ನಾಗರಾಜ ವಸ್ತಾರೆ
ನಿಜವಾಗಿ ಹೇಳುತ್ತೇನೆ, ಈ ಕುರಿತೇನೂ ಬರೆಯತೋಚುತ್ತಿಲ್ಲ. ಹಾಗೆ ನೋಡಿದರೆ ಇದೇನೂ ಬರೆಯತಕ್ಕ ವಿಚಾರವೂ ಅಲ್ಲ. ಹಗರಣಗಳಾದರೂ, ಸುತ್ತಲಿನ ವಾತಾವರಣದೊಳಗಿನ ಸಾಮಾನ್ಯ ಏರುಪೇರೆನ್ನುವ ಹಾಗೆ- ದಿನದಿಂದ ದಿನಕ್ಕೂ ಸುತ್ತಿಮುತ್ತುವ ಈ ಹೊತ್ತುಗೊತ್ತಿನಲ್ಲಿ, ಆ ದೆಸೆಯಲ್ಲಿ ಸುಖಾಸುಮ್ಮನೆ ತಲೆಯಿಟ್ಟು ಕೆಡಿಸಿಕೊಳ್ಳಬೇಕಿಲ್ಲ. ಚಿಕ್ಕಪುಟ್ಟ ಸಂಗತಿಯನ್ನೂ ಸದ್ದಿನ ಸುದ್ದಿಯ ಆಸ್ಫೋಟವೆಂದೊಂದಾಗಿ ಬಡಬಡಿಸುವ ಅರಚುಮಾರೀ ಮಾಧ್ಯಮಗಳಿರಲಿ, ಕಂಡಕಂಡಿದ್ದಕ್ಕೆಲ್ಲ ಅಭಿಪ್ರಾಯ ಮಂಡಿಸುವ ನಮ್ಮ ಸೋಶಿಯಲ್ ಮೀಡಿಯಾವೂ- ಈಗಾಗಲೇ, ತಲೆತಲೆಗೂ ಒಂದೊಂದಾಡಿ ತೀಟೆ ತೀರಿಸಿಕೊಂಡಾದ ಈ ವಿಷಯದ ಬಗ್ಗೆ ಹೆಚ್ಚೇನು ತಾನೇ ಆಡಲಾದೀತು? ಪಟ್ಟುಹಿಡಿದು ಹೊಸತೇನು ಬರೆಯಲಾದೀತು? ಇನ್ನು, ರೋಚನೆ-ರಂಜನೆಗಳ ಅತಿರೇಕವನ್ನು ಕಂಡರಿಯುತ್ತ ನಡುವಯಸ್ಸನ್ನು ದಾಟುತ್ತಿರುವ ನನ್ನ ಮೈಮನಸುಗಳೂ ಇದಕ್ಕೆ ಹೆಚ್ಚೇನೂ ಅರ್ಥ ಹಚ್ಚುತ್ತಿಲ್ಲ. ಮೈಯಲ್ಲಿ ನವಿರೇಳುತ್ತಿಲ್ಲ. ಮನಸು ಪುಳಕಿಸುತ್ತಿಲ್ಲ. ಸಾರ್ವತ್ರಿಕ ಚುನಾವಣೆಯ ನಡುವೆ ಎಂಥದೋ ಸೋಗಿನ ಸ್ಥಿತ್ಯಂತರಕ್ಕೆ ಅಣಿಗೊಂಡಂತಿರುವ ಈ ನಾಡಿನಲ್ಲಿ, ಈಗಿತ್ತಲಾಗಿ, ಬರೇ ‘ಅರಾಜಕ’ (ಅಂದರೆ ರಾಜಕೀಯಕ್ಕೆ ಹೊರತಾದ) ವಿಚಾರಗಳೇ ಗಿರಕಿ ಹೊಡೆಯುತ್ತಿರುವುದರೆದುರು ದೊಡ್ಡದೊಂದು ಸುಸಂಸ್ಕೃತ ದೇಶವಾಗಿ ನಾವೇನು ಮೆರೆಯಬೇಕೋ, ಮರುಗಬೇಕೋ… ಅರಿವಾಗುತ್ತಿಲ್ಲ.
ಇಷ್ಟಿದ್ದೂ, ಅತ್ಯಂತ ಖಾಸಗೀ ಚಲನಚಿತ್ರಿಕೆಗಳೆನ್ನಲಾಗುವ ಸರಿಸುಮಾರು ಮೂರು ಸಾವಿರ ಸಂಖ್ಯೆಯ ಸದರಿ ‘ಸೋಕಾಲ್ಡ್’ ವಿಡಿಯೋ-ಹಗರಣವನ್ನು ಸಮರ್ಥಿಸಲಾಗುವುದಿಲ್ಲ. ಕೆಲವಾರು ಸಾರ್ವತ್ರಿಕ ಕಾರಣದ ಮೇರೆಗೆ ಸರಿಯೆಂದು ಒಪ್ಪಲಾಗುವುದಿಲ್ಲ. ಸಾವಿರಾರು ಹೆಣ್ಣುಗಳೊಡನೆ ಸಂಸದೀಯ ಅಭ್ಯರ್ಥಿಯೊಬ್ಬನು ಕೈಕೊಂಡ ಯೌನಸಂಸರ್ಗದ ಪುಟ್ಟಪುಟ್ಟ ರೀಲುಗಳೆನ್ನಲಾಗುವ ಈ ಚಿತ್ರಿಕೆಗಳನ್ನು ಸಾರ್ವಜನಿಕ ದೃಷ್ಟಿಯಲ್ಲಿ ನೋಡುವುದೂ ‘ಅಶ್ಲೀಲ’ವೆನಿಸುವ ನಾಜೂಕಿನ ಸಂದರ್ಭದಲ್ಲಿ- ಹೀಗೊಂದು ವೈಯಕ್ತಿಕ ತೆವಲನ್ನು ಚಿತ್ರೀಕರಿಸಿದ ಧಾರ್ಷ್ಟ್ಯವನ್ನು ಹಗುರವಾಗಿ ಗಣಿಸಲಾಗುವುದಿಲ್ಲ. ವಿಕೃತವೆನ್ನದೆ ಇನ್ನು ದಾರಿಯೂ ಇಲ್ಲ. ಆದರೆ, ಈ ಪರಿಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ ಹೆಣ್ಣುಗಳು ಸ್ವಂತಾನುಮತದಿಂದ ಈ ವಿಡಿಯೋಗ್ರಹಣದಲ್ಲಿ ಪಾಲುಗೊಂಡಿದ್ದಲ್ಲಿ ಆ ಕುರಿತು ತೀರ್ಮಾನ ಹೇಳುವುದೆಂತು? ಆದರೆ ಇವುಗಳ ಹಿನ್ನೆಲೆಯಲ್ಲಿ ಕಿಂಚಿತ್ತಾದರೂ ಬಲಾತ್ಕಾರವಿದ್ದಲ್ಲಿ ಯಾವ ಕಾರಣಕ್ಕೂ ಸರಿಯೆನ್ನಲಾಗುವುದಿಲ್ಲ. ಅಲ್ಲದೆ, ಇಪ್ಪತ್ತೊಂದನೇ ಶತಮಾನದ ಇಪ್ಪತ್ತನಾಲ್ಕನೇ ಇಸವಿಯ ರಾಜಕೀಯವು ಯಾವ ಮಟ್ಟದ್ದೆನ್ನುವುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ.
ಸರಕಾರವೆಂದು ನಮಗೆ ನಾವೇ ಮಾಡಿಕೊಂಡಿರುವ ರಾಜಕೀಯ ವ್ಯವಸ್ಥೆಯೊಳಗೆ ಆಳುವ ಮತ್ತು ಆಳಿಸಿಕೊಳ್ಳುವ ಎಂದು ಎರಡು ಪಂಗಡವಿರುತ್ತವಷ್ಟೆ? ಆಳುವವರಿರುವಲ್ಲಿ ಆಳಿಸಿಕೊಳ್ಳುವವರೂ ಇರುತ್ತಾರೆ. ಅಂದರೆ, ಆಳಿಸಿಕೊಳ್ಳುವವರನ್ನು ಆಳುವವರು ಆಳುತ್ತಾರೆ. ನನ್ನ ಮಟ್ಟಿಗೆ, ಈ ‘ಆಳು’ ಎಂಬ ಶಬ್ದವೇ ತುಸು ಹೇಯವೆನಿಸುತ್ತದೆ. ಕೇಳಲು ರೇಜಿಗೆಯೆನಿಸುತ್ತದೆ. ಈ ‘ಆಳು’ ನಾಮಪದವೂ ಹೌದು. ಕ್ರಿಯಾಪದವೂ ಹೌದು. ನಾಮಪದವಾಗಿ ಇದು ‘ಆಳಿಸಿಕೊಳ್ಳುವವ’ನೆನ್ನುವ ಅರ್ಥ ಹೇಳುತ್ತದೆ. ಅದೇ ಕ್ರಿಯಾಪದವಾಗಿ ‘ಆಳುವ’ ಕ್ರಿಯೆಯನ್ನು ಸೂಚಿಸುತ್ತದೆ. (ಪ್ರಾಸಂಗಿಕವಾಗಿ, ನಾನು ಈ ಹಿಂದೊಮ್ಮೆ ಬರೆದ ಪದ್ಯದ ಒಂದು ಸಾಲು ನೆನಪಾಗುತ್ತಿದೆ. ‘ಆಳು ನಾನು, ಆಳು ನನ್ನನ್ನು’ ಎಂಬ ಸಾಲು. ಇಲ್ಲಿರುವ ‘ಆಳು’ವನ್ನು ಈ ಎರಡೂ ಬಗೆಯಲ್ಲಿ ಗಮನಿಸಬಹುದು. ಅಂದರೆ ನಾಮಪದವಾಗಿ ಮತ್ತು ಕ್ರಿಯಾಪದವಾಗಿ. ಇನ್ನು, ‘ನನ್ನನ್ನು ನೀನು ಆಳಿಕೋ’ ಅನ್ನುವಲ್ಲಿ ಶರಣಾಗತಿಯಿದೆ. ಸಮರ್ಪಣೆಯಿದೆ. ಭಕ್ತಿಪೂರ್ವಕ ನಿವೇದನೆಯೂ ಇದೆ. ಈಗಿತ್ತಲಿನ ಹಲಕೆಲಸಾರಿ ಸದರಿ ಭಕ್ತಿಯನ್ನು ಗುಲಾಮತನವೆಂತಲೂ ಕುಹಕಿಸುವುದಿದೆ.) ಇನ್ನು, ‘ಆಳಿಕೆ’ (ಆಳ್ವಿಕೆ) ಎಂಬುದರಲ್ಲಿ ‘ಆಳುವ’ ಕಾಲವೋ, ರೀತಿಯೋ ಅಂತೆಂಬ ದೊಡ್ಡ ಇಂಗಿತವಿದೆ. ಇತಿಹಾಸವೆಂಬುದರ ಎಣಿಕೆ-ಗಣಿಕೆಗೆ ಮುನ್ನಿನಿಂದಲೂ ಮನುಕುಲವು ತನ್ನುದ್ದಗಲಕ್ಕೂ ಒಂದಲ್ಲೊಂದು ಆಳಿಕೆಗೀಡಾಗಿದೆ. ಸದಾ ಆಳಲ್ಪಟ್ಟಿದೆ. ಇಷ್ಟರ ಮಧ್ಯೆ, ನಮ್ಮಲ್ಲಿ ದಬ್ಬಾಳಿಕೆಯೆನ್ನುವ ಇನ್ನೂ ಒಂದು ಪದವಿದೆ. ಇದು ಆಳಿಕೆಯೊಳಗಿನ ದೌರ್ಜನ್ಯವನ್ನು ಅಭಿಪ್ರಾಯಿಸುತ್ತದೆ. ಹಾಗೆ ನೋಡಿದರೆ, ಆಳಿಕೆಗೂ ದಬ್ಬಾಳಿಕೆಗೂ ನಡುವಿನ ಅಂತರ ತೀರಾ ಕಡಿದಾದುದೆನಿಸುತ್ತದೆ. ಎಲ್ಲ ಕಾಲದಲ್ಲೂ ಈ ವ್ಯತ್ಯಾಸವು ಶಿಥಿಲವೇ ಇದ್ದಿತೆಂದು ಬಗೆಯಲಿಕ್ಕೆ- ಸಾಕ್ಷಾತ್ ಕಣ್ಣೆದುರೇ ಸಂದು ಇಲ್ಲವಾದ ಹತ್ತೆಂಟು ಪುರಾವೆಗಳು ನಮ್ಮೆದುರಿವೆ.
ಹದಿನೆಂಟನೇ ಶತಮಾನದಿಂದೀಚೆಗೆ (ಅದರಲ್ಲೂ ಇಪ್ಪತ್ತನೇ ಶತಮಾನದ ನಟ್ಟನಡುವೆ) ಜಗತ್ತಿನ ಬಹುತೇಕ ಎಲ್ಲ ದೇಶಗಳೂ ಒಪ್ಪಿ ತನ್ನದಾಗಿಸಿಕೊಂಡ ಪ್ರಜಾಸತ್ತೆಯು- ಆಳುವ ಮಂದಿಯನ್ನು ಆಳಿಸಿಕೊಳ್ಳುವವರಿಂದಲೇ ಹೆಕ್ಕತಕ್ಕುದೆಂದು ಪ್ರತಿಪಾದಿಸುತ್ತದೆ. ತಕ್ಕುದಾಗಿ, ನಾವೂ ದೇಶವೊಂದಾಗಿ ಪ್ರಜಾಪ್ರಭುತ್ವವನ್ನು ಹೊಂದಿದ್ದೇವೆ, ನಮ್ಮನ್ನು ನಾವು ಪ್ರಪಂಚದ ಅತಿದೊಡ್ಡ ಡೆಮಾಕ್ರೆಸಿಯೆಂದು ಬೀಗಿಕೊಳ್ಳುತ್ತೇವೆ. ಇನ್ನಿರದೆ ಹೆಮ್ಮೆ ಹಮ್ಮುತ್ತೇವೆ. ಇದೇ ಮೇರೆಗೆ, ನಮ್ಮಲ್ಲೂ, ಪ್ರತಿಯೊಬ್ಬ ‘ಆಳುವವ’ನೂ ‘ಆಳಿಸಿ’ಕೊಳ್ಳುವ ನಮ್ಮೆಲ್ಲರ ‘ನೇರ’ ಪ್ರತಿನಿಧಿಯೇ ಆಗಿದ್ದಾನೆ. ನಮ್ಮಂತೆಯೇ ಎರಡು ಕೈಯಿಕಾಲು-ರುಂಡಮುಂಡವುಳ್ಳ ಸಾಮಾನ್ಯ ಮನುಷ್ಯನೇ ಆಗಿದ್ದಾನೆ. ನಮ್ಮಗಳ ಹಾಗೇ ರಾಗದ್ವೇಷ ಅರಿಷಡ್ವರ್ಗವಿತ್ಯಾದಿಯುಳ್ಳ ‘ನಿಶ್ಚಿತ’ ನಮೂನೆಯೇ ಆಗಿದ್ದಾನೆ. ಹೀಗಿರುವಾಗ ನನ್ನ ಪ್ರಶ್ನೆಯೇನೆಂದರೆ, ನಮ್ಮ ನಡುವಿನಿಂದ ನಾವುಗಳೇ ಆಯ್ದ ವಿಧಾಯಕನು ನಮ್ಮಲ್ಲಿರದ ಗುಣವಿಶೇಷವನ್ನು ಹೊಂದಿರಬೇಕೆಂದು ನಾವು ಬಯಸುತ್ತೇವೇಕೆ? ನಮ್ಮೆಲ್ಲರ (ನಮ್ಮೊಳಗೆ ನಿಜಕ್ಕೂ ಇದ್ದಿರದ) ಮರ್ಯಾದೆಯನ್ನು- ನಾವು ಚುನಾಯಿಸಿದ ಶಾಸಕರೂ, ಸಂಸದರೂ ಸದಾಸರ್ವದಾ ಹೊಂದಿದ ಪುರುಷೋತ್ತಮರೇ ಆಗಿರಬೇಕೆಂದು ಆಶಿಸುತ್ತೆವೆಯೇಕೆ? ಅವರೇನೂ ನಾವಲ್ಲದ ‘ಅತಿ’ಮಾನುಷರಲ್ಲವಷ್ಟೆ? ಕಣ್ಮೂಗು ಕಿವಿತೊಗಲು ಬಾಯ್ನಾಲಗೆ ಇಲ್ಲದ ಇಂದ್ರಿಯಾತೀತರಲ್ಲವಷ್ಟೆ? ಹಾಗೆಂದುಕೊಂಡಲ್ಲಿ ತುಸು ಅತಿಯಾಯಿತಷ್ಟೆ?
ಮನುಷ್ಯನೆಂದ ಮೇಲೆ ಜನುಮಕ್ಕೆ ತಕ್ಕುನಾದ ಮೈಯಿರುತ್ತದೆ. ಮೈಯನ್ನಾಳುವ ಮನಸಿರುತ್ತದೆ. ಮೈಯೊಳಗಿನ ಹತ್ತೆಂಟು ನಾಳ-ನಿರ್ನಾಳಗಳು ಮನಸನ್ನಾಳುವ ಬಗೆಬಗೆಯ ರಸ-ರಸಾಯನಗಳನ್ನು ಸ್ರವಿಸುತ್ತವೆ. ನಿಖರವಾಗಿ, ಮನಸೆನ್ನುವ ಮನಸನ್ನೇ ಕಲಕಿ ಕುಲುಕಿ ಕದಡಿ ಕೆದಕಿ ರಾಡಿಗೈಯುತ್ತವೆ. ಇನ್ನು, ಮೈಮನಸುಗಳ ಅಂಕೆಶಂಕೆಯಾದರೂ, ಇವಿವೇ ಮೈಮನಸುಗಳ ಒಳಗಿದ್ದೂ- ಆಚೆಗಿನ್ನೆಲ್ಲೋ ಇರುವಂತೆ ಇದ್ದು, ಎರಡನ್ನೂ ಒಟ್ಟೊಟ್ಟಿಗೆ ಎಲ್ಲೆಲ್ಲೋ ಸವಾರಿಗೆ ತೊಡಗಿಸುತ್ತದೆ. ಕೆಲವೊಮ್ಮೆ ಎರಡನ್ನೂ ಎರಡೆಡೆಯಾಗಿ ನಡೆಯಗೊಡುತ್ತದೆ. ಭಯಭಕುತಿ-ಲಜ್ಜೆ-ಗಾಂಭೀರ್ಯವಿತ್ಯಾದಿ ‘ಸರಿ’ರಸಗಳಂತೆಯೇ- ಪ್ರೇಮಕಾಮ, ದ್ವೇಷವೈಷಮ್ಯ ವಿರಸವಿತ್ಯಾದಿ ‘ತಪ್ಪು’ರಸಗಳ ಸ್ಫುರಣವೂ ಇದೇ (ಮೈ)ಜಗತ್ತಿನಲ್ಲಿ ಜರುಗುತ್ತದೆ. ವೈಮನಸ್ಸೆಂಬುದಾದರೂ ಮೈಮನಸ್ಸಿನ ಸಂಗತಿಯೇ ಆಗಿದೆ.
ಹಾಗೆ ನೋಡಿದರೆ, ಮನುಷ್ಯ ಜನುಮವುಳ್ಳ ಗಂಡಸರ ಮತ್ತು ಹೆಂಗಸರ (ಹಾಗೇ, ಇವೆರಡೂ ಅಲ್ಲದ ಮೂರನೇ ಇನ್ನೊಂದು ಪಂಗಡದ) ‘ಜೈವಿಕ’ ಅಗತ್ಯಗಳೇ ವಿಭಿನ್ನವಾಗಿವೆ. ಇಬ್ಬರು ವ್ಯಕ್ತಿಗಳ ಸಾಧಾರಣ ರುಚಿ-ಅಭಿರುಚಿಗಳು ಬೇರೆ ಬೇರೆಯಿರುವ ಹಾಗೇ- ಅಷ್ಟೇ ಸಹಜವಾಗಿ, ಎರಡು ಭಿನ್ನಲಿಂಗಿಗಳ ಜೈವಿಕ ಅವಶ್ಯಕತೆಗಳೂ ಭಿನ್ನವಾಗಿರುತ್ತವೆ. ಅಂದಮೇಲೆ, ಯಾವೊಂದನ್ನೂ ಸಾರ್ವತ್ರಿಕವಾದ ನಿಯಮವೊಂದಾಗಿ- ಇದಮಿತ್ಥಂ ಎಂಬಂತೆ ಎಲ್ಲರ ಮೇಲೆ ಹೇರಿ ಹೇಳಲಾಗುವುದಿಲ್ಲ. ಹೇರುವುದೂ ಸಲ್ಲ. ಇಷ್ಟಿದ್ದೂ, ನಮ್ಮ ನಡುವಿನ ಬೌದ್ಧಿಕ ಅಧ್ಯಯನಗಳು ಗಂಡಸರು ಹೆಂಗಸರಿಗಿಂತ ಹೆಚ್ಚು ಕಾಮಾಸಕ್ತರೆಂದು ಹೇಳುತ್ತವೆ. ಯಾವುದೇ ಗಂಡು ಯಾವುದೇ ಹೆಣ್ಣನ್ನು ನೋಡುವುದೇ ಕಾಮದ ಕಣ್ಣಿಂದಲೆಂದು ಸಮೀಕ್ಷೆಗಳು ಅಭಿಪ್ರಾಯಿಸಿವೆ. ಗಂಡಸಿಗೆ ಹೋಲಿಸಿದಲ್ಲಿ ಹೆಣ್ಣು ಹೆಚ್ಚು ಪ್ರೇಮಾಸಕ್ತಳೆನ್ನುವ ವಾಡಿಕೆಯಿದೆ. ಹೆಣ್ಣಿನ ಕಾಮುಕತೆಯಾದರೂ ಆಕೆಯ ‘ಮೈದಿಂಗಳಿನ’ ಲೆಕ್ಕಕ್ಕೆ ತಕ್ಕಂತಲೆಂದೂ ಅನ್ನಲಾಗುತ್ತದೆ. ಅಂದರೆ, ಆಕೆಯ ಕಾಮಾಸಕ್ತಿಯು ಅವಳ ಋತುಚಕ್ರವನ್ನು ಅವಲಂಬಿಸಿದೆ. ತಕ್ಕುದಾಗಿ, ಹೆಣ್ಣಿನ ಪ್ರಣಯಾತುರತೆಯು ಉದ್ದೀಪಗೊಳ್ಳುವುದೇ ಅವಳೊಳಗಿನ ಅಂಡಾಶಯದ ವಿದ್ಯಮಾನವನ್ನು ಅನುಸರಿಸಿಯೆನ್ನುವ ಮಾತಿದೆ. ಆದರೆ ಗಂಡು ಹಾಗಲ್ಲ. ಗಂಡಸೊಬ್ಬನ ಜೈವಿಕ ರಚನೆಯೇ ಹಾಗಿಲ್ಲ. ಎಂತಲೇ, ಹೆಣ್ಣುಮೈಯಲ್ಲಿರುವಂತೆ ತನ್ನದೇ ಒಂದು ಸರ್ವಸ್ವಕೀಯವಾದ ಗಡಿಗಡುವುಗಳ ಲೆಕ್ಕವಿಲ್ಲದ ಗಂಡುಮೈಯಿ- ಯಾವ ಹೊತ್ತಿನಲ್ಲಾದರೂ ಯಾರನ್ನು ಕುರಿತಾದರೂ ಮೋಹಕ್ಕೀಡಾಗಬಹುದು. ಯಾರನ್ನಾದರೂ ಮೋಹಿಸಬಲ್ಲುದು. ಬೇಕೆನಿಸುವಾಗಲೆಲ್ಲ ತನಗೆ ತಕ್ಕ ಕಾಮಾರ್ಥ- ಚಿಂತನೆಯಲ್ಲಿ ತೊಡಗಬಲ್ಲುದು… ಇದೇ ಕಾರಣಕ್ಕೇನೋ, ಬಹುಶಃ, ಹೆಣ್ಣಿನ ಮನಸ್ಸು ಗಂಡಸನ್ನು ಸದಾ ಕಾಮುಕನನ್ನಾಗಿ ಕಾಣುವುದು. ಅವನ ಕಣ್ಣು ತನ್ನನ್ನೊಂದು ಲೈಂಗಿಕ ಸರಕೊಂದಾಗಿ ಕಾಣುತ್ತದೆಂದು ಪದೇಪದೇ ಭ್ರಮಿಸುವುದು. ಇಷ್ಟಿದ್ದೂ, ಹೆಣ್ಣು ಕಾಮುಕವಲ್ಲವೆಂದು ವೈಜ್ಞಾನಿಕವಾಗಿ ಹೇಳಲಾಗುವುದಿಲ್ಲ. ಅವಳ ಮೈಯಿ ಋತುವಿಂದ ಋತುವಿಗೆ ಹೊರಳುವುದಕ್ಕೆ ತಕ್ಕುದಾಗಿ, ಅವಳ ಮನಸ್ಸು ಮೋಹಿಸದೆನ್ನಲಿಕ್ಕೂ ಕಾಮಿಸದೆನ್ನೆಲಿಕ್ಕೂ ಸರಿ ಸಬೂತಿಲ್ಲ.
ಹೀಗಿರುವಾಗ, ನಮ್ಮನ್ನಾಳಲೆಂದು ನೆಚ್ಚಿ ನಾವೇ ಆಯ್ದಿರುವ ಎಂಪಿಯೊಬ್ಬನು – ಸದಾ, ತನ್ನೊಳಗಿನ ಜೈವಿಕ ‘ಗಂಡಸ್ತಿಕೆ’ಯನ್ನು ತಪ್ಪಿ ಪರಮ‘ದೈವಿಕ’ವಿರಬೇಕೆನ್ನುವುದು ಎಷ್ಟು ಸರಿ? ಸಂಸದನೋ ಸಂಸದೀಯ ಅಭ್ಯರ್ಥಿಯೋ ಆದವನು ತನ್ನ ಮೈಮನಸಿನ ಕುಮ್ಮಕ್ಕಿಗೆ ತಕ್ಕುದಾಗಿ ನಡೆಯಕೂಡದೆನ್ನುವುದನ್ನು ಒಪ್ಪಲಾದೀತೆ? ಆಡಿದಂತೆಂದೂ ನಡೆಯದ ಲೋಕದಲ್ಲಿರುವ ನಾವು- ನಮ್ಮನ್ನಾಳುವ ಜನದ ಮೇಲೆ ನಾವಲ್ಲದ ನಮ್ಮನ್ನು ಆರೋಪಿಸಿ ನಾವಿಲ್ಲದ ಎತ್ತರದಲ್ಲಿಟ್ಟು ಕಲ್ಪಿಸುತ್ತೇವೇಕೆ? ಎಲ್ಲಕ್ಕಿಂತ ನಾವಾದರೂ ನೂರಕ್ಕೆ ನೂರು ನುಡಿದಂತೆ ನಡೆಯುತ್ತೇವೇನು?
ಇಷ್ಟಾಗಿ, ಈ ಇಡೀ ಪ್ರಕರಣದಲ್ಲಿ ನನಗೆ ಈವರೆಗೆ ಅರ್ಥವಾಗಿರದ ಎರಡು ಸಂಗತಿಗಳಿವೆ.
ಒಂದು: ಸ್ವಂತೇಚ್ಛೆಯಿಂದ ಸಾರ್ವಜನಿಕ ಬದುಕಿನಲ್ಲಿರುವ ಜನವೊಬ್ಬನು ಖಾಸಗೀ ಬದುಕಿನಲ್ಲಿ ಹೊರಗೆ ತೋರುವಂತಲ್ಲದಿದ್ದರೂ- ತನ್ನೆಲ್ಲ ಗುಪ್ತಾಚಾರವನ್ನು ವಿಡಿಯೋಗ್ರಹಿಸಿ ಇಟ್ಟುಕೊಳ್ಳುತ್ತಾನೇಕೆ? ಇಟ್ಟುಕೊಂಡರೂ ಅವರಿವರ ಕಣ್ಕೈಯಿಗೆಟುವಷ್ಟು ಸಲೀಸಾಗಿ ಇಡುತ್ತಾನೇನು? ಕಾಣದ ಕಾಣ್ಕೆಗಳ ಒಂದಲ್ಲೊಂದು ಕಣ್ಗಾವಲಿರುವ ಈ ಲೋಕಸದ್ಯದಲ್ಲಿ ಎಂಥದೇ ಗುಟ್ಟೆಂಬ ಗುಟ್ಟನ್ನು ಗುಟ್ಟುಗುಟ್ಟಾಗಿ ಕಟ್ಟಿಡಲಾಗದೆಂದು ಗೊತ್ತಾಗದಷ್ಟು ಹೆಡ್ಡನೇನಾತ? ಮೊಬೈಲು-ಇಂಟರ‍್ನೆಟ್ಟು ಕೊಡಮಾಡುವ ಸ್ವೈರಾತಿರೇಕದ ವಿಹಾರ-ವಿಲಾಸಗಳ ಈ ಕಾಲದಲ್ಲಿ, ಖಾಸಗೀತನವೆಂಬುದು ನಿಜಕ್ಕೂ ಖಾಸಗಿಯಲ್ಲವೆಂದು ಅರಿಯದಷ್ಟು ಅಮಾಯಕನೇನಾತ? ಫೋನಲ್ಲಿಟ್ಟಿದ್ದೆಲ್ಲ ಅದಕ್ಕಂಟಿಸಿದ ಲ್ಯಾಪ್ಟಾಪು-ಟ್ಯಾಬ್ಲೆಟಿನಲ್ಲಿ ತಂತಾನೇ ತೋರುತ್ತದೆಂದೂ, ಅಲ್ಲಿನದಿಲ್ಲೆಂದಾಗಿ ಮುಂದುವರಿದು, ಮುಂದೆ ‘ಅದೆಂಥದೋ’ ಕ್ಲೌಡಿನಲ್ಲಿ, ಕ್ಲೌಡಾದ ಮೇಲೆ ಬಾಹ್ಯಾಂತರಿಕ್ಷದಲ್ಲಿ… ಕಡೆಗೊಮ್ಮೆ ದೂರದ ಅಂತರಗಂಗೆಯಲ್ಲೂ- ತೆರೆದು ಮೈಪಡೆದೀತೆನ್ನುವ ತರ್ಕವು ಮನುಷ್ಯನಿಗೆ ಅರ್ಥವಾಗಲಿಲ್ಲವೇನು?
ಎರಡು: ಮನುಷ್ಯಲೋಕದಲ್ಲಿ ಎಲ್ಲ ಕಾಲಕ್ಕೂ ಇದ್ದೇ ಇರುವ ಆಳು-ಆಳಿಕೆಗಳ ಲೆಕ್ಕಾಚಾರದಲ್ಲಿ ಆಳಾದವನೊಬ್ಬನು ತನ್ನ ಮೇಲಿನ ಆಳಿಕೆಯಿರಲಿ, ದಬ್ಬಾಳಿಕೆಯನ್ನೂ ಇಷ್ಟು ಸುಲಭವಾಗಿ ಕೆಡಹಬಹುದೇನು? ಕೆಡಹಲು ಸಾಧ್ಯವೇನು? ಆಳುವವನ ಮೊಬೈಲು-ಲ್ಯಾಪ್ಟಾಪುಗಳ ಖಾಸಗೀ ಕೋಶಗಳನ್ನು ಈ ಪಾಟಿ ಸಲೀಸಾಗಿ ತೆರೆದು ಜಾಹೀರು ಮಾಡಬಹುದೇನು? ಅಡಿಯಡಿಗೂ ಓಟಿಪಿ ಕೇಳುವ ಯಂತ್ರಮಂತ್ರಾದಿಗಳ ಈ ಕಾಲದಲ್ಲಿ ತಂತ್ರಾಂಶವೇ ಅತಂತ್ರವೆಂದು ಹೇಳಲಾದೀತೇನು?
ನಿಜಕ್ಕೂ ನಂಬಲಾಗದ ಈ ಎರಡು ಸಂಗತಿಗಳೆದುರು ಇನ್ನೂ ಒಂದು ಪ್ರಶ್ನೆ ನನ್ನೆದುರು ತಲೆದೋರಿದೆ. ಮನುಷ್ಯನಡೆಯ ಒಂದೊಂದರ ಮೇಲೂ ತನ್ನ ‘ಮಾಡು-ಕೂಡದು’ಗಳನ್ನು ಹೇರುವ ಸಭ್ಯ ಸಂಭಾವಿತ ಲೋಕದ ರಾಜಕೀಯದೆದುರು, ಅದರಲ್ಲಿ ತೊಡಗಿರುವವರೆಲ್ಲರ ಮೈಮನಸ್ಸುಗಳ ಖಾಸಗೀ ರಾಜಕೀಯದ ಗಾತ್ರಪಾತ್ರವೇನೆನ್ನುವುದು ನನಗಂತೂ ಅರ್ಥವಾಗದ್ದಾಗಿದೆ. ನನ್ನ ಪಾಮರಬುದ್ಧಿಯ ಎಟುಕಿಗೊದಗದೆ ಒಂದೇ ಸಮ ಸತಾಯಿಸುತ್ತಿದೆ. ತಲೆಮೊಟಕಿದಷ್ಟೂ ಹೆಡೆಯೆತ್ತುವ (ಹಾವಾಡಿಗನ) ಬುಟ್ಟಿಯೊಳಗಿನ ಸರ್ಪದ ಹಾಗೆ ಭುಸುಗುಡುತ್ತಲೇ ಇದೆ.
ಕೈಯಿ ಕೈಯಿಗೂ ಮೂರ‍್ನಾಕು ಕ್ಯಾಮೆರಾವುಳ್ಳ ಕೈಫೋನು ಕೊಟ್ಟಿರುವ, ಅನ್ನಕ್ಕಿಂತಲೂ ಅಗ್ಗವಾದ ಇಂಟರ್ನೆಟ್ಟಿತ್ತಿರುವ, ಲೋಕದ ಬುದ್ಧಿಮತ್ತೆಯನ್ನು ಇನ್ನೆಲ್ಲೋ ಒತ್ತೆಯಿಟ್ಟಿರುವ- ಕಾಲಸದ್ಯವೇ ಇದನ್ನು ಉತ್ತರಿಸಬೇಕೇನೋ.
(ಲೇಖಕರು ಕನ್ನಡದ ಖ್ಯಾತ ಕಥೆಗಾರ ಮತ್ತು ಹೆಸರಾಂತ ವಾಸ್ತುಶಿಲ್ಪಿ)
ಬೆಂಗಳೂರು : 2026-31ನೇ ಸಾಲಿನ ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ…
ಬೆಂಗಳೂರು : ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿ ಅಲ್ಲ ಎಂದು ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಗೆ…
ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಏಕಾಏಕಿ ದಾಳಿ…
ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ…
ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ…
ಮೈಸೂರು : ಮೈಸೂರಿನಲ್ಲಿ ಡ್ರಗ್ಸ್ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್…