ಸ್ಟ್ಯಾನ್ಲಿ
‘ನನ್ನಮ್ಮ ರೋಸ್ಮಂಡ್ ವಾನಿಂಗನ್ ಆಂಗ್ಲ ಮಹಿಳೆಯಾಗಿದ್ದರೂ, ಅವಳು ನಂಜನಗೂಡಿನ ನಂಜಿಯಾಗಿದ್ದಳು. ಬಿಸಿಲ್ ಮಂಟಿ ಗ್ರಾಮಸ್ಥರು ಆಕೆಗೆ ಇಟ್ಟಿದ್ದ ಹೆಸರಾಗಿತ್ತದು. ಹುಟ್ಟು ಮೈಸೂರಿಗಳಾದ ಆಕೆಯ ಮೈ ಮನಗಳಲ್ಲಿ ಇಲ್ಲಿನ ಪರಿಸರ, ಸಂಸ್ಕ ತಿ, ಸಂಸ್ಕಾರ, ಬಡವರ ಶ್ರೀಮಂತ ನಗು, ಸಹಜ ಸಂತೋಷ ಲಾಸ್ಯವಾಡುತ್ತಿದ್ದವು.
ಎಷ್ಟರ ಮಟ್ಟಿಗೆ ಎಂದರೆ, ಐರೋಪ್ಯದ ರಾತ್ರಿಗಳಲ್ಲಿ ತನ್ನ ಮಕ್ಕಳನ್ನು ಮಲಗಿಸಲು ತಾನು ಆಸ್ವಾದಿಸಿದ ಭಾರತೀಯ ಜೀವನದ ಅನುಭವವನ್ನೇ ಜೋಗುಳ ಕಥೆಗಳನ್ನಾಗಿಸಿ ಹೇಳುತ್ತಿರುತ್ತಿದ್ದಳು. ಮೈಸೂರಿನ ಕಥೆಗಳನ್ನು ಹೇಳುತ್ತಾ ಎಳೆಯ ಎದೆಯಲ್ಲಿ ಈ ದೇಶವನ್ನು ಕಾಣಲು ಕನಸೊಂದನ್ನು ಬಿತ್ತುತ್ತಿದ್ದಾಗ ನನಗೆ ಐದೋ ಆರೋ ವರುಷ ವಯಸ್ಸಿರಬೇಕು’ ಹೀಗೆ ಭಾರತ, ಮೈಸೂರು, ನಂಜನಗೂಡು ಹಾಗೂ ಅದರ ಸುತ್ತಮುತ್ತಲಿನ ಹಳ್ಳಿಗಳ ಬಗ್ಗೆ ಹೇಳುತ್ತಾ ಹೋಗುವಾಗ ಫ್ರಾನ್ಸ್ ದೇಶದ ೮೩ರ ವಯಸ್ಸಿನ ಸಾಕ್ಷ ಚಿತ್ರ ಛಾಯಾಗ್ರಾಹಕ ನಿಕೋಲಸ್ ಗಿಫೋರ್ಡ್ ಅಕ್ಷರಶಃ ಹರೆಯದ ಹುಡುಗರಾಗುತ್ತಾರೆ. ಪಾಶ್ಚಾತ್ಯ ದಿಕ್ಕಿಗೆ ವಾಲುವವರ ಮೊಗದಲ್ಲಿ ಮುಜುಗರದ ಗೆರೆ ಬಿಡಿಸಿದರೆ, ಬಿಸಿಲಲ್ಲಿ ಬೆಂದು, ಮಳೆಯಲ್ಲಿ ನೆಂದು ತನ್ನ ಒಡಲಿನಿಂದ ಘಮ್ಮನೆ ಪರಿಮಳವನ್ನು ಬೀರುವ ಈ ನೆಲದ ಬಗ್ಗೆ, ಸೂರ್ಯ ಚಂದ್ರ, ನಕ್ಷತ್ರಗಳನ್ನು, ಕಾಡು ಮೇಡು ಕಣಿವೆಗಳ ಸ್ವಚ್ಛಂದತೆಯನ್ನು ಅಗಾಧವಾಗಿ ಅನುಭವಿಸುತ್ತಾ ಕಾಲ ಕಳೆದಿರುವ ನಮ್ಮಂತವರಲ್ಲಿ ಹೆಮ್ಮೆ ಮೂಡಿಸುತ್ತಾರೆ.
ಕೆಲವು ದಿನಗಳ ಹಿಂದೆ ಒಂದು ಉದಾತ್ತ ಬಯಕೆಯೊಡನೆ ಬಂದಿಳಿದಿದ್ದ ನಿಕ್‌ರವರನ್ನು ಮಾತಿಗೆಳೆದಾಗ ಗೂಡುಕಟ್ಟಿ, ಮೊಟ್ಟೆಯಿಟ್ಟು ಮರಿಮಾಡಲು ಕಾಂತೀಯ ಶಕ್ತಿಯನ್ನು ಅನುಸರಿಸಿ, ಸಾವಿರಾರು ಮೈಲಿ ದೂರ ಹಾರಿ ಬಂದು, ಜೀವಿಸಿ ಅನಿವಾರ್ಯವಾಗಿ ಮತ್ತೆ ಹಾರಿ ಹೋಗಬೇಕಾಗುವ ವಲಸಿಗ ಹಕ್ಕಿಗಳ ಎದೆಯ ಬಯಕೆ ಗರಿಗೆದರಿತು.
ನಿಕ್‌ರವರ ವ್ಯಾನಿಂಗನ್ ಕುಟುಂಬದ ಮೈಸೂರು ನಂಟು ಮೇಲ್ಪದರಿನದ್ದಲ್ಲ. ವ್ಯಾನಿಂಗನ್‌ರ ಪೂರ್ವಜರು ಡಚ್ಚರಾದರೂ ಶತಮಾನಗಳಿಂದ ಬ್ರಿಟನ್ನಿನಲ್ಲಿ ನೆಲೆಸಿ ಬ್ರಿಟಿಷರೇ ಆಗಿದ್ದರು. ಅಲ್ಲಿಂದ ಇಲ್ಲಿಗೆ ಬಂದವರು ಹಲವು ತಲೆಮಾರುಗಳಿಂದ ಮೈಸೂರಿನಲ್ಲಿ ಬಾಳಿ, ಇಲ್ಲಿನ ತೆರಿಗೆದಾರರಾಗಿ, ಮಹಾರಾಜರು ಮತ್ತು ವೈಸರಾಯರಿಗೆ ಸಮೀಪವರ್ತಿಗಳಾಗಿದ್ದರು. ನಿಕ್ ಮಾತ್ರ ಕಳೆದ ೩೫ ವರ್ಷಗಳಿಂದ ತಮ್ಮ ಮಡದಿಯೊಂದಿಗೆ ಫ್ರಾನ್ಸ್‌ನಲ್ಲಿ ವಾಸಿಸುತ್ತಿದ್ದಾರೆ.
ವಸಾಹತುಶಾಹಿಗಳ ಆಗಮನದ ಕಾಲದಲ್ಲಿ ಉಳಿದ ಬ್ರಿಟಿಷರಿಗೆ ಹೊರತಾಗಿರದ ವ್ಯಾನಿಂಗನ್ ಕುಟುಂಬವು ಕೂಡ ಕಣ್ಣಳತೆಯನ್ನು ಮೀರಿದ ಭೂಮಿಯನ್ನು ಸಂಪಾದಿಸಿತ್ತು. ಅವುಗಳಲ್ಲಿ ಕೇರಳದ ವಯನಾಡಿನ ಅಡವಿಗಳು, ನಂಜನಗೂಡಿನ ಬಿಸಿಲ್ ಮಂಟಿಯಲ್ಲಿರುವ ಆಸ್ತಿ, ಮೈಸೂರಿನ ವ್ಯಾನಿಂಗನ್ ಬಂಗಲೆ ಹಾಗೂ ಇಂದಿನ ನೆಕ್ಸಸ್ ಮಾಲ್ ತಲೆಯೆತ್ತಿರುವ ಅಂದಿನ ಅವರ ‘ಟ್ಯಾಕ್ಸಿಡರ್ಮಿ ವರ್ಕ್ ಶಾಪ್’ ಪ್ರಮುಖವಾದವುಗಳು. ಕೆಲವು ಕಾನೂನಿನ ಪ್ರಕ್ರಿಯೆಗಳು ತೀರಿದ ಬಳಿಕ ವಯನಾಡಿನ ಭೂಮಿಯನ್ನು ಅಡವಿಯ ಜನರಿಗೂ, ಮೈಸೂರಿನ ಬಂಗಲೆ ಹಾಗೂ ಉಳಿದ ಆಸ್ತಿಯನ್ನು ಸಾಮಾಜಿಕ ಬದಲಾವಣೆಗಾಗಿ ಹಾಗೂ ಅತ್ಯಂತ ಬಡವರಿಗೆ ಸೇವೆ ಸಲ್ಲಿಸಲು ಮುಡಿಪಾಗಿಡಬೇಕೆಂಬ ಇರಾದೆಯನ್ನು ವ್ಯಾನಿಂಗನ್ ಕುಟುಂಬ ಹೊಂದಿದೆಯಂತೆ. ಅಂದ ಹಾಗೆ, ‘ಟ್ಯಾಕ್ಸಿಡರ್ಮಿ’ ಎಂದರೆ ಪ್ರಾಣಿಗಳ ಚರ್ಮವನ್ನು ಸಂರಕ್ಷಿಸಿ, ಅವುಗಳಿಗೆ ಜೀವತುಂಬಿ ಮರುರೂಪಿಸುವ ಕಲೆ ಮತ್ತು ಪ್ರಕ್ರಿಯೆ. ಕನ್ನಡದಲ್ಲಿ ‘ಚರ್ಮದ ಜೋಡಣೆ’, ‘ಚರ್ಮದ ಗೊಂಬೆ ಮಾಡುವ ಕಲೆ’, ‘ಚರ್ಮ ಪ್ರಸಾಧನ’ ಎಂದೂ ಕರೆಯುತ್ತಾರೆ. ನಿಷಿದ್ಧವಾಗಿರುವ ಈ ಕಲೆಯನ್ನು ಕ್ರೀಡಾಪ್ರಿಯವಾಗಿದ್ದ ವ್ಯಾನಿಂಗನ್ ಕುಟುಂಬವು ಉದ್ದಿಮೆಯನ್ನಾಗಿಸಿ ದೇಶ ವಿದೇಶಗಳಲ್ಲಿ ಖ್ಯಾತಿ ಅಗಳಿಸಿತ್ತು. ಮೈಸೂರು ಅರಮನೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿರುವ ಬಹುತೇಕ ಪ್ರಾಣಿಗಳ ಕೃತಿಗಳು ಇವರ ಕೊಡುಗೆಯೇ ಆಗಿವೆ.
ನಿಕ್ ಅವರನ್ನು ಮಾತನಾಡಿಸುತ್ತಾ ಹೋದಾಗ ಅವರೊಂದು ಮಾನವೀಯತೆಯೇ ಮೈದಳೆದ, ಆಳಕ್ಕೆ ಬೇರಿಳಿಸಿ ಬೆಳೆದು ನಿಂತ ಆಲದ ಮರವೆಂಬುದು ಅರಿವಾಗುತ್ತದೆ. ಈಗ ನೀವು ಏನು ಮಾಡುತ್ತಿದ್ದೀರಿ? ಎಂದು ಕೇಳಿದರೆ ‘ನಾನು ಹಾಗೂ ನನ್ನ ಮಡದಿ ಸೇರಿ ಹಣ್ಣುಗಳ ವಿಶೇಷ ಜಾಮ್ ತಯಾರಿಸಿ ಐಷಾರಾಮಿ ಹೋಟೆಲುಗಳಿಗೆ ವಿತರಿಸುತಿದ್ದೇವೆ ಎಂದಷ್ಟೇ ಹೇಳುವ ನಿಕ್‌ರೊಳಗೆ ಒಬ್ಬ ಪಳಗಿದ ಸಾಕ್ಷ್ಯಚಿತ್ರ ಛಾಯಾಗ್ರಾಹಕ, ಭಾರತದ ಅಷ್ಟೂ ಬಣ್ಣಗಳನ್ನು ಎದೆ ತುಂಬಿಕೊಂಡು ಮನದ ಕ್ಯಾನ್ವಾಸ್‌ನ ಮೇಲೆ ಸದಾ ಸಕ್ರಿಯವಾಗಿರುವ ಜೀವನೋತ್ಸಾಹಿ ವರ್ಣಚಿತ್ರ ಕಲಾವಿದನೊಬ್ಬನಿದ್ದಾನೆ ಎಂಬುದೊಂದು ಅಚ್ಚರಿಯ ಸತ್ಯ! ಹೌದು. ನಿಕ್ ಅವರು ಹದಿನಾಲ್ಕು ಸಾಕ್ಷ್ಯಚಿತ್ರಗಳನ್ನು ಮಾಡಿದ್ದಾರೆ. ಹಲವಾರು ಪ್ರಸಿದ್ಧ ಚಲನಚಿತ್ರ ನಿರ್ದೇಶಕರ ಮತ್ತು ಛಾಯಾಗ್ರಾಹಕರ ಜೊತೆ ಕೆಲಸ ಮಾಡಿದ್ದಾರೆ. ‘೩೦ ವರ್ಷಗಳಲ್ಲಿ, ನಾನು ಎಲ್ಲ ರೀತಿಯ ಉತ್ತಮ ನಿರ್ದೇಶಕರೊಂದಿಗೆ ಕೆಲಸ ಮಾಡಿದೆ. ಎರಿಕ್ ಡೇವಿಡ್‌ಸನ್ ರೊಂದಿಗೆ ‘ಲಾಸ್ಟ್ ನೈಟ್ ಅನದರ್ ಸೋಲ್ಜರ್’, ಕ್ಯಾಥರೀನ್ ಲಿನ್‌ಸ್ಟ್ರುಮ್‌ರೊಂದಿಗೆ ಮಾನಸಿಕ ರೋಗಿಗಳ ಬಗೆಗಿನ ಸರಣಿ, ಆಂಗೇಲಾ ಪೋಪ್‌ರೊಂದಿಗೆ ‘ಚೈಲ್ಡ್‌ಹುಡ್’ ಡೆರೆಕ್ ಬೈಲೆಯ್ ರೊಂದಿಗೆ ಕಲಾ ಚಲನಚಿತ್ರಗಳು, ನೈಜೆಲ್ ಮಿಲ್ಲರ್‌ರೊಂದಿಗೆ ‘ಡೆತ್ – ಡೈಯಿಂಗ್’, ಸೈಮನ್ ಹೀವೆನ್‌ರೊಂದಿಗೆ ‘ರೆಂಬೆಟಿಕಾ’, ಎಚ್.ಒ.ನಜರೆತ್‌ರೊಂದಿಗೆ ‘ಬಾಂಬೆ ಜಾಝ್’, ಕಾರ್ಲ್ ಫ್ರಾನ್ಸಿಸ್‌ರೊಂದಿಗೆ ಕಡಿಮೆ ಬಜೆಟ್‌ನ ಡ್ರಾಮಾಗಳು, ಮತ್ತು ಜೂಡಿ ಮಾರ್ಲೆ (ನಿಕ್ ರವರ ಹೆಂಡತಿ) ನಿರ್ಮಿಸಿದ ‘ಮಿಸ್ಟರ್ ಪೈ’ ಸರಣಿ.
ಜೂಡಿ ಮತ್ತು ನಾನು ಇಂಡಿಯಾದಲ್ಲಿ ‘ಹೊವರ್ಡ್ ಹಾಡ್ ಗ್ಕಿನ್ ಇನ್ ಕನ್ವರ್ಸೇಷನ್’ ಚಲನಚಿತ್ರವನ್ನು ಮಾಡುವಾಗ ಭೇಟಿಯಾದೆವು. ನಂತರ ನಾವು ಕ್ರೇಗೀ ಐಚಿಸನ್ ಮತ್ತು ಭೂಪೇನ್ ಖಕ್ಕರ್‌ರೊಂದಿಗೆ ಚಲನಚಿತ್ರಗಳನ್ನು ಮಾಡಿದೆವು ‘ಹೀಗೆ ಹೇಳುವಾಗ ಈ ಉತ್ಸಾಹಿ ವಯೋವೃದ್ಧನ ಮುಖದಲ್ಲಿ ಸಾರ್ಥಕತೆಯ ಗೆರೆಗಳು ಹಾದು ಹೋಗುತ್ತವೆ.
‘ಬಾಂಬ್‌ಗಳಿಂದ ನಾಶವಾದ ಸ್ಥಳಗಳು, ಆಹಾರದ ಕೊರತೆ ಮತ್ತು ಅಪಾರ ನಾಗರಿಕ ಕಷ್ಟಗಳು ಎದುರಿಸುತ್ತಿದ್ದ ಯುದ್ಧನಂತರದ ಇಂಗ್ಲೆಂಡ್‌ನಿಂದ ೧೯೫೦ರಲ್ಲಿ ಸಣ್ಣ ದೋಣಿ ಹಿಡಿದು ನನ್ನ ತಾಯಿ ರೋಸಮಂಡ್ ವ್ಯಾನ್‌ಇಂಗನ್ ತಾನು ಹುಟ್ಟಿ ಬೆಳೆದಿದ್ದ ಮೈಸೂರಿಗೆ ನನ್ನನ್ನು ಕರೆ ತಂದಾಗ ನನಗೆ ೮ ವರ್ಷ ವಯಸ್ಸಾಗಿತ್ತು. ಈ ಹಿನ್ನೆಲೆಯಲ್ಲಿ, ಸಹಜವಾಗಿಯೇ ನಾನು ಮೈಸೂರಿನಂತಹ ರಂಗುರಂಗಿನ, ಹಸಿರು ತುಂಬಿದ, ಸಂತೋಷದ ಜನರನ್ನು ಕಂಡು ಉಲ್ಲಸಿತನಾಗಿದ್ದೆ. ಇಲ್ಲಿಯೇ ನಾನು ಜೌಬರ್ಟ್‌ರನ್ನು ಮೊದಲ ಬಾರಿಗೆ ಭೇಟಿಯಾದದ್ದು. ನನ್ನ ಮೇಲೆ ನನ್ನ ಅಮ್ಮ, ತಾತ ಹಾಗೂ ಸೋದರಮಾವನ ಪ್ರಭಾವ ತುಂಬಾನೇ ಇದೆ. ಇಂಗ್ಲೆಂಡ್‌ಗೆ ಹಿಂತಿರುಗಿದ ನಂತರ, ನಾನು ದೊಡ್ಡವನಾದ ಮೇಲೆ ಕಾರು, ಕ್ಯಾಮೆರಾ ಮತ್ತು ಟೇಪ್ ರೆಕಾರ್ಡರ್ ತೆಗೆದುಕೊಂಡು ಚಲನಚಿತ್ರಗಳನ್ನು ಮಾಡುತ್ತೇನೆ ಎಂದು ನನ್ನ ಶಿಕ್ಷಕರಿಗೆ ಹೇಳಿದ್ದೆ. ಅದೇ ರೀತಿ ಆದೆ ಕೂಡ’ ಎಂದು ನಗುವ ನಿಕ್‌ರವರಿಗೆ ತಳಮಟ್ಟದ ಜನಾನುರಾಗ, ಕಲೆ, ಭಾವನಾತ್ಮಕ ಜೀವನ ಶೈಲಿ ರಕ್ತಗತವಾಗಿ ಬಂದಿತ್ತೆಂದೇ ಹೇಳಬೇಕು.
೧೦೧ ವರ್ಷ ಬದುಕಿದ್ದ ನಿಕ್‌ರ ಚಿಕ್ಕಪ್ಪ ಜೌಬರ್ಟ್, ನಿಕ್‌ರ ತಾಯಿಯಂತೆಯೇ ಮೈಸೂರಿನಲ್ಲಿ ಜನಿಸಿ, ಬೆಳೆದು ಇಲ್ಲಿಯೇ ವಾಸಿಸುತ್ತಿದ್ದರು. ಅವರು ಕನ್ನಡ ಮತ್ತು ಉರ್ದು ಭಾಷೆಗಳನ್ನು ಚೆನ್ನಾಗಿ ಮಾತನಾಡುತ್ತಿದ್ದರಂತೆ. ಇಲ್ಲಿನ ಪರಿಸರ, ಸ್ಥಳೀಯ ಸಂಸ್ಕ ತಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರಂತೆ. ಚರ್ಮ ಪ್ರಸಾಧನ ಉದ್ಯಮದ ಜೊತೆಗೆ ವ್ಯಾನಿಂಗನ್ ಕುಟುಂಬವು ಮೈಸೂರು ರೇಸ್ ಕ್ಲಬ್‌ಅನ್ನು ಸ್ಥಾಪಿಸಿ, ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಇಲ್ಲಿನ ಸಮಾಜದ ಪ್ರಮುಖ ಭಾಗವಾಗಿತ್ತು ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ.
ನಿಕ್ ಹೇಳುತ್ತಾ ಮುಂದುವರಿಯುತ್ತಿದ್ದರು. ‘ನಾನು ೧೯೬೪ರಲ್ಲಿ ಇಂಗ್ಲೆಂಡ್‌ನಲ್ಲಿ ಕಲಾ ಪದವಿಯನ್ನು ಮುಗಿಸಿ ಮೈಸೂರಿಗೆ ಬಂದು ‘ಎ ಟಾಂಗಾ ಕ್ಯಾಬ್ ಇನ್ ಮೈಸೂರ್’ ಎಂಬ ಚಿತ್ರವನ್ನು ಮಾಡಿದೆ. ಅದು ೧೬ ಎಂಎಂ ಬ್ಲಾ ಕ್ -ವೈಟ್ ಫಿಲ್ಮ್‌ನಲ್ಲಿ ಮಾಡಿದ ಚಿತ್ರ. ೨೬ ವರ್ಷ ವಯಸ್ಸಿನಲ್ಲಿ, ನಾನು ಬಿಬಿಸಿ ಮತ್ತು ಇತರ ಟೆಲಿವಿಷನ್ ಚಾನೆಲ್‌ಗಳಿಗೆ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಿದೆ. ೩೦ರ ಹರೆಯದಲ್ಲಿ, ನಾನು ವ್ಯಾನ್‌ಇಂಗನ್ ಕಂಪೆನಿಯ ಕೆಲಸವನ್ನು ಚಿತ್ರೀಕರಿಸಲು ಮೈಸೂರಿಗೆ ಬಂದೆ. ಆ ಚಲನಚಿತ್ರ, ‘ಬುರ್ರಾ ಸಾಹಿಬ್’, ಚಾನೆಲ್ ೪ ಟೆಲಿವಿಷನ್‌ನಲ್ಲಿ ಒಂದು ಮಿಲಿಯನ್ ಗಿಂತ ಹೆಚ್ಚು ಜನರು ನೋಡಿದರು. ಈಗ ಅದು ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಲಯದಲ್ಲಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ನಿಕ್ ಅವರು ಒಬ್ಬ ಅಪ್ಪಟ ಮಾನವತಾವಾದಿಯಾಗಿರುವುದರಿಂದ ಅವರ ಮೌಲ್ಯಗಳೆಲ್ಲವೂ ಕೃತಿಗಳಾಗಿ ಮೂರ್ತ ರೂಪ ಪಡೆಯುತ್ತಿದ್ದವು. ಇಂದಿಗೂ ತನ್ನ ವಂಶಸ್ಥರು ಭಾರತದಲ್ಲಿ ವಶದಲ್ಲಿ ಇಟ್ಟುಕೊಂಡಿದ್ದ ಸಂಪತ್ತಿನ ಬಗ್ಗೆ, ಉದ್ದಿಮೆಗಾಗಿ, ಹವ್ಯಾಸಕ್ಕಾಗಿ ನಡೆದ ಪ್ರಾಣಿಗಳ ಬೇಟೆಯ ಬಗ್ಗೆ ಖೇದವೂ, ಪಶ್ಚಾತಾಪವೂ ಇದೆ. ‘ಇಂದಿನ ದಿನಗಳಲ್ಲಿ, ಗೋಡೆ ಮೇಲಿನ ಟ್ರೋಫಿಯಾಗಿ ಹುಲಿಯನ್ನು ಕೊಲ್ಲುವುದನ್ನು ಯೋಚಿಸಲಾಗದು. ಸಾಮಾಜಿಕವಾಗಿ, ದೊಡ್ಡ ಪ್ರಮಾಣದ ಭೂಮಿಯನ್ನು ಹೊಂದಿರುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ, ೧% ಶ್ರೀಮಂತರು ಹೆಚ್ಚಿನ ಭೂಮಿಯನ್ನು ಹೊಂದಿದ್ದಾರೆ. ಅವರು ತಮ್ಮ ಕ್ರಿಯೆ ಪರಿಣಾಮಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಈ ಧನದಾಹಿ ಪ್ರವೃತ್ತಿ ಸ್ಥಳೀಯ ಸಂಸ್ಕ ತಿಗಳನ್ನು ನಾಶಪಡಿಸುತ್ತದೆ, ಮಾನವೀಯ ಭಾಷೆಗಳನ್ನು ಕಳೆದುಕೊಳ್ಳುತ್ತದೆ ಮತ್ತು ಜೀವನಶೈಲಿಯನ್ನು ಬದಲಾಯಿಸಿಬಿಡುತ್ತದೆ. ಇದು ಅಪಾಯಕಾರಿ ಹಾಗೂ ಮುಂದಿನ ತಲೆಮಾರಿನ ದೃಷ್ಟಿಯಲ್ಲಿ ಅನಾಗರಿಕರನ್ನಾಗಿಸುವ ನಡೆ’ ಎನ್ನುತ್ತಾರೆ ನಿಕ್.
ಮೈಸೂರಿನ ಅವರ ತಾತನ ಬಂಗಲೆ ಹಾಗೂ ಚರ್ಮ ಪ್ರಸಾದನ ಕಾರ್ಯಾಗಾರದಲ್ಲಿ ಎಲ್ಲಾ ಜಾತಿ ಧರ್ಮಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ‘ಪ್ರಾಣಿಗಳ ಚರ್ಮ ಸುಲಿಯುವ ಜನ, ಸುಲಿದು ಹದ ಮಾಡುವ ಮೋಚಿಗಳು, ಚರ್ಮಕ್ಕೆ ತಕ್ಕ ಆಕೃತಿ ಒದಗಿಸುವ ಆಚಾರಿ ವರ್ಗ, ಹೊಲಿಯುವ ನೇಕಾರರು, ದರ್ಜಿಗಳು, ಲೆಕ್ಕಿಗರು,ಮುಸಲ್ಮಾನರು, ಕ್ರೈಸ್ತರು, ಬ್ರಾಹ್ಮಣರು, ಲಿಂಗಾಯತರು ಇವರೆಲ್ಲ ಸೇರಿ ಅನ್ಯೋನ್ಯವಾಗಿ ಕಾರ್ಯನಿರ್ವಹಿಸುವ ವಾತಾವರಣವನ್ನು ನಮ್ಮ ತಾತ ನಿರ್ಮಿಸಿದ್ದರು. ಒಂದು ವ್ಯವಸ್ಥೆಯ ಮುಖ್ಯಸ್ಥನ ಧೋರಣೆಯ ಮೇಲೆಯೇ ಇವೆಲ್ಲವೂ ಅವಲಂಬಿತವಾಗಿವೆ. ಕಾಯಕದ ಬದುಕು ಮುಖ್ಯವಾದಾಗ ಜಾತಿ ತಾರತಮ್ಯಗಳು ಗೌಣವಾಗುತ್ತವೆ. ಸುಂದರವಾದ, ಬಹುತ್ವವುಳ್ಳ ಭಾರತೀಯ ಸಮಾಜದಲ್ಲಿ ದೂರ ದೃಷ್ಟಿ ಇರುವ ನಾಯಕರ ಅವಶ್ಯಕತೆ ಇದೆ. ‘ಎನ್ನುವ ನಿಕ್ ಅವರ ಮಾತಿನಲ್ಲಿ ಆಧುನಿಕ ಅಸ್ಪೃಶ್ಯತೆ ಆತಂಕಕಾರಿ ಎಂಬ ಸಾರಾಂಶವಿದೆ.
ನಿಕ್ ಅವರಿಗೆ ಮೈಸೂರಿನ ಬಾಳೆ ಎಲೆಯ ಊಟ, ರಾಗಿ ಮುದ್ದೆ, ಇಡ್ಲಿ ವಡೆ, ಮಸಾಲೆ ದೋಸೆಯ ರುಚಿಯನ್ನು ಮರೆಯಲಾಗುತ್ತಿಲ್ಲ. ಅದನ್ನು ಕೂಡ ಅವರ ತಾಯಿಯ ಖಾತೆಗೇ ಸೇರುತ್ತಾರೆ. ಕನ್ನಡ ನಾಡಿನ ಮೋಹದಿಂದಾಗಿ ಅವರು ನಿಕ್‌ರ ಮಗಳಿಗೆ ‘ತಿಳಿ’ ಎಂದು ಹೆಸರಿಟ್ಟಿದ್ದಾರೆ. ಪ್ರಕೃತಿ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ದುಡಿಯುತ್ತಿರುವ ತಿಳಿ ತಮ್ಮ ಮಗಳಿಗೆ ‘ರಾಗಿ’ ಎಂಬ ಹೆಸರಿತ್ತಿದ್ದಾರೆ. ಧನ್ಯತೆ ಮತ್ತು ಸದ್ಭಾವನೆಗಳು ವಂಶ ಪಾರಂಪರ್ಯವಾಗಿ ಬರುವಂತಿದ್ದರೆ!? ೮೩ರ ತರುಣ ನಿಕ್ ಈಗಲೂ ಕ್ಯಾಮೆರಾವನ್ನು ಪ್ರೇಮಿಸುತ್ತಿದ್ದಾರೆ. ಕ್ಯಾಮೆರಾ ಕಣ್ಣಿನಲ್ಲಿ ಪರಿಚಿತಳಾದ ಮಡದಿಯೊಂದಿಗೆ ಜೀವನದ ಪ್ರತಿಕ್ಷಣವನ್ನು ಆಸ್ವಾದಿಸುತ್ತಿದ್ದಾರೆ. ತನ್ನ ೧೦೦ ವರ್ಷ ಹಳೆಯದಾದ ವಿಂಟೇಜ್ ಕಾರನ್ನೇರಿ ಫ್ರಾನ್ಸ್‌ನ ಪ್ರಕೃತಿಯಲ್ಲಿ ಬಣ್ಣ ಹಾಗೂ ಕುಂಚದೊಡನೆ ಆಟವಾಡುತ್ತಾರೆ. ತನ್ನ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಹೆಂಡತಿಯೊಡನೆ ತಾನೂ ಕಿತ್ತು ತಂದು ಜಾಮ್ ಮಾಡುತ್ತಾರೆ.
ಮನೆಯಲ್ಲಿರುವ ಪ್ರಾಣಿಗಳ ಪಕ್ಷಿಗಳ ಮೆಚ್ಚಿನ ಕುದುರೆಯ ಆಸ್ಥೆ ವಹಿಸುತ್ತಾರೆ. ‘ವಿರಮಿಸುವುದು ಒಂದು ದಿನ ಇದ್ದೇ ಇದೆ. ಅಲ್ಲಿಯವರೆಗೆ ಹಕ್ಕಿಯಂತೆ ಕ್ರಿಯಾಶೀಲನಾಗಿ ಇರಬೇಕೆಂದುಕೊಂಡಿದ್ದೇನೆ’ ಎನ್ನುವ ನಿಕ್ ಈ ಇಳಿ ವಯಸ್ಸಿನಲ್ಲಿ ತನ್ನೆಲ್ಲವನ್ನೂ ಬದಿಗೆ ಸರಿಸಿ ಮತ್ತೊಮ್ಮೆ ಮೈಸೂರಿಗೆ ಹಾರಿ ಬರಲು ಕಾರಣವೂ ತನ್ನ ತಾತ ವ್ಯಾನಿಂಗನ್ ಹಾಗೂ ತಾಯಿ ರೋಸ್ಮಂಡ್ ವ್ಯಾನಿಂಗನ್ ರವರ ಈ ನೆಲದ ಮೇಲಿನ ಪ್ರೇಮ ತೀರಿಸಲೇಬೇಕೆನ್ನುವ ಮೂರು ತಲೆಮಾರುಗಳ ಋಣ! ಬದಲಾವಣೆ ಜಗದ ನಿಯಮವೇನೋ ಹೌದು. ಆದರೆ ನಾವು ಪ್ರೀತಿಸುವ ಜನ ಹಾಗೂ ನೆಲ ತಮ್ಮ ಮೂಲ ಅಸ್ಮಿತೆಯನ್ನು ಕಳೆದುಕೊಂಡಾಗ ದುಃಖವಾಗುತ್ತದೆ.
ಮೈಸೂರು ಬಹಳಷ್ಟು ಅಭಿವೃದ್ಧಿ ಕಂಡಿದೆ. ಎಷ್ಟೆಂದರೆ ನನ್ನ ಮೈಸೂರನ್ನು ಗುರುತಿಸಲಾಗದಷ್ಟು. ಓಡಾಡಿದ ದಾರಿಗಳು, ಆಟವಾಡಿದ ಮೈದಾನಗಳು ಎಲ್ಲವೂ ಮಾಯವಾಗಿವೆ. ಇನ್ನೇನು ಡಿಕ್ಕಿ ಹೊಡೆದೇ ಬಿಡುತ್ತವೆ ಎನ್ನುವಂತೆ ಸಾವಿರಾರು ವಾಹನಗಳು ಪೈಪೋಟಿ ನಡೆಸುತ್ತಿವೆ. ಅಭಿವೃದ್ಧಿಯ ಮಾಲಿನ್ಯ ಪಂಚೇಂದ್ರಿಯಗಳನ್ನು ಬಾಧಿಸುತ್ತಿದೆ.
” ಫ್ರಾನ್ಸ್ ದೇಶದ ೮೩ರ ವಯಸ್ಸಿನ ಸಾಕ್ಷ್ಯಚಿತ್ರ ಛಾಯಾಗ್ರಾಹಕ ನಿಕೋಲಸ್ ಗಿಫೋರ್ಡ್ ಮೈಸೂರು, ನಂಜನಗೂಡು ಹಾಗೂ ಅದರ ಸುತ್ತಮುತ್ತಲಿನ ಹಳ್ಳಿಗಳ ಬಗ್ಗೆ ಹೇಳುತ್ತಾ ಹೋಗುವಾಗ ಅಕ್ಷರಶಃ ಹರೆಯದ ಹುಡುಗರಾಗುತ್ತಾರೆ. ಕೆಲವು ದಿನಗಳ ಹಿಂದೆ ಒಂದು ಉದಾತ್ತ ಬಯಕೆಯೊಡನೆ ಮೈಸೂರಿಗೆಬಂದಿಳಿದಿದ್ದ ನಿಕ್‌ರವರನ್ನು ಮಾತನಾಡಿಸಿದ ಒಡನಾಡಿಯ ಸ್ಟ್ಯಾನ್ಲಿ ಈ ಅನುಪಮ ಛಾಯಾಗ್ರಾಹಕನ ಅಂತರಂಗವನ್ನು ‘ಆಂದೋಲನ’ದ ಓದುಗರೆದುರು ತೆರೆದಿಟ್ಟಿದ್ದಾರೆ”
ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್‌ಗೆ ಆದ್ಯತೆ …
ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್ ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ…
ಕೋಟಿಗಾನಹಳ್ಳಿ ರಾಮಯ್ಯ ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ…
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…