ಹಾಡು ಪಾಡು

ಕಂಡು ಕೇಳರಿಯದ ಈ ಏಳು ಸುತ್ತಿನ ಕೋಟೆ

ರಂಗಸ್ವಾಮಿ ಸಂತೇಬಾಚಹಳ್ಳಿ

ಪ್ರಕೃತಿಯ ಸಹಜ ಸೌಂದರ್ಯವನ್ನು ಸವಿಯುವ ಕನಸು ಯಾರಿಗಿಲ್ಲ ಹೇಳಿ! ಇಂತಹ ನಿಸರ್ಗ ಸೃಷ್ಟಿ ಯನ್ನು ಬೆರಗುಗೊಳಿಸುವ ತಾಣವೊಂದು ಕೃಷ್ಣರಾಜ ಪೇಟೆಯಿಂದ ಮೇಲುಕೋಟೆಗೆ ಹೋಗುವ ದಾರಿಯಲ್ಲಿದೆ. ಅದೇ ದಾರಿಯ ಉತ್ತರಕ್ಕೆ ಕಾಣಬರುವ ಈ ಸುಂದರ ಬೆಟ್ಟಗಳ ಸಾಲಿನಲ್ಲಿ ಎತ್ತರವಾಗಿ ನಿಂತಿರುವ ನಾರಾಯಣದುರ್ಗವನ್ನೊಮ್ಮೆ ನೋಡಿದರೆ ಯಾತ್ರಿಕರನ್ನು ಕೈಬೀಸಿ ಕರೆಯುತ್ತಿರುವಂತೆ ಎನಿಸುತ್ತದೆ.

ಮೇಲುಕೋಟೆ ಅಭಯಾರಣ್ಯದ ಅಂಚಿನಲ್ಲಿರುವ ಈ ಪ್ರೇಕ್ಷಣೀಯ ತಾಣ ಏಳು ಸುತ್ತಿನ ಕೋಟೆಯನ್ನೂ ಹೊಂದಿದೆ. ಕೋಟೆಯ ಐತಿಹಾಸಿಕ ಚರಿತ್ರೆಯನ್ನು ಕುತೂಹಲದಲ್ಲಿ ಕೆದಕುತ್ತಾ ಹೊರಟರೆ ಅನೇಕ ಮಾಹಿತಿಗಳು ತಿಳಿಯುತ್ತವೆ. ಸಿಂಧಗಟ್ಟವನ್ನು ಆಳ್ವಿಕೆ ಮಾಡುತ್ತಿದ್ದ ಸಾಮಂತ ದೇವರಸ ಶತ್ರುಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ೧೫ನೇ ಶತಮಾನದ ಮಧ್ಯದಲ್ಲಿ, ಈ ದುರ್ಗಮ್ಮ ಬೆಟ್ಟದಲ್ಲಿ ಕೋಟೆ ಕಟ್ಟಿ, ಆಳ್ವಿಕೆ ಮಾಡಿದ್ದ. ನಂತರದ ಇತಿಹಾಸ ತಿಳಿಯುವುದು ಅಷ್ಟು ಸುಲಭವಲ್ಲ. ಊರಿನ ಹಿರಿಯರೊಬ್ಬರು ಹೈದರಾಲಿ ಈ ಕೋಟೆಯನ್ನು ವಶಪಡಿಸಿಕೊಂಡಿದ್ದನೆಂದು ಹೇಳುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಸೀಸದ ಗುಂಡುಗಳು ಬೆಟ್ಟದ ತಪ್ಪಲಿನಲ್ಲಿ ಸಿಕ್ಕಿವೆ. ಈ ದುರ್ಗದ ಆಗ್ನೇಯ ದಿಕ್ಕಿನಲ್ಲಿ ಒಕ್ಕರಸನ ಕಲ್ಲು ಇದೆ. “ಶತ್ರುಗಳನ್ನು, ಕಳ್ಳರನ್ನು ಹಾಗೂ ರಾಜದ್ರೋಹಿಗಳನ್ನು ಇಲ್ಲಿಂದ ತಳ್ಳಿ ಸಾಯಿಸುತ್ತಿದ್ದರು” ಎಂಬುದು ಅನೇಕ ಹಿರಿಯರು ತಾವು ಕೇಳಿ ತಿಳಿದ್ದದೆಂದು ಹೇಳುತ್ತಾರೆ. ದುರಂತವೆಂದರೆ, ಸುಮಾರು ೭೦೦ ಅಡಿ ಎತ್ತರದ ಕಡಿದಾದ ಜಾಗವಿಂದು ಆತ್ಮಹತ್ಯೆ ಮಾಡಿಕೊಳ್ಳುವ ಜಾಗವೂ ಆಗಿದೆ. ರಾಯ ಸಮುದ್ರದಿಂದ ಬೆಟ್ಟದ ತಪ್ಪಲು ಒಂದು ಕಿಲೋಮೀಟರ್ ದೂರದಲ್ಲಿದೆ. ತಪ್ಪಲಿನ ಪ್ರದೇಶದಲ್ಲಿರುವ ವಿಜಯನಗರ ಕಾಲದ ಗ್ರಾಮದೇವತೆ ಚೌಡೇಶ್ವರಿ ದೇವಾಲಯವನ್ನು ಪುನರ್‌ನಿರ್ಮಿಸಿದ್ದಾರೆ. ದೇವಾಲಯದ ಪಶ್ಚಿಮಕ್ಕೆ ಕೆರೆ, ದಕ್ಷಿಣಕ್ಕೆ ಕುದುರೆ ಕಟ್ಟುತ್ತಿದ್ದ ಲಾಯದ ಮನೆಯ ಕಲ್ಲುಗಳು ನಿಶ್ಚಿಂತೆಯಿಂದ ನಿಂತಿವೆ.

ಚೌಡೇಶ್ವರಿ ದೇವಾಲಯದಿಂದ ಮುಂದೆ ನಡೆದರೆ ಮೊದಲು ಕೋಟೆಯ ಬಾಗಿಲು ಕಾಣಿಸುತ್ತದೆ. ನಂತರ ಸೂಲಗಿತ್ತಿ ಬೆಟ್ಟ ಮತ್ತು ನಾರಾಯಣದುರ್ಗ ಬೆಟ್ಟದ ಮಧ್ಯೆ ಹಾದುಹೋಗುವ ದಾರಿಯ ಎಡಭಾಗದಲ್ಲಿ ಕಾವಲುಪಡೆ ಮನೆಯ ಅವಶೇಷವಿದೆ. ಹಾಗೇ ದಾಟಿ ಮುಂದೆ ಹೋಗುತ್ತಿದ್ದಂತೆ ಕಾಡು ಕಲ್ಲಿಂದ ಮಾಡಿರುವ ಮೆಟ್ಟಿಲುಗಳು ಸಿಗುತ್ತವೆ. ಈ ಸ್ಥಳ ಮಲೆನಾಡ ಪ್ರದೇಶದಂತೆ ಅನಿಸುತ್ತದೆ. ಹೀಗೆ ಐದು ಕಮಾನು ಬಾಗಿಲುಗಳನ್ನು ದೊಡ್ಡ ದೊಡ್ಡ ಇಟ್ಟಿಗೆಗಳಿಂದ, ಗಾರೆಯಿಂದ ನಿರ್ಮಿಸಿರುವುದನ್ನು ಕಾಣಬಹುದು. ಅಲ್ಲಿಯವರೆಗೂ ಸುಗಮವಾಗಿ ಸಾಗಬಹುದಾದ ದಾರಿಯಾಗಿದ್ದದ್ದು, ಮುಂದಕ್ಕೆ ಸಿಗುವ ದಾರಿ ಮಾತ್ರ ಕಡಿದಾದ ಇಳಿಜಾರು. ಅಲ್ಲೇ ಕಾಣುವ ಬಿಳಿಪಟ್ಟೆಯೊಂದು ಮೇಲುಗಡೆಯ ದೇವಸ್ಥಾನದವರೆಗೆ ಬೆಳಗಿನಲ್ಲಿಮಾತ್ರವಲ್ಲದೆ ಕಗ್ಗತ್ತಲಿನಲ್ಲೂ ದಾರಿ ತೋರುತ್ತದೆ. ದೇವಸ್ಥಾನದ ಸಮೀಪ ಬಲಭಾಗದಲ್ಲಿ ಒಂದು ಕಟ್ಟೆ ಇದ್ದು, ಮುಂದೆ ಎರಡು ಬಾವಿಗಳಿವೆ.

ವಿಶೇಷವೆಂದರೆ, ಅಂದಾಜು ೩೦ ಅಡಿ ಆಳದವರೆಗೆ ಕಲ್ಲನ್ನು ಕೊರೆದು, ಕಟ್ಟಿದ್ದಾರೆ. ಒಂದು ಬಾವಿಯಲ್ಲಿ ವರ್ಷದ ಎಲ್ಲ ಕಾಲದಲ್ಲೂ ನೀರು ಇರುತ್ತದೆ. ಕುತೂಹಲದಲ್ಲಿ ಏಕಿರಬಹುದು ಎಂದು ಅಲ್ಲಿನ ಜನರಲ್ಲಿ ಕೇಳಿದರೆ, ಮಹಾಭಾರತದಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಭೀಮ, ತನ್ನ ಮಂಡಿಯಿಂದ ಈ ಬಾವಿಗಳನ್ನು ತೋಡಿದನು ಎನ್ನುವ ಪೌರಾಣಿಕ ಕತೆಯನ್ನು ಹೇಳುತ್ತಾರೆ. ಅಲ್ಲೇ ಸಮೀಪದಲ್ಲಿ ಕಾವಲುಪಡೆಯ ಎತ್ತರದ ದಿಣ್ಣೆಯೂ ಇದೆ. ಕೊನೆಯ ಕೋಟೆಯ ಬಾಗಿಲನ್ನು ಮುಟ್ಟುತ್ತಿದ್ದಂತೆ ಕೈವಲೇಶ್ವರ ದೇವಾಲಯ ಭಕ್ತರನ್ನು ಕೈಬೀಸಿ ಕರೆಯುತ್ತಿದೆಯೋ ಎನ್ನುವಂತಿದೆ. ಪೂರ್ವಕ್ಕೆ ಮುಖ್ಯಬಾಗಿಲು, ದಕ್ಷಿಣಕ್ಕೆ ಇನ್ನೊಂದು ಬಾಗಿಲಿದ್ದು, ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದೆ. ಒಳ ಹಜಾರದಲ್ಲಿ ನಂದಿ, ಬಸವರ ಶಿಲ್ಪಗಳಿದ್ದು, ಗರ್ಭಗುಡಿಯಲ್ಲಿ ಶಿವಲಿಂಗ ಸುಂದರವಾಗಿ ಕಾಣಸಿಗುತ್ತವೆ. ಈ ದೇವಾಲಯದ ದಕ್ಷಿಣಕ್ಕೆ ಮದ್ದಿನ ಮನೆ, ಮಡಕೆ ಮಾಡುವ ಮನೆ ಕಾಣಸಿಗುತ್ತವೆ.

ಇಂದಿಗೂ ಕೂಡ ಮದ್ದಿನ ಮನೆಯ ವಾಸನೆ ಮೂಗಿಗೆ ತಾಗುವಂತಿದೆ. ಇದರ ಮುಂಭಾಗದಲ್ಲಿ ಯಾವುದೇ ಶಿಲ್ಪಗಳಿರದ ದೇವಾಲಯವಿದೆ. ಕೈವಲೇಶ್ವರ ದೇವಾಲಯದ ಮುಂದೆ ಗರುಡಗಂಬವಿದೆ. ಈ ದೇವಾಲಯ ಮೊದಲು ನಾರಾಯಣಸ್ವಾಮಿಯ ದೇವಾಲಯವಾಗಿತ್ತು. ನಂತರ ಶೈವರಿಂದ ಶಿವಾಲಯವಾಗಿದೆ ಎಂದೆನಿಸುತ್ತದೆ. ಸುರುಳಿಯಾಕೃತಿಯ ಕೋಟೆಯ ಮೇಲ್ಬಾಗದಲ್ಲಿರುವ 5 ಎಕರೆಗೂ ಹೆಚ್ಚು ಸ್ಥಳಗಳಲ್ಲಿ ಮನೆಗಳ ಅವಶೇಷಗಳಿವೆ. ದೇವಾಲಯದ ಪಕ್ಕದಲ್ಲಿ ಅಗಲದ ಕೋಟೆಯೊಂದಿದ್ದು, ಇಂದಿಗೂ ಬಲಿಷ್ಠವಾಗಿದೆ. ಇದರ ಪಕ್ಕದಲ್ಲಿ ಒಂದು ಕೊಳವಿದ್ದು, ಸುತ್ತ ಇಟ್ಟಿಗೆಗಳನ್ನು ಕಟ್ಟಿದ್ದಾರೆ. ಬೇಸಿಗೆಯಲ್ಲಿಯೂ ನೀರು ಸಿಗುವ ಕೊಳವಿದು. ಇದರ ಆಕ್ಷೇಯ ಭಾಗದಲ್ಲಿ ಒಕ್ಕರಸನ ಕಲ್ಲಿದ್ದು, ಕಡಿದಾದ ದೃಶ್ಯವೂ ಕಾಣ ಸಿಗುತ್ತದೆ.

ಈ ದುರ್ಗದ ಮೇಲೆ ಅಲ್ಲಲ್ಲಿ ಮರಗಳು, ಗಿಡಗಳು ಬಿರು ಬೇಸಿಗೆಯಲ್ಲೂ ತಂಪೆರೆಯುತ್ತವೆ. ಎತ್ತ ನೋಡಿದರೂ ಪ್ರಕೃತಿಯ ಸೌಂದರ್ಯ ಕಣ್ಣಿಗೆ, ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಬೆಟ್ಟದಲ್ಲಿರುವ ಕುರುಚಲು ಅರಣ್ಯ ಪ್ರದೇಶಗಳು, ರಸಕಲ್ ಗುಡ್ಡ, ಮದ್ದು ಪ್ರಯೋಗಿಸುವ ಗುಡ್ಡ ಬೆಟ್ಟಗಳು ಮನಸ್ಸಿಗೆ ಮುದ ನೀಡುತ್ತವೆ. ಪಶ್ಚಿಮಕ್ಕೆ ಕಾಣುವ ಸೂಲಗಿತ್ತಿ ಬೆಟ್ಟಕ್ಕೆ ವಿಶೇಷ ಕತೆಯೇ ಇದೆ. ಬೆಟ್ಟದ ಮೇಲಿರುವ ಮಹಿಳೆಯರಿಗೆ ಹೆರಿಗೆ ಸಂದರ್ಭದಲ್ಲಿ ಪ್ರಸವ ಕಾಣಿಸಿಕೊಂಡರೆ, ಸೂಲಗಿತ್ತಿಯರು ಆ ಬೆಟ್ಟದಿಂದ ಇಲ್ಲಿಗೆ ಬಂದು ಆರೈಕೆ ಮಾಡುತ್ತಿದ್ದರೆಂಬ ಐತಿಹ್ಯವಿದೆ. ಹಾಗೆ ಸೂಲುಗಿತ್ತಿ ಬೆಟ್ಟದ ಪಶ್ಚಿಮಕ್ಕೆ ರಾಮದೇವರ ಬೆಟ್ಟವಿದ್ದು, ಈ ಎರಡು ಬೆಟ್ಟಗಳ ಉತ್ತರಕ್ಕೆ ದೊಡ್ಡದಾದ ಕೆರೆ, ಮುದಬೆಟ್ಟವೂ ಇದೆ. ಇಲ್ಲಿರುವ ಬೀರೆದೇವರ ದೇವಸ್ಥಾನ ವಿಜಯನಗರ ಕಾಲಕ್ಕೆ ಸಂಬಂಧಪಟ್ಟದ್ದೆಂದು ಇತಿಹಾಸ ಸಾರುತ್ತವೆ. ಒಟ್ಟಾರೆಯಾಗಿ ಪೂರ್ವ, ಪಶ್ಚಿಮಾಭಿಮುಖವಾಗಿ ಬೆಟ್ಟಗಳ ಸಾಲುಗಳಿರುವುದು ಸೃಷ್ಟಿಯ ಸೊಬಗು.

ಸಮೀಪದಲ್ಲಿ ಮಲ್ಲೆ ದೇವರ ಬೆಟ್ಟವಿದೆ. ಈ ಬೆಟ್ಟದಲ್ಲಿ ಪ್ರಾಗೈತಿಹಾಸಿಕ ನೆಲೆಯೆಂದು ಗುರುತಿಸುವ ರೇಖಾಚಿತ್ರಗಳನ್ನು ಇತ್ತೀಚೆಗೆ ಸಂಶೋಧನೆಯಲ್ಲಿ ನಾನು ಗುರುತಿಸಿದ್ದೇನೆ. ಈ ಬೆಟ್ಟಗಳ ಸೌಂದರ್ಯವನ್ನು ನೋಡುವುದೇ ಮನಸ್ಸಿಗೆ ಉಲ್ಲಾಸ. ಒಂದೊಂದು ಬೆಟ್ಟಗಳು ಕೂಡ ತನ್ನದೇ ಆದ ಇತಿಹಾಸ ಹಾಗೂ ಪ್ರಾಗೈತಿಹಾಸಿಕ ವಿಚಾರಧಾರೆಗಳನ್ನು ತನ್ನ ಮಡಿಲೊಳಗೆ ಹುದುಗಿಸಿಟ್ಟುಕೊಂಡಿವೆ. ಇಲ್ಲಿ ಸಿಗುವ ಗಿಡಮೂಲಿಕೆ ಔಷಧಿಗಳು ಆಯುರ್ವೇದ ಪಂಡಿತರನ್ನು ಆಕರ್ಷಿಸುತ್ತವೆ. ಕಡಿದಾದ, ದುರ್ಗಮವಾದ ಬೆಟ್ಟಗಳ ಸಾಲುಗಳು ಚಾರಣಿಗರನ್ನು, ಪ್ರಕೃತಿ ಪ್ರಿಯರನ್ನು, ದೇವರ ಭಕ್ತರನ್ನು ತನ್ನತ್ತ ಸೆಳೆಯುತ್ತವೆ.

ಈ ದುರ್ಗದ ಮೇಲಿಂದ ಗಮನಿಸಿದರೆ, ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿಯ ದೇವಾಲಯ, ಕಾವೇರಿಗೆ ಅಡ್ಡಲಾಗಿ ಕಟ್ಟಿರುವ ಕನ್ನಂಬಾಡಿ ಕಟ್ಟೆ ಹಾಗೂ ವಾಯವ್ಯ ದಿಕ್ಕಿಗೆ ವಿಶ್ವವಿಖ್ಯಾತ ಶ್ರವಣಬೆಳಗೊಳದ ಗೊಮ್ಮಟೇಶ್ವರ ಬೆಟ್ಟ ಕಾಣುತ್ತವೆ. ಬರಿಗಣ್ಣಿನಿಂದ ನೋಡಬಹುದಾದ ಈ ಸೌಂದರ್ಯವೆಲ್ಲ ಕಣ್ಣಿಗೆ, ಮನಸ್ಸಿಗೆ ತೃಪ್ತಿಯನ್ನು ನೀಡುತ್ತವೆ.

ಎಷ್ಟು ವರ್ಣಿಸಿದರೂ ನಾರಾಯಣ ದುರ್ಗದ ಸೌಂದರ್ಯ ಬಣ್ಣಿಸುವುದು ಅಸದಳ. ಬೃಹತ್ತಾದ ಕೋಟೆಯ ಕಲ್ಲುಗಳನ್ನು ಉರುಳಿಸಿ, ಮಜಾ ತೆಗೆದುಕೊಳ್ಳುತ್ತಿರುವ ಪೋಲಿ ಹುಡುಗರು ಇತಿಹಾಸ ಪರಂಪರೆ ನಾಶ ಮಾಡುತ್ತಿದ್ದಾರೆ. ನಾರಾಯಣದುರ್ಗದ ಬೆಟ್ಟವು ಅಭಯಾರಣ್ಯಕ್ಕೆ ಸೇರಿರುವುದರಿಂದ ಇತಿಹಾಸವು ಗೌಣವಾಗಿ ಮರೆಯಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಗೆ ಇದನ್ನು ಸೇರಿಸಿದ್ದೆಯಾದರೆ, ಮಂಡ್ಯ ಜಿಲ್ಲೆಯಲ್ಲಿಯೇ ಇದು ಬಹುದೊಡ್ಡ ಪ್ರವಾಸಿ ತಾಣವಾಗುತ್ತದೆ. ಸುತ್ತಮುತ್ತಲ ಯಾವ ಜಿಲ್ಲೆಯಲ್ಲಿಯೂ ಇರದ ಏಳು ಸುತ್ತಿನ ಕೋಟೆಯ ಪ್ರಕೃತಿ ಸೌಂದರ್ಯ ಎಲ್ಲ ಜನರೂ ಕಣ್ಣುಂಬಿಕೊಳ್ಳುವಂತಾಗಲಿ,

 

andolana

Recent Posts

ಡೀಮ್ಡ್‌ ಅರಣ್ಯ ಪ್ರದೇಶ ಗುರುತಿಸುವಿಕೆಗೆ ಸಮಿತಿ ರಚನೆ : ಈಶ್ವರ ಖಂಡ್ರೆ

ಬೆಳಗಾವಿ : ಸರ್ಕಾರ ರಾಜ್ಯದಲ್ಲಿ 2022ರಲ್ಲಿ ಒಟ್ಟು 3,30,000 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇರುವುದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ…

4 mins ago

ಕೆಪಿಟಿಸಿಎಲ್ : 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ

ಬೆಂಗಳೂರು : ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಪಾರದರ್ಶಕವಾಗಿ ಕೌನ್ಸೆಲಿಂಗ್ ನಡೆಸಿ ಕರ್ನಾಟಕ ವಿದ್ಯುತ್ ಪ್ರಸರಣ…

7 mins ago

ಕ್ರೀಡಾ ನೇಮಕಾತಿ ಮೀಸಲಾತಿ ಅನುಷ್ಠಾನ : ಸಿಎಂ ಘೋಷಣೆ

ಬೆಳಗಾವಿ : ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅರಣ್ಯ ಇಲಾಖೆಯಲ್ಲಿ ಶೇ. 3 ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ…

13 mins ago

ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ : ಆರ್ಥಿಕ ಇಲಾಖೆಯ ಅನುಮತಿ ಪಡೆದು ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…

18 mins ago

ಹೊಸದಿಲ್ಲಿ : ಭಾರತೀಯ ಜಲಪ್ರದೇಶಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಬೋಟ್ ಒಂದನ್ನು ಇಂದು ಕೋಸ್ಟ್ ಗಾರ್ಡ್ ವಶಪಡಿಸಿಕೊಂಡಿದ್ದು ಹಡಗಿನಲ್ಲಿದ್ದ ೧೧ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಭಾರತೀಯ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆಗಾಗಿ ಭಾರತೀಯ ಕೋಸ್ಟ್ ಗಾರ್ಡ್ ಪಾಕಿಸ್ತಾನಿ ದೋಣಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು…

21 mins ago

ಮೈಸೂರು | 21 ರಂದು ಪಲ್ಸ್ ಪೋಲಿಯೋ ಅಭಿಯಾನ

ಮೈಸೂರು : ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೆ…

1 hour ago