ಭಾರತಿ ಬಿ.ವಿ.
ಕದ್ದುಮುಚ್ಚಿ ನಮ್ಮ ಮನೆಯ ಗರಾಜಿಗೆ ಅಂಟಿದಂತಿದ್ದ ಕೋಣೆಯಲ್ಲಿ ಮರಿ ಹಾಕಿ ಬೀಡುಬಿಟ್ಟ ಮೊದಲಲ್ಲಿ ನಮಗೆ ಹೆದರುತ್ತಿದ್ದ ಬೆಕ್ಕು ಈಗ ಕ್ಯಾರೆ ಅನ್ನದೇ ಇಡೀ ಮನೆಯ ತುಂಬ ಓಡಾಡುವಾಗ ನಮಗೆಲ್ಲ ಒಂಥರಾ ಅವಿಭಕ್ತ ಕುಟುಂಬದ ಫೀಲ್ ಬರಲಾರಂಭಿಸಿತ್ತು!
ಹಾಲಿನಲ್ಲಿ ನಮ್ಮೆದುರೇ ರಾಜಾರೋಷವಾಗಿ ಓಡಾಡುತ್ತಾ, ಇಟ್ಟಿದ್ದ ಹಾಲನ್ನೆಲ್ಲ ಕಬಳಿಸುತ್ತ, ಬಯ್ದರೆ ನಮ್ಮನ್ನೇ ದುರುಗುಟ್ಟಿ ನೋಡುತ್ತ ತಾನೇ ಈ ಮನೆಯ ಯಜಮಾನತಿಯೇನೋ ಅನ್ನುವಷ್ಟು ಭಂಡ ಬಾಳು ಬಾಳಲು ಶುರು ಮಾಡಿತು. ಆದರೂ ಮರಿಗಳು ಪುಟ್ಟ ಟೆನಿಸ್ ಬಾಲ್‌ಗಳಂತೆ ಓಡಾಡುವುದು ಮಜಾ ಕೊಡುತ್ತಿತ್ತು. ನನ್ನ ಮಗ ಮರಿಗಳಿದ್ದ ಕೋಣೆಯಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು, ತನ್ನ ರೂಮಿನಲ್ಲಿ ಕುಳಿತು ಮರಿಗಳ ಆಟ ನೋಡುವ ಹೊಸ ಹುಚ್ಚೊಂದು ಅಂಟಿಸಿಕೊಂಡ. ಅವು ಅಮ್ಮ ಅತ್ತ ಹೋದ ಕೂಡಲೇ ರಟ್ಟಿನ ಡಬ್ಬಿಗಳಿಂದ ಹೊರಬಂದು ಆಟವಾಡಲು ಶುರು ಮಾಡುತ್ತಿದ್ದವು. ಮಕ್ಕಳಿರುವ ಮನೆಯವರು ಮಕ್ಕಳ ಬಗ್ಗೆ ಕೊರೆಯುವಂತೆ ನನ್ನ ಮಗನದ್ದೂ ಸದಾ ಮರಿಗಳ ಮಾತೇ.
ಹೀಗಿರುವಾಗ ಒಂದು ದಿನ ಇದಕ್ಕಿದ್ದಂತೆ ಅದರ ಸದ್ದೇ ಇಲ್ಲ! ಇಡೀ ಕೋಣೆ ನಿಶ್ಶಬ್ದ! ಸದಾ ರಾಜಕಾರ್ಯವಿರುವಂತೆ ಅತ್ತಿಂ ದಿತ್ತ ಓಡಾಡುತ್ತಿದ್ದ ಮರಿಗಳ ಸುಳಿವೂ ಇಲ್ಲ! ಎಲ್ಲಿ ಹೋದವು ಅಂತ ಯೋಚಿಸುವುದರಲ್ಲೇ ಅಮ್ಮ ಬೆಕ್ಕು ಮಹಾ ಬುದ್ಧಿವಂತಳಂತೆ ದಿನಕ್ಕೊಂದು ರಟ್ಟಿನ ಡಬ್ಬಾಗೆ ಅಡ್ಡ ಬದಲಿಸುತ್ತಿದ್ದಿದ್ದು ನೆನಪಾಗಿ ಇದ್ದಬದ್ದ ಡಬ್ಬಗಳನ್ನೆಲ್ಲ ಹುಡುಕಿದ್ದಾಯ್ತು. ಎಲ್ಲೂ ಅದರ ಸುಳಿವಿಲ್ಲ. ಏನೋ ಒಂಥರಾ ನಿರಾಳತೆ, ಜೊತೆಜೊತೆಗೆ ಮನಸ್ಸು ಪಿಚ್ಚೆಂದಿತು ಕೂಡ. ಮಗನೂ ಮುಖ ಸಣ್ಣದು ಮಾಡಿಕೊಂಡ. ಅಲ್ಲಿಗೆ ಆ ಕತೆ ಮುಗಿಯಿತು.
ಮರುದಿನ ಬೆಳಿಗ್ಗೆ ಏಳುವುದರಲ್ಲಿ ಮನೆಯ ತುಂಬ ಅಮ್ಮ ಬೆಕ್ಕಿನ ಕಿರುಚಾಟ. ‘ಅರೆ! ಮತ್ತೆ ಯಾಕೆ ಕಿರುಚುತ್ತಿದೆ? ಮರಿಗಳು ಇಲ್ಲವಾದರೆ ಹೀಗೆ ಕೂಗಾಡುತ್ತಿರಲಿಲ್ಲ. ಅವು ಇಲ್ಲೇ ಎಲ್ಲೋ ಇರಬೇಕು! ನನ್ನ ಗಂಡನಿಗೆ ಕೊಂಡ ಸಾಮಾನುಗಳ ಪ್ಯಾಕಿಂಗ್ ರಟ್ಟಿನ ಡಬ್ಬಗಳನ್ನೆಲ್ಲ ಆ ರೂಮಿನಲ್ಲಿಡುವ ಚಟ. ಹಾಗಾಗಿ ಹಳೆ ಕಾಲದ ಕನ್ನಡ ಸಿನೆಮಾಗಳ ವಿಲನ್ ಡೆನ್‌ನ ರಟ್ಟಿನ ಡಬ್ಬಾ, ಎಣ್ಣೆ ಡ್ರಮ್‌ಗಳಂತೆ ಇಡೀ ರೂಮಿನ ತುಂಬ ನೂರೆಂಟು ರಟ್ಟಿನ ಡಬ್ಬಾ ತುಂಬಿದ್ದ. ಎಲ್ಲವನ್ನೂ ಎಳೆದಾಡಿ ಹುಡುಕಿದರೂ ಎಲ್ಲಿಯೂ ಮರಿಗಳ ಸುಳಿವಿಲ್ಲ! ಇದೋ ಇತ್ತ ತಾರಕ ಸ್ವರದಲ್ಲಿ ಬೊಬ್ಬಿಡುತ್ತಿದೆ. ಇದೊಳ್ಳೆ ಕರ್ಮವಾಯಿತಲ್ಲ ಅಂತ ಬಯ್ದುಕೊಂಡೆವು.
ಅಷ್ಟರಲ್ಲಿ ಅಮ್ಮ ಬೆಕ್ಕು ಮೊದಲ ಫ್ಲೋರಿಗೂ, ಕೆಳಗಿನ ಫ್ಲೋರಿಗೂ ಅಂಡು ಸುಟ್ಟಂತೆ ಓಡಾಡಲು ಶುರು ಮಾಡಿತು. ಎದ್ದು ಹಲ್ಲೂ ಉಜ್ಜದೆ ಅಬ್ಬೆಪಾರಿಯಂತೆ ಬೆಕ್ಕಿನ ಸೇವೆಗೆ ನಿಂತ ಮಗ ಅದಕ್ಕೆ ಹಸಿವಿರಬಹುದು ಎಂದು ಯೋಚಿಸಿ ಫ್ರಿಜ್‌ನಲ್ಲಿದ್ದ ನಂದಿನಿ ಮೊಸರಿನ ಪ್ಯಾಕೆಟ್ ಪೂರ್ತಿ ಬೆಕ್ಕಿಗೆ ನೈವೇದ್ಯ ಮಾಡಿದ. ಆಗ ಮಾತ್ರ ಬಡ್ಡೆತ್ತದ್ದು ನೆಮ್ಮದಿಯಿಂದ ಸಾವಕಾಶವಾಗಿ ತಿಂದಿತು. ಆಮೇಲೆರಡು ನಿಮಿಷ ಶಾಂತ. ‘ಓಹ್! ಹಸಿವಿಗೆ ಈಪಾಟಿ ಕಿರುಚ್ತಿತ್ತೇನೋ’ ಅಂದುಕೊಳ್ಳುವುದರಲ್ಲೇ ಮತ್ತೆ ಕಿರುಚಾಟ ಶುರುವಾಯಿತು. ನಾವೀಗ ನಿಜಕ್ಕೂ ಗಾಬರಿ ಬಿದ್ದು ಮರಿಗಳ ಹುಡುಕಾಟಕ್ಕೆ ನಿಂತೆವು. ಅಷ್ಟರಲ್ಲಿ ಕಾರ್ ನಿಲ್ಲಿಸುವ ಜಾಗಕ್ಕೂ, ರೂಮಿಗೂ ಮಧ್ಯದ ಬಾಗಿಲು ನಿನ್ನೆಯಿಡೀ ತೆಗೆದೇ ಬಿದ್ದಿದ್ದು ನೆನಪಾಗಿ ಅಲ್ಲಿರಬಹುದು ಅಂತ ಹುಡುಕಾಡಿದೆವು, ಅಲ್ಲಿಯೂ ಪತ್ತೆಯಿಲ್ಲ.
ಕೆಲಸವೆಲ್ಲ ಅರ್ಧಕ್ಕೆ ನಿಂತುಹೋಗಿ, ಬೆಳಂಬೆಳಿಗ್ಗೆ ಬೆಕ್ಕಿನ ಪತ್ತೆಗೆ ನಿಂತಿದ್ದಕ್ಕೆ ಸಣ್ಣದಾಗಿ ಸಿಟ್ಟು ಶುರುವಾಯಿತು. ಇದೊಳ್ಳೆ ರಾಮಾಯಣವಾಯಿತಲ್ಲ ಅಂತ ಅದನ್ನು ಇದ್ದಲ್ಲಿಯೇ ಬಿಟ್ಟು, ತಿಂಡಿ ಮಾಡಲು ಓಡಿದೆ. ಗಂಡ ತಿಂದು ಆಫೀಸಿಗೆ ಹೊರಟ. ಆಗ ಇದ್ದಕ್ಕಿದ್ದಂತೆ ಮಗನಿಗೆ ಬೆಕ್ಕು ಕಾರಿನಲ್ಲೆಲ್ಲಾದರೂ ಅಡಗಿರಬಹುದಾ ಅಂತ ಅನುಮಾನ ಶುರುವಾಯಿತು. ಗಂಡ ‘ಅಲ್ಲಿ ಯಾಕೆ ಇರತ್ತೆ’ ಎಂದವನೇ ಆಫೀಸಿಗೆ ಲೇಟಾಗಿದ್ದರಿಂದ ಕಾರನ್ನು ಸ್ಟಾರ್ಟ್ ಮಾಡಿದ. ನಾವು ಮರಿಗಳು ಸತ್ತೇ ಹೋಗುತ್ತವೇನೋ ಅನ್ನುವ ಗಾಬರಿಗೆ ಆಫ್ ಮಾಡೆಂದು ಕಿರುಚಿಲಾರಂಭಿಸಿದೆವು. ನನ್ನ ಗಂಡನಿಗೆ ಮೈ ಉರಿಯಲು ಶುರುವಾಗಿ ಕಾರಿನಿಂದಿಳಿದು ನಮ್ಮನ್ನು ಬಯ್ಯಲು ಶುರು ಮಾಡಿದ. ಅದೇನಾದರೂ ಬಯ್ಯಿ, ಕಾರು ಮಾತ್ರ ಸ್ಟಾರ್ಟ್ ಮಾಡುವಂತಿಲ್ಲ ಅಂತ ನಮ್ಮ ಹಠ.
ಇದರ ಜೊತೆಗೆ ಗರಾಜಿನ ಸುತ್ತ ಸುತ್ತುತ್ತಿದ್ದ ಅಮ್ಮ ಬೆಕ್ಕಿನ ಕೂಗು. ಹಳಸಲು ಮೂತಿಯಲ್ಲಿದ್ದ ಮಗನ ತಾಳ್ಮೆ ಕರಗುತ್ತಾ ಬಂದು ‘ಇವತ್ತು ಇದನ್ನು ಕಳಿಸಬೇಕು. ಎಷ್ಟು ಸಮಯ ಹಾಳಾಗ್ತಿದೆ,’ ಅಂತ ಬಯ್ಯಲು ಶುರು ಮಾಡಿದ. ‘ಮೊದಲು ಸಿಕ್ಕಲಿ, ಆ ನಂತರ ಹೊರ ಕಳಿಸುವ ಮಾತು’ ಅಂದೆ. ಬಾಗಿಲು ತೆರೆದಿಟ್ಟ ಕೆಲಸದವಳನ್ನು ಶಪಿಸುತ್ತಾ ನನ್ನ ಗಂಡ ಬಾನೆಟ್ ತೆರೆದರೆ ಅಗೋ! ಅಲ್ಲಿ ಕೂತಿವೆ ಮೂರು ಮರಿಗಳು! ಕಾರು ಚಲಿಸಿಯೇ ಬಿಟ್ಟಿದ್ದರೆ ಆ ಮರಿಗಳು ಏನಾಗುತ್ತಿದ್ದವೋ ಅನ್ನುವ ಕಲ್ಪನೆಗೇ ಸುಸ್ತಾದೆವು.
ಅಷ್ಟರಲ್ಲಿ ನಾವು enough is enough ಅಂತ ತೀರ್ಮಾನಿಸಿದಂತೆ ಬೆಕ್ಕು ಕೂಡ ಅದೇ ನಿರ್ಧಾರಕ್ಕೆ ಬಂದಿತ್ತು ಅಂತ ಕಾಣಿಸುತ್ತದೆ, ಕೊನೆಗೂ ಮರಿಗಳನ್ನು ಹೊರಪ್ರಪಂಚಕ್ಕೆ ಕರೆದೊಯ್ಯುವ ನಿರ್ಧಾರ ಮಾಡಿದಂತೆ ಹೊರಬಾಗಿಲ ಹತ್ತಿರ ನಿಂತುಕೊಂಡಿತು. ಈ ಮರಿಗಳೋ ಅಮ್ಮ ಅಡಗಿಸಿಟ್ಟ ಜಾಗದಲ್ಲಿ ಅಲ್ಲಾಡದೇ ಕುಳಿತು, ಬಾನೆಟ್‌ನ ಸಂದಿಗೊಂದಿಗಳಲ್ಲಿ ಬಗ್ಗಿ ನೋಡುವಾಗ ತಾವು ಯಾರಿಗೂ ಕಾಣಿಸುತ್ತಿಲ್ಲ ಅನ್ನುವ ಬ್ಯಾಂಕ್ ಜನಾರ್ಧನ್ ಭ್ರಮೆಯಂತೆಯೇ ಮುಗ್ಧವಾಗಿ ‘ನಾ ಕಾಣಿಸ್ತಿ ದೀನಾ’ ಅನ್ನುವ ಪೋಸ್‌ನಲ್ಲಿ ಅಮ್ಮನಿಗೆ ಕಾಯುವುದು ನೋಡಿ ನಮಗೆ ನಗು. ಏನು ಸದ್ದು ಮಾಡಿದರೂ, ದೀಪ ಬಿಟ್ಟರೂ ಅವು ಹೊರಬರುತ್ತಿಲ್ಲ. ಕೊನೆಗೆ ಅಮ್ಮನೇ ಮರಿಗಳನ್ನು ಕರೆದೊಯ್ಯಲಿ ಎಂದು ಗರಾಜು ತೆರೆದಿಟ್ಟೆವು. ನಾವೇನೋ ಷಡ್ಯಂತ್ರ ಹೂಡುತ್ತಿದ್ದೇವೆ ಅಂತ ಅಮ್ಮನಿಗೆ ಭ್ರಮೆ. ಅದೂ ಸುಮಾರು ಹೊತ್ತು ಅಳೆದು ಸುರಿದು ಅಂತೂ ಒಳ ಬಂದಿತು. ಆದರೆ ಸಣ್ಣ ಸದ್ದಾದರೂ ಎದ್ದುಬಿದ್ದು ಓಡಿ ಹೋಗುತ್ತಿತ್ತು. ನಾವು ಬಾಗಿಲಿನ ಮರೆಯಲ್ಲಿ ಕಾದು ನಿಂತೆವು. ಎಷ್ಟು ಹೊತ್ತಾದರೂ ಒಂದಿನಿತೂ ಸದ್ದಿಲ್ಲ.
ಏನಾಗಿರಬಹುದು ಅನ್ನುವ ಕುತೂಹಲಕ್ಕೆ ಹೊರಗೆ ಹೋದರೆ ಹೊರ ಬಾಗಿಲಿನವರೆಗೆ ಹೋಗಿದ್ದ ಮರಿ ನಮ್ಮನ್ನು ಕಂಡದ್ದೇ ಪುಕ್ಕಲು ಬಿದ್ದು ಬಾನೆಟ್ ಸೇರಿಕೊಂಡು ಬಿಟ್ಟಿತು. ಅಯ್ಯೋ ಇನ್ನೆರಡು ನಿಮಿಷ ತಡೆ ದಿದ್ದರೆ ಮುಗಿಯುತ್ತಿದ್ದ ಮೆಗಾ ಸೀರಿಯಲ್ ಅನ್ನು ನಾವೇ extend ಮಾಡಿದೆವಲ್ಲಾ ಅಂತ ಹಳಹಳಿಸಿ ಮತ್ತೆ ಮರೆಯಲ್ಲಿ ನಿಂತೆವು. ಸುಮಾರು ಹತ್ತು ನಿಮಿಷ ಸದ್ದಿಲ್ಲದೇ ನಿಂತಮೇಲೆ ಹೊರಗಿನಿಂದ ಬೆಕ್ಕಿನ ಮಿಯಾಂವ್ ಸದ್ದು. ನೋಡಿದರೆ ಎರಡು ಮರಿಗಳು ಆಚೆ ಇವೆ. ಉಳಿದೊಂದು ಮರಿಗೆ ಕಾಂಪೌಂಡ್ ಗೋಡೆ ಮೇಲೆ ಕುಳಿತ ಅಮ್ಮ ಗೋಡೆ ಹಾರಲು ಟ್ರೈನಿಂಗ್ ಕೊಡುತ್ತಿದೆ! ತಾನು ಗೋಡೆಯ ಮೇಲೆ ಕೂತು ‘ನೋಡು ಎಷ್ಟು ಈಜ಼ಿ’ ಅನ್ನುವಂತೆ ಆ ಕಡೆಗೆ ಹಾರಿ ತೋರಿಸುವುದು… ಈ ಮರಿ ಅಮ್ಮನಂತೆ ಎಗರಲು ಪ್ರಯತ್ನಿಸಿ ವಿಫಲವಾಗಿ ಗಾಬರಿಗೊಳ್ಳುವುದು. ಸುಮಾರು ಹೊತ್ತು ಈ ಟ್ರೈನಿಂಗ್ ಸೆಷನ್ ನಡೆದು ಸೋತ ಮೇಲೆ ನಾವು ಗೇಟಿನ ಮಾರ್ಗವಾಗಿ ಹೋಗಲಿ ಅಂತ ಅದನ್ನು ತೆರೆದಿಟ್ಟೆವು. ಆದರ ವಿಚಿತ್ರವೇನೆಂದರೆ ಗೇಟಿನ ಮೂಲಕ ಮರಿ ಹೊರಕ್ಕೆ ಹೋಗಲೇ ಇಲ್ಲ! ಅಮ್ಮ ಬೆಕ್ಕಿಗೆ ಗೊತ್ತಿದ್ದಿರಬೇಕು ಎಗರಲು ಕಲಿಯದ ಮರಿ ಈ big
bad world ನಲ್ಲಿ ಉಳಿಯುವುದಿಲ್ಲ ಎಂದು, ಹಾಗಾಗಿ ಗೋಡೆ ಹಾರಿಯೇ ಬರಬೇಕು, ಇಲ್ಲವಾದರೆ ಅಲ್ಲೇ ಉಳಿಯಲಿ ಅನ್ನುವ ನಿರ್ಧಾರ ಮಾಡಿದ್ದಿರಬೇಕು.
ಹಾರಿ ಹಾರಿ ಮರಿ ದಣಿದಿದ್ದು ನೋಡಿ ಸಂಕಟವೆನ್ನಿಸಲು ಶುರುವಾಯ್ತು. ಕೊನೆಗೆ ಅದೇನಾಗುತ್ತದೋ ಆಗಲಿ, big bad world ಅಷ್ಟೇ ಅನ್ನುತ್ತ ಬಾಗಿಲು ಮುಚ್ಚಿ ಬಂದುಬಿಟ್ಟೆವು. ಮನೆಯೊಳಗಿದ್ದರೂ ಬೆಕ್ಕು ಗೋಡೆ ಹಾರಿತಾ, ಇಲ್ಲವಾ ಅನ್ನುವ ಕಡೆಗೇ ನನ್ನ ಗಮನ. ಸುಮಾರು ಹೊತ್ತಾದ ನಂತರ ಕುತೂಹಲ ತಾಳಲಾರದೆ ಕಿಟಕಿಯಲ್ಲಿ ಬಗ್ಗಿ ನೋಡಿದರೆ ಹಾರಲಾರದ ಒಂದು ಮರಿಯನ್ನು ಅಲ್ಲೇ ಬಿಟ್ಟು ಅಮ್ಮ ಬೆಕ್ಕು ಹೊರಟುಹೋಗಿತ್ತು! ಓಡಿಹೋಗಿ ತೆರೆದಿಟ್ಟ ಗೇಟನ್ನು ಮುಚ್ಚಿದೆ. ಇವತ್ತೇ ಮೊದಲ ಬಾರಿಗೆ ಹೊರಪ್ರಪಂಚಕ್ಕೆ ಕಾಲಿಟ್ಟ ಮರಿ ಸುಸ್ತಾಗಿ ಮೂಲೆಯಲ್ಲಿ ಕೂತು ತೂಕಡಿಸುತ್ತಿತ್ತು. ಅಯ್ಯೋ ಅನ್ನಿಸಿ ಮತ್ತಿಷ್ಟು ಹಾಲು ಸುರಿದು ಅದರ ಮುಂದಿಟ್ಟು ಬಂದೆ.
ಸುಮಾರು ಎರಡು ಗಂಟೆ ಕಳೆದರೂ ಟಿ.ಕೆ.ರಾಮರಾಮ್ ಸಸ್ಪೆನ್ಸ್ ಕಾದಂಬರಿಯಂತೆ ಕೊನೆ ಏನಾಗಿರಬಹುದು ಅನ್ನುವುದೇ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು. ಆದರೆ ಅಮ್ಮ abandon ಮಾಡಿದ್ದರೆ ಅಂತ ನೋಡಲೂ ಭಯ. ಕೊನೆಗೊಮ್ಮೆ ಇಣುಕಿ ನೋಡಿದರೆ ಬೆಕ್ಕು ಅಲ್ಲಿರಲಿಲ್ಲ. ಪ್ರಾಣಿಗಳಿಗೆ ಮನುಷ್ಯರ ಭಾವಗಳನ್ನು ಆರೋಪಿಸುತ್ತೇವೆ ನಾವು. ನಿಟ್ಟುಸಿರು ಬಿಟ್ಟು ನನ್ನ ಬದುಕಿಗೆ ಮರಳಿದೆ. ಮಗ ಮಧ್ಯಾಹ್ನ ಒಂದು ಗಂಟೆಗೆ ಅಂತೂ ಹಲ್ಲು ಉಜ್ಜಿದ ಮತ್ತು ಅವನಪ್ಪ ಬೆಕ್ಕಿನ ದೆಸೆಯಿಂದ ಆಫೀಸಿಗೆ ಹೋಗದೇ ಮನೆಯಲ್ಲೇ ಕುಳಿತ!
ಮಗ ಕೆಲಸಕ್ಕೆ ಹೋಗುವಾಗ ಒಂದು ದಿನ ರಜೆ ಹಾಕಿದ್ದಕ್ಕೆ ಕಾರಣ ಕೇಳಿದರೆ ಮರ ಬಿದ್ದು ಹೋಯ್ತು ಅಂದಿದ್ದನಂತೆ. ಸರಿ, ಅದಕ್ಕೆ ಯಾಕೆ ರಜಾ ಅಂದರೆ ‘ಲೈಟ್ ಕಂಬದ ವೈರಿನ ಮೇಲೆ ಬಿದ್ದು ಕರೆಂಟಿಲ್ಲ, ನೀರು ಕಾದಿಲ್ಲ, ಸ್ನಾನವಿಲ್ಲದೇ ಹೇಗೆ ಬರಲಿ’ ಅಂದಿದ್ದನ್ನು ಅವನ ಟೀಮ್ ಲೀಡರ್ ಇವನು ಕೆಲಸ ಬಿಟ್ಟ ದಿನ ಹೇಳಿ ಉರುಳಾಡಿ ನಕ್ಕಿದ್ದರಂತೆ. ಅದೇ ಆಫೀಸಿನಲ್ಲಿ ನನ್ನ ಗಂಡನೂ ಕೆಲಸ ಮಾಡುತ್ತಿದ್ದು, ‘ಇವತ್ಯಾಕೆ ರಜಾ’ ಅಂದರೆ ‘ಕಾರಿನಲ್ಲಿ ಬೆಕ್ಕಿತ್ತು’ ಅಂದಿದ್ದರೆ ‘ಅಡ್ಮಿಟ್ ಆಲ್ ಟು ನಿಮ್ಹಾನ್ಸ್’ ಅನ್ನುತ್ತಿದ್ದರೇನೋ ಅಂದುಕೊಂಡು ನಗಾಡುತ್ತ ಕೂತೆ…
” ಒಂದು ದಿನ ಇದ್ದಕ್ಕಿದ್ದಂತೆ ಮರಿಗಳ ಸದ್ದೇ ಇಲ್ಲ! ಇಡೀ ಕೋಣೆ ನಿಶ್ಶಬ್ದ! ಏನೋ ಒಂಥರಾ ನಿರಾಳತೆ, ಜೊತೆಜೊತೆಗೆ ಮನಸ್ಸು ಪಿಚ್ಚೆಂದಿತು ಕೂಡ. ಮಗನೂ ಮುಖ ಸಣ್ಣದು ಮಾಡಿಕೊಂಡ.”
ಬೆಂಗಳೂರು: ಸಾಮಾಜಿಕ ದಿನದ ಆಚರಣೆಯ ಅಂಗವಾಗಿ ಪತ್ರಿಕೆಯೊಂದಕ್ಕೆ ನಾನು ಬರೆದಿದ್ದ ಲೇಖನ ರಾಜ್ಯದ ರಾಜಕೀಯ ವಲಯದಲ್ಲಿ ಬಹುಮುಖಿ ಚರ್ಚೆಗೆ ಒಳಗಾಗಿದೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಚಂಗವಾಡಿ ಗ್ರಾಮದ ಭೋವಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ…
ಮುಂಬೈ: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾಋ ಅವರನ್ನು ಇಂದು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶರದ್ ಪವಾರ್…
ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಫೋನ್ ನಿಷೇಧ ಮಾಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ.…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 131ನೇ ಸಂಚಿಕೆಯಲ್ಲಿ…
ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ನಾಗಮಂಗಲದ ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿರುವ ಘಟನೆ…