ಹಾಡು ಪಾಡು

ಗುಲ್‌ಮೊಹರ್‌ ಮೋಹದಲ್ಲಿ ಮೋಹಕ ಮೈಸೂರು

ಸಿರಿ ಮೈಸೂರು

ಇದು ಬೇಸಿಗೆ ಕಾಲ. ಕೆಲ ದಿನಗಳ ಹಿಂದಷ್ಟೇ ಫ್ರಾನ್ಸ್‌ನಲ್ಲಿ ಕ್ಯಾನ್ಸ್ ಫಿಲಂ ಫೆಸ್ಟಿವಲ್ ನಡೆಯಿತು. ಜಗತ್ತಿನಾದ್ಯಂತದಿಂದ ಸುರಸುಂದರ ತಾರೆಯರು ತಮ್ಮದೇ ಶೈಲಿಯಲ್ಲಿ ಬಂದು ಕೆಂಪುಹಾಸಿನ ಮೇಲೆ ಮಿನುಗಿದರು. ಇದು ಮೂರು ದಿನಗಳ ಹಬ್ಬ. ಪ್ರತಿವರ್ಷವೂ ಕ್ಯಾನ್ಸ್ ಹಲವಾರು ಅತ್ಯದ್ಭುತ ಫ್ಯಾಷನ್ ಸ್ಟೇಟ್‌ಮೆಂಟ್‌ಗಳನ್ನು ಹುಟ್ಟುಹಾಕುತ್ತವೆ. ಜೀವನದಲ್ಲಿ ಒಮ್ಮೆಯಾದರೂ ಈ ಕಾರ್ಯಕ್ರಮವನ್ನು ನೇರವಾಗಿ ನೋಡಬೇಕೆಂಬ ಆಸೆ ಇದೆ. ಆದರೆ ನಮ್ಮೂರಲ್ಲಿಯೇ, ನಮ್ಮ ಬೀದಿಯಲ್ಲಿಯೇ ಅಷ್ಟು ಚೆಂದದ ಕೆಂಪುಹಾಸು (ರೆಡ್ ಕಾರ್ಪೆಟ್) ನಮಗಾಗಿ ಕಾಯುವಾಗ ಬೇರೆ ದೇಶಗಳ ಹಂಗೇಕೆ ಹೇಳಿ?

ಹೌದು. . . ನಮ್ಮೂರಿನ ಈ ಕೆಂಪುಹಾಸು ಬೇಸಿಗೆಯಲ್ಲಿ ನನ್ನನ್ನೇ ಕಾಯುತ್ತಿರುವಂತಿರುತ್ತದೆ. ಇದರ ಮೇಲೆ ಹೋಗಲು ನಾನು ಹೊಸ ಫ್ಯಾಷನ್ ಸ್ಟೇಟ್‌ಮೆಂಟ್ ಇರುವ ಬಟ್ಟೆ ಧರಿಸಿ ಹೋಗಬೇಕೆಂದಿಲ್ಲ. ಹೇಗೆ ಹೋದರೂ ಸರಿಯೇ. ಆದರೆ ಕೆಂಪುಹಾಸು, ಕೆಂಪು ಚಪ್ಪರ ನೋಡಲು ಅಂದ ಸವಿಯುವ ಆಸ್ಥೆಯಿರುವ ದೃಷ್ಟಿ ಇರಬೇಕಷ್ಟೇ! ನಾನು ಮಾತನಾಡುತ್ತಿರುವುದು ನಮ್ಮ ಮೈಸೂರಿನಲ್ಲಿ ಪ್ರತಿ ಮೇ ತಿಂಗಳಲ್ಲಿ ನಳನಳಿಸುವ, ಈಗಲೂ ನಮ್ಮನ್ನು ರಸ್ತೆಗೆ ತೆರೆದ ಬಾಹುವಿನಿಂದ ಸ್ವಾಗತಿಸುತ್ತಿರುವ ಗುಲ್‌ಮೊಹರ್ ಬಗ್ಗೆ. ರಸ್ತೆಯಲ್ಲಿ ಹೋಗುವಾಗ ಅದೆಷ್ಟೋ ಕಡೆ ಈ ಗುಲ್‌ಮೊಹರ್ ಮರಗಳು ಬಿರಿವ ಬಿಸಿಲಿನ ನಡುವೆಯೂ ನಗುತ್ತಾ ನಿಂತಿರುತ್ತವೆ. ಮಾತ್ರವಲ್ಲದೆ ತನ್ನ ಬಳಿ ಬರುವವರನ್ನೆಲ್ಲಾ ನಗುತ್ತಾ ಸ್ವಾಗತಿಸುತ್ತದೆ. ‘ಅದೆಷ್ಟೋ ಬಿಸಿಲಿದ್ದರೇನು? ರಸ್ತೆಗೆ ಬಂದರೆ ಒಂದಿಲ್ಲೊಂದು ಸೌಂದರ್ಯವನ್ನು ಸವಿಯಲೇಬಹುದು. ಏಕೆಂದರೆ ನೀವಿರುವುದು ಮೈಸೂರಿನಲ್ಲಿ! ’ ಎಂದು ನಮಗೆ ನೆನಪಿಸುತ್ತಿರುತ್ತದೆ.

ಸಾಮಾನ್ಯವಾಗಿ ಬೋಗನ್‌ವಿಲ್ಲಾ, ಟಬೂಬಿಯಾ ರೋಸಿಯಾ, ಗುಲ್ ಮೊಹರ್‌ನಂತಹ ವರ್ಣರಂಜಿತ ಹೂವುಗಳೆಂದರೆ ನನಗೆ ಅದೇನೋ ಸೆಳೆತ. ಅದರಲ್ಲೂ ಮೈಸೂರಿನ ಪಾರಂಪರಿಕ ಕಟ್ಟಡಗಳು, ವಿಶಾಲವಾದ ಹಾಗೂ ಪ್ರಶಾಂತವಾದ ರಸ್ತೆಗಳು, ಹಕ್ಕಿಗಳ ಚಿಲಿಪಿಲಿ ಇರುವ ವಾತಾವರಣದಲ್ಲಿ ಹೊಳೆಯುತ್ತಾ, ನಗುತ್ತಾ ನಿಲ್ಲುವ ಇಂತಹ ಹೂವುಗಳನ್ನು ನೋಡುವುದೆಂದರೆ ಪ್ರಕೃತಿ ಎಂಬ ಕಲಾವಿದನ ಕುಂಚದೊಳಗೆ ಬದುಕಿ ಬಂದಂತಹ ಅನುಭವ. ಇದೇ ಕಾರಣಕ್ಕಾಗಿ ವರ್ಷವಿಡೀ ಈ ಹೂವುಗಳು ಅರಳುವ ಆಯಾ ತಿಂಗಳುಗಳಿಗಾಗಿ ನಾನು ಕಾಯುತ್ತಿರುತ್ತೇನೆ. ಹೀಗೆ ಮೇ ತಿಂಗಳ ಆಸುಪಾಸಿನಲ್ಲಿ ಮೈಸೂರಿನಲ್ಲೆಲ್ಲಾ ಕಾಣಸಿಗುವ ಚೆಂದದ ಹೂವು ಗುಲ್‌ಮೊಹರ್. ಅದೇ ಕಾರಣಕ್ಕೆ ಈ ಹೂವನ್ನು ಮೇ ಫ್ಲವರ್ ಎಂದೂ ಕರೆಯುತ್ತಾರೆ. ನಾನು ಎಲ್ಲೋ ಕೇಳಿರುವ ಪ್ರಕಾರ ಗುಲ್ ಎಂದರೆ ಗುಲಾಬಿ, ಮೊಹರ್ ಎಂದರೆ ನವಿಲು ಎಂದು. ಗುಲ್‌ಮೊಹರ್ ಎಂದರೆ ಕೆಂಗುಲಾಬಿ ಯಂತಹ ಈ ಹೂವುಗಳು ನವಿಲು ಗರಿ ಬಿಚ್ಚಿ ನರ್ತಿಸುವಂತೆ ಇರುವ ಹೂವುಗಳು ಎಂದರ್ಥ. ಹೆಸರಿಗೆ ತಕ್ಕಂತೆ ಮರದ ತುಂಬೆಲ್ಲಾ ಅರಳಿ ನಗುವ ಈ ಕೆಂಪು ಹೂವುಗಳನ್ನು ನಾವು ಬೇಸಿಗೆ ಕಾಲದಲ್ಲಿ ಕಾಣಬಹುದು.

ಮೈಸೂರಿನ ತುಂಬೆಲ್ಲಾ ಕಾಣುವ ಈ ಗುಲ್‌ಮೊಹರ್ ಮರಗಳನ್ನು ರಸ್ತೆಗಳ ಸೌಂದರ್ಯೀಕರಣ ಮಾಡುವ ಸಲುವಾಗಿ ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರು ನೆಟ್ಟು ಬೆಳೆಸಿದ್ದರಂತೆ. ಈ ಮರದಲ್ಲಿ ಸಿಗುವ ಬೀಜಗಳನ್ನು ಕಟ್ಟಿಗೆ ಯಾಗಿಯೂ ಬಳಸುತ್ತಿದ್ದರಂತೆ. ಕಳೆದ ಕೆಲವು ವರ್ಷಗಳಲ್ಲಿ ಮೈಸೂರಿನಲ್ಲಿ ಐನೂರು ಗುಲ್‌ಮೊಹರ್ ಮರಗಳಿವೆ ಎಂಬ ಮಾಹಿತಿ ದಾಖಲಾಗಿತ್ತು. ಈಗ ಆ ಸಂಖ್ಯೆ ಹೆಚ್ಚಾಗಿರಲಂತೂ ಸಾಧ್ಯವಿಲ್ಲ. ಜೊತೆಗೆ ಅದರ ಅಂದವೂ ಒಂದಿನಿತೂ ಕಡಿಮೆಯಾಗಿಲ್ಲ. ಇವು ಮೂಲತಃ ವಿದೇಶದಲ್ಲಿ ಬೆಳೆಯುವ ಮರಗಳು. ಆದರೆ ಇವುಗಳಿಗೆ ಹೆಚ್ಚು ಸೂರ್ಯನ ಬೆಳಕು, ಸ್ವಲ್ಪ ಹಿತಮಿತವಾದ ಮಳೆ ಬೇಕಿರುವ ಕಾರಣ ಮೈಸೂರಿನಂತಹ ಪ್ರದೇಶದಲ್ಲಿ ಶತಮಾನಗಳಿಂದಲೂ ಉಳಿದುಕೊಂಡು ಬಂದಿವೆ. ವಾಣಿವಿಲಾಸ ರಸ್ತೆ, ಚಾಮರಾಜ ಜೋಡಿ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ಸರಸ್ವತಿಪುರ, ನಜ಼ರ್‌ಬಾದ್, ಅಗ್ರಹಾರ ಸೇರಿದಂತೆ ಮೈಸೂರಿನ ಬಹುತೇಕ ಪ್ರಮುಖ ಪ್ರದೇಶಗಳಲ್ಲಿ ಗುಲ್‌ಮೊಹರ್ ಮರಗಳನ್ನು ನಾವು ನೋಡಬಹುದು. ಗಾಢ ಕೆಂಪು ಬಣ್ಣದ ಹೂವುಗಳು, ಛತ್ರಿಯಾಕಾರದ ಮರದ ಕೊಂಬೆಗಳು, ಮರದ ಕೆಳಗೆ ರಸ್ತೆಯಲ್ಲೆಲ್ಲಾ ಕೆಂಪುಹಾಸು. . . ಆಹಾ! ಇದನ್ನು ನೋಡುತ್ತಿದ್ದರೆ ಬೇಸಿಗೆಯ ಬಿಸಿಲಿನ ಬೇಗೆ ಮರೆತು ಅಂತರಾಳದೊಳಗಿನ ಕವಿತ್ವ ಜಾಗೃತವಾಗುತ್ತದೆ. ಪದಗಳ ಪರಿಚಯವೇ ಇಲ್ಲದವರಿಗೂ ‘ಇವುಗಳ ಬಗ್ಗೆ ಬರೆಯಬೇಕಲ್ಲ’ ಎನಿಸಿದರೆ ಆಶ್ವರ್ಯವಿಲ್ಲ. ಎಂತಹ ಕಲಾವಿದನೂ ‘ಪ್ರಕೃತಿಯ ಈ ಕಲೆಯ ಮುಂದೆ ನನ್ನ ಕುಂಚವೇನು ಮಹಾ! ’ ಎಂದುಕೊಳ್ಳುತ್ತಾನೆ. ಒಟ್ಟಿನಲ್ಲಿ ಒತ್ತಡದ ಬದುಕನ್ನು ಅರೆಕ್ಷಣ ಮರೆಸಿ, ಕಣ್ಣಿಗೂ ಮನಸ್ಸಿಗೂ ಮುದ ನೀಡಿ, ಬದುಕನ್ನು ವರ್ಣರಂಜಿತ ಎನಿಸುವಂತೆ ಮಾಡುತ್ತದೆ.

ಮೈಸೂರಿನ ಸುಂದರ ರಸ್ತೆಗಳಲ್ಲಿ ಎಲ್ಲಿ ಗುಲ್ ಮೊಹರ್ ಕಂಡರೂ ಒಂದು ಕ್ಷಣ ನಿಂತು ಅದರ ಫೋಟೋ ತೆಗೆದರಷ್ಟೇ ನನಗೆ ತೃಪ್ತಿ. ಅದೇ ರಸ್ತೆಯ, ಅದೇ ಹೂವಿನ, ಅದೇ ಮರದ ಫೋಟೋಗಳು ನೂರೆಂಟಿದ್ದರೂ ತೊಂದರೆಯಿಲ್ಲ. ಒಟ್ಟಿನಲ್ಲಿ ಪ್ರತಿಸಲವೂ ಈ ಮರ, ಈ ಹೂವುಗಳು ಬರಿಗಣ್ಣಿಗೆ ನಿತ್ಯನೂತನವಾಗಿ ಕಾಣುವಂತೆ ಕ್ಯಾಮೆರಾ ಕಣ್ಣಿಗೂ ಕಾಣಲಿ ಎಂದು ಚಿಕ್ಕ ಆಸೆಯಷ್ಟೇ! ಮೈಸೂರಿನಂತಹ ಭಾವಗಳ ಮಾಯಾ ನಗರಿಯಲ್ಲಿ ಎಲ್ಲಿ ತಿರುಗಿದರೂ ಸೌಂದರ್ಯದ ಚಿಲುಮೆಯೊಂದು ಕಾಣು ತ್ತದೆ ಎನ್ನುವುದಕ್ಕೆ ಗುಲ್‌ಮೊಹರ್ ಒಂದು ಸಣ್ಣ ಉದಾಹರಣೆಯಷ್ಟೇ.
sirimysuru18@gmail.com

ಆಂದೋಲನ ಡೆಸ್ಕ್

Recent Posts

ಸಿಎಂ ಆದ ಬಳಿಕ ಮೊದಲ ಬಾರಿಗೆ ಕೊಡಗಿಗೆ ಡಿಕೆಶಿ ಭೇಟಿ

ಕೊಡಗು: ಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದು ಕೊಡಗಿಗೆ ಭೇಟಿ ನೀಡಿದ್ದಾರೆ. ಕೊಡಗಿಗೆ ಆಗಮಿಸುತ್ತಿದ್ದಂತೆ ಕೊಡವ ಸಂಪ್ರದಾಯದಂತೆ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಕೊಡವತಿಯರು…

33 mins ago

ಕೊಲೆ ಆರೋಪಿ ಪವಿತ್ರಾಗೌಡ ಬೇರೆ ಸೆಲ್‌ಗೆ ಶಿಫ್ಟ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡರನ್ನು ಪರಪ್ಪನ ಅಗ್ರಹಾರದಲ್ಲಿ ಬೇರೆ ಸೆಲ್‌ಗೆ ಶಿಫ್ಟ್‌ ಮಾಡಲಾಗಿದೆ. ಇಬ್ಬರ ಬ್ಯಾರಕ್‌ನಲ್ಲಿದ್ದ…

1 hour ago

ಶೂಟೌಟ್ ಪ್ರಕರಣ: ಇನ್ಸ್‌ಪೆಕ್ಟರ್ ಮೇಲೆ ಹಲ್ಲೆಗೆ ಯತ್ನ: ಪೊಲೀಸರ ಲಘು ಲಾಟಿ ಪ್ರಹಾರ, 5 ಮಂದಿ ವಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ…

3 hours ago

ಹನೂರು ಗುಂಡಿನ ದಾಳಿ: ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ ಕುಟುಂಬಸ್ಥರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಖೆ ಅರಣ್ಯದಲ್ಲಿ ನಡೆದ ಗುಂಡಿನ…

3 hours ago

ಕುಶಾಲನಗರ| ಬೀದಿ ನಾಯಿ ದಾಳಿ: ವ್ಯಕ್ತಿಗೆ ಗಾಯ

ಕುಶಾಲನಗರ: ತಾಲ್ಲೂಕಿನ ಕೂಡಿಗೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ವ್ಯಕ್ತಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಹೆಗ್ಗಡಹಳ್ಳಿ ಗ್ರಾಮದ…

4 hours ago

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ: ಮೃತರ ಸಂಖ್ಯೆ 40ಕ್ಕೆ ಏರಿಕೆ

ಜಕಾರ್ತ: ಇಂಡೋನೇಷ್ಯಾದ ಫ್ಲೋರ್ಸ್‌ ದ್ವೀಪದಲ್ಲಿ ಶನಿವಾರ ಮುಂಜಾನೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.…

7 hours ago