ಮಹಾದೀಪ, ಚಾಮರಾಜನಗರ

ಚಾಮರಾಜನಗರದ ಚರಿತ್ರೆಯನ್ನು ನೋಡುವುದಾದರೆ ಜಿಲ್ಲೆಗೂ ಮೈಸೂರಿಗೂ ಇರುವ ನಂಟು ಇಂದು ನಿನ್ನೆಯದಲ್ಲ. ಖಾಸಾ ಚಾಮರಾಜ ಒಡೆಯರು ರಾಜಧಾನಿಯನ್ನು ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಿದರು. ನಂತರ ಅವರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರು ಚಾಮರಾಜನಗರದೊಡನೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಅಮಚವಾಡಿಯ ಲಿಂಗರಾಜರ ಮಗಳನ್ನು ವಿವಾಹವಾದದ್ದಷ್ಟೇ ಅಲ್ಲದೆ ತನ್ನ ತಂದೆ ಚಾಮರಾಜ ಒಡೆಯರರು ಹುಟ್ಟಿದ ಊರಾದ ‘ಅರಿಕುಠಾರ’ಕ್ಕೆ ‘ಚಾಮರಾಜನಗರ’ ಎಂದು ಮರು ನಾಮಕರಣ ಮಾಡಿದರು. ಸುಮಾರು ೭೦ ಅಡಿ ಎತ್ತರದ ರಾಜಗೋಪುರ ಹೊಂದಿದ ಚಾಮರಾಜೇಶ್ವರ ದೇವಾಲಯ, ಹಲವು ಕೆರೆ ಕಟ್ಟೆಗಳು ಅವರ ಕಾಲದಲ್ಲಿ ನಿರ್ಮಾಣಗೊಂಡವು.

ಇರಸವಾಡಿ, ಗಂಗವಾಡಿ, ಮಂಗಲ, ಹೊಂಗನೂರು ಸೇರಿದಂತೆ ೧೩ ಹಳ್ಳಿಗಳಿಂದ ಸಂಗ್ರಹಿಸಿದ ಆದಾಯವನ್ನು ದೇವಾಲಯದ ನಿರ್ವಹಣೆಗೆ ದಾನ ಮಾಡುತ್ತಿದ್ದರು. ೧೯೩೬ರ ಆಷಾಢ ಪೌರ್ಣಮಿಯ ದಿನದಂದು ಚಾಮರಾಜೇಶ್ವರ ರಥೋತ್ಸವವನ್ನು ಆರಂಭಿಸಿದ ಹೆಗ್ಗಳಿಕೆ, ಚನ್ನಪ್ಪನಪುರ ವೀರಭದ್ರಸ್ವಾಮಿ ದೇವಸ್ಥಾನದ ನಿರ್ಮಾಣ ಇವೆಲ್ಲವೂ ಮೈಸೂರು ಒಡೆಯರ ಕಾಲದವು. ಅಷ್ಟೇ ಅಲ್ಲದೆ ತೆರಕಣಾಂಬಿ ಗ್ರಾಮದಲ್ಲಿ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟ ಐತಿಹ್ಯವಿರುವ ದೇವಸ್ಥಾನಗಳು ಈಗಲೂ ಪೂಜಿಸಲ್ಪಡುತ್ತಿವೆ. ಜಿಲ್ಲೆಯ ಕ್ಯಾತದೇವರಗುಡಿ ಬೆಟ್ಟ, ಬೇಡಗೂಳಿ ಬೆಟ್ಟಗಳಿಗೆ ಅರಸರು ಬೇಟೆಗಾಗಿ ಬರುತ್ತಿದ್ದರೆಂದೂ ಹೇಳಲಾಗುತ್ತದೆ.

ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು, ಸತ್ತೇಗಾಲ, ತೆರಕಣಾಂಬಿ, ಯಳಂದೂರು ಪ್ರದೇಶಗಳನ್ನು ಗೆದ್ದು ಒಡೆಯರು ಆಳ್ವಿಕೆ ನಡೆಸಿದ್ದರು. ತಿರುಚನಾಪಳ್ಳಿಯ ಜಟ್ಟಿಯೊಂದಿಗೆ ಕಾದಾಡಿ ಅವನನ್ನು ಕೊಂದು ಪರಾಕ್ರಮ ಮೆರೆದಿದ್ದ ರಣಧೀರ ಕಂಠೀರವ ನರಸರಾಜ ಒಡೆಯರ್‌ರು ಕೆಲವು ದಿನಗಳು ತೆರಕಣಾಂಬಿಯನ್ನು ಕೇಂದ್ರವಾಗಿಸಿಕೊಂಡು ಅಲ್ಲಿಯೇ ವಾಸ್ತವ್ಯ ಹೂಡಿದ್ದ ಸಂಗತಿ ಇತಿಹಾಸದ ಪುಟದಲ್ಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರರ ಆಳ್ವಿಕೆಯ ಅವಧಿಯಲ್ಲಿ ನಂಜನಗೂಡಿನಿಂದ ಚಾಮರಾಜನಗರದ ವರೆಗೆ ರೈಲು ಮಾರ್ಗವನ್ನು ವಿಸ್ತರಿಸಿದರಲ್ಲದೆ ಇಲ್ಲಿನ ರೈಲು ನಿಲ್ದಾಣದ ಬಳಿ ಭಾಷಣ ಮಾಡಿದ ದಾಖಲೆಗಳೂ ಕಾಣಸಿಗುತ್ತವೆ.

ಇಂದಿಗೂ ಚಾಮರಾಜನಗರ ಜಟ್ಟಿ ಜನಾಂಗದವರು ಮೈಸೂರು ಅರಮನೆ ಆವರಣದಲ್ಲಿ ವಜ್ರಮುಷ್ಟಿ ಕಾಳಗ ನಡೆಸಿದ ಬಳಿಕವಷ್ಟೇ ದಸರಾ ವಿಜಯದಶಮಿ ಕಾರ್ಯಕ್ರಮಗಳು ಚಾಲನೆಗೊಳ್ಳುತ್ತವೆ. ಯದುರಾಯರಿಂದ ಸ್ಥಾಪನೆಯಾದ ಮೈಸೂರು ಅರಸರ ಸಂಸ್ಥಾನವು ೧೯೪೫ರ ತನಕವೂ ಅಸ್ತಿತ್ವದಲ್ಲಿತ್ತು. ಮೊದಲನೆಯ ರಾಜ ಒಡೆಯರ್ ಕಾಲದಲ್ಲಿ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ರಾಜಧಾನಿಯನ್ನು ವರ್ಗಾಯಿಸಿದ ಲಾಗಾಯ್ತಿನಿಂದಲೂ ದಸರಾ ಹಬ್ಬದ ಆಚರಣೆಯು ಚಾಮರಾಜನಗರದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಪ್ರತಿ ನವರಾತ್ರಿಯ ಮೈಸೂರು ದಸರಾ ಉತ್ಸವ ಸಂದರ್ಭದಲ್ಲಿಯೂ ಚಾಮರಾಜನಗರದ ಕಮರವಾಡಿ, ತೆರಕಣಾಂಬಿ, ಕೊತ್ತಲವಾಡಿ, ಅರಕಲವಾಡಿ… ಹೀಗೆ ಅನೇಕ ಗ್ರಾಮಗಳಲ್ಲಿ ನವರಾತ್ರಿ ಹಬ್ಬವನ್ನು ಆಚರಿಸುತ್ತಾರೆ.

ಚಾಮರಾಜನಗರದ ಅಭಿವೃದ್ಧಿಗೆ ಅರಸರ ಕೊಡುಗೆಯೂ ಇರುವುದರಿಂದ ಚಾಮರಾಜನಗರ ಮತ್ತು ಮೈಸೂರು ಎರಡೂ ಅವಿಭಾಜ್ಯ ಅಂಗದಂತಿವೆ. ಚಾಮರಾಜನಗರವು ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದಕ್ಕೆ ಹತ್ತಾರು ನಿದರ್ಶನಗಳು ಇತಿಹಾಸದ ಪುಟಗಳಲ್ಲಿವೆ. ಜಿಲ್ಲೆಯ ಜನರು ಭಾವನಾತ್ಮಕವಾಗಿ ಮೈಸೂರಿನೊಂದಿಗೆ ಸಂಬಂಧ ಬೆಸೆದುಕೊಂಡಿದ್ದಾರೆ. ಮೈಸೂರಿನ ರಾಜಕೀಯ, ಶೈಕ್ಷಣಿಕ ವಿಚಾರಗಳ ಪರಿಣಾಮ ಚಾಮರಾಜನಗರ ಜಿಲ್ಲೆಗೂ ತಟ್ಟುತ್ತದೆ ಎನ್ನುವಷ್ಟರ ಮಟ್ಟಿಗೆ ನಿಕಟ ಸಂಬಂಧ ಹೊಂದಿದೆ. ಶಿಕ್ಷಣಕ್ಕಾಗಿ, ಉದ್ಯೋಗಕ್ಕಾಗಿ ಅವಳಿ ಜಿಲ್ಲೆಗಳನ್ನು ಅವಲಂಬಿಸಿರುವವರಿಗೆ ಎರಡೂ ಕೂಡ ತಮ್ಮದೇ ಎನ್ನುವಷ್ಟರ ಮಟ್ಟಿಗೆ ಆಪ್ತಭಾವ.

ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ೧೯೯೭ರಲ್ಲಿ ಜಿಲ್ಲೆಯಾಗಿ ಪ್ರತ್ಯೇಕಗೊಂಡಿತು. ಭಾವನಾತ್ಮಕ ಸಂಬಂಧ ಹೊಂದಿದ್ದ ಚಾಮರಾಜನಗರ ಮೈಸೂರಿನಿಂದ ಬೇರ್ಪಟ್ಟರೂ ಕಲೆ, ಸಂಸ್ಕ ತಿಯ ವಿಚಾರದಲ್ಲಿ ಮೈಸೂರಿನ ಭಾಗವಾಗಿಯೇ ಗುರುತಿಸಿಕೊಂಡು ಬಂದು ಪ್ರತೀ ವರ್ಷವೂ ಜಿಲ್ಲೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟುತ್ತಿತ್ತು. ಮೈಸೂರು ಒಡೆಯರ ಪರಂಪರೆಯ ಭಾಗವಾಗಿರುವ ಜಿಲ್ಲೆಯಲ್ಲಿ ಸರಕಾರವೇ “ಗ್ರಾಮೀಣ ದಸರಾ” ಎಂಬ ಹೆಸರಿ ನಲ್ಲಿ ದಸರಾ ಸಾಂಸ್ಕ ತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು ‘ಚಾಮರಾಜನಗರ ದಸರಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಒಂದೊಮ್ಮೆ ಪ್ರವಾಹದ ಹಿನ್ನೆಲೆಯಲ್ಲಿ ದಸರಾ ಆಚರಣೆರದ್ದಾಗಿತ್ತು ಎಂಬುದನ್ನು ಬಿಟ್ಟರೆ ಉಳಿದಂತೆ ಪ್ರತಿ ವರ್ಷ ಸಡಗರ ಸಂಭ್ರಮಗಳಿಂದ ದಸರಾ ಸಾಂಸ್ಕ ತಿಕ ಆಚರಣೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುತ್ತಾ ಬಂದಿತ್ತು. ಆದರೆ, ಈ ಸಲ ಶ್ರೀರಂಗಪಟ್ಟಣ, ಮಡಿಕೇರಿ ದಸರಾ ಉತ್ಸವದಂತೆಯೇ ಚಾಮರಾಜನಗರದ ದಸರಾ ಪ್ರಾಮುಖ್ಯತೆಯನ್ನು ಪಡೆಯುವಲ್ಲಿ ಸೋತು ಸೂತಕದ ಛಾಯೆಯಲ್ಲಿದೆ ಎನ್ನುವುದಕ್ಕೆ ಜಿಲ್ಲೆಯ ಪ್ರಜೆಯಾಗಿ ನೊಂದುಕೊಳ್ಳುತ್ತೇನೆ.

ಚಾಮರಾಜನಗರ ಜಿಲ್ಲೆ ಜಾನಪದದ ತವರೂರು. ಮಂಟೇಸ್ವಾಮಿ, ಮಲೆ ಮಹದೇಶ್ವರ, ಬಿಳಿಗಿರಿ ರಂಗನಾಥ, ಹಿಮವದ್ ಗೋಪಾಲಸ್ವಾಮಿ… ಹೀಗೆ ಜನಪದರ ನಂಬಿಕೆಯ ದೈವವಾಗಿ, ಜೀವನಾಡಿಯಾಗಿ ಜನಪದರ ನಾಲಿಗೆಯ ಮೇಲೆ ಲೀಲೆಗಳಾಗಿ ನಲಿದಾಡುತ್ತಿವೆ. ಜಿಲ್ಲೆಯ ಪ್ರತಿ ಮನೆಯಲ್ಲೂ ಜಾನಪದ ಕಲಾವಿದರಿದ್ದಾರೆ ಹಾಗೂ ಜನಪದ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಅಪಾರ. ಮಂಟೇಸ್ವಾಮಿ, ಸಿದ್ದಪ್ಪಾಜಿ ನೀಲಗಾರರು, ಮಹದೇಶ್ವರ ಗುಡ್ಡರು, ಬಿಳಿಗಿರಿರಂಗಪ್ಪನ ದಾಸರು, ಭೈರುವನ ಜೋಗಿಗಳು ಮುಂತಾದ ಪರಂಪರೆಯ ಕಾವಲುಗಾರರು, ಬೀಸು ಕಂಸಾಳೆ ಕಲಾವಿದರು, ಗೊರವರು, ಕತ್ತಿವರಸೆ – ಕಡ್ಡಿವರಸೆ ಕಲಾವಿದರು, ಜಾನಪದ ನೃತ್ಯಗಾರರು, ಗ್ರಾಮೀಣ ರಂಗ ಕಲಾವಿದರು, ಸೋಬಾನೆ ಕಲಾವಿದರು ಮುಂತಾದವರು ದಸರಾ ಕಳೆಗಟ್ಟಲು ಕಾರಣೀಭೂತರು. ಮೈಸೂರಿನ ಉತ್ಸವದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವ ಅವಕಾಶವಿಲ್ಲದೆ ವಂಚಿತರಾದ ಪರಂಪರೆಯ ಕಲೆಯನ್ನು ಉಳಿಸುವ ಸಾವಿರಾರು ಕಲಾವಿದರು ಚಾಮರಾಜನಗರ ದಸರಾ ಉತ್ಸವದಲ್ಲಿ ಸಾಂಸ್ಕ ತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಂಡಿರುತ್ತಾರೆ. ಆದರೆ ಈ ಸಲ ಆ ಅವಕಾಶದ ಬಾಗಿಲುಗಳೂ ಮುಚ್ಚಿಕೊಂಡಿವೆ. ಮೈಸೂರಿನ ವಿಜೃಂಭಣೆಯಲ್ಲಿ ಚಾಮರಾಜನಗರ ಕಾಣೆಯಾದವರ ಪಟ್ಟಿಗೆ ಸೇರ್ಪಡೆಗೊಂಡಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ ಮೈಸೂರು ದಸರಾ ನವರಾತ್ರಿ ಉತ್ಸವ ಪ್ರಾರಂಭವಾಗಿದೆ. ಚಾಮರಾಜನಗರದಲ್ಲಿಯೂ ಎಂದಿನಂತೆ ಜಿಲ್ಲಾಡಳಿತವು ಚಾಮರಾಜನಗರ ದಸರಾ ಉತ್ಸವ ಆಚರಿಸುತ್ತದೆಯೆಂದು ನಂಬಿದ್ದರು. ಆದರೆ ರಾಜ್ಯದ ಮುಖ್ಯಮಂತ್ರಿಗಳು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಉತ್ಸವಕ್ಕೆ ಹಿನ್ನಡೆಯಾಗಿದೆ. ಸ್ಥಳೀಯ ರಾಜಕಾರಣಿಗಳಿಗೆ ಚಾಮರಾಜನಗರ ದಸರಾ ಉತ್ಸವ ಆಚರಿಸುವಂತೆ ಕಲಾವಿದರು, ಮುಖಂಡರು, ಹೋರಾಟಗಾರರು ಮತ್ತು ಸಾಹಿತಿಗಳು ಮನವಿ ಸಲ್ಲಿಸಿದ್ದರೂ ಇಲ್ಲಿನ ಶಾಸಕರು, ಸಂಸದರು ಮತ್ತು ಉಸ್ತುವಾರಿ ಸಚಿವರ ಇಚ್ಛಾಶಕ್ತಿಯ ಕೊರತೆಯಿಂದ ಅಥವಾ ಅಸಹಾಯಕತೆಯಿಂದ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳ ಮನಸ್ಸನ್ನು ಗೆಲ್ಲುವುದರಲ್ಲಿ ವಿಫಲರಾಗಿದ್ದಾರೆ. ಚಾಮರಾಜನಗರದಲ್ಲಿ ದಸರಾ ಸಂಭ್ರಮ ಬೇಕೇ, ಬೇಡವೇ ಎನ್ನುವ ಚರ್ಚೆಗೂ ಆಸ್ಪದವಿರದ ಏಕಮುಖ ನಿರ್ಣಯದಿಂದ ಸ್ಥಳೀಯ ಜನತೆ ನಿರಾಶರಾಗಿದ್ದಾರೆ. ಆದರೂ ಕುಗ್ಗದೆ, ಚಾಮರಾಜನಗರ ದಸರಾ ನಡೆಸುವ ಸ್ವಾಭಿಮಾನದ ನಡೆಯಿಂದ ಕಲಾವಿದರು ಹೋರಾಟಗಾರರು, ಸಾಹಿತಿಗಳು, ಮುಖಂಡರು ಒಟ್ಟಾಗಿ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಚಾಮರಾಜನಗರ ದಸರಾ ಉತ್ಸವವನ್ನು ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಡೆಸಿ ಈ ಬಾರಿ ದಿಟ್ಟ ಸಾಂಸ್ಕ ತಿಕ ಉತ್ತರ ಕೊಟ್ಟಿದೆ.

‘ಕನ್ನಡ ರಾಮಾಯಣ’ ಕರ್ತೃ ಚಾಮರಾಜ ಒಡೆಯರ್‌ರ ಹುಟ್ಟೂರಿನಲ್ಲಿ ಮುಂದಿನ ವರ್ಷದಿಂದಾದರೂ ಮತ್ತೆ ದಸರಾ ಸಂಭ್ರಮ ಕಳೆಗಟ್ಟಬೇಕಿದೆ. ಚಾರಿತ್ರಿಕ, ಸಾಹಿತ್ಯಕ, ಸಾಂಸ್ಕ ತಿಕ ಶ್ರೀಮಂತಿಕೆಯ ಜಿಲ್ಲೆಯಲ್ಲಿ ನವರಾತ್ರಿ ರಂಗು ಮೇಳೈಸಿದರೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ಹಿರಿಮೆ ಗರಿಮೆ, ಭಾವನಾತ್ಮಕ ನಂಟು ಗಟ್ಟಿಯಾಗುತ್ತದೆ.ಚಾಮರಾಜನಗರ, ರಾಜಪ್ರಭುತ್ವದ ಆಳ್ವಿಕೆಯ ಕಾಲದಿಂದಲೂ ಮೈಸೂರು ರಾಜಮನೆತನದ ಅಭಿಮಾನಿಗಳಾಗಿ ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಅನೇಕರು ಅರಮನೆಯ ರಾಜ ಪಗಾರವನ್ನು ಜೀವನದ ಅತ್ಯುನ್ನತ ಪದವಿ ಎಂಬಂತೆ ಭಾವಿಸಿ ಹೆಮ್ಮೆಪಡುತ್ತಿದ್ದಾರೆ. ಮೈಸೂರು ಮತ್ತು ಚಾಮರಾಜನಗರಕ್ಕಿರುವ ಇತಿಹಾಸದ ಈ ಒಂದು ಅವಲೋಕನದ ಮೂಲಕ ಚಾಮರಾಜನಗರ ಜಿಲ್ಲೆಯಲ್ಲಿ ದಸರಾ ಉತ್ಸವ ಕಳೆಗಟ್ಟುವಂತಾಗಲಿ. ಮುಂದಿನ ವರ್ಷದಿಂದ ಮತ್ತೆ ಚಾಮರಾಜನಗರ ಜಿಲ್ಲೆ ದಸರಾ ಉತ್ಸವ ಹಲವು ಕಲಾವಿದರ ಪ್ರತಿಭೆಗಳಿಗೆ ವೇದಿಕೆಯಾದರೆ ಮಾತ್ರ ಖಾಸಾ ಚಾಮರಾಜ ಒಡೆಯರಿಗೆ ಕನ್ನಡ ನಾಡಿನ ಮಕ್ಕಳಾಗಿ ಗೌರವ ಸಲ್ಲಿಸುವಂತಾಗುತ್ತದೆ

” ಮೈಸೂರು ಪ್ರಾಂತ್ಯವನ್ನು ಆಳಿದ ಅರಸರಲ್ಲಿ “ಶ್ರೀ ಚಾಮರಾಜೋಕ್ತಿ ವಿಲಾಸ” ಎಂಬ ಏಳು ಸಂಪುಟಗಳ ಕನ್ನಡ ರಾಮಾಯಣ ಬರೆದ ಖಾಸಾ ಚಾಮರಾಜ ಒಡೆಯರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಇಂತಹ ಅಪರೂಪದ ಕೃತಿಕಾರನ ಹುಟ್ಟೂರಾದ ಚಾಮರಾಜನಗರದಲ್ಲಿ ಈ ವರ್ಷ ದಸರಾ ಸಂಭ್ರಮ ಕಳೆಗಟ್ಟದೆ ಭಣಗುಟ್ಟುತ್ತಿರುವುದು ಸಾಹಿತ್ಯ, ಸಾಂಸ್ಕ ತಿಕ ಲೋಕಕ್ಕೆ ನಷ್ಟವೂ ಹೌದು”

ಆಂದೋಲನ ಡೆಸ್ಕ್

Recent Posts

ಮಂಡ್ಯದಲ್ಲಿ ಕೃಷಿ ಮೇಳ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೃಷಿ…

6 mins ago

ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ: ಆರ್.‌ಅಶೋಕ್‌

ಬೆಂಗಳೂರು: ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ವೇಳೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ…

37 mins ago

ಸಿಎಂ ಬದಲಾವಣೆ ಚರ್ಚೆಗೆ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ

ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…

1 hour ago

ಮಂಡ್ಯ| ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…

2 hours ago

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

2 hours ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

3 hours ago