ಹಾಡು ಪಾಡು

ಸರ್ಕಾರವನ್ನು ಉರುಳಿಸಲು…” ಪತ್ರವೊಂದರಲ್ಲಿ ಸಜೀವವಾಗಿರುವ ಒಂದು ಪೀಳಿಗೆಯ ಕಥೆ

ಚಿತ್ರ,ಲೇಖನ: ರಶ್ಮಿ ಕೋಟಿ

“ನಿನ್ನೆ ಹುಬ್ಬಳ್ಳಿಯಲ್ಲಿ ಬಹಿರಂಗ ಸಭೆ ಇತ್ತು. ಎಲ್ಲ ಕಾಲೇಜುಗಳ ಬಂದ್ ಆಗಿತ್ತು. ಸುಮಾರು ೫,೦೦೦ ಜನರ ಮೆರವಣಿಗೆ ಆಯಿತು. ಕೆಲಸ ಭರದಿಂದ ಸಾಗುತ್ತಿದೆ ಈ ಕಡೆ.

ಮಲೆನಾಡು ಜಿಲ್ಲೆಗಳಲ್ಲಿ ಕೆಲಸ ತೀವ್ರಗೊಳಿಸಬೇಕಾಗಿದೆ. ಉತ್ತರ ಕರ್ನಾಟಕ + ಮಲೆನಾಡು ಕರ್ನಾಟಕವನ್ನು ನಾವು ಸಂಘಟನೆ ಮಾಡಿದರೆ ಸಾಕಷ್ಟು ಶಕ್ತಿ (ಸರ್ಕಾರವನ್ನು ಉರುಳಿಸಲು) ಬರುತ್ತದೆ.”

೧೯೭೪ರ, ಕೊನೆಯ ದಿನದಂದು ಹುಬ್ಬಳ್ಳಿಯಿಂದ ಬರೆಯಲ್ಪಟ್ಟ ಈ ಪತ್ರದ ಸಾಲುಗಳನ್ನು ಇಂದು ಓದಿದಾಗ, ಅದು ಕೇವಲ ಒಂದು ಸಂಘಟನಾ ವರದಿ ಅನ್ನಿಸುವುದಿಲ್ಲ. ಒಂದು ಪೀಳಿಗೆಯ ಉರಿಯುವ ಮನಸ್ಥಿತಿ, ಅನ್ಯಾಯದ ವಿರುದ್ಧದ ಕೋಪ ಮತ್ತು ಬದಲಾವಣೆಯ ಮೇಲಿನ ನಂಬಿಕೆ ಈ ಸಾಲುಗಳಲ್ಲಿ ಸ್ಪಷ್ಟವಾಗಿ ವೇದ್ಯವಾಗುತ್ತದೆ. ಇದರ ಮೂಲಕ ಒಂದು ಕಾಲಘಟ್ಟವೇ ನಮ್ಮ ಮುಂದೆ ಜೀವಂತವಾಗುತ್ತದೆ.

ಅದು ಸ್ವಾತಂತ್ರ್ಯ ನಂತರದ ಭಾರತದ ನಿರಾಶೆ ಮತ್ತು ಹೊಸ ಹೋರಾಟಗಳ ಕಾಲ… ಸರ್ಕಾರಗಳು ಬದಲಾದರೂ ರೈತನ ಬದುಕು ಬದಲಾಗದ ಕಾಲ… ಗ್ರಾಮೀಣ ಭಾರತ ತನ್ನ ಹಕ್ಕುಗಳಿಗಾಗಿ ಮತ್ತೆ ಹೋರಾಡಬೇಕಾದ ಕಾಲ… ಬೆಲೆ ಏರಿಕೆ, ನಿರುದ್ಯೋಗ, ಆಡಳಿತದ ಮೇಲಿನ ಅಸಮಾಧಾನ, ಭ್ರಷ್ಟಾಚಾರದ ವಿರುದ್ಧದ ಚಳವಳಿಗಳು ರಾಜ್ಯದಿಂದ ರಾಜ್ಯಕ್ಕೆ ಹರಡುತ್ತಿದ್ದ ಕಾಲ… ವಿದ್ಯಾರ್ಥಿಗಳು, ಯುವಕರು, ರೈತರು ಎಲ್ಲರೂ ಹೊಸ ದಾರಿಯನ್ನು ಹುಡುಕುತ್ತಿದ್ದ ಕಾಲ ಅದು. ಕೆಲವೇ ತಿಂಗಳುಗಳ ನಂತರ ದೇಶ ಆಪತ್ತು ಸ್ಥಿತಿಯೊಳಗೆ (Emergency) ಜಾರಲಿದೆ ಎಂಬುದು ಆಗ ಯಾರಿಗೂ ಅರಿವಿರಲಿಲ್ಲ, ಆದರೆ ಆ ಅಶಾಂತಿಯ ನೆರಳು ಎಲ್ಲೆಡೆ ಹರಡಿದ್ದ ಕಾಲ ಅದಾಗಿತ್ತು.

ಈ ಸಂದರ್ಭದಲ್ಲೇ ಎಂ.ಡಿ.ಎನ್. ಹುಬ್ಬಳ್ಳಿಯಲ್ಲಿ ನಡೆದ ಸಭೆಯ ವಿವರವನ್ನು ತೇಜಸ್ವಿಗೆ ಬರೆಯುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ ಮೆರವಣಿಗೆ, ಸಭೆಯ ಉತ್ಸಾಹ, ಸಂಘಟನಾ ಕಾರ್ಯ ವೇಗವಾಗಿ ಸಾಗುತ್ತಿರುವುದು… ಇವೆಲ್ಲವನ್ನೂ ಅವರು ವರದಿ ಮಾಡುತ್ತಾರೆ. ಆದರೆ ಅವರ ಚಿಂತನೆ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಮಲೆನಾಡು ಜಿಲ್ಲೆಗಳಲ್ಲೂ ಸಂಘಟನೆ ಬಲಪಡಿಸಬೇಕೆಂದು ಅವರು ಒತ್ತಿ ಹೇಳುತ್ತಾರೆ.

ಉತ್ತರ ಕರ್ನಾಟಕ ಮತ್ತು ಮಲೆನಾಡು ಒಟ್ಟುಗೂಡಿದರೆ ಒಂದು ಬಲವಾದ ಜನಚಳವಳಿ ಹುಟ್ಟಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ. ಇದೇ ಸಂದರ್ಭದಲ್ಲಿ ಬ್ರಾಕೆಟ್‌ನೊಳಗೆ ಬಲವಾದ ಸಂಘಟನೆಯ ಅವಶ್ಯಕತೆ ಏಕೆಂಬುದನ್ನೂ ಬರೆಯುತ್ತಾರೆ ? “ಸರ್ಕಾರವನ್ನು ಉರುಳಿಸಲು” ಎಂದು! ಅದು ಕೇವಲ ರಾಜಕೀಯ ಘೋಷಣೆ ಅಲ್ಲ, ಅದು ಆ ಕಾಲದ ಅಸಹನೆ ಮತ್ತು ಬದಲಾವಣೆಯ ಆಶಯದ ನೇರ ಅಭಿವ್ಯಕ್ತಿ. ಆದರೆ ಈ ಪತ್ರವನ್ನು ಓದಿದಾಗ ಮತ್ತೊಂದು ಮುಖವೂ ಕಾಣುತ್ತದೆ. ಹೋರಾಟದ ಉತ್ಸಾಹದ ನಡುವೆ ಸಮಾನಮನಸ್ಕ ಗೆಳೆಯರ ಸ್ನೇಹ ಕಳೆದು ಹೋಗಿಲ್ಲ. ಮುಂದಿನ ಕಾರ್ಯಕ್ರಮಗಳು, ಭೇಟಿಗಳು, ಜೊತೆಯಾಗಿ ಪ್ರಯಾಣಿಸುವ ಯೋಜನೆಗಳ ಬಗ್ಗೆ ಸಹಜವಾಗಿ ಬರೆಯಲಾಗಿದೆ. ೧೯೭೫ರ ಜನವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದರೆ ಇಬ್ಬರೂ ಒಟ್ಟಿಗೆ ಬೆಳಗಾವಿಗೆ ಹೋಗಬಹುದು ಎಂದು ಎಂ.ಡಿ.ಎನ್. ಬರೆಯುತ್ತಾರೆ.

ಜೊತೆಗೆ, ಸಾಧ್ಯವಾದರೆ ಜೀಪನ್ನೂ ತರಲು ಹೇಳುತ್ತಾರೆ, ಅದರ ವೆಚ್ಚವನ್ನು ತಾನೇ ಹೊರುತ್ತೇನೆ ಎಂದು ಸ್ನೇಹಪೂರ್ಣವಾಗಿ ಸೇರಿಸುತ್ತಾರೆ. ಎಂ.ಡಿ.ನಂಜುಂಡಸ್ವಾಮಿ ಮತ್ತು ತೇಜಸ್ವಿಯ ಗೆಳೆತನದಲ್ಲಿ ಚಿಂತನೆ, ಹೋರಾಟ ಮತ್ತು ಬದುಕಿನ ಸರಳ ಕ್ಷಣಗಳು ಒಂದರೊಳಗೆ ಮತ್ತೊಂದು ಬೆರೆತು ಹೋಗಿದ್ದವು. ಇವರಿಬ್ಬರ ಒಡನಾಟ ೧೯೫೦ – ೬೦ರ ದಶಕದಲ್ಲಿಯೇ ಆರಂಭವಾಗಿತ್ತು. ಎಂ.ಡಿ.ಎನ್. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾಭ್ಯಾಸ ಮುಗಿಸಿ ಜರ್ಮನಿಗೆ ತೆರಳಿ ಅಂತರರಾಷ್ಟ್ರೀಯ ಕಾನೂನು ಅಧ್ಯಯನ ಮಾಡಿದರು. ಅಲ್ಲಿ ಜಾಗತಿಕ ಆರ್ಥಿಕ ವ್ಯವಸ್ಥೆಗಳು ಹೇಗೆ ಬಡ ದೇಶಗಳ ರೈತರ ಬದುಕಿನ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಅವರಿಗೆ ಸ್ಪಷ್ಟವಾಯಿತು. ಭಾರತಕ್ಕೆ ಮರಳುವಷ್ಟರಲ್ಲಿ ಅವರು ಒಂದು ನಿರ್ಧಾರಕ್ಕೆ ಬಂದಿದ್ದರು- ಹೋರಾಟವನ್ನು ಅಕ್ಷರ ರೂಪಕ್ಕಷ್ಟೇ ಸೀಮಿತಗೊಳಿಸದೆ, ತಳಮಟ್ಟದಲ್ಲಿ ಕೆಲಸ ಮಾಡಬೇಕು ಎಂದು.

ಈ ಅವಧಿಯಲ್ಲೇ ತೇಜಸ್ವಿ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿ ಜೀವನ ಆರಂಭಿಸಿದ್ದರು. ಪ್ರಕೃತಿಯ ನಡುವೆ ಬದುಕನ್ನು ಕಟ್ಟಿಕೊಂಡು ರೈತರ ಸಮಸ್ಯೆಗಳನ್ನು ಸಮೀಪದಿಂದ ನೋಡುತ್ತಿದ್ದರು. ಕಾಫಿ ಬೋರ್ಡಿನ ಪೂಲಿಂಗ್ ವ್ಯವಸ್ಥೆ ಸಣ್ಣ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ ಎಂಬುದನ್ನು ಅವರು ಗಮನಿಸಿದರು. ಅಧಿಕಾರಿಗಳ ಜೊತೆ ನಡೆದ ಸಣ್ಣ ಸಂಘರ್ಷಗಳೇ ರೈತನ ಉದ್ಧಾರ ಅಧಿಕಾರ ವಿರೋಧದ ಹೋರಾಟವಿಲ್ಲದೆ ಸಾಧ್ಯವಿಲ್ಲ ಎಂಬ ಸತ್ಯವನ್ನು ತೇಜಸ್ವಿಗೆ ಮನವರಿಕೆ ಮಾಡಿಸಿದವು. ಇಲ್ಲಿಂದಲೇ ಚಳವಳಿಯ ಬೀಜ ಮೊಳೆಯಿತು. ೧೯೭೧ರಲ್ಲಿಯೇ ತಾವು ಬೆಳೆದ ಕಾಫಿಯನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ನಿರ್ಧಾರ ಪ್ರಕಟಿಸಿದರು. ಈ ನಿರ್ಧಾರ ಬೆಳೆಗಾರರಲ್ಲಿ ಚರ್ಚೆ ಮತ್ತು ಜಾಗೃತಿಗೆ ಕಾರಣವಾಯಿತು.

ಎಂ.ಡಿ.ಎನ್. ಹಾಗೂ ತೇಜಸ್ವಿ ಇಬ್ಬರಲ್ಲಿಯೂ ವೈಚಾರಿಕ ಹೊಂದಾಣಿಕೆ ಎಷ್ಟಿತ್ತೆಂದರೆ, ರೈತರ ಸಂಕಷ್ಟಗಳ ಬಗ್ಗೆ ಮಾತನಾಡುತ್ತಾ “ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು? ಸರ್ಕಾರಗಳು ಆತ್ಮಹತ್ಯೆ ಮಾಡಿಕೊಳ್ಳಬೇಕು” ಎಂದು ತೇಜಸ್ವಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಎಂ.ಡಿ.ಎನ್. ತಮ್ಮ ಚಳವಳಿಯ ಘೋಷಣೆಯನ್ನಾಗಿಯೇ ಮಾಡಿಕೊಂಡಿದ್ದರು.

ಯುವಕರನ್ನು ಸಂಘಟಿಸಬೇಕೆಂಬ ಸಂಕಲ್ಪದಿಂದ ಇಬ್ಬರೂ ಸೇರಿ ಸಮಾಜವಾದಿ ‘ಯುವಜನ ಸಭಾ’ವನ್ನು ಪ್ರಾರಂಭಿಸಿದರು. ಲೋಹಿಯಾ ಅವರ ವಿಚಾರಗಳನ್ನು ಯುವಕರಿಗೆ ಪರಿಚಯಿಸಬೇಕೆಂಬ ಉದ್ದೇಶದಿಂದ ತೇಜಸ್ವಿಯವರ ಚಿತ್ರಕೂಟ ತೋಟದಲ್ಲಿ ಇಬ್ಬರೂ ಕೂಡಿ ಓದು, ಚರ್ಚೆ ನಡೆಸಿ ಲೋಹಿಯಾ ವಿಚಾರಗಳನ್ನೊಳಗೊಂಡ “ಕೆಂಪು ಪುಸ್ತಕ”ವನ್ನು ಪ್ರಕಟಿಸಿದರು. ತೇಜಸ್ವಿ ಅವರ ಬಳಿ ಇದ್ದ ಹಳೆಯ ಫೋರ್ಡ್ ಜೀಪಿನಲ್ಲಿ ಇಬ್ಬರೂ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಯುವಜನರಲ್ಲಿ ಜಾಗೃತಿ ಮೂಡಿಸಿ ಅವರನ್ನು ಸಂಘಟಿಸುವ ಪ್ರಯತ್ನ ಮಾಡಿದರು.

ಹಾಗಾಗಿಯೇ “ಬೆಂಗಳೂರಿಗೆ ಬಂದರೆ ಇಬ್ಬರೂ ಒಟ್ಟಿಗೆ ಬೆಳಗಾವಿಗೆ ಹೋಗಬಹುದು, ಸಾಧ್ಯವಾದರೆ ಜೀಪನ್ನೂ ತನ್ನಿ” ಎಂದು ಎಂ.ಡಿ.ಎನ್., ತೇಜಸ್ವಿ ಅವರ ಜೀಪಿನ ಪ್ರಸ್ತಾಪವನ್ನು ಪತ್ರದಲ್ಲಿ ಮಾಡಿರುವುದು. ತೇಜಸ್ವಿಯವರ ಹಳೆಯ ಫೋರ್ಡ್ ಜೀಪ್ ಎಂದರೆ ಒಂದು ಚಲಿಸುವ ಕಥೆ. ಜೀಪ್ ಸ್ಟಾರ್ಟ್ ಆಗುವಾಗಲೇ ಅದರ ಸ್ವಭಾವ ಗೊತ್ತಾಗುತ್ತಿತ್ತು. ಮೊದಲು ಎಂಜಿನ್ ಗದ್ದಲ ಮಾಡುತ್ತಿತ್ತು… ನಂತರ ಹೊಗೆ… ಕೆಲವೊಮ್ಮೆ ಇಬ್ಬರು ಅಥವಾ ಮೂವರು ಸೇರಿ ತಳ್ಳಬೇಕಾಗುತ್ತಿತ್ತು. ಆದರೆ ಒಮ್ಮೆ ಓಡಲು ಶುರುವಾದರೆ ಅದು ಬೆಟ್ಟದ ದಾರಿಗಳನ್ನೂ, ಕಾಡುಮಾರ್ಗಗಳನ್ನೂ ದಾಟುತ್ತಿತ್ತು. ಅದೇನು ಹೊಳೆಯುವ ವಾಹನವಾಗಿರಲಿಲ್ಲ. ಸದಾ ದೂಳಿನಿಂದ, ಕೆಸರಿನಿಂದ ಮುಚ್ಚಿಕೊಂಡಿರುವ ದೇಹ.

ಅದರಲ್ಲಿ ಪ್ರಯಾಣಿಸುವುದು ಅಷ್ಟು ಸುಲಭವಾಗಿರಲಿಲ್ಲ. ರಸ್ತೆಯ ಗುಂಡಿಗಳು, ತಿರುವುಗಳು, ಉಗ್ಗು ತಗ್ಗುಗಳು… ಪ್ರಯಾಣದ ಕೊನೆಯಲ್ಲಿ ದೇಹವೇ ನಲುಗಿಬಿಡುತ್ತಿತ್ತು. ಮಲೆನಾಡಿನ ಕಚ್ಚಾ ರಸ್ತೆಯಲ್ಲಿ ಒಂದು ಗಂಟೆ ಪ್ರಯಾಣಿಸಿದರೆ ಎರಡು ದಿನ ಕೆಲಸ ಮಾಡಿದಷ್ಟು ದಣಿವು. ಅದಕ್ಕಾಗಿಯೇ ಆ ಜೀಪ್‌ನಲ್ಲಿ ಪ್ರಯಾಣಿಸಲು “ಗಟ್ಟಿಯಾದವರು” ಮಾತ್ರ ತಾಳಬಲ್ಲರು ಎಂದು ಸ್ನೇಹಿತರು ಹಾಸ್ಯ ಮಾಡುತ್ತಿದ್ದರು. ಮಧ್ಯೆ ಟೈರ್ ಪಂಕ್ಚರ್ ಆದರೆ, ತೇಜಸ್ವಿಯೇ ಕೆಳಗಿಳಿದು ಸರಿಪಡಿಸುತ್ತಿದ್ದರು. ಆ ಕಾಲದಲ್ಲಿ ಪ್ರಯಾಣವೇ ಒಂದು ಸಾಹಸ.

ಮಲೆನಾಡಿನ ಕಿರಿದಾದ ದಾರಿಗಳಲ್ಲಿ, ಮಳೆ ಸುರಿಯುವ ರಾತ್ರಿ ಹೊತ್ತು, ಸಭೆ ಮುಗಿಸಿ ಹಿಂತಿರುಗುವ ಪ್ರಯಾಣಗಳಲ್ಲಿ, ಆ ಜೀಪ್ ಅನೇಕ ಸಂಭಾಷಣೆಗಳಿಗೆ ಸಾಕ್ಷಿಯಾಗಿದೆ. ರೈತರ ಸಂಕಷ್ಟಗಳು, ಬೆಳೆಗಳ ಬೆಲೆ, ಸರ್ಕಾರದ ನೀತಿಗಳು, ಮುಂದಿನ ಹೋರಾಟದ ಯೋಜನೆಗಳು… ಎಲ್ಲವೂ ಆ ಜೀಪ್‌ನೊಳಗೆ ಚರ್ಚೆಯಾಗುತ್ತಿತ್ತು.

ಇಂದು ಆ ಪತ್ರವನ್ನು ಓದಿದಾಗ, ಇಬ್ಬರು ಸ್ನೇಹಿತರ ಸಂವಹನವಷ್ಟೇ ಅಲ್ಲ, ಒಂದು ಕಾಲಘಟ್ಟದ ರಾಜಕೀಯ ಅಸಮಾಧಾನ, ರೈತ ಹೋರಾಟಗಳ ಆರಂಭ, ಯುವಕರ ಕನಸುಗಳು, ಮತ್ತು ಸ್ನೇಹದ ಆತ್ಮೀಯತೆ… ಎಲ್ಲವೂ ಆ ಸಾಲುಗಳಲ್ಲಿ ಇಂದಿಗೂ ಜೀವಂತವಾಗಿರುವಂತೆ ಭಾಸ ವಾಗುತ್ತದೆ. “ಸರ್ಕಾರವನ್ನು ಉರುಳಿಸಲು…” ಎಂದು ತೇಜಸ್ವಿಗೆ ಎಂ.ಡಿ.ಎನ್. ಹೇಳುವ ಮಾತು ಕೇವಲ ಸರ್ಕಾರಗಳ ವಿರುದ್ಧದ ಕೋಪದ ಅಭಿವ್ಯಕ್ತಿಯಷ್ಟೇ ಅಲ್ಲ, ಅದು ಅನ್ಯಾಯದ ವಿರುದ್ಧ ಉರಿಯುವ ಮನಸ್ಥಿತಿಯ ಪ್ರತಿಬಿಂಬವೂ ಹೌದು

” ಫೆಬ್ರವರಿ ಹದಿಮೂರನೆಯ ತಾರೀಕು ರೈತ ನಾಯಕ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ತೊಂಬತ್ತನೇ ಜನ್ಮದಿನ. ಅವರನ್ನು ನೆನಪಿಸಿಕೊಳ್ಳುವುದು ಅಂದರೆ ಕನ್ನಡನಾಡಿನ ರೈತ ಹೋರಾಟಗಾರರ ಒಂದು ಪೀಳಿಗೆಯನ್ನು, ಅವರ ನಡುವಿನ ಸ್ನೇಹವನ್ನು ಮತ್ತು ರೈತರ ಪರ ನಿಂತ ದಿಟ್ಟತನವನ್ನು ನೆನಪಿಸಿಕೊಳ್ಳುವುದಾಗಿದೆ. ಈ ಎಲ್ಲದರ ಕುರಿತ ಜೀವಂತ ಸಾಕ್ಷಿಯಂತಿದೆ ಅವರು ೧೯೭೪ರ ಡಿಸೆಂಬರ್ ೩೧ರಂದು ತಮ್ಮ ಸಮಾನಮನಸ್ಕ ಗೆಳೆಯ ಪೂರ್ಣಚಂದ್ರ ತೇಜಸ್ವಿಯವರಿಗೆ ಬರೆದ ಈ ಪತ್ರ…”

ಆಂದೋಲನ ಡೆಸ್ಕ್

Recent Posts

ಸಾವಿರಾರು ಸೈನಿಕರ ಜೀವನ್ಮರಣದ ಪ್ರಶ್ನೆಯಾಗಿತ್ತು

ಕೈಲಾಶ್ ಶ್ರೇಣಿಯ ರೇಚಿನ್ ಲಾ ಪಾಸ್‌ನತ್ತ ಮುನ್ನುಗ್ಗುತ್ತಿರುವ ಚೀನಾದ ಟ್ಯಾಂಕ್‌ಗಳನ್ನು ತಡೆಯಲು ಒಂದೇ ಒಂದು ಗುಂಡು ಹಾರಿಸಿದರೂ ಆ ದೇಶದೊಂದಿಗೆ…

2 hours ago

ಸಹಸ್ರಾರು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಅಮಾನ್ಯ

ಬೋಗಸ್ ಕಾರ್ಡ್ ಹೆಸರಿನಲ್ಲಿ ಕ್ರಮ; ನೈಜ ಕಾರ್ಮಿಕರಿಗೆ ಸಮಸ್ಯೆ ಕೃಷ್ಣ ಸಿದ್ದಾಪುರ ಸಿದ್ದಾಪುರ: ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ…

2 hours ago

ದೇವರಗುಡ್ಡನಾಗಬೇಕಿದ್ದ ದುಂಡು ಮಾದೇವಸ್ವಾಮಿ ಚಿತ್ರಗಾರನಾದ ವೃತ್ತಾಂತ

ಸ್ವಾಮಿ ಪೊನ್ನಾಚಿ ದಿನಬೆಳಗಾದರೆ ಮಾದಪ್ಪ, ಮಂಟೇಸ್ವಾಮಿಯ ಹಾಡು ಹಾಡಿಕೊಂಡು ಬರುವ ಜನಪದರ ದಂಡು. ಸುತ್ತಮುತ್ತ ದೇವರಗುಡ್ಡ ನೀಲಗಾರರ ಹಿಂಡು. ಊರೂರಿ…

2 hours ago

ಅಪ್ಪಾಜಿಯ ವಾತ್ಸಲ್ಯದ ಛಡಿಯೇಟಿನ ‘ಪಾಠ’ಗಳು ನೆನಪಾಗುತ್ತಿವೆ…

ರವಿ ಕೋಟಿ ಬಾಲ್ಯದಲ್ಲಿ ನಾನು ಕಂಟ್ರೋಲಿಗೆ ಬರದಷ್ಟು ತುಂಟನಾಗಿದ್ದೆ. ಯಾರೂ ನನ್ನನ್ನು ಕಂಟ್ರೋಲ್ ಮಾಡಲಾಗುತ್ತಿರಲಿಲ್ಲ. ಯಾಕೆಂದರೆ ನಾನೇ ನನ್ನ ಕಂಟ್ರೋಲಿನಲ್ಲಿ…

2 hours ago

ಹೀಗಾದರೂ ಆದರೆ ಭ್ರಮೆಗಳು ಕರಗಿ ಆಧ್ಯಾತ್ಮಿಕ ವಿನಯದ ಪರಿಚಯವಾಗಬಹುದೇನೋ…

ಸುಕನ್ಯಾ ಕನಾರಳ್ಳಿ ಒಂದು ಮಠ. ಅಲ್ಲಿ ಮರಿಸ್ವಾಮಿಯಾಗಿದ್ದವರು ಪೀಠಾಧಿಪತಿ ತೀರಿಕೊಂಡ ಮೇಲೆ ಏನೇನೋ ಕಾರಣಗಳ ದೆಸೆಯಿಂದ ಪೀಠವನ್ನು ಏರಲು ಆಗದೆ…

2 hours ago

ಅಳಿಯುತ್ತಿರುವ ಸೋಬಾನೆ ಹಾಡುಗಳ ಕಲಿಸುತ್ತಿರುವ ಕಲೆಗಾರ

ಡಾ.ಮೈಸೂರು ಉಮೇಶ್ ಸೋಬಾನೆ ಪದಗಳು ಗ್ರಾಮೀಣ ಮಹಿಳೆಯರಿಗೆ ಒಲಿದು ಬಂದಿರುವ ಜನಪದ ಗಾಯನ ಪ್ರಕಾರ. ಇದಕ್ಕೆ ಅಪವಾದವೆಂಬಂತೆ ಮಂಡ್ಯ ಜಿಲ್ಲೆಯ…

2 hours ago