ಒತ್ತರಿಸಿ ಚಾಚಿತ್ತು. ತಣ್ಣಗೆ ಬೀಸತೊಡಗಿದ್ದ ಗಾಳಿಗೆ ಎಲೆಗಳು ಅಲುಗತೊಡಗಿದ್ದವು. ಮೆಲ್ಲಗೆ ಕೆನ್ನೆಗೆ ಹೊಡೆದು ಎಚ್ಚರಿಸಿದೆ. ಹೊತ್ತಾಯಿತು ಏಳೊ ಹೋಗುವ ಅಂದೆ. ತೊಡೆಯನ್ನು ಬಿಗಿಯಾಗಿ ಅಪ್ಪಿಕೊಂಡು ‘ಬೇಡ, ನೀನು ಹೋಗುವುದು ಬೇಡ’ ಎಂದು ಹಠ ಮಾಡತೊಡಗಿದ. ಅವನ ಮುಖದ ತುಂಬ ಮುತ್ತಿಟ್ಟೆ. ಹುಚ್ಚು ಹಿಡಿದವನಂತೆ ತನ್ನ ಎದೆಗೆ ನನ್ನನ್ನು ಬಿಗಿದಪ್ಪಿಕೊಂಡು ಬೇಡ, ನೀನು ನನ್ನನ್ನು ಬಿಟ್ಟು ಹೋಗಬೇಡ ಒಬ್ಬಂಟಿಯಾದರೆ ಮತ್ತೆ ನರಕ. ನನ್ನಾಣೆ ನನಗೆ ಈ ಏಕಾಂತ, ಒಬ್ಬಂಟಿತನ ಸಾಧ್ಯವಿಲ್ಲ. ಸತ್ತೇ ಹೋಗುತ್ತೇನೆ…’ ಎಂದೆಲ್ಲ ಹಲುಬತೊಡಗಿದ. ಮತ್ತೆ ರಮಿಸುತ್ತ ಅವನಿಗೆ ಧೈರ್ಯ ತುಂಬತೊಡಗಿದೆ. ನಾನು ಬೇಡ, ನೀನು ನನ್ನೊಡನೆ ಬಯಸುತ್ತಿರುವ ಸಂಬಂಧ ಬೇಡ ಎಂದು ಉಪಾಯವಾಗಿ ಅವನಿಂದ ಬಿಡಿಸಿಕೊಂಡು ಮೇಲೇಳತೊಡಗಿದಂತೆ ಉದ್ವೇಗದಿಂದ ಕಂಪಿಸುತ್ತ ಅಳತೊಡಗಿದ. ನನಗಂತೂ ದಾರಿಯೆ ಕಾಣದಾಯಿತು. ಏನು ಮಾಡುವುದು. ನಾನು ಬಲ್ಲವರಿಗೆ ಇವನ-ನನ್ನ ಸಂಬಂಧ ಏನಂತ ಹೇಳಿದ್ದೇನೆ. ನನ್ನ ಬಗೆಗಿನ ಅವರ ಆ ಚಿತ್ರ ಕಪ್ಪು ಹಿಡಿಯಬಾರದು. ಉದ್ವಿಗ್ನಳಾದೆ… ಅವನ ಬಲಿಷ್ಠ ತೋಳುಗಳು ಸರ್ಪಗಳು ಅನ್ನಿಸಿತು. ತಟ್ಟನೆ ಕಿತ್ತೆಸೆದು ಮನೆಗೆ ಹೊರಟುಹೋದೆ. ದಾರಿಯುದ್ದಕ್ಕೂ ಮಂಜು ಕವಿದಂತೆ. ಇವನ ಸಂಬಂಧ ಇಷ್ಟಕ್ಕೆ ಸಾಕು. ನಾನೂ ಬದುಕಬೇಕು. ಎಲ್ಲವೂ ಇವನಿಗಾಗಿಯೆ ಅಲ್ಲ. ತುಂಬಾ ಸ್ವಾರ್ಥಿ. ನಾನು ಯಾವುದನ್ನು ಬೇಡ ಅನ್ನುತ್ತೇನೊ ಅದನ್ನೇ ಮಾಡುತ್ತಾನೆ. ನನ್ನವರಿಗಾಗಿ ನನ್ನ ಈ ತುಟಿಗಳು ಎಂದರೂ ಬಿಡದೆ ಅವನ್ನೂ ಕಚ್ಚಿ ತಿಂದ. ಸಂಜೆಯಾಗಿತ್ತು. ದಾರಿಯುದ್ದಕ್ಕೂ ಬಸ್ಸು ಕಾರುಗಳ ಸದ್ದನ್ನೂ ಮೀರಿಸುವ ಸದ್ದು ನನ್ನೊಳಗೆ…

ಆಂದೋಲನ ಡೆಸ್ಕ್

Recent Posts

ಕೇರ್ ಟೇಕರ್ ಕೆಲಸಕ್ಕೆ ಸೇರಿ ಮನೆ ದರೋಡೆ; ಆರೋಪಿ ಬಂಧನ

ಮಡಿಕೇರಿ: ವಯೋವೃದ್ಧರೊಬ್ಬರ ಮನೆಯಲ್ಲಿ ಹೋಂ ನರ್ಸಿಂಗ್(ಕೇರ್ ಟೇಕರ್) ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ…

4 hours ago

ಮಹದೇಶ್ವರ ಬೆಟ್ಟ : ವಿವಿಧ ಸೇವೆಗಳಿಂದ 1.16 ಕೋಟಿ ಸಂಗ್ರಹ

ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಶನಿವಾರ ಹಾಗೂ ಯುಗಾದಿ ಜಾತ್ರಾ…

4 hours ago

ಹೊರ್ಮುಜ್‌ ಜಲಸಂಧಿ ಶತ್ರುಗಳಿಗೆ ಮಾತ್ರ ಮುಚ್ಚಿದೆ : ಇರಾನ್

ಟೆಹ್ರಾನ್ : ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆಯೂ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶತ್ರು ರಾಷ್ಟ್ರ ಮತ್ತು…

5 hours ago

ಹುಣಸೂರು | ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆ

ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿ ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲು…

5 hours ago

ಕುಕ್ಕರಹಳ್ಳಿ ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ ; ಪ್ರತಿಭಟನೆ

ಮೈಸೂರು : ಕುಕ್ಕರಹಳ್ಳಿ ಕೆರೆಯ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿ ವತಿಯಿಂದ ಕುಕ್ಕರಹಳ್ಳಿ…

5 hours ago

2 ಸಾವಿರ ಬೋಧಕ ಹುದ್ದೆಗಳಿಗೆ ನೇಮಕಾತಿ : ಉನ್ನತ ಶಿಕ್ಷಣ ಸಚಿವ ಸುಧಾಕರ್‌

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಯಲ್ಲಿ ಖಾಲಿ ಇರುವ…

5 hours ago