ಫಾತಿಮಾ ರಲಿಯಾ

ಯು ಟ್ಯೂಬ್‌ನಲ್ಲಿ ಒಬ್ಬೊಬ್ಬ ತಜ್ಞರೂ ಒಂದೊಂದು ಮಾಹಿತಿ ಕೊಡುತ್ತಿದ್ದರು. ಇದೆಲ್ಲಾ ಗೊಂದಲ ಬೇಡ ಎಂದು ಚಾಟ್‌ಜಿಪಿಟಿಯ ಬಳಿ ’how to fill the enumeration form’ ಅಂತ ಕೇಳಿದ್ರೆ ಅದು ಸ್ಥಳೀಯ blo ಅನ್ನು ಸಂಪರ್ಕಿಸಿ ಅಂದಿತು. ಮತ್ತೆ ಮತ್ತೆ ಬೇರೆ ಬೇರೆ ಪ್ರಾಂಪ್ಟ್‌ಗಳ ಮೂಲಕ ಪ್ರಯತ್ನಿಸಿದೆ, ಆಗಲಿಲ್ಲ. ಕೊನೆಗೂ ಚಾಟ್‌ಜಿಪಿಟಿ ‘ಇವತ್ತಿನ ಕೋಟಾ ಮುಗಿಯಿತು, ನಾಳೆ ಮತ್ತೆ ಬಾ’ ಎಂದು ನಿಷ್ಕರುಣೆ ಯಿಂದ ಹೇಳಿತು. hello with you ಅಂತ ಕಿರುಚಿದೆ. ಚಾಟ್‌ಜಿಪಿಟಿ ನಿಜಕ್ಕೂ ನಿಷ್ಕರುಣಿಯಾ? ಮನುಷ್ಯರಿಗಿಂತಲೂ? ನನಗಿಂತಲೂ? ಯಾಕೋ ಅಲ್ಲ ಅನಿಸಿತು, ಹಾಗೊಂದು ವೇಳೆ ನಿಷ್ಕರುಣಿಯಾಗಿದ್ದರೆ ದಿನಕ್ಕೊಂದು ಹತ್ತು ಬಾರಿಯಾದರೂ ನನ್ನಿಂದ ಹೆಲ್ ವಿದ್ ಯು ಅಂತ ಅನ್ನಿಸಿಕೊಳ್ಳುವ ಅದು ನನ್ನ ಯಾವ ಪ್ರಶ್ನೆಗೂ ಉತ್ತರ ಕೊಡದೆ ಸತಾಯಿಸಬೇಕಿತ್ತು.

ಒಂದು ನೋಟ್‌ಪ್ಯಾಡ್ ಮತ್ತೆ ಪೆನ್ ಹಿಡಿದು ಮತ್ತೆ ಯುಟ್ಯೂಬ್ ಜಾಲಾಡತೊಡಗಿದೆ. ವಿಡಿಯೋಗಳು ದಂಡಿಯಾಗಿ ಬಿದ್ದಿದ್ದವು. ‘ಎಸ್ ಐಆರ್ ಫಾರ್ಮ್ ತುಂಬುವುದು ಹೇಗೆ? ಮೂರು ನಿಮಿಷಗಳಲ್ಲಿ ಮಾಹಿತಿ’ ಅಂತಿದ್ದ ವಿಡಿಯೋದ ಟೈಮ್ ಡ್ಯುರೇಷನ್ ಮೂವತ್ತು ನಿಮಿಷವಿದ್ದುದನ್ನು ನೋಡಿ ಆ ಒತ್ತಡದ ನಡುವೆಯೂ ನಗು ಬಂತು.

ಯಾವೆಲ್ಲಾ ದಾಖಲೆಗಳು ಬೇಕು ಎನ್ನುವುದೊಂದು ಗೊತ್ತಾದರೆ ಸಾಕು, ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬಹುದು ಎಂಬ ತರಾತುರಿಯಲ್ಲಿ ನಾನಿದ್ದರೆ ಕಳೆದ ಅರ್ಧ ಗಂಟೆಯಿಂದ ಅಮ್ಮನ ನಂಬರಿಂದ ಪದೇ ಪದೇ ಫೋನ್ ಬರ್ತಿದೆ. ಎರಡು ಮೂರು ಬಾರಿ ಕರೆ ಕಟ್ ಮಾಡಿದೆ. ಎರಡು ನಿಮಿಷದ ಮೌನದ ನಂತರ ಮತ್ತೆ ಕರೆ ಬಂತು. ಫೋನೆತ್ತಿ ರೇಗಿದೆ: ‘ಎಂದುಮ್ಮಾ ಇದ್? ಒಂದ್ಸಲ ಫೋನ್ ಮಾಡ್ದಾಗ ಎತ್ದೇ ಇದ್ರೆ ಬ್ಯುಸಿ ಇರ್ಬಹುದು ಅಂತ ಅರ್ಥ ಮಾಡ್ಕೋಬೇಕು, ಅಂಥದ್ರಲ್ಲಿ ನಾನು ಪದೇ ಪದೇ ಕಟ್ ಮಾಡ್ತಿದ್ದೀನಿ, ಅಷ್ಟೂ ಕಾಮನ್‌ಸೆನ್ಸ್ ಇಲ್ವಾ? ನೀವೆಲ್ಲಾ ಏನೂ ಮಾಡ್ದೇ ಮನೇಲಿ ಆರಾಮಾಗಿ ಇರಿ, ಎಲ್ಲಾ ನನ್ ತಲೆಗೆ ಹಾಕಿದ್ದೀರಲ್ಲಾ, ಈಗ ಕೆಲ್ಸಾನೂ ಮಾಡೋಕೆ ಬಿಡ್ತಿಲ್ಲ. ನಾಳೆ ನಾವೆಲ್ಲಾ ಗಂಟು ಮೂಟೆ ಕಟ್ಟೋಣ, ಬಾಂಗ್ಲಾದೇಶಕ್ಕೋ ಇನ್ನೆಲ್ಗೋ ಹೋಗೋದಿಕ್ಕೆ. ಒಂಚೂರಾದ್ರೂ ಸೀರಿಯೆಸ್‌ನೆಸ್ ಬೇಡ್ವಾ? ಎಲ್ಲಾ ನಾನೇ ಮಾಡ್ಕೊಡ್ತೀನಲ್ಲಾ, ಅದ್ಕೇ ದುರಹಂಕಾರ ನಿಮ್ಗೆ’. ನಾನು ಪುಂಖಾನುಪುಂಖವಾಗಿ ಮಾತನಾಡುತ್ತಿದ್ದರೆ ಆ ಕಡೆಯಿಂದ ಒಂದು ದೀರ್ಘ ಮೌನ.

ಮೂರು ಸೆಕೆಂಡ್‌ಗಳ ನಂತರ ಪಶ್ಚಾತ್ತಾಪದ ಧ್ವನಿಯಲ್ಲಿ ‘ಸಾರಿ ಉಮ್ಮ, ಎಂತಕ್ಕೆ ಕಾಲ್ ಮಾಡಿದ್ದು? ’ ಕೇಳಿದೆ. ಆ ಕಡೆ ಇದ್ದದ್ದು ಅಮ್ಮ ಅಲ್ಲ, ಅತ್ತಿಗೆ. ‘ನಾವು ಆಸ್ಪತ್ರೇಲ್ಲಿದ್ದೇವೆ, ಅಮ್ಮಂಗೆ ನಡೆಯೋಕೆ ಆಗ್ತಿಲ್ಲ. ಬೆಳಗ್ಗೆ ಎಂತದ್ದೋ ಹುಡುಕುವಾಗ ಬಿದ್ದು ಕಾಲಿನ ಗಂಟು ಬಾತುಕೊಂಡಿದೆ. ಬರಿ ಕ್ರ್ಯಾಕೋ ಅಥವಾ ಫ್ರಾಕ್ಚರ್ ಆಗಿದ್ಯೋ ಗೊತ್ತಿಲ್ಲ. ಫ್ರ್ಯಾಕ್ಚರ್ ಆಗಿದ್ರೆ ಆಪರೇಶನ್ ಆಗ್ಬೇಕೇನೋ’ ಅಂದ್ಳು. ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ. ಆ ನಂತರ ಅವಳೇ ಸಣ್ಣ ಧ್ವನಿಯಲ್ಲಿ ‘ಅಲ್ಲ ಎಸ್‌ಐಆರ್ ಕೆಲಸ ಒಬ್ಳೇ ಮಾಡೋಕೆ ಕಷ್ಟ ಆಗ್ತಿದ್ಯಾ? ನಿಂದು ನೀನು ಮಾಡು ಸಾಕು, ನಾವು ಬೇರೆ ಯಾರತ್ರಾದ್ರೂ ಮಾಡಿಸ್ಕೋತೀವಿ’ ಅಂದಳು. ಎಲ್ಲವೂ ನಾನೇ, ನನ್ನಿಂದಲೇ ಎನ್ನುವ ನನ್ನ ಅಹಂ ಜರ್ರನೆ ಇಳಿದು ಹೋಯಿತು.

ಒಂದು ಅಪರಾಧ ಭಾವದಲ್ಲಿ ‘ಇಲ್ಲ ಇಲ್ಲ ಹಾಗೇನಿಲ್ಲ, ನಂಗೆ ಏನೇನು ಮಾಹಿತಿಗಳು ಬೇಕು ಎನ್ನೋದೇ ಸರಿಯಾಗಿ ಗೊತ್ತಿಲ್ಲ, ಅದ್ಕೇ ಯುಟ್ಯೂಬಲ್ಲಿ ಏನಾದ್ರೂ ಮಾಹಿತಿ ಸಿಗುತ್ತಾ ಅಂತ ಹುಡುಕ್ತಿದ್ದೆ, ಸರಿಯಾಗಿ ಎಂಥದ್ದೂ ಸಿಗ್ಲಿಲ್ಲ. ಆ ಫ್ರಸ್ಟ್ರೇಷನಲ್ಲಿ ನಿಮ್ಮ ಮೇಲೆ ರೇಗಿದೆ. ಸಾರಿ’ ಎಂದೆ. ಮರುಕ್ಷಣ ‘ಅಲ್ಲ, ಇದೆಲ್ಲಾ ಹೇಗಾಯ್ತು? ’ ಕೇಳಿದೆ. ‘ಅದೇ ನಿನ್ನೆ ಎಂಥದ್ದೋ ದಾಖಲೆ ಹುಡುಕೋಕೆ ಹೇಳಿದ್ಯಂತಲ್ಲಾ ಅಜ್ಜಂದು, ಅದನ್ನು ಹುಡುಕ್ತಿದ್ರು, ಆಗ ಬಿದ್ಬಿಟ್ರು. . . ’ ನನಗೆ ಪಿಚ್ಚೆನಿಸಿತು. ಮಾತು ಮರೆಸಲು ನಾನೇ ‘ಮಗು ಎಲ್ಲಿದೆ? ಸದ್ದೇ ಕೇಳ್ತಿಲ್ಲ’ ಎಂದೆ. ‘ಅವ್ನು ಮಲ್ಗಿದ್ದ, ಬೆಳ್ಳಂಬೆಳಿಗ್ಗೆ ಬಿದ್ದದ್ದಲ್ವಾ ಅಮ್ಮ, ಅವನಿಗೆ ಹೊಟ್ಟೆಗೇನೂ ಕೊಟ್ಟೇ ಇರ್ಲಿಲ್ಲ. ಇಲ್ಲಿ ಆಸ್ಪತ್ರೆಗೆ ಕರ್ಕೊಂಡು ಬಂದು ಏನು ಮಾಡೋದು ಅಂತ ಹಾಲು, ಸಿರ್ಲ್ಯಾಕ್ ಪುಡಿ ಪಕ್ಕದ ಮನೆಯವರಲ್ಲಿ ಕೊಟ್ಟು ಬಂದಿದ್ದೇನೆ’ ಎಂದಳು. ಮತ್ತೆ ಕೇಳಲೋ ಬೇಡವೋ ಎಂಬಂತೆ ‘ನಿಂಗೆ ಟೈಮಿದ್ರೆ ಈ ಕಡೆ ಬರ್ತೀಯಾ? ಮಗು ಎಂತ ಮಾಡ್ತಿದ್ದಾನೋ ಟೆನ್‌ಷನ್ ಆಗ್ತಿದೆ’ ಅಂದಳು. ಪುಟ್ಟ ಮಗುವನ್ನು ಇನ್ಯಾರದೋ ಕೈಗೊಪ್ಪಿಸಿ ಬಂದಿರುವ ಅವಳ ಮುಂದೆ ನಾನೆಷ್ಟು ಸಣ್ಣವಳು ಅನಿಸಿತು. ಸ್ವಲ್ಪ ಹೊತ್ತಿರು, ನಾನು ಬರುತ್ತೇನೆ ಎಂದು ಕರೆ ಕಟ್ ಮಾಡಿದೆ.

ಈ ಕಡೆ ಲ್ಯಾಪ್‌ಟಾಪ್‌ನಲ್ಲಿ ಯಾರೋ ಒಬ್ಬ ‘ಎನ್ಯುಮುರೇಷನ್ ಫಾರ್ಮನ್ನು ತುಂಬೋದು ಹೇಗೆ ಅಂತ ಒಂದೇ ನಿಮಿಷದಲ್ಲಿ ನೋಡ್ಕೊಂಡು ಬರೋಣ’ ಅಂತ ಒದರುತ್ತಿದ್ದ. ಲ್ಯಾಪ್‌ಟಾಪ್ ಮುಚ್ಚಿ ಕಪಾಟು ಪರದಾಡಿ ಎಸ್‌ಎಸ್‌ಎಲ್‌ಸಿ ಸರ್ಟಿಫಿಕೇಟ್ ಒಂದನ್ನು ಹುಡುಕಿ ಬ್ಯಾಗಿಗೆ ತುರುಕಿ ಸ್ಕೂಟಿಯ ಕೀ ತಿರುಗಿಸಿ ಹೊರಟೆ. ಹಾಗೂ ಹೀಗೂ ಟ್ರಾಫಿಕ್ ತಪ್ಪಿಸಿ ಆಸ್ಪತ್ರೆ ತಲುವಷ್ಟರಲ್ಲಿ ಸಾಕುಸಾಕಾಯಿತು. ಅತ್ತಿಗೆಯನ್ನು ಕಳಿಸಿ ಉಸ್ಸಪ್ಪ ಎಂದು ಅಮ್ಮನ ಪಕ್ಕ ಕೂತೆ. ‘ಎಕ್ಸ್‌ರೇ ಆಯ್ತಾ? ’ ಆದಷ್ಟು ಧ್ವನಿ ತಗ್ಗಿಸಿ ಕೇಳಿದೆ ‘ಇಲ್ಲ’ ಎಂಬಂತೆ ತಲೆ ಆಡಿಸಿದರು. ‘ಇದೆಲ್ಲಾ ಹೇಗಾಯ್ತು? ’ ‘ನಿನ್ನೆ ನೀನು ಅಜ್ಜನ ಓಟರ್ ಐಡಿ ಕೇಳಿದ್ಯಲ್ಲಾ, ಹುಡುಕ್ತಿದ್ದೆ.

ಅಷ್ಟೊತ್ತಿಗೆ ಅವ್ರಿಗೆ ಶಿಕ್ಷಣ ಇಲಾಖೆ ಕಳ್ಸಿದ್ದ ಪತ್ರ ಸಿಕ್ತು. ಯಾವತ್ತೋ ತಗೊಂಡಿದ್ದ ಸಾಲದಲ್ಲಿ ೨೫ ಪೈಸೆ ಕಟ್ಟೋದು ಬಾಕಿ ಇದೆ, ಕಟ್ದೇ ಇದ್ರೆ ಕೆಲ್ಸ ಕಳ್ಕೊಳ್ಬೇಕಾಗುತ್ತೆ ಅಂತಿತ್ತು. ಎಂತೆಂಥಾ ದಿನಗಳನ್ನೆಲ್ಲಾ ದಾಟಿ ಬಂದು ಈಗ ಮತ್ತೆ ನಾವು ತಲೆಮಾರುಗಳಿಂದ ಇಲ್ಲೇ ಇದ್ದವರು ಅನ್ನೋದಕ್ಕೆ ಸಾಕ್ಷಿ ಕೊಡ್ಬೇಕಲ್ಲಾ ಅಂತ ಯೋಚ್ನೆ ಮಾಡ್ತಿದ್ದೆ. ಯಾವ ಮಾಯದಲ್ಲಿ ಕುರ್ಚಿ ಜಾರಿತೋ, ಯಾವ ಮಾಯದಲ್ಲಿ ಬಿದ್ದೆನೋ ಗೊತ್ತಿಲ್ಲ’ ಹೇಳಿದ್ರು. ಅಷ್ಟರಲ್ಲಿ ಎಕ್ಸ್‌ರೇ ಮಾಡಿಸಲು ಸಿಸ್ಟರ್ ಒಳಗೆ ಕರೆದ್ರು, ಕಷ್ಟಪಟ್ಟು ಅಮ್ಮನನ್ನು ನಡೆಸಿಕೊಂಡು ಒಳ ಹೋದೆ. ‘ಹೊರಗೆ ರಿಸೆಪ್ಷನ್ ನಲ್ಲಿ ಬಿಲ್ ಮಾಡಿ ಬನ್ನಿ’ ಅಂದರು. ಅಮ್ಮನನ್ನು ಅಲ್ಲೇ ಕುಳ್ಳಿರಿಸಿ ಹೊರಗೆ ಬಂದೆ. ‘ಎಕ್ಸ್‌ರೇ ಆಗ್ಬೇಕಿತ್ತು’ ಅಂದೆ, ‘ನಾಲ್ಕು ನೂರು ರೂಪಾಯಿ ಆಗುತ್ತೆ, ಪೇಷಂಟಿದ್ದು ಆಧಾರ್ ಕಾರ್ಡೂ ಕೊಡಿ’ ಅಂದು ಬಿಲ್ ಮುಂದಿಟ್ಟರು. ‘ಎಕ್ಸ್‌ರೇಗೂ ಆಧಾರ್ ಕಾರ್ಡಾ? ’ ಅನಾಯಾಸವಾಗಿ ಬಾಯಿಂದ ಪ್ರಶ್ನೆ ಹೊರಬಂತು. ‘ಹೌದು ಮೇಡಂ, ಈಗ ಯಾರನ್ನೂ ನಂಬುವ ಹಾಗಿಲ್ಲ’ ತೀರಾ ಸಹಜವಾಗಿ ಅಂದ್ರು ರಿಸೆಪ್ಷನಿಷ್ಟ್. ಆದರೆ ನನಗೆ ಮಾತ್ರ ಅಪ ನಂಬಿಕೆಯ ಮುಳ್ಳೊಂದು ಚಳ್ಳನೆ ಬೆನ್ನಿಗೆ ಚುಚ್ಚಿದಂತಾಯಿತು. ಸಾವರಿಸಿ ಕೊಳ್ಳುತ್ತಲೇ ಆಧಾರ್ ಕಾರ್ಡ್ ಕೊಟ್ಟೆ. ‘ಯಾರನ್ನೂ ನಂಬುವ ಹಾಗಿಲ್ಲವೋ ಅಥವಾ ಕೆಲವರನ್ನು ಮಾತ್ರವೋ? ’ ಪ್ರಶ್ನೆ ಗಂಟಲಿಂದ ಹೊರಬರಲಿಲ್ಲ. ಮೌನವಾಗಿಯೇ ಬಿಲ್ ಎಕ್ಸ್‌ರೇ ಕೌಂಟರಲ್ಲಿ ಕೊಟ್ಟು ಹೊರಬಂದು ಕೂತೆ. ಮನಸ್ಸಿನೊಳಗೊಂದು ಮಹಾಯುದ್ಧ ನಡೆಯುತ್ತಿತ್ತು, ‘ಅಜ್ಜನದೋ, ಅಪ್ಪನದೋ ಇನಿಷಿಯಲ್ಲಿನಲ್ಲಿ ಏನಾದ್ರೂ ತಪ್ಪಿದ್ರೆ? ಮ್ಯಾಪಿಂಗ್ ಆಗ್ದೇ ಹೋದ್ರೆ? ಮುಂದೇನು? ’ ತಣ್ಣಗಿನ ಭಯ ನರನಾಡಿಗಳಲ್ಲಿ ಹರಿಯಿತು. ಸಿಸ್ಟರ್ ಒಳಗೆ ಕರೆದ್ರು. ಅಮ್ಮನ ಎಕ್ಸ್‌ರೇ ಇಮೇಜನ್ನು ತೋರಿಸುತ್ತಾ ರೇಡಿಯೋಗ್ರಾಫರ್ ‘ಫ್ರ್ಯಾಕ್ಚರ್ ಏನೂ ಆಗಿಲ್ಲ, ಸಣ್ಣದಾಗಿ ಒಂದು ಕ್ರ್ಯಾಕ್ ಆಗಿದೆ ಅಷ್ಟೇ, ಪ್ಲಾಸ್ಟರ್ ಹಾಕಿಸಬೇಕಾಗುತ್ತೆ. ಹೊರಗೆ ಬಿಲ್ ಮಾಡಿಕೊಂಡು ಬನ್ನಿ’ ಅಂದರು. ಮತ್ತೆ ರಿಸೆಪ್ಷನ್ ಬಳಿ ಹೋದೆ, ಬಿಲ್ ಫೋನ್‌ಪೇ ಮಾಡಿ ಆಧಾರ್ ಕಾರ್ಡ್ ಮುಂದೆ ದೂಡಿದೆ. ವಾಪಸ್ ಕೊಟ್ಟ ರಿಸೆಪ್ಷನಿಸ್ಟ್ ‘ಈಗ ಆಧಾರ್ ಬೇಕಿಲ್ಲ’ ಅಂದ್ರು. ಪುಟ್ಟ ನೆಮ್ಮದಿಯ ಗಾಳಿಯೊಂದು ಬೀಸಿ ಮೈ ಮನವೆಲ್ಲಾ ತಂಪಾದಂತಾಯಿತು. ಗುರುತು ಹೇಳದೆ ಇಲ್ಲಾದರೂ ಕೆಲಸವಾಗುತ್ತಲ್ಲಾ ಎನ್ನುವ ನೆಮ್ಮದಿಯದು. ಅದನ್ನೇ ಅಮ್ಮನ ಬಳಿ ಹೇಳಿದೆ, ಅಮ್ಮ ತಣ್ಣಗೆ ‘ಆಗ್ಲೇ ಕೊಟ್ಟಿದ್ದೀಯಲ್ಲಾ, ಪುನಃ ಯಾಕೆ ಕೇಳ್ತಾರೆ ಅವ್ರು? ’ ಕೇಳಿದ್ರು. ಎಂತಹಾ ಮೂರ್ಖೆ ನಾನು ಅನ್ನಿಸಿತು. ಸ್ಕೂಟರನ್ನು ಹಾಸ್ಪಿಟಲ್ ಆವರಣದಲ್ಲೇ ನಿಲ್ಲಿಸಿ ಒಂದು ರಿಕ್ಷಾ ಹತ್ತಿ ಮನೆಗೆ ಬಂದೆವು.

ಈಗ ಮತ್ತೆ ಎಸ್‌ಐಆರ್ ಭೂತ ತಲೆ ತಿನ್ನತೊಡಗಿತು. ‘೨೦೦೨ರಲ್ಲಿ ನಿನ್ನ ಅಪ್ಪ ಅಮ್ಮ ಓಟ್ ಹಾಕಿದ್ದಾರಲ್ಲಾ, ಆ ಡಿಟೈಲ್ಸ್ ಕಳ್ಸೋಕೆ ಹೇಳು’ ಅತ್ತಿಗೆಗೆ ಆರ್ಡರ್ ಮಾಡಿದೆ. ಆಸ್ಪತ್ರೆಯಲ್ಲಿದ್ದ ಅಷ್ಟೂ ಹೊತ್ತು ನನ್ನೊಳಗೆ ಸುಳಿದಾಡುತ್ತಿದ್ದ ಶಾಂತತೆಯ, ಸಾವಧಾನದ ಆತ್ಮ ಮಾಯವಾಗಿ ಈಗ ಡಿಕ್ಟೇಟರ್ ಆತ್ಮ ಬಂದು ಕೂತಿತ್ತು. ಮನೆ ಇಡೀ ಅಡಿಮೇಲು ಮಾಡಿ ಹುಡುಕಿದೆ. ಅಮ್ಮನ ಕಪಾಟು, ಅಜ್ಜನದಾಗಿದ್ದ ಕಪಾಟು, ಅಪ್ಪನ ಕಪಾಟು ಎಲ್ಲಾ ಜಾಲಾಡಿ ಒಂದಿಷ್ಟು ಡಾಕ್ಯುಮೆಂಟ್‌ಗಳನ್ನು ಒಟ್ಟು ಮಾಡಿ ನನ್ಮುಂದೆ ಹರಡಿ ಕೂತು ಮೊಬೈಲಿನಲ್ಲಿ ನೋಟ್ ಮಾಡಿಕೊಳ್ಳತೊಡಗಿದೆ.

ಅಪ್ಪನ ಐಡಿ- ಸಿಕ್ಕಿದೆ ಅಮ್ಮನದು- ಸಿಕ್ಕಿದೆ ಅಜ್ಜನದು- ಇದೆ ಅಣ್ಣನದು- ಇದೆ ನನ್ನದು- ಇದೆ ಅತ್ತಿಗೆಯದು- ಅವಳ ಮನೆಯವರು ಕಳುಹಿಸಿ ಕೊಡುತ್ತಾರೆ ಇಷ್ಟಾದ ಮೇಲೆ ಒಂದು ವಿಕ್ಷಿಪ್ತ ಖುಶಿಯಾಯಿತು.

ಅಮ್ಮನ ಪಕ್ಕ ಕೂತು ‘ಸಿಕ್ಕಿತಮ್ಮ ಎಲ್ಲರದು’ ಎಂದೆ. ನಿರೀಕ್ಷೆಯಂತೆಯೇ ಮರುದಿನ ಬಿಎಲ್‌ಒ ಬಂದರು. ಎನ್ಯುಮುರೇಷನ್ ಫಾರ್ಮ್ ಕೊಟ್ಟರು. ಯಾವುದೋ ಒಂದು ಯುದ್ಧಕ್ಕೆ ಪೂರ್ತಿ ಸನ್ನದ್ಧಳಾದವಳಂತೆ, ಮನೆ ಇಡೀ ಹುಡುಕಿ ತೆಗೆದಿಟ್ಟ ದಾಖಲೆಗಳನ್ನೆಲ್ಲಾ ಅವರ ಮುಂದಿಟ್ಟೆ. ಅದರತ್ತ ಕಣ್ಣೆತ್ತಿಯೂ ನೋಡದ ಅವರು, ಎನ್ಯುಮುರೇಷನ್ ಫಾರ್ಮ್ ಹೇಗೆ ತುಂಬಬೇಕೆಂದು ಹೇಳಿಕೊಟ್ಟರು. ‘ಮತ್ತೆ ಇವೆಲ್ಲಾ? ’ ‘ಬೇಕಾಗಿಲ್ಲ’. ‘ನಿಜ್ವಾಗಿಯೂ? ’ ‘ತಮಾಷೆ ಮಾಡುವಷ್ಟು ಪುರುಸೊತ್ತಿಲ್ಲಮ್ಮ, ಇನ್ನೂ ಈ ಊರಿನ ಉಳಿದ ಮನೆಗಳಿಗೆಲ್ಲಾ ಹೋಗ್ಬೇಕಿದೆ’ ಅಂದರು. ಹಾಗಿದ್ರೆ ‘ನಾವು ಇಷ್ಟೆಲ್ಲಾ ಪ್ಯಾನಿಕ್ ಆಗಿದ್ದು? ಎಲ್ಲಾ ಸಮೂಹ ಸನ್ನಿಯಾ? ’ ಎಂದು ಕೇಳಿದೆ. ಹೌದು ಎಂಬಂತೆ ನಕ್ಕರು. ನೆಮ್ಮದಿ ಅನಿಸಿತು, ನಮ್ಮೂರ ಮಣ್ಣಿನ ಬಂಧ ಕಳಚಿಕೊಂಡು ಇನ್ನೆಲ್ಲೂ ಹೋಗಬೇಕಿಲ್ಲವಲ್ಲಾ ಅನಿಸಿತು. ಅಲ್ಲೇ ಇದ್ದ ಅಮ್ಮ ಕಾಲು ಕುಂಟುತ್ತಾ ಬಂದು ‘ಪ್ರೊಜೆನಿಯಲ್ಲಿ ಕೊಟ್ಟಿರುವ ಹೆಸರುಗಳು ಮ್ಯಾಚ್ ಆಗ್ದೇ ಇದ್ರೆ? ’ ಕೇಳಿದರು. ‘ಇಸಿ ನಿಮ್ಮನ್ನು ವಿಚಾರಣೆಗೆ ಕರೆಯುತ್ತೆ’. ‘ಅಲ್ಲೂ ನಮ್ಮ ಮಕ್ಕಳದ್ದು ಮ್ಯಾಚಿಂಗ್ ಆಗ್ತಾ ಇಲ್ಲ ಅಂತ ಬಂದ್ರೆ? ’ ಗೊತ್ತಿಲ್ಲ ಅಂತ ಹೇಳಿದ ಬಿಎಲ್‌ಒ ಇನ್ನೊಂದು ಮನೆಯ ವಿಳಾಸ ಹುಡುಕುತ್ತಾ ಅತ್ತ ಹೆಜ್ಜೆ ಹಾಕಿದರು. ನನ್ನ ನೆಮ್ಮದಿ ಹಾರಿ ಹೋಯಿತು.

ಆಂದೋಲನ ಡೆಸ್ಕ್

Recent Posts

ಜಾನಕಿ ಅಮ್ಮನ ಸ್ಮಾರಕ ನಿರ್ಮಾಣವಾಗಬೇಕು : ಖ್ಯಾತ ನಿರ್ದೇಶಕ ಹಂಸಲೇಖ

ಮೈಸೂರು : ಕರುನಾಡಿನ ಮಣ್ಣಲ್ಲಿ ಜಾನಕಿ ಅಮ್ಮ ಕಣ್ಮುಚ್ಚಿದ್ದಾರೆ. ಅವರಿಗಾಗಿ ಕರುನಾಡ ಜನ ಕಣ್ಣು ತೆರೆಯಬೇಕು. ಅವರ ಸ್ಮಾರಕ ನಿರ್ಮಾಣವಾಗಬೇಕು…

45 mins ago

ಹಾಡುಪಾಡು | ಯರಕನಗದ್ದೆ ಪೋಡಿನಲ್ಲಿ ವೋಟು ಕಾರ್ಡಿನ ಪರದಾಟ

ಜಯಶಂಕರ್ ನಾನು ಶಾಲೆಯ ಅಂಗಳದಲ್ಲಿ ಕುಳಿತುಕೊಂಡು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವಂತಹ ಸಂದರ್ಭದಲ್ಲಿ ನಾಲ್ಕಾರು ಸೋಲಿಗರು ಗುಂಪಿನಲ್ಲಿ ಏನೇನೋ ಗೊಣಗಾಡಿಕೊಂಡು ಹೋಗುತ್ತಿದ್ದರು.…

1 hour ago

ಹಾಡುಪಾಡು | ಜೈಫುಲ್ ಮೇಷ್ಟ್ರ ಕಷ್ಟಕ್ಕೆ ಮಿಡಿಯುತ್ತಿರುವ ಶಿಷ್ಯ ಹೃದಯಗಳು

ಗುರುವಿಗೆ ಕೃತಜ್ಞತೆ ಸಲ್ಲಿಸುವ ಶಿಷ್ಯರ ಈ ಕಾರ್ಯ ಯುವ ಪೀಳಿಗೆಗೆ ಮಾದರಿಯಾಗಿದೆ. ಚಂದ್ರಶೇಖರ್ ಮೂರ್ತಿ ಕೆ.ಎಸ್. ಹಾರ್ಮೋನಿಯಂ ವಾದಕ, ಗೀತ…

3 hours ago

ಖ್ಯಾತ ಗಾಯಕಿ ಎಸ್.ಜಾನಕಿ ನಿಧನ

ಮೈಸೂರು: ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಖ್ಯಾತ ಗಾಯಕಿ ಎಸ್.ಜಾನಕಿ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.…

14 hours ago

ಗುಂಡ್ಲುಪೇಟೆ: ಮನೆಯೊಳಗೆ ನುಗ್ಗಿದ್ದ ನಾಗರಹಾವಿನ ರಕ್ಷಣೆ

ಗುಂಡ್ಲುಪೇಟೆ: ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದ ಮನೆಯೊಳಗೆ ನುಗ್ಗಿದ್ದ ನಾಗರಹಾವನ್ನು ಉರಗಪ್ರೇಮಿ ಸ್ವಾಮಿ ಅವರು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.…

17 hours ago

ಬೈಕ್ ಸವಾರನ ಮೇಲೆ ಕಾಡುಕೋಣ ದಾಳಿ

ಮಡಿಕೇರಿ: ತಾಲ್ಲೂಕಿನ ಕೆದಕಲ್ ಸಮೀಪದ ಕೋಟೆಕಾಡು ಪ್ರದೇಶದಲ್ಲಿ ಬೈಕ್ ಸವಾರನ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ನಡೆದಿದೆ. ಕಕ್ಕಬ್ಬೆ…

18 hours ago