ಆಂಧ್ರದ ಸಂತೂರಿನವರಾದ ಪೂಜೆಗೊಲ್ಲರ ಕುಲದ ಸುಬ್ಬಯ್ಯ ಅವರ ಪೂರ್ವಿಕರು ಬಸವನನ್ನು ಆಡಿಸುತ್ತಿದ್ದವರು. ಶಾಲೆಗೆ ಹೋಗಬೇಕೆಂದು ತಂದೆಯವರಲ್ಲಿ ಸಮ್ಮತಿ ಕೇಳಿದರೆ, ಖಡಾಖಂಡಿತವಾಗಿ ಬೇಡವೆಂದರು. ‘ಶಾಲೆ ಗೀಲೆ ಏನೂ ಬೇಡ. ಸುಮ್ನೆ ಮನೇಲಿರೋ ಹಸುಗಳನ್ನ ಹಿಡ್ಕೊಂಡ್ ತಿರ್ಗು’ ಎಂದಾಗ, ಇವರಿಗೆ ಕಾಣಿಸಿದ್ದೊಂದೆ ಬಡತನ.
ಅದೇ ಕಾರಣದಿಂದ ಹತ್ತು ವರ್ಷದವರಾಗಿದ್ದ ಸುಬ್ಬಯ್ಯ ಅವರು ಅನಿವಾರ್ಯವಾಗಿ ಹಸುಗಳನ್ನು ಹಿಡಿದು ಊರಲೆಯುತ್ತಾ, ಸಿಕ್ಕ ಬಿಡಿಗಾಸಿನಲ್ಲಿ ಕುಟುಂಬಕ್ಕೆ ನೆರವಾದರು. ಸುಬ್ಬಯ್ಯ ಅವರು ಒಂದೊಂದು ವರ್ಷ ಒಂದೊಂದು ಕಡೆಗೆ ಹೋಗಿ, ಬಸವನ ಆಡಿಸುವ ಈ ವೃತ್ತಿ ಮಾಡುತ್ತಾರೆ. ಒಂದು ಸ್ಥಳಗಳಲ್ಲಿ ಮೂರೋ ನಾಲ್ಕೋ ತಿಂಗಳು ಉಳಿದು, ಮುಂದಿನ ಊರಿಗೆ ಪ್ರಯಾಣ ಬೆಳೆಸುತ್ತಾರೆ. ಒಬ್ಬರೇ ಹೊರಡಬೇಕೆಂದರೆ ಹಣಕಾಸಿನ ತಾಪತ್ರಯ ಬೇರೆ! ಅದಕ್ಕಾಗಿ ಎರಡು ಮೂರು ಮನೆಯವರು ಒಟ್ಟಾಗಿ ಸಾಥ್ ನೀಡುತ್ತಾರೆ.
ಸದ್ಯ ಮೈಸೂರಿನ ರಿಂಗ್ ರೋಡ್ ಸಮೀಪದಲ್ಲಿ ಗುಡಿಸಲಿನಲ್ಲಿ ತಂಗಿದ್ದಾರೆ. ಯುಗಾದಿ ಹಬ್ಬವನ್ನು ಮೈಸೂರಿನಲ್ಲೇ ಪೂರೈಸಿದ ಮೇಲೆ, ಇವರ ಮುಂದಿನ ಬಿಡಾರ ತುಮಕೂರಿನಲ್ಲಿ. ಸಾಮಾನ್ಯವಾಗಿ ಕೋಲೆ ಬಸವರು ಯಾವುದಾದರೊಂದು ವಾದ್ಯವನ್ನು ನುಡಿಸುತ್ತಾರೆ. ಬರೀ ಬಸವನ ಜೊತೆ ನಡೆವವರು ವಿರಳ. ಮನೆಯಲ್ಲಿರುವವರಿಗೆ ಬಸವನಾಡಿಸುವವರು ಬಂದಿದ್ದಾರೆಂದು ತಿಳಿಯುವ ಸಲುವಾಗಿ ವಾದ್ಯ ಪರಿಕರಗಳನ್ನು ನುಡಿಸುವ ಪರಂಪರೆ ಬೆಳೆದುಬಂತು. ಇದಕ್ಕೆಂದೇ ಸುಬ್ಬಯ್ಯ ಅವರು ತಮ್ಮ ಭಾವನಿಂದ ನಾಗಸ್ವರ ನುಡಿಸುವುದನ್ನು ಕಲಿತರು. ಹದಿನೈದು ವರ್ಷದಿಂದ ನಾಗಸ್ವರ ನುಡಿಸುತ್ತಾ, ಹೀಗೆ ಅಲೆಮಾರಿಯಾಗಿ ಬದುಕುತ್ತಿದ್ದಾರೆ. ‘ನಾಗಸ್ವರವನ್ನು ಎಷ್ಟು ಚೆನ್ನಾಗಿ ನುಡಿಸ್ತೀರಾ! ’ ಎಂದು ಜನ ಹೊಗಳಿದರೆ, ಆಕಾಶಕ್ಕೆ ಕೈ ತೋರುತ್ತಾ, ‘ಅವನ ಕೃಪೆಯಪ್ಪಾ, ನಮ್ಮದೇನೂ ಇಲ್ಲ’ ಎಂಬ ನಿರ್ಮೋಹದ ಮಾತು.
ತಾಯಿಗೆ ಕ್ಯಾನ್ಸರ್ ಬಂದಾಗ, ಕೂಡಿಟ್ಟಿದ್ದ ಅಲ್ಪ ಸ್ವಲ್ಪ ದುಡ್ಡೆಲ್ಲ ಖರ್ಚಾಗಿ ಹೋಯಿತು. ‘ನಮ್ಮಂಥೋರ್ಗೆ ದೊಡ್ ಕಾಯಿಲೆ ಬಂದ್ರೆ ತಡ್ಕಳಕಾಯ್ತದಾ ಸ್ವಾಮಿ? ’ ಎನ್ನುವಲ್ಲಿ ಶೋಕದ ಸ್ಥಾಯೀಭಾವ. ತಮ್ಮ ಇಬ್ಬರು ಮಕ್ಕಳನ್ನು ತಂದೆ ತಾಯಿಯರೊಂದಿಗೆ ಬೆಳೆಸುತ್ತಿದ್ದ ಸುಬ್ಬಯ್ಯ ಅವರ ತಾಯಿ ತೀರಿ ಹೋದದ್ದರಿಂದ, ಆ ಜವಾಬ್ದಾರಿಯನ್ನು ತಂದೆಯೊಬ್ಬರಿಗೆ ಹೊರಿಸಲು ಮನಸ್ಸಾಗಲಿಲ್ಲ. ಇಬ್ಬರು ಮಕ್ಕಳೀಗ ತಂದೆಯೊಂದಿಗೆ ಅಲೆಮಾರಿ ಬದುಕಿಗೆ ಹೊಂದಿಕೊಂಡಿದ್ದಾರೆ. ಮಕ್ಕಳಿಗೆ ನಾಗಸ್ವರ ಕಲಿಸಬೇಕೆಂಬುದು ಸುಬ್ಬಯ್ಯ ಅವರ ಆಸೆಯಾಗಿತ್ತು. ಹತ್ತನೇ ತರಗತಿ ಓದಿದ್ದ ಮಗ ನಾಗಸ್ವರ ನುಡಿಸುತ್ತೇನೆಂದು ಅಭ್ಯಾಸ ಆರಂಭಿಸಿದ್ದಾನೆ. ಆದರೆ ಇನ್ನೊಬ್ಬ ಮಗ, ತಾನು ಓದಬೇಕೆಂದು ಇವರಲ್ಲಿ ಅಭಿಪ್ರಾಯ ತಿಳಿಸಿದ. ಬದುಕನ್ನು ಹಿಂತಿರುಗಿ ನೋಡಿದರೆ, ‘ನಾನೂ ಇದೇ ಜಾಗದಲ್ಲಿದ್ದಿದ್ದೆನಲ್ಲಾ! ’ ಎಂದು ಸುಬ್ಬಯ್ಯ ಅವರಿಗೆ ಅನಿಸತೊಡಗಿತು.
ಪರಿಸ್ಥಿತಿ ಸುಧಾರಿಸಿದೆ, ಹಾಗಿರುವಾಗ ಮಗನಲ್ಲಿ ಬಸವನಾಡಿಸು ಎಂದರೆ ತಪ್ಪಾದೀತು ಎನ್ನುತ್ತಾ ಓದಲು ಪ್ರೋತ್ಸಾಹಿಸಿದರು. ಸುಬ್ಬಯ್ಯ ಅವರ ಬದುಕು ಕುಲವೃತ್ತಿಯನ್ನು ಎಷ್ಟು ಅವಲಂಬಿಸಿದೆ ಎಂದರೆ, ಬೇರೆ ಉದ್ಯೋಗವನ್ನು ಇವರು ಮಾಡಲಾರರು. ಉಳಿದವರಂತೆ ಬೇಸಾಯ ಮಾಡಿ ಬದುಕುತ್ತೇನೆ ಎಂಬ ಮಾತನ್ನು ಕನಸಿನಲ್ಲಿಯೂ ಕನವರಿಸಿಲ್ಲ. ಏಕೆಂದರೆ, ಇವರದು ಅಲೆಮಾರಿ ಜೀವನವಾದರೂ ಒಂದು ತಿಂಗಳ ಮಟ್ಟಿಗೆ ಬಂದುಳಿಯಲು ಮನೆಯೊಂದಿದೆ. ಹೊರತಾಗಿ ತೋಟ, ಜಮೀನು ಏನೂ ಇಲ್ಲವೆಂದು ಹೇಳುವಾಗ ಇವರ ಮಾತು ಗದ್ಗದಿತವಾಗಿತ್ತು. ಸೀತಾ ರಾಮರ ಮದುವೆಯ ಆಟವನ್ನು ಆಡಿಸುವುದು ಮೊದಲಿಂದಲೂ ಬಂದ ಪರಿಪಾಠ.
ಈಗಿರುವ ಬಸವನ ಹೆಸರು ‘ರಾಮ’. ದೇವಸ್ಥಾನಕ್ಕೆ ಬಿಟ್ಟ ಗೂಳಿಯನ್ನು ಪಳಗಿಸಿ, ಬಸವನಾಗಿಸುತ್ತಾರೆ. ಅವುಗಳಿಗೆ ಸೀತಾ ರಾಮರ ಮದುವೆಯ ಆಟವನ್ನು ಕಲಿಸುವುದು ವಾಡಿಕೆ. ರಾಮ ಬಸವ ಬಂದು ಒಂದು ತಿಂಗಳು ಕಳೆದದ್ದಷ್ಟೆ. ಹಾಗಾಗಿ ಸುಬ್ಬಯ್ಯ ಅವರು ತರಬೇತಿ ನೀಡುತ್ತಿದ್ದಾರೆ. ಈ ತರಬೇತಿಗೆಲ್ಲ ಸಂಜ್ಞೆ, ಭಾಷೆಗಳೇ ಮುಖ್ಯ. ಚಿಕ್ಕವನಿದ್ದಾಗ ಬಸವನಲ್ಲಿ ‘ರಾವಣನನ್ನು ಕಂಡರೆ ನಿಂಗಿಷ್ಟನಾ? ’ ಎಂದರೆ ಅದು ಇಲ್ಲವೆಂದು, ‘ರಾಮನೆಂದರೆ? ’ ಇಷ್ಟವೆನ್ನುತ್ತ ತಲೆ ಕುಣಿಸುತ್ತದೆ. ಬಸವನಿಗೆ ಕನ್ನಡ ಭಾಷೆ ಎಷ್ಟು ಚೆನ್ನಾಗಿ ಬರುತ್ತದಲ್ಲಾ ಎಂದೂ ಅನಿಸಿತ್ತು! ಸುಬ್ಬಯ್ಯ ಅವರು ಇಪ್ಪತ್ತು ವರ್ಷಗಳ ಹಿಂದಿನ ಕಥೆ ನೆನಪಿಸಿಕೊಳ್ಳುತ್ತಾ, ಆಗೆಲ್ಲ ಕೆಲವೇ ಮನೆಗಳಿದ್ದರೂ ಆದಾಯಕ್ಕೇನೂ ಕೊರತೆಯಾಗುತ್ತಿರಲಿಲ್ಲ, ಬಸವ ಮನೆಯೆದುರು ಬಂದು ನಿಂತೊಡನೆ ಜನರು ದುಡ್ಡಾಗಲೀ ಹಿಟ್ಟಾಗಲೀ ತಮ್ಮಿಂದಾದಷ್ಟು ಸೇವೆ ನೀಡುತ್ತಿದ್ದರು.
ಆದರೀಗ ದಿನದ ದುಡಿಮೆ ಇಷ್ಟೇ ಎನ್ನುವುದಿಲ್ಲ. ಸಾಮಾನ್ಯ ದಿನಗಳಲ್ಲಿ ನೂರು ಇಲ್ಲಾ, ಇನ್ನೂರು ರೂಪಾಯಿಗಳಷ್ಟು ಸರಾಸರಿ ಆದಾಯವಿದೆ. ಆದರೆ ಮೊನ್ನೆ ಶುಕ್ರವಾರ ಬೆಳ್ಳಂಬೆಳಿಗ್ಗೆ ಹನಿ ಬಿದ್ದು, ಹತ್ತು ರೂಪಾಯಿಯೂ ಸಿಕ್ಕಲಿಲ್ಲ. ಹಬ್ಬ ಹರಕೆಯಿದ್ದರೆ ದುಡಿಮೆ ತುಸು ಹೆಚ್ಚೇ ಆಗುತ್ತದೆ. ಉಳಿದ ವೃತ್ತಿಯಂತೆ ದುಡಿಮೆಯ ನಿರ್ದಿಷ್ಟತೆ ಇಲ್ಲ. ಇದೆಲ್ಲದರ ನಡುವೆ ಒಮ್ಮೊಮ್ಮೆ ಆರೋಗ್ಯ ಹದಗೆಟ್ಟು, ಸುಮ್ಮನೆ ಮಲಗಲೂ ಆಗುವುದಿಲ್ಲ. ಕೆಲಸಕ್ಕೆ ಹೋಗದೇ ನಾಲ್ಕು ಪಾವಲಿ ಕಳೆದುಕೊಳ್ಳುವುದಕ್ಕಿಂತ, ಜೀವಕ್ಕಾಗುವಷ್ಟು ನಾಗಸ್ವರವನ್ನು ನುಡಿಸಿ ಬಂದರಾಯಿತು ಎಂದು ಸುಬ್ಬಯ್ಯ ಅವರು ದೇಹಸ್ಥಿತಿ ಸರಿಯಿಲ್ಲದಿದ್ದರೂ ಬದುಕ ಜೋಕಾಲಿಯನ್ನು ಜೀಕಲೇಬೇಕಾದ ಅಸಹಾಯಕತೆಯನ್ನು ತೆರೆದಿಡುತ್ತಾರೆ. ಅಪಾರ್ಟ್‌ಮೆಂಟ್, ಮಹಡಿ ಮನೆಗಳು ಹೆಚ್ಚಾದ್ದರಿಂದ ಆದಾಯಕ್ಕೆ ಹೊಡೆತ ಬಿದ್ದಿದೆ. ಕೆಲ ಮನೆಗಳೆದುರು ನಾಗಸ್ವರ ನುಡಿಸುತ್ತಾ ನಿಂತರೆ, ‘ದೇಹದಲ್ಲಿ ಶಕ್ತಿಯಿದೆ. ದುಡಿದು ತಿನ್ನಿ. ನೀವೂ ಅಲೆಯೋದಲ್ಲದೆ, ಆ ಪ್ರಾಣಿನೂ ಅಲೆಸ್ತೀರಿ’ ಎನ್ನುತ್ತಾ ಮುಖ ತಿರುವುತ್ತಾರೆ. ಕಿಂಚಿತ್ತೂ ಬೇಸರಿಸದೆ, ಮುಂದಿನ ಮನೆಯತ್ತ ಹೊಸ ಹುರುಪಿನಲ್ಲಿ ನಾಗಸ್ವರ ನುಡಿಸುತ್ತಾ, ಹೆಜ್ಜೆ ಹಾಕುತ್ತಾರೆ. ಅಲಂಕಾರಗೊಂಡ ರಾಮನೂ ಅಷ್ಟೆ, ಜನರ ದೂಷಣೆಗೆ ನಕ್ಕು, ಗೆಜ್ಜೆ ನಾದಗೈಯುತ್ತಾ ಇವರೊಂದಿಗೆ ಸಾಗುತ್ತಾನೆ.
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…
ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…
ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ…
ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ನಾಳೆ ಅದ್ಧೂರಿ ಚಾಲನೆ ಸಿಗಲಿದ್ದು,…
ನವದೆಹಲಿ: ಬಾಬಾಸಾಹೇಬ್ ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.…
ತುಮಕೂರು: 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸನ್ನು ಸರ್ಕಾರ ಹಿಂಪಡೆದಿದೆ. ಸರ್ಕಾರಿ ನೀರಾವರಿ ಯೋಜನೆಗೆ…