ಫಾತಿಮಾ ರಲಿಯಾ
ಅದು ೧೯೯೯ರ ಕಾರ್ಗಿಲ್ ಯುದ್ಧ. ‘ಯುದ್ಧವಂತೆ’ ಎನ್ನುವ ಒಂದು ಪದದ ಮಾಹಿತಿ ಬಿಟ್ಟರೆ ಉಳಿದಂತೆ, ಏನು, ಯಾವಾಗ, ಎತ್ತ ಒಂದೂ ಗೊತ್ತಿರಲಿಲ್ಲ. ಒಂದು ದಿನ ಮದರಸದಲ್ಲಿ ಉಸ್ತಾದರು ಪಾಠದ ನಡುವೆ ‘ನಮ್ಮ ಸೈನಿಕರು ಹಗಲು ರಾತ್ರಿ ಕಷ್ಟಪಟ್ಟು ಗಡಿಯಲ್ಲಿ ಯುದ್ಧ ಮಾಡುತ್ತಿದ್ದಾರೆ. ನಮ್ಮಿಂದ ಎಷ್ಟು ಸಾಧ್ಯ ಆಗುತ್ತೋ ಅಷ್ಟು ಸಹಾಯ ಮಾಡಬೇಕು. ಮನೆಯಲ್ಲಿ ಗಲಾಟೆ ಮಾಡದೆ ಎಷ್ಟು ಕೊಡುತ್ತಾರೋ ಅಷ್ಟು ದುಡ್ಡು ತನ್ನಿ. ನಮ್ಮ ವತಿಯಿಂದ ಸೈನ್ಯಕ್ಕೆ ಕಳುಹಿಸಿ ಕೊಡೋಣ’ ಎಂದರು.
ಯೋಧ ಅಂದರೆ ಏನು, ಸೈನ್ಯ ಎಂದರೆ ಏನು ಆಗ ಗೊತ್ತಿರಲಿಲ್ಲ. ನಾವೆಲ್ಲಾ ‘ಯುದ್ಧವಂತೆ’ ಎಂದು ಮರದ ಹಿಂದೆ ಅಡಗಿ ನಿಂತು, ರೈಫಲ್ ಹಿಡಿದವರಂತೆ ಒಂದು ಉದ್ದದ ಕೋಲು ಹಿಡಿದು ‘ಡಿಶುಂ ಡಿಶುಂ. . . ’ ಎಂದು ಮಾಡುತ್ತಿದ್ದೇವೆಯೇ ಹೊರತು ಅದರಾಚೆಗಿನ ಮಾಹಿತಿ ಒಂದೂ ಇರಲಿಲ್ಲ. ಉಸ್ತಾದರು ‘ಕಷ್ಟಪಟ್ಟು ಯುದ್ಧ ಮಾಡುತ್ತಾರೆ’ ಎನ್ನುವುದನ್ನು ಪರಮ ಗಂಭೀರ ಧ್ವನಿಯಲ್ಲಿ ಹೇಳಿದ್ದರಿಂದ ಇಲ್ಲೇನೋ ತುಂಬಾ ಗಂಭೀರವಾದದ್ದು ಇದೆ ಅನಿಸತೊಡಗಿತು.
ಮದರಸ ಬಿಟ್ಟ ನಂತರ ಮನೆಗೆ ಓಡಿದವಳೇ ಉಸ್ತಾದರು ಹೇಳಿದ್ದನ್ನು ನನ್ನಜ್ಜ ಅಹ್ಮದ್ ಮಾಸ್ಟರ್ ಬಳಿ ಊದಿ ‘ಯುದ್ಧ ಆಗ್ತಿದೆಯಂತೆ ನಿಮ್ಗೊತ್ತಾ? ಉಸ್ತಾದ್ ಹೇಳಿದ್ರು’ ಅಂದೆ. ‘ಹುಂ ಗೊತ್ತು, ನಾಳೆ ದುಡ್ಡು ಕೊಡುತ್ತೇನೆ ತೆಗೆದುಕೊಂಡು ಹೋಗು’ ಎಂದರು. ನನಗೆ ಆಶ್ಚರ್ಯವಾಯಿತು. ಯಾಕೆಂದರೆ ಮದರಸದಲ್ಲಿ ಒಮ್ಮೊಮ್ಮೆ ಅದಕ್ಕೆ ಇದಕ್ಕೆ ಅಂತ ಉಸ್ತಾದರು ನಮ್ಮ ಬಳಿ ದುಡ್ಡು ಕೇಳುತ್ತಿದ್ದರು, ನಾನದನ್ನು ಮನೆಯಲ್ಲಿ ಬಂದು ಹೇಳಿದರೆ ಕೆಂಡಾಮಂಡಲವಾಗಿ ‘ಉಸ್ತಾದರಿಗೆ ಸಂಬಳ ಕೊಡುದು ನಿಮ್ಮನ್ನು ಓದಿಸಲಿಕ್ಕೆ, ಹೀಗೆ ಮಕ್ಕಳ ಬಳಿ ದುಡ್ಡು ಕೇಳುವುದಕ್ಕಲ್ಲ, ಆ ಕೆಲಸವನ್ನು ಮಸೀದಿ ಕಮಿಟಿ ಮಾಡುತ್ತದೆ. ನನ್ನಜ್ಜ ದುಡ್ಡು ಕೊಡುದಿಲ್ಲ ಅಂದ್ರು, ಇದೇ ಲಾಸ್ಟು ನೀವಿನ್ನು ಯಾವತ್ತೂ ನನ್ಹತ್ರ ದುಡ್ಡು ಕೇಳ್ಬಾರ್ದಂತೆ ಅಂತ ನಾಳೆ ಹೋಗಿ ಹೇಳು’ ಎನ್ನುತ್ತಿದ್ದ ಅಜ್ಜ, ಇವತ್ತು ಅವರಾಗಿ ಅವರೇ ದುಡ್ಡು ಕೊಡುವ ಬಗ್ಗೆ ಮಾತಾಡಿದ್ದರು.
ನನಗೆ ಮತ್ತೆ ಪರಿಸ್ಥಿತಿ ಗಂಭೀರವಾಗಿದೆ ಅಂತ ಅನ್ನಿಸತೊಡಗಿತು. ಆದರೆ ಅದನ್ನೆಲ್ಲಾ ಚರ್ಚೆ ಮಾಡೋಕೆ ಸಮಯ ಇರಲಿಲ್ಲ. ಶಾಲೆ ಶುರುವಾಗುವ ಮುಂಚೆ ಅಲ್ಲಿ ತಲುಪಬೇಕಿತ್ತು. ತಿಂಡಿ ತಿಂದು ಶಾಲೆಗೆ ಓಡಿದೆ. ನಮ್ಮ ಶಾಲೆಯಲ್ಲಿ ಪ್ರತಿದಿನ ಅಸೆಂಬ್ಲಿ ಇರುತ್ತಿದ್ದರೂ ಸಣ್ಣ ಮಕ್ಕಳು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅಸೆಂಬ್ಲಿಯಲ್ಲಿ ಭಾಗವಹಿಸುತ್ತಿದ್ದರು. ಉಳಿದ ದಿನಗಳಲ್ಲಿ ತರಗತಿ ಕೋಣೆಯಲ್ಲೇ ಇರಬೇಕಿತ್ತು. ಅವತ್ತು ಎಲ್ಲರೂ ಅಸೆಂಬ್ಲಿಗೆ ಬರಬೇಕು ಎಂದು ಹೆಡ್ಮಾಷ್ಟ್ರು ಹೇಳಿ ಕಳುಹಿಸಿದ್ದರು. ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಗಣರಾಜ್ಯೋತ್ಸವಗಳಂದು ಮಾತ್ರ ಹೆಡ್ಮಾಷ್ಟ್ರು ಹೀಗೆ ಹೇಳಿ ನಮ್ಮನ್ನು ಕರೆಸುತ್ತಿದ್ದುದು. ಏನಿದು ಹೊಸತು ಅನ್ನಿಸಿತು.
ಅಸೆಂಬ್ಲಿಯಲ್ಲಿ ನಿತ್ಯ ಪ್ರಾರ್ಥನೆಗಳು ನಡೆದ ನಂತರ ಹೆಡ್ಮಾಷ್ಟ್ರು ನಮ್ಮನ್ನುದ್ದೇಶಿಸಿ ಮಾತನಾಡಿ ಕಾರ್ಗಿಲ್ ಯುದ್ಧದ ಬಗ್ಗೆಯೂ, ನಮ್ಮ ಸೈನಿಕರ ತ್ಯಾಗದ ಬಗ್ಗೆಯೂ ಹೇಳಿ, ಸಾಧ್ಯವಾದರೆ ನಮ್ಮ ಶಾಲೆಯ ವತಿಯಿಂದ ದುಡ್ಡು ಸಂಗ್ರಹಿಸಿ ಕೊಡೋಣ ಅಂದರು. ಇಲ್ಲಿ ಭಯಂಕರ ಗಂಭೀರವಾದದ್ದೇನೋ ನಡೀತಾ ಇದೆ ಅನ್ನೋದು ನನಗೆ ಖಾತ್ರಿಯಾಯಿತು. ಅಂದೇ ಸಂಜೆ ನಮ್ಮ ಶಾಲೆಯ ದೊಡ್ಡ ತರಗತಿಯ ವಿದ್ಯಾರ್ಥಿಗಳು ಹುತಾತ್ಮರಾದ ಕಾರ್ಗಿಲ್ ಯೋಧರ ನೆನಪಲ್ಲಿ ದೀಪ ಹಿಡಿದು ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದರು. ನಾವು ಸಣ್ಣ ಮಕ್ಕಳು ಮನೆಯ ಅಂಗಳದಲ್ಲಿ ನಿಂತು ಆ ಮೆರವಣಿಗೆಯನ್ನು ನೋಡಿದ್ದೆವು. ನನಗಾಗ ಮಾಹಿತಿಗಳ ದೊಡ್ಡ ಕಣಜವೆಂದರೆ ನನ್ನಜ್ಜ.
ಮೆರವಣಿಗೆ ಮುಗಿಯುತ್ತಿದ್ದಂತೆ ಓಡಿ ಹೋಗಿ ಅಜ್ಜನನ್ನು ‘ಅಬ್ಬಾ, ಯುದ್ಧ ಅಂದ್ರೆ ಎಂತ? ’ ಕೇಳಿದ್ದೆ. ‘ನಮ್ಮ ದೇಶಕ್ಕೆ ಬೇರೆಯವರು ನುಗ್ಗಿದಾಗ ಅವ್ರನ್ನು ಇಲ್ಲಿಂದ ಮತ್ತೆ ಹೊರಗೆ ಹಾಕೋದೆ ಯುದ್ಧ’ ಅಂದ್ರು. ‘ಸುಮಾರು ಮಂದಿ ತೀರಿ ಹೋಗಿದ್ದಾರಂತೆ, ಹೌದಾ? ’ ಕೇಳಿದೆ.
‘ಹುಂ, ಯುದ್ಧ ಆದಾಗ ಎರಡೂ ಕಡೆಯಲ್ಲಿ ಸುಮಾರು ಮಂದಿ ಸಾಯುತ್ತಾರೆ’
‘ಎರಡೂ ಕಡೆ ಅಂದ್ರೆ? ’
‘ಈಗ ಯುದ್ಧ ಮಾಡ್ತಿರೋದು ಭಾರತ ಮತ್ತು ಪಾಕಿಸ್ತಾನ. ಎರಡೂ ಕಡೆ ಅಂದ್ರೆ ಈ ಎರಡೂ ದೇಶದವರು’ ಎಂದರು. ಆ ಹೊತ್ತಿಗೆ ಪಾಕಿಸ್ತಾನವೆಂದರೆ ನಮ್ಮಿಂದ ಬೇರ್ಪಟ್ಟು ಇನ್ನೊಂದು ದೇಶ ಮಾಡಿಕೊಂಡವರು. ಈಗದು ನಮ್ಮ ಶತ್ರು ರಾಷ್ಟ್ರ, ಸುಮ್ಮನೆ ಇಲ್ಲಸಲ್ಲದೆ ಜಗಳಕ್ಕೆ ಬರುತ್ತಾರೆ ಅನ್ನುವುದು ನನ್ನ ತಿಳಿವಳಿಕೆಯಾಗಿತ್ತು.
imraliya101@gmail.com
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…
ಉಡುಪಿ: ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಉಡುಪಿಗೆ ಆಗಮಿಸಿದ್ದು, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇಂದು…
ಹಾಸನ: ಕಾಫಿ ಬೆಳೆಗೆ ಉತ್ತಮ ಬೆಲೆ ಬಂದಿರುವ ಪರಿಣಾಮ ಮಲೆನಾಡು ಭಾಗದಲ್ಲಿ ಕಾಫಿ ಕಳವು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.…
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಮದುವೆ ಮುಂದೂಡಿಕೆಯಾಗಿತ್ತು.…